Saturday, 22 March 2025

“ಕ್ಯಾನ್ಸರ್‌”

 

ಕಟ-ಕಟ ಕಟ-ಕಟ ಶಬ್ಧ ಲಯದಂತೆ ಕಿವಿಗೆ ಅಪ್ಪಳಿಸುತ್ತಾ ಅಪ್ಪಳಿಸುತ್ತಾ, ಕಣ್ಣು ಎಳೆದಂತಾಗಿ ನಿದ್ದೆಯ ಮಂಪರಿನಲ್ಲಿದ್ದಾಗಲೇ, ಮೇಲಿನ ಸೀಟ್‌ಮೇಲೆ ಇಟ್ಟಿದ್ದ ಬ್ಯಾಗ್‌ ಒಂದು ದೊಪ್ಪನೇ ಕೆಳಗೆ ಅಪ್ಪಳಿಸಿತ್ತು. ಅದೃಷ್ಟವಶಾತ್‌ ಇವಳ ಕಾಲಿಗೆ ತಗುಲದೇ, ಎರಡೇ ಎರಡು ಅಂಗುಲ ದೂರ ಬಿತ್ತು. ಬೆಚ್ಚಿ ಎಚ್ಚೆತ್ತು, ಗಡಬಡಾಯಿಸಿ ಕಾಲೆಳೆದು ಕೂತಾಗಲೇ ಅವಳಿಗೆ ಗೊತ್ತಾಗಿದ್ದು, ಇಲ್ಲೇನು ನಡೆಯಿತು ಎಂದು. “ಅಯ್ಯಯ್ಯೋ  ಸಾರಿ, ಮೇಡಮ್‌. ನಿಮ್ಮ ಕಾಲಿಗೇನಾದೂ ತಾಗಿತಾ? ರೈಲಿನ ಈ ಒಂದೇ ಲಯದ ಅದುರಾಟಕ್ಕೆ ಮೇಲಿಟ್ಟ ಬ್ಯಾಗು ಕೆಳಗೆ ಬಿದ್ದುಬಿಡ್ತು” ಮತ್ತೆ ಮತ್ತೆ ಕ್ಷಮೆ ಕೇಳುತ್ತಿದ್ದ ಆತನನ್ನು ಆಗಲೇ ಈಕೆ ನೋಡಿದ್ದು. 

ನುಣ್ಣಗೆ ಬೋಳಿಸಿಕೊಂಡ  ತಲೆಗೊಂದು ಕಪ್ಪು ಬಣ್ಣದ ಟೊಪ್ಪಿ ಹಾಕಿಕೊಂಡು, ಫಾರ್ಮ್‌ಲ್‌ ಶರ್ಟ್‌ , ಪ್ಯಾಂಟ್‌ ಧರಿಸಿದ್ದ. ನೋಡೋಕೆ ಸಭ್ಯಸ್ತನಂತೆ ಕಾಣುತ್ತಿದ್ದ ಆತ, ಥಟ್ಟನೆ ಕನ್ನಡದಲ್ಲಿಯೇ ಮಾತನಾಡಿದ್ದನ್ನು ಕೇಳಿ, ಈಕೆಗೆ ಅದೇನೋ ಸಮಾಧಾನವಾಗಿ, “ಇಲ್ಲ ಸರ್‌, ಏನೂ ಆಗಿಲ್ಲ. ಬ್ಯಾಗ್‌ ಸಡನ್‌ ಆಗಿ ಬಿದ್‌ಬಿಡ್ತಲ್ಲಾ, ಸೋ ಐ ಗಾಟ್‌ ಸ್ಕೇರ್ಡ್‌ ಅಷ್ಟೆ. ನಂಗೇನೂ ಆಗಿಲ್ಲ, ಡೋಂಟ್‌ ವರಿ” ಎಂದಳು ಸೌಜನ್ಯಯುತಳಾಗಿ.  ಆತ ಸ್ವಲ್ಪ ಒತ್ತಡದಲ್ಲಿಯೇ ನಕ್ಕ. ಅವಳ ಮುಂದಿನ ಸೀಟ್‌ನಲ್ಲಿ ಕುಳಿತು, ತನ್ನ ಬ್ಯಾಗ್‌ನಲ್ಲಿದ್ದ ನೀರಿನ ಬಾಟಲಿ ತೆಗೆದು ಗಟಗಟನೇ ನೀರು ಕುಡಿದ. ಮತ್ತೇನೂ ಮಾತನಾಡದೇ, ಒಂದೇ ಹದದಲ್ಲಿ ಓಡುತ್ತಿದ್ದ ಮರಗಿಡಗಳನ್ನು, ಮನೆಗಳನ್ನು ನೋಡುತ್ತಾ ಕೂತಿದ್ದ.

ಅಷ್ಟರಲ್ಲಿ ಆತನ ಫೋನ್‌ ರಿಂಗಾಗತೊಡಗಿತು. ಕಾಲ್‌ ರಿಸೀವ್‌ಮಾಡಿ ಮಾತನಾಡಿದ. ಅವನ ಮಗಳೋ, ಮಗನೋ ಫೋನ್‌ ಮಾಡಿರಬಹುದು. “ಬೆಳಗ್ಗೆ ೧೧ ಕ್ಕೆ ವಾರಣಾಸಿ ಬಿಟ್ಟಿದೀನಿ ಪುಟ್ಟಾ, ಅಮ್ಮಂಗೂ ಹೇಳು. ರಾತ್ರಿ ೧೧ ಗಂಟೆ ಒಳಗೆ ಡೆಲ್ಹಿ ತಲುಪ್ತೀನಿ. ಬೆಳಗ್ಗೆ ಅರ್ಲಿ ಮಾರ್ನಿಂಗ್‌ ಬೆಂಗ್ಳೂರಿಗೆ ಫ್ಲೈಟ್‌ ಇದೆ. ಸೋ ಮಾರ್ನಿಂಗ್‌ ತಿಂಡಿ ತಿನ್ನೋಕೆ ಮನೆಗೇ ಬರ್ತೀನಿ ಆಯ್ತಾ..? ಓಕೆ ಕಂದಾ ಬಾಯ್‌ ಅಂದು ಫೋನ್‌ ಇಟ್ಟ.

ಇವರದೇ ಬೋಗಿಯಲ್ಲಿದ್ದ ಇತರರೆಲ್ಲ, ಅವರವರದೇ ಭಾಷೆಯಲ್ಲಿ ಮಾತನಾಡುತ್ತಾ, ನಗುತ್ತಾ ಕಾಲಕಳೆಯುತ್ತಿದ್ದರು. ಯಾಕೋ, ಇವಳಿಗೆ ಅವರೆಲ್ಲರೊಂದಿಗೆ ಸೇರಿಕೊಂಡು ಹಿಂದಿಯಲ್ಲೋ, ಇಂಗ್ಲೀಷ್‌ನಲ್ಲೋ ಹರಟಲು ಉದಾಸೀನವೆನಿಸಿತೋ ಏನೋ.  ಮತ್ತೆ ಕಣ್ಮುಚ್ಚಿದಳು, ನಿದ್ದೆ ಮತ್ತೆ ಎಳೆಯಲೇ ಇಲ್ಲ. ಆದರೆ, ಅವಳೆದುರೇ ಕೂತಿದ್ದ ಈ ಕನ್ನಡಿಗ, ಅದ್ಯಾವುದೋ ವೇದನೆಯಲ್ಲಿದ್ದಂತೆ ಕಾಣಿಸಿತು. ಬಿಟ್ಟ ಕಣ್ಣು ಬಿಟ್ಟಂತೆ ಯೋಚನೆಯಲ್ಲಿದ್ದ ಆತನನ್ನು  ಸ್ವಲ್ಪ ಹೊತ್ತು ಗಮನಿಸಿದ ಈಕೆ ತಾನೇ ಮಾತು ಶುರು ಮಾಡಿದಳು.  ʼಸರ್‌ನೀವು ವಾರಣಾಸಿಗೆ ಬಂದಿದ್ರಾ ?”  “ಹೌದು ಮೇಡಮ್‌” ಚುಟುಕು ಉತ್ತರ ನೀಡಿ, ಸುಮ್ಮನಾದ.  ಆತ ಭಾವುಕನಾದಂತೆ ಕಾಣಿಸಿತು.  ಸ್ವಲ್ಪ ಹೊತ್ತು ಬಿಟ್ಟು ಆತನೇ  ಮಾತನಾಡಿದ. “ ನೀವು..?”   “ ನಾನು, ನನ್ನ ತಂದೆಯ ಕೊನೆಯ ಕ್ರಿಯಾಕರ್ಮ ಮಾಡೋಕೆ ಅಂತ ಬಂದಿದ್ದೆ.  ಅವಳ ಉತ್ತರ ಕೇಳಿ ಮಾತು ಮುಂದುವರೆಸಿದ.  “ ನನ್ನದೂ ಅದೇ ಉದ್ದೇಶ. ನನ್ನ ತಾಯಿಯ ಚಿತಾಭಸ್ಮ, ಅಸ್ತಿಯನ್ನು ಗಂಗೆಯಲ್ಲಿ ತೇಲಿಬಿಟ್ಟು ಆಕೆಯ ಕೊನೆಯ ಆಸೆಯನ್ನ ಈಡೇರಿಸಿ ಬಂದಿದ್ದಾಯ್ತು.” ಭಾವುಕತೆ ಅವನಲ್ಲಿ ಕಣ್ಣೀರು ತರಿಸಿತ್ತು.  ಅವನ ಸಂಕಟ ನೋಡಿ ಇವಳ ಕಣ್ಗಳೂ ಒದ್ದೆಯಾದವು.

“ನಾವಿಬ್ಬರೂ ಒಂದೇ ದುಃಖ ಅನುಭವಿಸ್ತಾ ಇದ್ದೀವಿ ಸರ್‌... ಸಮಾಧಾನ ಮಾಡ್ಕೊಳಿ.  ನೀವು ನಿಮ್ಮ ತಾಯಿಯನ್ನು ತುಂಬಾ ಹಚ್ಕೊಂಡಿದ್ರಿ ಅನ್ಸುತ್ತೆ. ಏನಾಗಿತ್ತು ಅಮ್ಮಂಗೆ ? “ಅವಳು ಕೇಳಿದ ತಕ್ಷಣ ಶುರುಮಾಡಿಬಿಡುವಂಥ ಚಿಕ್ಕ ಕಥೆಯೇನಲ್ಲ ಅದು, ಒಂದಿಪ್ಪತ್ತು ಸೆಕೆಂಡ್ ಆಲೋಚಿಸಿ ಇನ್ನೇನು ತನ್ನೊಳಗಿನ ದುಃಖದ ಮೂಟೆಯ ಗಂಟನ್ನು ಒಂದೊಂದಾಗಿ ಬಿಚ್ಚಬೇಕು ಎಂಬಷ್ಟರಲ್ಲಿ,  ಟೀ, ಕಾಫೀ.. ಎನ್ನುತ್ತಾ ಒಬ್ಬಾತ ಬಂದೇಬಿಟ್ಟ. ಅದಕ್ಕಾಗಿಯೇ ಕಾಯುತ್ತಿದ್ದೇವೆ ಎಂಬ ರೀತಿಯಲ್ಲಿ, ಇಬ್ಬರೂ ಅವನತ್ತ ನೋಡಿದರು. ಗರಮಾಗರಮ್‌ ಟೀ ಪಡೆದ ಆಕೆ, ಆತನ ಅಂಬೋಣದಂತೆ ಅವನಿಗಾಗಿಯೂ ಕಾಫಿ ಪಡೆದು,  ಟೀವಾಲಾನಲಿಗೆ ಫೋನ್‌ಪೇ ಮಾಡಿದಳು. ಬಿಸಿ ಬಿಸಿ ಕಾಫಿ ಅವನ ನೋವಿಗೆ ಸ್ವಲ್ಪ ಆಧಾರ ನೀಡಿತು.  ದೂರದ ಊರಲ್ಲಿದ್ದ ಕನ್ನಡಿಗರಲ್ಲವೇ, ಅಪರಿಚಿತರಾದರೂ ಕನ್ನಡವೇ ಅವರಲ್ಲೊಂದು ಆಪ್ತತೆಯನ್ನು ಹುಟ್ಟಿಸಿಬಿಡುತ್ತದೆ.  ತನ್ನ ನೋವನ್ನು ಸ್ವಲ್ಪ ಶಮನ ಮಾಡಿಕೊಳ್ಳಲು ಹೊರಟವರಂತೆ ಮಾತಿಗಿಳಿದ.  

“ನನ್ನ ಅಮ್ಮ ಗಟ್ಟಿಗಿತ್ತಿ. ನಾನು ನನ್ನ ತಂಗಿ ತುಂಬಾ ಚಿಕ್ಕವರಿರುವಾಗ್ಲೇ ಅಪ್ಪ ತೀರಿಹೋಗಿದ್ದರಿಂದ, ನಮ್ಮ ಜತೆ ನಮ್ಮ ಅಜ್ಜಿ ಅಂದರೆ ಅವಳ ಅತ್ತೆಯನ್ನೂ ನೋಡಿಕೊಳ್ಳುವ ಜವಾಬ್ದಾರಿ ಅವಳೊಬ್ಬಳೇ ಹೊರಬೇಕಾಯ್ತು. ನಮ್ಮಿಬ್ಬರನ್ನು ಓದಿಸುತ್ತಾ, ಅಜ್ಜಿಯ ಆರೈಕೆ ಮಾಡ್ತಾ ಕೆಲಸಕ್ಕೂ ಹೋಗ್ತಾ  ಇದ್ದಳು. ಆಗಿನ ಕಾಲದಲ್ಲಿಯೇ ಪಿ.ಯೂ.ಸಿ ಓದಿಕೊಂಡಿದ್ದ ಅಮ್ಮ, ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡಿದಳು. ಶಾಲೆಗೆ ರಜೆ ಇದ್ದಾಗ, ಮನೆಯಲ್ಲಿ ಸಾಂಬಾರ್‌ ಪುಡಿ, ಚಟ್ನಿಪುಡಿ ಮಾಡಿ ಮಾರುತ್ತಿದ್ದಳು. ಅದೆಷ್ಟೋ ಕಷ್ಟಪಟ್ಟು, ನಮ್ಮಿಬ್ಬರನ್ನೂ ಓದಿಸಿದಳು, ಮದುವೆ ಮಾಡಿದಳು, ಇರೋತನಕ ಸ್ನೇಹಿತೆ ಥರ ಇದ್ಲು”

ಅಮ್ಮನ ನೆನಪಲ್ಲೇ ಮುಳುಗಿದ ಆತನ ಕಣ್ಣುಗಳು ತುಂಬಿ ತುಂಬಿ ಬರುತ್ತಿದ್ದವು.  ಮಧ್ಯದಲ್ಲಿ ಪ್ರಶ್ನೆ ಕೆಳುವುದೇ ಬೇಡ. ದುಃಖವೆಲ್ಲ ಕಣ್ಣೀರಾಗಿ ಹರಿದುಹೋಗಲಿ ಅಂತ ಅನ್ನಿಸಿರಬಹುದು ಅವಳಿಗೆ. ಸುಮ್ಮನೆ ಕೇಳಿಸಿಕೊಳ್ಳುತ್ತಿದ್ದಳು.  ಅವನು ಅಮ್ಮನ ಕಥೆಯನ್ನ ಹೇಳುತ್ತಲೇ ಇದ್ದ.  “ ಶಿಕ್ಷಕಿಯಾಗಿ ಕೆಲಸ ಮಾಡಿದ್ದಕ್ಕೋ ಏನೋ, ಅತೀವ ಓದಿನ ಹುಚ್ಚು. ಮನೆ ತುಂಬ ಪುಸ್ತಕ ತುಂಬಿಕೊಂಡಿದ್ದಳು. ಮೊದಲೆಲ್ಲ ಕಥೆ,ಕಾದಂಬರಿ ಓದ್ತಾ ಇದ್ದ ಅಮ್ಮ, ಅಮೇಲಾಮೇಲೆ ಅ‍ಧ್ಯಾತ್ಮದ ಪುಸ್ತಕಗಳನ್ನು ಓದಲು ಶುರುಮಾಡಿದ್ದಳು. ನಿವೃತ್ತಿಯ ನಂತರವಂತೂ, ಯೋಗ, ಧ್ಯಾನ, ಸತ್ಸಂಗದಲ್ಲಿ ಅವಳಿಗೆ ಮತ್ತಷ್ಟು ಆಸಕ್ತಿ ಹುಟ್ಟಿತ್ತು.  ನಮ್ಮ ಅಪಾರ್ಟ್‌ಮೆಂಟ್‌ನ ಅದೆಷ್ಟೋ ಮಕ್ಕಳಿಗೆ ಶ್ಲೋಕ ಹೇಳಿಕೊಡ್ತಾ, ಮಕ್ಕಳೊಂದಿಗೆ ಮಕ್ಕಳಾಗುತ್ತಿದ್ದಳು. ಟೀಚರ್‌ ಅಜ್ಜಿ ಅಂತಾನೇ ಫೇಮಸ್‌ ಆಗಿದ್ಲು ನಮ್ಮಮ್ಮ. ೭೫ ವರ್ಷ ಆದ್ರೂ ೨೫ರ ಉತ್ಸಾಹ ಅವಳಲ್ಲಿತ್ತು. ಜೀವನ ಪ್ರೀತಿಗೆ ಇನ್ನೊಂದು ಹೆಸರು ಅನ್ನೋ ಥರ ಬದುಕಿದೋಳು ಅವಳು.”  ತನ್ನ ಫೋನಿನ ಲಾಕ್‌ ಸ್ಕ್ರೀನ್‌ನಲ್ಲಿದ್ದ ಅಮ್ಮನ ಫೋಟೋ ನೋಡತೊಡಗಿದ.  

ಇವಳೂ ಬಾಗಿ ಅವನಮ್ಮನ ಫೋಟೋ ನೋಡಿದಳು. ನೀಳ ಮೂಗಿನ ಲಕ್ಷಣ ಮುಖ. ದೇವತೆಯ ತೇಜಸ್ಸುಳ್ಳ ಅಮ್ಮ ನಸು ನಗುತ್ತಿದ್ದರು.  ಆತ ಮುಂದುವರೆಸಿದ “ ಹೀಗೆ ತನ್ನದೇ ಲೋಕದಲ್ಲಿ ಖುಷಿಯಾಗಿದ್ದ ನನ್ನಮ್ಮನ ಹೊಟ್ಟೆಯೊಳಗೆ ಅವಳಿಗೇ ತಿಳಿಯದಂತೆ, ಕ್ಯಾನ್ಸರ್‌ ಗಡ್ಡೆಯೊಂದು ಬೆಳೆದುಬಿಟ್ಟಿತ್ತು ಮೇಡಮ್‌. ಎರಡು ವರ್ಷಗಳ ಹಿಂದೆ,  ಆಸಿಡಿಟಿ ಆಗ್ತಿದೆ, ಹೊಟ್ಟೆ ಉಬ್ಬರಿಸ್ತಿದೆ ಅನ್ನೋಕೆ ಶುರು ಮಾಡಿದ್ಲು. ಡಾಕ್ಟರ್‌ ಹತ್ರ ಹೋಗ್ಬಂದ್ವಿ. ಆಸಿಡಿಟಿಗೆ ಮೆಡಿಸಿನ್‌ ಕೊಟ್ರು. ಬರ್ತಾ ಬರ್ತಾ ಊಟ-ತಿಂಡಿ ಕಡಿಮೆ ಮಾಡಿದ್ಲು.  ಈ ಪ್ರಾಬ್ಲಮ್‌ ಜಾಸ್ತಿಯಾಗ್ತಾ ಇದ್ದಂಗೆ, ನಮ್ಮ ಫ್ಯಾಮಿಲಿ ಡಾಕ್ಟರ್‌ ಎಮ್‌.ಆರ್‌.ಐ ಮಾಡ್ಸೋಣ ಅಂದ್ರು, ಆಗ್ಲೇ ಗೊತ್ತಾಗಿದ್ದು ಅಮ್ಮನ ಜಠರದೊಳಗೆ ಗಡ್ಡೆಯಾಗಿದೆ ಅಂತ. ಬಯಾಪ್ಸಿ ರಿಪೋರ್ಟ್‌ ಬಂದಿದ್ದೇ ನಾವೆಲ್ಲ ಶಾಕ್‌ ಆಗಿಹೋದ್ವಿ. ಅಮ್ಮನಿಗಾಗಿದ್ದು ಕ್ಯಾನ್ಸರ್‌ ಅನ್ನೋದು ಖಚಿತವಾಗಿಹೋಗಿತ್ತು”   ಇಷ್ಟು ಹೇಳಿ ಉಕ್ಕುತ್ತಿದ್ದ ದುಃಖವನ್ನು ಒತ್ತಿಹಿಡಿದು ಕುಳಿತಲ್ಲಿಂದ ಎದ್ದು ಹೋದ. 

“ಈತನ ಅಮ್ಮ ಮಕ್ಕಳನ್ನು ತುಂಬು ಪ್ರೀತಿಯಿಂದ ಬೆಳೆಸಿದ್ದಳು ಅನ್ಸುತ್ತೆ. ನಾನೂ ತಂದೆಯನ್ನು ಕಳೆದುಕೊಂಡವಳು. ಈತನ ಅಮ್ಮ ತೀರಿ ಹೋದಾಗಲೇ ನನ್ನ ತಂದೆಯೂ ಹೋಗಿದ್ದಾರೆ.  ಆದರೂ, ನಾನೇಕೆ ಅವನಷ್ಟು ಭಾವುಕಳಾಗಿಲ್ಲ..?”  ಅವಳು ತನ್ನೊಳಗೇ ಯೋಚಿಸತೊಡಗಿದಳು.

 ಅಷ್ಟರಲ್ಲಿ ಆತ ಮರಳಿ ಬಂದು ಮತ್ತದೇ ಜಾಗದಲ್ಲಿ ಕುಳಿತ. ಮುಖ ಪೂರ್ತಿ ಒದ್ದೆಯಾಗಿತ್ತು. ಅತ್ತು ಮುಖ ತೊಳೆದುಕೊಂಡು ಬಂದಿದ್ದಾನೆ ಅನ್ನೋದು ಅವಳಿಗೂ ಅರ್ಥವಾಯ್ತು.

“ಮೇಡಮ್‌ ಅಷ್ಟು ಹೊತ್ತಿನಿಂದ ನಾನೊಬ್ಬನೇ ಮಾತನಾಡುತ್ತಿದ್ದೇನೆ. ನೀವೂ ಮಾತಾಡಿ. ನೀವೂ ವಾರಣಾಸಿಗೆ ಹೋಗಿದ್ದು ಕೂಡ, ಅಪ್ಪನ ಕ್ರಿಯಾ ಕರ್ಮ ಮಾಡೋಕೆ ಅಂದ್ರಿ ಅಲ್ವಾ? ನಿಮ್ಮ ತಂದೆಯವರಿಗೆ ಏನಾಗಿತ್ತು ಮೇಡಮ್‌” ಆತ ಕೇಳಿದ.  “ನಿಮ್ಮ ತಾಯಿಗಾದ ರೋಗವೇ ಸರ್‌, ನನ್ನ ತಂದೆಗೂ ಆಗಿದ್ದು” ಅಂದಳು ಬೇಸರದಿಂದ.  “ಅಯ್ಯೋ ಹೌದಾ? ಇತ್ತೀಚೆಗೆ ಎಲ್ಲಿ ನೋಡಿದರೂ ಇದೇ ರೋಗ ಮೇಡಮ್‌!  ಯಾವ ಕ್ಯಾನ್ಸರ್‌? ಯಾವಾಗ ಗೊತ್ತಾಯ್ತು ನಿಮಗೆ ?” ಸ್ವಲ್ಪ ಕುತೂಹಲ ತೋರಿಸಿದ.  “ ಹಂ. ಇವರಿಗಾಗಿದ್ದು ಶ್ವಾಸಕೋಶದ ಕ್ಯಾನ್ಸರ್‌.  ನಾಲ್ಕನೇ ಹಂತದಲ್ಲಿದ್ದಾಗ ನಮಗೆಲ್ಲ ಗೊತ್ತಾಗಿದ್ದು. ಬೆಂಗಳೂರಲ್ಲೇ ತೋರಿಸಿದ್ವಿ.

ಕ್ಯಾನ್ಸರ್‌ ನಾಲ್ಕನೇ ಸ್ಟೇಜ್‌ನಲ್ಲಿದ್ದಿದ್ರಿಂದ,ಅಲ್ಲದೇ ವಯಸ್ಸು ಕೂಡ ೭೫ ವರ್ಷ ಆಗಿದ್ರಿಂದ  ಕೀಮೋ ಥೆರಪಿ ಮಾಡಿದ್ರೂ ಪ್ರಯೋಜನ ಇಲ್ಲ ಅಂದ್ರು ಡಾಕ್ಟರ್ಸ್‌.  ಹೀಗಾಗಿ ಅವರಿಗೆ ಕೀಮೋ ಕೊಡ್ಸಿಲ್ಲ.  ರೇಡಿಯೇಶನ್‌ ಥೆರಪಿ ಕೊಡ್ಸಿದ್ವಿ. ಅದನ್ನೂ ಅವರ ಶರೀರ ತಡ್ಕೊಳಲ್ಲ ಅಂದ್ಬುಟ್ರು ಡಾಕ್ಟರ್‌. ಹೀಗಾಗಿ ಅದನ್ನೂ ಸ್ಟಾಪ್‌ ಮಾಡಿದ್ವಿ.  ಅವರಿಗೆ ಕ್ಯಾನ್ಸರ್‌ ಇದೆ ಅಂತ ಗೊತ್ತಾಗಿ ಎರಡೇ ಎರಡು ತಿಂಗಳಲ್ಲಿ ಹೋಗಿಬಿಟ್ರು. “  ಸಮಾಧಾನದಲ್ಲೇ ಹೇಳಿದಳು ಅವಳು.   

“ನಿಮ್ಮ ಅಮ್ಮ ಎಲ್ಲಿದ್ದಾರೆ? ಅವರು ಹೇಗಿದ್ದಾರೆ?” ಕೇಳಿದ.  ಚಿಕ್ಕಂದಿನಲ್ಲಿಯೇ ಅಪ್ಪನನ್ನ ಕಳೆದುಕೊಂಡು ಅಮ್ಮನ ಮಡಿಲಿನಲ್ಲಿ ಬೆಳೆದ ಆತನಲ್ಲಿ ಅಂತಃಕರಣ ಹೆಚ್ಚು ಅಂದುಕೊಂಡಳು.  “ಇಲ್ಲ ಸರ್‌, ಅಮ್ಮ ಈಗಿಲ್ಲ. ಅವರು ತೀರಿಹೋಗಿ ಹತ್ತು ವರ್ಷಗಳೇ ಆಗಿಹೋದವು. ಅಮ್ಮ ಹೋದಾಗಿನಿಂದ ಅಪ್ಪ ಸಂಪೂರ್ಣ ಒಂಟಿಯಾದ್ರು. ಮೊದಲಿನಿಂದಲೂ ನಮ್ಮೊಂದಿಗಿನ ಅವರ ಒಡನಾಟ ಅಷ್ಟಕ್ಕಷ್ಟೆ. ಅಮ್ಮ ಹೋದಮೇಲೂ ಕೂಡ ಅಪ್ಪ ನಮ್ಮೊಂದಿಗೆ ಬೆರೆಯಲೇ ಇಲ್ಲ.” ಎಂದು ಹೇಳಿ ಒಮ್ಮೆ ಸುಮ್ಮನಾದಳು. 

ಅಪ್ಪನಿದ್ದೂ ಅಪ್ಪನ ಪ್ರೀತಿ ಕಾಣದ ಜೀವ ಇದು ಎಂಬ ಸೂಕ್ಷ್ಮ ಅವಳ ಮಾತಿನಲ್ಲೇ ಅರ್ಥವಾಯ್ತು ಅವನಿಗೆ.  ಆತ ಏನೂ ಮಾತನಾಡಲಿಲ್ಲ. ಇವಳಿಗೆ ಅಪ್ಪನ ನೆನಪು, ಅವನಿಗೆ ಅಮ್ಮನ ನೆನಪು, ಮಧ್ಯೆ ಕವಿದ ಆ ಶಾಂತಿ. ಇಬ್ಬರೂ ಕೂತಲ್ಲೇ ಕಣ್ಣುಮುಚ್ಚಿದ್ದರು.    

ವಾರಣಾಸಿಯಿಂದ ಹೊರಟಿದ್ದ ಆ ಟ್ರೇನ್‌, ಗಾಳಿಯನ್ನು ಸೀಳಿಕೊಂಡು ಮುಂದೆ ಸಾಗುತ್ತಲೇ ಇತ್ತು. ಕೂತಲ್ಲೇ ನಿದ್ದೆ ಹೋಗಿದ್ದ ಇಬ್ಬರಿಗೂ ಅಜಮಾಸು ಒಂದು ಗಂಟೆಯ ನಂತರ ಎಚ್ಚರವಾಯ್ತು.  ಮಧ್ಯಾನ್ನದ ಸೂರ್ಯನ ಬಿಸಿಲು, ಬೋಗಿಯೊಳಗೆ ಶಕೆ ಹುಟ್ಟಿಸಿತ್ತು. ಅಕ್ಕಪಕ್ಕದ ಜನರೆಲ್ಲ ಊಟ ಆರಂಭಿಸಿದ್ದರಿಂದಲೋ ಏನೋ ಇವರಿಗೂ ಊಟ ಮಾಡುವ ಆಲೋಚನೆ ಬಂತು.  ಈ ಬಾರಿ ತಾನೇ ದುಡ್ಡು ಕೊಡುತ್ತೇನೆಂದು ಹೇಳಿ ಆತನೇ ಊಟ ಕೊಂಡ.  ಇಬ್ಬರೂ ಊಟ ಶುರುಮಾಡಿದರು.“ಮೇಡಮ್‌, ನೀವು ನಿಮ್ಮ ತಂದೆಯ ವಿಷಯ ಅಲ್ಲಿಗೇ ಬಿಟ್ಟುಬಿಟ್ಟರಲ್ಲ, ಮುಂದೆ ಹೇಳಿ”   ಆತ ಕೇಳಿದ್ದಕ್ಕೆ ನಸು ನಕ್ಕು ಮುಂದುವರೆಸಿದಳು.

 “ ನನ್ನ ತಂದೆ ಒಳ್ಳೆಯವರೇ. ಪೊಲೀಸ್‌ ಡಿಪಾರ್ಟ್‌ಮೆಂಟ್‌ನಲ್ಲಿ ಕೆಲಸ ಮಾಡಿದ್ದರಿಂದಲೋ ಏನೋ, ಮನೆಯಲ್ಲೂ ಅಷ್ಟೇ ಸ್ಟ್ರಿಕ್ಟ್‌. ಚಿಕ್ಕಂದಿನಲ್ಲಿ ಅಪ್ಪ ಅಂದರೆ ಎಲ್ಲಿಲ್ಲದ ಭಯ ನಮಗೆ. ನಮ್ಮೊಂದಿಗೆ ಅಂಥ ಒಡನಾಟವನ್ನೂ ಅಪ್ಪ ಇಟ್ಟುಕೊಂಡಿರಲಿಲ್ಲ. ನಮಗೂ ಹಾಗೂ ನಮ್ಮಪ್ಪನ ನಡುವೆ ಸೇತುವಾಗಿದ್ದು ಆಗಿದ್ದು ಅಮ್ಮ. ಅಮ್ಮನ ಮಧ್ಯಸ್ತಿಕೆಯಲ್ಲಿಯೇ ನಮ್ಮ ಬಾಲ್ಯ, ಶಿಕ್ಷಣ, ಯೌವನ ಎಲ್ಲವೂ ಕಳೆದಿತ್ತು. ವಿದ್ಯಾಭ್ಯಾಸದಿಂದ ಹಿಡಿದು ಮದ್ವೆ ತನಕ  ಜವಾಬ್ದಾರಿ ಅಪ್ಪನದೇ ಆಗಿದ್ರೂ, ಅದೆಲ್ಲ ತನ್ನ ಕರ್ತವ್ಯ ಅನ್ನೋ ರೀತಿಯಲ್ಲಿ ಮಾಡಿ ಮುಗಿಸಿದ್ದರು. ಅಲ್ಲೆಲ್ಲೂ ನಾವು ಪ್ರೀತಿಯ ಪಸೆಯನ್ನೇ ಕಾಣಲಿಲ್ಲ.  ಸ್ವಲ್ಪ ಪ್ರೀತಿ, ಮಮತೆ, ಕಾಳಜಿ, ನನ್ನ ಮಕ್ಕಳು ಅನ್ನೋ ಹೆಮ್ಮೆ, ಇಂಥವುಗಳನ್ನು ನನ್ನ ಅಪ್ಪನಲ್ಲಿ ನಾನು ಕೊನೆ ತನಕ ಕಾಣಲೇ ಇಲ್ಲ.  ಅಮ್ಮ ಹೋದಮೇಲೆ ಮಾನಸಿಕವಾಗಿ ನಮ್ಮಿಂದ ದೂರವೇ ಉಳಿದುಬಿಟ್ರು.  ದೇಹದಲ್ಲಿ ಅದೇನೇನು ಕಷ್ಟವಾಗ್ತಿತ್ತೋ, ನನಗಾಗಲೀ ನನ್ನ ಅಣ್ಣಂಗಾಗಲೀ ಅವರು ಹೇಳಿಯೇ ಇಲ್ಲ. ಅಪ್ಪನ ಸ್ನೇಹಿತರೊಬ್ಬರು ಫೋನ್‌ ಮಾಡಿ ತಿಳಿಸಿದ ಮೇಲೆ ಗೊತ್ತಾಗಿದ್ದು,  ಅಪ್ಪನಿಗೆ ಕ್ಯಾನ್ಸರ್‌ ಆಗಿದೆ ಅಂತ.”   ಆಕೆ ತನ್ನಪ್ಪನ ಕಥೆಯನ್ನು ಹೇಳುವ ಓಘದಲ್ಲಿದ್ದಾಗಲೇ, ಬ್ಯಾಗ್‌ ಒಳಗಿದ್ದ ಫೋನ್‌ ವೈಬ್ರೇಟ್‌ ಆಗಿ ಮಾತಿನ ನಿರಂತರತೆಗೆ ಬ್ರೇಕ್‌ ಬಿತ್ತು. “ಹಲೋ ಅಣ್ಣಾ, ಡಿಡ್‌ ಯು ರೀಚ್‌ ಸೇಫ್‌ಲೀ?  ಓಕೆ. ಹಾ ಅಣ್ಣಾ ನಾನೀಗೆ ಡೆಲ್ಲಿ ಟ್ರೈನ್‌ನಲ್ಲಿ ಇದ್ದೀನಿ.  ಹೌದಣ್ಣ ಡೆಲ್ಲಿ ಫ್ಲೈಟ್‌ನಲ್ಲಿ ಸೀಟ್‌ ಸಿಕ್ಕಿಲ್ಲ ಹಾಗಾಗಿ...”  ಈ ಅಣ್ಣ-ತಂಗಿ ಮಾತುಕತೆಯಿಂದ ಈತನಿಗೆ ತಿಳಿದಿದ್ದೇನೆಂದರೆ, ಅಣ್ಣ ಬೇರೆ ದೇಶದಲ್ಲೆಲ್ಲೋ ಇರುವವನು. ಅಪ್ಪನ ಕಾರ್ಯಕ್ಕೆಂದೇ ವಾರಾಣಾಸಿಗೆ ಬಂದು, ಅಂದೇ ಹೊರಟಿದ್ದಾನೆ. ಅಣ್ಣ – ಇಬ್ಬರೂ ಶ್ರದ್ಧಾ ಭಕ್ತಿಯಿಂದ ಕ್ರಿಯಾ ಕರ್ಮ ಮುಗಿಸಿದ್ದಾರೆ ಎಂದು. ನನ್ನ ಹಾಗೆ ಅತೀ ಭಾವುಕಳಲ್ಲದ ಅವಳು ಸಹಜವಾಗಿಯೇ ಬಂದದ್ದನ್ನು ಬಂದ ಹಾಗೆ ಸ್ವೀಕರಿಸಿದ್ದಾಳೆ ಅಂತೆನಿಸಿತು ಆತನಿಗೆ.

ಫೋನ್‌ನಲ್ಲಿ ಮಾತನಾಡಿ ಕೆಳಗಿಟ್ಟಿದ್ದೇ, ಮಾತು ಮುಂದುವರೆಸಿದಳು. “ಕ್ಯಾನ್ಸರ್‌ ಫೋರ್ತ್‌ ಸ್ಟೇಜ್‌ ಅಂತ ತಿಳಿದ ಮೇಲೆ, ನಾನು ಅಪ್ಪನನ್ನು ನಮ್ಮ ಮನೆಗೆ ಕರ್ಕೊಂಡ್‌ ಬಂದೆ. ಅಣ್ಣ ಸಿಂಗಾಪುರದಿಂದ ಓಡಿಬಂದ. ನನ್ನ ಗಂಡ ಮತ್ತು ಅಣ್ಣ ಆಸ್ಪತ್ರೆ ಜವಾಬ್ದಾರಿ ವಹಿಸಿಕೊಂಡ್ರು. ಚೆಕ್‌ಅಪ್‌ ಎಲ್ಲ ನಡೆದು, ರೇಡಿಯೇಶನ್‌ ಥೆರಪಿ ಮುಗಿಸಿ ಮನೆಗೆ ಬಂದಮೇಲೆ ಅಪ್ಪ ಒಂದು ಪ್ರಶ್ನೆ ಕೇಳಿದರು. “ನೀವಿಬ್ರೂ ದುಡ್ಡು ಖರ್ಚಾಗುತ್ತೆ ಅಂತ ನನಗೆ ಕೀಮೋಥೆರಪಿ ಕೊಡ್ಸಿಲ್ಲ ಅಲ್ವಾ..? ನಾನು ಅಷ್ಟೊಂದು ಕ್ಷುಲ್ಲಕ ಆಗೋದ್ನಾ ನಿಮಗೆ..?” ಅಂತ.  ನಾನು ನನ್ನ ಅಣ್ಣ ಇಬ್ಬರೂ ಅವರಿಗೆ ಅರ್ಥ ಮಾಡಿಸಲು ಹೆಣಗಾಡಿದ್ವಿ. ಆವತ್ತು ನಮ್ಮ ಮೇಲೆ ಕೂಗಾಡಿದರು, ರೇಗಾಡಿದರು. ಮರುದಿನದಿಂದ ಸುಮ್ಮನಾಗಿಬಿಟ್ಟರು. ತೀರಿಹೋಗುವವರೆಗೂ ಮಕ್ಕಳು ತನಗಾಗಿ ಏನೂ ಮಾಡಿಲ್ಲ ಎಂಬ ಅಸಮಧಾನವಿತ್ತು ಅವರಲ್ಲಿ. ಆದರೆ ನಾವು ಮಾತ್ರ ದೇವರು ಮೆಚ್ಚುವಂತೆ ಸೇವೆ ಮಾಡಿದ್ವಿ. ಅವರು ಇರೋತನಕ ಪ್ರೀತಿಯಿಂದ ನೋಡಿಕೊಂಡ್ವಿ. ಪ್ರೀತಿಯಿಂದ್ಲೇ ಕಳಿಸಿಕೊಟ್ವಿ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂಬ ಉದ್ದೇಶದಿಂದ ವಾರಣಾಸಿಯಲ್ಲೇ ಕ್ರಿಯಾಕರ್ಮ ಮುಗಿಸಿದ್ವಿ. ಅಣ್ಣ ನಿನ್ನೆನೇ ವಾಪಾಸ್‌ ಹೋದ.  ನಾನು ನಿಮ್ಮ ಹಾಗೇ, ಡೆಲ್ಲಿಗೆ ಹೋಗಿ ಅಲ್ಲಿಂದ ಬೆಂಗಳೂರಿಗೆ ವಾಪಾಸ್‌ ಹೋಗ್ತಿದ್ದೀನಿ. ”  ಎಂದಷ್ಟೇ ಹೇಳಿ, ಎದ್ದು ಹೋಗಿ, ಬಾಗಿಲಿನ ಹತ್ತಿರ ನಿಂತು. ತನ್ನನ್ನು ತಾನು ಬೀಸುವ ಗಾಳಿಗೆ ಒಡ್ಡಿದಳು. ಆಲೋಚನೆಗಳು ಅಲೆ ಅಲೆಗಳಂತೆ ಅಪ್ಪಳಿಸುತ್ತಿದ್ದವು.   

“ಬಾಲ್ಯದಲ್ಲಾಗಲೀ, ಯೌವನದಲ್ಲಾಗಲೀ, ಮದುವೆಯಾದ ಮೇಲಾಗಲೀ, ನಮ್ಮ ಮೇಲಿನ ಅಪ್ಪನ ಭಾವನೆ ಬದಲಾಗಲೇ ಇಲ್ಲವಲ್ಲ. ಇಡೀ ಜೀವಮಾನ ಪರ್ಯಂತ ನಮ್ಮೊಂದಿಗೆ ಅವರು ಅಂತರ ಕಾಯ್ದುಕೊಂಡಿದ್ದಾದರೂ ಯಾಕೆ? ಎಲ್ಲ ಅಪ್ಪಂದಿರ ಹಾಗೆ, ಮನಬಿಚ್ಚಿ ಮಾತನಾಡೋದು, ಹರಟೆ ಹೊಡೆಯೋದು, ನಮ್ಮೊಂದಿಗೆ ಸುತ್ತೋದು, ನಾವು ಕೇಳಿದ್ದನ್ನು ಕೊಡಿಸೋದು, ಕೊನೆಗೆ ತಮ್ಮದೇ ಮೊಮ್ಮಕ್ಕಳ ಜತೆಗೂ ಒಡನಾಡದೇ, ಬಂಡೆಕಲ್ಲಿನಂತೆ ಇದ್ದಿದ್ದೇಕೆ ? ಸಾಯುವ ಕೊನೆ ಗಳಿಗೆಯಲ್ಲಿಯೂ ನಮ್ಮೊಂದಿಗೆ ಮನಸ್ಥಾಪ ಮಾಡಿಕೊಂಡು ಏನು ಸಾಧಿಸಿದರು ಅವರು? ಅಪ್ಪ ನಮ್ಮೊಂದಿಗೆ ಹೀಗಿದ್ದಾರೆ ಅನ್ನೋ ಕಾರಣಕ್ಕೆ ನಾವು ಅವರಿಗೆ ಟ್ರೀಟ್‌ಮೆಂಟ್‌ ಕೊಡಿಸಿಲ್ವಾ..?  ಛೇ ಛೇ.. ಅಂಥದ್ದೇನೂ ಇಲ್ಲ.  ಅವರ ದೇಹ ಕೀಮೋ ಥೆರಪಿಯನ್ನು ಸಹಿಸಿಕೊಳ್ಳಲ್ಲ ಅಂತ ಡಾಕ್ಟರ್ ಹೇಳಿದ್ದಕ್ಕೆ ತಾನೇ..? ಯಾವ ಟ್ರೀಟ್‌ಮೆಂಟೂ ಬೇಡ. ಇರೋತನ ನಮ್ಮ ಮನೆಯಲ್ಲೇ ಇರಲಿ ಅಂತ ಮನೆಗೆ ಕರೆತಂದಿದ್ದು..? “ ಅವಳ ಮನಸ್ಸು ಪ್ರಶ್ನೆಗಳ ರಾಶಿಗಳಿಗೆ ಮತ್ತಷ್ಟು ಪ್ರಶ್ನೆಗಳನ್ನೇ ಪೇರಿಸುತ್ತಿತ್ತು.  ಆಲೋಚನೆಗಳ ಉಬ್ಬರ ಇಳಿದ ಮೇಲೆ ಮರಳಿ ಬಂದು ಸೀಟಿನಲ್ಲಿ ಕುಳಿತಳು ಆಕೆ.

ಇವಳು ಬರುವುದನ್ನೇ ಕಾಯುತ್ತಿದ್ದ ಆತ ಹೇಳಿದ “ಮೇಡಮ್‌, ನಿಮ್ಮದೊಂದು ಥರ ಯಾತನೆಯಾದರೆ ನಮ್ಮದು ಇನ್ನೊಂದು ಥರ ಯಾತನೆ”  ಅಂದ. ತಾನು ಎದ್ದುಹೋದಾಗ ಈತನೂ ಜಿಜ್ಞಾಸೆಯಲ್ಲಿ ಮುಳುಗಿದ್ದ ಅಂತೆನಿಸಿತು ಅವಳಿಗೆ.  ಅದೇನೆಂಬ ಕುತೂಹಲದಿಂದ ಆತನನ್ನು ಪ್ರಶ್ನಾರ್ಥಕವಾಗಿ ನೋಡಿದಳು  “ ನನ್ನ ದೇವತೆಯಂಥ ಅಮ್ಮ ಅವಳ ಸಾವನ್ನ ಸಂತೋಷವಾಗಿ ಸ್ವೀಕರಿಸಲು ಸಿದ್ಧಳಿದ್ದಳು. ಕ್ಯಾನ್ಸರ್‌ ಮೂರನೇ ಹಂತ ಎಂದು ತಿಳಿದ ತಕ್ಷಣ ಅವಳು ನನ್ನ ಬಳಿ ಹೇಳಿದ್ಲು. “ಮಗಾ, ನನಗೆ ಯಾವ ಟ್ರೀಟ್‌ಮೆಂಟೂ ಬೇಡ. ಇಷ್ಟು ವರ್ಷ ಬದುಕಿದ್ದೇನೆ. ಬದುಕು ನನಗೆ ಎಲ್ಲವನ್ನೂ ಕೊಟ್ಟಿದೆ.  ಈಗ ಬರುತ್ತಿರುವ ಸಾವನ್ನೂ ಕೂಡ ಖುಷಿಯಿಂದ ಸ್ವೀಕರಿಸ್ತೀನಿ. ನನ್ನ ಖುಷಿಯಿಂದ ಕಳಿಸಿಕೊಡಿ ಕಂದಾ ”  ಅಂತ.  ಆದರೆ, ನಾವು ಅವಳ ಮಾತನ್ನ ಕೇಳಲೇ ಇಲ್ಲ. ಇದ್ದ ಬಿದ್ದ ಸೇವಿಂಗ್ಸ್‌ ಎಲ್ಲಾ ತೆಗೆದು, ಮತ್ತೊಂದಷ್ಟು ಸಾಲ ಮಾಡಿ, ಅವಳಿಗೆ ಆಪರೇಶನ್‌ ಮಾಡಿಸಿ ಕ್ಯಾನ್ಸರ್‌ ಟ್ಯೂಮರ್‌ನ್ನ ತೆಗೆಸಿದ್ವಿ. ಆಪರೇಶನ್‌ ಆದಮೇಲೆ ಕೀಮೋ ಮೇಲೆ ಕೀಮೋ ಥೆರಪಿ ಕೊಡಿಸಿದ್ವಿ. ಪ್ರತಿಯೊಂದು ಕೀಮೋ ನಡೆದಾಗಲೂ ಹಲ್ಲು ಕಚ್ಚಿ ಸಹಿಸಿಕೊಂಡ್ಲು. ಅಮ್ಮನನ್ನು ಉಳಿಸಿಕೊಳ್ಳಲೇ ಬೇಕು ಎಂಬ ಜಿದ್ದಿಗೆ ಬಿದ್ದವರ ಹಾಗೆ, ಆಸ್ಪತ್ರೆಯಿಂದ ಆಸ್ಪತ್ರೆಗೆ ಅವಳನ್ನ ಅಲೆಸಿದ್ವಿ.  ಅವಳಿಗಾಗಿ ೨೫ ಲಕ್ಷಕ್ಕೂ ಜಾಸ್ತಿ ಖರ್ಚು ಮಾಡಿದ್ವಿ. ದುಡ್ಡು ನೀರಿನ ಹಾಗೆ ಹರಿದುಹೋಯ್ತು.  ಆದ್ರೆ, ಅಮ್ಮನ ಆರೋಗ್ಯ ಮಾತ್ರ ಸರಿಹೋಗಲಿಲ್ಲ. ಹಾಸಿಗೆ ಹಿಡಿದು ಒಂದೊಂದು ದಿನವೂ ನರಳಿ ಪ್ರಾಣಬಿಟ್ಟಳು.”  ಈಗ ಆತ ಮತ್ತಷ್ಟು ಭಾವುಕನಾಗುತ್ತಿದ್ದಂತೆ ಕಾಣಿಸಿತು ಅವಳಿಗೆ.  ಆತ ಮಾತನಾಡುತ್ತಲೇ ಇದ್ದ.

 ನನಗೆ ಯಾವ ಚಿಕಿತ್ಸೆಯೂ ಬೇಡ, ಕೀಮೋ, ರೇಡಿಯೇಶನ್‌ ಎಂಬ ನರಕವೂ ಬೇಡ.  ನಗನಗ್ತಾ ನನ್ನ ಕಳಿಸಿಕೊಡಿ ಅಂತ ಕೋರಿಕೊಳ್ತಿದ್ದ ನನ್ನ ಅಮ್ಮಂಗೆ ಕೊಡಬಾರದ ಕಷ್ಟ ಕೊಟ್ಟು ಕಳಿಸಿಕೊಟ್ವಿ ಎಂಬ ನೋವು ನನಗೆ ಚುಚ್ತಾ ಇದೆ. ಯಾವ ಸಾಧನೆಗಾಗಿ ನಾನವಳಿಗೆ ಹಿಂಸೆ ಕೊಟ್ಟೆ ಅಂತೆನಿಸ್ತಿದೆ” ಬಿಕ್ಕಳಿಸಿ ಅಳತೊಡಗಿದ. 

ಆತ ಅಳುವುದನ್ನು ನೋಡಿ ಈಕೆಗೆ ಏನು ಮಾಡಬೇಕೆಂಬುದೇ ತೋಚದೇ, ಬ್ಯಾಗ್‌ನೊಳಗೆ ಕೈಹಾಕಿ ನೀರಿನ ಬಾಟಲಿಯನ್ನು ಹುಡುಕುತ್ತಿದ್ದಳು. “ಸರ್‌ ಸಮಾಧಾನ ಮಾಡ್ಕೊಳಿ, ಟೇಕ್‌ ಇಟ್‌ ಈಸಿ”  ಅಂತ ಬಾರಿ ಬಾರಿ ಹೇಳಿದಳು.  ಇವರಿಬ್ಬರ ಮಾತನ್ನು ಅದೆಷ್ಟೋ ಹೊತ್ತಿನಿಂದ ಅಲ್ಲೇ ಹತ್ತಿರದಲ್ಲಿ ಕುಳಿತು ಸುಮ್ಮನೆ ಇವರ ಮಾತುಗಳನ್ನು ಕೇಳಿಸಿಕೊಳ್ಳುತ್ತಿದ್ದ ನಾನು ಈಗ ಅವರ ಬಳಿ ಹೋದೆ.  ತಲೆ ಹಿಡಿದುಕೊಂಡು ಬಿಕ್ಕಳಿಸುತ್ತಿದ್ದ ಆ ವ್ಯಕ್ತಿಯನ್ನು ಹಿಡಿದು ಕೂರಿಸಿ, ನನ್ನ ಬಳಿ ಇದ್ದ ನೀರನ್ನು ಕುಡಿಸಿ ಸಮಾಧಾನ ಮಾಡಿದೆ.   

“ಅಳಬೇಡಿ ಸರ್‌, ಹೋದವರು ಹೊರಟು ಹೋದರು. ನೀವು ನಿಮ್ಮ ಕೈಲಾದಷ್ಟು ಮಟ್ಟಿಗೆ ಪ್ರಯತ್ಸಿಸಿ ನಿಮ್ಮಮ್ಮನನ್ನು ಪ್ರೀತಿಯಿಂದ ನೋಡ್ಕೊಂಡಿದ್ದೀರಾ. ನಿಮ್ಮ ಕಾಳಜಿ, ಪ್ರೀತಿ ನೋಡಿ ಅವರ ಆತ್ಮ ಖುಷಿಪಟ್ಟಿರತ್ತೆ. ಈಗ ನೀವು ಹೀಗೆ ಗೋಳಾಡೋದ್ರಿಂದ ಅವರಿಗೆ ಖುಷಿಯಾಗತ್ತಾ? ನೀವೇ ಹೇಳಿ.” ಎಂದೆ.  ಆತನಿಗೆ ಸ್ವಲ್ಪ ಸಮಾಧಾನವಾದಂತೆ ಅನ್ನಿಸಿತು.  ಇಷ್ಟೊತ್ತು, ಕನ್ನಡ ಬಂದರೂ ಸುಮ್ಮನೆ ಕುಳಿತು ಇವರಿಬ್ಬರ ಮಾತುಗಳನ್ನು ಆಲಿಸುತ್ತಿದ್ದ ನನ್ನನ್ನು ಅಚ್ಚರಿಯಿಂದ ಗಮನಿಸಿದಳು ಆಕೆ.  “ಮೇಡಮ್‌, ನೀವೂ ಅಷ್ಟೇ ಒಳ್ಳೆಯವರು. ಕ್ಯಾನ್ಸರ್‌ ನಾಲ್ಕನೇ ಹಂತದಲ್ಲಿರುವ ಅಪ್ಪನ ಜೀವ ಇರೋವರೆಗೂ ನೋಡ್ಕೊಂಡ್ರಿ. ಆ ಸ್ಟೇಜ್‌ಲ್ಲಿ ಯಾರೂ ಆಪರೇಶನ್‌ ಮಾಡಿಸೋದಿಲ್ಲ ಅನ್ಸುತ್ತೆ.  ವೃದ್ಧಾವಸ್ಥೆಯಲ್ಲಿ ಆ ಕಷ್ಟ ಅನುಭವಿಸುತ್ತಿದ್ದವರ ಮಾನಸಿಕ ಸ್ಥಿತಿ ಹೇಗಿರುತ್ತೋ ಗೊತ್ತಿಲ್ಲ ಅಲ್ವಾ ಮೇಡಮ್‌, ಹಿರಿಯರು ಒಂದು ಮಾತು ಬೈದ್ರೂ ಅದು ನಮಗೆ ಆಶೀರ್ವಾದವೇ ಆಗಿರತ್ತೆ ಅಂತಾರೆ. ನೀವೂ ಸಮಾಧಾನ ಮಾಡ್ಕೊಳ್ಳಿ” ಎಂದೆ.  ಆಕೆ ಸಣ್ಣ ನಗು ನಕ್ಕು ಮಮತೆಯಿಂದ ನನ್ನ ನೋಡಿದಳು.   

ಅಲ್ಲೇ ಅವರೊಂದಿಗೆ ಕುಳಿತು ನಾನೇ ನನ್ನ ಪರಿಚಯ ಮಾಡಿಕೊಂಡೆ, “ನಾನು ಕೂಡ ಕನ್ನಡದ ಹುಡುಗ. ವಾರಾಣಾಸಿಯಲ್ಲಿ ವೇದಾಭ್ಯಾಸ ಮಾಡುತ್ತಿದ್ದೇನೆ. ನಮ್ಮ ಮನೆಯಿಂದಲೂ ಇವತ್ತು ಬೆಳಗ್ಗೆ ಅರ್ಜೆಂಟ್‌ ಊರಿಗೆ ಬಾ ಅಂತ ಕಾಲ್‌ ಬಂದಿದೆ ಮೇಡಮ್‌.  ಅರ್ಜೆಂಟಾಗಿ ನಾನೂ ಕೂಡ ಡೆಲ್ಲಿಯಿಂದ ಬೆಂಗಳೂರಿಗೆ ಫ್ಲೈ ಮಾಡತ್ತಿದ್ದೇನೆ.”  ಹೌದಾ ?ಅಂತ ತುರ್ತು ಏನಿದೆಯಂತೆ..? ಇಬ್ಬರೂ  ನನ್ನ ಕೇಳಿದರು.  ನಾನು ದೀರ್ಘ ಉಸಿರೆಳೆದುಕೊಂಡು ನಿಧಾನವಾಗಿ ಹೇಳಿದೆ. “ ನನ್ನ ಅಮ್ಮನ ಬಯಾಪ್ಸಿ ರಿಪೋರ್ಟ್‌ ಬಂದಿದೆಯಂತೆ.....”!

 ( ಲಹರಿ ತ್ರೈಮಾಸಿಕ ಪತ್ರಿಕೆಯ ದೀಪಾವಳಿ ವಿಶೇಷಾಂಕದಲ್ಲಿ ಪ್ರಕಟವಾದ ಕಥೆ )

-         ಅಮೃತಾ ಹೆಗಡೆ

Monday, 7 March 2022

"ಬಕುಲದ ಬಾಗಿಲಿನಿಂದ" - ಪುಸ್ತಕ ಪರಿಚಯ

  ಎಲ್ಲ ಹೆಣ್ಣುಮನಸ್ಸಿನ ಹೃದಯಗಳಿಗೂ "ಅಂತಾರಾಷ್ಟ್ರೀಯ ಮಹಿಳಾ ದಿನದ ಶುಭಾಶಯಗಳು"


ಪುಸ್ತಕದ ಹೆಸರು -



ಬಕುಲದ ಬಾಗಿಲಿನಿಂದ 

ಲೇಖಕಿ -  ಸುಧಾ ಆಡುಕಳ

ಪುಸ್ತಕದ ಬೆಲೆ - ೨೦೦ ರೂಪಾಯಿಗಳು

ಪ್ರಕಾಶನ - ಬಹುರೂಪಿ ಪ್ರಕಾಶನ ಬೆಂಗಳೂರು 

ಲಭ್ಯತೆ - Bahuroopi.in  ಆನ್‌ ಲೈನ್‌ ಬುಕ್‌ ಸ್ಟೋರ್‌


"ಬಕುಲದ ಬಾಗಿಲಿನಿಂದ"  ಇತ್ತೀಚೆಗೆ ನಾನು ಓದಿದ ಅತ್ಯಂತ ಅಪರೂಪದ ಪುಸ್ತಕ.  ಅಂತಾರಾಷ್ಟ್ರೀಯ ಮಹಿಳಾ ದಿನದಂದು ಈ ಪುಸ್ತಕದ ಬಗ್ಗೆ ಬರೆಯಲೇ ಬೇಕು ಎಂಬ ಕಾರಣಕ್ಕೆ ನಾನು ಮತ್ತೊಮ್ಮೆ ಓದಿ ಎದೆಗಿಳಿಸಿಕೊಂಡೆ.  ಪುರಾಣಗಳ  ಕಾಲದಿಂದ ಇಲ್ಲಿಯ ತನಕ ಹೆಣ್ಣು ಸಾಗಿ ಬಂದ ಕಥೆಗಳು ಇಲ್ಲಿವೆ.  ಪುರಾಣಕ್ಕೂ ವಾಸ್ತವಕ್ಕೂ ಕೊಂಡಿ ಹಾಕಿ ಹೆಣ್ಣಿನ ನಾನಾ ರೂಪವನ್ನು ವಿಷ್ಲೇಶಿಸಿ ಚಿತ್ರಿಸಿರುವ ಕಥನಗಳ, ಹೆಣ್ಣಿನ ಸಂವೇದನೆಗಳ ಗೊಂಚಲು ಇದು.  ಹೀಗಾಗಿ ಇವತ್ತಿಗಾಗಿ ಈ ಪುಸ್ತಕವನ್ನೇ ನಾನು ಆಯ್ಕೆ ಮಾಡಿಕೊಂಡೆ. 

ಈ ಪುಸ್ತಕವು ಕವನ ಸಂಕಲನವೂ ಅಲ್ಲ, ಕಥಾ ಸಂಕಲನವೂ ಅಲ್ಲ.  ಅವೆರಡೂ ಹದವಾಗಿ ಮಿಳಿತಗೊಂಡ ಅದ್ಭುತ ರುಚಿಯ ಮಾಕ್‌ಟೇಲ್‌ ಇದು.  ಅಂದಿನ ಹೆಣ್ಣಿನ ಕಥನಗಳನ್ನು ಇಂದಿನ ಕಣ್ಣಲ್ಲಿ ನೋಡಿ, ಸೃಜಿಸಿದ ಅಂಕಣ ಬಹರದ ಸಂಗ್ರಹ ರೂಪವಿದು.  ಆತ್ಮೀಯ ಭಾಷೆಯಲ್ಲಿ ಹೆಣ್ಣಿನ ಕಥೆಗಳನ್ನು ಹೇಳುತ್ತಾ ಓದುಗರ ಮನಸ್ಸಿನ ಕದ ತೆರೆಸುತ್ತಾ,  ಸಾಗುವ ಲೇಖಕಿ ಅಲ್ಲಲ್ಲಿ  ಚೆಂದದ ಕವನದ ಸಾಲುಗಳನ್ನು ಸೇರಿಸಿ ಓದುಗರ ಹೃದಯ ಮೀಟುತ್ತಾರೆ. 

"ಬಕುಲದ ಬಾಗಿಲಿನಿಂದ" ಒಳಹೊಕ್ಕ ನನಗೆ ಕೇಳಿಸಿದ್ದು ಲೇಖಕಿಯ ಭಾವಗಾನದ ಅನುರಣನ. ಕೃತಿಯನ್ನ ಓದುತ್ತಾ ಓದುತ್ತಾ ಹೆಣ್ಣಿನ ಭಾವ ಕೊಳದೊಳಕ್ಕೇ ಬಿದ್ದ ಅನುಭವವಾಯ್ತು ನನಗೆ.   ಯಾಕಂದರೆ ಇಲ್ಲಿ ಹೆಣ್ಣಿನ ಧಿಟ್ಟತನದ ಕಥೆಯಿದೆ,  ಹುಮ್ಮಸ್ಸಿದೆ, ಆತ್ಮವಿಶ್ವಾಸವಿದೆ, ಆತ್ಮಪ್ರೀತಿಯಿದೆ, ಅಧಮ್ಯ ಪ್ರೇಮವಿದೆ,  ಶೃಂಗಾರವಿದೆ, ಹತಾಶೆಯಿದೆ, ಯಾತನೆಯಿದೆ, ಅಸಹಾಯಕತೆಯಿದೆ, ಕೋಪವಿದೆ, ತ್ಯಾಗವೂ ಇದೆ. 

ಈ ಕೃತಿಯಲ್ಲಿರುವ ಎಲ್ಲ ಲೇಖನಗಳೂ, ಪುಸ್ತಕವಾಗುವುದಕ್ಕೂ ಮುಂಚೆ  "ಬಕುಲದ ಬಾಗಿಲಿನಿಂದ" ಎಂಬ ಹೆಸರಿನಲ್ಲಿಯೇ ಅವಧಿ ವೆಬ್‌ಸೈಟ್‌ನಲ್ಲಿ ಅಂಕಣವಾಗಿ ಪ್ರಕಟವಾಗುತ್ತಿದ್ದವು. ಆ ಲೇಖನಗಳೆಲ್ಲವನ್ನೂ ಸೇರಿಸಿ ಗುಚ್ಛ ಮಾಡಿಕೊಟ್ಟ ಬಹೂರೂಪಿ ಪ್ರಕಾಶನಕ್ಕೆ ಧನ್ಯವಾದಗಳು. "ಈ ಅಂಕಣವನ್ನು ಬರೆಯುವಷ್ಟೂ ಕಾಲ ಒಂದೊಂದು ವಾರ ನಾನು ಒಬ್ಬ ಹೆಣ್ಣುಮಗಳೊಂದಿಗೆ ಮುಖಾಮುಖಿಯಾಗಿದ್ದೇನೆ. ಅವಳನ್ನು ಪ್ರೀತಿಯಿಂದ ಮಾತನಾಡಿಸಿ ಮೈದಡವಿದ್ದೇನೆ. ಅವರು ನಗುವಾಗ ನಕ್ಕು ಅಳುವಾಗ ಅತ್ತು ಹಗುರಾಗಿದ್ದೇನೆ." ಎನ್ನುತ್ತಾರೆ ಲೇಖಕಿ ಸುಧಾ ಆಡುಕಳ. ಖಂಡಿತ ಓದುವಾಗಲೂ ನನಗೆ ಅಂಥದ್ದೇ ಅನುಭವವಾಯ್ತು. ಓದುತ್ತಾ ಓದುತ್ತಾ ಅವರು ಬರೆದ ಆ ಪಾತ್ರಗಳೊಳಗೆ ಹೋಗಿ ಉಸಿರಾಡಿದ್ದೇನೆ. ನಕ್ಕಿದ್ದೇನೆ. ಅತ್ತಿದ್ದೇನೆ.  

ಬಕುಲದ ಬಾಗಿನಿಲಿನೊಳಗೆ ನನಗೆ ಮೊದಲು ಸಿಕ್ಕಿದ್ದು "ರಾಧೆ". ಬೃಂದಾವನದಲ್ಲಿ ತನ್ನ ಬಿಟ್ಟು ಹೋದ ಶ್ಯಾಮನಿಗಾಗಿ ಕಾಯದೇ ಕೊರಗದೇ, ಅವನನ್ನ ತನ್ನ ಹೃದಯದಲ್ಲಿಯೇ ಇರಿಸಿಕೊಂಡು ಜೀವನವೆಂಬ ದಿನದ ಸೂರ್ಯಾಸ್ತದ ಕೊಟ್ಟ ಕೊನೆಯ ಕ್ಷಣದವರೆಗೂ ಬದುಕಿದ ರಾಧೆಯ ಕಥೆ ಅದು. ಈ ಕಥೆಯ ಕೊನೆಯಲ್ಲಿ, ಅಂತೂ ಬದುಕಿನ ಮುಸ್ಸಂಜೆಯ ಹೊತ್ತಲ್ಲಿ ಶ್ಯಾಮ ರಾಧೆಯನ್ನರಸಿ ಬರುತ್ತಾನೆ, ಪುನಃ ಅವರು ರಾಧಾಕೃಷ್ಣರಾಗುತ್ತಾರೆ. 

ರಾಧೆ ಕಥೆಯ ಕೊನೆಯಲ್ಲಿರುವ ಕವನದ ಸೊಗಸು ಹೀಗಿದೆ ನೋಡಿ. 


 ಶ್ಯಾಮ ಬಂದ ರಾಧೆಯೆಡೆಗೆ ಸೂರ್ಯನಿಳಿವ ಹೊತ್ತು

ರಾಧೆಯೀಗ ಹಣ್ಣುಮುದುಕಿ ಕುಳಿತಿದ್ದಳು ಕೌದಿಯ ಹೊದ್ದು

ಬಂದೇ ರಾಧೆ ಎಂದ ಶ್ಯಾಮ, ಬರುವಿಯೆಂದು ಗೊತ್ತು

ಕಾಯುತ್ತಿದ್ದೆಯೇನು ರಾಧೆ ? ಶ್ಯಾಮ ನುಡಿದ ಸೋತು


ಕಾಯುವ ಮಾತು ಯಾಕೆ ಬಂತು? ಇಲ್ಲೇ ಇದ್ದೆ ನೀನು

ಹೋದೆ ಕಾದೆ ಎಂಬುದೆಲ್ಲ ಬರಿಯ ಭ್ರಮೆಯ ತಂತು

ರಾಧೆ ಕೈಯ್ಯ ಹಿಡಿದ ಶ್ಯಾಮ ಕೈಯ್ಯ ತುಂಬ ಸುಕ್ಕು

 ಇಷ್ಟು ಒರಟು ! ಎಷ್ಟು ದುಡಿದೆ ? ಎಂದ ಮುತ್ತನಿಟ್ಟು


ಲೆಕ್ಕಕ್ಕಿಲ್ಲಿ ಜಾಗವಿಲ್ಲ ಸುರಿದ ಬೆವರ ಧಾರೆ

ಹನಿಹನಿಯಲು ನೀನೆ ಇದ್ದೆ ಈಗ ಬಂದೆ ಎದುರಿಗೆ

ಸುಕ್ಕಲ್ಲ ಇದು ನಿನ್ನ ರುಜು ನನ್ನೆಲ್ಲ ಶ್ರಮದ ದುಡಿಮೆಗೆ

ಹಸಿರ ರಾಶಿ ವನದ ತುಂಬ ಸಾಕ್ಷಿಯಾಗಿದೆ ಒಲವಿಗೆ


ಬೃಂದಾವನವೇ ವಲಸೆ ಬಂದು ನೆಲೆಸಿದಂತಿದೆ ಇಲ್ಲಿಯೆ

ನಾನು ಬರದೆ ಹೇಗೆ ಇರಲಿ ? ಶ್ಯಾಮ ನುಡಿದ ರಾಧೆಗೆ

ಕಣ್ಣಾ ನಿನ್ನ ಮೈಯ್ಯ ನುಣುಪು ಚಿಗುರ ತುದಿಯ ನವಿರಲಿ

ನಿನ್ನ ಕೊಳಲ ಮಧುರಗಾನ ಹೂವಿನ ಪಿಸುಮಾತಲಿ


ಕೌದಿಯೊಳಗೆ ಬಿಸಿಯ ಗಾಳಿ ಶ್ಯಾಮನೆದೆಯ ಸೋಕಿತು

ಸುಕ್ಕುಗಟ್ಟಿದ ರಾಧೆ ಕರವು ಪ್ರೇಮ ಕವನವಾಯಿತು.


ಈ ಆಶಾವಾದಿ ರಾಧೆಯ ಕತೆ ಕೇಳಿ ಮುಂದೆ ಹೋದರೆ,  ನಮಗೆ ಸಿಗುವವಳೇ ಮಣಿಪುರದ ರಾಜಕುಮಾರಿ ಚಿತ್ರಾ.    ತಾನು ಮೆಚ್ಚಿದ ಪುರುಷ ಅರ್ಜುನಿನಾಗಿ ಸಂಪೂರ್ಣ ಬದಲಾಗುವ ಚಿತ್ರಾಗೆ, ಮದನನೇ ಧರೆಗಿಳಿದು ಬಂದು ಹೆಣ್ಣಾಗುವುದನ್ನು ಕಲಿಸಿಹೋಗುತ್ತಾನೆ. ಬಯಸಿದ್ದು ಸಿಕ್ಕಮೇಲೆ ಅದೆಷ್ಟು ಹೊತ್ತು ಆ ಬದಲಾವಣೆಯ ಸೋಗು?  ಪುನಃ ಆಕೆಗೆ ತನ್ನತನವನ್ನು ಮರಳಿ ಪಡೆಯುವ ಆಶೆಯಾಗುತ್ತದೆ.  ಪಾರ್ಥನನ್ನು ಪಡೆಯುವ ತವಕದಲ್ಲಿ ತನ್ನ ವ್ಯಕ್ತಿತ್ವವನ್ನೇ ಕಳೆದುಕೊಂಡ ಚಿತ್ರಾಗೆ ತನ್ನದೇ ಹೊಸ ರೂಪ ಚುಚ್ಚತೊಡಗುತ್ತದೆ. "ನನ್ನನ್ನು ನಾನಾಗಿಯೇ ಇರಲುಬಿಡು. ಈ ಕೃತಕ ಸೌಂದರ್ಯದ ಪರದೆಯನ್ನು ಸರಿಸಿಬಿಡು" ಎನ್ನುವ ಚಿತ್ರಾ ಮದನನಿಂದ ತನ್ನ ಮೊದಲ ರೂಪವನ್ನೇ ವಾಪಾಸ್ ಪಡೆಯುತ್ತಾಳೆ.  ಈ ಕಥೆಯನನ್ನ ಬಂಡವಾಳಶಾಹಿ ಪದ್ಧತಿಯ ಪ್ರಭಾವಕ್ಕೆ ಬಿದ್ದು ನಮ್ಮ ಜೀವನಶೈಲಿಯ ದೃಷ್ಟಿಕೋನವನ್ನೇ ಬದಲಾಯಿಸಿಕೊಂಡು,  ಕೂದಲು, ಚರ್ಮ, ದೇಹ ಎಲ್ಲವನ್ನೂ ಆಧುನಿಕವಾಗಿಸಿಕೊಳ್ಳಲು ಹೆಣಗಾಡುವ ಆಧುನಿಕ ಚಿತ್ರೆಯರಿಗೆ ಹೋಲಿಸಿ ಬರೆದಿದ್ದಾರೆ ಲೇಖಕರು. 

ನಂತರ ಬರುವವರೇ ಸೀತೆಯರು. ಗಂಡ ಕೊಡುವ ಕಷ್ಟ,ಅಪಮಾನಗಳನ್ನೆಲ್ಲ ಅವಡುಗಚ್ಚಿ ಸಹಿಸಿಕೊಂಡು ನಗುನಗುತ್ತ ಬದುಕ ಸಾಗಿಸುವ ಅಪ್ಪಟ ಸೀತೆಯರು ಅವರು.  ಲೇಖಕಿ ಸುಧಾ ಆಡುಕಳ ಸೀತೆಯನ್ನ ತನ್ನ ತಾಯಿಗೆ ಹೋಲಿಸಿ ಬರೆದ ಈ ಲೇಖನ ನನ್ನೊಳಗೆ ಸಿಕ್ಕಿಹಾಕಿಕೊಂಡಿದ್ದ ಅಂಥದ್ಧೇ ಭಾವಕ್ಕೆ ದನಿಯಾಯಿತು.  ಮಾಧವಿಯ ಕಥೆಯ ಮನಸ್ಸಿನೊಳಗೆ ನೋವಿನ ಚಳುಕು ನೀಡಿತು.  ಗಾಲವನಂಥ ಅದೆಷ್ಟು ವ್ಯಕ್ತಿಗಳು ಈ ಸಮಾಜದಲ್ಲಿದ್ದಾರಲ್ಲವೇ..? ಮಾಧವಿಯಂಥ ಅದೆಷ್ಟು ಹೆಣ್ಣುಗಳು ಗಾಲವನಂಥವರಿಗೆ ಸಿಕ್ಕು ನರಳುತ್ತಿರಬಹುದು ಎಂದೆನಿಸಿತು ನನಗೆ. ಆಕೆಯ ಬವಣೆಯನ್ನ ಹಾಸು ಹೊದ್ದಿರುವ ಬಾಡಿಗೆ ತಾಯಿಯರೊಳಗೆ ಮಾಧವಿಯನ್ನ ಕಂಡರು ಲೇಖಕಿ.  

ಮಾಧವಿಯ ನಂತರ ಬರುವವಳೇ ಊರ್ಮಿಳೆ, ಲಕ್ಷ್ಮಣನ ಹೆಂಡತಿ ಊರ್ಮಿಳೆ. ವನವಾಸಕ್ಕೆ ಹೋಗಿರುವ ಗಂಡನನ್ನ ನೆನೆಸಿಕೊಳ್ಳುತ್ತಾ ಆತನಿಗಾಗಿ ಪರಿತಪಿಸಿ ಅವಿರತ ಕಾದಿದ್ದಕ್ಕೂ, ಇಂದಿನ ಆಧುನಿಕ ಊರ್ಮಿಳೆಯರು ವಿದೇಶದಲ್ಲಿರುವ ಗಂಡನಿಂದ ದೂರವಿದ್ದು ಅವನ ಬರುವಿಕೆಗಾಗಿ ವರ್ಷವೆಲ್ಲ ಕಾಯುವುದಕ್ಕೂ ಸಾಮ್ಯತೆ ಕಂಡಿದ್ದಾರೆ ಲೇಖಕಿ. ಊರ್ಮಿಳೆಯ ನಂತರ ಹೊಯ್ಸಳ ಸಾಮ್ರಾಜ್ಯದ ರಾಣಿ ಶಾಂತಲೆ, ಅಕ್ಕಮಹಾದೇವಿ,  ಮಹಾರಾಣಿ ಅವಧೇಶ್ವರಿ, ಅಹಲ್ಯೆ, ಯಶೋಧರೆ, ರವೀಂದ್ರ ನಾಥ ಠಾಕೂರರ ಚಂದ್ರಾ,  ಬಂದು ಓದುಗರ ಒಳಗಿಳಿಯುತ್ತಾರೆ.  

ಈ ಪುಸ್ತಕದಲ್ಲಿ ಹನ್ನೆರಡನೇಯವಳಾಗಿ ಬರುವವಳೇ  "ನಂಗೇಲಿ".  ನಂಗೇಲಿಯ ಕಥೆ ಓದುತ್ತಾ ಓದುತ್ತಾ ನನ್ನೆದೆಯೊಳಗೂ ನೋವಿನ ಚಳುಕು ಸೆಳೆದು ಕಣ್ಣೀರು ಹರಿಯತೊಡಗಿತ್ತು.  ನಂಗೇಲಿ ಕೇರಳದ ದಲಿತ ಹೆಣ್ಣು. ೧೯ ನೇ ಶತಮಾನದ ಆರಂಭದಲ್ಲಿ ಬದುಕಿ, ತನ್ನ ಸುತ್ತಲಿದ್ದ ಕೆಟ್ಟ ಕಠೋರ ವ್ಯವಸ್ಥೆಯ ವಿರುದ್ಧ ಹೋರಾಡಿ ಬಲಿದಾನ ಮಾಡಿದ ಶೂರೆ.   ಆ ಕಾಲದಲ್ಲಿ ಕೇರಳದ ಒಂದು ಭಾಗದಲ್ಲಿ ಜಾರಿಯಲ್ಲಿದ್ದ "ಬ್ರೆಸ್ಟ್‌ ಟ್ಯಾಕ್ಸ್‌" ( ಮೊಲೆ ಕರ ) ವ್ಯವಸ್ಥೆಯ ವಿರುದ್ಧ ಆಕೆ ಹೋರಾಡಿದ್ದಾಳೆ.  ದಲಿತ ಹೆಣ್ಣುಮಕ್ಕಳು ಸೊಂಟಕ್ಕಿಂತ ಮೇಲೆ ಮತ್ತು ಮೊಣಕಾಲಿಗಿಂತ ಕೆಳಗೆ ಬಟ್ಟೆ ಧರಿಸುವಂತಿರಲಿಲ್ಲವಂತೆ.  ಒಂದು ವೇಳೆ ಎದೆ ಬಟ್ಟೆಯನ್ನೇನಾದರೂ ಅವರು ಧರಿಸಿದರೆ ಅವರನ್ನು ತೀವ್ರ ಶಿಕ್ಷೆಗೆ ಒಳಪಡಿಸಲಾಗುತ್ತಿತ್ತು.  ಬೆತ್ತಲೆ ಎದೆ ಹೊತ್ತು ಜೀವಿಸುತ್ತಿದ್ದ ಆ ಬುಡಕಟ್ಟು ಕುಟುಂಬದಲ್ಲಿಯೇ ಹು‌ಟ್ಟಿದ ನಂಗೇಲಿ, ಧೈರ್ಯವಾಗಿ ಎದೆ ಬಟ್ಟೆ ಧರಿಸಿದ್ದಲ್ಲದೇ, ಶಿಕ್ಷೆ ವಿಧಿಸಲು ಮನೆ ಬಾಗಿಲಿಗೆ ಬಂದ ಅಧಿಕಾರಿಗೆ ತನ್ನೆರಡೂ ಮೊಲೆಗಳನ್ನೂ ಕತ್ತಿಯಲ್ಲಿ ಕುಯ್ದು ಬಾಳೆಎಲೆಯಲ್ಲಿ ಹಾಕಿ ಕೊಟ್ಟುಬಿಡುತ್ತಾಳೆ. ಮತ್ತು ಅತೀವ ರಕ್ತಸ್ರಾವದಿಂದ ಪ್ರಾಣ ಬಿಡುತ್ತಾಳೆ.  ನಂಗೇಲಿ ಬಲಿದಾನ ಮಾಡಿದ ಜಾಗ ಇಂದಿಗೂ "ಮುಲಚಿಪರಂಬು" (ಮೊಲೆಯ ಕೊರೆದಿಟ್ಟವಳ ನಾಡು) ಎಂದೇ ಪ್ರಸಿದ್ಧವಾಗಿದೆಯಂತೆ.  ಸುಧಾ ಆಡುಕಳರ ಭಾಷೆಯಲ್ಲಿ ನಂಗೇಲಿ ಕಥೆ ಓದಿ ಕಣ್ಣೀರಾದೆ. 

ಧಿಟ್ಟ ಬರಹಗಾರ್ತಿ, ಕವಿಯತ್ರಿ ಸಾಹಿತಿ ಅಮೃತಾ ಪ್ರೀತಮ್‌ ಅವರ ಜೀವನ ಪ್ರೀತಿ,  ಕಂಸನ ಮೋಸದ ಜಾಲಕ್ಕೆ ಬಿದ್ದ ಪೂತನಿಯ ಅಸಹಾಯಕತೆ, ತ್ರಿವಕ್ರೆಯ ನಿಷ್ಕಾಮ ಪ್ರೀತಿ ಓದುಗರನ್ನ ಕಾಡುತ್ತದೆ.  ಮೀನಿನ ಹೊಟ್ಟೆಯಲ್ಲಿ ಸಿಕ್ಕ ಉಂಗುರದಿಂದ ಶಕುಂತಲೆಯನ್ನು ನೆನೆಪಿಸಿಕೊಂಡ ದುಶ್ಯಂತ ಅವಳನ್ನು ಅರಮನೆಗೆ ಕರೆಯಲು ಬಂದಾಗ, ತನ್ನ ಮಗನನ್ನು ಮಾತ್ರ ದುಶ್ಯಂತನೊಂದಿಗೆ ಕಳಿಸಿಕೊಡುವ ಶಕುಂತಲೆ, ಸ್ವೀಕಾರ ಮತ್ತು ನಿರಾಕರಣೆಗಳ ಸಂಗಮವಾಗಿ ನಿಂತುಬಿಡುತ್ತಾಳೆ.  ಸುಖಕ್ಕಿಂತ ಜಾಸ್ತಿ ಕಷ್ಟಗಳನ್ನೇ ಹಾಸಿ ಹೊದ್ದಿರುವ ದ್ರೌಪದಿ ತನ್ನ ಒಡಲಾಳವನ್ನೆಲ್ಲ ಅರುಹಿ, ಕೃಷ್ಣ ಅವಳ ಪಾಲಿಗೆ ಏನಾಗಿದ್ದ ಎಂಬುದನ್ನ ಓದುಗರೊಂದಿಗೆ ಸೂಕ್ಷ್ಮವಾಗಿ ಹೇಳಿಕೊಳ್ಳುತ್ತಾಳೆ. 

ಆಹ್ವಾನವಿಲ್ಲದಿದ್ದರೂ ಸ್ವಯಂವರ ಪ್ರವೇಶಿಸಿ, ಎಲ್ಲ ರಾಜರನ್ನೂ ಸೋಲಿಸಿ, ಅಂಬೆ, ಅಂಬಾಲಿಕೆ, ಅಂಬಿಕೆಯರನ್ನ ಗೆದ್ದು ತಂದ ವೀರ ಭೀಷ್ಮ, ಆ ಹೆಣ್ಣುಗಳನ್ನು ತಾನೇ ವರಿಸದೇ ತಮ್ಮನಿಗೆ ಮದುವೆ ಮಾಡಿಕೊಡುತ್ತಿರುವುದರ ವಿರುದ್ಧ ಅಂಬೆ ಬಂಡಾಯವೇಳುತ್ತಾಳೆ.   ಅವಮಾನಿತಳಾಗಿ ತೊಳಲಾಡುವ ಅವಳು ಕೊನೆಗೂ ಯಾರ ಸಹಾಯವೂ ದೊರಕದೆ ಮತ್ತೊಂದು ಜನ್ಮವೆತ್ತಿಬರುವುದಕ್ಕಾಗಿ ಜೀವ ಬಿಡುವುದಕ್ಕೆ ಸಿದ್ಧಳಾಗಿಬಿಡುತ್ತಾಳೆ. ಅಂಥ ಅಪ್ರತಿಮ ಧೈರ್ಯವಂತೆ ಅಂಬೆಯ ಅಂತರಾಳ ಮತ್ತೆ ಮತ್ತೆ ಕಾಡುತ್ತದೆ. ಸಮಾಜದ ಕಟ್ಟುಪಾಡುಗಳನ್ನು, ಓರೆಕೋರೆಗಳನ್ನು ಪ್ರಶ್ನಿಸದೇ ಹೊಂದಿಕೊಂಡು ಹೋಗುವ ಹೆಣ್ಮಕ್ಕಳು ನಮ್ಮ ಸಾಮಾಜದ ದೃಷ್ಟಿಯಲ್ಲಿ ಸಂಸ್ಕೃತಿಯ ಹರಿಕಾರ ದೇವತೆಗಳಾದರೆ, ಪ್ರಶ್ನಿಸುವ ಮನಸ್ಥಿತಿಯ ಹೆಣ್ಣು ಸಮಾಜ ನಿಂದನೆಗೊಳಗಾಗಿ, ಅವಮಾನಿತಳಾಗುವಂಥ ಪರಿಸ್ಥಿತಿ ಇಂದಿಗೂ ಇದೆ. ಎಂಬುದನ್ನು ಲೇಖಕಿ ಇಲ್ಲಿ ನೆನೆಪಿಸುತ್ತಾರೆ.   

ಹೆಣ್ಣು ನಿಜವಾದ ಅರ್ಥದಲ್ಲಿ ಹೆಣ್ಣಾಗುವ ಆ ದೈಹಿಕ ಬದಲಾವಣೆಯನ್ನೇ ಮೈಲಿಗೆ ಎಂದು ಕರೆದು, ಸಾಮಾಜಿಕವಾಗಿ, ವೈಯಕ್ತಿಕವಾಗಿ, ಕೌಟುಂಬಿಕವಾಗಿ ಆಕೆಯನ್ನು ದೂರವಿರಿಸಿ ಶಾಸ್ತ್ರ, ಕಟ್ಟಳೆಗಳನ್ನು ಮಾಡಿ ಹೆಣ್ಣುಮಕ್ಕಳಿಗೆ ಇನ್ನಿಲ್ಲದ ತೊಂದರೆ ಕೊಡುವ ಮೂಢ ನಂಬಿಕೆಯ ವಿರುದ್ಧವೂ ಸುಧಾ ದನಿಎತ್ತಿದ್ದಾರೆ.  ಪೃಕೃತಿ ಹೆಣ್ಣಿಗೆ  ಮಾತ್ರ ನೀಡಿರುವ "ಮುಟ್ಟು" ಎಂಬ ಶಕ್ತಿಯು ಮೈಲಿಗೆಯಾಗಿದ್ದಾದರೂ ಏಕೆ ? ಎಂಬ ಪ್ರಶ್ನೆಯನ್ನ ಓದುಗರ ಮುಂದೆಯೂ ಅವರು ಪ್ರಸ್ತಾಪಿಸಿದ್ದಾರೆ. 

ಮತ್ತದೇ ಮಹಾಭಾರತದ ಇನ್ನೊಬ್ಬ ಅಸಹಾಯಕಿ ಹೆಣ್ಣು ಗಾಂಧಾರಿಯ ಮನದಿಂಗಿತ ಹೇಳುತ್ತಾ ಹೇಳುತ್ತಾ,  "ಹೊರನೋಟವನ್ನು ಕಸಿದಿಟ್ಟ ಯಾವ ತಾಯಿಯೂ ಅನಾಹುತವನ್ನು ತಡೆಯಲಾರಳು. ತನ್ನ ಮಕ್ಕಳನ್ನು ಪೊರೆಯಲಾರಳು. ಹೆಣ್ಣನೋಟಕ್ಕೆ ಪಟ್ಟಿ ಕಟ್ಟದಿರೋಣ, ಮಕ್ಕಳ ಬದುಕನ್ನು ಹಸನುಗೊಳಿಸೋಣ" ಎಂಬ ಕರೆ ನೀಡುತ್ತಾರೆ.  ಗುರುದೇವ ರವೀಂದ್ರರ ನಂದಿನಿ, ಮೃಣಾಲ್‌ ಎಲ್ಲ ಪಾತ್ರಗಳ ಕಥೆ ಹೇಳುತ್ತಾ, ಅವಳ ಭಾವನೆಗಳನ್ನು, ಹೆಣ್ತನದ ಒಡಲಾಳವನ್ನು,  ಆ ಎಲ್ಲ ಹೆಣ್ಣುಗಳ ವ್ಯಕ್ತಿತ್ವದ ವಿವಿಧ ಆಯಾಮಗಳನ್ನು ವಿವಿರಿಸುವ ಸುಧಾ ಅವರ ಭಾಷೆಯ ಸೊಗಸಿಗೆ ಅವರೇ ಸಾಟಿ.   ಈ ಪುಸ್ತಕ ಓದುವಷ್ಟೂ ಹೊತ್ತು ನಾನೂ ಕೂಡ ಸಂಪೂರ್ಣ ಹೆಣ್ತನವನ್ನ ಅನುಭವಿಸಿದ್ದೇನೆ. ಅದು ಹೆಮ್ಮೆಯೋ, ?ಸಾರ್ಥಕ್ಯವೋ ? ಸಂಕಟವೋ ? ತಿಳಿಯೆ.   ಅದ್ಯಾವುದೋ ಹೆಸರಿಲ್ಲದ ಭಾವದೊಳಗೆ ಮುಳುಗೆದ್ದ ನಾನು  ಸುಧಾ ಅವರ "ಬಕುಲದ ಬಾಗಿಲಿನಿಂದ" ಕೃತಿ ಅದ್ಭುತವಾಗಿದೆ ಎಂದಷ್ಟೇ ಹೇಳಬಲ್ಲೆ. 










 

Tuesday, 20 April 2021

ಕೋತಿಗಳೂ ಮೊಟ್ಟೆ ತಿನ್ನುತ್ತವೆ ಅನ್ನೋ ವಿಷಯ ಗೊತ್ತಾಗಿದ್ದೇ ಆವತ್ತು ನನಗೆ...

 

ಆವತ್ತು ನಾನು ಅವನಿಗೆ ಸ್ವಲ್ಪ ಗಾಬರಿಯಿಂದ್ಲೇ ಫೋನ್ಮಾಡಿದ್ದೆ.  ದನಿಯಲ್ಲಿ ಸ್ವಲ್ಪ ಕಂಪನವಿತ್ತು. ಕಣ್ಣಿನಲ್ಲಿ ನೀರು ಹರಳುಗಟ್ಟಿತ್ತು.   ಮನಸ್ಸು ನಿಜಕ್ಕೂ ನೊಂದಿತ್ತು. 

ಆ ಜೋಡಿಗಳು ಎಷ್ಟೋ ದಿನದಿಂದ ಕಂದನನ್ನ ನೋಡಲು ಕಾತರಿಸುತ್ತಾ  ಇದ್ದವು. ಹಗಲು ರಾತ್ರಿ ಎನ್ನದೆ ಕಣ್ಣಲ್ಲಿ ಕಣ್ಣಿಟ್ಟು ಕಾಯ್ತಾ ಇದ್ದವು. ಇಂದೋ ನಾಳೆಯೋ ಹೊರ ಜಗತ್ತಿಗೆ ಅಡಿ ಇಡುತ್ತಿದ್ದ ಆ ಕಂದಮ್ಮಳು ಅದೆಷ್ಟು ಬೆಳೆದಿದ್ದವೋ ಏನೋ. ಆದ್ರೆ ಅವು ಕಣ್ಣುಬಿಡುವುದಕ್ಕೂ ಮುಂಚೆಯೇ ಕಣ್ಮುಚ್ಚಿದ್ದವು.   ಮಕ್ಕಳನ್ನ ಬದುಕಿಸಿಕೊಳ್ಳುವಲ್ಲಿ ಆ ತಂದೆ ತಾಯಿಯೂ ಸೋತಿದ್ದರು. ಅವಕ್ಕೆ ಸಹಾಯ ಮಾಡಲಾಗದೇ ನಾನೂ ಸೋತಿದ್ದೆ.

ಎರಡು ವರ್ಷದ ಹಿಂದಿನ ಕಥೆ ಇದು.  ನಾಲ್ಕಂತಸ್ಸಿನ ಅಪಾರ್ಟ್‌ಮೆಂಟ್‌ನ  ಕೊನೆಯ ಮಹಡಿಯಲ್ಲಿ ನಮ್ಮ ಮನೆ. ಅಪಾರ್ಟ್ಮೆಂಟ್ನ ಹಿಂದೆ ದಟ್ಟ ಮರಗಳಿರುವ ಸರ್ಕಾರಿ ಜಾಗ. ಹಸಿರಿಗೆ ಹತ್ತಿರದಲ್ಲಿದ್ದ ಈ ಅಪಾರ್ಟ್ಮೆಂಟ್ ಕೇವಲ ಮನುಷ್ಯರಿಗೊಂದೇ ವಾಸಸ್ಥಾನವಲ್ಲ..! ಜೇನು, ಪಾರಿವಾಳಗಳಿಗೂ ಅಲ್ಲಿತ್ತು ಪರ್ಮನೆಂಟ್ ಅವಕಾಶ. ಕೋತಿಗಳು ಮಾತ್ರ ಅನಿರೀಕ್ಷಿತ ಆಗಂತುಕರು. ವಾರದಲ್ಲಿ ಕನಿಷ್ಠ ಒಂದು ಬಾರಿಯಾದರೂ ನಮ್ಮ ಅಪಾರ್ಟ್ಮೆಂಟ್ ಲಗ್ಗೆ ಇಡದೇ ಬಿಡುವವಲ್ಲ ಆ ಕೋತಿಗಳ ದಂಡು.

 ಕೋತಿಗಳು ಬಂದವೆಂದರೆ, ಎಲ್ಲರ ಮನೆಯ ಕಿಟಕಿಗಳು, ಗ್ಯಾಲರಿ ಗಾಜುಗಳು ಭದ್ರವಾಗಲೇಬೇಕು. ಅಪ್ಪಿ ತಪ್ಪಿ ಇಲ್ಲವೆಂದುಕೊಳ್ಳಿ, ಅವು ಮನೆಯೊಳಗೆ ಬಂದವೆಂದೇ ಅರ್ಥ.  ಒಳಗೆ ಬಂದ ತಕ್ಷಣ ತೀರ ಪರಿಚಿತರಂತೆ, ರಾಜಾರೋಷವಾಗಿ ಅಡುಗೆ ಮನೆಗೇ ದಾಳಿ ಇಡುವ ಅವು ಹಣ್ಣು, ತರಕಾರಿ, ತೆಂಗಿನಕಾಯಿ, ಹಾಲು, ಮೊಸರು ಪ್ಯಾಕ್ನ ಆದಿಯಾಗಿ ಏನು ಸಿಕ್ಕರೂ ಹೊತ್ತಯ್ದು ಬಿಡುತ್ತಿದ್ದವು.

 ಒಂದುಬಾರಿಯಂತೂ ನಮ್ಮ ಮನೆಯ ಅಡುಗೆ ಮನೆಯ ಮೂಲೆಯಲ್ಲಿಟ್ಟಿದ್ದ ತಾಜಾ ಎಳೆನೀರನ್ನು ಹೊತ್ತೊಯ್ದಿತ್ತು ಕೋತಿ.  ಗ್ಯಾಲರಿ ಕಿಂಡಿಯಲ್ಲಿ ತನ್ನ ಜತೆ ತೂರಿಕೊಳ್ಳದ ಎಳೆನೀರು ಕಾಯಿಯನ್ನ ಅಲ್ಲಿಯೇ ಒಡೆದು ನೀರುಕುಡಿದು ಖಾಲಿಮಾಡಿ ಅದನ್ನಲ್ಲಿಯೇ ಇಟ್ಟು, ಅಸಹಾಯಕಿಯಾದ ನನ್ನ ನೋಡಿ ಕಣ್ಣು ಪಿಳುಕಿಸಿತ್ತು.     

 ಇಂಥ ಕೋತಿ ಕಾಟವಿದ್ದ ನಮ್ಮ ಮನೆಯಲ್ಲಿ ನಮ್ಮ ಜತೆ ಇನ್ನೊಂದು ಸಂಸಾರ ವಾಸವಿತ್ತು. ಅದೊಂದು ಪಾರಿವಾಳದ ಸಂಸಾರ.  ಆ ಹಕ್ಕಿಗಳು, ಕಿಟಕಿ ತೆಗೆದೇ ಇದ್ದರೂ ಕೂಡ ಯಾವತ್ತೂ ಮನೆಯೊಳಗೆ ಬಂದಿದ್ದಿಲ್ಲ. ಗ್ಯಾಲ್ರಿ ಕಂಬಿಯ ಮೇಲೆ ಸದಾ ಕೂತು ಸಪ್ಪಳ ಮಾಡ್ತಾ ತಮ್ಮದೇ ಲೋಕದಲ್ಲಿ ಹಾಯಾಗಿರುವ ಅವನ್ನ ನೋಡಿದ್ರೆ, ‘ನಾನು ಬಡವಿ ಆತ ಬಡವ ಒಲವೆ ನಮ್ಮ ಬದುಕು’ ಎಂಬ ಕವನ ನೆನಪಾಗ್ತಿತ್ತು. 

ಆಗ ಮೂರು ವರ್ಷದ ಪುಟಾಣಿಯಾಗಿದ್ದ ನನ್ನ ಮಗನಿಗಂತೂ ಆ ಪಾರಿವಾಳಗಳೆಂದರೆ ಖುಷಿಯೋ ಖುಷಿ.  ದಿನದಲ್ಲಿ ಅದೆಷ್ಟು ಬಾರಿ ಬೇಕಾದ್ರೂ , ತನಗೆ ನೆನಪಾದಾಗಲೆಲ್ಲ ಅವಕ್ಕೆ ಅಕ್ಕಿ ಹಾಕ್ತಿದ್ದ.  ಅವು ತಿನ್ನೋದನ್ನ ನೋಡ್ತಾ ಖುಷಿ ಪಡ್ತಿದ್ದ. ನಮಗೆಲ್ಲ ಆ ಪಾರಿವಾಳಗಳ ಮೇಲೆ ಅದೇನೋ ಹೇಳತೀರದ ಮಮತೆ.

ಅವುಗಳ ಆಟಪ್ರೀತಿ, ಎಂದೆಂದೂ ಬಿಟ್ಟಿರದ ಅವುಗಳ ಬಂಧವನ್ನ ನೋಡೋದೇ ಚೆಂದ. ನಮ್ಮ ಮನೆಯ ಹೂ ಗಿಡದ ಪಾಟ್‌ಅವುಗಳ ಮೀಟಿಂಗ್ ಸ್ಪಾಟ್‌. ಎಂದೆಂದೂ ಅಲ್ಲೇ ಅವುಗಳ ಸರಸ ಸಲ್ಲಾಪ. ಅಲ್ಲಿದ್ದ ಖಾಲಿ ಪಾಟ್‌ಅವುಗಳ ಮನೆಯಾಯ್ತು. ಬರ್ತಾ ಬರ್ತಾ ಅವುಗಳ ಸಂಭ್ರಮ ಹೇಳತೀರದು.  ಒಣ ಕಡ್ಡಿಗಳು, ಹುಲ್ಲುಗಳು, ಎಲೆಗಳನ್ನ ತಂದು ಪಾಟ್‌ನಲ್ಲಿ ಹಾಕಿ ಒಂದು ಮುದ್ದಾದ ಗೂಡೂ ಕೂಡ ಅಲ್ಲಿ ಸಿದ್ಧವಾಗಿಬಿಟ್ಟಿತ್ತು. ಅವುಗಳ ತಯಾರಿ ನೋಡಿಯೇ ಅಂದುಕೊಂಡಿದ್ದೆ ಇವರ ಸಂಸಾರ ದೊಡ್ಡದಾಗ್ತಿದೆ ಅಂತ. ಒಂದು ದಿನ ನನ್ನ ಎಕ್ಸಪೆಕ್ಟೇಶನ್‌ನಿಜವಾಗಿತ್ತು. ಆ ದಿನ ಬೆಳ್ಳಂಬೆಳಗ್ಗೆ ಕಣ್ಣು ಉಜ್ಜಿಕೊಳ್ತಾ ಬಂದು ನೋಡ್ತೀನಿಗೂಡಲ್ಲಿದ್ವು ಎರಡು ಪುಟಾಣಿ ಮೊಟ್ಟೆಗಳು..!   ಆವತ್ತು ನನ್ನ ಮಗ ಕುಣಿದಾಡಿಬಿಟ್ಟಿದ್ದ. ಮೊಟ್ಟೆಗಳನ್ನ ನಾವು ಮುಟ್ಟಬಾರದು ಅಂದಿದ್ದಕ್ಕೆ ಹೂಂಗುಟ್ಟಿದ್ದ ಅವನು, ತನ್ನ ಪುಟಾಣಿ ಕಾತುರ ಕಣ್ಣುಗಳಲ್ಲಿ ಅವುಗಳನ್ನ ಹತ್ತಿರದಿಂದ ನೋಡ್ತಾ ಇದ್ದ.

ಆ ಪಾರಿವಾಳಗಳಿಗೆ ನಮ್ಮ ಮೇಲೆ ನಂಬಿಕೆಯೋ ಅಥವಾ ಮೊಟ್ಟೆಗಳ ಮೇಲಿನ ಮೋಹವೋ ಗೊತ್ತಿಲ್ಲ, ಮೊಟ್ಟೆಗಳು ಹುಟ್ಟಿದಾಗಿನಿಂದ ಅವಕ್ಕೆ ಧೈರ್ಯ ಜಾಸ್ತಿಯಾಗಿತ್ತು. ಮೊದಲೆಲ್ಲ ನಾವು ಹತ್ತಿರ ಹೋದಾಗ ಪುರ್‌ಎಂದು ಹಾರಿಹೋಗುತ್ತಿದ್ದ ಪಾರಿವಾಳಗಳು ಈಗ ನಾವು ಅವುಗಳ ಗೂಡಿಗೆ ಎಡತಾಕಿದರೂ ಅಲುಗಾಡುತ್ತಲೂ ಇರಲಿಲ್ಲ.  ಮಕ್ಕಳು ಬಂದಾಗ ಮನಸ್ಸೆಷ್ಟು ಗಟ್ಟಿಯಾಗುತ್ತೆ ಅಲ್ವಾ.. ಅಂತೆನಿಸಿತ್ತು ನಂಗೆ.

ಆ ಜೋಡಿ ಪಾರಿವಾಳಗಳು ಮೊಟ್ಟೆಯನ್ನ ಕಾಯ್ತಾ ಇದ್ದುದು ಪಾಳಿಯ ಮೇಲೆ. ಸಾಮಾನ್ಯವಾಗಿ ತಾಯಿ ಹಕ್ಕಿ ತಾಸುಗಟ್ಟಲೇ ಮೊಟ್ಟೆಗಳ ಮೇಲೆ ಕೂತಿರುತ್ತಿತ್ತು. ಆದರೆ ತಾಯಿ ಇಲ್ಲದಾಗ ತಂದೆ ಮೊಟ್ಟೆಗಳನ್ನ ನೋಡಿಕೊಳ್ತಿತ್ತು. ಎಂದೆಂದೂ ಆ ಜೋಡಿಗಳು ಮೊಟ್ಟೆಗಳನ್ನ ಬಿಟ್ಟು ಹೋದದ್ದಿಲ್ಲ.

 ಕಳೆದ ಹದಿನೈದು ದಿನಗಳಿಂದ ಅಪಾರ್ಟ್‌ಮೆಂಟ್‌ಕಡೆ ಸುಳಿಯದಿದ್ದ ಕೋತಿಗಳು ಆವತ್ತು ಮಧ್ಯಾಹ್ನ ಪ್ರತ್ಯಕ್ಷವಾಗಿದ್ವು.  ಎರಡು ಕೋತಿಗಳು ನಮ್ಮ ಗ್ಯಾಲರಿ ಕಂಬಿಗಳನ್ನ ಹಿಡಿದು ನೇತಾಡ್ತಾ ಬಂದು ಪಾಟ್‌ಪಕ್ಕದಲ್ಲಿಯೇ ಕೂತಿದ್ದೇ, ಗೂಡಿನಲ್ಲಿದ್ದ ತಾಯಿ ಪಾರಿವಾಳ ಭಯದಿಂದ ಹಾರಿಹೋಗಿತ್ತು. ಮೊಟ್ಟೆಗಳ ಭಾರವನ್ನ ನನ್ನ ಮೇಲೆ ಬಿಟ್ಟು..!

ಮನೆಯಲ್ಲಿದ್ದವಳು ನಾನೊಬ್ಬಳೇ..! ಏನು ಮಾಡಲಿ..? ಆ ಗೂಂಡಾ ಕೋತಿಗಳಂದ್ರೆ ನನಗೂ ಭಯ ತಾನೇ..? ಗ್ಯಾಲರಿ ಗಾಜು ಜರುಗಿಸಿ ಕೋತಿಗಳನ್ನ ಓಡಿಸುವಷ್ಟು ಧೈರ್ಯವಂತೆ ಅಲ್ಲ ನಾನು.  ಗಾಜು ತೆರೆದರೆ ಮನೆಯೊಳಗೇ ನುಗ್ಗುವ ಆ ಮರ್ಕಟಗಳು ಸಾಮಾನ್ಯ ಧರೋಡೆಕೋರರಲ್ಲ..!  ಆದರೂ ಗ್ಯಾಲರಿ ಗಾಜುಗಳ ಬಳಿ ನಿಂತು, ಹುಷ್‌... ಹುಷ್‌... ಅನ್ನುತ್ತಾ ಪೊರಕೆಯನ್ನ ಗಾಜಿಗೆ ತಾಕಿಸಿ ಅಲುಗಾಡಿಸಿದೆ.  ನನ್ನ ಬೆದರಿಕೆಗೆ ಕ್ಯಾರೇ ಅನ್ನದ ಕೋತಿಗಳು, ಗೂಡಿನಲ್ಲಿದ್ದ ಎರಡೂ ಮೊಟ್ಟೆಗಳನ್ನ ಕೈಯ್ಯಲ್ಲಿ ತೆಗೆದುಕೊಂಡ್ವು. ನನ್ನ ಕಣ್ಣಾರೆ, ಆ ಮೊಟ್ಟೆಗಳು ಮಣ್ಣಾಗೋದನ್ನ ನೋಡಬೇಕಲ್ಲಾ..! ಏಯ್‌ಮಂಗ, ಮೊಟ್ಟೆ ಅಲ್ಲೇ ಇಡು ಪಾಪಿ...! ಅಂತ ಕಿರುಚಿಕೊಳ್ತಾ ಗಾಜನ್ನ ಡಬ್‌ಡಬ್‌ಅಂತ ಬಡಿದೆ. ಶಬ್ಧದಿಂದ ವಿಚಲಿತಗೊಂಡ ಆ ಕೋತಿಗಳು ನನ್ನ ನೋಡಿ ಕೆಸ್‌..ಎಂದ್ವೇ ಹೊರತು ಮೊಟ್ಟೆಗಳನ್ನ ಬಿಟ್ಟಿಲ್ಲ. ಬದಲಾಗಿ ಅವನ್ನ ಹಲ್ಲಲ್ಲಿ ಕಚ್ಚಿ ಒಡೆದುಕೊಂಡು, ಒಳಗಿದ್ದ ರಸವನ್ನ ಹೀರಿಬಿಟ್ಟಿದ್ದವು..! ಚಿಪ್ಪನ್ನೂ ಬಿಡದೆ ನೆಕ್ಕಿ ಅಲ್ಲೇ ಎಸೆದು ಕಾಲ್ಕಿತ್ತವು. ಕೋತಿಗಳೂ ಮೊಟ್ಟೆ ತಿನ್ನುತ್ತವೆ ಅನ್ನೋ ವಿಷಯ ಗೊತ್ತಾಗಿದ್ದೇ ಆವತ್ತು ನನಗೆ .  ತುಂಬಾ ನೋವಾಗಿತ್ತು.  ಮೊಟ್ಟೆಗಳನ್ನ ರಕ್ಷಿಸೋಕೆ ನನ್ನಿಂದಲೂ ಆಗಿಲ್ಲವಲ್ಲ ಎಂಬ ಪಾಪಪ್ರಜ್ಞೆ..! ಆಗಲೇ ನಾನು ನನ್ನ ಗಂಡನಿಗೆ ಫೋನಾಯಿಸಿ, ನನ್ನ ಅಸಹಾಯಕತೆಯನ್ನ ಹೇಳಿಕೊಂಡಿದ್ದೆ.

 ಇದನ್ನೆಲ್ಲ ದೂರದಲ್ಲೆಲ್ಲೋ ಕುಳಿತು ಪಾರಿವಾಳ ನೋಡಿತ್ತೋ ಏನೋ ಗೊತ್ತಿಲ್ಲ.  ಎಷ್ಟು ಹೊತ್ತು ಕಾದರೂ ಪಾರಿವಾಳಗಳ ಪತ್ತೆಯೇ ಇರಲಿಲ್ಲ. ಸಾಯಂಕಾಲ ವಾಪಾಸ್‌ಗೂಡಿಗೆ ಬಂದದ್ದು ಒಂದೇ ಪಾರಿವಾಳ.  ಅದು ತಾಯಿಯೋ..? ತಂದೆಯೋ..? ಗೊತ್ತಾಗಲಿಲ್ಲ ನನಗೆ.   ಅಲ್ಲಿ ಚದುರಿ ಬಿದ್ದಿದ್ದ ಮೊಟ್ಟೆಗ ಚಿಪ್ಪುಗಳನ್ನ ನೋಡ್ತಾ ಅಲ್ಲೇ ಸ್ವಲ್ಪ ಹೊತ್ತು ಕೂತಿತ್ತು.  ಅದು ಮೌನವಾಗಿ ಕೂತಿದ್ದನ್ನ ನೋಡಿ ನನಗೆ ಕರುಳು ಕಿವುಚಿತ್ತು.  ಕ್ಷಮಿಸಿ ಮಕ್ಕಳೇ ಎನ್ನುವ ಮಾತು ಅದರ ಗಂಟಲಲ್ಲಿತ್ತೇನೋ ಪಾಪ..! 

ಮರುದಿನ ಅದೇ ಜಾಗದಲ್ಲಿ ಮತ್ತದೇ ಜೋಡಿ ಬಂದು ಕೂತಿತ್ತು. ಪ್ರಕೃತಿಯ ಈ ಆಟಕ್ಕೆ ನಾನು ಬೆರಗಾಗಿದ್ದೆ!  ಕಣ್ಣಾರೆ ಮಕ್ಕಳನ್ನ ಕಳೆದುಕೊಂಡು ಎಲ್ಲವನ್ನೂ ಮೌನವಾಗಿ ಸಹಿಸಿದ ಆ ಪಾರಿವಾಳಗಳು ಆವತ್ತು ತಾಳ್ಮೆಯ ಮೂರ್ತಿಗಳಂತೆ ಕಾಣುತ್ತಿದ್ವು. ಎಲ್ಲವನ್ನೂ ಮತ್ತೆ ಸೃಷ್ಟಿಸುವ ಅವುಗಳ ಆತ್ಮವಿಶ್ವಾಸ  ಎಂಥವರಿಗೂ ಧೈರ್ಯ ಹೇಳುವಂತಿತ್ತು.  

 

 

Wednesday, 20 January 2021

ಶ್...ಶ್... ಶಬ್ಧ ಮಾಡಬೇಡಿ..!

 

                                            ಚಿತ್ರ ಕೃಪೆ - ವಿನಯ್‌ ಕೆ.ಪಿ


’ಮಗುವನ್ನ ಮಲಗಿಸಬೇಕು’ ಇದು ತಾಯಿಯಾದವಳ ಪ್ರಮುಖ ಗುರಿ.  ಒಂದುವೇಳೆ ಮಗು ಮಲಗಿದೆ ಅಂತಿಟ್ಟುಕೊಳ್ಳಿ ಆಗ ಅವಳ ಪರಮ ಕರ್ತವ್ಯವೇನಾಗಿರಬಹುದು ಹೇಳಿ....
? ಮಗುವಿಗೆ ಎಚ್ಚರವಾಗದಂತೆ ಎಲ್ಲೆಲ್ಲೂ ನಿಶ್ಯಬ್ಧವನ್ನ ಕಾಪಾಡೋದು’!   ಹಾಗೇ ಅವಳ ಉತ್ಕಟ ಆಸೆ ಅಂತೇನಾದ್ರೂ ಇದ್ದರೆ ಅದು ಸಧ್ಯದ ಮಟ್ಟಿಗೆ  ’ಇವತ್ತಾದರೂ  ನನ್ನ ಮಗು ಸಮಯಕ್ಕೆ ಸರಿಯಾಗಿ ಮಲಗಲಿ’  ಅನ್ನೋದಷ್ಟೇ..!

 ಹೌದಪ್ಪ ಹೌದು.  ಮೊನ್ನೆ ನನ್ನ ತಂಗಿ ಅವಳ ಒಂದುವರೆ ವರ್ಷದ ಮಗಳನ್ನ ಮಲಗಿಸೋಕೆ ಹರಸಾಹಸ ಪಡ್ತಾ ಇರೋದನ್ನ ನೋಡಿ ಅಯ್ಯೋ ಅನ್ನಿಸಿತ್ತು.  ಅಂತೂ ಇಂತೂ ಮಗಳು ಮಲಗಿಸಿ  ಕೋಣೆಯಿಂದ ಹೊರಗಡೆ ಬರುಬರುತ್ತಲೇ  ’ಶ್... ಶ್... ಶಬ್ಧ ಮಾಡಬೇಡಿ’! ಅಂದಳು.    ಅವಳ ಆ ಕೋರಿಕೆಗೆ ಮಿಲಿಯನ್‌ ಡಾಲರ್‌ ಬೆಲೆ  ಇದೆ ಅನ್ನೋದು ನನಗಷ್ಟೇ ಅರ್ಥವಾಯ್ತು.    ಯಾಕಂದ್ರೆ, ನನ್ನ ಸ್ಟೋರಿ ಸ್ವಲ್ಪ ಡಿಫರೆಂಟ್‌ ಆಗಿದ್ರೂ ಕೂಡನಾನೂ ಒಬ್ಬಳು ಅನುಭವಸ್ತೆಯೇ ತಾನೇ..?  ಶಿಶುವಿನಮ್ಮನ ಬಾಯಿಯಿಂದ ಬರೋ ಆ ’ಶ್...ಶ್’, ಎಂಬೆರಡು ಈ ಅಕ್ಷರಗಳಲ್ಲಿ ಅದೆಷ್ಟು ತೂಕವಿರುತ್ತೆ ಗೊತ್ತಾ..?  ಆಜ್ಞೆ, ಕಳಕಳಿ, ವಿನಂತಿ, ಅಸಹಾಯಕತೆಯಂಥ ಅದೆಷ್ಟೋ ಭಾವಗಳ ಹೊಯ್ದಾಟವಿರುತ್ತೆ.  

 ಅಂದ್ಹಾಗೆ, ಈ ಜೋಗಳುಗಳು, ಲಾಲಿ ಹಾಡುಗಳು ಹುಟ್ಟಿದ್ದಾದರೂ ಯಾಕೆ ಹೇಳಿ ? ಮಕ್ಕಳು ಬೇಗ ಮಲಗಲಿ ಅನ್ನೋ ಉದ್ದೇಶಕ್ಕೇ ಅಲ್ವೇ..ಮಗು ಮಲಗಿ, ತಮಗೂ ಸ್ವಲ್ಪ ಸಮಯ ಸಿಗಲಿ ಎಂಬುದು ತಲತಲಾಂತರದಿಂದಲೂ ಅಮ್ಮಂದಿರ ಆದ್ಯ ಹಂಬಲವೇ.

 ಶಿಶುವಿನ ತಾಯಿಯಾದವಳ ಕಷ್ಟ ಅಷ್ಟಿಷ್ಟಲ್ಲ ಬಿಡಿ. ಅವಳು ಊಟ ಮಾಡ್ತಾ ಇರಲಿ , ಸ್ನಾನಕ್ಕೆ ಹೋಗಿರಲಿ, ಶೌಚಕ್ಕೆ ಹೋಗಿರಲಿ,  ಆ ಸಮಯಕ್ಕೆ ಸರಿಯಾಗಿಯೇ ಮಗುವಿಗೆ ಅಮ್ಮ ಬೇಕೆನಿಸಿಬಿಡುತ್ತೆ.!  ಗಾಢ ನಿದ್ದೆಯಲ್ಲಿದ್ದ ಮಗುವಿಗೆ ಅದ್ಯಾವ ಟೆಲಿಪತಿ ಸಂದೇಶ ಹೋಗುತ್ತೋ ಗೊತ್ತಿಲ್ಲಆಗಿದಾಂಗ್ಗೆ ಅಮ್ಮ ಮಾಡುತ್ತಿದ್ದ ಕೆಲಸ ಅರ್ಧಕ್ಕೇ ಬಿಟ್ಟು ಓಡಿ ಬಂದುಬಿಡಬೇಕು..! ಅಂಥ ಭಯಂಕರ ಅಳು..! ಅಷ್ಟರ ಮಟ್ಟಿಗೆ   ಶೌಚಾಲಯದಲ್ಲೂ ನೆಮ್ಮದಿ ಇಲ್ಲದ ಜೀವನ ಅದು.

 ಮಗುವನ್ನ ಮಲಗಿಸೋ ಅಮ್ಮಂದಿರ ಹರಸಾಹಸಗಾಥೆ ಹೇಳೋಕೆ ಹೊರಟರೆ ಅದು ಮುಗಿಯೋದಿಲ್ಲ.  ನಿದ್ದೆ ಮಾಡೋಕೆ ಕೆಲ ಮಕ್ಕಳಿಗೆ ತೊಟ್ಟಿಲೇ ಬೇಕು. ಮತ್ತೆ ಕೆಲವಕ್ಕೆ ಜೋಲಿ, ಇನ್ಕೆಲವಕ್ಕೆ ಹಾಸಿಗೆಯೇ ಬೇಕು.  ನನ್ನ ಗೆಳತಿಯ ಮಗುವಿಗಂತೂ ಅದರಪ್ಪನ ಹೆಗಲೇ ಬೇಕಂತೆ..!  ಅಮ್ಮನ ತೊಡೆಯಿಂದ ಇಡೀರಾತ್ರಿ ಕೆಳಗಿಳಿಯದೇ ನಿದ್ದೆಹೊಡೆಯುವ ಮಕ್ಕಳೆಷ್ಟೋ.ನಿದ್ದೆ ಕಣ್ಣಿಗೆ ಹತ್ತಿದರೂ ಪ್ಯಾಸಿಫಾಯರ್‌ ಬಾಯಿಗಿಡದಿದ್ದರೆ ನಿದ್ದೆ ಮಾಡದೇ ಅಳುವ ಕಂದಮ್ಮಗಳನ್ನೂ ಕಂಡಿದ್ದೀನಿ.  ಕೈತೋಳು ಬಿದ್ಹೋಗುವಷ್ಟು ತಟ್ಟಿತಟ್ಟಿ ಮಲಗಿಸೋ ಅಮ್ಮಂದಿರ ಗೋಳನ್ನೂ ಕೇಳಿದ್ದೀನಿ.  ರಾತ್ರಿ ಇಡೀ ಹಾಡು ಹಾಡ್ತಾ ಮಗುವನ್ನ ಮಲಗಿಸೋ ಅಮ್ಮಅಪ್ಪಂದಿರ ಕಷ್ಟ ನೋಡಿ ಲೊಚಗುಟ್ಟಿದ್ದೀನಿ.

 ನನ್ನ ಮಗನಿನ್ನೂ ಶಿಶುವಾಗಿದ್ದಾಗ, ದೊಡ್ಡ ಮಕ್ಕಳ ತಾಯಿಯರನ್ನ, ಇನ್ನೂ ಮದುವೆಯಾಗದ ಹುಡುಗಿಯರನ್ನ, ಮದುವೆಯಾದರೂ ಮಗು ಮಾಡಿಕೊಳ್ಳದ ಜಾಲಿ ಬೆಡಗಿಯರನ್ನ ಕಂಡರೆ ನನಗೇನೋ ಭಯಂಕರ ಹೊಟ್ಟೆಕಿಚ್ಚು.  ಅಯ್ಯೋ ಅವರೆಲ್ಲ ಎಷ್ಟು ಆರಾಮಾಗಿದ್ದಾರಪ್ಪಾ..!  ರಾತ್ರಿಯಿಂದ ಬೆಳಗಿನ ತನಕ ಆರಾಮಾಗಿ ನಿದ್ದೆ ಮಾಡ್ತಾರೆ, ಈ ಭಾಗ್ಯ ನನಗೆ ಇನ್ಯಾವತ್ತೋ..ಅನ್ನಿಸ್ತಾ ಇತ್ತು ಅನ್ನೋದು ನನ್ನಾಣೆ ಸುಳ್ಳಲ್ಲ.

 ನನ್ನ ಕೈಗಳು ತೊಟ್ಟಿಲು ತೂಗುತ್ತಿದ್ದರೆ, ತಲೆಯೊಳಗಂತೂ ನಾನಾ ಯೋಚನೆಗಳ ಹಾವಳಿ !   ಇವತ್ತು ಜೀವದ ಗೆಳತಿಗೆ ಫೋನಾಯಿಸಿ ಗಂಟೆಗಟ್ಟಲೆ ಹರಟಬೇಕು. ಅಂದೇ ತಂದಿಟ್ಟಿರುವ ಕಿವಿಯೋಲೆಯನ್ನ ಇಂದಾದರೂ ಹಾಕಿ ನೋಡಬೇಕು. ಕಬೋರ್ಡ್‌ನಲ್ಲಿ ಮುದ್ದೆಯಾಗಿ  ಬಿದ್ದಿರೋ ಡ್ರೆಸ್ಗಳನ್ನ ಮಡಿಸಿಡಬೇಕುಮಸ್ತಕದೊಳಗೆ ಗಿರಕಿ ಹೊಡೆಯುತ್ತಿರೋ ಆ ಕವನದ ಸಾಲುಗಳನ್ನ ಮರೆತುಹೋಗುವ ಮೊದಲು ಗೀಚಿಬಿಡಬೇಕು. ಮೂಲೆಯಲ್ಲಿ ಬಿದ್ದಿರೋ ಲ್ಯಾಪ್‌ಟಾಪ್‌ಮೇಲೆ  ಧೂಳು ಕೂತಿದೆ.. ಇವತ್ತಾದರೂ ಒರೆಸಿಬಿಡಬೇಕು.  ಅನ್ನೋ ಇಂಥ ಅದೆಷ್ಟೋ ಮುಗಿಯದ ಲೆಕ್ಕಾಚಾರ ಮನಸ್ಸಿನಲ್ಲಿ ಹರಿದಾಡ್ತಾ ಇದ್ದರೆ, ಬಾಯಿ ಮಾತ್ರ ಜೋಜೋ ಹಾಡ್ತಾ ಇತ್ತು.

 ಯಾಕೋ ಆವತ್ತು ನನ್ನ ಮಗ ಬೇಗ ಮಲಗುವ ಲಕ್ಷಣವಿರಲಿಲ್ಲ. ಹೇಗೆ ಮಲಗಿಸಿಕೊಂಡು ತಟ್ಟಿದರೂ ಈತ ಕಣ್ಣುಮುಚ್ಚುತ್ತಿಲ್ಲವಲ್ಲ ಎಂಬ ಚಿಂತೆ. ಈತನಿಗೆ ನಿದ್ದೆ ಬಾರದೇ ನಾನು ಎದ್ದು ಹೋಗುವ ಹಾಗಿಲ್ಲ.  ಹೊರಗೆ ಜೋರಾಗಿ ಗಾಳಿ ಬೀಸುತ್ತಿತ್ತು, ಒಂದೆರಡು ಹನಿ ಕೂಡ ಬಿದ್ದ ಶಬ್ಧವಾಗುತ್ತಿತ್ತು.  ಬೆಳಗ್ಗೆಯಷ್ಟೇ ತೊಳೆದು ತಾರಸಿಯ ಮೇಲೆ ಒಣಗಿಸಿದ್ದ ಬಟ್ಟೆಗಳ ನೆನಪಾಯ್ತು.  ಮಧ್ಯಾಹ್ನದ ಬಿಸಿಲಿಗೆ ಗರಿ ಗರಿ ಒಣಗಿತ್ತು..! ಥೋ..! ತಂದಿಡಬೇಕಿತ್ತು ಮೊದಲೇ..! ಲೊಚಗುಟ್ಟುತ್ತಾ ಮಗುವ ತಲೆಯನ್ನ ಬೇಗ ಬೇಗ ತಟ್ಟಿದೆ.  ತಟ್ಟಿದ್ದು ಸ್ವಲ್ಪ ಗಟ್ಟಿಯಾಗಿ ಮತ್ತೆ ಕಣ್ಬಿಟ್ಟು ಕುಯ್ಯಿ ಅಂದ. ಸಂತೈಸಿ ಮೆತ್ತಗೆ ತಟ್ಟಿದೆ.  ಅಂತೂ ಇಂತೂ ಮಗುವಿಗೇನೋ ನಿದ್ದೆ ಬಂತು.. ಹಾಗೇ.. ಮಳೆ ಕೂಡ..!  ಆ ಬಟ್ಟೆಗಳ ಗತಿಯನ್ನ ಮತ್ತೆ ನಾನು ಹೇಳಬೇಕಾಗಿಲ್ಲ ಅಲ್ವಾ...?   ಕೊನೆಗೂ ನನ್ನ ಮಗ ಮಲಗಿದ್ದ.   ಸ್ವಲ್ಪ ಹೊತ್ತು ರಿಲ್ಯಾಕ್ಸ್ಆಗಿ ಟಿವಿ ನೋಡೋಣ ಅಂದುಕೊಂಡು ಸೋಫಾದ ಮೇಲೆ ಕೂತಿದ್ದೇ ಕೂತಿದ್ದು ರೂಂನಿಂದ ಮತ್ತದೇ ಕುಸು ಕುಸು ಶಬ್ಧ!   ಮಗ ಮಲಗಿದ್ದಲ್ಲಿಯೇ ಹೊರಳಾಡುತ್ತಾ ನನ್ನನ್ನೇ ಹುಡುಕುತ್ತಿದ್ದ.  ಪೂರ್ತಿ ಎಚ್ಚರಾಗುವ ಮೊದಲು  ಮಲಗಿಸಿ ಬಂದು ಬಿಡಬೇಕು ಎಂದು ಹೋದದ್ದೇ ತಪ್ಪಾಯ್ತು ನೋಡಿ..!   ನನ್ನ ಮಗು ಎದ್ದು ಕುಳಿತು ನನ್ನ ಮುಖ ಸವರುತ್ತಾ ನಗುತ್ತಿದ್ದಾಗಲೇ ನನಗೆ ಎಚ್ಚರವಾದದ್ದು..!  ಆಗಲೇ ನನಗೆ ಅರ್ಥವಾಗಿತ್ತು ನಾನೂ ಒಂದುವರೆ ಗಂಟೆ ಮಲಗಿಬಿಟ್ಟಿದ್ದೆ ಎಂಬುದು. ಅಂಥ ದಿವ್ಯ ನಿದ್ದೆ ಅದು..! ಅಲ್ಲಿಗೆ ನಾನು ಮಾಡಬೇಕಿದ್ದ ಎಲ್ಲ ಕೆಲಸಗಳೂ ಹಾಗೇ ಉಳಿದಿದ್ವು!  ಹೇಳ್ತಾ ಹೋದರೆ ಇಂಥ ಉದಾಹರಣೆಗಳು  ಅದೆಷ್ಟೋ..!?

 ಕಾಮಿಡಿ ವಿಷಯ ಏನು ಗೊತ್ತಾ..? ನಾನು ಅಮ್ಮ ಆಗೋಕೂ  ಮುಂಚೆ ನನಗೆ ನಿದ್ದೆ ಬರಬೇಕು ಅಂದ್ರೆ, ಎಲ್ಲಿಯೂ ಸುಕ್ಕಿರದ ಶಿಸ್ತಾಗಿರುವ ಹಾಸಿಗೆ ಬೇಕಿತ್ತು.  ಲೈಟ್ ಆನ್  ಇದ್ದರೆ ಕಣ್ಣಿಗೆ ನಿದ್ದೆ ಹತ್ತುತ್ತಿರಲಿಲ್ಲ. ಫ್ಯಾನ್‌ಸೌಂಡ್‌ಬಿಟ್ಟು, ಯಾವ ಸದ್ದೂ ಆಗುವಂತಿರಲಿಲ್ಲ.  ಆದ್ರೆ ನನಗೇ ಗೊತ್ತಿರದೇ ಆಗಿನ ಮತ್ತು ಈಗಿನ ಸ್ಥಿತಿಯಲ್ಲಿ ಅಜಗಜಾಂತರ ವ್ಯತ್ಯಾಸವಾಗಿಬಿಟ್ಟಿದೆ.  ಎಂಥದೇ ಪರಿಸ್ಥಿತಿ ಇದ್ದರೂ ನಿದ್ರಾ ದೇವಿ ಅದ್ಭುತವಾಗಿ ನನ್ನನ್ನು ಆವರಿಸಿಕೊಂಡಿರುತ್ತಾಳೆ.   ಮಗನ ಚೇಷ್ಠೆಗೆ ಬೇಸತ್ತು ಅವನಪ್ಪ ಎಂದೋ ಎದ್ದು ಹೋಗಿ ಪಕ್ಕದ ರೂಮ್ನಲ್ಲಿ ಮಲಗಿದ್ದೂ ಕೂಡ  ನನ್ನ ಅರಿವಿಗೆ ಬಂದಿರುವುದಿಲ್ಲ.!  

 ಈಗ ನನ್ನ ಮಗನಿಗೆ ಐದು ವರ್ಷ. ಈಗವನು ದಿನಕ್ಕೊಂದೇ ನಿದ್ರೆ ಮಾಡುತ್ತಾನೆ.  ಈಗ ತಟ್ಟುವುದೂ ಬೇಡ, ಜೋಗುಳವೂ ಬೇಡ.  ಅವನ ಪಾಡಿಗೆ ಅವನು ಮಲಗಿಬಿಡ್ತಾನೆ.  ಆದರೆ ಕಂಡೀಶನ್ಸ್  ಅಪ್ಲೈಯ್ ..! ರಾತ್ರಿ ಹಾಸಿಗೆಗೆ ಹೋದಮೇಲೆ ಅವನು ಕೇಳಿದಷ್ಟು ಕಥೆಗಳನ್ನು ನಾವು ಹೇಳಬೇಕು. (ಕಥೆ ಹೇಳಲು ತಡವಾದ್ರೆ ಅವನ ನಿದ್ದೆಯ ಟೈಮೂ ಪೋಸ್ಟ್ಫೋನ್ ಆಗುತ್ತೆ).    ಇಡೀ ಮನೆಯ ಲೈಟ್ ಆಫ್ ಆಗಿ ಅಪ್ಪ ಅಮ್ಮ  ಅವನ ಅಕ್ಕಪಕ್ಕ ಮಲಗಬೇಕು.  ಅವನ ಇಷ್ಟದ ಆಟಿಗೆಗಳನ್ನ ತಬ್ಬಿ ಹಿಡಿದೇ ಮಲಗಲು ಅವಕಾಶ ಕೊಡಬೇಕು.  ಈ ಎಲ್ಲಾ ಶರತ್ತುಗಳು ಅನ್ವಹಿಸುವುದರಿಂದ ಈಗಲೂ ನನಗೆ ನಿದ್ದೆ ಬಂದಾಗ ಕಣ್ತುಂಬಾ ನಿದ್ದೆ ಮಾಡೋದು ಕನಸಿನ ಮಾತಾಗಿಯೇ ಉಳಿದುಬಿಟ್ಟಿದೆ.  ಯಾಕಂದ್ರೆ, ಮಗನಿಗೆ ನಿದ್ದೆ ಬಂದಮೇಲೆ ಹಾಸಿಗೆಯಲ್ಲೆಲ್ಲ ಹರಡಿ ಚುಚ್ಚುತ್ತಿರುವ ಆಟಿಕೆಗಳನ್ನ ತೆಗೆದಿಡಬೇಕಲ್ಲ..!  ಆ ಕೆಲಸದ ಪಾಳಿ  ಸಧ್ಯಕ್ಕೆ ನನ್ನದೇ..! ಹೀಗಾಗಿ  ಈಗಲೂ ನನ್ನ ಆಸೆ ಒಂದೇ  ‘ ಮಗ ಬೇಗ ಮಲಗಲಿ’ ಅನ್ನೋದು.

 

Sunday, 20 December 2020

'ಪಾಂಡಿಚೇರಿ' ತುಂಬಾ ಚೆನ್ನಾಗಿದೆ.. ಆದರೆ...




ಈಗ ಸರಿಯಾಗಿ ಒಂದು ವರ್ಷದ ಹಿಂದಿನ ಕಥೆ ಇದು.  ಕ್ರಿಸ್ತ ಶಕ ಕರೊನಾ ಪೂರ್ವ ಕಾಲ ಅನ್ನಿ. ಆವತ್ತು ನಮ್ಮ ಮೂವರ ಸವಾರಿ ಗಿರಿನಗರದ ಗಣೇಶ್‌ ಮಾನಸಾ ಮನೆಗೆ ಹೋಗಿತ್ತು.  ಮಾತುಗಳ ಮಧ್ಯೆ ನಮ್ಮಲ್ಲಿಯೇ ಯಾರೋ ಪ್ರವಾಸದ ಪ್ರಸ್ತಾಪ ಮಾಡಿದ್ದರು.  ನಾವ್ಯಾರೂ ಇನ್ನೂ ನೋಡಿರದ ಪಾಂಡೀಚೇರಿಯೇ ನಮ್ಮ ಪ್ರವಾಸಕ್ಕೆ ಸೂಕ್ತ ಎಂಬ ನಿರ್ಣಯೂ ಅಲ್ಲಿಯೇ ಆಗೋಯ್ತು.   ಆದರೆ ಹೋಗುವ ದಿನ ಗೊತ್ತು ಮಾಡುವ ಜವಾಬ್ದಾರಿಯನ್ನ ಸಿ.ಎ ಎಕ್ಸಾಮ್‌ಗೆ ತಯಾರಿಯಲ್ಲಿದ್ದ ನವ ಜೋಡಿ ಗಣೇಶ, ಮಾನಸಾ ಅವರಿಗೇ ಕೊಟ್ವಿ.

ಅಂತೂ ಇಂತೂ ಅದೆಷ್ಟೋ ಕಲಾಪಗಳ ನಂತರ 2019 ರ ಡಿಸೆಂಬರ್‌ ೮ ಮತ್ತು ೯ ದಿನಾಂಕದಲ್ಲಿ ಬರುವ ವಾರಾಂತ್ಯವೇ ಫಿಕ್ಸ್‌ ಆಯ್ತು.  ಇನ್ನೂ ತಿಂಗಳುಗಳ ಕಾಲ ಸಮಯವಿದ್ರೂ ನನ್ನ ಗಂಡ ವಿನಯ್‌ ಹೊಟೆಲ್‌ ಸರ್ಚ್ ಮಾಡೋದ್ರಲ್ಲಿ ತಲ್ಲೀನನಾದ.   ಎಲ್ಲ ಹೊಟೆಲ್‌ಗಳನ್ನ ಒಂದೊಂದಾಗಿ ನೋಡಿ, ರಿವ್ಯೂವ್‌ಓದಿಬೇಕೋ ಬೇಡವೋ ಡಿಸೈಡ್ ಮಾಡಿ , ಮಾನಸಾ ಗಣೇಶರ ಮಾತಿಗೂ ಬೆಲೆಕೊಟ್ಟು ಒಂದು ಅಂದದ  ಹೊಟೆಲ್‌ನಲ್ಲಿ ಎರಡು ಚೆಂದದ ರೂಮ್ಸ್‌ ಬುಕ್‌  ಮಾಡಿದ್ದಾಯ್ತು. 

 ಹೊಟೆಲ್‌  ಬುಕ್‌  ಆಗಿದ್ದೇ ಆಗಿದ್ದು, ನನ್ನೊಳಗೆ ಆಹಾ ಅದೆಷ್ಟು ಉಲ್ಲಾಸಉತ್ಸಾಹ ಅಂತೀರಾ..ನಾನಂತೂ ಪಾಂಡಿಚೇರಿ ಟೂರ್‌ಗಾಗಿ ಶಾಪಿಂಗ್‌ಕೂಡ ಶುರು ಹಚ್ಚಿಬಿಟ್ಟಿದ್ದೆ.  ಎಲ್ಲ ಶಾಪಿಂಗ್‌ ವೆಬ್‌ಸೈಟ್‌ಗಳಿಗೂ ಭೇಟಿಕೊಟ್ಟು, ನನ್ನ ಗಂಡನ ತಲೆಯನ್ನೂ ಸ್ವಲ್ಪ ತಿಂದು ಒಂದೆರಡು ಡ್ರೆಸ್‌  ಕೂಡ ತಗೊಂಡು ಕಬೋರ್ಡ್‌  ಒಳಗೆ ಸೇರಿಸಿಬಿಟ್ಟಿದ್ದೆ.  ನಾವೆಲ್ಲ ಪಾಂಡಿಚೇರಿಯಲ್ಲಿ ಎಲ್ಲಿಲ್ಲಿ ಸುತ್ತಬೇಕುಅಲ್ಲಿ ಏನೇನು ಶಾಪಿಂಗ್‌  ಮಾಡಬೇಕು..? ಅಲ್ಲಿರುವ ಫೇಮಸ್‌  ಟೂರಿಸ್ಟ್ ಅಟ್ರಾಕ್ಷನ್‌ಗಳೆಲ್ಲ ಯಾವ್ಯಾವ್ದು ಅನ್ನೋ ಲಿಸ್ಟ್‌ ವಿನಯ್‌ ಮೊಬೈಲ್‌ನಲ್ಲಿ ರೆಡಿಯಾಗ್ತಿತ್ತು. ಪೋರ್ಚುಗೀಸರ ಕಾಲದ ಕಲರ್‌ ಕಲರ್‌ ಬಿಲ್ಡಿಂಗ್‌ಗಳುಸಮುದ್ರ ತೀರಗಳುಫುಡ್‌ಸ್ಟ್ರೀಟ್‌, ವಾವ್‌ ..! ಅಲ್ಲಿ ಏನುಂಟು ಏನಿಲ್ಲ..?   ಪಾಂಡೀಚೇರಿಯ ಎಲ್ಲ ಟೂರಿಸ್ಟ್‌  ಸ್ಪಾಟ್‌ಗಳನ್ನೂ ಗೂಗಲ್‌ನಲ್ಲಿ ನೋಡಿ ಹಿರಿ ಹಿರಿ ಹಿಗ್ಗಿದ್ದ ನಂಗಂತೂ ಯಾವಾಗಪ್ಪ ಪಾಂಡೀನ ನೋಡ್ತೀನಿ ಅನ್ನಿಸೋಕೆ  ಶುರುವಾಗಿತ್ತು.   ಲ್ಯಾ‌ಪ್‌ಟಾಪ್‌ಮುಂದೆ ನನ್ನ 4 ವರ್ಷದ ಮಗನನ್ನೂ ಕೂರಿಸಿಕೊಂಡು, ಅವನಿಗೂ ಪಾಂಡಿಚೇರಿಯ ಬೀಚ್‌ ತೋರಿಸಿದ್ದೆ.   ಮಗಾ ನೋಡು... ನಾವು ಇದೇ ಬೀಚ್‌ನೋಡೋಕೆ ಹೋಗ್ತಿದೀವಿ. ಅಂತ ಅವನೊಳಗೂ ಕನಸು ಬಿತ್ತಿದ್ದೆ.  ಅವನು ನಂಗೆ ಬೀಚ್‌ನಲ್ಲಿ ಆಟ ಆಡೋಕೆಸ್ಯಾಂಡ್‌ಟಾಯ್ಸ್‌ಕೊಡ್ಸಮ್ಮ ಅಂತ ದುಂಬಾಲು ಬಿದ್ದ.

ಅಂತೂ ನಾವೆಲ್ಲ ಕಾಯುತ್ತಿದ್ದ ದಿನಕ್ಕೆ ಇನ್ನೊಂದೇ ವಾರ ಬಾಕಿ ಇತ್ತು. ಆಗಲೇ ಆಲ್‌ಮೋಸ್ಟ್‌  ನನ್ನ ಪ್ಯಾಕಿಂಗ್‌ಕೂಡ ಮುಗಿದಿತ್ತು.  ಆಗ ಫೋನ್‌ಮಾಡಿದ ಗಣೇಶ, ಒಂದು ಶಾಕಿಂಗ್‌ ನ್ಯೂಸ್‌  ಒಂದನ್ನ ಹೇಳಿದ.  ’ಡಿಸೆಂಬರ್‌  ೯  ನೇ ತಾರಿಖು ಪಾಂಡಿಯಲ್ಲಿ ಮಳೆಯಾಗುತ್ತೆ ಅಂತ ಗೂಗಲ್‌  ವೆದರ್‌  ಹೇಳ್ತಿದೆಯಲ್ಲಾ’ ಅಂದ.   ಅಲ್ಲೇ ಲ್ಯಾಪ್‌ಟಾಪ್‌ನಲ್ಲಿ ನಾವೂ ಚೆಕ್‌ಮಾಡಿ  ’ಓಹೋ ಹೌದಾ... ಲೆಟ್ಸ್‌ಸೀನಾವು ಹೊರಡೋದಿನ್ನೂ ವಾರ ಇದೆ ತಾನೆ..ವೆದರ್‌ಚೇಂಜ್‌  ಆಗ್ಲೂ ಬಹುದು ಅಲ್ವಾ..? ಅಂತ ನಮ್‌ನಮ್ಮೊಳಗೇ ಸಮಾಧಾನ ಮಾಡಿಕೊಂಡ್ವಿ.  ಆವತ್ತಿನಿಂದ ಬೆಳಗ್ಗೆ ಎದ್ದ ತಕ್ಷಣ ಗೂಗಲ್‌ವೆದರ್‌ನಲ್ಲಿ ಪಾಂಡಿಚೇರಿಯ ಹವಾಮಾನವನ್ನ ಚೆಕ್‌ಮಾಡೋದೊಂದು  ನಿತ್ಯ ಕರ್ಮದೊಳಗೊಂದಾಯ್ತು ನಮಗೆ.  ಆದ್ರೆ, ವಾರ ಕಳೆದರೂ ವೆದರ್‌ನಲ್ಲಿ ಯಾವ ಚೇಂಜಸ್‌  ಕೂಡ ಆಗಲಿಲ್ಲ.  ಆದರೂ ನಮ್ಮೊಳಗೆ ಅದೇನೋ ಬಂಢ ಧೈರ್ಯ.  ಅಥವಾ ಮಳೆಯ ಕಾರಣಕ್ಕೆ ತಿಂಗಳುಗಳಿಂದ ಪ್ಲ್ಯಾನ್ ಮಾಡಿದ್ದ ನಮ್ಮ ಟೂರ್‌  ಕ್ಯಾನ್ಸಲ್‌  ಆಗಿಬಿಟ್ಟರೆ..ಅನ್ನೋ ಭಯವೂ ಇದ್ದಿರಬಹುದು. ಹೀಗಾಗಿ ನಾವ್ಯಾರೂ ಟ್ರಿಪ್‌ಕ್ಯಾನ್ಸಲ್‌  ಮಾಡೋ ಬಗ್ಗೆ ಚಕಾರವೆತ್ತಲಿಲ್ಲ.

 ನಾವೆಲ್ಲ ಹೊರಡುವ ಹಿಂದಿನ ದಿನ ಸಂಜೆ, ನನಗೆ ಒಂದು ಸಣ್ಣ ಆಶ್ಚರ್ಯ ಕಾದಿತ್ತು.   ವಿನಯ್‌  ತರಾತುರಿಯಲ್ಲಿ ಆಫೀಸ್‌ನಿಂದಲೇ ಕಾಲ್‌ಮಾಡಿಈಗಿದೀಂಗ ಮಗನ ಜತೆ ತಯಾರಾಗಿರು  ನಾವು ಇವಾಗಲೇ ಪಾಂಡಿಗೆ ಹೊರಡ್ತಿದ್ದೀವಿ ಅನ್ನಬೇಕೆ..? ಶನಿವಾರ ಬೆಳ್ಳಂಬೆಳಗ್ಗೆ ೫ ಗಂಟೆಗೆ ಬೆಂಗಳೂರು ಬಿಟ್ಟು ಮಧ್ಯಾಹ್ನದ ವೇಳೆಗೆ ಪಾಂಡಿಗೆ ತಲುಪುವ ಯೋಜನೆಯಲ್ಲಿ ಬದಲಾವಣೆ ಮಾಡಿದ್ದ ಈ ಗಂಡುಗೋವಿಗಳು ನಮ್ಮನ್ನ ಹೊರಡಿಸಿಕೊಂಡು ಆವತ್ತೇ ರಾತ್ರಿ ಹೊರಟಿದ್ದರು.  ಆವತ್ತು ರಾತ್ರೋ ರಾತ್ರಿ ಬೆಂಗಳೂರು ಮತ್ತು ಪಾಂಡೀ ನಡುವಿನ ಅದ್ಯಾವುದೋ ವೆಲ್ಲೂರು ಎಂಬಲ್ಲಿ ಒಂದು ಹೋಟೆಲ್‌ ಕೂಡ ಬುಕ್‌  ಮಾಡಿದ್ರು ಸರ್‌ಪ್ರೈಸ್‌ಆಗಿ..! ಅಲ್ಲಿ ರಾತ್ರಿ ಉಳಿದುಬೆಳಗ್ಗೆ ಅಲ್ಲಿಂದ ಪಾಂಡಿಗೆ ಹೋಗುವ ದಿಢೀರ್‌  ಯೋಚನೆ ಬಂದಿದ್ದಲ್ಲದೇ..ಅದನ್ನ ಕಾರ್ಯರೂಪಕ್ಕೂ ತಂದಾಗಿತ್ತು.  ಅದೆಲ್ಲ ನನಗೆ ಮತ್ತು ಮಾನಸಾಗೆ ಗೊತ್ತಾಗಿದ್ದೇ ಕಾರ್‌ನಲ್ಲಿ ಹೋಗುತ್ತಿದ್ದಾಗ...!  ಗಡಬಡಾಯಿಸಿಕೊಂಡು ಕಾರು ಹತ್ತಿ ಹೊರಟಿದ್ದ ನಾನು ಮತ್ತು ಮಾನಸಾ ರಾವಣನ ಪುಷ್ಪಕ ವಿಮಾನದಲ್ಲಿ ಕೂತು ಹಾರಿಹೋದ ಸೀತೆಯಂತಾಗಿದ್ವಿ ...! ಆದ್ರೆ ಇಲ್ಲಿ ರಾವಣರ‍್ಯಾರೂ ಇರಲಿಲ್ಲ ಅನ್ನೋದೇ ಸಮಾಧಾನ..!

 ರಾತ್ರೋ ರಾತ್ರಿ ಹೊರಟಿದ್ದ ನಮ್ಮ ಕಾರು, ವೆಲ್ಲೂರನ್ನ ತಲುಪಿದಾಗ ರಾತ್ರಿ 12 ಗಂಟೆಯ ಮಧ್ಯರಾತ್ರಿ.  ಗೂಗಲ್‌ಮ್ಯಾಪ್‌ನಮ್ಮನ್ನ ಆ ಹೋಟೆಲ್‌ನ ಹತ್ತಿರ ಕರೆದೊಯ್ತಾ ಇತ್ತು.  ಯಾವುದೋ ಮೇನ್‌ರೋಡು.  ಇನ್ಯಾವುದೋ ರೈಟು.   ಮತ್ಯಾವುದೋ ಲೆಫ್ಟು.   ಗೂಗಲ್‌ಮ್ಯಾಪ್‌  ಕನ್ಯೆ ಹೇಳಿದ್ದೇ ದಾರಿ!  ಆ ಸುಮಧುರ ಅಶರೀರ ವಾಣಿಯ ಆಣತಿಯಂತೆ ಒಳ ರೋಡ್‌  ಒಂದರಲ್ಲಿ ಎಡಕ್ಕೆ ಹೊರಳಿತು ಕಾರು, ಆ ರಸ್ತೆ ಹೋಗ್ತಾ ಹೋಗ್ತಾ ಕಿರಿದಾಗುತ್ತಾ ಸಾಗುತ್ತಿತ್ತು.  ಅಂಗಡಿ ಮುಂಗುಟ್ಟುಗಳಿದ್ದ ಓಣಿಯಂಥ ಕಿರಿದಾದ ದಾರಿಯಲ್ಲಿಯೇ ಕಾರು ಮುನ್ನುಗ್ಗುತ್ತಿತ್ತು.  ಯಾರನ್ನಾದರೂ ಒಂದು ಮಾತು ಕೇಳೋಣ ಅಂದ್ರೆಆ ಮಧ್ಯ ರಾತ್ರಿಯಲ್ಲಿ ನಮಗೆ ಯಾರು ಸಿಕ್ಕಾರು..ಗೂಗಲ್‌ಕನ್ಯೆ ತೋರಿಸುತ್ತಿರುವ ದಾರಿ ಮಾತ್ರ ತುಂಬಾ ಅನುಮಾನಾಸ್ಪದವಾಗಿತ್ತು.  ಕೊನೆಗೆ ಒಂದು ಬೈಕ್‌ಕೂಡ ದಾಟಿ ಹೋಗದಂಥ ಕಿರಿದಾದ  ಸೇತುವೆಯ ಬಳಿ ಕರೆದುಕೊಂಡು ಬಂದಿದ್ದ ಗೂಗಲ್ ಮ್ಯಾಪ್‌,  ’ಗೊ ಸ್ಟ್ರೇಟ್‌200 ಮೀಟರ‍್ಸ್‌  ಆಂಡ್‌  ಟೇಕ್‌  ಲೆಫ್ಟ್‌’  ಅಂತ ಗೈಡ್‌ಮಾಡ್ತಾನೇ ಇತ್ತು.  ನಮಗೆ ಆಗಲೇ ಗೊತ್ತಾಗಿದ್ದು ಗೂಗಲ್‌ಮ್ಯಾಪ್‌ಅಕ್ಷರ ಷಃ ನಮ್ಮನ್ನ ಹಳ್ಳಹಿಡಿಸಿದೆ ಅಂತ.   ಇನ್ನೇನು..? ಆ ರಸ್ತೆಯಲ್ಲಿ ಹೋಗಲು ಸಾಧ್ಯವೇ ಇಲ್ಲ ಅಂತ ಗೊತ್ತಾದಾಗ ಕಾರ್‌ನ್ನ ಟರ್ನ್‌ಮಾಡಲೇ ಬೇಕಲ್ಲಾ..! ಕಾರ್‌ನ್ನ ರಿವರ್ಸ್ ತರೋಕೂ ಆಗದ ಹಾವಿನಂಥ ರಸ್ತೆ ಅದು..! ಹರ ಸಾಹಸ ಪಟ್ಟು ಗಣೇಶ ಕಾರ್‌ನ್ನ ಟರ್ನ್‌ಮಾಡಿದ್ದ. ನಾವೆಲ್ಲ ನಿಟ್ಟುಸಿರು ಬಿಟ್ವಿ.

 

ಆ ಗಲ್ಲಿ ರಸ್ತೆ ದಾಟಿ,  ಕಾರು ಮೇನ್‌ರೋಡ್‌ಗೆ ಬರುತ್ತಿದ್ದ ಹಾಗೆ,  ರಾತ್ರಿ ಡ್ಯೂಟಿಯಲ್ಲಿದ್ದ ಪೊಲೀಸ್ ಜೀಪ್‌, ನಮ್ಮನ್ನ ಎದುರಾಯ್ತು.   ರಾತ್ರಿ 12.30 ಸಮಯದಲ್ಲಿ ಅನುಮಾನಾಸ್ಪದವಾಗಿ ರೋಡು ರೋಡು ಅಲೆಯುತ್ತಿರುವ ನಮ್ಮ ಕಾರ್‌ನ್ನ ಫಾಲೋ ಮಾಡಿಕೊಂಡು ಬಂದ ಅವರು, ನಮ್ಮನ್ನ ವಿಚಾರಿಸಲು ಪ್ರಯತ್ನಪಟ್ಟರು.  ತಮಿಳಿನಲ್ಲಿ ಅವರು ಅದೇನೋ ಕೇಳ್ತಾ ಇದ್ರೆ, ವಿನಯ್‌  ಇಂಗ್ಲೀಷ್‌ನಲ್ಲಿ ಉತ್ತರಿಸ್ತಾ ಇದ್ರು. ಗಣೇಶ್‌  ಹಿಂದಿಯಲ್ಲಿ ಅವರಿಗೆ ಅರ್ಥ ಮಾಡಿಸ್ತಾ ಇದ್ದ. ಈ ಎರಡೂ ಭಾಷೆಯ ಸಹಾಯದಿಂದ  ಮತ್ತು ನಮ್ಮ ಗಂಡುಗೋವಿಗಳ ಹಾವ ಭಾವದಿಂದ ಅಲ್ಪ ಸ್ವಲ್ಪ ಅರ್ಥ ಮಾಡಿಕೊಂಡು,  ಹೊಟೆಲ್‌  ಹೆಸರು ಗುರುತಿಸಿದ ಅವರು, ಹೊಟೆಲ್‌ಗೆ ಹೋಗೋ ದಾರಿ ತೋರಿಸಿದ್ದರು. 

 ಬೆಳ್ಳಂಬೆಳಗ್ಗೆ 6 ಗಂಟೆಗೇ ರೆಡಿಯಾಗಿನಾವೆಲ್ಲ ಅಲ್ಲಿಯೇ ಇದ್ದ ಫೇಮಸ್‌ ಹೋಟೆಲ್‌ ‘ಸರವಣ ಭವನ್‌’ನಲ್ಲಿ ಗಡದ್ದಾಗಿ ತಿಂಡಿ ತಿಂದು ಅಲ್ಲಿಂದ ಪಾಂಡಿಚೇರಿಯ ಹಾದಿ ಹಿಡಿದ್ವಿ.  ಮಧ್ಯಾಹ್ನ 1.30 ರ ಸುಮಾರಿಗೆ ಪಾಂಡಿಚೇರಿ ಸಿಟಿಯ ಹತ್ತಿರದಲ್ಲಿದ್ವಿ.  ಕನ್ನಡ ಸಾಂಗ್‌ಗಳನ್ನ ಕೇಳ್ತಾ, ಡ್ರೈವ್‌ಎಂಜಾಯ್‌ಮಾಡ್ತಿದ್ದ ನಮಗೆ ದೂರದಲ್ಲಿ ಕರಿಗಪ್ಪು ಮೋಡ ಆವರಿಸಿದ್ದು ಕಾಣಿಸ್ತಾ ಇತ್ತು.   ಚೆಂದದ ಹೆದ್ದಾರಿಯಲ್ಲಿ ಪಾಂಡಿಚೇರಿಯ ಕಡೆಗೆ ಓಡುತ್ತಿರುವ ನಮ್ಮ ಕಾರನ್ನ ಮುಖ ಗಂಟಿಕ್ಕಿಕೊಂಡೇ ಕೆಕ್ಕರಿಸಿ ನೋಡುತ್ತಿತ್ತು ಕರಿಗಪ್ಪು ಮೋಡದ ರಾಶಿ..!  ಪಾಂಡಿಚೇರಿಗೆ ಹತ್ತಿರ ಹತ್ತಿರವಾಗ್ತಾ ಇದ್ದಂತೆ ಕಾರ್ಗಪ್ಪು ಮಳೆ ಮೋಡ ಆಕಾಶದಲ್ಲಿ ಚಪ್ಪರಗಟ್ಟುತ್ತಿರುವುದು ಕಾಣಿಸ್ತಾ ಇತ್ತು.   ವಾರದಿಂದ ಅದೇ ಗೂಗಲ್‌ವೆದರ್‌ ರಿಪೋರ್ಟ್‌  ನೋಡ್ತಿದ್ದ ನಮಗೆ ನಮ್ಮ ಪ್ರವಾಸದ ಭವಿಷ್ಯ ಕಣ್ಮುಂದೆ ಬರೋಕೆ ಇನ್ನೂ ಸಮಯ ಬೇಕಿರಲಿಲ್ಲ.  ಎಂಥ ಮೋಡವಪ್ಪ ಇದು..? ಈ ಮೋಡದ ರಾಶಿಯನ್ನ ನೋಡಿದರೆ.. ಭಯವಾಗ್ತಿದೆ. ಅನ್ನೋ ಉದ್ಘಾರ ಎಲ್ಲರ ಬಾಯಲ್ಲಿ..! ನೋಡ ನೋಡುತ್ತಿದ್ದಂತೆ ಬೃಹತ್‌ಗಾಳಿ ನಮ್ಮ ಕಾರನ್ನ ಅಪ್ಪಳಿಸಿತ್ತು.  ಗಾಳಿಯ ಜೊತೆ ಜೊತೆಗೇ ಮಳೆಯೂ ಆರಂಭವಾಗಿಎರಡೂ ಸೇರಿಕೊಂಡು ’ಈಗ್ಯಾಕೆ ಬಂದ್ರಿ ಇಲ್ಲಿ..?’ ಅಂತ ಅಬ್ಬರಿಸುತ್ತಿದ್ವು.   ವೈಪರ್‌ವೇಗಕ್ಕೂ ಕ್ಯಾರೇ ಎನ್ನದ ಮಳೆಮುಂದಿನ ದಾರಿ ಕಾಣದಷ್ಟು ಓತಪ್ರೋತವಾಗಿತ್ತು. 

ಮಳೆಯಲ್ಲಿಯೇ ನಾವು ಬುಕ್‌ಮಾಡಿದ್ದ ಹೊಟೆಲ್‌ತಲುಪಿದ್ದಾಯ್ತು. ಮಧ್ಯಾಹ್ನ 2.30ಕ್ಕೆ ಕಾರ್‌ನಿಂದ ಹೊರಗಿಳಿಯಲೂ ಸಾಧ್ಯವಾಗಷ್ಟು ಕುಂಭದ್ರೋಣ ಮಳೆ ಅದು. ಹೇಗ್ಹೇಗೋ ಸಾವರಿಸಿಕೊಂಡು ಅಂತೂ ರೂಮ್‌ಒಳಗೆ ಸೇರಿಕೊಂಡ್ವಿ.  ನಮ್ಮ   ’ಲೋಟಸ್‌ ಬೇ ವ್ಯೂವ್‌ ಹೋಟೆಲ್‌’ ರೂಮ್‌ಗಳಷ್ಟೇ ಅದರ ಕಿಟಕಿಗಳೂ ಅಂದವಾಗಿದ್ವು.  ಅಂದು ಹೊಟೆಲ್‌ರೂಮ್‌ನ ಕಿಟಕಿಗೂ ಅದ್ಭುತ ಬೆಲೆ ಬಂದಿತ್ತು. ಕಿಟಕಿಯ ಹತ್ತಿರ ಕೂತು ಹೊರಗಿನ ಮಳೆಗೆ ಕಣ್ಣು ನೆಟ್ಟು ಕೂತಿದ್ದೆ ನಾನು.  ಬಳಿಯೇ ಕೂತಿದ್ದ ನನ್ನ ಮಗ  ’ಅಮ್ಮ ಬೀಚ್‌ಗೆ ಹೋಗೋದು ಯಾವಾಗಮ್ಮ..? ಅಂದ.  ಕೈಯಲ್ಲಿ ಸ್ಯಾಂಡ್‌ಟಾಯ್ಸ್ ಹಿಡಿದುಕೊಂಡು..! 

 ಕಿಟಕಿಯಿಂದ್ಲೇ ಮಳೆಯನ್ನ ನೋಡಿ ನೋಡಿ ಸಂಜೆ 6 ಗಂಟೆಯಾಗಿತ್ತು. ಆ ವೇಳೆಗೆ ಮಳೆ ಯಾಕೋ ಸ್ವಲ್ಪ ಬಿಡುವು ಪಡೆದುಕೊಂಡ್ತು. ಆದರೆ ಆಕಾಶವೇನೂ ತಿಳಿಯಾಗಿರಲಿಲ್ಲ.    ಹೊಟೆಲ್‌ಗೆ ಅತೀ ಹತ್ತಿರದಲ್ಲಿದ್ದ ರಾಕ್‌ಬೀಚ್‌ನಿಂದ್ಲೇ ನಮ್ಮ ಸೈಟ್‌ಸೀಯಿಂಗ್‌ಶುರು ಮಾಡೋಣ ಅಂದುಕೊಂಡುಬೀಚ್‌ನತ್ತ ಹೊರಟಿದ್ವಿ. ಮೋಡ ಕಟ್ಟಿದ್ದ ಆಕಾಶವನ್ನೇ ನೋಡ್ತಾ  ಕಾರ್‌ಪಾರ್ಕ್‌ಮಾಡಿ ಬೀಚ್‌ನಲ್ಲಿ ಸ್ವಲ್ಪ ಹೊತ್ತು ನಿಲ್ಲಬೇಕೆನ್ನುವಷ್ಟರಲ್ಲಿ ಮಳೆ ಶುರುವಾಯ್ತು.  ಸಮುದ್ರದ ಕಡೆಯಿಂದ ಧೋ ಎಂದು ಸುರಿಯುತ್ತಾ ನಮ್ಮ ಅಟ್ಟಿಸಿಕೊಂಡು ಬಂತು ಧೂರ್ತ ಮಳೆ.   ಮತ್ತೆ ಎದ್ನೋ ಬಿದ್ನೋ ಅಂತ ಓಡೋಡಿ ಬಂದು ಕಾರ್‌ಹತ್ತಿ ಕುಳಿತದ್ದಾಯ್ತು.   ಆಗಲೇ ಸಾಯಂಕಾಲವಾಗಿದ್ದರಿಂದ ಮತ್ತೆಲ್ಲಿಗೆ ಹೋಗೋದು..ಎಲ್ಲೆಲ್ಲೂ ಮಳೆ..! ಎಲ್ಲೆಲ್ಲೂ ನೀರು..!

ಈ ಮಳೆಯಲ್ಲಿ ಎಲ್ಲಿಗೂ ಹೋಗೋದು ಬೇಡ. ನಾಳೆ ಬೆಳಗ್ಗೆಯಿಂದ ಮಧ್ಯಾಹ್ನದ ವರೆಗೆ ಎಷ್ಟಾಗುತ್ತೋ ಅಷ್ಟು ಸೈಟ್ ಸೀಯಿಂಗ್ ಮಾಡೋಣ ಎಂಬ ಗಣೇಶನ ಮಾತಿಗೆ ನಾವೆಲ್ಲ ಹೂಂ ಗುಟ್ಟಿ ವಾಪಾಸ್‌ಹೊಟೆಲ್‌ಗೆ ಬಂದಿದ್ದಾಯ್ತು.  ಸ್ಯಾಂಡ್‌ಟಾಯ್ಸ್‌‌ನ ಕವರ್‌ನ್ನ ಕೈಯಲ್ಲೇ ಹಿಡಿದುಕೊಂಡು ವಾಪಾಸ್‌ರೂಮ್‌ಗೆ ಬಂದ ನನ್ನ ಮಗನಿಗೆ ಸ್ವಲ್ಪ ಜಾಸ್ತಿಯೇ ನಿರಾಸೆಯಾಗಿತ್ತು. ಅವನನ್ನ ಸಮಾಧಾನ ಮಾಡೋದೇ ದೊಡ್ಡ ಸವಾಲಾಗಿ ಹೋಯ್ತು. ನಿಜಕ್ಕೂ ಅವನ ಮುಖ ನೋಡಿದರೆ ಪಾಪ ಅನ್ನಿಸ್ತಿತ್ತು.

ನಿರಾಸೆಯಲ್ಲಿಯೇ ರಾತ್ರಿ ಮಲಗಿಬೆಳಗ್ಗೆ ಕಣ್ಣುಬಿಟ್ಟು ನೋಡ್ತೀವಿ ಮಳೆಯ ಪ್ರತಾಪಕ್ಕೆ ಹೊಟೆಲ್‌ಹಿಂಭಾಗವೆಲ್ಲ ನೀರಿನಿಂದ ಆವ್ರತವಾಗಿತ್ತು. ಮಳೆಯಂತೂ ನಿಮಿಷವೂ ಬಿಡುವಿಲ್ಲದೆ ಸುರಿಯುತ್ತಲೇ ಇತ್ತು.  ಬ್ರಮನಿರಸನ ಅಂತಾರಲ್ಲ, ಅದರ  ಸ್ಪಷ್ಟ ಭಾವಾರ್ಥ ಆವತ್ತು ನಮಗಾಗಿತ್ತು..!

 ಹೊಟೆಲ್‌ನಲ್ಲಿಯೇ ರುಚಿಯಾಗಿದ್ದ ಬಿಸಿ ಬಿಸಿ ಬ್ರೇಕ್‌ಫಾಸ್ಟ್‌ಮುಗಿಸಿಚೆಕ್‌ಔಟ್‌ ಮಾಡಿ ಆ ಚೆಂದದ ಹೋಟೆಲ್‌ಗೆ ಗುಡ್‌ಬೈ ಹೇಳಿ ಕಾರ್ ಹತ್ತಿದ್ವಿ.   ನಾವು ತಿಂಡಿತಿಂದು ಚೆಕ್‌ಔಟ್‌  ಪ್ರೋಸೆಸ್‌ ಮುಗಿಸುವ ತನಕ  ಸುಮ್ಮನಿದ್ದು ನೋಡ್ತಾ ಇದ್ದ ಆ ವರ್ಷಿಣಿನಾವು ಕಾರು ಹತ್ತಿದ ತಕ್ಷಣ ಪ್ರತ್ಯಕ್ಷವಾದಳು.  ಅಷ್ಟರ ಮಟ್ಟಿಗೆ ಹೊಟ್ಟೆಕಿಚ್ಚಿನ ಪಾಪಿ ಮಳೆಯಾಗಿತ್ತದು.

 ಅಲ್ಲಿಂದ ಇಲ್ಲಿಗೆ ಬಂದಿದ್ದಕ್ಕೆ, ‘ವಿ ಎಂಜಾಯ್ಡ್‌ ಅ ಲಾಟ್‌ ಇನ್ ಪಾಂಡಿ’ ಅಂತ ಬರೆದು ಒಂದೆರಡು ಫೋಟೋಗಳನ್ನಾದರೂ ವಾಟ್ಸ್ಯಾಪ್‌ ಸ್ಟೇಟಸ್‌ಗೆ ಹಾಕಬೇಡ್ವೆ..ಫ್ರೆಂಚ್‌ಸ್ಟ್ರೀಟ್‌ಲ್ಲಾದ್ರೂ ಒಂದೆರಡು ಫೋಟೋ ಕ್ಲಿಕ್ಕಿಸಿಕೊಳ್ಳೋಣ ಅಂದ್ರೆಆ ನಮ್ಮ ಆಸೆಗೂ ಈ ಮಳೆ ತಣ್ಣೀರು ಎರಚಿತ್ತು.  ಆದರೆ ನಾವು ಹೆದರಲಿಲ್ಲ ನೋಡಿ...!  ಕಾರ್‌ನಲ್ಲಿಯೇ ಫ್ರೆಂಚ್‌ಸ್ಟ್ರೀಟ್‌ನ್ನ ಸುತ್ತುಹಾಕಿಒಂದೆರಡುಕಡೆ ಫೋಟೋವನ್ನೂ ಕ್ಲಿಕ್ಕಿಸಿಕೊಂಡು, ನಮ್ಮ ವಾಟ್ಸ್ಯಾಪ್‌ಫೇಸ್‌ಬುಕ್‌  ಸ್ನೇಹಿತರಿಗೆ  ‘ಪಾಂಡಿಚೇರಿಯಲ್ಲಿಯ ನಮ್ಮ ಭರಪೂರ ಎಂಜಾಯ್‌ಮೆಂಟ್‌’ನ್ನ  ತೋರಿಸಿ ಕೊಟ್ವಿ..!  ನಮ್ಮ ಸ್ಟೇಟಸ್‌ಬರೋ ಕಮೆಂಟ್‌ಗಳಿಗೆ ಖುಷಿಯಿಂದ ಉತ್ತರಿಸ್ತಾನಮ್ಮ ಟ್ರಿಪ್‌ಟೋಟಲೀ ಹಳ್ಳ ಹಿಡಿದಿದ್ದಕ್ಕೆ ಲೊಚಗುಟ್ಟುತ್ತಾ ವಾಪಾಸ್ ಬೆಂಗಳೂರಿನ ದಾರಿ ಹಿಡ್ದ್ವಿ.

 ------------------

 

 

“ಕ್ಯಾನ್ಸರ್‌”

  ಕಟ-ಕಟ ಕಟ-ಕಟ ಶಬ್ಧ ಲಯದಂತೆ ಕಿವಿಗೆ ಅಪ್ಪಳಿಸುತ್ತಾ ಅಪ್ಪಳಿಸುತ್ತಾ, ಕಣ್ಣು ಎಳೆದಂತಾಗಿ ನಿದ್ದೆಯ ಮಂಪರಿನಲ್ಲಿದ್ದಾಗಲೇ, ಮೇಲಿನ ಸೀಟ್‌ಮೇಲೆ ಇಟ್ಟಿದ್ದ ಬ್ಯಾಗ್‌ ಒಂದು...