Thursday, 12 November 2020

ನಾಳೆಯಿಂದ ಎಲ್ಲಾ ಫ್ಲೈಟ್‌ ಕ್ಯಾನ್ಸಲ್‌..! ಇದೇನು ತಮಾಷೆ ಮಾಡೋ ಸಮಯವಾ..?

 


 

ಆಗಷ್ಟೇ 2020 ಪ್ರಾರಂಭವಾಗಿ ಕೆಲವೇ ಕೆಲವು ದಿನಗಳು ಕಳೆದಿದ್ವು ಅಷ್ಟೆ.  ಆವತ್ತು ನಾನು ಅಡುಗೆ ಮನೆಯ ಗಡಿಬಿಡಿ ಕೆಲಸದಲ್ಲಿದ್ದಾಗ,  ನನ್ನ ಪತಿರಾಯ ವಿನಯ್‌‌ ಗಾಬರಿಯಿಂದ  ‘ಅಮೃತ್, ಚೀನಾದಲ್ಲಿ ಅದೇನೋ ರೋಗ ಬಂದಿದ್ಯಂತೆ,  ಸಾವಿರ ಸಾವಿರ ಜನ ಸಾಯ್ತಾ ಇದಾರಂತೆ.  ಈ ವಿಷಯ ನಿಂಗೊತ್ತಾ..?’ ಅಂತ ಕೇಳಿದ್ರೆ,  ನಾನು ಸಾಂಬಾರ್‌‌ಗೆ ಒಗ್ಗರಣೆ ಹಾಕ್ತಾ..  ‘ಹೌದು ಹೌದು.. ಗೂಗಲ್‌ನ್ಯೂಸ್‌‌ನಲ್ಲಿ ನಾನೂ ಓದಿದ್ದೀನಿ.  ಅದೇನ್ ರೋಗನೋ  ಏನೋ.. ನಮ್ಮ ದೇಶಕ್ಕೇನಾದ್ರೂ ಈ ರೋಗ ಬಂದ್ರೆ, ಇರುವೆಗಳ ಥರ ನಮ್ಮ ಜನ ಸತ್ಹೋಗ್ತಾರೆ ಅನ್ಸುತ್ತೆ.’ ಅಂದೆ.    ಪಲ್ಯ ಬೇಯುತ್ತಿದ್ದ ಬಾಣಲೆಯ ಮುಚ್ಚಳ ತೆಗೆದು ನೋಡುತ್ತಾ ‘ಅದೆಲ್ಲ ಸರಿ...... ನೀವು ಹೋಗ್ತಿರೋ ಕುವೈತ್‌ನಲ್ಲಿ ಕೊರೊನಾ ಇಲ್ಲ ತಾನೇ..? ಕೇಳಿದೆ.   ‘ಇಲ್ಲ ಇಲ್ಲ...  ಚೀನಾದಲ್ಲಿ ಮಾತ್ರ ಇದೆ ಅಷ್ಟೆ.  ಹೋದ ವರ್ಷ ಅದ್ಯಾವ್ದೋ ಎಬೊಲಾ ಅನ್ನೋ ರೋಗ ಬಂದಿರಲಿಲ್ವಾ...?  ಅಂಥದ್ದೇ ಇದು ಅನ್ಸುತ್ತೆ.  ಇಂಥ ರೋಗಗಳು ಆಗಾಗ ಬರುತ್ವೆ ಹೋಗುತ್ವೆ ಅಂದ್ರು ಅವರು.   ಅಲ್ಲಿಗೆ ಆವತ್ತಿನ ಆ ಟಾಪಿಕ್ ಮುಗಿದಿತ್ತು. ಆದರೆ,  ನಾವೇನೋ  ಮಾತಾಡಿ  ಮುಗ್ಸಿದೀವಿ ಅಂತ, ರೋಗ ಮುಗಿದು ಹೋಗುತ್ತಾ..?

 ಮೊದಮೊದಲು ಚೀನಾದಲ್ಲಿ ಕೊರೊನಾ  ಕಾಡ್ತಾ ಇದೆ ಅಂದಾಗ,  ಯಾರೂ ತಲೆ ಕೆಡಿಸಿಕೊಂಡಿರಲಿಲ್ಲ. ನಾವೂ ಅಷ್ಟೆ ನ್ಯೂಸ್ ಪೇಪರ್, ನ್ಯೂ‌‌ಸ್‌ಚಾನಲ್‌ಗಳಲ್ಲಿ  ಚೀನಾ ಜನರ ಸಾವಿನ ಸುದ್ದಿ ಕೇಳಿ  ಲೊಚಗುಟ್ಟಿ ಅಯ್ಯೋ ಪಾಪ ಅಂದುಬಿಟ್ಟಿದ್ವಿ.   ದೂರದ ಚೀನಾದಲ್ಲಿ ತಾನೇ ರೋಗ ಬಂದಿರೋದು..? ’  ಅನ್ನೋ ಮನೋಭಾವ ಇತ್ತು ಆಗ.  ಆದರೆ ಚೀನಾದ ಸಾವಿನ ಸಂಖ್ಯೆ 2 ಸಾವಿರ ದಾಟಿ 3 ಸಾವಿರ ತಲುಪಿದ ಸುದ್ದಿ,ಕೇಳಿ ಸಣ್ಣ ಭಯ ಕಾಣಿಸಿಕೊಂಡಿತ್ತು.  ಕೊರೊನಾ ಜನ್ಮಸ್ಥಾನದಿಂದ ಈ ರೋಗ  ಶರವೇಗದಲ್ಲಿ ಜಗತ್ತಿಗೆಲ್ಲ ಹಬ್ಬುತ್ತಿರುವುದನ್ನ ನೋಡಿ ನಾವೂ ಬೆಚ್ಚಿಬಿದ್ವಿ . 

 ಜನವರಿಯ ಕೊನೆಯಲ್ಲಿ ಕೊರೊನಾ ಕೇರಳಕ್ಕೂ ಬಂತು ಎಂಬ ಸುದ್ದಿ ಟಿವಿಯಲ್ಲಿ ನ್ಯೂಸ್‌ಪೇಪರ್‌ನಲ್ಲಿ ಹರಿದಾಡ್ತಿತ್ತು. ಆದರೆ, ಡಿಸೆಂಬರ್‌ನಿಂದಲೇ  ಹೊಸ ಪ್ರಾಜೆಕ್ಟ್‌‌ನಲ್ಲಿ  ಕೆಲಸ ಮಾಡ್ತಾ ಇದ್ದ ನನ್ನ ಬಿಜಿ ಗಂಡ ವಿನಯ್ ಅದಾಗಲೇ,  ಕುವೈತ್‌‌ಗೆ ಹೋಗೋ ಸಿದ್ಧತೆಯಲ್ಲಿದ್ದರು.  ನನ್ನ ಅಮ್ಮ, ಅಪ್ಪ ಫೋನ್‌ಮಾಡಿ, ಅದೇನೋ ರೋಗ ಎಲ್ಲಕಡೆ ಹಬ್ಬುತ್ತಾ ಇದೆಯಂತೆ, ಈಗ ಹೋಗಲೇ ಬೇಕಂತಾ ಕುವೈತ್ಗೆ ಅಂತ ಕೇಳ್ತಾ ಇದ್ರೆ,  ನಾನು ನಕ್ಕಿದ್ದೆ.

 ಅವು ಫೆಬ್ರವರಿ ಆರಂಭದ ದಿನಗಳು.  ನನ್ನ ಪತಿರಾಯನಿಗೆ ತಲೆ ತುರಿಸಲೂ ಪುರುಸೊತ್ತಿಲ್ಲದ ಆ ಕಾಲದಲ್ಲಿಯೇ ನಾವಿದ್ದ ಮನೆಯ ಮಾಲಿಕರು ಮನೆ ಖಾಲಿ ಮಾಡಲು ಹೇಳಿಬಿಟ್ರು.   ನನ್ನ ಗಂಡನಿಗೋ ಅತ್ತ ದರಿ, ಇತ್ತ ಪುಲಿ ಅನ್ನೋ ಹಾಗಾಗಿತ್ತು.  ಆದರೂ ಕುವೈತ್‌ ಕ್ಲೈಂಟ್‌ನ ಪ್ರಾಜೆಕ್ಟ್‌ ಕೆಲಸವನ್ನೂ ನಿಭಾಯಿಸುತ್ತಾ,  ಸೂಕ್ತ ಬಾಡಿಗೆ ಮನೆಯನ್ನೂ ಹುಡುಕಲು ಶುರು ಮಾಡಿದ್ದರು ನನ್ನ ಗಂಡ ಬಡಪಾಯಿ..!  ದೇವರ ದಯೆ..! ಬಹು ಬೇಗ ಒಂದೊಳ್ಳೆ ಮನೆಯೂ ಸಿಕ್ತು.  ವಾರ ಕಳೆಯುವಷ್ಟರಲ್ಲಿಯೇ ವಿನಯ್‌ ನಮ್ಮನ್ನ ಹತ್ತಿರದ ಅಪಾರ್ಟ್‌‌ಮೆಂಟ್‌‌ನ ಮನೆಯೊಂದಕ್ಕೆ  ಶಿಫ್ಟ್‌‌ ಮಾಡಿಟ್ಟು  ವಿಮಾನು ಹತ್ತಿ ಹಾರಿಹೋದರು.   ಆದರೆ, ವಿನಯ್‌ಗಿದ್ದಷ್ಟೇ ತರಾತುರಿ ಕೊರೊನಾಕ್ಕೂ ಇತ್ತು ನೋಡಿ..! ಅಲ್ಲಿಯ ತನಕ  ಕುವೈತ್‌ನಲ್ಲಿ ಪತ್ತೆಯಾಗಿರದ ಕೊರೊನಾ ಫೆಬ್ರವರಿ ಕೊನೆಯ ವಾರದಲ್ಲಿ ಕುವೈತ್‌ನಲ್ಲಿಯೂ ಕಾಣಿಸಿಕೊಂಡ್ತು.

 

ನಮ್ಮ ದೇಶದಲ್ಲಿ ಅದಾಗಲೇ ಕೊರೊನಾ ಕುರಿತಾದ ಭಯದ ಬಿರುಗಾಳಿಯಾಗಿ ಬೀಸ್ತಾ ಇತ್ತು.  ರೋಗ ಹಬ್ಬುವ ತೀವ್ರತೆ,  ಅಪಾಯಗಳು, ಅದರಿಂದ ಪಾರಾಗುವ ಉಪಾಯಗಳು,  ಬರದಂತೆ ತಡೆಯುವ ಕ್ರಮಗಳು, ಸುಳ್ಳುಸುದ್ದಿಗಳು,  ಕೊರೊನಾ ಜೋಕ್ಗಳು, ಹಾಡುಗಳು, ಡಾನ್ಸ್ಗಳು ಹೀಗೆ ಇನ್ನೂ ಏನೇನೋ ವಾಟ್ಸ್ಯಾಪ್, ಫೇಸ್ಬುಕ್ನಲ್ಲಿ ಹರಿದಾಡ್ತಾ ಇದ್ರೆ, ನ್ಯೂಸ್‌ ಚಾಲನ್‌ಗಳು ಕರೊನಾದಿಂದ ಸಂಭವಿಸುತ್ತಿರುವ ಸಾವನ್ನು ವೈಭವೀಕರಿಸುತ್ತಿದ್ವು.  ನಾಲ್ಕು ವರ್ಷದ ಪುಟ್ಟ ಮಗನ ಜತೆ ಮನೆಯಲ್ಲಿ ಒಬ್ಬಳೇ ಇರೋ ನನಗೆ ಕೊರೊನಾ ಭಯ ಇನ್ನಿಲ್ಲದಂತೆ ಕಾಡೋಕೆ ಶುರುವಾಯ್ತು. ವಿದೇಶಕ್ಕೆ ಹೋಗಿಯೋ ಗಂಡ, ಕ್ಷೇಮವಾಗಿ ಮನೆಗೆ ಬಂದ್ರೆ ಸಾಕು ಅನ್ನೋ ಆತಂಕ ಬೇರೆ ..! 

 ಕುವೈತ್‌ನಲ್ಲಿ ಬೆರಳೆಣಿಕೆಯಷ್ಟು ಕೊರೊನಾ ಕೇಸ್‌ಗಳು ದಾಖಲಾಗ್ತಾ ಇದ್ದಂತೆ, ಆ ದೇಶದಲ್ಲಿ ಎಚ್ಚರಿಕೆಯ ಕ್ರಮಗಳು ಜಾರಿಗೆ ಬಂದ್ವು. ಬೇರೆ ದೇಶದಿಂದ ಬಂದ ಎಲ್ಲರನ್ನೂ ವಾಪಾಸ್‌ಕಳಿಸಲು  ಕುವೈತ್‌ಸರ್ಕಾರ ಕ್ರಮ ಕೈಗೊಳ್ತಾ ಇದೆ ಅನ್ನೋ ಸುದ್ದಿ ಬಂದಿದ್ದೇ  ವಿನಯ್‌ ಕಂಪನಿ  ಅವರನ್ನು   ವಾಪಾಸ್‌ಕರೆಸಿಕೊಳ್ಳುವ  ತಯಾರಿ ಮಾಡಿಕೊಂಡಿತ್ತು.  

 ಅಂದ್ಹಾಗೆ, ಮಾರ್ಚ್ ಮೊದಲನೇ ವಾರದಲ್ಲಿ ಅಂದ್ರೆ,  ಇನ್ನೂ ನಮ್ಮ ದೇಶದಲ್ಲಿ ಲಾಕ್‌ಡೌನ್‌ಆರಂಭವಾಗಿರಲಿಲ್ಲ ನೋಡಿ, ಆವಾಗಲೇ ವಿನಯ್‌‌  ಕುವೈತ್‌ನಿಂದ ಗಂಟು ಮೂಟೆ ಕಟ್ಟಿಕೊಂಡು ಎದ್ನೋ ಬಿದ್ನೋ ಅಂತ ಓಡಿ ಬರೋಕೆ ತಯಾರಿ ಮಾಡಿಕೊಂಡ್ರು. ಅದೇ ಗಡಿಬಿಡಿಯಲ್ಲಿ  ನನಗೆ ಕಾಲ್ ಮಾಡಿ,   ನಾನೀಗ ಕುವೈತ್‌ನಿಂದ  ಮನೆಗೇ ಬರಬೇಕಾ..? ಅಂತ ಕೇಳಬೇಕೆ...?   ಆ ಅನಿರೀಕ್ಷಿತ ಪ್ರಶ್ನೆಯಿಂದ ಗಾಬರಿಗೊಂಡ ನಾನು, ಯಾಕ್ರೀ..? ಮನೆಗೆ ಬರೋಕೆ ಇಷ್ಟ ಇಲ್ವಾ..? ಅಂದೆ.  ‘ಪೆದ್ದಿ, ನಾಳೆಯಿಂದ ಎಲ್ಲಾ ಫ್ಲೈಟ್‌ ಕ್ಯಾನ್ಸಲ್‌..!  ಇದೇನು ತಮಾಷೆ ಮಾಡೋ ಸಮಯವಾ ? ಫ್ಲೈಟ್‌ನಲ್ಲಿ  ಬರುವಾಗ ಕೊರೊನಾ ಅಂಟಿಕೊಳ್ಳೋ ಪಾಸಿಬಲಿಟೀಸ್ ಇರೋದ್ರಿಂದ ನಾನು ನಿನ್ನ ಹತ್ರ ಹೀಗೆ ಕೇಳ್ತಿರೋದು.  ನನ್ನ ಜತೆ ಇರೋ ಕಲೀಗ್ಸ್‌ ಬೆಂಗಳೂರಿಗೆ ಬಂದ ತಕ್ಷಣ ಲಾಡ್ಜ್‌ಗೆ ಹೋಗ್ತಿದಾರೆ.  ನಾನೂ ಹಾಗೇ ಮಾಡ್ಲಾ..? ಅಥವಾ ಒಂದು ಹದಿನೈದು ದಿನ ಮಗನ ಜತೆ ನೀನೇ ಊರಿಗೆ ಹೋಗ್ತಿಯಾ?’   ಅಂತ ಅಷ್ಟನ್ನೂ ಒಂದೇ ಉಸುರಿಗೆ ಹೇಳಿದರು.  ಕುವೈತ್ ಏರ್‌ಪೋರ್ಟ್‌‌ನಲ್ಲಿ ಕುಳಿತು ಹೀಗೆ ಕೇಳ್ತಾ ಇದ್ರೆ, ದಿಢೀರನೆ ನಾನು ಏನಂತ ಹೇಳಲಿ..?   ಆ ಕ್ಷಣಕ್ಕೆ ಆಯ್ತು ನಾವೇ ಊರಿಗೆ ಹೋಗ್ತೀವಿ, ನೀವು ಮನೆಗೇ ಬನ್ನಿ ಪರವಾಗಿಲ್ಲ ಅಂದೆ.

 ಅವರು ಮಾರ್ಚ್ 12 ರಂದು  ಬೆಳಗ್ಗೆ 10 ಗಂಟೆಗೆ ಕುವೈತ್ನಿಂದ ಹೊರಟು  ಮಧ್ಯಾಹ್ನ 12.30ಕ್ಕೆ  ಕತಾರ್‌ತಲುಪಿ,  ಅದೇ ದಿನ ಸಂಜೆ 8.30 ರ ಫ್ಲೈಟ್‌‌ಗೆ  ಕತಾರ್‌ನಿಂದ ಹೊರಟು  ಮಾರ್ಚ್ 13ರ ಬೆಳಗ್ಗೆ ಬೆಂಗಳೂರಿಗೆ ಬರೋ ಕಾರಣ,    ನಾನು ಮಾರ್ಚ್ 12  ರಂದೇ  ರಾತ್ರಿ ಬೆಂಗಳೂರು ಬಿಡಬೇಕಾಗಿತ್ತು. ನನ್ನ ಪುಣ್ಯಕ್ಕೆ ಅದೇ ದಿನ ರಾತ್ರಿ ಬಸ್‌ನಲ್ಲಿ ಸೀಟ್‌ ಕೂಡ ಸಿಕ್ಕಿತ್ತು.

ದಿನಿನಿತ್ಯ ತಪ್ಪದೇ ನ್ಯೂಸ್‌ ಚಾನೆಲ್‌ಗಳನ್ನ ನೋಡಿ ನೋಡಿ ತಲೆಯ ತುಂಬಾ ಕಲರ್‌ ಕಲರ್‌ ಕೊರೊನಾವನ್ನ ತುಂಬಿಕೊಂಡಿದ್ದ ನಾನು ಅದೇ  ಪ್ರಚಂಡ ಭಯದೊಂದಿಗೆ  ಮಗನನ್ನೂ ಕಟ್ಟಿಕೊಂಡು ಊರಿಗೆ ಹೊರಟೆ.

 ಅಂತೂ ಶಿರಸಿ ತಲುಪಿದ್ದೆ. ಊರಿಗೆ ಬಂದಮೇಲೆ, ವಾಟ್ಸ್ಯಾಪ್‌ನೋಡಿದ್ರೆ, ನನ್ನ ಗಂಡನ ಮೆಸೇಜ್‌ ಇತ್ತು.  ಕೈಗೆ ಗ್ಲೌಸ್, ಮುಖಕ್ಕೆ ಮಾಸ್ಕ್, ಪ್ಯಾಂಟ್‌‌  ಕಿಸೆಯಲ್ಲಿಯೇ  ಸ್ಯಾನಿಟೈಸರ್‌‌  ಬಾಟಲ್   ಇಟ್ಟುಕೊಂಡು  ಅತೀವ ಜಾಗರೂಕತೆಯಿಂದ  ತಾನು ಫ್ಲೈಟ್‌  ಸೀಟ್‌ನಲ್ಲಿ   ಕುಳಿತಿರೋ ಫೋಟೋ ಕಳಿಸಿದ್ದರು.  ಜತೆಗೆ ‘ರೀಚ್ಡ್‌ ಸೇಫ್‌ಲಿ’  ಅಂತ ಮುದ್ದಾಗಿ ಟೈಪಿಸಿದ್ದರು.  ನನಗೋ  ಕುವೈತ್‌ನಿಂದ ಸುರುಕ್ಷಿತವಾಗಿ ಮನೆಗೆ ರೀಚ್  ಆದ್ರಲ್ಲಾ ಅನ್ನೋ ಸಮಾಧಾನ ಒಂದ್ಕಡೆಯಾದ್ರೆ, ಕರೊನಾ ಅಂಟಿದೆಯೋ ಇಲ್ವೋ ಅಂತ ತಿಳ್ಕೊಳೋಕೆ ಇನ್ನೂ 15 ದಿನ ಕಾಯಲೇಬೇಕು ಅನ್ನೋ  ಚಡಪಡಿಕೆ ಇನ್ನೊಂದು ಕಡೆ !. 

ವಿನಯ್  ಬಂದು  11 ದಿನ ಕಳೆಯುವಷ್ಟರಲ್ಲಿ ಅಂದ್ರೆ, ಮಾರ್ಚ್ 24 ರಿಂದ 21 ದಿನಗಳು ಸಂಪೂರ್ಣ ಲಾಕ್‌ಡೌನ್‌  ಘೋಷಣೆಯಾಯ್ತು.  ಪ್ರತಿಯೊಬ್ಬರೂ ಮನೆಯೊಳಗೆ ಬಂಧಿಯಾದರು. ಬಸ್ಸು, ರೈಲು, ವಿಮಾನು ಸಂಚಾರ ನಿಂತುಹೋಯ್ತು. ಅಂಗಡಿಗಳು, ಆಫೀಸ್‌ಗಳು, ಶಾಲಾ ಕಾಲೇಜುಗಳು, ಶಾಪಿಂಗ್‌ ಮಾ‌ಲ್‌ಗಳು, ಸಿನಿಮಾ ಥಿಯೇಟರ್ಸ್  ಹೀಗೆ  ಎಲ್ಲವೂ ಬಂದ್ ಆದ್ವು.  ಹದಿನೈದು ದಿನಕ್ಕಾಗಿ ಊರಿಗೆ ಬಂದಿರೋ ನಾನು ಮತ್ತು ನನ್ನ ಮಗ ಊರಿನಲ್ಲೇ ಉಳಿದುಹೋದ್ವಿ.

 ದಿನದಿಂದ ದಿನಕ್ಕೆ ಕೊರೊನಾ ಸಂಖ್ಯೆ ಜಾಸ್ತಿ ಆಗ್ತಿದ್ದಂತೆ,  ಸುಳ್ಳುಸುದ್ದಿಗಳ ಹಾವಳಿಯೂ ಜಾಸ್ತಿಯಾಗ್ತಾ ಹೋಯ್ತು.   ’ಅದ್ಯಾವುದೋ ನಗರ, ಆ ನಗರದ ಮೂಲೆ ಮೂಲೆಗಳಲ್ಲಿ ರೋಗಿಗಳು !  ಅವರೆಲ್ಲ ಸಾವು ಬದುಕಿನ ನಡುವೆ ಹೆಣಗಾಡ್ತಾ ಇದ್ರೆ, ರಸ್ತೆಯಲ್ಲಿ ಹೋಗ್ತಿರೋ ಜನ ದೂರದಿಂದಲೇ ಇವರ  ನರಳಾಟ ನೋಡ್ತಾ ತಮ್ಮಪಾಡಿಗೆ ತಾವು ಹೊರಟು ಹೋಗ್ತಿದ್ದಾರೆ.  ಇಂಥ ಕರುಣಾ ಜನಕ ವೀಡಿಯೋ ಅಸಹ್ಯ ಭಯ ಹುಟ್ಟಿಸ್ತಾ ಇತ್ತು.   ಮತ್ತೊಂದು ವಿಡಿಯೋದಲ್ಲಂತೂ,  ಕೊರೊನಾ ರೋಗಿ ಅಂತ ಬಿಂಬಿಸಲಾಗಿದ್ದ ಒಬ್ಬ ಯುವಕ ಸೋಫಾದ ಮೇಲೆ ಮಲಗಿ ಉಸಿರಾಡಲು ಹರಸಾಹಸ ಪಡ್ತಿದ್ದ. ಯಾರೋ ಆತನ ಉಸಿಗಟ್ಟಿಸಿ ಸಾಯಿಸ್ತಾ ಇದ್ದಾರೇನೋ ಎಂಬಂತೆ ಚಡಪಡಿಸ್ತಾ ಇದ್ದ ಆತನ ಕಷ್ಟವನ್ನ  ನೋಡಿದ್ರೆ ಮೈ ಬೆವೆತುಹೋಗುತ್ತಿತ್ತು.  ಇಡೀದಿನ ಇಂಥ ವಿಡಿಯೋಗಳ ಬಗ್ಗೆ ಯೋಚಿಸ್ತಾ ಇದ್ದ ನನಗೆ ರಾತ್ರಿ ನಿದ್ದೆಯಲ್ಲಿಯೂ ಇಂಥದ್ದೇ ಕನಸು!  ಕೊರೊನಾ ಕುರಿತು ಬಂದ ಈ ಎಲ್ಲ ಸುಳ್ಳು ಸುದ್ದಿಗಳನ್ನ ಓದುತ್ತಿರುವ ನಾನಂತೂ ಅದು ಸುಳ್ಳೋ, ನಿಜವೋ ಎಂಬುದನ್ನ ನಿರ್ಧರಿಸಲೂ ಆಗದ ಮನಸ್ಥಿತಿಯಲ್ಲಿದ್ದೆ. ದೇವರಾಣೆ ಹೇಳ್ತೀನಿ.. ನಾವೆಲ್ಲ ಇನ್ನೆಷ್ಟ್‌ ದಿನ ಬದುಕ್ತೀವೋ ಏನೋ ಅನ್ಕೊಂಡಿದ್ದೆ.

 ಅಂತೂ ಇದೆಲ್ಲದರ ಜೊತೆಗೆ ವಿನಯ್ ಕುವೈತ್‌ನಿಂದ   ಬಂದು ಯಶಸ್ವಿ 13 ದಿನಗಳು ಕಳೆದಿದ್ದವು.  ವಿನಯ್‌ಗೆ ಅದ್ಯಾವ ತಂಡಿ ಜ್ವರ ಕೆಮ್ಮು ಸೀನು ಕೂಡ ಬಂದಿರಲಿಲ್ಲ.  ಆದರೆ  ಕ್ವಾರಂಟೈನ್ ದಿನಗಳು ಮುಗಿಯಲು  ಇನ್ನೊಂದೇ ದಿನ ಬಾಕಿ ಇದೆ ಅನ್ನುವಾಗಲೇ ಮನೆಗೆ ಬಂದಿದ್ದ ಕೊರೊನಾ ಕಾರ್ಯಕರ್ತರು, ವಿನಯ್‌ಕೈಗೆ  ಕ್ವಾರಂಟೈನ್  ಸೀಲ್‌ಹಾಕಿ ಹೋಗಿದ್ದರು.  ಅಷ್ಟೇ ಅಲ್ದೇ, ನಾವಿದ್ದ ಅಪಾರ್ಟ್‌‌ಮೆಂಟ್‌‌ನ  ಎಂಟ್ರೆಸ್‌ನಲ್ಲಿ   ಹೋಮ್‌ ಕ್ವಾರಂಟೈನ್‌ಒಬ್ಬರು ಇಲ್ಲಿದ್ದಾರೆ  ಎಂದು ಸೂಚಿಸುವ ನೊಟೀಸ್  ಕೂಡ  ಅಂಟಿಸಿಬಿಟ್ಟಿದ್ದರು.  ಹೊಸದಾಗಿ ಅಪಾರ್ಟ್‌ಮೆಂಟ್‌ಗೆ ಬಂದಿದ್ದ ನಮ್ಮನ್ನು ವಿಶೇಷವಾಗಿ ನೋಡುತ್ತಿದ್ದ ಇಲ್ಲಿಯ ಜನ ಈಗ ವಿನಯ್‌‌ನ್ನ  ಕಂಡ್ರೆ ಮೂರಡಿ ಮುಂದಕ್ಕೆ ಹಾರಲು ಶುರುಹಚ್ಚಿಕೊಂಡ್ರು.

 ಆವತ್ತೇ  ನ್ಯೂಸ್‌ಚಾನಲ್‌ನಲ್ಲೊಂದು  ಸುದ್ದಿ ಹೈಪ್‌ ಆಗಿತ್ತು.   ಕ್ವಾರಂಟೈನ್‌ ಸೀಲ್‌  ಹಾಕಿಸಿಕೊಂಡಿದ್ದ  ವ್ಯಕ್ತಿಯೊಬ್ಬ ಅಲೆದಾಡುತ್ತಿರುವ, ಮತ್ತು ಅವನನ್ನು ಪೊಲೀಸರು ಬಂಧಿಸಿರುವ ದೃಶ್ಯ ಮತ್ತೆ ಮತ್ತೆ  ಪ್ರಸಾರವಾಗ್ತಾ ಇತ್ತು.  ಜತೆಗೆ  ಬ್ಯಾಕ್‌ಗ್ರೌಂಡ್‌ನಲ್ಲಿ ‘ ಇಂಥವರನ್ನ ಜೈಲಿಗೆ ಹಾಕಿ ನಾಲ್ಕು ದಿನ ರುಬ್ಬಬೇಕು, ಹಾಗೇ ಬಿಡಬಾರ್ದು ಇವ್ರನ್ನ’ ಅನ್ನೋ ಆಂಕರ್‌ನ ಧ್ವನಿ..!   ಈ ನ್ಯೂಸ್‌ ನೋಡ್ತಾ ನೋಡ್ತಾ ನನ್ನ ಗಂಟಲು ಒಣಗಿತ್ತು.  ಆಗಿಂದಾಗ್ಲೇ  ವಿನಯ್‌ಗೆ ಕಾಲ್‌ಮಾಡಿ  ಆ ಸೀಲ್ ಅಳಿಸಿ ಹೋಗೋವರೆಗೂ  ಹೊರಗೆ ಮಾತ್ರ ಹೋಗಬೇಡಿ ದಮ್ಮಯ್ಯ.! ಅಂತ ಕೈ ಮುಗಿದಿದ್ದೆ.  

 ಈ ಮಧ್ಯೆ , ಕೊರೊನಾ ವಾರಿಯರ್ಸ್‌ಗೆ   ಗೌರವ  ಸೂಚಕವಾಗಿ ಚಪ್ಪಾಳೆ ತಟ್ಟಿ , ಜಾಗಟೆ ಬಾರಿಸಿ ದೀಪ ಬೆಳಗಿ ಗೌರವ ಸೂಚಿಸುವ ಮೋದಿಜಿ  ಕರೆಗೆ ನಾವೆಲ್ಲ ಊರಲ್ಲೇ  ಒಟ್ಟಾಗಿ ಓಗುಟ್ಟುತ್ತಿದ್ದರೆ,  ವಿನಯ್ ಒಬ್ಬರೇ, ಯಾರ‍್ಯಾರೂ  ಪರಿಚಯವಿರದ  ಅಪಾರ್ಟ್‌‌ಮೆಂಟ್‌‌ನ  ಮನೆಯಲ್ಲಿ ಒಬ್ಬರೇ ಕುಳಿತು ಜಾಗಟೆ ಬಾರಿಸಿ,  ಚಪ್ಪಾಳೆ ತಟ್ಟಿದ್ದರಂತೆ.  ಪಾಪ!   ಈ ಪರಿಸ್ಥಿತಿಗೆ ನಗಬೇಕೋ,  ಅಳಬೇಕೋ ನನಗೆ ತಿಳಿದಿರಲಿಲ್ಲ ನೋಡಿ..!

 ಹೀಗೆ ಒಂದನೇ ಲಾಕ್‌ಡೌನ್‌ಮುಗಿದು, ಎರಡನೇ ಲಾಕ್‌ಡೌನ್‌ ಸಂಪನ್ನಗೊಂಡು, ಮೂರನೇ ಲಾಕ್‌ಡೌನ್‌  ಕೂಡ ಮುಗಿತಾ ಬಂದಿತ್ತು. ಅಂದ್ರೆ, ಅದಾಗಲೇ ಮೇ ತಿಂಗಳು ಆರಂಭವಾಗಿತ್ತು.  ಆದರೆ,  ಮಾರ್ಚ್‌‌ನಲ್ಲಿ  ಊರಿಗೆ ಬಂದಿದ್ದ ನಾನು ಮತ್ತು  ನನ್ನ ಮಗ ಮಾತ್ರ ಇನ್ನೂ ಊರಲ್ಲೇ ಇದ್ವಿ.  ವಿನಯ್  ಒಬ್ಬರೇ ಗಡ್ಡಧಾರಿಯಾಗಿ  ಮನೆಯಲ್ಲಿಒಂಟಿಯಾಗಿದ್ದರು.  ತುಂಬಾ ದಿನಗಳಿಂದ  ಅಪ್ಪನ್ನ ನೋಡದ ಮಗನಿಗಂತೂ ಅಪ್ಪನನ್ನ  ಎಂದು ಕಂಡೆನೋ ಅನ್ನೋ ಹಂಬಲ.

 ಅಂತೂ ಮೂರನೇ ಲಾಕ್‌ಡೌನ್‌ಕೂಡ ಮುಗಿದಮೇಲೆ ನಾವು ಬೆಂಗಳೂರಿಗೆ ಹೋಗಲೇಬೇಕು ಅಂತ ನಿರ್ಧಾರ ಮಾಡಿದ್ವಿ.  ಆದರೆ, ಹೇಗೆ ಹೋಗೋದು ಎಂಬುದರ ಬಗ್ಗೆ ಏನೂ ಸ್ಪಷ್ಟತೆ ಇರಲಿಲ್ಲ.   ಆ ಸಮಯದಲ್ಲಿ ಬೆಂಗಳೂರಿನಿಂದ ಯಾರೂ ಶಿರಸಿಗೆ ಬರುವಂತಿರಲಿಲ್ಲ.  ಬಂದ್ರೂ ಅವರು, 14 ದಿನಗಳ ಕಾಲ ಇನ್‌ಸ್ಟಿಟ್ಯೂಶನಲ್‌  ಕ್ವಾರಂಟೈನ್‌ ಆಗಿರಬೇಕಿತ್ತು. ಆದರೆ, ಸ್ವಂತ ವಾಹನದಲ್ಲಿ ಬಂದು ಆಗಿಂದಾಗ್ಗೆ ಹೊರಟುಹೋಗುವುದಿದ್ದರೆ ಮಾತ್ರ ಬರಲು ಅವಕಾಶವಿತ್ತು. ಆಗಲೇ, 24 ಗಂಟೆಗಳ ’ಒನ್ಡೇ  ಪಾಸ್’ ವಿನಯ್‌ ಗೆ ಸಿಕ್ಕಿತ್ತು.

 ಒಂದೇ ದಿನ ಬೆಂಗಳೂರಿನಿಂದ ಶಿರಸಿಗೆ ಬಂದು  ತಕ್ಷಣ ವಾಪಾಸ್ ಹೋಗೋದು ಕಷ್ಟ ಎಂಬ ಕಾರಣಕ್ಕೆ, ಅರ್ಧ ದಾರಿಯನ್ನ ಉಳಿಸುವ ಪ್ಲ್ಯಾನ್‌ ಮಾಡಿದ್ವಿ.  ಚಿತ್ರದುರ್ಗವನ್ನ ನಮ್ಮ ಮೀಟಿಂಗ್ ಪಾಯಿಂಟ್ ಮಾಡಿಕೊಂಡ್ವಿ.   ಆದ್ರೆ, ಶಿರಸಿಯಿಂದ ನಮ್ಮನ್ನ ಚಿತ್ರದುರ್ಗದ ತನಕ ಬಿಡಲು ಬಾಡಿಗೆ ಕಾರು ಬೇಕಲ್ಲಾ..?  ಆ ಸಂದರ್ಭ ಹೇಗಿತ್ತೆಂದರೆ,  ಎಷ್ಟು ದುಡ್ಡು ಕೊಟ್ಟರೂ ಬಾಡಿಗೆ ಕಾರು ಕೂಡ ಸಿಗ್ತಾ ಇರಲಿಲ್ಲ. ಕೊನೆಗೆ ಉದಯವಾಣಿ ಪತ್ರಕರ್ತರಾದ ಗುರು ಹೆಗಡೆಯವರ ಸಹಾಯದಿಂದ  ಬಾಡಿಗೆ ಕಾರಿನ ವ್ಯವಸ್ಥೆಯಾಯಿತು. ಹಾಗೇ, ಶಿರಸಿಯಿಂದ ಚಿತ್ರದುರ್ಗಕ್ಕೆ ಹೋಗಲು ಪಾಸ್‌ ಕೂಡ ಸಿಕ್ತು.

 ಮೇ  5ನೇ ತಾರೀಖು ಅಂತೂ ನಮ್ಮ ಸವಾರಿ ಬೆಳಗ್ಗೆ 6 ಗಂಟೆಗೆ ಶಿರಸಿಯಿಂದ ಹೊರಟರೆ,  ಅದೇ ಸಮಯಕ್ಕೆ ಸರಿಯಾಗಿ ವಿನಯ್‌ ಸವಾರಿ ಬೆಂಗಳೂರಿನಿಂದ ಹೊರಟಿತ್ತು.  ವಿನಯ್‌ಗೆ  ಅವರ ತಮ್ಮ ವಿಜಯ್‌ಕೂಡ ಸಾಥ್‌ ನೀಡಿ ನಮ್ಮ ಕಾರ್‌ಗೆ ಅವರೇ ಸಾರಥಿಯಾದ್ರು.  ನಾಲ್ಕು ಜನರಿಗಾಗುವಷ್ಟು ಬೆಳಗ್ಗಿನ ತಿಂಡಿ, ಮಧ್ಯಾಹ್ನದ ಊಟ ಕಟ್ಟಿಕೊಂಡು, ಫೇಸ್‌ಮಾಸ್ಕ್‌  ಹಾಕಿಕೊಂಡು  ಗಡಿಬಿಡಿಯಲ್ಲಿ ಬೆಳ್ಳಬೆಳಗ್ಗೆ ಹೊರಟಿದ್ದ ನನಗೆ,  ನನ್ನ ಮಾವ ಬದಿಯಲ್ಲಿ ಕರೆದು ಕಿವಿಯಲ್ಲಿ ಹೇಳಿದ್ದರು.  ‘ ಪಾಪ ಆ ಡ್ರೈವರ್‌ ಏನ್ತಿಂದಿದಾರೋ ಇಲ್ವೋ ಗೊತ್ತಿಲ್ಲ,  ತಿಂಡಿ ತಿನ್ನುವಾಗ ಅವರಿಗೂ ಸ್ಪಲ್ಪ ಕೊಟ್ಟುಕೊಂಡು ತಿನ್ನು ಆಯ್ತಾ..?’  ಅಂದ್ರು. ನಾನು ಆಯ್ತು ಮಾವಾ ಅಂದೆ.     

 ಜಿಲ್ಲಾ ಗಡಿಗಳಲ್ಲಿದ್ದ ಎಲ್ಲಾ ಚೆಕ್‌ಪೋಸ್ಟ್‌ಗಳಲ್ಲಿಯೂ  ನಮ್ಮ ಪಾಸ್‌  ತೋರಿಸ್ತಾ,  ಅವರಿಂದ ಮುಂದೆ ಹೋಗಲು ಒಪ್ಪಿಗೆ ಪಡೆದುಕೊಳ್ತಾ ಡ್ರೈವರ್‌  ನಮ್ಮನ್ನ  ಗಡಿದಾಟಿಸ್ತಾ ಇದ್ರು.  ಸಾಗರ, ಶಿವಮೊಗ್ಗ, ಚಿತ್ರದುರ್ಗದ ಹೀಗೆ ಎಲ್ಲ ಗಡಿಗಳಲ್ಲಿಯೂ ಹತ್ತತ್ತು ನಿಮಿಷ ನಿಂತಿದ್ದಾಯ್ತು.  ನಮ್ಮ ಡ್ರೈವರ್‌‌  ಆ ಎಲ್ಲಾ ಚೆಕ್‌ಪೋಸ್ಟ್‌ನಲ್ಲಿಯೂ  ನಮ್ಮ ಪಾಸ್‌ತೋರಿಸಿ ಅವರಿಂದ ಒಪ್ಪಿಗೆ ಪಡೆದೊಂಡು ಬರ್ತಾ ಇದ್ರು.   ಎಲ್ಲಾ ಚೆಕ್‌ಪೋಸ್ಟ್‌ಗಳಲ್ಲಿರುವ ಪೊಲೀಸರೂ ಕೂಡ ನಮ್ಮನ್ನು ಪರೀಕ್ಷಿಸಿದ್ದಲ್ದೇ  ಎಲ್ಲಿಗೆ ಹೋಗ್ತಿದ್ದೀರಿ..? ಯಾಕೆ ಹೋಗ್ತಿದ್ದೀರಿ..? ಅಂತ ಪ್ರಶ್ನಿಸ್ತಿದ್ರು. ಅವರು ಕೇಳುತ್ತಿರುವ ಪ್ರಶ್ನೆ ನೋಡಿದ್ರೆ,  ಅದೆಲ್ಲಿ ನಮ್ಮನ್ನ ಮತ್ತೆ ವಾಪಾಸ್ಕಳಿಸಿಬಿಡ್ತಾರೋ ಅನ್ನೋ ಭಯ ಬೇರೆ.  ಅದೃಷ್ಟವಶಾತ್‌‌    ನಮ್ಮನ್ನ ಅವರು ವಾಪಾಸ್ಕಳಿಸಲಿಲ್ಲ. ಆದರೆ ಅದೇ  ಟೆನ್ಶನ್‌ಲ್ಲಿದ್ದ   ಡ್ರೈವರ್‌‌ ಚೆಕ್‌ಪೋಸ್ಟ್‌‌  ಕಂಡ ತಕ್ಷಣ  ಬೆವೆತು ಹೋಗ್ತಿದ್ರು. ಯಾವಾಗ ಇವರನ್ನ ಚಿತ್ರದುರ್ಗ ತಲುಪಿಸಿ, ವಾಪಾಸ್ಹೋಗ್ತೀನೋ.. ಅನ್ನೋ ಯೋಚನೆಯಲ್ಲಿಯೇ ಕಾರು ಓಡಿಸುತ್ತಿದ್ದ ಆ  ಡ್ರೈವರ್‌ಗೆ  ನಾನು ಯಾವಾಗ  ತಿಂಡಿ ಕೊಡಲಿ ಹೇಳಿ..?  ನಾನು ಮಾವಂಗೆ ಕೊಟ್ಟ ಮಾತು ಮಾತ್ರ ಹಾಗೆ ಉಳಿದಿತ್ತು.

 ಅಂತೂ ಚಿತ್ರದುರ್ಗವನ್ನ ನಾವು ತಲುಪಿದಾಗ ಬೆಳಗ್ಗೆ 10 ಗಂಟೆ.  ಸಮಯಕ್ಕೆ ಸರಿಯಾಗಿ ವಿನಯ್, ವಿಜಯ್‌ ಸವಾರಿ ಕೂಡ ಅಲ್ಲಿಗೆ ಬಂದಿತ್ತು.  ನಾವು ಈ ಕಾರ್‌ನಿಂದ  ಆ ಕಾರ್‌ಗೆ  ಲಗೇಜುಗಳ ಸಮೇತ ಶಿಫ್ಟ್  ಆದ್ವಿ. ಬರೋಬ್ಬರಿ 4 ತಿಂಗಳುಗಳಿಂದ ದೂರವಿದ್ದ ನಮಗೆ ಪರಸ್ಪರ  ಮುಖ ಮುಖ ನೋಡಿಕೊಳ್ಳೋದೇ ಒಂದು ಸಂಭ್ರಮ.  ನನ್ನ ಮಗನಂತೂ ಅಪ್ಪಾ... ಅಂತ ಕಿರುಚುತ್ತ ಅಪ್ಪನ ಮೈ ಹತ್ತಿ ಕುಳಿತೇಬಿಟ್ಟಿದ್ದ. ಇಲ್ಲಿಗೆ ವಿನಯ್‌ನ  3 ತಿಂಗಳ ಸುದೀರ್ಘ ಕ್ವಾರಂಟೈನ್‌ ಪೀರಿಯಡ್‌ ಅಂತೂ ಇಂತೂ ಮುಕ್ತಾಯ  ಕಂಡಿತ್ತು.

 ಆರಾಮಾಗಿ ಬೆಂಗಳೂರಿಗೆ ಬಂದಿಳಿದ ಸುದ್ದಿ ತಿಳಿಸೋಕೆ ನಾನು ನನ್ನ ಮಾವಂಗೆ ಕಾಲ್‌ಮಾಡಿದರೆ,  ಅವರು ಕೇಳಿದ ಮೊದಲ ಪ್ರಶ್ನೆ ಯಾವುದು ಗೊತ್ತಾ..?  `ಅದೆಲ್ಲ ಸರಿ... ಬೆಳಗ್ಗೆ ಆ ಕಾರ್‌ ಡ್ರೈವರ್‌ಗೆ ತಿಂಡಿ ಕೊಟ್ಟಿದ್ಯಾ..?’  ಅಂತ..!

 

 

 

 

 

 

 

 

 

 

 

 

 

 

 

  

 

 

 

 

 

 

 

 

 

 

 

Friday, 6 November 2020

ಎಲ್ಲರ ಹತ್ತಿರ ಹೋಗಿ, ನನ್ನ ಮಗ ಅಳ್ತಾನೆ ಮೊಬೈಲ್‌ ಮುಚ್ಚಿಡಿ ಅನ್ನೋಕಾಗುತ್ತಾ..?

 

 

ಅದೊಂದು ಕೊರೊನಾ ಪೂರ್ವ ಕಾಲ.  3 ವರ್ಷದ ಮಗುವನ್ನು ಎತ್ತಿಕೊಂಡ ನಾನು, ಕೈಯ್ಯಲ್ಲೊಂದು, ಬೆನ್ನಿಗೊಂದು ಬ್ಯಾಗ್‌ ಏರಿಸಿಕೊಂಡು ಏದುಸಿರು ಬಿಡುತ್ತಾ ಬಸ್‌ಹತ್ತಿದ್ದೆ.  ದೇವರ ದಯೆಯಿಂದ ಕುಳಿತುಕೊಳ್ಳೋಕೆ ಸೀಟ್‌ಕೂಡಾ ಸಿಕ್ತು. ಮೊಬೈಲ್‌ಕೈಯ್ಯಲ್ಲಿ ಹಿಡಿದಿದ್ದ ನನ್ನ ಮಗನನ್ನು ಸೀಟ್‌ಮೇಲೆ ಕೂರಿಸಿ ಲಗೇಜ್‌ ಇಟ್ಟು ನಾನೂ ಕುಳಿತುಕೊಳ್ಳುವಷ್ಟರಲ್ಲಿ  ಏನಮ್ಮಾ...ಯಾಕಮ್ಮಾ ಮಗು ಕೈಯ್ಯಲ್ಲಿ ಮೊಬೈಲ್‌  ಕೊಟ್ಟಿದೀಯಾ..? ಮಕ್ಕಳಿಗೆ ಮೊಬೈಲ್‌ ಕೊಡಬಾರದಮ್ಮ..’ ಎಂಬ ಅಶರೀರವಾಣಿಯೊಂದು ನನ್ನ ಕಿವಿಗೆ ಬಿತ್ತು. ತಿರುಗಿ ನೋಡಿದ್ರೆ, ನನ್ನ ಪಕ್ಕದ ಸೀಟಿನಲ್ಲಿ ಒಬ್ಬ್ರು ಕನ್ನಡಕಧಾರಿ ಮೇಡಮ್‌ ಕೂತಿದ್ರು. ನಾನೋ ಹೂಂ ಅನ್ನುವಂತೆ ಗೋಣು ಅಲ್ಲಾಡಿಸಿ, ಸ್ವಲ್ಪ ನಕ್ಕೆ.

 ಒಬ್ಬಳೇ ಚಿಕ್ಕ ಮಗನೊಂದಿಗೆ ಮೈಸೂರಿನಿಂದ ಬೆಂಗಳೂರಿಗೆ ಬರಬೇಕಾದ ಆ ಸಂದರ್ಭದಲ್ಲಿ ಮಗನನ್ನ ನಿಭಾಯಿಸಲು ಮೊಬೈಲ್‌ ಕೊಡಲೇಬೇಕಾಗಿತ್ತು. ಆದರೆ, ನನ್ನ  3 ವರ್ಷದ ಪೋರನ ಕೈಯಲ್ಲಿರೋ ಮೊಬೈಲ್‌ನ್ನ ಬಸ್ಸು ಹತ್ತಿದ ತಕ್ಷಣ ಕಿತ್ತುಕೊಳ್ಳುವಷ್ಟು ಧೈರ್ಯ ನನಗಿರಲಿಲ್ಲ. ಯಾಕಂದ್ರೆ ಆ ಬಸ್ಸಿನಲ್ಲಿ ನೆಲೆಸಿದ್ದ ಶಾಂತಿ ಕೆಡಿಸೋಕೆ ನನಗೆ ಮನಸಿರಲಿಲ್ಲ. ಹೇಳಿಕೇಳಿ ಓಲ್ವೋ ಬಸ್ಸು. ಮಟ ಮಟ ಮಧ್ಯಾಹ್ನ ಬೇರೆ.  ಸರಿಯಾಗಿ 1.30ಕ್ಕೆ ಮೈಸೂರು ಬಿಟ್ಟ ಈ ಬಸ್ಸಿನಲ್ಲಿರೋರೆಲ್ರೂ ಗಡದ್ದಾಗಿ ಉಂಡು ಬಂದು, ಬಸ್ಸೊಳೊಗೆ ಮಲಗಿದ್ರು. ಬಸ್ಸು ಹೊರಡೋಕೂ ಮುಂಚೇನೇ ಗೊರಕೆಗಳು  ಕೂಡ ಕೇಳಿಬರ್ತಾ ಇದ್ವು. ಅಲ್ಲಿದ್ದ ಕೆಲವೇ ಕೆಲವು ಯುವಕ ಯುವತಿಯರು ಕೂಡ ಮೊಬೈಲ್‌ ಲೋಕದೊಳಗೆ ಮೈಮರೆತಿದ್ದರು.

 ಇಂತಿಪ್ಪ ಆ ಸಂದರ್ಭದಲ್ಲಿ, ನನ್ನ ಮಗನ ಕೈಯ್ಯಲ್ಲಿದ್ದ ಮೊಬೈಲ್‌ ಕಿತ್ತುಕೊಂಡಿದ್ರೆ ಸುಖ ನಿದ್ದೆಯಲ್ಲಿದ್ದವ್ರನ್ನೆಲ್ಲ ಎಬ್ಬಿಸಿದ ಪಾಪ ನನಗೆ ಸುತ್ತಿಕೊಳ್ತಿತ್ತಿತ್ತು.   ಸ್ವಲ್ಪ ಹೊತ್ತಿನ ನಂತರ ’ಪುಟ್ಟಾ ಮೊಬೈಲ್‌ಕೊಡಪ್ಪ ಅಪ್ಪಂಗೊಂದು ಫೋನ್‌ಮಾಡ್ತೀನಿ ’ ಅಂದೆ.   ಪೋರ ತನ್ನ ಪುಟ್ಟ ಕೈಲಿದ್ದ ದೊಡ್ಡ ಮೊಬೈಲ್‌ಎತ್ತಿ ಕೊಟ್ಟ.  ಆಗ ನಾನು ಫೋನ್‌ಮಾಡಿದಂತೆ ನಾಟಕ ಮಾಡಿ, ಅಲ್ಲೇ ಡೇಟಾ ಆಫ್‌ಮಾಡಿ ಅವನಿಗೆ ವಾಪಾಸ್‌ಕೊಟ್ಟೆ. ಮತ್ತೆ ಯೂಟ್ಯೂಬ್‌ಆಪ್‌ವತ್ತಿದ ಅವನಿಗೆ ಕಂಡಿದ್ದು,  ‘ಯೂ ಆರ್‌ಆಫ್‌ಲೈನ್‌’ ಅನ್ನೋ ಅಕ್ಷರಗಳು.  ‘ಅಮ್ಮ ಮೊಬೈಲ್‌ಹಾಳಾಗ್ಹೋಯ್ತು’ ಅನ್ನುತ್ತಾ ಆಕಳಿಸಿದ.  ಅದು ಅವನ ನಿದ್ದೆ ಸಮಯ ಕೂಡ ಆಗಿದ್ದ ಕಾರಣ,  ಅವನನ್ನ ಕಾಲಮೇಲೆ ಮಲಗಿಸಿಕೊಂಡು ನಿದ್ದೆ ಮಾಡಿಸಿಬಿಟ್ಟೆ. ಇದೆಲ್ಲ ಗಮನಿಸ್ತಾ ಇದ್ದ ಪಕ್ಕದ ಸೀಟ್‌ನ ಮೇಡಮ್‌ತಾವು ತಮ್ಮ ಮೊಬೈಲ್‌ನೋಡುತ್ತಲೇ ಕಿರುನಗೆ ನಕ್ಕರು.

 ಇತ್ತೀಚೆಗೆ ನನ್ನಂಥ ತಾಯಂದಿರಿಗೆ ಇಂಥ ಪುಗಸಟ್ಟೆ ಸಲಹೆಗಳು ಸಾಮಾನ್ಯವಾಗ್ಬಿಟ್ಟಿದೆ ಬಿಡಿ.  ಎಲ್ಲೆಲ್ಲಿ ಅಂತೀರಾ..? ಡಾಕ್ಟರ್‌ಕ್ಲಿನಿಕ್‌ನ ಕೋಪೇಶೆಂಟ್ಸ್‌ನಿಂದ ಹಿಡಿದು , ಕ್ಯಾಬ್ ಡ್ರೈವರ್‌, ಬಸ್‌ಕಂಡಕ್ಟರ್‌, ಎಟಿಎಮ್‌ಮುಂದೆ ಕೂತಿರೋ ಸೆಕ್ಯೂರಿಟಿ ಗಾರ್ಡ್‌ತನಕ ಯಾರ‍್ಯಾರೋ ಅಪರಿಚಿತ ಅಂಕಲ್ ಆಂಟಿಯರು ಮೊಬೈಲ್‌ಕುರಿತ ಆಪ್ತಸಲಹೆ ನೀಡಿದ್ದಾರೆ.  ನಾನು ಅವರೆಲ್ಲರಿಗೂ ಹಿಂದಿರುಗಿಸೋದು `ಹೂಂ’ ಎಂಬ ನಗುಯುಕ್ತ ಒಪ್ಪಿಗೆ ಮಾತ್ರ.

 ಹಾಂ. ಸೆಕ್ಯೂರಿಟಿ ಗಾರ್ಡ್‌ಕಥೆಯನ್ನ ನಾನಿಲ್ಲಿ ನಿಮಗೆ ಹೇಳಿಲ್ಲ ಅಂದರೆ ಸ್ವಾರಸ್ಯವೇ ಇರಲ್ಲ.  ಒಂದಿನ ಸಂಜೆ ತರಕಾರಿ ತರೋಕೆ ಹೊರಟಿರೋ ನನ್ನ ಪರ್ಸ್‌ನಲ್ಲಿ 10 ರೂಪಾಯಿ ನೋಟು ಬಿಟ್ಟರೆ ಇನ್ನೇನು ಇರ್ಲಿಲ್ಲ. ಹೀಗಾಗಿ ಎಟಿಎಂಗೆ ಹೋಗಲೇ ಬೇಕಾದ ಪರಿಸ್ಥಿತಿ ಬಂತು. ಮನೆಯಲ್ಲಿ ಮತ್ಯಾರೂ ಇಲ್ಲದ ಕಾರಣ, ನಾನೆಲ್ಲಿ ಹೊರಟರೂ ನನ್ನ ಜತೆ ನನ್ನ ಮಗ ಇನ್‌ಬಿಲ್ಟ್‌ ಸಾಫ್ಟ್‌ವೇರ್‌. ಅವನ್ನೂ ಕರ್ಕೊಂಡೇ ಮನೆ ಹತ್ತಿರವಿರೋ ಎಟಿಎಂಗೆ ಹೋದೆ. ನನ್ನ ದುರಾದೃಷ್ಟಕ್ಕೆ ಆವತ್ತಲ್ಲಿ 8 ರಿಂದ 10 ಜನರ ಉದ್ದಾನುದ್ದ ಕ್ಯೂ ಇತ್ತು.  ಸಾಯ್ಲಿ ಇವತ್ತು ಹಣ ತೆಗೆಯೋದೇ ಬೇಡ ಅಂತ ವಾಪಾಸ್ ಬರೋಕೂ    ಆಗ್ದೆ, ಕ್ಯೂನಲ್ಲಿ ನಿಲ್ಲೋದು ಅನಿವಾರ್ಯವಾಯ್ತು.  ಇದೇ ಸಮಯಕ್ಕಾಗಿ ಕಾಯ್ತಾ ಇದ್ದ ನನ್ನ ಮಗ ಮೊಬೈಲ್‌ಕೇಳಿದ. ನಾನು ಮೊಬೈಲ್‌ಕೊಟ್ಟುಬಿಟ್ಟೆ.  ನಮ್ಮನ್ನ ಗಮನಿಸುತ್ತಾ ಇದ್ದ ಎಟಿಎಂನ ಸೆಕ್ಯೂರಿಟಿ ಗಾರ್ಡ್‌‘ಮಕ್ಕಳಿಗೆ ಮೊಬೈಲ್‌ಕೊಡಬಾರದಮ್ಮ’ ಅಂದರು.  ಆ ಕ್ಯೂ ನೋಡಿನೇ ತಲೆ ಕೆಟ್ಟುಹೋಗಿದ್ದ ನನಗೆ, ಅವರ ಆ ಮಾತು ಕೇಳಿ ಕಿರಿಕಿರಿಯಾಯ್ತು. ಆಗಿದಾಂಗ್ಗೆ ನನ್ನ ಮಗನ ಕೈಲಿದ್ದ ಮೊಬೈಲ್‌ ಕಿತ್ತುಕೊಂಡೆ. ನನ್ನ ಮಗ ಅಲ್ಲೇ ರಂಪಾಟ ಶುರುಮಾಡಿದ.  ಮೊಬೈಲ್‌ಬೇಕೆ ಬೇಕು ಅಂತ ನಿಂತಲ್ಲೇ ಕುಣಿದ. ಹಟ ಹಿಡಿದು ಕೂತು ಉರುಳಾಡಿದ. ಕ್ಯೂನಲ್ಲಿದ್ದ ಎಲ್ಲರೂ ತಮ್ಮತಮ್ಮ ಮೊಬೈಲ್‌ನಲ್ಲಿ ನೆಟ್ಟಿದ್ದ ಕಣ್ಣುಗಳನ್ನ ಒಮ್ಮೆ ತೆಗೆದು ನಮ್ಮಿಬ್ಬರನ್ನೂ ನೋಡಿ, ಮತ್ತೆ ಮೊಬೈಲ್‌ನಲ್ಲಿ ತಲ್ಲೀನರಾದರು. ಎಷ್ಟು ಕೂಗಾಡಿದ್ರೂ ಮೊಬೈಲ್‌ಕೊಡಲೇಬಾರದು ಅಂತ ನಾನೂ ಹಠ ಹಿಡಿದೆ.   ನನ್ನ ಸರದಿ ಬರೋವರೆಗೂ ನನ್ನ ಮಗ ಅಳ್ತಾನೇ ಇದ್ದ.   ಸೆಕ್ಯೂರಿಟಿ ಗಾರ್ಡ್‌‌ಗೆ ಅದೇನೋ ಅಪರಾಧಿ ಪ್ರಜ್ನೆ ಕಾಡಿರಬೇಕು, ನಾನು ಹಣ ಪಡಕೊಂಡು ವಾಪಾಸ್ ಬರುವಾಗ ಸಾರಿ ಮೇಡಮ್‌, ಮಗು ಇಷ್ಟೊಂದು ಅಳುತ್ತೆ ಅಂತ ಗೊತ್ತಿರಲಿಲ್ಲ, ಅಂದ.  ನಾನು ಇರ್ಲಿಬಿಡಿ , ನೀವ್‌ಹೇಳಿದ್ರಲ್ಲಿ ತಪ್ಪೇನಿಲ್ವಲ್ಲಾ.. ಅಂತ್ಹೇಳಿ ಅಲ್ಲಿಂದ ಮಗನನ್ನ ಕರ್ಕೊಂಡು ಹೊರಟೆ.  ಆ ಸೆಕ್ಯುರಿಟಿ ಗಾರ್ಡ್‌ಇನ್ನೆಂದೂ ಮತ್ಯಾರಿಗೂ ಈ ಸಲಹೆ ಕೊಡೋ ಗೋಜಿಗೇ ಹೋಗಲ್ವೇನೋ.. ಅಂಥ ಪಾಠ ಕಲಿಸಿಬಿಟ್ಟ ನನ್ನ ಮಗ.

 ಮನೆಯಿಂದ ಹೊರಹೊರಟಾಗ, ಅದೂ ವಿಶೇಷವಾಗಿ ಕಾಯುವ ಪರಿಸ್ಥಿತಿ ಇದೆ ಎಂದು ಗೊತ್ತಿದ್ದಾಗ,   ಕಥೆಪುಸ್ತಕಗಳನ್ನ, ಆಟಿಗೆಗಳನ್ನ, ತಿಂಡಿಗಳನ್ನ ಇಟ್ಟುಕೊಂಡು ಹೋಗಿ ಮೊಬೈಲ್‌ಕೊಡದೇ ನನ್ನ ಮಗನನ್ನ ಮ್ಯಾನೇಜ್‌ಮಾಡೋಕೆ ಪ್ರಾಮಾಣಿಕವಾಗಿ ಪ್ರಯತ್ನಪಡ್ತೀನಿ.  ಆದರೆ ಅದ್ಯಾವುದೂ ಅಂಥ ಯಶ ಕಂಡಿಲ್ಲ. ಇದೆಲ್ಲದರಿಂದ ಅವನ ಮೊಬೈಲ್‌ಬೇಡಿಕೆಯನ್ನ ಒಂದರ್ಧ ಗಂಟೆ ಮುಂದೂಡಬಹುದೇ ಹೊರತು,  ಮೊಬೈಲ್‌ನೆನಪನ್ನೇ ಮರೆಮಾಚೋಕೆ ಸಾಧ್ಯವಿಲ್ಲ. ಯಾಕಂದ್ರೆ,  ನನ್ನ ಹಾಗೇ ಸರದಿಗಾಗಿ ಕಾಯುತ್ತಿರುವವರೆಲ್ಲರ ಕೈಯಲ್ಲಿಯೂ ಮೊಬೈಲ್‌ಇರೋ ಕಾರಣ, ನಾನು ಮುಚ್ಚಿಟ್ಟರೂ ಅವನಿಗೆ ಮೊಬೈಲ್‌ನೆನೆಪಾಗಿಬಿಡುತ್ತೆ.  ಇದಕ್ಕೇನು ಮಾಡೋಣ ಹೇಳಿ. ಎಲ್ಲರ ಬಳಿ ಹೋಗಿ, ನನ್ನ ಮಗ ಮೊಬೈಲ್‌ಗಾಗಿ ಅಳ್ತಾನೆ, ನೀವು ಸ್ವಲ್ಪ ಹೊತ್ತು ಮೊಬೈಲ್‌ಮುಚ್ಚಿಡಿ ಅನ್ನೋಕಾಗುತ್ತಾ..?

 ಇನ್ನು ಒಂದು ಜನರೇಶನ್ ‌ಹಿಂದಿನ  ಜನರಿಗಂತೂ ಈಗಿನ ತಂದೆ ತಾಯಿಯರನ್ನ ಕಂಡರೆ, ಅದೇನೋ ಅಸಡ್ಡೆ, ಮಕ್ಕಳಿಗೆ ಮೊಬೈಲ್‌ಎಡಿಕ್ಟ್‌ಮಾಡಿಸ್ತಾರೆ. ಮೊಬೈಲ್‌ಇಲ್ಲದೆ ನಿಭಾಯಿಸೋದೇ ಈಗಿನವರಿಗೆ ಗೊತ್ತಿಲ್ಲ, ನಾವೆಲ್ಲ ಮಕ್ಕಳನ್ನ ಬೆಳಸಲೇ ಇಲ್ವಾ..? ಆಗೇನು ಮೊಬೈಲ್‌ ಇದ್ವಾ..?  ಎಂಬುದು ಅವರ ಆರೋಪ.   ಹೌದು ಸ್ವಾಮಿ.. ಆ ಕಾಲದಲ್ಲಿ ಮೊಬೈಲ್‌ಎಂಬ ಮಾಯದ ವಸ್ತು ಅಸ್ತಿತ್ವದಲ್ಲಿಯೇ ಇಲ್ಲದಾಗ ಆಗಿನ ಮಕ್ಕಳೆಲ್ಲಿಂದ ಮೊಬೈಲ್‌ಕೇಳಿಯಾರು..? ಅಂದಿಗೂ ಇಂದಿಗೂ ಕಂಪೇರ್‌ಮಾಡೋಕೆ ಹೇಗೆ ಸಾಧ್ಯ ಹೇಳಿ? ಅಂದು ಮನೆತುಂಬಾ ಜನ ಇರ್ತಿದ್ರು.  ಒಬ್ಬರಲ್ಲ ಒಬ್ಬರು ಮನೆಯ ಮಕ್ಕಳನ್ನ ನೋಡಿಕೊಳ್ತಾ ಇದ್ರು. ತಾಯಿಯಾದವಳೇ ಸದಾಕಾಲ ಮಗುವಿನ ಸರ್ವಕೆಲಸಗಳನ್ನೂ ಮಾಡಬೇಕು ಎಂಬ ಅನಿವಾರ್ಯತೆ ಈಗಿನಷ್ಟು ಅಂದು ಎಲ್ಲರಿಗೂ ಇರಲಿಲ್ಲ.  ಮನೆಯಲ್ಲಿರೋ ಮಗುವಿಗೆ ಊಟ ಮಾಡಿಸೋಕೆ ಅಜ್ಜಿನೋ, ಅತ್ತೆನೋ, ಚಿಕ್ಕಮ್ಮನೋ ನಾಯಿ, ಕುರಿ, ಕೋಳಿ, ಆಟೋ, ಬೈಕು  ತೋರಿಸ್ತಾ ಊರೆಲ್ಲ ಸುತ್ತುತ್ತಾ ಇದ್ರು.  ಈಗ ಸಾಮಾನ್ಯವಾಗಿ ಮನೆಯಲ್ಲಿ ಬೇರೆ ಯಾರೂ ಇರೋದೂ ಇಲ್ಲ, ತಂದೆ-ತಾಯಿಗೆ ಪುರುಸೊತ್ತೂ ಇಲ್ಲ,   ಮೊಬೈಲ್‌ಇರೋದ್ರಿಂದ ಆ ಜರೂರತ್ತೂ ಇಲ್ಲ.  ಅಲ್ಲದೇ ಇಡೀ ಸಮಾಜಕ್ಕೆ ಸಮಾಜವೇ ಮೊಬೈಲ್‌ಗೆ ಎಡಿಕ್ಟ್‌ಆಗಿರುವಾಗ, ಮಕ್ಕಳನ್ನ ಮಾತ್ರ ಮೊಬೈಲ್‌ನಿಂದ ದೂರ ಇಡಿ ಅಂದ್ರೆ ಅದು ಸಾಧ್ಯವಾಗದ ಮಾತು ಅಲ್ವೇ..?   

 ಮೊಬೈಲ್ ‌ರೇಡಿಯೇಶನ್‌ ಮಕ್ಕಳ ತಲೆ, ಹೃದಯಕ್ಕೆ ಹಾನಿಯುಂಟುಮಾಡುತ್ತೆ, ಅವರಿಗೆ ನಿದ್ದೆಯ ತೊಂದರೆ ಕಾಡುತ್ತೆ, ಸೃಜನಾತ್ಮಕತೆಯನ್ನ ಕಡಿಮೆ ಮಾಡುತ್ತೆ, ಮಕ್ಕಳಲ್ಲಿ ಯೋಚನಾಶಕ್ತಿ ಕುಂದುತ್ತೆ, ಮೊಬೈಲ್‌ಗೆ ಎಡಿಕ್ಟ್‌ಆಗಿರುವ ಮಗುವಿಗೆ ಸ್ಥೂಲಕಾಯ ಬರುತ್ತೆ, ಎಂಬೆಲ್ಲ ಸಂಶೋಧನಾಕಾರರ ಲೇಖನಗಳನ್ನ ಓದಿದಾಗ ನಿಜಕ್ಕೂ ನಮ್ಮಂತ ತಾಯಂದಿರ ಜಂಗಾಬಲವೇ ಉಡುಗಿಹೋಗುತ್ತೆ. ಮಕ್ಕಳಿಗೆ ಮೊಬೈಲ್‌ಕೊಟ್ಟು, ಅವರನ್ನ ಇಂಥ ಎಲ್ಲ ಸಮಸ್ಯೆಗಳೆದುರು ಕೂರಿಸಬೇಕು ಎಂಬ ಆಸೆಯಂತೂ ಖಂಡಿತ ನಮ್ಮದಲ್ಲ. ಇದೊಂದು ಅನಿವಾರ್ಯ ಅಷ್ಟೆ.  ತಾಯಿಯಾದವಳು ಎಲ್ಲವನ್ನೂ ಒಬ್ಬಳೇ ನಿಭಾಯಿಸಬೇಕಾಗಿ ಬಂದಾಗ, ಮಗುವನ್ನ ಸಮಾಧಾನ ಪಡಿಸಲು ಕೈಗೆ ಸಿಗುವ ಸುಲಭ ಸಾಧನ ಇದು ಅಷ್ಟೆ.  ಇಂದಿನ ಮೈಕ್ರೋ ಫ್ಯಾಮಿಲಿಗಳು,  ಗಂಡ ಹೆಂಡತಿ ಇಬ್ಬರೂ ದುಡಿಯಲೇಬೇಕಾಗಿರುವ  ಪರಿಸ್ಥಿತಿ,  ಮೈಗ್ರೇಶನ್‌, ಆಧುನಿಕ ಜಗತ್ತು, ಧಾವಂತದ ಜೀವನ, ಪೋಷಕರಲ್ಲಿ ತಾಳ್ಮೆಯ ಕೊರತೆ,  ಇದೆಲ್ಲವೂ ಮಕ್ಕಳ ವಿಪರೀತ ಮೊಬೈಲ್‌ಬಳಕೆಗೆ  ಇರುವ ಪರೋಕ್ಷ ಕಾರಣಗಳು.

 ನನ್ನ ಪರಿಚಯಸ್ತರೊಬ್ಬರು, ತಾವು ತಮ್ಮ ಮಗಳಿಗೆ ಮೊಬೈಲ್‌ಕೊಡಲ್ಲ, ಅವಳಿಗೆ ಮೊಬೈಲ್‌ ಯೂಸೇಜ್ ‌ಗೊತ್ತೇ ಇಲ್ಲ. ಯಾವ ಸ್ಕ್ರೀನ್‌ ಅಡಿಕ್ಷನ್ನೂ ಅವಳಿಗಿಲ್ಲ. ಹಾಗೆ ಬೆಳೆಸಿದ್ದೀನಿ ನಾನು ನನ್ನ ಮಗಳನ್ನ. ಅಂತ್ಹೇಳಿ, ನನಗೆ ಟಾಂಗ್‌ಕೊಟ್ಟಿದ್ರು. ಒಂದಿನ ಸಂಜೆ ನನ್ನ ಅತ್ತೆ ಜತೆ ಕುಳಿತಿದ್ದ ಅವರ  9 ವರ್ಷದ ಮಗಳು,  ನನ್ನ ಅತ್ತೆಗೆ ಮೊಬೈಲ್‌ಬಳಕೆಯ ಬಗ್ಗೆ ಹೇಳಿಕೊಡ್ತಾ ಇದ್ಲು.  ನನಗೆ ಆಶ್ಚರ್ಯವಾಯ್ತು.  ಅವಳನ್ನ ಕೇಳಿದೆ, ಮೊಬೈಲ್‌ಯೂಸ್ ಮಾಡೋಕೆ ನಿಂಗೆ ಗೊತ್ತಾ..? ಅಂತ.  ಸ್ಕೂಲ್‌ನಲ್ಲಿ ನನ್ನ ಫ್ರೆಂಡ್ಸ್‌ಎಲ್ರೂ ಮೊಬೈಲ್‌ಬಗ್ಗೆ, ಹೊಸ ಹೊಸ ಆಪ್‌ಬಗ್ಗೆ ಮಾತಾಡುವಾಗ, ನಂಗೆ ಬೇಜಾರಾಗ್ತಿತ್ತು ಆಂಟೀ,  ಅದಿಕ್ಕೆ ಅಮ್ಮಂಗೆ ಗೊತ್ತಿಲ್ದೇ ಕದ್ದು ಮೊಬೈಲ್ ‌ನೋಡ್ತೀನಿ , ಪ್ಲೀಸ್ ಅಮ್ಮಂಗೆ ಹೇಳ್ಬೇಡಿ ಅಂದಿದ್ಲು. ಅಂದು ನಂಗೆ ನಿಜಕ್ಕೂ ಅವಳ ಮಾತು ಕೇಳಿ ಪಾಪ ಅನ್ನಿಸಿತ್ತು.  ಮಕ್ಕಳಿಗೆ ಮೊಬೈಲ್ ‌ಕೊಡಲೇಬಾರದು ಅಂತ ನಾವು ಮೊಂಡಾಟ ಮಾಡಿದರೆ, ಮಕ್ಕಳು ಬಿಡಲ್ಲ.  ನೀವು ಕೊಟ್ಟಿಲ್ಲ ಅಂದ್ರೆ, ಕೊಡುವವರ ಹತ್ತಿರ ತಗೋತಾರೆ, ಇಲ್ಲ ಅಂದ್ರೆ, ನಿಮ್ಮದೇ ಮೊಬೈಲ್‌ನ್ನ ಕದ್ದು ನೋಡ್ತಾರೆ ಅಷ್ಟೆ.  ಇದೆಲ್ಲದಕ್ಕಿಂತ ನಾವೇ ಮೊಬೈಲ್‌ನ್ನ ಕೊಟ್ಟು, ದಿನಕ್ಕೆ ಇಷ್ಟೇ  ಸಮಯ ಅಂತ ನಿಗದಿ ಮಾಡೋದು ಒಳ್ಳೇದಲ್ವೇ..? ಅಂತ ಮನಸ್ಸಿನಲ್ಲೇ ಅಂದುಕೊಂಡಿದ್ದೆ.

 ಆದ್ರೆ, ಕೊರೋನಾ ಬಂದಿದ್ದೇ ಬಂದಿದ್ದು, ಎಲ್ಲವೂ ಬದಲಾಗಿಬಿಡ್ತು.  ತನ್ನದೇ ಆದ ಸ್ವಂತ ಮೊಬೈಲ್‌ನನ್ನ ಕೈಗೆ ಯಾವಾಗಪ್ಪಾ ಬರುತ್ತಪ್ಪಾ ಅಂತ ಕಾಯ್ತಾ ಇದ್ದ,  ಮೊಬೈಲ್‌ಗಾಗಿ ಅಪ್ಪ ಅಮ್ಮನ ಹತ್ತಿರ ಬೇಡ್ತಾ ಇದ್ದ ಮಕ್ಕಳ ಕೈಗೆ ಸ್ವತಃ ಕೊರೋನಾ ಮೊಬೈಲ್‌ಕೊಟ್ಟುಬಿಡ್ತು. ಆನ್‌ಲೈನ್‌ಪಾಠಕ್ಕಾಗಿ ಮೊಬೈಲ್ ಪಡೆದ ಅದೆಷ್ಟು ಮಕ್ಕಳು ಕೊರೊನಾಕ್ಕೆ ಥ್ಯಾಂಕ್ಯೂ ಹೇಳ್ತಿದ್ದಾರೋ ಏನೋ. 

 ಅಂದು ಮಕ್ಕಳ ಪಾಲಿಗೆ ಮನೋರಂಜನೆಗೆ ಮಾತ್ರ ಸೀಮಿತವಾಗಿದ್ದ ಮೊಬೈಲ್‌ಈಗ ಕಲಿಕೆಗಾಗಿ  ಪುಸ್ತಕ, ಪೆನ್ನಿನಷ್ಟೇ ಮುಖ್ಯವಾಗಿಬಿಟ್ಟಿದೆ.  ಶಾಲಾ ಕಲಿಕೆಯ ಜತೆಗೆ ಮಗುವಿನ ವಯಸ್ಸಿಗನುಗುಣವಾಗಿ ಎಷ್ಟೆಷ್ಟೋ ಹೊಸ ಹೊಸ ಎಜುಕೇಶನಲ್‌ಆಪ್‌ಗಳು ಬರುತ್ತಿವೆ.  ಎಜುಕೇಶನಲ್ ಗೇಮ್‌ಗಳು ಪರಿಚಿತಗೊಳ್ಳುತ್ತಿವೆ. ಇವೆಲ್ಲದರ ಉಪಯೋಗ ಮಕ್ಕಳಿಗೆ ಸಿಗಬೇಕು ಅಂದ್ರೆ, ಅವರ ಕೈಯ್ಯಲ್ಲಿ ಮೊಬೈಲ್‌ಕೊಡಲೇಬೇಕು.  ಈಗಿನ ಜಗತ್ತೇ ಹೀಗಿದೆ. ಆದರೆ ಒಳ್ಳೆಯದರ ಜತೆ ಕೆಟ್ಟದ್ದೂ ಇರೋ ಇಂಟರ್‌ನೆಟ್‌ಎಂಬ ಮಹಾ ಸಮುದ್ರದಲ್ಲಿ ಮುಳುಗಿರೋ ಮಕ್ಕಳು ಅಲ್ಲಿಂದ ಏನು ಕಲಿಯುತ್ತಿದ್ದಾರೆ ಎಂಬ ಬಗ್ಗೆ ಪೋಷಕರು ಗಮನ ಕೊಡುತ್ತಾ ಅವರಿಗೆ ಸಲಹೆ ನೀಡುತ್ತಿದ್ದರೆ ಮೊಬೈಲ್‌ನಿಂದ್ಲೂ  ಮಕ್ಕಳು ಸಾಕಷ್ಟು ತಿಳಿಯುತ್ತಾರೆ.  

 ಆದರೆ, ಅನಿವಾರ್ಯ ಪರಿಸ್ಥಿತಿಯಲ್ಲಿ ಮಾತ್ರ ಮೊಬೈಲ್‌ಕೊಟ್ಟು, ನಿಭಾಯಿಸಬಹುದಾದ ಅವಕಾಶವಿದ್ದಾಗ, ಆದಷ್ಟು ಮೊಬೈಲ್‌ನಿಂದ ಮಕ್ಕಳನ್ನ ದೂರ ಇಡೋಕೆ ಇಂದಿನ ಅಪ್ಪಅಮ್ಮ ಪ್ರಯತ್ನಪಡಬೇಕು ಎಂಬುದನ್ನ ನಾವೆಲ್ಲರೂ ಒಪ್ಪಲೇಬೇಕು. ಅಲ್ವೇ..? ನೀವೇನಂತೀರಿ..?

 

 

 

 


Thursday, 16 March 2017

ಹುಟ್ಟು ಹಬ್ಬದ ಶುಭಾಶಯಗಳು ಕಂದಾ..



ನನ್ನ ಅಥರ್ವ. ನೀನು ಹುಟ್ಟಿ ಇಂದಿಗೆ ಒಂದು ವರ್ಷ. 2015 ಮುಗಿದು 2016 ಕಾಲಿಡ್ತಾ ಇದ್ದಂತೆ ನೀ ನನ್ನ ಮಡಿಲಿಗೆ ಬಂದೆ. ಅಂದಿನಿಂದ ನನ್ನ ಪ್ರತಿ ದಿನ, ಪ್ರತಿ ಕ್ಷಣ ಎಲ್ಲವೂ ಅಥರ್ವಮಯ. ಈ ಒಂದು ವರ್ಷದಲ್ಲಿ ನಾನು ನಿನ್ನ ಬಿಟ್ಟು ಇರೋ ನಿಮಿಷಗಳೇ ಬೆರಳೆಣಿಕೆಯಷ್ಟು. ಅಕ್ಷರಷಃ ಅದನ್ನ ಲೆಕ್ಕಹಾಕಬಹುದೇನೋ.

ಅದೆಷ್ಟು ಬೇಗ ಒಂದು ವರ್ಷ ಕಳೆದುಹೋಯ್ತು ಕಂದ..! ಮೊನ್ನೆ ಮೊನ್ನೆಯಷ್ಟೇ ನೀ ನನ್ನ ಜೀವನಕ್ಕೆ ಬಂದ ಹಾಗಿದೆ. ನೀ ಬಂದ ಮೇಲಂತೂ ದಿನಗಳು ಓಡುತ್ತಿವೆ. ಪ್ರತಿ ಬೆಳಗೂ ನನಗೆ ಹೊಸತು. ನಿನ್ನ ಬೆಳವಣಿಗೆಯೇ ನನಗೆ ದೊಡ್ಡ ಕೌತುಕ. ನಾನೊಂದು ಕ್ಷಣ ಮರೆಯಾದರೂ ನೀ ನನ್ನ ಹುಡುಕುವ ರೀತಿ.., ನಾ ಕಂಡ ಕ್ಷಣ ನಿನ್ನ ಕಣ್ಣಲ್ಲಿ ಕಾಣೋ ಹೊಳಪು.., ನನಗಾಗಿ ನೀ ಹಂಬಲಿಸೋ ಪರಿ ಇವೆಲ್ಲ ನನಗೇನೋ ಸುಖ ನೀಡುತ್ವೆ. ಅದು ತಾಯ್ತನದ ಹೆಮ್ಮೆಯೋ..ಗೊತ್ತಿಲ್ಲ. ನೀ ನನಗಾಗಿ ಹುಡುಕಾಡ್ತಾ ಅಳ್ತಾ ಇದ್ರೆ, ಎರಡು ಕ್ಷಣ ಮರೆಯಲ್ಲಿ ನಿಂತು ನಾ ನಿನ್ನ ನೋಡ್ತೀನಿ. ನೀ ನನ್ನ ಮತ್ತಷ್ಟು ಹಂಬಲಿಸಲಿ ಅನ್ನೋ ಸ್ವಾರ್ಥ ಅದು. ನನ್ನ ಬಾಯಲ್ಲೀಗ..ಪದೆ ಪದೆ ಬರೋ ಚಿನ್ನು, ಚಿನ್ನುಮರಿ, ಪುಟಾಣಿ, ಪುಟ್ಟು, ಜಾಣು,ಕಂದ, ಗುಬ್ಬಿ, ಗುಬ್ಬಚ್ಚಿ, ಪಾಪಚ್ಚಿ ಅನ್ನೋ ಮುದ್ದು ಶಬ್ಧಗಳದ್ದೇ ಕಾರುಬಾರು. ಮುಂಚೆ ಎಲ್ಲಿದ್ದವೋ ಆ ಪದಗಳು..!

ನೀನು ಹುಟ್ಟುತ್ತಿದ್ದಂತೆ..ನಾನೂ ಕೂಡ ಹುಟ್ಟಿದೆ, ನಿನ್ನ ಅಮ್ಮನಾಗಿ..!  ಹೊಟ್ಟೆಯಿಂದ ಆಗಷ್ಟೇ ಹೊರಬಂದ ನಿನ್ನ ಎತ್ತಿಕೊಳ್ಳುವುದರಿಂದ ಹಿಡಿದು ಎಲ್ಲವೂ ನನಗೆ ಹೊಸತು. ಮಗುವಿನ ಪಾಲನೆಯ ಶಾಲೆಗೆ ನಿನ್ನಜ್ಜಿ ಶಿಕ್ಷಕಿಯಾದ್ರೆ ನಾನು ವಿದ್ಯಾರ್ಥಿನಿ. ಆಕೆ ಹೇಳಿಕೊಟ್ಟ ಎಲ್ಲವನ್ನೂ ನಿನಗಾಗಿ  ಕಲಿಯೋಕೆ ಶುರುಮಾಡಿದೆ.

ನೀ ಅತ್ತರೆ ಸಾಕು, 'ಲಾಲಿ ಎಂದರೆ ಬಾಲ.. ಆಲೈಸಿ ಕೇಳುವನು... ಹಾಲ ಹಂಬಲನೆ ಮರೆವನು.'. ಎಂಬ ಜೋಗುಳ ಪದ್ಯ ಶುರುವಾಗುತ್ತಿತ್ತು. ಆ ಜೋಗಳಕ್ಕೆ ನಿನ್ನ ಅಳುವಿನ ಹಿನ್ನಲೆ. ನಿನ್ನಿಂದಾಗಿ ನನ್ನಜ್ಜಿಯ ಜೋಗುಳ ಪದ ಮನೆ-ಮನ ತುಂಬಿಕೊಂಡಿತ್ತು. ಪುಟ್ಟ ಪುಟ್ಟ ಬಟ್ಟೆಗಳು, ಬಣ್ಣ ಬಣ್ಣದ ದುಪ್ಪಟಿ, ಧೂಪದ ಪರಿಮಳ, ಜೋಗುಳದ ದನಿ, ತೊಟ್ಟಿಲಿನ ಕಿರ್‌ ಅನ್ನೋ ಶಬ್ಧ ಇವೆಲ್ಲ ನೀ ಬಂದ ಸಡಗರವನ್ನ ಹೇಳ್ತಾ ಇದ್ದವು. ಬಟ್ಟೆ ಒಣಹಾಕೋ ಹಗ್ಗ ಕೂಡ ನಿನ್ನ ಬಟ್ಟೆಗಳಿಗೇ ಮೊದಲ ಪ್ರಾಶಸ್ತ್ಯ ಕೊಟ್ಟುಬಿಟ್ಟಿತ್ತು. ಅಷ್ಟರಮಟ್ಟಿಗೆ ನನ್ನಮ್ಮನ ಮನೆಯ ಪ್ರತಿ ವಸ್ತುವೂ ನಿನ್ನ ಆಗಮನವನ್ನ ಸಂಭ್ರಮಿಸೋಕೆ ಶುರು ಮಾಡಿದ್ದವು. ಒಂದು ವರ್ಷದಿಂದ ಅವಕ್ಕೆಲ್ಲ ನೀನೇ ಸ್ಪೂರ್ತಿಯಂತೆ..!

ಹುಟ್ಟಿ ಒಂದು ತಿಂಗಳಾಗುವಷ್ಟರಲ್ಲಿ ನನ್ನ ಮುಖ ನೋಡಿ ನಕ್ಕಿದ್ದೆ. ನಿನ್ನ ಆ ಒಂದು ಮುದ್ದು ನಗೆ ಕೋಟಿ ಗೆದ್ದಷ್ಟು ಖುಷಿಕೊಟ್ಟಿತ್ತು ನನಗೆ. ಮೊದಲು ನೀನು ಮಗುಚಿದ್ದು, ಮುಂದಕ್ಕೆ ಹೋದದ್ದು, ಅಂಬೆಗಾಲಿಟ್ಟಿದ್ದು, ಹೆಜ್ಜೆಇಟ್ಟು ನಡೆದಿದ್ದು ಈ ಎಲ್ಲ ನಿನ್ನ ಮೊದಲುಗಳೂ.. ನನ್ನ ಖುಷಿಯ ಮೈಲುಗಲ್ಲುಗಳು...!

ನನ್ನ ಮುದ್ದು ಕಂದನ ಮೊದಲ ಹುಟ್ಟು ಹಬ್ಬ ಇಂದು. ಇಂಥ ನೂರಾರು ಹುಟ್ಟು ಹಬ್ಬಗಳು ನಿನ್ನ ಬಾಳಲ್ಲಿ ಬರಲಿ.

ಹುಟ್ಟು ಹಬ್ಬದ ಶುಭಾಶಯಗಳು ಕಂದಾ..

ಮುದುಡಿದ ಮನಸ್ಸು..




ಪೆನ್ನಿಗಾಗಿ ಹುಡುಕಾಡ್ತಾ ನನ್ನ ಬ್ಯಾಗ್ ತೆರೆದೆ, ಕೈಗೆ ಸಿಕ್ಕವು ಆರೆಂಟು ಚಾಕ್ಲೇಟುಗಳು. ಆ ಚಾಕಲೇಟುಗಳ ರ್ಯಾಪರ್ ಸದ್ದಿನಿಂದ ನನ್ನ ಮನಸ್ಸಿಗೇನೋ ಚುಚ್ಚಿದ ಅನುಭವ. ಮನಸ್ಸಿಗೆ ತಾಕಿದ ಆ ಶಬ್ಧಕ್ಕೆ ಕಣ್ಣೀರು ಒತ್ತರಿಸಿಬಂದು ಕಣ್ಣಾಲೆಗಳು ತುಂಬಿಕೊಂಡ್ವು. ಹೇಳಲಸಾಧ್ಯ ನೋವು ಎದೆಗಂಟಿದಂತೆ ಭಾಸವಾಯ್ತು. ಚಾಕ್ಲೇಟುಗಳಿರೋ ಆ ಖಾನೆಯನ್ನೇ ಮುಚ್ಚಿ ಬ್ಯಾಗ್ನ್ನ ಪಕ್ಕಕ್ಕಿಟ್ಟು ನೀರು ಗುಟುಕಿಸಿದೆ. ಉಮ್ಮಳಿಸಿ ಬರುತ್ತಿದ್ದ ದುಃಖದಿಂದಲೋ ಏನೋ ನೀರು ಕೂಡ ಗಂಟಲಿನಿಂದಿಳಿಯಲಿಲ್ಲ. ಕೊನೆಗೂ ದುಃಖ ತಡೆಯದೇ ಕಣ್ಣಿನಿಂದಿಳಿದು ಬಂತು ಕಣ್ಣೀರು.. ಸಹೋದ್ಯೋಗಿ ಗೆಳತಿಯ ಸಾಂತ್ವನದ ಸ್ಪರ್ಷಕ್ಕೆ ಉತ್ತರಿಸಿದ್ದೂ ಕೂಡ ನನ್ನ ಕಂಬನಿಯೇ..

ಆ ಪುಟಾಣಿಯ ಮೇಲೆ ನನಗೇಕೋ ತುಂಬು ಅಕ್ಕರೆ. ಹೇಳಿಕೊಳ್ಳಲಾಗದ ಪ್ರೀತಿ. ಅವಳ ಗುಳಿಬೀಳುವ ಕೆನ್ನೆಗಳು, ಚುರುಕು ನೋಟ, ಆಟ ಪಾಠ ಎಲ್ಲವೂ ನನಗೆ ಅಚ್ಚುಮೆಚ್ಚು. ಒಂದು ದಿನ ಅವಳು ನನಗೆ ಕಂಡಿಲ್ಲವೆಂದರೂ ಅದೇನೋ ಕಳೆದುಕೊಂಡ ಭಾವ. ನಾನು ಕಚೇರಿಯಿಂದ ಬರುವುದನ್ನೇ ಕಾಯುತ್ತಿದ್ದ ಅವಳು, ನಾನು ಬಂದ ತಕ್ಷಣ ಓಡಿಬಂದು ಆಗಷ್ಟೇ ಮೊಳಕೆಯೊಡೆಯೊತ್ತಿದ್ದ ಮುಂದಿನೆರಡು ಹಲ್ಲುಬಿದ್ದ ದಂತದಲ್ಲಿಯೇ ಮುದ್ದು ನಗು ನಕ್ಕುಬಿಡುವವಳು.  ಇಡೀ ದಿನ ಶಾಲೆಯಲ್ಲಿ  ತಾನು ಕಲಿತದ್ದು, ಆಡಿದ್ದು ಓಡಿದ್ದನ್ನೆಲ್ಲ ನನಗೆ ಹೇಳಿದಂತೂ ಆಕೆಗೆ ಸಮಾಧಾನವೇ ಇಲ್ಲ. ಎಲ್ಲ ಸುದ್ದಿಯೂ ಮುಗಿದ ಮೇಲೆ ನಿಧಾನವಾಗಿ ನನ್ನ ಬ್ಯಾಗ್ ಹುಡುಕಿ ಅದರಲ್ಲಿದ್ದ ಚಾಕ್ಲೇಟುಗಳನ್ನ ಕೈತುಂಬಿಸಿಕೊಂಡು ಕಣ್ಣಲ್ಲೇ ನಗುವವಳು. ಚಾಕ್ಲೇಟ್ ತಿನ್ನುತ್ತಾ ಮೆಟ್ಟಿಲಿಳಿಯದೇ ಹಾರಿಕೊಂಡು ಹೋಗುವ ಚೂಟಿ ಬೇರೆ..!  'ಹೇ ಪುಟ್ಟಾ... ಬೀಳ್ತಿಯಾ ನಿಧಾನಕ್ಕೆ ಹೋಗು..' ಎಂಬ ನನ್ನ ಎಚ್ಚರಿಕೆ ಮಾತುಗಳನ್ನೆಲ್ಲಾ ಕೇಳಿಸಿಕೊಳ್ಳದೇ ಓಡಿಹೋಗುವವಳು.  ಪುಟಾಣಿ ಪುಟ್ಟಿ ನನಗೆ ಯಾವಾಗ ಸಿಕ್ಕರೂ ಅವಳ ಕೈಯ್ಯಲ್ಲೊಂದು ಚಾಕ್ಲೇಟು ಇಟ್ಟು, ಆ ಮುಗ್ಧ ಮುಖದ ಮುದ್ದು ನಗು ನೋಡಬೇಕು ಎಂಬ ಕಾರಣಕ್ಕೆ ನನ್ನ ಬ್ಯಾಗ್ನಲ್ಲಿ ಚಾಕ್ಲೇಟುಗಳಿಗೊಂದಷ್ಟು ಜಾಗ. ಅಂಗಡಿಗಳಲ್ಲಿ ಚಿಲ್ಲರೆಯ ಬದಲಾಗಿ ಚಾಕ್ಲೇಟ್ ಕೊಟ್ಟರೂ ನನಗೆ ಮೊದಲು ನೆನಪಾಗುವುದೇ ಪುಟ್ಟಿಯ ಮುದ್ದು ಮುಖ.

ಪುಟ್ಟಿಯ ಚಾಕ್ಲೇಟು ಆಸೆ ಅವರಮ್ಮನಿಗೂ ಗೊತ್ತಿದೆ. ಅದೆಷ್ಟು ಪ್ರಯತ್ನ ಮಾಡಿದರೂ ಅವರಿಂದ ಪುಟ್ಟಿಯ ಚಾಕ್ಲೇಟು ಆಸೆಯನ್ನ ಬಿಡಿಸೋಕಾಗಿಲ್ಲ. ಅವಳು ಚಾಕ್ಲೇಟು ತಿಂದಿರುವ ವಿಷಯವನ್ನ ಅಮ್ಮನಿಗೆ ಹೇಳೋದಿಲ್ಲ ಅಂತ ನಾನು ದಿನವೂ ಅವಳಿಗೆ ಪ್ರಾಮಿಸ್ ಮಾಡಲೇಬೇಕು. ಪ್ರಾಮಿಸ್ ಮಾಡುವತನಕ ಆಕೆ ಸುಮ್ಮನಾಗೋದಿಲ್ಲ. ಆಯ್ತಮ್ಮ ತಾಯಿ.. ಹೇಳಲ್ಲ ಪ್ರಾಮಿಸ್.. ಅಂತ ನಾನು ಹೇಳಿದಮೇಲೆಯೇ ಅವಳಿಗೆ ಸಮಾಧಾನ.

ಆದರೆ, ಆವತ್ತು ನಡೆದಿದ್ದೇನು ಎಂಬುದು ಯಾರಿಗೂ ಸರಿಯಾಗಿ ಗೊತ್ತಿಲ್ಲ. ಚಾಕ್ಲೇಟು ಆಸೆ ತೋರಿಸಿಯೇ ಪುಟ್ಟಿಯನ್ನ ಅವರು ಕರೆದೊಯ್ದಿರಬಹುದು ಅನ್ನೋದು ನಮ್ಮ ಊಹೆ.  ಅಲ್ಲಿ ಏನಾಯ್ತು ಅನ್ನೋದನ್ನ ಹೇಳೋಕೆ ಪುಟ್ಟಿಯಲ್ಲಿ ತ್ರಾಣವಿಲ್ಲ. ಕೃತಕ ಉಸಿರಾಟದ ಕವಚವನ್ನ ಮೂಗಿಗೆ ಹಾಕಿಕೊಂಡು, ಡ್ರಿಪ್ ಚುಚ್ಚಿಕೊಂಡು ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾಳೆ ಪುಟ್ಟಿ. ಆಕೆ ದಾಖಲಾಗಿರುವ ಆಸ್ಪತ್ರೆಗೆ ಗಣ್ಯರೇ ಬಂದು ಹೋದರೂ, ಎಷ್ಟೇ ಆಶ್ವಾಸನೆಗಳನ್ನ, ಸಾಂತ್ವನ ನೀಡಿದರೂ ಅವಳಮ್ಮನ ಕಿವಿಗಳಿಗೇನೂ ಕೇಳಿಸದು. ಅರೆಜೀವವಾಗಿ ಮಲಗಿರುವ ಮಗಳ ಚಿಂತೆಯಲ್ಲಿ ಐಸಿಯು ಕೊಠಡಿಯ ಹೊರಗೆ ಕುಸಿದು ಕುಳಿತಿದ್ದಾಳೆ ಆ ತಾಯಿ.  ಮಗಳ ಸ್ಥಿತಿಗೆ ಮನಸ್ಸು ಮರುಗುತ್ತಿದ್ದರೂ, ಹೆಂಡತಿಗೆ ಸಮಾಧಾನ ಮಾಡಲು ಪ್ರಯತ್ನಿಸುತ್ತಲೇ ಇದ್ದಾರೆ ಆ ತಂದೆ..!
ಆಸ್ಪತ್ರೆಯ ಹೊರಗೆ, ಶಾಲೆಯ ಸುತ್ತ ತುಂಬಿರುವ ಜನ, ನಡೆಯುತ್ತಿರುವ ಪ್ರತಿಭಟನೆ, ಶಾಲಾ ಮುಖ್ಯಸ್ಥರ ಕಣ್ಣಾಮುಚ್ಚಾಲೆ ಇದ್ಯಾವುದರ ಪರಿವೆಯೂ ಇಲ್ಲ ನೊಂದ ಆ ಜೀವಗಳಿಗೆ.

ಹೇಳಿಕೊಳ್ಳುವದಕ್ಕದು ಪ್ರತಿಷ್ಠಿತ ಶಾಲೆ. ಆ ಶಾಲೆಯ ಒಳಗೆ ನಡೆದಿರೋದು ಮಾತ್ರ ವಿಕೃತತೆಯ ಪರಮಾವಧಿ.  ಆ ಮುದ್ದು ಮಗುವಿನ ಮೈಮೇಲೆ ನಡೆದದ್ದು ಬೆಚ್ಚಿಬೀಳಿಸುವ ಪೈಶಾಚಿಕ ಕೃತ್ಯ. ಕೃತ್ಯವೆಸಗಿದ ರಾಕ್ಷಸರ್ಯಾರೋ ಗೊತ್ತಿಲ್ಲ. ಅದನ್ನ ಹೇಳುವುದಕ್ಕೆ ಪುಟ್ಟಿಗಿನ್ನೂ ಎಚ್ಚರವೇ ಆಗಿಲ್ಲ. ಶಾಲೆಯೊಳಗೆ ತನಿಖೆ ನಡೆಯುತ್ತಿದೆ, ಹೊರಗೆ ಜನ ಸೇರಿದ್ದಾರೆ, ಮಾಧ್ಯಮಗಳು ನಿರಂತರ ಸುದ್ದಿ ಪ್ರಸಾರ ಮಾಡುತ್ತಿವೆ.. ವೈದ್ಯರು ಅವರ ಕೆಲಸ ಮಾಡಿದ್ದಾರೆ..  ಆದ್ರೆ, ಪುಟ್ಟಿಗೆ ಮಾತ್ರ ಪ್ರಜ್ಞೆಯೇ ಬಂದಿಲ್ಲ. ಅನುಮಾನಿತರನ್ನ ಬಂಧಿಸಿ ವಿಚಾರಣೆ ನಡೆಸುತ್ತಿರುವ ಪೊಲೀಸರೂ ಕೂಡ ಪುಟ್ಟಿ ಎಚ್ಚರಗೊಳ್ಳುವುದನ್ನೇ ಕಾಯುತ್ತಿದ್ದಾರೆ.

ಕಚೇರಿಯಲ್ಲಿ ಕೂರಲಾಗದೇ ಮನೆಗೆ ಬಂದರೆ, ಅಲ್ಲಿ ಮನಸ್ಸಿಗೆ ಇನ್ನಷ್ಟು ಹಿಂಸೆ. ಪುಟ್ಟಿಯ ಮನೆಗೆ ಬೀಗ ಬಿದ್ದಿದೆ.. ಅವರೆಲ್ಲ ಆಸ್ಪತ್ರೆಯಲ್ಲಿಯೇ ಇದ್ದಾರೆ.. ಚೂಟಿ ಪುಟ್ಟಿಯ ಆಟ, ಓಡಾಟ, ಕುಣಿದಾಟವಿಲ್ಲದೆ ಶಾಂತವಾಗಿರುವ ನಮ್ಮ ವಠಾರ ಜೀವ ಕಳೆಯನ್ನೇ ಕಳೆದುಕೊಂಡಂತಿದೆ. ವಠಾರದ ಹೆಂಗಸರ ಗುಂಪು ಮಾತನಾಡುತ್ತಿರುವುದೂ ಅದನ್ನೇ. ಅಲ್ಲಲ್ಲಿ ಎರಡು ಮೂರು ಹೆಂಗಸರು ನಿಂತು ನಡೆದ ಘಟನೆಯನ್ನ ನೆನೆದು ನೆನೆದು ಲೊಚಗುಟ್ಟುತ್ತಿದ್ದಾರೆ.

ಹೆಂಗಸರ ಮೆಲುದನಿಯ ಮಾತುಗಳ ಶಬ್ಧ, ನನ್ನ ಕಿವಿಗೆ ಬೀಳಬಾರದೆಂಬ ಕಾರಣಕ್ಕೆ ಮನೆಯೊಳ ನಡೆದೆ. ಆದರೆ ಟಿವಿಯಲ್ಲಿ ಬರುತ್ತಿದ್ದ ನಿರಂತರ ವಾತರ್ೆಯ ಸದ್ದು ಕಿವಿಗೆ ಬಡಿಯುತ್ತಿತ್ತು. ಸುದ್ದಿವಾಹಿನಿಗಳಲ್ಲೂ ಎರಡು ದಿನಗಳಿಂದ ಬರೀ ಅದೇ ಸುದ್ದಿ.  ಆದರೆ, ಪ್ರಯೋಜನ ಏನು..? ಇಂಥ ಘಟನೆಗಳು ನಡೆದಾಗ  ಒಂದೆರಡು ದಿನ ಸುದ್ದಿ ಪ್ರಸಾರ ಮಾಡಿ ಮಾಧ್ಯಮಗಳು ಕೈತೊಳೆದುಕೊಂಡಂತೆ, ಜನರೂ ಮರೆತುಬಿಡುತ್ತಾರೆ. ಪ್ರಕರಣ ದಾಖಲಾಗುತ್ತೆ, ಪೊಲೀಸರೇನೋ ತನಿಖೆ ಮಾಡ್ತಾರೆ.. ಅಪರಾಧಿಗಳು ಸಿಕ್ಕರೆ ನಮ್ಮ ಅದೃಷ್ಟ.  ಸಿಕ್ಕ ಅಪರಾಧಿಗಳಿಗೂ ತಪ್ಪಿಸಿಕೊಳ್ಳೋಕೆ ಸಾವಿರ ತೂತುಗಳು ನಮ್ಮ ಕಾನೂನಲ್ಲಿ. ಇನ್ನೊಂದು ಇಂಥ ಘಟನೆಯಾಗುವ ತನಕ ಯಾರಿಗೂ ಈ ಅಮಾನವೀಯ ಕೃತ್ಯದ ನೆನಪು ಕೂಡ ಇರುವುದಿಲ್ಲ.

ಪುಟ್ಟಿಯಂಥ ಮುಗ್ಧ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯಗಳು ಹೆಚ್ಚುತ್ತಲೇ ಇದೆ. ನಮ್ಮ ದೇಶದಲ್ಲಂತೂ ಯಾವಾಗ ಬೇಕಾದರೂ ಲೈಂಗಿಕ ದೌರ್ಜನ್ಯ ಯಾವ ವಯಸ್ಸಿನ ಹೆಣ್ಣಿನ ಮೇಲೆ ಬೇಕಾದರೂ ನಡೆದುಹೋಗಬಹುದು.  ಪುಟ್ಟ ಹಸುಳೆಗಳ ಮೇಲೆ, ಪುಟಾಣಿ ಮಕ್ಕಳ ಮೇಲೆ ನಡೆಯುತ್ತಿರುವ ಅತ್ಯಾಚಾರಗಳನ್ನ ನೋಡಿದರೆ ನಾವಿರುವುದು ಎಂಥ ನರಕದಲ್ಲಿ ಎಂಬ ಅಸಹ್ಯ ಮೂಡುತ್ತದೆ. ಎಂಥ ಪೈಶಾಚಿಕ ಮನಸ್ಸಿನವರ ಮಧ್ಯದಲ್ಲಿ ನಾವು ಬದುಕುತ್ತಿದ್ದೇವೆ ಎಂಬ ಭಾವ ಭಯ ಹುಟ್ಟಿಸುತ್ತದೆ.  ಅತ್ಯಾಚಾರಕ್ಕೊಳಗಾದ ಹೆಣ್ಣುಮಗಳಿಗೆ ಸಮಾಜದ ಭದ್ರತೆ ಕೊಡುವಂಥ, ಮಾನಸಿಕ ಸ್ಥೈರ್ಯ ತುಂಬುವಂಥ, ನ್ಯಾಯ ಸಿಕ್ಕೇ ಸಿಗುತ್ತದೆ ಎಂಬ ಧೈರ್ಯ ನೀಡುವಂಥ ವ್ಯವಸ್ಥೆ ನಮ್ಮ ದೇಶದಲ್ಲಿ ಇಲ್ಲವೇ ಇಲ್ಲ. ಇದೇ ಕಾರಣಕ್ಕೆ ನೊಂದ ಜೀವಗಳು ಪ್ರಕರಣ ದಾಖಲಿಸುವುದಕ್ಕೇ ಹಿಂಜರಿಯುತ್ತಾರೆ. ಹೀಗಾಗಿ ಅಮಾನವೀಯ ಕೃತ್ಯಗಳು ಮುಚ್ಚಿಹೋಗುವ ಸಾಧ್ಯತೆಗಳೇ ಹೆಚ್ಚು.

ಪುಟ್ಟಿ ಚೇತರಿಸಿಕೊಂಡ ಮೇಲೆ ಅವಳನ್ನ ಆ ಆಘಾತದಿಂದ ಹೊರಗೆ ತರುವ ಸವಾಲಿದೆ ನಮ್ಮ ಮುಂದೆ.  ಆಗಷ್ಟೇ ಕಣ್ಣುಬಿಟ್ಟ ಪುಟ್ಟಿಯನ್ನ ಮುತ್ತಿಕೊಂಡು ಪೊಲೀಸರೇನೇನು ಪ್ರಶ್ನೆ ಕೇಳುತ್ತಾರೋ.. ಅದರಿಂದ ಅವಳ ಮನಸ್ಸಿಗೆ ಏನೇನು ಆಘಾತವಾಗುತ್ತೋ ಅನ್ನೋ ಭಯ ನನಗೆ. ಆದರೆ ಆ ಪಾಪಿಗಳು ಸಿಗಬೇಕು ಅಂದರೆ ಅವಳನ್ನ ಮಾತನಾಡಿಸಲೇ ಬೇಕಲ್ಲ.

ಅದೆಷ್ಟೋ ಹೊತ್ತಿನಿಂದ ಟಿವಿಯ ಮುಂದೆಯೇ ಕುಳಿತಿದ್ದೇನೆ. ಪುಟ್ಟಿಯ ಮೇಲೆ ನಡೆದ ಅಮಾನವೀಯ ಕೃತ್ಯದ ಬಗ್ಗೆ ಮತ್ತೆ ಮತ್ತೆ ಅದೇ ಸುದ್ದಿಯನ್ನ ಕೇಳಲು ಸಾಧ್ಯವಾಗದೇ ಚಡಪಡಿಸುತ್ತಿದೆ ನನ್ನ ಮನಸ್ಸು. ವಾಹಿನಿಗಳು,ಮಾಧ್ಯಮಗಳು ಸುದ್ದಿ ಪ್ರಸಾರ ಮಾಡಲೇಬೇಕು. ಸಮಾಜದ ಪರಿವರ್ತನೆಯಲ್ಲಿ ಮಾಧ್ಯಮದ ಜವಾಬ್ಧಾರಿಯಿದೆ ಅನ್ನೋದನ್ನ ನಾನು ಒಪ್ಪಿಕೊಳ್ಳುತ್ತೇನೆ ಆದರೆ, ಕೇವಲ ಘಟನೆ ನಡೆದ ಎರಡು ದಿನ ಅದೇ ಅದೇ ಸುದ್ದಿಯನ್ನ ಪ್ರಸಾರ ಮಾಡಿ, ಚಚರ್ೆ ನಡೆಸಿ ಬಿಟ್ಟುಬಿಟ್ಟರೆ ಸಂತ್ರಸ್ತೆಗೆ ನ್ಯಾಯ ಸಿಕ್ಕಂತಾಗುತ್ತದೆಯೇ..? ಆ ಪ್ರಕರಣದ ತನಿಖೆ ಎಲ್ಲಿಯ ತನಕ ಬಂದಿದೆ, ಹೇಗೆ ನಡೆಯುತ್ತಿದೆ ಅಪರಾಧಿಗಳು ಯಾರು ಅನ್ನೋದರ ಬಗ್ಗೆ ಸಕರ್ಾರಕ್ಕೆ, ಕಾನೂನಿಗೆ, ಪೊಲೀಸರಿಗೆ ಎಚ್ಚರಿಸುವ ಕೆಲಸವನ್ನ ಮಾಧ್ಯಮಗಳ ಮಾಡಬಹುದಲ್ಲವೇ? ಹಿಂದಿನ ಪ್ರಕರಣ ನೆನಪಾಗಲು ಮತ್ತೊಂದು ಪ್ರಕರಣವೇ ನಡೆಯಬೇಕೆ..?  ಇಂಥ ನನ್ನ ಗೊಂದಲದ ಪ್ರಶ್ನೆಗಳಿಗೆ ಉತ್ತರಿಸುವವರು ಯಾರು..? ದೂರದರ್ಶನದ ಶಬ್ಧವನ್ನ ಕಡಿಮೆ ಮಾಡಿ, ನನ್ನ ಕೊಠಡಿ ಸೇರಿಕೊಂಡೆ.

ನೊಂದ ಮನಸ್ಸಿನೊಳಗೆ ಯೋಚನೆಗಳದೇ ಹೊಡೆದಾಟ. ಹಾಸಿಗೆಗೆ ಒರಗಿಕೊಂಡು ಕುಳಿತ ನನಗೆ ನನ್ನ ಹಳ್ಳಿ ನೆನಪಾಯ್ತು. ಹದಿನೈದು ವರ್ಷಗಳ ಹಿಂದೆ ಅಲ್ಲಿಯೂ ನಡೆದಿದ್ದ ಒಂದು ಘಟನೆ ಕಣ್ಣೆದುರು ಬಂದುಹೋಯ್ತು.  ರಾಕ್ಷಸರ ಕೈಗೆ ಸಿಕ್ಕು ನಲುಗಿಹೋಗಿದ್ದ ಆ ಬಾಲೆ, ಹಳ್ಳಿಗರ ದೃಷ್ಠಿಯಲ್ಲಿ ಶೀಲ ಕಳೆದುಕೊಂಡವಳಾಗಿಬಿಟ್ಟಿದ್ದಳು. ಅವಳು ಸಿಕ್ಕಾಗಲೆಲ್ಲಾ ಪದೇ ಪದೇ ಅವಳ ಮೇಲೆ ನಡೆದ ದೌರ್ಜನ್ಯವನ್ನ ನೆನಪಿಸಿ, ಪ್ರಶ್ನೆಗಳನ್ನ ಕೇಳಿ, ಮಾನಸಿಕವಾಗಿ ಹಿಂಸೆ ನೀಡಿ ಇನ್ನು ತನ್ನ ಜೀವನವೇ ವ್ಯರ್ಥ ಎಂಬ ಭಾವ ಅವಳಲ್ಲಿ ಮೂಡುವಂತೆ ಮಾಡಿಬಿಟ್ಟಿದ್ದರು. ಆಗಷ್ಟೇ ಅರಳುತ್ತಿದ್ದ ಆ ಹೂವಿನ ಜೀವನಪ್ರೀತಿಯನ್ನೇ ಕಸಿದುಕೊಂಡುಬಿಟ್ಟರು.  ಇಂಥ ಜನರು ನಗರ ಪ್ರದೇಶದಲ್ಲಿ ಇಲ್ಲವೆಂದಲ್ಲ.. ಇಲ್ಲಿಯೂ ಅಂತಹ ಜನರಿದ್ದಾರೆ.. ಆದರೆ ನಮ್ಮ ಪುಟ್ಟಿಯ ಕುಟುಂಬ ಮನೆಯನ್ನ, ಶಾಲೆಯನ್ನೇ ಬದಲಾಯಿಸಿ ಅವಳನ್ನ ಬೇರೆ ಊರಿನಲ್ಲಿಯೋ, ಅಥವಾ ಇದೇ ನಗರದ ಇನ್ನೊಂದು ಮೂಲೆಯಲ್ಲಿಯೋ ಮನೆ ಮಾಡಿ ಮಗಳನ್ನ ನೋಡಿಕೊಳ್ಳಬಹುದು. ಪ್ರಕರಣ ಗೊತ್ತಿರುವ ಜನರಿಂದ, ಅವರ ಮಾತುಗಳಿಂದ ಪುಟ್ಟಿಯನ್ನ ದೂರವಿಡಬಹುದು.  ಪುಟ್ಟಿ ಗುಣವಾಗಿ ಬಂದಮೇಲೆ ಅವಳ ತಾಯಿಯ ಬಳಿ ಈ ಬಡಾವಣೆಯನ್ನೇ ಬಿಟ್ಟು ಬೇರೆಯ ಕಡೆ ಮನೆ ಹುಡುಕಿಕೊಳ್ಳಿ ಎಂಬ ಸಲಹೆ ನೀಡಲೇಬೇಕು ನಾನು.

ನೊಂದ ಹೆಣ್ಣಿನ ಮನಸ್ಸಿಗೆ ಮತ್ತಷ್ಟು ನೋವು ನೀಡುವ ನಮ್ಮ ಸಮಾಜದ ಯೋಚನಾ ಲಹರಿಯನ್ನ, ಪರಿಧಿಯನ್ನ ವಿಸ್ತರಿಸಬೇಕು. ನಮ್ಮ ಸಮಾಜದಲ್ಲಿರುವ ಹೆಣ್ಣಿನ ಶೀಲದ ಕುರಿತ ಪರಿಕಲ್ಪನೆಯನ್ನ ಆಧುನಿಕತೆಗೆ ತಕ್ಕಂತೆ ಮಾರ್ಪಡಿಸುವ ಕೆಲಸ ಮೊದಲು ನಡೆಯಬೇಕು. ಇಂಥ ಜಾಗೃತಿಯ ಕೆಲಸಗಳನ್ನ ಖುದ್ದು ಸಕರ್ಾರವೇ ನಡೆಸಬೇಕು.  ಹೆಣ್ಣುಮಕ್ಕಳಲ್ಲಿ ತಮ್ಮತನದ ಅರಿವು, ಗೆಲ್ಲುವ ವಿಶ್ವಾಸ, ಕಷ್ಟವನ್ನೆದುರಿಸುವ ಧೈರ್ಯ ತುಂಬಲು ಸಮಾಜದ ಕಣ್ತೆರೆಸಿ ನೊಂದ ಬಾಲೆಯರಿಗೆ ಆಧಾರವಾಗಿ ನಿಲ್ಲಬೇಕು ನಮ್ಮ ಮಾಧ್ಯಮಗಳು.  ಇಂಥ ಪ್ರಕರಣಗಳು ಆದಷ್ಟು ಬೇಗ ಮುಗಿದು, ಅಪರಾಧಿಗಳಿಗೆ ತಕ್ಕ  ಶಿಕ್ಷೆಯಾಗಬೇಕು. ತ್ಯಾಚಾರದಂಥ ಘೋರ ಕೃತ್ಯವೆಸಗಿದ ಅಪರಾಧಿಗಳಿಗೆ ಆದಷ್ಟು ಬೇಗ ಶಿಕ್ಷೆಯಾಗುವಂತೆ ನೋಡಿಕೊಳ್ಳುವ ಜವಾಬ್ದಾರಿ ಸಕರ್ಾರ, ಕಾನೂನಿನದ್ದಾದರೆ, ಆ ಅಪರಾಧಿಗಳಿಗೆ ವಿಧಿಸುವ ಶಿಕ್ಷೆಗಳನ್ನ ವಿವರವಾಗಿ ಬಿತ್ತರಿಸಿ, ವಿಕೃತ ಮನಸ್ಸುಗಳಿಗೆ ಎಚ್ಚರಿಸುವ ಕೆಲಸ ಮಾದ್ಯಮಗಳಿಂದ ನಡೆಯಬೇಕು. ಅತ್ಯಂತ ಆಳವಾಗಿ ಯೋಚನೆಯಲ್ಲಿ ಬಿದ್ದುಬಿಟ್ಟಿದ್ದೇನೆ ನಾನು. ಬರಿಯ ಯೋಚನೆಗಳಾಳದಲ್ಲಿ ಸಿಲುಕಿಕೊಂಡು, ಇಂಥ ಕೃತ್ಯಗಳ ವಿರುದ್ಧ ಮನಸಾರೆ ಹೋರಾಡುತ್ತಿದ್ದೇನೆ ನಾನು.

ಹೀಗಾಗಿ ಪುಟ್ಟಿಗೆ ಎಚ್ಚರ ಬಂದಿರುವ ಸುದ್ದಿ ಸಿಕ್ಕ ಮೇಲಾದರೂ, ಮನಸ್ಸಿಗೆ ಸ್ವಲ್ಪ ಸಮಾಧಾನ ಸಿಗಬಹುದು ಎಂಬ ಕಾರಣಕ್ಕೆ ಮತ್ತೆ ಟಿವಿಯ ಮುಂದೆ ಹೋಗಿ ಕುಳಿತೆ. ಆದರೆ, ಅಲ್ಲಿ ಪುಟ್ಟಿಯ ಚೇತರಿಕೆಯ ಸುದ್ದಿ ಇರಲೇ ಇಲ್ಲ. ಯಾರೋ ನಾಲ್ಕಾರು ಜನರನ್ನ ಕುಳ್ಳಿರಿಸಿಕೊಂಡು ಚಚರ್ೆ ಮಾಡುತ್ತಿದ್ದರು ಅಷ್ಟೆ. ಸ್ಕ್ರೋಲ್, ಬ್ರೇಕಿಂಗ್, ಟಾಪ್ ಬ್ಯಾಂಡ್ ಎಲ್ಲವನ್ನೂ ಪರೀಕ್ಷಿಸಿ ನೋಡಿದೆ ಅಲ್ಲಿ ಎಲ್ಲಿಯೂ ಪುಟ್ಟಿ ಆರೋಗ್ಯದ ಬಗ್ಗೆ ಸುದ್ದಿ ಕಾಣಿಸಲಿಲ್ಲ. ಮತ್ತೆ ಅಲ್ಲಿಂದೆದ್ದು ಬಂದು ದೇವರ ಮುಂದೆ ಕುಳಿತ ನನ್ನಲ್ಲಿ ಪುಟ್ಟಿಯದೇ ಯೋಚನೆ.  `ಹೆಣ್ಣು ಯಾರನ್ನ ನಂಬಬೇಕು.. ದೇವರೇ..? ಸರಸ್ವತಿ ದೇಗುಲದಲ್ಲಿಯೇ ಇಂಥ ಕೃತ್ಯಗಳು ನಡೆದುಹೋದರೆ..? ಈ ಕ್ರೌರ್ಯದ ಪರಮಾವಧಿಗೆ ಏನನ್ನಬೇಕು..?  ನಮ್ಮ ಸಮಾಜದ ದುರವಸ್ಥೆಯೇ..? ಶಿಕ್ಷಣ ಸಂಸ್ಥೆಗಳ ನಿರ್ಲಕ್ಯವೇ..? ನಮ್ಮ ಸಂಸ್ಕಾರ, ಮಾನವೀಯ ಮೌಲ್ಯಗಳ ಅದಃಪತನವೇ..?' ದೇವರನ್ನೇ ಪ್ರಶ್ನಿಸಿಬಿಟ್ಟೆ. ಆದರೆ ದೇವರೂ ಉತ್ತರಿಸಲಾರ..!  ಪುಟ್ಟಿ ಮರಳಿ ಬಂದರೆ ಸಾಕು ಅಂತ ಅದೇ ದೇವರಲ್ಲಿ ಬೇಡಿಕೊಂಡು, ದೀಪ ಹಚ್ಚಿಟ್ಟು ಅಲ್ಲಿಯೇ ಒರಗಿಕೊಂಡೆ.

Tuesday, 14 March 2017

ಮೆದುಳಿನ ಆರೋಗ್ಯವೃದ್ಧಿಗಾಗಿ ’ಓದು’



’ಓದು’ ಮಾನವನಿಗೆ ಮಾತ್ರ ಲಭಿಸಿರುವ ವಿಶಿಷ್ಠ ಶಕ್ತಿ.  ಓದು ಅಂದರೆ ಏನು..? ಓದು ಅಂದರೆ ಜ್ಞಾನಾರ್ಜನೆ .. ಪುಸ್ತಕಗಳಿಂದ ಜ್ಞಾನವನ್ನ ಹೆಚ್ಚಿಸಿಕೊಳ್ಳುವ ಮಾರ್ಗ. ಆದರೆ ಬಹಳ ಜನರಿಗೆ ಓದು ಎಂಬ ಪದದ ನಿಜವಾದ ಅರ್ಥ ಗೊತ್ತೇ ಇರುವುದಿಲ್ಲ. ಶಾಲೆಗೆ, ಕಾಲೇಜಿಗೆ ಹೋಗುವ ಮಕ್ಕಳಿಗೆ ಮಾತ್ರ ಸಂಬಂಧಪಟ್ಟ ಪದ ಇದು ಎಂಬ ಭಾವನೆಯಲ್ಲಿರುವವರೇ ಹೆಚ್ಚು. ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದಕ್ಕೆ, ಒಳ್ಳೆಯ ಅಂಕಗಳನ್ನ ಪಡೆಯುವುದಕ್ಕಾಗಿ ಮಾತ್ರ ಓದುವುದು ಎಂಭ ಭಾವನೆಯಲ್ಲಿರುವವರೇ ಜಾಸ್ತಿ.  ಆದರೆ, ಅದೊಂದೇ ಅಲ್ಲ..! ಓದುವ ಹವ್ಯಾಸ ನಮ್ಮ ಮಾನಸಿಕ ಆರೋಗ್ಯವನ್ನ ಹೆಚ್ಚಿಸಬಲ್ಲದು. ಪುಸ್ತಕಗಳೊಂದಿಗಿನ ಸ್ನೇಹ ಮಾನಸಿಕ ಆರೋಗ್ಯವನ್ನಷ್ಟೇ ಅಲ್ಲ ದೈಹಿಕ ಆರೋಗ್ಯವನ್ನೂ ಕೂಡ ಕಾಪಾಡಬಲ್ಲದು. 

ಸರಿಸುಮಾರು1 ಲಕ್ಷ ವರ್ಷಗಳ ಹಿಂದೆ ಮಾನವ ಓದುವುದನ್ನ ಕಲಿತ. ಸಂವಹನಕ್ಕಾಗಿ ಭಾಷೆಯ ಬಳಕೆಯನ್ನ ಆತ ಪ್ರಾರಂಭಿಸುತ್ತಿದ್ದಂತೆ, ತನ್ನ ಭಾವನೆಗಳನ್ನ ವ್ಯಕ್ತಪಡಿಸುವುದಕ್ಕಾಗಿ ಬರೆಯುವುದನ್ನ ಕಲಿತ. ತಮ್ಮದೇ ಆದ ಸಂಕೇತಗಳನ್ನ ಬರೆದು ಉಳಿದವರಿಗೆ ತಿಳಿಸುವ ಪ್ರಯತ್ನ ಮಾಡಲು ಪ್ರಾರಂಭ ಮಾಡಿದ. ಆ ಸಂಜ್ಞೆ, ಸಂಕೇತಗಳನ್ನ ನೋಡಿ, ಅದನ್ನ ಅರ್ಥ ಮಾಡಿಕೊಳ್ಳಲು ಮಾನವ ಯಾವಾಗ ಪ್ರಾರಂಭ ಮಾಡಿದನೋ ಅಂದಿನಿಂದಲೇ ’ಓದು’ ಶುರುವಾಯ್ತು.  ನಾಗರಿಕತೆ ಬೆಳೆದ ಹಾಗೆ, ಮಾನವನ ಅಭ್ಯಾಸ ಕ್ರಮಗಳು ಬದಲಾದವು, ತಾಳೆಗರಿಗಳ ಕಾಲ ಮುಗಿದು ಪುಸ್ತಕಗಳು ಹುಟ್ಟಿಕೊಂಡವು. ಈಗ ಈ ಆಧುನಿಕ ಯುಗದಲ್ಲಿ ಓದುವುದಕ್ಕಾಗಿ ಸಾವಿರಾರು ಪುಸ್ತಕಗಳನ್ನ ತುಂಬಿಟ್ಟುಕೊಳ್ಳಬಲ್ಲ ಕಿಂಡಲ್‌ನಂಥ ಗ್ಯಾಜೆಟ್‌ಗಳೂ ಬಂದಿವೆ. ಇಂಟರ್‌ನೆಟ್‌ ಸಹಾಯದಿಂದ ಜಗತ್ತಿನ ಯಾವ ಮೂಲೆಯ, ವಿಶ್ವದ ಯಾವ ಬರಹಗಾರರ ಪುಸ್ತಕಗಳನ್ನ ಬೇಕಾದರೂ ಕೊಂಡು ಓದಬಹುದು.   

’ಓದು ಮತ್ತು ಮೆದುಳಿನ ಸಾಮರ್ಥ್ಯ’ ಎಂಬ ವಿಷಯದ ಕುರಿತು ಅಧ್ಯಯನ ನಡೆಸುವುದಕ್ಕಾಗಿ ಯುನೈಟೆಡ್‌ ಸ್ಟೇಟ್ಸ್‌ನ ಚಿಕಾಗೊದಲ್ಲಿರುವ ’ರಶ್‌ ಯೂನಿವರ್ಸಿಟಿ ಮೆಡಿಕಲ್‌ ಸೆಂಟರ್‌’ ಒಂದು ಸಮೀಕ್ಷೆ ನಡೆಸಿತ್ತು. ಇಲ್ಲಿಯ ಅಧ್ಯಯನಕಾರ ರಾಬರ್ಟ್ ಎಸ್‌ ವಿಲ್ಸನ್‌ ಈ ಅಧ್ಯಯನದ ರೂವಾರಿಯನ್ನ ವಹಿಸಿಕೊಂಡರು.  ಈ ಸಮೀಕ್ಷೆಯಲ್ಲಿ ಸುಮಾರು 294 ಮಂದಿ ವೃದ್ಧರ ದಿನಚರಿಯನ್ನ, ಚಟುವಟಿಕೆಗಳನ್ನ ಅಭ್ಯಾಸ ಮಾಡಲಾಯ್ತು. ಈ ಅಧ್ಯಯನದ ಪ್ರಕಾರ,  ಅವರಲ್ಲಿ ಅತೀ ಚುರುಕು ಬುದ್ದಿಯ ವೃದ್ಧರು ಓದುವ ಹವ್ಯಾಸವನ್ನಿಟ್ಟುಕೊಂಡವರು. ಹೆಚ್ಚು ಹೆಚ್ಚು ಓದುವ ಹವ್ಯಾಸವಿರುವ ವೃದ್ಧರ ಮೆದುಳುಗಳು ಸಾಮಾನ್ಯ ವೃದ್ಧರಿಗಿಂತ ಶೇಕಡಾ 48ರಷ್ಟು ಜಾಸ್ತಿ ಚುರುಕಾಗಿದ್ದಿದ್ದು ತಿಳಿದುಬಂತು. ಹಾಗೆಯೇ, ಮರೆವು, ಡಿಮೆನ್ಶಿಯಾ ಮತ್ತು ಕಿನ್ನತೆ ಮುಂತಾದ ಸಮಸ್ಯೆಗಳಿಂದ ಬಳಲುತ್ತಿರುವ ವೃದ್ಧರಿಗೆ ಓದುವ ಹವ್ಯಾಸವೇ ಇರಲಿಲ್ಲವಂತೆ..!  

ಅಧ್ಯಯನಕಾರರಾದ ‘ರಾಬರ್ಟ್‌ ಎಸ್‌ ವಿಲ್ಸನ್‌’ ಹೇಳುವ ಪ್ರಕಾರ, ಮೊದಲಿನಿಂದಲೂ ಓದುವ ಹವ್ಯಾಸಿಗಳಲ್ಲಿ ಅವರ ಮೆದುಳು ಸಾಮಾನ್ಯರಿಗಿಂತ ಶೇಕಡಾ 48ರಷ್ಟು ಹೆಚ್ಚು ಚುರುಕಾಗಿರುತ್ತದೆಯಂತೆ. ಯಾರು ಹೆಚ್ಚು ಹೆಚ್ಚು ಓದುವ ಹವ್ಯಾಸವಿಟ್ಟುಕೊಂಡಿರುತ್ತಾರೋ ಅವರಲ್ಲಿ ವೈಚಾರಿಕ ಶಕ್ತಿ ಜಾಸ್ತಿ.  ಹೆಚ್ಚು ಹೆಚ್ಚು ಜ್ಞಾನವನ್ನ ಸಂಪಾದಿಸುತ್ತ ಸಾಗುವ ಮನುಷ್ಯ ವೃದ್ಧಾಪ್ಯದಲ್ಲಿಯೂ ಕೂಡ ಮೆದುಳಿನ ಸಾಮರ್ಥ್ಯವನ್ನ ಕಳೆದುಕೊಳ್ಳುವುದಿಲ್ಲ. ಓದು ಮನುಷ್ಯನನ್ನ ತಿದ್ದಬಲ್ಲದು. ಪುಸ್ತಕಗಳು ಮನಸಿನ ನೆಮ್ಮದಿಯನ್ನ ಕಾಪಾಡಬಲ್ಲವು ಎಂಬುದು ವಿಲ್ಸನ್‌ ಅಧ್ಯಯನದ ಅಭಿಪ್ರಾಯ. 

ನಮ್ಮಲ್ಲಿ ತುಂಬಾ ಜನರಿಗೆ ಓದುವ ಹವ್ಯಾಸಗಳೇ ಕಮ್ಮಿ. ಇಂದಿನ ಫೇಸ್‌ಬುಕ್‌, ವಾಟ್ಸ್ಯಾಪ್‌ ಲೋಕದಲ್ಲಿ ಕಳೆದು ಹೋಗಿರುವ ಮಂದಿ ಪುಸ್ತಕಗಳಕಡೆ ಮುಖ ಮಾಡುವುದೇ ಇಲ್ಲ. ಇತ್ತೀಚೆಗೆ ನೀವು ಓದಿರುವ ಒಳ್ಳೇ ಪುಸ್ತಕಗಳು ಯಾವವು ಎಂಬ ಪ್ರಶ್ನೆಯನ್ನಿಟ್ಟರೆ, ಅದಕ್ಕೊಂದು ಸರಿಯಾದ ಉತ್ತರ ಕೊಡುವವರ ಸಂಖ್ಯೆ ಬಹಳ ಕಡಿಮೆ ಇದೆ.   ’Use it or lose it’ ಎಂಬ ಮಾತು ಮೆದುಳಿನ ವಿಷಯಕ್ಕೆ ಶೇಕಡಾ 100ರಷ್ಟು ಸರಿಹೊಂದುತ್ತದೆ. ಉಪಯೋಗಿಸಿ ಇಲ್ಲಾ ಕಳೆದುಕೊಳ್ಳಿ ಎಂಬ ಅರ್ಥವಿದೆ ಅದಕ್ಕೆ. ಅಂದರೆ ಮೆದುಳನ್ನ ಹೆಚ್ಚು ಹೆಚ್ಚು ಉಪಯೋಗಿಸುತ್ತಾ ಇದ್ದರೆ ಅದು ಇನ್ನಷ್ಟು ಚುರುಕಾಗಿ ಕೆಲಸ ಮಾಡುತ್ತದೆ, ಬದಲಾಗಿ ಮೆದುಳಿಗೆ ಕೆಲಸ ಕೊಡುವುದನ್ನೇ ಬಿಟ್ಟುಬಿಟ್ಟರೆ  ಅದು ತನ್ನ ಸಾಮರ್ಥ್ಯವನ್ನ ಕಳೆದುಕೊಳ್ಳಲು ಪ್ರಾರಂಭಿಸುತ್ತದೆ.  ಹೀಗಾಗಿ ಸಮಯದ ಅಭಾವದಲ್ಲಿ ಓದುವುದು ಸಾಧ್ಯವಿಲ್ಲ ಎಂಬ ಉತ್ತರ ನೀಡದೆ, ಓದುವುದಕ್ಕಾಗಿ ದಿನದ 24 ಗಂಟೆಗಳಲ್ಲಿ 20 ನಿಮಿಷ ಕಾದಿರಿಸಿಕೊಳ್ಳಿ.ಮನಸ್ಸು ಮತ್ತು ದೈಹಿಕ ಆರೋಗ್ಯವನ್ನ ಕಾಪಿಡಿಕೊಳ್ಳುವುದಕ್ಕಾಗಿ, ಮೆದುಳಿನ ಸಾಮರ್ಥ್ಯವನ್ನ ಹೆಚ್ಚಿಸಿಕೊಳ್ಳುವುದಕ್ಕಾಗಿ ಪುಸ್ತಕಗಳಿಗೆ ನಿಮ್ಮ ಜೀವನದಲ್ಲಿ ಸ್ವಲ್ಪ ಜಾಗ ಕೊಡಿ. 

ಓದುವ ಹವ್ಯಾಸದಿಂದಾಗುವ ಲಾಭಗಳು:

1. ಓದು ಮನಸ್ಸಿನ ಒತ್ತಡವನ್ನ ಕಡಿಮೆ ಮಾಡಬಲ್ಲದು, ಬದುಕಿನ ಉತ್ಸಾಹವನ್ನ ಹೆಚ್ಚಿಸಬಲ್ಲದು 
2. ಓದುವ ಹವ್ಯಾಸದಿಂದ ಹೃದಯದ ಆರೋಗ್ಯ ವೃದ್ಧಿಯಾಗಬಲ್ಲದು
3. ಕಿನ್ನತೆಯಿಂದ, ಕೀಳರಿಮೆಯಂಥ ಮಾನಸಿಕ ಸಮಸ್ಯೆಯಿಂದ ನಮ್ಮನ್ನು ನಾವು ಕಾಪಾಡಿಕೊಳ್ಳಲು ಓದು ಸಹಕಾರಿ
4. ಮಾನಸಿಕವಾಗಿ ಒಂಟಿತನ ಅನುಭವಿಸುವವರಿಗೆ ಓದು ಜೊತೆಯಾಗಬಲ್ಲದು 
5. ಓದು ಮೆದುಳಿಗೆ ಕೆಲಸ ನೀಡುವ ಪರಿಣಾಮ ರಾತ್ರಿಯಲ್ಲಿ ಒಳ್ಳೆಯ ನಿದ್ದೆ ಸಾಧ್ಯ
6. ಓದು ಜ್ಞಾನವನ್ನ ನೀಡುವುದರ ಜತೆಗೆ ವಿಷಯಗಳನ್ನ ಅರ್ಥೈಸಿಕೊಳ್ಳುವ, ವಿಶ್ಲೇಷಿಸುವ ಗುಣವನ್ನ ಬೆಳೆಸುತ್ತದೆ.
7.ಶಬ್ಧಕೋಶ ವಿಸ್ತರಣೆಯಾಗುತ್ತದೆ, ಈ ಮೂಲಕ ನಮ್ಮ ಮಾತಿನ ತೂಕವನ್ನ ಹೆಚ್ಚಿಸಬಲ್ಲದು
8. ಮೆದುಳಿಗೆ ಸಂಬಂಧಪಟ್ಟ ಡಿಮೆನ್ಶಿಯಾದಂಥ ರೋಗದಿಂದ ದೂರವಿರಲು ’ಓದು’ ಸಹಕಾರಿ
9. ಏಕಾಗ್ರತೆಯನ್ನ ಹೆಚ್ಚಿಸಿ, ನೆನಪಿನ ಶಕ್ತಿಯನ್ನ ಹೆಚ್ಚಿಸಬಲ್ಲದು
10.ಬರವಣಿಗಯ ನೈಪುಣ್ಯವನ್ನೂ ಸುಧಾರಿಸಬಲ್ಲದು
11. ಮನಸ್ಸಿಗೆ ನೆಮ್ಮದಿ, ಶಾಂತಿ ನೀಡಬಲ್ಲ ಶಕ್ತಿ ಅಧ್ಯಯನಕ್ಕಿದೆ. 

ಹೆತ್ತ ಕರುಳ ಕೂಗಿಗೆ ಉತ್ತರಿಸಲಾರೆಯಾ...ದೇವರೇ..


ಆ ಮಕ್ಕಳು ಏನು ತಪ್ಪು ಮಾಡಿದ್ದರು..? ಅವರು ಯಾರಿಗೆ ಮೋಸ ಮಾಡಿದ್ದರು..? ಪಾಪ..! ಯಾರದೋ ದ್ವೇಷಕ್ಕೆ, ಇನ್ಯಾರದೋ ನಿರ್ಲಕ್ಷ್ಯಕ್ಕೆ ಬಲಿಯಾಗಿಹೋದರು.   ಎಷ್ಟು ಹಸಿದಿತ್ತೋ ಅವರ ಹೊಟ್ಟೆ... ಹಾಸ್ಟೆಲ್‌ನಲ್ಲಿ ಕೊಟ್ಟ ಆ ವಿಷದ ಊಟವನ್ನ ಹೊಟ್ಟೆತುಂಬ ಉಂಡುಬಿಟ್ಟಿದ್ರು.  ಹಸಿದ ಹೊಟ್ಟೆಗೆ ಹೋದ ವಿಷ ಆ ಎಳೆಯರ ಪ್ರಾಣವನ್ನೇ ಕಿತ್ತು ತೆಗೆದುಬಿಟ್ಟಿತ್ತು.  ಎಂಥವರಿಗಾದ್ರೂ ಒಮ್ಮೆ ಮನಕರಗಿಸುವ ಘಟನೆಯಲ್ಲವೇ ಇದು..?  ಬುಧವಾರ ರಾತ್ರಿ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕು ಹುಳಿಯಾರು ಹೋಬಳಿಯ ವಿದ್ಯಾವಾರಿಧಿ ಇಂಟರ್‌ನ್ಯಾಷನಲ್‌ ಸ್ಕೂಲ್‌ನಲ್ಲಿ ನಡೆದ ಈ ಘಟನೆ ಎಂಥ ಆಘಾತಕಾರಿ ಅಲ್ವಾ..?

ಎಸ್‌ ಎಸ್‌ ಎಲ್‌ ಸಿ ಪರೀಕ್ಷೆ ಹತ್ತಿರ ಬರುತ್ತಿದೆ, ತಾವು ಚೆನ್ನಾಗಿ ಓದಿಕೊಳ್ಳಬೇಕು ಅನ್ನೋ ಕಾರಣಕ್ಕೆ ರಾತ್ರಿ ೮ಕ್ಕೆ ಬೇಗ ಬೇಗ ಊಟ ಮಾಡಿ ಓದಲು ಹೊರಟಿದ್ದರಂತೆ ಈ ಮಕ್ಕಳು. ಉಳಿದೆಲ್ಲ ಮಕ್ಕಳು ಚಪಾತಿ ಪಲ್ಯ ತಿಂದರೆ, ಆಕಾಂಕ್ಷ, ಶಾಂತಮೂರ್ತಿ ಮತ್ತು ಶ್ರೇಯಸ್‌ ಅನ್ನ ಸಾಂಬಾರ್‌ ಊಟ ಮಾಡಿದ್ದರಂತೆ. ಊಟ ಮಾಡಿ ಸ್ವಲ್ಪ ಹೊತ್ತಾಗುತ್ತಿದ್ದಂತೆ ವಾಂತಿ ಮಾಡಿಕೊಳ್ಳತೊಡಗಿದರು.  ಹೊಟ್ಟೆ ಅವಚಿಟ್ಟುಕೊಂಡು ವಾಂತಿ ಮಾಡುವುದನ್ನ ನೋಡಿ ಹಾಸ್ಟೆಲ್‌ ಸಿಬ್ಬಂದಿ ವೈದ್ಯರಿಗೆ ಬರಹೇಳಿದ್ದಾರೆ. ಪ್ರಾಥಮಿಕ ಚಿಕಿತ್ಸೆಯನ್ನೆಲ್ಲಾ ನೀಡಿದರೂ ಸಮಸ್ಯೆ ಶಮನವಾಗದಿರುವಾಗ ಆಸ್ಪತ್ರೆಯಿಂದ ಆಸ್ಪತ್ರೆಗೆ ಸುತ್ತಿದ್ದಾರೆ, ಉಸಿರಾಟದ ಸಮಸ್ಯೆ ಕಾಣಿಸುತ್ತಿದ್ದಂತೆ ತುಮಕೂರು ಜಿಲ್ಲಾಸ್ಪತ್ರೆಗೆ ಕಳುಹಿಸಲಾಯಿತು. ಜಿಲ್ಲಾಸ್ಪತ್ರೆ ತಲುಪುವಷ್ಟರಲ್ಲಿ ಬೆಳಿಗ್ಗೆ ೪ ಗಂಟೆಯಾಗಿಹೋಗಿತ್ತು. ಆದರೆ, ಕಾಲ ಮಿಂಚಿಹೋಗಿತ್ತು.   ಜಿಲ್ಲಾಸ್ಪತ್ರೆ ತಲುಪುವಷ್ಟರಲ್ಲಿಯೇ ಆ ಮೂವರು ಮಕ್ಕಳು ಯಮಯಾತನೆಯನ್ನ ಅನುಭವಿಸಿ ಜೀವಬಿಟ್ಟಿದ್ದರು.

ಆ ಮಕ್ಕಳನ್ನ ಹೆತ್ತ ಕರುಳುಗಳಿಗೆ ಸುದ್ದಿ ತಲುಪುವಷ್ಟರಲ್ಲಿ ಸೂರ್ಯ ಬಂದಿದ್ದ.  ಬೆಳಬೆಳಗ್ಗೆ ಅವರಿಗೆ ಎಂಥ ಆಘಾತ..! ಹೆತ್ತ ಮಗುವಿನ ಶವದ ಮುಂದೆ ರೋಧಿಸೋ ತಾಯಿಯನ್ನ ಸಮಾಧಾನ ಮಾಡಲು ಸಾಧ್ಯವೇ..? ಕರುಳು ಕಿವುಚಿಬರುತ್ತೆ..! ಆ ಮಕ್ಕಳ ಜೀವವನ್ನ ಊಟವೇ ನುಂಗಿಬಿಟ್ಟಿತ್ತು. ಮುಗ್ಧವಾಗಿ ಹಸಿವು ನೀಗಿಸಿಕೊಂಡಿದ್ದ ಮಕ್ಕಳ ಪಾಲಿಗೆ ಅನ್ನವೇ ಯಮನಾಗಿಹೋಗಿದ್ದ..!

 ತಾವು ಹೆತ್ತು ಹೊತ್ತು ಸಾಕಿದ ಮಕ್ಕಳು ಒಳ್ಳೆಯ ಶಿಕ್ಷಣ ಪಡೆಯಲಿ ಅನ್ನೋಕಾರಣಕ್ಕೆ ಆ ತಂದೆ ತಾಯಿಯರು ಇಂಥ ರೆಸೆಡೆನ್ಶಿಯಲ್‌ ಸ್ಕೂಲ್‌ಗೆ ಹಾಕಿರ್ತಾರೆ. ಮನೆಗಿಂತ ಹಾಸ್ಟೆಲ್‌ನಲ್ಲಿದ್ದರೆ ಅಭ್ಯಾಸದ ಕಡೆಗೆ ಹೆಚ್ಚಿನ ಗಮನವಿರುತ್ತದೆ ಎಂಬ ಉದ್ದೇಶದಿಂದಲೋ, ಮಕ್ಕಳು ತಮ್ಮ ಮೇಲೆ ಅವಲಂಬಿಗಳಾಗದಿರಲಿ ಅನ್ನೋ ಮನಸ್ಸಿನಿಂದಲೋ, ತಮ್ಮೂರಿನಲ್ಲಿ ಒಳ್ಳೆಯ ಶಾಲೆ ಇಲ್ಲವೆಂದೋ, ದೂರ ಪ್ರಯಾಣ ಮಾಡುವುದಕ್ಕಿಂದ ಹಾಸ್ಟೆಲ್‌ನಲ್ಲಿದ್ದು ಓದಿಕೊಳ್ಳಲಿ ಎಂಬ ಕಾರಣಕ್ಕೋ ತಮ್ಮ ಮಕ್ಕಳನ್ನ ಇಂಥ ಶಾಲೆಗಳಿಗೆ ಸೇರಿಸಿದ್ದರು. ತಾವು ಹೆತ್ತು ಸಾಕಿ ಬೆಳೆಸಿದ ಮಕ್ಕಳನ್ನ ಸಂಪೂರ್ಣ ಶಾಲೆಯವರನ್ನ ನಂಬಿ ಬಿಟ್ಟು ಹೋಗಿದ್ದರು.. ಆದರೆ ಆ ನಂಬಿಕೆಯ ಪರವಾಗಿ ಆ ತಾಯಿ ತಂದೆಯರಿಗೆ ಸಂದದ್ದೇನು..?ಮಕ್ಕಳನ್ನೇ ಕಿತ್ತುಕೊಳ್ಳೋ ಮಹಾ ಮೋಸ..!   

ಮೋಸದಿಂದ ವಿಷ ಉಂಡು ಅದೆಷ್ಟು ಪಾಡು ಪಟ್ಟವೋ ಆ ಮಕ್ಕಳು, ಎಷ್ಟು ನೋವು ತಿಂದು ಜೀವಬಿಟ್ಟವೋ.. ನೆನೆಸಿಕೊಂಡರೆ ಕಣ್ಣಲ್ಲಿ ನೀರು ತುಂಬುತ್ತೆ.  ಮನಸ್ಸಿನಲ್ಲಿ ಅದೆಷ್ಟು ಕನಸುಗಳನ್ನ ಹೊತ್ತಿದ್ದವೋ ಆ ಜೀವಗಳು. ವಿಷಾಹಾರ ಹಾಕಿ ಆ ಮುಗ್ಧ ಮಕ್ಕಳನ್ನ ಕೊಲ್ಲುವಷ್ಟು ದ್ವೇಷ ಯಾರಿಗಿದ್ದಿರಬಹುದು. ದ್ವೇಷವೋ, ಅಚಾತುರ್ಯವೋ, ನಿರ್ಲಕ್ಷ್ಯವೋ ಅದ್ಯಾವುದೋ ಕಾರಣಗಳಿರಬಹುದು.. ಅದು ಮುಂದೆ ತನಿಖೆಯಿಂದ ಬಯಲಾಗಲೇಬೇಕು.  ತಪ್ಪಿತಸ್ತರು ಸಿಕ್ಕಿ ಅವರಿಗೆ ಶಿಕ್ಷೆಯಾಗುತ್ತದೆ. ವಿದ್ಯಾವಾರಿಧಿ ಇಂಟರ್‌ನ್ಯಾಷನಲ್‌‌ ಸ್ಕೂಲ್‌  ಮಾಜಿ ಎಮ್‌ಎಲ್‌ಎ ಕಿರಣ್‌ ಕುಮಾರ್‌ ಅವರ ಒಡೆತನದ್ದಾದ್ದರಿಂದ ಸಧ್ಯಕ್ಕೆ ಅವರನ್ನ ಬಂಧಿಸಲಾಗಿದೆ. ಇದೆಲ್ಲವೂ ಹೌದು.. ಆದರೆ ಪುತ್ರಶೋಕದಲ್ಲಿರುವ ಆ ತಂದೆ ತಾಯಿಯರಿಗೆ ಮಕ್ಕಳು ಸಿಗುತ್ತಾರಾ ಹೇಳಿ.. ಪ್ರತಿದಿನ ಆ ಮಕ್ಕಳನನ್ನ ನೆನೆದು ನೆನೆದು ಜೀವಂತ ಶವವಾಗುತ್ತಾರೆ. ಉತ್ತಮ ಶಿಕ್ಷಣದ ಆಸೆಗಾಗಿ ತಮ್ಮ ಕುಡಿಯನ್ನ ರೆಸಿಡೆನ್ಶಿಯಲ್‌ ಸ್ಕೂಲ್‌ನಲ್ಲಿ ಬಿಟ್ಟಿದ್ದಕ್ಕೆ ಮುಮ್ಮಲ ಮರುಗುತ್ತಾರೆ.  ಮಕ್ಕಳನ್ನ ದೂರ ಇರಿಸಿದ್ದ ಪಶ್ಚಾತಾಪದಿಂದ ಕುಗ್ಗಿಹೋಗ್ತಾರೆ. ಇಂಥ ನೋವನ್ನ ಯಾವ ಪರಿಹಾರದಿಂದ ನೀಗಿಸಿಸಲು ಸಾಧ್ಯ..? 

ಅದ್ಯಾರೇ ಆಗಲಿ.. ಅವರು ಅದೆಷ್ಟೇ ಪ್ರಭಾವಿಗಳಾಗಲಿ.. ಮಕ್ಕಳನ್ನ ಕೊಂದ ಆ ಪಾಪಿಗಳಿಗೆ ಶಿಕ್ಷೆಯಾಗಲಿ..!  ಕರುಳಿನ ಕೂಗನ್ನ ಕೇಳಿಸಿಕೊಳ್ಳೋ ಆ ದೇವರೇ..ಈ ದುಃಖತಪ್ತ ತಂದೆ ತಾಯಿಯರಿಗೆ ನೋವನ್ನ ಸಹಿಸೋ ಶಕ್ತಿ ಕೊಡಲಿ.

Sunday, 23 June 2013

ಮೊದಲ ಬಾರಿ ಶಾಲೆಗೆ ಸೇರುವಾಗ......

ಆ 3 ಮೂರು ವರ್ಷದ ಪುಟಾಣಿ, ತಾನು ಹುಟ್ಟಿರುವುದೇ ಶಾಲೆಗೆ ಹೋಗುವುದಕ್ಕಾಗಿ ಅಂತ ಅಂದುಕೊಂಡುಬಿಟ್ಟಿದೆಯೋ ಏನೋ, ಏನೇನೂ ಗಲಾಟೆ ಮಾಡದೆ ಸ್ಕೂಲ್ ಬ್ಯಾಗ್‌ನ್ನು ಬೆನ್ನಿಗೆ ಹಾಕಿಕೊಂಡು, ಕೈಯಲ್ಲೊಂದು ಟಿಫಿನ್ ಕ್ಯಾರಿಯರ್ ಹಿಡಿದುಕೊಂಡು ಪುಟ್ಟ ಪುಟ್ಟ ಹೆಜ್ಜೆಯನ್ನಿಟ್ಟು ಸ್ಕೂಲ್ ಬಸ್ಸು ಹತ್ತಿ ಹೋಗುತ್ತಿರೋದನ್ನು ನೋಡಿದ್ರೆ ಆಶ್ಚರ್ಯ ಆಗುತ್ತದೆ.

ಹುಟ್ಟಿ 4 ತಿಂಗಳಿಗೇ ಬೇಬಿ ಸಿಟ್ಟಿಂಗ್‌ನಲ್ಲಿ ಕುಳಿತು ಬೆಳೆದ ಮಗು ಅದು. ಅದಕ್ಕೆ ತಾನು ದಿನದ ೨೪ ಗಂಟೆಯೂ ಮನೆಯಲ್ಲಿದ್ದು, ಅಭ್ಯಾಸವೇ ಇಲ್ಲ. ಆ ಮಗುವಿನ ತಾಯಿ ತನ್ನ ಕಚೇರಿಗೆ ರಜಾ ಹಾಕಿ ಮನೆಯಲ್ಲಿರುವ ಸಮಯದಲ್ಲಿಯೂ ಕೂಡ, ಮಗುವನ್ನು ಬೇಬಿ ಸಿಟ್ಟಿಂಗ್ನಲ್ಲಿಯೇ ಬಿಟ್ಟು ಬರುತ್ತಾ ಇದ್ದಳು, ಅದೇ ಕಾರಣಕ್ಕಾಗಿಯೋ ಏನೋ.. ಆ ಮಗುವಿಗೆ ತನ್ನ ಮನೆಯ ಮೇಲೆ, ಅಂಥ ಮಮತೆ, ಸೆಳೆತ ಇಲ್ಲ ಅನ್ನಿಸುತ್ತೆ. ಇಂದಿನ ಮಕ್ಕಳಿಗೆ ತಾನು ಶಾಲೆಗೆ ಸೇರಿದ್ದೇ ನೆನಪಿರೋದಿಲ್ಲ. ಏಕೆಂದರೆ, ಅಷ್ಟು ಚಿಕ್ಕ ವಯಸ್ಸಿಗೇ ಅವರೆಲ್ಲ ಸ್ಕೂಲ್‌ ಮೆಟ್ಟಿಲು ಹತ್ತಿರುತ್ತಾರೆ.

ಮನೆಯಮುಂದೆ ಬಸ್ಸು ಬಂದು ಶಬ್ದ ಮಾಡಿದ ತಕ್ಷಣ, ತನ್ನಮ್ಮನಿಗೆ ಬಾಯ್ ಮಾಡಿ ಬಸ್ಸು ಹತ್ತಿ ಹೋದ ಆ ಪುಟಾಣಿಯನ್ನು ನೋಡುತ್ತಾ ಇದ್ದ ನನಗೆ ನನ್ನ ಬಾಲ್ಯ ನೆನಪಾಯ್ತು. ಶಾಲೆಯ ಹೆಸರು ಕೇಳಿದರೆ, ಅಲ್ಲಿಂದ ಕಾಲು ಕೀಳುತ್ತಿದ್ದವಳು ನಾನು. ನನ್ನನ್ನು ಶಾಲೆಗೆ ಸೇರಿಸಲು, ನಮ್ಮಪ್ಪ ಅಮ್ಮ ಕಷ್ಟಪಟ್ಟಿದ್ದು ನೆನಪಾಯಿತು. ಮನೆಯಲ್ಲಿ ಮುದ್ದು ಮಗಳಾಗಿ ೬ ವರ್ಷ ಆಟವಾಡಿಕೊಂಡಿದ್ದ ನನ್ನ, ಒಮ್ಮೆಲೇ ಶಾಲೆಗೆ ಹೋಗು ಅಂದರೆ..? ನನಗೆ ಬಹಳ ಕಷ್ಟವಾಗಿತ್ತು. ಈ ಶಾಲೆ ಯಾಕಾದರೂ ಇದೆಯೋ ಅನ್ನಿಸುತ್ತಿತ್ತು.
ನಮ್ಮ ಪುಟ್ಟ ಹಳ್ಳಿಯಲ್ಲಿ ನಮ್ಮದು 5 ಮನೆಗಳು ಒಟ್ಟಿಗೇ ಇರುವ ದೊಡ್ಡ ಕೇರಿ, ಆ ಕೇರಿಯಲ್ಲಿ ಮೂಲೆಯ ಮನೆ ನಮ್ಮದು, ಮನೆಯ ಮಂದೆ ಪುಟ್ಟ ಅಂಗಳ, ಅಂಗಳಕ್ಕೆ ತಾಗಿಯೇ ಇರುವ ದನದ ಕೊಟ್ಟಿಗೆ. ಕೊಟ್ಟಿಗೆಯ ತುಂಬಾ ದನಗಳು, ಕರುಗಳು. ಎಲ್ಲರ ಮನೆಯ ಕೊಟ್ಟಿಗೆಗೂ ಹೋಗಿ, ಕರುಗಳ ಜೊತೆ ಆಡವಾಡುತ್ತಿದ್ದೆ ನಾನು. ಮನೆಯಲ್ಲಿದ್ದ ಬೆಕ್ಕಿನ ಮರಿ, ನಾಯಿ ಮರಿ ಜೊತೆಯೇ ಕಾಲ ಕಳೆಯುತ್ತಿದ್ದೆ.

ತೋಟಗಳಲ್ಲಿ ಅಲೆದು, ಗುಡ್ಡ ಬೆಟ್ಟಗಳಲ್ಲಿ ಬೆಳೆದ ಹಣ್ಣುಗಳನ್ನು ತಿನ್ನುತ್ತಾ ಓಡಾಡಿಕೊಂಡಿದ್ದ ಬಾಲ್ಯ ನಮ್ಮದು. ಪೇರಲು ಹಣ್ಣು ಕೀಳಲು ಮರಹತ್ತಿ ಇಳಿಯುವುದಕ್ಕೆ ಬಾರದೇ ಕೂಗಿ ಕೂಗಿ, ಬಾಯಾರಿ ಗಂಟಲು ಒಣಗಿ, ಮರದ ಮೇಲೆಯೇ ಕುಳಿತಿದ್ದ ನನ್ನನ್ನು ಆ ದಾರಿಯಾಗಿ ಮನೆಗೆ ಹೋಗುತ್ತಿದ್ದ ನಮ್ಮ ಮನೆಯ ಆಳು ಶೇಕರ ಕಂಡು, ನನ್ನನ್ನು ಮರದಿಂದ ಇಳಿಸಿದ್ದ, ಅಂದಿನ ಆ ದೃಶ್ಯವನ್ನು ಇಂದಿಗೂ ರಸವತ್ತಾಗಿ ಹೇಳುತ್ತಾನೆ ಅವನು.

ನನ್ನಮ್ಮನ ಸೀರೆಯನ್ನು ಸುತ್ತಿಕೊಂಡು, ಅಂಗಳದಲ್ಲಿ ಬಿಂಕದಿಂದ ನಡೆದಾಡುತ್ತಿದ್ದ ನನ್ನನ್ನು ಪಕ್ಕದ ಮನೆಯವರೆಲ್ಲ ನೋಡಿ ನಕ್ಕು ಸಂತೋಷ ಪಡುತ್ತಿದ್ದರು, ಇಡೀ ಕೇರಿಯೂ ನನ್ನದೇ, ಅಲ್ಲಿ ಯಾರ ಮನೆಯಲ್ಲಾದರೂ ನನ್ನ ಊಟ, ತಿಂಡಿ ಮುಗಿದುಹೋಗುತ್ತಿತ್ತು.
ಅಣ್ಣಂದಿರ ಜೊತೆ ಹೊಳೆಗೆ ಹೋಗುವುದು, ಅವರು ಈಜಾಡುವುದನ್ನು ನೋಡಿ, ಖುಷಿ ಪಡುವುದು, ನನಗೂ ಕಲಿಸಿಕೊಡಿ ಅಂತ ಹಟ ಮಾಡೋದು, ಅವರು ನನ್ನನ್ನು ಸಂಬಾಳಿಸಿ ಮನೆಗೆ ಕರೆದುಕೊಂಡುಬರೋದು ಮಾಮೂಲಿಯಾಗಿತ್ತು.. ನನ್ನ ಹಟ ಅವರಿಗೆ ಅಭ್ಯಾಸವಾಗಿಹೋಗಿತ್ತು.

ಪುಟ್ಟಮಗುವಾಗಿದ್ದ ನನ್ನ ತಂಗಿ ತೊಟ್ಟಿಲಲ್ಲಿ ಮಲಗಿ, ಕಿಲ ಕಿಲ ನಗುತ್ತಿದ್ದಳು. ಅವಳನ್ನು ನಗಿಸಲು ಕುಣಿಯುತ್ತಾ, ಮಲಗಿಸಲು ಹಾಡು ಹೇಳುತ್ತಾ ಇದ್ದೆ, ಮನೆಯ ತುಂಬಾ ಓಡಾಡಿಕೊಂಡು ಹಾಯಾಗಿರುತ್ತಿದ್ದೆ. ಹಗಲು ಹೊತ್ತಿನಲ್ಲೆಲ್ಲ ಆಟವಾಡಿ, ಕುಣಿದು ಸುಸ್ತಾಗಿ ನಿದ್ದೆಹತ್ತಿದ ಕಣ್ಣಿನಲ್ಲಿರುವ ನನಗೆ ಊಟ ಮಾಡಿಸುವವಳು ನನ್ನ ಅಜ್ಜಿ. ಊಟವಾದ ತಕ್ಷಣ ಹಾಸಿಗೆ ಹಾಸಿ ನನ್ನನ್ನು ಮಲಗಿಸುವ ಜವಾಬ್ದಾರಿ ನನ್ನಪ್ಪನದು. ದಿನವೂ ಬೇರೆ ಬೇರೆ ರಸವತ್ತಾದ ಕಥೆ ಕೇಳುತ್ತಾ, ಅಪ್ಪನ ಮಡಿಲಿನಲ್ಲಿಯೇ ನಿದ್ದೆ ಮಾಡುತ್ತಿದ್ದೆ ನಾನು.

ಅಂತೂ ಇಂತೂ ಶಾಲೆಗೆ ಸೇರುವ ದಿನ ಬಂದೇಬಿಟ್ಟಿತ್ತು. ನೀನು ನಾಳೆಯಿಂದ ಶಾಲೆಗೆ ಹೋಗಬೇಕು, ಅಲ್ಲಿ ಓದುವುದಕ್ಕೆ ಬರೆಯುವುದಕ್ಕೆ ಹೇಳಿಕೊಡುತ್ತಾರೆ, ನೀನು ಕಲಿತು ದೊಡ್ಡವಳಾಗಿ ಸ್ಕೂಲ್‌ಟೀಚರ್‌ಆಗಬೇಕು ಅಂತ ನನಗೆ ನಿಧಾನವಾಗಿ ಹೇಳ್ತಾ ಇದ್ದಳು ನಮ್ಮಮ್ಮ. ಅವಳು ಎಷ್ಟೇ ಹೇಳಿದರೂ ನನಗೆ ಶಾಲೆ ಇಷ್ಟವೇ ಇರಲಿಲ್ಲ. ಅವಳು ಹೇಳುವ ಕಥಯನ್ನೆಲ್ಲ ಕೇಳಿ ನಂತರ ಕೊನೆಯಲ್ಲಿ ನಾನು ಶಾಲೆಗೆ ಹೋಗೋದಿಲ್ಲ ಅಂತಿದ್ದೆ. ನನ್ನನ್ನು ಶಾಲೆಗೆ ಕಳಿಸುವುದಾದರೂ ಹೇಗಪ್ಪ ಅನ್ನೋದೇ ಅಮ್ಮನ ಚಿಂತೆಯಾಗಿತ್ತು.
ಅವತ್ತು ಜೂನ್‌೧, ಬೆಳಿಗ್ಗೆ ಜಿಟಿ ಜಿಟಿ ಮಳೆ ಸುರಿಯುತ್ತಿದೆ. ಹಾಸಿಗೆಯಲ್ಲಿ ಬೆಚ್ಚಗೆ ಮಲಗಿದ್ದ ನನ್ನ ಬೇಗನೆ ಎಬ್ಬಿಸಿ, ಸ್ನಾನ ಮಾಡಿಸಿ, ಬಿಳಿ ಅಂಗಿ ನೀಲಿ ಸ್ಕರ್ಟು ತೊಡಿಸಿ, ರೆಡಿ ಮಾಡಿಬಿಟ್ಟಿದ್ದಳು ಅಮ್ಮ. ಹಾಸಿಗೆಯಿಂದ ಎದ್ದಾಗಿನಿಂದ ಸೊಳ್ಳೆರಾಗದಲ್ಲಿ ಅಳುತ್ತಿದ್ದ ನಾನು ಶಾಲೆಗೆ ಹೋಗುವ ಸಮಯ ಹತ್ತಿರ ಬಂದಾಗ, ಅಯ್ಯೋ ನಾನು ಶಾಲೆಗೆ ಹೋಗೋದಿಲ್ಲ ಎಂದು ಜೋರಾಗಿ ಅಳಲು ಶುರುವಿಟ್ಟುಕೊಂಡೆ, ನನ್ನ ಸಂಬಾಳಿಸುವುದೇ ಅಪ್ಪ ಅಮ್ಮಂಗೆ ತಲೆ ನೋವಾಗಿಹೋಯ್ತು.

ಅಪ್ಪ ಅಮ್ಮ ಏನೇ ಹೇಳಿದರೂ, ಸಮಾಧಾನ ಮಾಡಿ ಶಾಲೆಗೆ ಕರೆದೊಯ್ಯಲು ಎಷ್ಟೇ ಕಷ್ಟಪಟ್ಟರೂ ನಾನು ಸುಮ್ಮನಾಗಲೇ ಇಲ್ಲ. ಎಷ್ಟು ಚೆಂದದ ಪುಸ್ತಕ ನೋಡು, ಎಷ್ಟು ಸುಂದರ ಬಳಪ ನೋಡು ಶಾಲೆಯಲ್ಲಿ ನಿನ್ನಂತೆ ಇರುವ ಮಕ್ಕಳ ಜೊತೆ ನೀನು ಆಟವಾಡಬಹುದು ಎಂದೆಲ್ಲ ಹೇಳಿ ನನ್ನ ಅಳುವನ್ನು ಕಡಿಮೆ ಮಾಡಲು ಪ್ರಯತ್ನ ಪಟ್ಟರೂ ಅದರಿಂದ ಏನೂ ಪ್ರಯೋಜನವಾಗಲಿಲ್ಲ. ನನ್ನ ಅಜ್ಜಿ, ತುಂಬ ಅಳುತ್ತಾಳೆ, ಶಾಲೆಗೆ ನಾಳೆ ಕರೆದುಕೊಂಡು ಹೋಗಪ್ಪ ಅಂತ ನಮ್ಮಪ್ಪಂಗೆ ಹೇಳಿದರೂ ಅಪ್ಪ ಕೇಳಲೇ ಇಲ್ಲ. ನನ್ನ ಕಿರುಚಾಟ ಮುಂದುವರೆಯುತ್ತಲೇ ಇತ್ತು.

ಅಲ್ಲಿಯೇ ನಿಂತಿದ್ದ ಶೇಕರನ ಹತ್ತಿರ, ಬುಟ್ಟಿ ತೆಗೆದುಕೊಂಡು ಬಾ ಅವಳನ್ನು ಬುಟ್ಟಿಯಲ್ಲಿ ತುಂಬಿಕೊಂಡು ಹೊತ್ತುಕೊಂಡು ಹೋಗುತ್ತೇನೆ ಅಂದರು ನಮ್ಮಪ್ಪ. ಆಗ ನಾನು ಅಲ್ಲಿಂದ ಎದ್ದು ಓಡಲು ಪ್ರಾರಂಭ ಮಾಡಿದೆ. ನನ್ನ ಅಟ್ಟಿಸಿಕೊಂಡು ಬಂದ ಅಪ್ಪನಿಗೆ ನಾನು ಸಿಗಲಿಲ್ಲ. ಓಡಿಹೋಗಿ ಬಚ್ಚಲು ಮನೆಯ ಬಾಗಿಲು ಹಾಕಿಕೊಂಡುಬಿಟ್ಟೆ. ತುಂಬಾ ಹೊತ್ತು ಅಲ್ಲೇ ಇದ್ದೆ. ಅಮ್ಮ ಹೊರಗಿನಿಂದ ನನ್ನ ಕರೆದು ಕರೆದು ಸುಸ್ತಾದಳು. ಬಚ್ಚಲು ಮನೆಯಲ್ಲೇ ನಿಂತಿದ್ದ ನನಗೂ ಕೂಡ ಅತ್ತೂ ಅತ್ತೂ ಸುಸ್ತಾಗಿತ್ತು. ನಿಧಾನವಾಗಿ ಬಾಗಿಲು ತೆಗೆದು ಅಡಿಗೆ ಮನೆಗೆ ಹೋಗಿ ಅಮ್ಮನನ್ನು ಅಪ್ಪಿಕೊಂಡೆ.

ಅಮ್ಮ ನನ್ನ ಎತ್ತಿಕೊಂಡು, ಸಮಾಧಾನ ಮಾಡಿ, ಶಾಲೆಗೆ ಹೋಗಲು ಧೈರ್ಯ ತುಂಬಿದಳು. ಕಣ್ಣೀರು ಒರೆಸಿ, ಮುಖ ತೊಳೆಸಿ ಸಿದ್ಧಗೊಳಿಸಿದಳು. ನನ್ನಪ್ಪ ನಗುತ್ತಾ ನಗತ್ತಾ ನನ್ನ ಬಳಿ ಬಂದು, ಮಧ್ಯಾಹ್ನದ ತನಕ ಶಾಲೆಯಲ್ಲಿರು, ಆ ನಂತರ ನಾನೇ ಬಂದು ನಿನ್ನ ಮನೆಗೆ ಕರೆತರುತ್ತೇನೆ ಎಂದು ಹೇಳಿ ನನ್ನ ಶಾಲೆಗೆ ಕರೆದುಕೊಂಡು ಹೋದರು.

ಶಾಲೆಗೆ ಹೋಗುವುದು ಅಂದ್ರೆ, ಅದೇನೋ ಕಳೆದುಕೊಂಡವರಂತೆ ಭಾಸವಾಗುತ್ತಿತ್ತು ನನಗೆ. ಶಾಲೆ ಸೇರಿದ ಮೇಲೆ, ಶಾಲೆಯ ಪ್ರೀತಿ ಬಂದಿತ್ತಾದರೂ, ನನ್ನ ಶಾಲೆಗೆ ಕಳಿಸುವಾಗ ನಮ್ಮಪ್ಪ ಅಮ್ಮಂಗೆ ಸಾಕುಬೇಕಾಗಿತ್ತು. ಅದೊಂದು ದೊಡ್ಡ ಪ್ರಹಸನವೇ ನಡೆದುಹೋಗಿತ್ತು.

ಅದನ್ನೆಲ್ಲ ನೆನಪಿಸಿಕೊಂಡ ನನಗೆ, ಬೆಂಗಳೂರೆಂಬ ಮಹಾ ನಗರಿಯಲ್ಲಿಯ ಪುಟ್ಟ ಪುಟ್ಟ ಮಕ್ಕಳು, ಹುಟ್‌ಹುಟ್ತಾನೇ ಶಾಲೆಗೆ ಹೋಗುತ್ತವೆ ಅಂದ್ರೆ, ನಂಬುವುದಕ್ಕೇ ಆಗುವುದಿಲ್ಲ. ನಾವು 6 ವರ್ಷ ವಯಸ್ಸಿನ ತನಕ ಅನುಭವಿಸಿದ ಆ ಖುಷಿ, ಆಟ, ಪಾಟ, ನಲಿವು ಈ ಮಕ್ಕಳಿಗೆ ಸಿಗುತ್ತಲೇ ಇಲ್ಲವಲ್ಲ.. ಅಂತ ಅನ್ನಿಸುತ್ತಿತ್ತು. ಏನೇನೂ ಗಲಾಟೆ ಮಾಡದೆ, ಅಮ್ಮ ಕೊಟ್ಟ ಟಿಫನ್‌ ಬಾಕ್ಸ್‌ಹಿಡಿದು, ಸ್ಕೂಲ್‌ಬ್ಯಾಗ್‌ಏರಿಸಿಕೊಂಡು, ಪಕ್ಕದಲ್ಲೇ ನಿಂತಿದ್ದ ನನಗೂ ಟಾಟಾ ಮಾಡಿ ಸ್ಕೂಲ್‌ಬಸ್‌ಹತ್ತಿಹೋದ ಆ 3 ವರ್ಷದ ಪುಟ್ಟಿಯ ಬಗ್ಗೆಯೇ ಯೋಚನೆ ಮಾಡ್ತಾ ಕಳೆದುಹೋದೆ..

ನೀನು ನಾನು

ಯಾಕೋ ನೀನು ಸುಮ್ಮನೆ ನೆನಪಾಗುತ್ತೀಯಾ...ಹಾಗೇ..ಮನದ ಪುಟದಲ್ಲಿ ಬಂದು ಹೋಗ್ತಿಯಾ...ಯಾವುದೋ ಮಾತು..ಇನ್ಯಾವುದೋ ಸನ್ನಿವೇಶ, ತಟ್ಟನೆ ನಿನ್ನ ನೆನಪು ಮಾಡುತ್ತೆ. ನೀನಾಡಿದ ಮಾತು, ನಸು ನಗುತ್ತಾ ನೀನು ನನ್ನ ಪ್ರಶ್ನೆಗೆ ಕೊಡುತ್ತಾ ಇದ್ದ ಉತ್ತರ, ಅದೆಲ್ಲ ಈಗಲೂ ನೆನಪಾಗುತ್ತೆ. ಮನಸ್ಸಿಗೆ ಎಷ್ಟು ಹತ್ತಿರ ಆಗಿದ್ದೆ ನೀನು. ಮೂರು ವರ್ಷ ಮೂರು ನಿಮಿಷದಂತೆ ಕಳೆದುಹೋಯ್ತು ಅಲ್ವಾ? ಸ್ನೇಹದ ಜೊತೆ ಜತೆಗೆ ನಮ್ಮೊಂದಿಗೆ ಹೆಸರಿಲ್ಲದ ಬಾಂಧವ್ಯ ನಮ್ಮಿಬ್ಬರನ್ನು ಮತ್ತಷ್ಟು ಹತ್ತಿರ ತಂದಿತ್ತು ಅಲ್ವಾ? ಒಬ್ಬರನ್ನೊಬ್ಬರು ಬಿಟ್ಟಿರದ ಆ ಸ್ನೇಹ ಬಾಂಧವ್ಯ ಹೊಸ ರೂಪ ಪಡೆದುಕೊಂಡಿದ್ದು, ಅದು ನಮ್ಮಿಬ್ಬರಿಗೂ ಗೊತ್ತಿದ್ದರೂ ಏನೂ ಗೊತ್ತಿಲ್ಲದಂತೆ ನಟಿಸುತ್ತಾ ಇದ್ವಿ ಅಲ್ವಾ...? ಏನು ಅಂದ್ರೆ ಇಬ್ಬರಿಗೂ ಗೊತ್ತಿರದ ಹೊಸ ನಂಟು ಬೆಸೆಯುತ್ತಾ ಇರೋದು ಇಬ್ಬರ ಅನುಭವಕ್ಕೂ ಬಂದಿತ್ತು ಅನ್ನೋದು. ನಾನು ಕಷ್ಟಪಟ್ಟು ಸುತ್ತಿ ಬಳಸಿ ಹೇಳಿದ ಎಷ್ಟೊಂದು ಮಾತುಗಲು...ಯಾವುದೂ ಅರ್ಥವೇ ಆಗಿಲ್ಲ ಅಂತಿದ್ದೆಯಲ್ಲ... ಎಂಥ ಚಾಲಾಕಿ ನೀನು..

ನಮ್ಮಿಬ್ಬರಿಗೂ ಅಂದು ಕಾಲೇಜಿನ ಕೊನೆಯ ದಿನ.. ಆ ಭಾವುಕ ಕ್ಷಣ ನೀನು ನೆನಪಾದಾಗಲೆಲ್ಲ ನೆನಪಾಗುತ್ತೆ ಕಣೇ... ಅಂದು ನೀನು, ತುಂಬಿದ ಕಣ್ಣುಗಳಲ್ಲಿ ನನ್ನ ಕೇಳಿದ ಪ್ರಶ್ನೆಗಳು ಇಂದಿಗೂ ನನ್ನ ಕಾಡುತ್ತವೆ. ಕಾಲೇಜು ಮುಗಿದ ಮೇಲೆ ನಾವು ಬೇರೆ ಬೇರೆ ಆಗುತ್ತೀವಾ..? ನಾನು ನೀನು ನಮ್ಮ ನಮ್ಮ ವಯಕ್ತಿಕ ಜೀವನದಲ್ಲಿ ಮುಳುಗಿ ಈಗಿರುವ ಬಾಂಧವ್ಯ ಕಳೆದುಕೊಂಡುಬಿಡ್ತೀವಾ..? ನಿನಗೆ ಹೊಸ ಗೆಳೆಯ ಗೆಳತಿಯರು ಸಿಕ್ಕಮೇಲೆ ನನ್ನ ಮರೆತುಬಿಡ್ತೀಯಾ..? ಅಂತ.. ಅದಕ್ಕೆ ನನ್ನ ಉತ್ತರ ಏನಿತ್ತು ಹೇಳು.. ಹಾಗೆಲ್ಲ ಆಗಲ್ಲ ಎಂಬ ಭಾವವಿದ್ದ ನನ್ನ ಕಣ್ಣಿನಲ್ಲಿ ಜಿನುಗಿದ ಭಾವುಕ ಕಣ್ಣೀರು. ನಾವಿಬ್ಬರು ಬೇರೆ ಆಗುತ್ತೀವಿ ಎಂಬ ಪರಿಸ್ಥಿತಿಯನ್ನು ಸುಮ್ಮನೇ ಕಲ್ಪಿಸಿಕೊಳ್ಳೋಕೂ ನನಗೆ ಸಾಧ್ಯವಿರದ ಸ್ಥಿತಿ ನಂದಾಗಿತ್ತು. ಕಣೇ..

ಹೌದು. ನಿಜ. ನೀನು ಹೇಳಿದಂತೆ ಇವತ್ತು ಬೇರೆ ಬೇರೆ ಆಗಿದ್ದೀವಿ. ನೀನು ನನಗೆ ಆ ಪ್ರಶ್ನೆಗಳನ್ನು ಕೇಳಿ ಈಗ ೫ ವರ್ಷಗಳು ಕಳೆದುಹೋಗಿವೆ. ಈಗ ನಾವಿಬ್ಬರೂ ಎಂದಿಗೂ ಭೇಟಿಯಾಗಲು ಸಾಧ್ಯವಿಲ್ಲದಷ್ಟು ದೂರಾಗಿಹೋಗಿದ್ದೀವಿ. ಅದಕ್ಕೆಲ್ಲ ಕಾರಣ ನಾನೇ ಎಂಬ ಭಾವ ನಿನ್ನದು ಅನ್ನೋದು ಕೂಡ ಗೊತ್ತಿದೆ ನನಗೆ. ಆದರೆ ನಿನ್ನ ಸ್ನೇಹವನ್ನು ಕಳೆದುಕೊಳ್ಳೋಕೆ ನನಗೂ ಮನಸ್ಸಿರಲಿಲ್ಲ. ನನ್ನ ಮನಸ್ಸು ನಾನು ನಿನ್ನಿಂದ ದೂರಾಗುವುದನ್ನು ಸಹಿಸುತ್ತಿರಲಿಲ್ಲ. ಆದರೆ, ಬುದ್ದಿ ಹೇಳಿದಂತೆ ಕೇಳಲೇಬೇಕಾದ ಅನಿವಾರ್ಯತೆ ಇತ್ತು ಕಣೇ.. ನಮ್ಮ ಸಂಬಂಧ ನೀನು ಹೇಳಿದಂತೆಯೇ ಇದ್ದಿದ್ದರೆ., ನಮ್ಮಿಬ್ಬರ ಮನೆಯಲ್ಲಿಯೂ ನಾವಿಬ್ಬರೂ ನಿಷ್ಟುರರಾಗಬೇಕಾಗಿತ್ತು. ನಮ್ಮನ್ನೇ ನಂಬಿಕೊಂಡಿದ್ದ ಆ ಹಿರಿ ಜೀವಗಳಿಗೆ ನೋವು ಕೊಡಬೇಕಾಗಿತ್ತು. ಸಂಪ್ರದಾಯ ಮೀರಿ ಸಮಾಜದ ರೀತಿ ನೀತಿ ಮೀರಿ ನಿನ್ನೊಂದಿಗೆ ಬರುವುದಕ್ಕೆ ನನ್ನ ಬುದ್ದಿ ಹಿಂಜರಿದಿತ್ತು. ಈ ಸತ್ಯವನ್ನು ನಿನಗೆ ನಾನು ಹೇಳಲು ಎಷ್ಟು ಕಷ್ಟಪಟ್ಟೆ ಅನ್ನೋದು ನನಗೇ ಗೊತ್ತು. ನಂತರ ಎಂಥ ನೋವು ಅನುಭವಿಸಿದ್ದೀನಿ ಗೊತ್ತಿದೆಯಾ..? ನಿನ್ನ ಸ್ನೇಹ ಮುರಿದುಕೊಂಡು ಒಂಟಿಯಾಗಿದ್ದಾಗ ನನ್ನ ಮನಸ್ಸು ಎಷ್ಟು ಚಡಪಡಿಸಿದೆ ಗೊತ್ತಾ? ಮನಸ್ಸು ಹಿಂಡಿ ಹಿಂಡಿ ಹಿಪ್ಪೆಯಾಗಿತ್ತು. ಇಡೀ ಜಗತ್ತೇ ನೋವಿನಲ್ಲಿ ಮುಳುಗಿದೆಯೇನೋ ಎಂಬಂತೆ ಭಾಸವಾಗುತ್ತಾ ಇತ್ತು. ನೋವಿನ ಭಾವ ತುಂಬಿದ ಸಂಗೀತ ಕೇಳುವುದೇ ನನ್ನ ಹವ್ಯಾಸವಾಗಿಹೋಗಿತ್ತು. ನೆಮ್ಮದಿಗಾಗಿ ಹಾತೊರೆಯುವ ಪಾಡು ನನ್ನದಾಗಿಹೋಗಿತ್ತು ಕಣೇ.. ಅವೆಲ್ಲ ನನ್ನ ಬದುಕಿನ ಅತೀ ಭಾವುಕ ದಿನಗಳು.. ಎಂದೆಂದಿಗೂ ಅನುಭವಿಸಿರದ ಅತ್ಯಂತ ನೋವಿನ ಕ್ಷಣಗಳನ್ನು ನಾನು ನೋಡಿಬಿಟ್ಟೆ.. ನಿನಗೂ ಇಷ್ಟೇ ನೋವಾಗಿತ್ತು ಅನ್ನೋದು ಗೊತ್ತಿತ್ತು ನನಗೆ.. ಆದರೆ, ನನ್ನ ಸ್ಥಿರ ನಿರ್ಧಾರ ಮಾತ್ರ ಬದಲಾಗಲೇ ಇಲ್ಲ.

ಈಗ ನಮ್ಮಿಬ್ಬರ ಬದುಕಿನಲ್ಲಿಯೂ ಹೊಸ ದಾರಿ ಕಂಡಿದೆ. ನಾವು ನಮ್ಮದೇ ದಾರಿಯಲ್ಲಿ ಖುಷಿಯಾಗಿದ್ದೇವೆ. ನಾವು ತೆಗೆದುಕೊಂಡಿದ್ದ ಆ ನಿರ್ಧಾರದಿಂದ ಯಾವ ನಷ್ಟವೂ ಆಗಿಲ್ಲ ಅಂತ ಇಬ್ಬರಿಗೂ ಅರಿವಾಗಿದೆ. ನಾವಿಬ್ಬರೂ ನಮ್ಮ ವಯಕ್ತಿಕ ಜೀವನದಲ್ಲಿ ಅತ್ಯಂತ ಸಂತಸದಿಂದ ಇದ್ದೀವಿ ಅನ್ನೋದು ವಾಸ್ತವ ಕೂಡ.

‘ನೀನು -ನಾನು’ ಇದು ಸುಂದರ ನೆನಪು ಕಣೇ... ಬದುಕಿಗೆ ಹೊಸ ರಂಗು ನೀಡಿದ ಮಧುರ ಒಡನಾಟ ಅದು. ನಿನ್ನ ನೆನಪು ಯಾವಾಗಲೂ ನನ್ನಲ್ಲಿ ಇರುತ್ತೆ. ಆ ಸುಂದರ ಸ್ನೇಹ, ಸ್ನೇಹವನ್ನೂ ಮೀರಿದ ಬಾಂಧವ್ಯ, ಹೆಸರೇ ಇಲ್ಲದ ಆ ನಂಟು... ಯಾವಾಗಲೂ ನನ್ನ ಮನಸಿನಲ್ಲಿ ಹಚ್ಚ ಹಸಿರಾಗಿಯೇ ಇರುತ್ತೆ.. ಅದು ಹಾಗೇಯೇ ಇರಲಿ ಅಲ್ವಾ..?

ಖುಷಿ ಎಂದೆಂದಿಗೂ ನಿನ್ನೊಂದಿಗೆ ಇರಲಿ ಅನ್ನೋದು ನನ್ನ ಹಾರೈಕೆ ಕಣೇ..

ಇಂತಿ
ನಿನ್ನವ
(ನಿನ್ನಿಂದ ದೂರಾದವ)

ದೇವರ ಮನೆಯ ತುಪ್ಪದ ದೀಪ

ದೇವರೇ ಎದೆಯಲ್ಲಿರುವ ಅದ್ಯಾವುದೋ ಭಾವ, ಮನಸ್ಸನ್ನು ಚುಚ್ಚಿ ಕಣ್ಣೀರು ತರುತ್ತಿದೆ... ಹಾಗಂತ ಆ ಭಾವದ ಅರ್ಥ ಗೊತ್ತಿಲ್ಲವೆಂದಲ್ಲ. ಅದಕ್ಕೊಂದು ಹೆಸರು ಕೊಡಲು ನನಗೆ ಸಾಧ್ಯವಾಗುತ್ತಿಲ್ಲ ಅಷ್ಟೆ.

ನಾನು ನನ್ನ ಮನಸ್ಸನ್ನು ಗಟ್ಟಿಗೊಳಿಸಿ, ವಾಸ್ತವಕ್ಕೆ ಹೊಂದಿಕೊಳ್ಳುತ್ತಿರುವ ಈ ಸಂದರ್ಭದಲ್ಲಿ....ಈ ಭಾವ ನನ್ನ ಕಾಡಬಾರದಿತ್ತು. ಈ ಭಾವಕ್ಕೇನು ಹೇಳಲಿ..? ನನ್ನವರು ನನಗೇ ಸೇರಬೇಕೆಂಬ ಆಕಾಂಕ್ಷೆ ಇದು. ನನ್ನ ಪ್ರೀತಿಗೆ ಪ್ರತಿಯಾಗಿ ಅಷ್ಟೇ ಪ್ರೀತಿ ಸಿಗಬೇಕೆಂಬ ಹಂಬಲ ಇದು. ನನ್ನ ಪ್ರೀತಿಗೆ ಯಾವುದೇ ಅಡತಡೆ ಇರಬಾರದು ಎಂಬ ನಿರೀಕ್ಷೆ ಇದು. ಭೂತಕಾಲದ ಪ್ರಭಾವ ವಾಸ್ತವದ ಮೇಲೆ ಏಕಿದೆ ಎಂಬ ಘಾಡ ಪ್ರಶ್ನೆ ನನ್ನದು. ವಾಸ್ತವದ ಪ್ರೀತಿಯೆದುರು ಮುರಿದುಬಿದ್ದ ಆ ಭೂತಕಾಲದ ಪ್ರೀತಿಯ ಜೊತೆ ಮತ್ತೆ ಸಂಬಂಧ ಕುದುರಿಸುವ ಅವನ ಬಯಕೆಗೆ ಇರುವ ವಿರೋಧವಿದು. ಈ ಭಾವಕ್ಕೇನು ಹೆಸರು ಕೊಡಲಿ..?

ನನ್ನ ಪ್ರೀತಿಯಲ್ಲೇನಾದರೂ ಮೋಸವಿದೆಯಾ ...? ಅಥವಾ ಕೊರತೆ ಇದೆಯಾ? ಬೇಡವೆಂದು ಬಿಟ್ಟು ಹೊಸದೊಂದು ಸಂಬಂಧ ಕಟ್ಟಿಕೊಂಡ ಮೇಲೆ ಮತ್ತೆ ಹಿಂದುರಿಗಿ ನೋಡುವ ಅವನ ಮನಸ್ಸಿಗೆ ನನ್ನ ಧಿಕ್ಕಾರವಿದೆ. ಬದುಕಿನಲ್ಲಿಯ ಆಸೆಯೇ ಬತ್ತಿಹೋಗಿದ್ದ ಸಮಯದಲ್ಲಿ, ಅಭಿಲಾಶೆಯ ಚಿಲುಮೆಯೊಡೆದು ನಿರೀಕ್ಷೆಗಳ ದಾರಿ ತೋರಿದ ಹೊಂಬೆಳಕಿನಂತೆ ಅವನು. ಮನಸಿನಾಗಸದಲ್ಲಿ ಜೀವನ ಪ್ರೀತಿ ಎಂಬ ಸೂರ್ಯ ಉದಯಿಸಲು ಕಾರಣಕರ್ತನೇ ಅವನು. ದಯವಿಟ್ಟು ಅವನನ್ನು ಕಸಿದುಕೊಳ್ಳಬೇಡ ದೇವರೇ... ಎಂದು ಎಷ್ಟೋ ಹೊತ್ತಿನ ವರೆಗೆ ದೇವರನ್ನೇ ದಿಟ್ಟಿಸುತ್ತಾ ಮನಸಿನಲ್ಲಿಯೇ ದೇವರ ಜೊತೆ ಮಾತನಾಡುತ್ತಿರುವ ಅವಳು...ಎಲ್ಲೋ ಕಳೆದು ಹೋಗಿದ್ದಾಳೆ.. ಅಷ್ಟರಲ್ಲಿಯೇ ಮೊಬೈಲ್‌ ರಿಂಗಾಗಿದ್ದು ಕೇಳಿ ಅಲ್ಲಿಂದೆದ್ದು ಹೊರಟವಳಿಗೆ ಕೇಳಿದ್ದು ಮನೆಯ ಕಾಲಿಂಗ್ ಬೆಲ್‌. ಓಡೋಡಿ ಹೋಗಿ ಮನೆಯ ಬಾಗಿಲು ತೆರೆದಾಗ ಎದುರಿಗಿದ್ದವ ಅವಳ ಪ್ರೀತಿಯ ಗಂಡ. ಇಷ್ಟು ಬೇಗ ಆಫೀಸಿನಿಂದ ಬಂದಿರಾ ಎಂಬಂತೆ ಪ್ರಶ್ನಿಸುತ್ತಿದ್ದ ಅವಳ ಆಶ್ಚರ್ಯದ ಮುಖಭಾವಕ್ಕೆ ಸಿಕ್ಕಿದ್ದು, ಹೌದು ನಿನಗೋಸ್ಕರ ಬೇಗ ಬಂದೆ ಎಂಬ ಉತ್ತರ.

ನನ್ನೊಂದಿಗೆ ಇಷ್ಟು ಪ್ರೀತಿಯಿಂದ ಇರುವ ಈತ ಹಳೆಯ ಪ್ರೀತಿಯನ್ನೂ ಯಾಕೆ ನೆನಪಿಸಿಕೊಳ್ಳುತ್ತಾನೋ...? ಎಂಬ ನೋವಿನ ಪ್ರಶ್ನೆ ಮನಸ್ಸಿನಲ್ಲಿಯೇ ಉಳಿದು ಹೋಯಿತು.ಅವನು ನನ್ನಮೇಲಿಟ್ಟಿರುವ ಪ್ರೀತಿ ನಿಷ್ಕಲ್ಮಶ, ಆದರೆ, ಅವಳ ಜೊತೆಯಲ್ಲಿಯೂ ಒಡನಾಟವಿದೆ.. ಇದನ್ನು ಹೇಗೆ ಸಹಿಸಿಕೊಳ್ಳಲಿ... ಇವತ್ತು ಏನೇ ಆಗಲಿ ಈ ವಿಷಯ ಆತನಲ್ಲಿ ಚರ್ಚಿಸಲೇ ಬೇಕು.. ಎಂಬ ಧೃಢ ನಿರ್ಧಾರ ಅವಳ ಮನಸ್ಸಿನಲ್ಲಿ.

ಹೆಂಡತಿಯ ಯೋಚನೆ ಮೊದಲೇ ತನಗೆ ತಿಳಿದಿರುವಂತೆ... ಚಿಂತಿಸಬೇಡ ಚಿನ್ನ... ಎಲ್ಲ ನೀನಂದುಕೊಂಡಂತೆಯೇ ಆಗುತ್ತಿದೆ... ಎಂಬ ನಸು ನಗುವಿನೊಂದಿಗೆ ಬಂದ ಆತನ ಮಾತು. ಅನಿರೀಕ್ಷಿತವಾಗಿ ಬಂತ ಉತ್ತರದಿಂದ ಅತ್ಯಂತ ಆಶ್ಚರ್ಯಗೊಂಡು ಆತನನ್ನೇ ದಿಟ್ಟಿಸಿ, ಏನೋ ಮಾತನಾಡಲು ಹೊರಟವಳಿಗೆ ಮತ್ತೆ ಕೇಳಿದ್ದು, ಮನೆಯ ಕಾಲಿಂಗ್‌ ಬೆಲ್‌. ತನ್ನ ಮಾತನ್ನು ಅಲ್ಲಿಗೆ ನಿಲ್ಲಿಸಿ ಬಾಗಿಲು ತೆರೆಯಲು ಎದ್ದವಳ ತಡೆಯದೇ ಶಾಂತನಾಗಿ ಕುಳಿತಿದ್ದ ಅವನು.

ಮನೆಯ ಬಾಗಿಲು ತೆರೆದಾಗ ಕಂಡವರು ಒಬ್ಬ ಹುಡುಗಿ ಮತ್ತು ಮಧ್ಯವಯಸ್ಕ ಹೆಣ್ಣು. ಅಪರಿಚಿತರಾದ ಅವರನ್ನು ಏನೂ ಪ್ರಶ್ನೆ ಮಾಡದೆ ಅವರಿಗೆ ಇವಳು ನೀಡಿದ್ದು ನಗುವಿನ ಆಹ್ವಾನ. ಅವರಿಬ್ಬರೂ ಮನೆಯೊಳಗೆ ಪ್ರವೇಶ ಮಾಡುತ್ತಿದ್ದಂತೆ ಎದ್ದು ಬಂದ ಆತನಿಂದಲೇ ಇವಳಿಗೆ ಸಿಕ್ಕಿದ್ದು ಅಪರಿಚಿತರ ಪರಿಚಯ. ಎಲ್ಲೋ ನೋಡಿದಂತಿರುವ ಈ ಹುಡುಗಿ ಯಾರು ಎಂಬುದು ಈ ಸ್ಪಷ್ಟವಾಯಿತು. ಇವಳೇ ಅವಳು ಎಂದು.
ತನ್ನ ಮದುವೆಗೆ ಆಹ್ವಾನ ಪತ್ರಿಕೆ ನೀಡಲು ತನ್ನ ತಾಯಿಯೊಂದಿಗೆ ಬಂದಿದ್ದ ಹುಡುಗಿಗೆ ಅರಿಶಿನ ಕುಂಕುಮ ಕೊಟ್ಟು, ಶುಭಹಾರೈಸಿದಳು. ಮನೆಯಲ್ಲಿದ್ದ ಸಿಹಿ ತಿನಿಸು ನೀಡಿ ಪುರಸ್ಕರಿಸಿದಳು. ಥೇಟ್‌ ತನ್ನ ಅಮ್ಮನಂತೆ ಭಾಸವಾದ ಹುಡುಗಿಯ ಅಮ್ಮನ ಮೃದು ಸ್ವಭಾವ ಅವಳಿಗೂ. ನಗುನಗುತ್ತಲೇ ತನ್ನೊಂದಿಗೆ ಬೆರೆತ ಅವರಿಬ್ಬರೂ ಇವಳಿಗೆ ಇಷ್ಟವಾದರು.

ಮುಂದಿನ ತಿಂಗಳವೇ ನನ್ನ ಮದುವೆ. ನೀವಿಬ್ಬರೂ ನನ್ನ ಮದುವೆಗೆ ಬರಲೇ ಬೇಕು ಎಂದು ಆಹ್ವಾನಿಸಿದ ಆ ಹುಡುಗಿ ಪರ ದೇಶದಲ್ಲಿರುವ ಗಂಡನ ಫೋಟೋ ತೋರಿಸಿದಳು. ತುಂಬಾ ಮುದ್ದಾದ ಜೋಡಿ ಅದು. ಮದುವೆಗೆ ಬಂದೇ ಬರುತ್ತೇವೆ ಎಂದ ಆತ ಮತ್ತು ಅವಳ ಭರವಸೆಯೊಂದಿಗೆ ತಾಯಿ, ಮಗಳು ಹೊರಟರು.

‘ನಿನ್ನ ನಾನು ತುಂಬಾ ಪ್ರೀತಿಸುತ್ತೇನೆ’, ನಿನ್ನಿಂದ ಎಂದಿಗೂ ದೂರಾಗುವುದಿಲ್ಲ ಎಂಬ ವಿಚಾರವನ್ನು ಈಗ ಸಂಪೂರ್ಣ ಒಪ್ಪುತ್ತೀಯಾ? ಎಂಬ ಆತನ ಪ್ರಶ್ನೆಗೆ ಅವಳ ಸಂತಸದ ಕಣ್ಣೀರು ಉತ್ತರಿಸಿತು. ನಿನ್ನಂತ ಸರಳ, ಸಾಧು ಮನಸ್ಸಿನ ಹುಡುಗಿ ನನಗೆ ಸಿಕ್ಕಿದ್ದು ನನ್ನ ಪುಣ್ಯ, ನೀನೇ ನನಗೆ ಎಲ್ಲ. ಎಂಬ ಗಂಡನ ಮಾತು, ಮನಸ್ಸಿನಲ್ಲಿ ಗುಡ್ಡದಂತೆ ಕೂತಿದ್ದ ಎಲ್ಲ ನೋವುಗಳನ್ನು ಬೆಣ್ಣೆಯಂತೆ ಕರಗಿಸಿಬಿಟ್ಟಿತ್ತು....

ಸಂತಸದಿಂದ ದೇವರ ಮನೆಗೆ ಓಡಿದ ಅವಳನ್ನು ಹಿಂಬಾಲಿಸಿಕೊಂಡು ಬಂದ ಆತನಿಗೆ ಕಂಡಿದ್ದು, ತನ್ನ ಹೆಂಡತಿ ಸಂತಸದಿಂದ ಬೆಳಗುತ್ತಿದ್ದ ‘ದೇವರ ಮನೆಯ ತುಪ್ಪದ ದೀಪ’.

“ಕ್ಯಾನ್ಸರ್‌”

  ಕಟ-ಕಟ ಕಟ-ಕಟ ಶಬ್ಧ ಲಯದಂತೆ ಕಿವಿಗೆ ಅಪ್ಪಳಿಸುತ್ತಾ ಅಪ್ಪಳಿಸುತ್ತಾ, ಕಣ್ಣು ಎಳೆದಂತಾಗಿ ನಿದ್ದೆಯ ಮಂಪರಿನಲ್ಲಿದ್ದಾಗಲೇ, ಮೇಲಿನ ಸೀಟ್‌ಮೇಲೆ ಇಟ್ಟಿದ್ದ ಬ್ಯಾಗ್‌ ಒಂದು...