Tuesday, 20 April 2021

ಕೋತಿಗಳೂ ಮೊಟ್ಟೆ ತಿನ್ನುತ್ತವೆ ಅನ್ನೋ ವಿಷಯ ಗೊತ್ತಾಗಿದ್ದೇ ಆವತ್ತು ನನಗೆ...

 

ಆವತ್ತು ನಾನು ಅವನಿಗೆ ಸ್ವಲ್ಪ ಗಾಬರಿಯಿಂದ್ಲೇ ಫೋನ್ಮಾಡಿದ್ದೆ.  ದನಿಯಲ್ಲಿ ಸ್ವಲ್ಪ ಕಂಪನವಿತ್ತು. ಕಣ್ಣಿನಲ್ಲಿ ನೀರು ಹರಳುಗಟ್ಟಿತ್ತು.   ಮನಸ್ಸು ನಿಜಕ್ಕೂ ನೊಂದಿತ್ತು. 

ಆ ಜೋಡಿಗಳು ಎಷ್ಟೋ ದಿನದಿಂದ ಕಂದನನ್ನ ನೋಡಲು ಕಾತರಿಸುತ್ತಾ  ಇದ್ದವು. ಹಗಲು ರಾತ್ರಿ ಎನ್ನದೆ ಕಣ್ಣಲ್ಲಿ ಕಣ್ಣಿಟ್ಟು ಕಾಯ್ತಾ ಇದ್ದವು. ಇಂದೋ ನಾಳೆಯೋ ಹೊರ ಜಗತ್ತಿಗೆ ಅಡಿ ಇಡುತ್ತಿದ್ದ ಆ ಕಂದಮ್ಮಳು ಅದೆಷ್ಟು ಬೆಳೆದಿದ್ದವೋ ಏನೋ. ಆದ್ರೆ ಅವು ಕಣ್ಣುಬಿಡುವುದಕ್ಕೂ ಮುಂಚೆಯೇ ಕಣ್ಮುಚ್ಚಿದ್ದವು.   ಮಕ್ಕಳನ್ನ ಬದುಕಿಸಿಕೊಳ್ಳುವಲ್ಲಿ ಆ ತಂದೆ ತಾಯಿಯೂ ಸೋತಿದ್ದರು. ಅವಕ್ಕೆ ಸಹಾಯ ಮಾಡಲಾಗದೇ ನಾನೂ ಸೋತಿದ್ದೆ.

ಎರಡು ವರ್ಷದ ಹಿಂದಿನ ಕಥೆ ಇದು.  ನಾಲ್ಕಂತಸ್ಸಿನ ಅಪಾರ್ಟ್‌ಮೆಂಟ್‌ನ  ಕೊನೆಯ ಮಹಡಿಯಲ್ಲಿ ನಮ್ಮ ಮನೆ. ಅಪಾರ್ಟ್ಮೆಂಟ್ನ ಹಿಂದೆ ದಟ್ಟ ಮರಗಳಿರುವ ಸರ್ಕಾರಿ ಜಾಗ. ಹಸಿರಿಗೆ ಹತ್ತಿರದಲ್ಲಿದ್ದ ಈ ಅಪಾರ್ಟ್ಮೆಂಟ್ ಕೇವಲ ಮನುಷ್ಯರಿಗೊಂದೇ ವಾಸಸ್ಥಾನವಲ್ಲ..! ಜೇನು, ಪಾರಿವಾಳಗಳಿಗೂ ಅಲ್ಲಿತ್ತು ಪರ್ಮನೆಂಟ್ ಅವಕಾಶ. ಕೋತಿಗಳು ಮಾತ್ರ ಅನಿರೀಕ್ಷಿತ ಆಗಂತುಕರು. ವಾರದಲ್ಲಿ ಕನಿಷ್ಠ ಒಂದು ಬಾರಿಯಾದರೂ ನಮ್ಮ ಅಪಾರ್ಟ್ಮೆಂಟ್ ಲಗ್ಗೆ ಇಡದೇ ಬಿಡುವವಲ್ಲ ಆ ಕೋತಿಗಳ ದಂಡು.

 ಕೋತಿಗಳು ಬಂದವೆಂದರೆ, ಎಲ್ಲರ ಮನೆಯ ಕಿಟಕಿಗಳು, ಗ್ಯಾಲರಿ ಗಾಜುಗಳು ಭದ್ರವಾಗಲೇಬೇಕು. ಅಪ್ಪಿ ತಪ್ಪಿ ಇಲ್ಲವೆಂದುಕೊಳ್ಳಿ, ಅವು ಮನೆಯೊಳಗೆ ಬಂದವೆಂದೇ ಅರ್ಥ.  ಒಳಗೆ ಬಂದ ತಕ್ಷಣ ತೀರ ಪರಿಚಿತರಂತೆ, ರಾಜಾರೋಷವಾಗಿ ಅಡುಗೆ ಮನೆಗೇ ದಾಳಿ ಇಡುವ ಅವು ಹಣ್ಣು, ತರಕಾರಿ, ತೆಂಗಿನಕಾಯಿ, ಹಾಲು, ಮೊಸರು ಪ್ಯಾಕ್ನ ಆದಿಯಾಗಿ ಏನು ಸಿಕ್ಕರೂ ಹೊತ್ತಯ್ದು ಬಿಡುತ್ತಿದ್ದವು.

 ಒಂದುಬಾರಿಯಂತೂ ನಮ್ಮ ಮನೆಯ ಅಡುಗೆ ಮನೆಯ ಮೂಲೆಯಲ್ಲಿಟ್ಟಿದ್ದ ತಾಜಾ ಎಳೆನೀರನ್ನು ಹೊತ್ತೊಯ್ದಿತ್ತು ಕೋತಿ.  ಗ್ಯಾಲರಿ ಕಿಂಡಿಯಲ್ಲಿ ತನ್ನ ಜತೆ ತೂರಿಕೊಳ್ಳದ ಎಳೆನೀರು ಕಾಯಿಯನ್ನ ಅಲ್ಲಿಯೇ ಒಡೆದು ನೀರುಕುಡಿದು ಖಾಲಿಮಾಡಿ ಅದನ್ನಲ್ಲಿಯೇ ಇಟ್ಟು, ಅಸಹಾಯಕಿಯಾದ ನನ್ನ ನೋಡಿ ಕಣ್ಣು ಪಿಳುಕಿಸಿತ್ತು.     

 ಇಂಥ ಕೋತಿ ಕಾಟವಿದ್ದ ನಮ್ಮ ಮನೆಯಲ್ಲಿ ನಮ್ಮ ಜತೆ ಇನ್ನೊಂದು ಸಂಸಾರ ವಾಸವಿತ್ತು. ಅದೊಂದು ಪಾರಿವಾಳದ ಸಂಸಾರ.  ಆ ಹಕ್ಕಿಗಳು, ಕಿಟಕಿ ತೆಗೆದೇ ಇದ್ದರೂ ಕೂಡ ಯಾವತ್ತೂ ಮನೆಯೊಳಗೆ ಬಂದಿದ್ದಿಲ್ಲ. ಗ್ಯಾಲ್ರಿ ಕಂಬಿಯ ಮೇಲೆ ಸದಾ ಕೂತು ಸಪ್ಪಳ ಮಾಡ್ತಾ ತಮ್ಮದೇ ಲೋಕದಲ್ಲಿ ಹಾಯಾಗಿರುವ ಅವನ್ನ ನೋಡಿದ್ರೆ, ‘ನಾನು ಬಡವಿ ಆತ ಬಡವ ಒಲವೆ ನಮ್ಮ ಬದುಕು’ ಎಂಬ ಕವನ ನೆನಪಾಗ್ತಿತ್ತು. 

ಆಗ ಮೂರು ವರ್ಷದ ಪುಟಾಣಿಯಾಗಿದ್ದ ನನ್ನ ಮಗನಿಗಂತೂ ಆ ಪಾರಿವಾಳಗಳೆಂದರೆ ಖುಷಿಯೋ ಖುಷಿ.  ದಿನದಲ್ಲಿ ಅದೆಷ್ಟು ಬಾರಿ ಬೇಕಾದ್ರೂ , ತನಗೆ ನೆನಪಾದಾಗಲೆಲ್ಲ ಅವಕ್ಕೆ ಅಕ್ಕಿ ಹಾಕ್ತಿದ್ದ.  ಅವು ತಿನ್ನೋದನ್ನ ನೋಡ್ತಾ ಖುಷಿ ಪಡ್ತಿದ್ದ. ನಮಗೆಲ್ಲ ಆ ಪಾರಿವಾಳಗಳ ಮೇಲೆ ಅದೇನೋ ಹೇಳತೀರದ ಮಮತೆ.

ಅವುಗಳ ಆಟಪ್ರೀತಿ, ಎಂದೆಂದೂ ಬಿಟ್ಟಿರದ ಅವುಗಳ ಬಂಧವನ್ನ ನೋಡೋದೇ ಚೆಂದ. ನಮ್ಮ ಮನೆಯ ಹೂ ಗಿಡದ ಪಾಟ್‌ಅವುಗಳ ಮೀಟಿಂಗ್ ಸ್ಪಾಟ್‌. ಎಂದೆಂದೂ ಅಲ್ಲೇ ಅವುಗಳ ಸರಸ ಸಲ್ಲಾಪ. ಅಲ್ಲಿದ್ದ ಖಾಲಿ ಪಾಟ್‌ಅವುಗಳ ಮನೆಯಾಯ್ತು. ಬರ್ತಾ ಬರ್ತಾ ಅವುಗಳ ಸಂಭ್ರಮ ಹೇಳತೀರದು.  ಒಣ ಕಡ್ಡಿಗಳು, ಹುಲ್ಲುಗಳು, ಎಲೆಗಳನ್ನ ತಂದು ಪಾಟ್‌ನಲ್ಲಿ ಹಾಕಿ ಒಂದು ಮುದ್ದಾದ ಗೂಡೂ ಕೂಡ ಅಲ್ಲಿ ಸಿದ್ಧವಾಗಿಬಿಟ್ಟಿತ್ತು. ಅವುಗಳ ತಯಾರಿ ನೋಡಿಯೇ ಅಂದುಕೊಂಡಿದ್ದೆ ಇವರ ಸಂಸಾರ ದೊಡ್ಡದಾಗ್ತಿದೆ ಅಂತ. ಒಂದು ದಿನ ನನ್ನ ಎಕ್ಸಪೆಕ್ಟೇಶನ್‌ನಿಜವಾಗಿತ್ತು. ಆ ದಿನ ಬೆಳ್ಳಂಬೆಳಗ್ಗೆ ಕಣ್ಣು ಉಜ್ಜಿಕೊಳ್ತಾ ಬಂದು ನೋಡ್ತೀನಿಗೂಡಲ್ಲಿದ್ವು ಎರಡು ಪುಟಾಣಿ ಮೊಟ್ಟೆಗಳು..!   ಆವತ್ತು ನನ್ನ ಮಗ ಕುಣಿದಾಡಿಬಿಟ್ಟಿದ್ದ. ಮೊಟ್ಟೆಗಳನ್ನ ನಾವು ಮುಟ್ಟಬಾರದು ಅಂದಿದ್ದಕ್ಕೆ ಹೂಂಗುಟ್ಟಿದ್ದ ಅವನು, ತನ್ನ ಪುಟಾಣಿ ಕಾತುರ ಕಣ್ಣುಗಳಲ್ಲಿ ಅವುಗಳನ್ನ ಹತ್ತಿರದಿಂದ ನೋಡ್ತಾ ಇದ್ದ.

ಆ ಪಾರಿವಾಳಗಳಿಗೆ ನಮ್ಮ ಮೇಲೆ ನಂಬಿಕೆಯೋ ಅಥವಾ ಮೊಟ್ಟೆಗಳ ಮೇಲಿನ ಮೋಹವೋ ಗೊತ್ತಿಲ್ಲ, ಮೊಟ್ಟೆಗಳು ಹುಟ್ಟಿದಾಗಿನಿಂದ ಅವಕ್ಕೆ ಧೈರ್ಯ ಜಾಸ್ತಿಯಾಗಿತ್ತು. ಮೊದಲೆಲ್ಲ ನಾವು ಹತ್ತಿರ ಹೋದಾಗ ಪುರ್‌ಎಂದು ಹಾರಿಹೋಗುತ್ತಿದ್ದ ಪಾರಿವಾಳಗಳು ಈಗ ನಾವು ಅವುಗಳ ಗೂಡಿಗೆ ಎಡತಾಕಿದರೂ ಅಲುಗಾಡುತ್ತಲೂ ಇರಲಿಲ್ಲ.  ಮಕ್ಕಳು ಬಂದಾಗ ಮನಸ್ಸೆಷ್ಟು ಗಟ್ಟಿಯಾಗುತ್ತೆ ಅಲ್ವಾ.. ಅಂತೆನಿಸಿತ್ತು ನಂಗೆ.

ಆ ಜೋಡಿ ಪಾರಿವಾಳಗಳು ಮೊಟ್ಟೆಯನ್ನ ಕಾಯ್ತಾ ಇದ್ದುದು ಪಾಳಿಯ ಮೇಲೆ. ಸಾಮಾನ್ಯವಾಗಿ ತಾಯಿ ಹಕ್ಕಿ ತಾಸುಗಟ್ಟಲೇ ಮೊಟ್ಟೆಗಳ ಮೇಲೆ ಕೂತಿರುತ್ತಿತ್ತು. ಆದರೆ ತಾಯಿ ಇಲ್ಲದಾಗ ತಂದೆ ಮೊಟ್ಟೆಗಳನ್ನ ನೋಡಿಕೊಳ್ತಿತ್ತು. ಎಂದೆಂದೂ ಆ ಜೋಡಿಗಳು ಮೊಟ್ಟೆಗಳನ್ನ ಬಿಟ್ಟು ಹೋದದ್ದಿಲ್ಲ.

 ಕಳೆದ ಹದಿನೈದು ದಿನಗಳಿಂದ ಅಪಾರ್ಟ್‌ಮೆಂಟ್‌ಕಡೆ ಸುಳಿಯದಿದ್ದ ಕೋತಿಗಳು ಆವತ್ತು ಮಧ್ಯಾಹ್ನ ಪ್ರತ್ಯಕ್ಷವಾಗಿದ್ವು.  ಎರಡು ಕೋತಿಗಳು ನಮ್ಮ ಗ್ಯಾಲರಿ ಕಂಬಿಗಳನ್ನ ಹಿಡಿದು ನೇತಾಡ್ತಾ ಬಂದು ಪಾಟ್‌ಪಕ್ಕದಲ್ಲಿಯೇ ಕೂತಿದ್ದೇ, ಗೂಡಿನಲ್ಲಿದ್ದ ತಾಯಿ ಪಾರಿವಾಳ ಭಯದಿಂದ ಹಾರಿಹೋಗಿತ್ತು. ಮೊಟ್ಟೆಗಳ ಭಾರವನ್ನ ನನ್ನ ಮೇಲೆ ಬಿಟ್ಟು..!

ಮನೆಯಲ್ಲಿದ್ದವಳು ನಾನೊಬ್ಬಳೇ..! ಏನು ಮಾಡಲಿ..? ಆ ಗೂಂಡಾ ಕೋತಿಗಳಂದ್ರೆ ನನಗೂ ಭಯ ತಾನೇ..? ಗ್ಯಾಲರಿ ಗಾಜು ಜರುಗಿಸಿ ಕೋತಿಗಳನ್ನ ಓಡಿಸುವಷ್ಟು ಧೈರ್ಯವಂತೆ ಅಲ್ಲ ನಾನು.  ಗಾಜು ತೆರೆದರೆ ಮನೆಯೊಳಗೇ ನುಗ್ಗುವ ಆ ಮರ್ಕಟಗಳು ಸಾಮಾನ್ಯ ಧರೋಡೆಕೋರರಲ್ಲ..!  ಆದರೂ ಗ್ಯಾಲರಿ ಗಾಜುಗಳ ಬಳಿ ನಿಂತು, ಹುಷ್‌... ಹುಷ್‌... ಅನ್ನುತ್ತಾ ಪೊರಕೆಯನ್ನ ಗಾಜಿಗೆ ತಾಕಿಸಿ ಅಲುಗಾಡಿಸಿದೆ.  ನನ್ನ ಬೆದರಿಕೆಗೆ ಕ್ಯಾರೇ ಅನ್ನದ ಕೋತಿಗಳು, ಗೂಡಿನಲ್ಲಿದ್ದ ಎರಡೂ ಮೊಟ್ಟೆಗಳನ್ನ ಕೈಯ್ಯಲ್ಲಿ ತೆಗೆದುಕೊಂಡ್ವು. ನನ್ನ ಕಣ್ಣಾರೆ, ಆ ಮೊಟ್ಟೆಗಳು ಮಣ್ಣಾಗೋದನ್ನ ನೋಡಬೇಕಲ್ಲಾ..! ಏಯ್‌ಮಂಗ, ಮೊಟ್ಟೆ ಅಲ್ಲೇ ಇಡು ಪಾಪಿ...! ಅಂತ ಕಿರುಚಿಕೊಳ್ತಾ ಗಾಜನ್ನ ಡಬ್‌ಡಬ್‌ಅಂತ ಬಡಿದೆ. ಶಬ್ಧದಿಂದ ವಿಚಲಿತಗೊಂಡ ಆ ಕೋತಿಗಳು ನನ್ನ ನೋಡಿ ಕೆಸ್‌..ಎಂದ್ವೇ ಹೊರತು ಮೊಟ್ಟೆಗಳನ್ನ ಬಿಟ್ಟಿಲ್ಲ. ಬದಲಾಗಿ ಅವನ್ನ ಹಲ್ಲಲ್ಲಿ ಕಚ್ಚಿ ಒಡೆದುಕೊಂಡು, ಒಳಗಿದ್ದ ರಸವನ್ನ ಹೀರಿಬಿಟ್ಟಿದ್ದವು..! ಚಿಪ್ಪನ್ನೂ ಬಿಡದೆ ನೆಕ್ಕಿ ಅಲ್ಲೇ ಎಸೆದು ಕಾಲ್ಕಿತ್ತವು. ಕೋತಿಗಳೂ ಮೊಟ್ಟೆ ತಿನ್ನುತ್ತವೆ ಅನ್ನೋ ವಿಷಯ ಗೊತ್ತಾಗಿದ್ದೇ ಆವತ್ತು ನನಗೆ .  ತುಂಬಾ ನೋವಾಗಿತ್ತು.  ಮೊಟ್ಟೆಗಳನ್ನ ರಕ್ಷಿಸೋಕೆ ನನ್ನಿಂದಲೂ ಆಗಿಲ್ಲವಲ್ಲ ಎಂಬ ಪಾಪಪ್ರಜ್ಞೆ..! ಆಗಲೇ ನಾನು ನನ್ನ ಗಂಡನಿಗೆ ಫೋನಾಯಿಸಿ, ನನ್ನ ಅಸಹಾಯಕತೆಯನ್ನ ಹೇಳಿಕೊಂಡಿದ್ದೆ.

 ಇದನ್ನೆಲ್ಲ ದೂರದಲ್ಲೆಲ್ಲೋ ಕುಳಿತು ಪಾರಿವಾಳ ನೋಡಿತ್ತೋ ಏನೋ ಗೊತ್ತಿಲ್ಲ.  ಎಷ್ಟು ಹೊತ್ತು ಕಾದರೂ ಪಾರಿವಾಳಗಳ ಪತ್ತೆಯೇ ಇರಲಿಲ್ಲ. ಸಾಯಂಕಾಲ ವಾಪಾಸ್‌ಗೂಡಿಗೆ ಬಂದದ್ದು ಒಂದೇ ಪಾರಿವಾಳ.  ಅದು ತಾಯಿಯೋ..? ತಂದೆಯೋ..? ಗೊತ್ತಾಗಲಿಲ್ಲ ನನಗೆ.   ಅಲ್ಲಿ ಚದುರಿ ಬಿದ್ದಿದ್ದ ಮೊಟ್ಟೆಗ ಚಿಪ್ಪುಗಳನ್ನ ನೋಡ್ತಾ ಅಲ್ಲೇ ಸ್ವಲ್ಪ ಹೊತ್ತು ಕೂತಿತ್ತು.  ಅದು ಮೌನವಾಗಿ ಕೂತಿದ್ದನ್ನ ನೋಡಿ ನನಗೆ ಕರುಳು ಕಿವುಚಿತ್ತು.  ಕ್ಷಮಿಸಿ ಮಕ್ಕಳೇ ಎನ್ನುವ ಮಾತು ಅದರ ಗಂಟಲಲ್ಲಿತ್ತೇನೋ ಪಾಪ..! 

ಮರುದಿನ ಅದೇ ಜಾಗದಲ್ಲಿ ಮತ್ತದೇ ಜೋಡಿ ಬಂದು ಕೂತಿತ್ತು. ಪ್ರಕೃತಿಯ ಈ ಆಟಕ್ಕೆ ನಾನು ಬೆರಗಾಗಿದ್ದೆ!  ಕಣ್ಣಾರೆ ಮಕ್ಕಳನ್ನ ಕಳೆದುಕೊಂಡು ಎಲ್ಲವನ್ನೂ ಮೌನವಾಗಿ ಸಹಿಸಿದ ಆ ಪಾರಿವಾಳಗಳು ಆವತ್ತು ತಾಳ್ಮೆಯ ಮೂರ್ತಿಗಳಂತೆ ಕಾಣುತ್ತಿದ್ವು. ಎಲ್ಲವನ್ನೂ ಮತ್ತೆ ಸೃಷ್ಟಿಸುವ ಅವುಗಳ ಆತ್ಮವಿಶ್ವಾಸ  ಎಂಥವರಿಗೂ ಧೈರ್ಯ ಹೇಳುವಂತಿತ್ತು.  

 

 

5 comments:

  1. ಪಾರಿವಾಳಗಳು ಕತ್ತು ಕುಣಿಸುತ್ತ ಅಲ್ಲಿಂದಿಲ್ಲಿ ಹೆಜ್ಜೆ ಹಾಕುವುದನ್ನು ನೋಡುವುದೇ ಆನಂದ. ನಮ್ಮ ಮನೆಯ ಗ್ಯಾಲರಿಯಲ್ಲೂ ಅಷ್ಟೆ. ಎದುರಿಗಿನ ಅಪಾರ್ಟ್ಮೆಂಟ್ನಲ್ಲಿ ಕಾಳು ತಿಂದು, ಇಲ್ಲಿಗೆ ಬಂದು ನೀರು ಕುಡಿಯುವುದು ದಿನನಿತ್ಯದ ಅಭ್ಯಾಸ. ಕಿಟಕಿ ಬಾಗಿಲು ತೆರೆದರೆ ಅನುಮತಿ ಇಲ್ಲದೆ ಸೀದಾ ಒಳಗೆ ಪ್ರವೇಶ. ಅದೇ ಚಂದ.

    ReplyDelete
    Replies
    1. ನೀವು ಹೇಳಿದ್ದು ಸತ್ಯ. ನಿಮ್ಮ ಪ್ರತಿಕ್ರಿಯೆ ಓದಿ ಖುಷಿಯಾಯ್ತು. ಧನ್ಯವಾದಗಳು.

      Delete
  2. ನೀವು ಬರೆಯುವ ಕಥೆಗಳು ತುಂಬಾ ಚೆನ್ನಾಗಿರುತ್ತದೆ ಮನಸ್ಸಿಗೆ ತುಂಬಾ ಹತ್ತಿರವಾಗಿರುತ್ತದೆ. Very nice story all the best keep it up

    ReplyDelete
  3. ನೀವು ಬರೆಯುವ ಕಥೆಗಳು ತುಂಬಾ ಚೆನ್ನಾಗಿರುತ್ತದೆ ಮನಸ್ಸಿಗೆ ತುಂಬಾ ಹತ್ತಿರವಾಗಿರುತ್ತದೆ. Very nice story all the best keep it up

    ReplyDelete
    Replies
    1. ನಿಮ್ಮ ಪ್ರತಿಕ್ರಿಯೆ ಓದಿ ಖುಷಿಯಾಯ್ತು. ಧನ್ಯವಾದಗಳು

      Delete

“ಕ್ಯಾನ್ಸರ್‌”

  ಕಟ-ಕಟ ಕಟ-ಕಟ ಶಬ್ಧ ಲಯದಂತೆ ಕಿವಿಗೆ ಅಪ್ಪಳಿಸುತ್ತಾ ಅಪ್ಪಳಿಸುತ್ತಾ, ಕಣ್ಣು ಎಳೆದಂತಾಗಿ ನಿದ್ದೆಯ ಮಂಪರಿನಲ್ಲಿದ್ದಾಗಲೇ, ಮೇಲಿನ ಸೀಟ್‌ಮೇಲೆ ಇಟ್ಟಿದ್ದ ಬ್ಯಾಗ್‌ ಒಂದು...