ಸಿರಿಯಾ' ಇದು ನೈರುತ್ಯ ಏಷ್ಯಾದಲ್ಲಿರುವ ಒಂದು ಅರಬ್ ದೇಶ. ಈ ದೇಶದ ಪರಿಸ್ಥಿತಿಯ ಕುರಿತು ಅಮೆರಿಕಾದ ಮಾಜಿ ವಿದೇಶಾಂಗ ಸಚಿವೆ ಹಿಲರಿ ಕ್ಲಿಂಟನ್ ಮಾರ್ಮಿಕವಾಗಿ ಮಾತನಾಡಿದ್ದರು. ಫೆ.1ರಂದು ತಮ್ಮ ಸ್ಥಾನದಿಂದ ನಿವೃತ್ತಿ ಹೊಂದಿದ ಹಿಲರಿ ಕ್ಲಿಂಟನ್ ಸಿರಿಯಾ ಪರಿಸ್ಥಿತಿಯ ಕುರಿತು ಬೆಳಕು ಚೆಲ್ಲಿದರು.
ತಮ್ಮ ಹುದ್ದೆಯಿಂದ ಕೆಳಗಿಳಿಯುವ ಸಂದರ್ಭದಲ್ಲಿ ಮಾತನಾಡಿದ್ದ ಹಿಲರಿ ಕ್ಲಿಂಟನ್, ಹಿಂಸೆ ಮಿತಿಮೀರಿ ಹೋಗಿರುವ ಸಿರಿಯಾದ ಅಧಃಪತನದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರು. ಸಿರಿಯಾದ ಅಧ್ಯಕ್ಷ ಬಶರ್ ಅಲ್ ಅಸಾದ್‌ರ ಸಾಮರ್ಥ್ಯವನ್ನು ಹೆಚ್ಚಿಸಲು ಇರಾನ್ ಮತ್ತು ರಷ್ಯಾ ಪ್ರಯತ್ನಿಸುತ್ತಿವೆ. ಆರ್ಥಿಕ ಹಾಗೂ ಮಿಲಿಟರಿ ಸಹಾಯ ನೀಡಿ, ಸಿರಿಯಾ ಸರ್ಕಾರದ ಅಕ್ರಮಗಳಿಗೆ ಪ್ರೋತ್ಸಾಹ ನೀಡುತ್ತಿದೆ. ಸಿರಿಯಾ ಸರ್ಕಾರಕ್ಕೆ ರಷ್ಯಾ ಯುದ್ಧದ ಆಯುಧಗಳನ್ನು ಒದಗಿಸಿ, ಆ ಮೂಲಕ ಅಲ್ಲಿಯ ಜನಾಂಗೀಯ ಕದನಕ್ಕೆ ಕುಮ್ಮಕ್ಕು ನೀಡುತ್ತಿವೆ ಎಂಬ ಬಗ್ಗೆ ಬೆಳಕು ಚೆಲ್ಲಿದ್ದರು.
ಕಳೆದ 22 ತಿಂಗಳಿನಿಂದ ನಿರಂತರವಾಗಿ ಸಿರಿಯಾದಲ್ಲಿ ನಡೆಯುತ್ತಿರುವ ಜನಾಂಗೀಯ ಕಲಹದಿಂದಾಗಿ 60 ಸಾವಿರಕ್ಕೂ ಹೆಚ್ಚು ಅಮಾಯಕ ಪ್ರಜೆಗಳು ಬಲಿಯಾಗಿದ್ದಾರೆ. ದಿನದಿಂದ ದಿನಕ್ಕೆ ರಕ್ತಪಾತ ಹೆಚ್ಚಾಗುತ್ತಿದೆ, ಸತತ ಯುದ್ಧ, ರಾಷ್ಟ್ರದೊಳಗಿನ ಜನಾಂಗೀಯ ಕದನ, ಅವ್ಯಾಹತವಾಗಿ ನಡೆಯುತ್ತಿರುವ ಹಿಂಸೆಯಿಂದ ಸಿರಿಯಾ ರಾಷ್ಟ್ರ ನಲುಗಿ ಹೋಗಿದೆ ಎಂದ ಹಿಲರಿ ಕ್ಲಿಂಟನ್ ವಿಷಾದ ವ್ಯಕ್ತಪಡಿಸಿದ್ದರು.
ಸಿರಿಯಾ ದೇಶದ ಗಡಿಯಲ್ಲಿ ಇಸ್ರೇಲ್ ಸತತ ಬಾಂಬ್ ದಾಳಿ ನಡೆಸುತ್ತಿದೆ. ಡೆಮಾಸ್ಕಸ್‌ನಲ್ಲಿ ನಿರಂತರವಾಗಿ ಇಸ್ರೇಲ್ ದಾಳಿ ನಡೆಸುತ್ತಲೇ ಇದೆ. ಇಸ್ರೇಲ್ ದಾಳಿಯನ್ನು ಎದುರಿಸಲು ಇರಾನ್ ಮತ್ತು ರಷ್ಯಾ ಸಿರಿಯಾ ಸರ್ಕಾರಕ್ಕೆ ಸಹಾಯ ನೀಡುತ್ತಿವೆ ಎಂಬ ವಿಷಯವನ್ನು ತಿಳಿಸಿದ್ದರು.
‘ಸಿರಿಯಾ’ ಅಮಾನವೀಯತೆ, ಹಿಂಸೆ ತುಂಬಿ ತುಳುಕುತ್ತಿರುವ ದೇಶ ಇದು. ಈ ದೇಶದ ಇಂದಿನ ಪರಿಸ್ಥಿತಿ ಹೇಗಿದೆ ಅಂದರೆ, ಅಕ್ಷರ ಷಃ ಅಲ್ಲಿಯ ಪ್ರಜೆಗಳು ನರಕ ಯಾತನೆ ಅನುಭವಿಸುತ್ತಿದ್ದಾರೆ. ಈ ರಾಷ್ಟ್ರದಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಜನಾಂಗೀಯ ಕದನ ಮತ್ತು ಹಿಂಸಾಚಾರ ಜಗತ್ತನ್ನೇ ಬೆಚ್ಚಿಬೀಳಿಸಿದೆ.
ಸಿರಿಯಾದ ಅಧ್ಯಕ್ಷ 'ಬಷರ್ ಅಲ್ ಅಸ್ಸಾದ್' ಹಾಗೂ ಇವರ ಆಡಳಿತವನ್ನು ವಿರೋಧಿಸುವ ಕ್ರಾಂತಿಕಾರಿ ಸಂಘಟನೆಗಳ ನಡುವೆ ಭೀಕರ ಕದನ ನಡೆಯುತ್ತಿದೆ. ಇವರಿಬ್ಬರ ಹೊಡೆದಾಟಕ್ಕೆ ಅಮಾಯಕ ಪ್ರಜೆಗಳು ಬಲಿಯಾಗುತ್ತಿದ್ದಾರೆ.
ಸಿರಿಯಾ ಅಧ್ಯಕ್ಷ 'ಬಷರ್‌ಅಲ್‌ಅಸ್ಸಾದ್'ದೇಶದಲ್ಲಿ ಅಲ್ಪ ಸಂಖ್ಯಾತರಾಗಿರುವ ಶಿಯಾ ಉಪಪಂಗಡ ಅಲಾವಿ ಸಮುದಾಯಕ್ಕೆ ಸೇರಿದವರು. ಶಿಯಾ ಪ್ರತಿನಿಧಿಯೊಬ್ಬರು ತಮ್ಮ ದೇಶ ಆಳುವುದನ್ನು ಸಹಿಸದ ಬಹುಸಂಖ್ಯಾತ ಸುನ್ನಿ ಸಮುದಾಯಗಳು, ಸರ್ಕಾರದ ವಿರುದ್ಧವೇ ಬಂಡೆದ್ದವು.
ಸಿರಿಯಾ ದೇಶದಲ್ಲಿ ಸುಮಾರು 22,243 ಮಂದಿ ಬಂಡುಕೋರರು, ಸರ್ಕಾರದ ವಿರುದ್ಧ ಹೋರಾಡುತ್ತಿದ್ದಾರೆ. ಕ್ರಾಂತಿಕಾರಿಗಳನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿರುವ ಸಿರಿಯಾ ಸರ್ಕಾರಕ್ಕೆ ಷಿಯಾ ಪ್ರಾಬಲ್ಯದ ಇರಾನ್ ಮತ್ತು ಲೆಬನಾನ್ ದೇಶಗಳು ಬೆಂಬಲಿಸುತ್ತಿವೆ. ಹಾಗೇ, ಸೌದಿ ಅರೇಬಿದಂತಹ ಸುನ್ನಿ ಪ್ರಾಬಲ್ಯದ ದೇಶಗಳು ಅಧ್ಯಕ್ಷ 'ಅಸ್ಸಾದ್' ವಿರುದ್ಧ ಹೋರಾಡುವವರಿಗೆ ಬೆಂಬಲವಾಗಿ ನಿಂತಿವೆ.
ವಿದೇಶಗಳ ಬೆಂಬಲದಿಂದ ಬಲಿಷ್ಟವಾಗಿರುವ ಈ ಎರಡೂ ಬಣಗಳೂ ಭೀಕರ ಕದನ ನಡೆಸುತ್ತಿವೆ. ಸರ್ಕಾರ ಹಾಗೂ ಬಂಡುಕೋರರ ಪರಸ್ಪರ ಗುದ್ದಾಟದಿಂದ ದೇಶದ ಶಾಂತಿ ಸುವ್ಯವಸ್ಥೆ ಮಾಯವಾಗಿದೆ. ಸಿರಿಯಾದ ಅಮಾಯಕ ಸುನ್ನಿ ಜನಾಂಗದ ಪ್ರಜೆಗಳ ನೆತ್ತರು ಹರಿಯುತ್ತಿದೆ. ದೇಶದ ವಿವಿಧೆಡೆ ಯುವಕರನ್ನು ಭೀಕರವಾಗಿ ಕೊಲೆ ಮಾಡಲಾಗುತ್ತಿದೆ. ಒಂದು ಅಂದಾಜಿನ ಪ್ರಕಾರ ಸಿರಿಯಾದಲ್ಲಿ ಸುಮಾರು ಒಂದು ವರ್ಷದಿಂದ ನಡೆಯುತ್ತಿರುವ ಹೋರಾಟದಲ್ಲಿ ಸತ್ತವರ ಸಂಖ್ಯೆ 60 ಸಾವಿರ ದಾಟಿದೆ ಹಾಗೂ ನಿರಾಶ್ರಿತರ ಸಂಖ್ಯೆ 3 ಲಕ್ಷವನ್ನೂ ಮೀರಿದೆ. ಪ್ರಾಣ ಭಯದಿಂದ ದಿನಕ್ಕೆ ಸುಮಾರು 4000 ಮಂದಿ ಸಿರಿಯಾ ನಿರಾಶ್ರಿತರು ನೆರೆ ದೇಶಗಳಿಗೆ ಗುಳೇ ಹೋಗುತ್ತಿದ್ದಾರೆ. 2,49,587 ಮಂದಿ ನಿರಾಶ್ರಿತರು ಈಗಾಗಲೇ ಟರ್ಕಿ, ಲೆಬೆನಾನ್, ಜೋರ್ಡಾನ್, ಇರಾನ್‌ದೇಶಗಳಿಗೆ ನುಗ್ಗಿದ್ದಾರೆ.
ಈ ಜನಾಂಗೀಯ ಕಲಹವನ್ನು ಶಮನ ಮಾಡಲು, ವಿಶ್ವ ಸಂಸ್ಥೆ ಪ್ರಯತ್ನಿಸುತ್ತಿದೆ. ಸಂಧಾನಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ವಿಶ್ವ ಸಂಸ್ಥೆಯ ಮಾಜಿ ಅಧ್ಯಕ್ಷ ಕೋಫಿ ಅನ್ನಾನ್‌ನಿರಾಶರಾಗಿ ಹಿಂದಿರುಗಿದ್ದಾರೆ. ಕದನ ವಿರಾಮ ಘೋಷಿಸಿ, ಅಧಿಕಾರವನ್ನು ಬಿಟ್ಟುಕೊಟ್ಟು, ದೇಶದಲ್ಲಿ ಶಾಂತಿ ನೆಲೆಸಲು ಸಹಕರಿಸಿ ಎಂಬ ವಿಶ್ವ ಸಂಸ್ಥೆಯ ಕೋರಿಕೆಗೆ ಅಧ್ಯಕ್ಷ 'ಬಷರ್ ಅಲ್ ಅಸ್ಸಾದ್' ಒಪ್ಪಿಗೆ ಸೂಚಿಸಿಲ್ಲ. ತಮ್ಮ ಅಧಿಕಾರವನ್ನು ಉಳಿಸಿಕೊಳ್ಳುವ ಸಲುವಾಗಿ ಅಸ್ಸಾದ್ ತಮ್ಮ ಬಂದೂಕು ಬಲವನ್ನು ಪ್ರದರ್ಶಿಸುತ್ತಿದ್ದಾರೆ. ಅಸ್ಸಾದ್ ತಾವಾಗಿಯೇ ಅಧಿಕಾರ ಬಿಡಲು ಸಾಧ್ಯವೇ ಇಲ್ಲ ಎಂದು ಅನ್ನಾನ್ ಅಭಿಪ್ರಾಯ ಪಟ್ಟಿದ್ದಾರೆ.
ಅಧ್ಯಕ್ಷ 'ಬಷರ್ ಅಲ್ ಅಸ್ಸಾದ್' ರ ಆಡಳಿತ ಅಂತ್ಯವಾಗುವವರೆಗೂ ತಮ್ಮ ಹೋರಾಟ ಕೈಬಿಡಲು ಸಿರಿಯಾ ಬಂಡುಕೋರರು ತಯಾರಿಲ್ಲ. ಬೇರೆಯವರ ಬೆಂಬಲದ ಹೊರತಾಗಿಯೂ ತಮ್ಮ ಕದನವನ್ನು ಮುಂದುವರೆಸುತ್ತೇವೆ ಅನ್ನೋದು ಬಂಡುಕೋರರ ನಿರ್ಧಾರ. ರಕ್ತದ ಕೋಡಿ ಹರಿದರೂ ಅಧಿಕಾರ ಬಿಟ್ಟುಕೊಡಲಾರೆ ಅನ್ನೋದು ಅಧ್ಯಕ್ಷ ಅಸ್ಸಾದ್‌ರ ನಿಲುವು. ಇವರಿಬ್ಬರ ನಡುವೆ ಸಿಲುಕಿ ನರಳುತ್ತಿರುವುದು ಮಾತ್ರ ಸಿರಿಯಾದ ಪ್ರಜಾ ಸಮೂಹ ಮತ್ತು ದೇಶದ ಭವಿಷ್ಯ.