ಈಗ ಸರಿಯಾಗಿ
ಒಂದು ವರ್ಷದ ಹಿಂದಿನ ಕಥೆ ಇದು. ಕ್ರಿಸ್ತ ಶಕ ಕರೊನಾ
ಪೂರ್ವ ಕಾಲ ಅನ್ನಿ. ಆವತ್ತು ನಮ್ಮ ಮೂವರ ಸವಾರಿ ಗಿರಿನಗರದ ಗಣೇಶ್ ಮಾನಸಾ ಮನೆಗೆ
ಹೋಗಿತ್ತು. ಮಾತುಗಳ ಮಧ್ಯೆ ನಮ್ಮಲ್ಲಿಯೇ ಯಾರೋ
ಪ್ರವಾಸದ ಪ್ರಸ್ತಾಪ ಮಾಡಿದ್ದರು. ನಾವ್ಯಾರೂ
ಇನ್ನೂ ನೋಡಿರದ ಪಾಂಡೀಚೇರಿಯೇ ನಮ್ಮ ಪ್ರವಾಸಕ್ಕೆ ಸೂಕ್ತ ಎಂಬ ನಿರ್ಣಯೂ ಅಲ್ಲಿಯೇ
ಆಗೋಯ್ತು. ಆದರೆ ಹೋಗುವ ದಿನ ಗೊತ್ತು ಮಾಡುವ
ಜವಾಬ್ದಾರಿಯನ್ನ ಸಿ.ಎ ಎಕ್ಸಾಮ್‌ಗೆ ತಯಾರಿಯಲ್ಲಿದ್ದ ನವ ಜೋಡಿ ಗಣೇಶ, ಮಾನಸಾ
ಅವರಿಗೇ ಕೊಟ್ವಿ.
ಅಂತೂ ಇಂತೂ
ಅದೆಷ್ಟೋ ಕಲಾಪಗಳ ನಂತರ 2019
ರ ಡಿಸೆಂಬರ್ ೮ ಮತ್ತು ೯ ದಿನಾಂಕದಲ್ಲಿ ಬರುವ ವಾರಾಂತ್ಯವೇ ಫಿಕ್ಸ್ ಆಯ್ತು. ಇನ್ನೂ ತಿಂಗಳುಗಳ ಕಾಲ ಸಮಯವಿದ್ರೂ ನನ್ನ ಗಂಡ ವಿನಯ್
ಹೊಟೆಲ್ ಸರ್ಚ್ ಮಾಡೋದ್ರಲ್ಲಿ ತಲ್ಲೀನನಾದ.
ಎಲ್ಲ ಹೊಟೆಲ್‌ಗಳನ್ನ ಒಂದೊಂದಾಗಿ ನೋಡಿ, ರಿವ್ಯೂವ್ಓದಿ, ಬೇಕೋ ಬೇಡವೋ ಡಿಸೈಡ್ ಮಾಡಿ ,
ಮಾನಸಾ ಗಣೇಶರ ಮಾತಿಗೂ ಬೆಲೆಕೊಟ್ಟು ಒಂದು ಅಂದದ ಹೊಟೆಲ್‌ನಲ್ಲಿ ಎರಡು ಚೆಂದದ ರೂಮ್ಸ್ ಬುಕ್ ಮಾಡಿದ್ದಾಯ್ತು.
ಹೊಟೆಲ್ ಬುಕ್
ಆಗಿದ್ದೇ ಆಗಿದ್ದು,
ನನ್ನೊಳಗೆ ಆಹಾ ಅದೆಷ್ಟು ಉಲ್ಲಾಸ, ಉತ್ಸಾಹ ಅಂತೀರಾ..? ನಾನಂತೂ ಪಾಂಡಿಚೇರಿ ಟೂರ್‌ಗಾಗಿ
ಶಾಪಿಂಗ್‌ಕೂಡ ಶುರು ಹಚ್ಚಿಬಿಟ್ಟಿದ್ದೆ. ಎಲ್ಲ
ಶಾಪಿಂಗ್ ವೆಬ್‌ಸೈಟ್‌ಗಳಿಗೂ ಭೇಟಿಕೊಟ್ಟು, ನನ್ನ ಗಂಡನ ತಲೆಯನ್ನೂ
ಸ್ವಲ್ಪ ತಿಂದು ಒಂದೆರಡು ಡ್ರೆಸ್ ಕೂಡ ತಗೊಂಡು
ಕಬೋರ್ಡ್ ಒಳಗೆ ಸೇರಿಸಿಬಿಟ್ಟಿದ್ದೆ. ನಾವೆಲ್ಲ ಪಾಂಡಿಚೇರಿಯಲ್ಲಿ ಎಲ್ಲಿಲ್ಲಿ ಸುತ್ತಬೇಕು, ಅಲ್ಲಿ ಏನೇನು ಶಾಪಿಂಗ್ ಮಾಡಬೇಕು..? ಅಲ್ಲಿರುವ
ಫೇಮಸ್ ಟೂರಿಸ್ಟ್ ಅಟ್ರಾಕ್ಷನ್‌ಗಳೆಲ್ಲ
ಯಾವ್ಯಾವ್ದು ಅನ್ನೋ ಲಿಸ್ಟ್ ವಿನಯ್ ಮೊಬೈಲ್‌ನಲ್ಲಿ ರೆಡಿಯಾಗ್ತಿತ್ತು. ಪೋರ್ಚುಗೀಸರ ಕಾಲದ
ಕಲರ್ ಕಲರ್ ಬಿಲ್ಡಿಂಗ್ಗಳು, ಸಮುದ್ರ ತೀರಗಳು, ಫುಡ್ಸ್ಟ್ರೀಟ್, ವಾವ್ ..! ಅಲ್ಲಿ
ಏನುಂಟು ಏನಿಲ್ಲ..? ಪಾಂಡೀಚೇರಿಯ
ಎಲ್ಲ ಟೂರಿಸ್ಟ್ ಸ್ಪಾಟ್‌ಗಳನ್ನೂ ಗೂಗಲ್‌ನಲ್ಲಿ
ನೋಡಿ ಹಿರಿ ಹಿರಿ ಹಿಗ್ಗಿದ್ದ ನಂಗಂತೂ ಯಾವಾಗಪ್ಪ ಪಾಂಡೀನ ನೋಡ್ತೀನಿ ಅನ್ನಿಸೋಕೆ ಶುರುವಾಗಿತ್ತು. ಲ್ಯಾಪ್‌ಟಾಪ್‌ಮುಂದೆ ನನ್ನ 4 ವರ್ಷದ ಮಗನನ್ನೂ ಕೂರಿಸಿಕೊಂಡು, ಅವನಿಗೂ ಪಾಂಡಿಚೇರಿಯ ಬೀಚ್
ತೋರಿಸಿದ್ದೆ. ಮಗಾ ನೋಡು... ನಾವು ಇದೇ ಬೀಚ್‌ನೋಡೋಕೆ
ಹೋಗ್ತಿದೀವಿ. ಅಂತ ಅವನೊಳಗೂ ಕನಸು ಬಿತ್ತಿದ್ದೆ.
ಅವನು ನಂಗೆ ಬೀಚ್‌ನಲ್ಲಿ ಆಟ ಆಡೋಕೆ,
ಸ್ಯಾಂಡ್ಟಾಯ್ಸ್ಕೊಡ್ಸಮ್ಮ ಅಂತ ದುಂಬಾಲು ಬಿದ್ದ.
ಅಂತೂ
ನಾವೆಲ್ಲ ಕಾಯುತ್ತಿದ್ದ ದಿನಕ್ಕೆ ಇನ್ನೊಂದೇ ವಾರ ಬಾಕಿ ಇತ್ತು. ಆಗಲೇ ಆಲ್‌ಮೋಸ್ಟ್ ನನ್ನ ಪ್ಯಾಕಿಂಗ್‌ಕೂಡ ಮುಗಿದಿತ್ತು. ಆಗ ಫೋನ್‌ಮಾಡಿದ ಗಣೇಶ, ಒಂದು
ಶಾಕಿಂಗ್ ನ್ಯೂಸ್ ಒಂದನ್ನ ಹೇಳಿದ. ’ಡಿಸೆಂಬರ್
೯ ನೇ ತಾರಿಖು ಪಾಂಡಿಯಲ್ಲಿ
ಮಳೆಯಾಗುತ್ತೆ ಅಂತ ಗೂಗಲ್ ವೆದರ್ ಹೇಳ್ತಿದೆಯಲ್ಲಾ’ ಅಂದ. ಅಲ್ಲೇ ಲ್ಯಾಪ್‌ಟಾಪ್‌ನಲ್ಲಿ ನಾವೂ ಚೆಕ್‌ಮಾಡಿ ’ಓಹೋ ಹೌದಾ... ಲೆಟ್ಸ್ಸೀ, ನಾವು ಹೊರಡೋದಿನ್ನೂ ವಾರ ಇದೆ ತಾನೆ..? ವೆದರ್‌ಚೇಂಜ್ ಆಗ್ಲೂ ಬಹುದು ಅಲ್ವಾ..? ಅಂತ
ನಮ್‌ನಮ್ಮೊಳಗೇ ಸಮಾಧಾನ ಮಾಡಿಕೊಂಡ್ವಿ.
ಆವತ್ತಿನಿಂದ ಬೆಳಗ್ಗೆ ಎದ್ದ ತಕ್ಷಣ ಗೂಗಲ್‌ವೆದರ್‌ನಲ್ಲಿ ಪಾಂಡಿಚೇರಿಯ ಹವಾಮಾನವನ್ನ
ಚೆಕ್‌ಮಾಡೋದೊಂದು ನಿತ್ಯ ಕರ್ಮದೊಳಗೊಂದಾಯ್ತು
ನಮಗೆ. ಆದ್ರೆ, ವಾರ
ಕಳೆದರೂ ವೆದರ್‌ನಲ್ಲಿ ಯಾವ ಚೇಂಜಸ್ ಕೂಡ
ಆಗಲಿಲ್ಲ. ಆದರೂ ನಮ್ಮೊಳಗೆ ಅದೇನೋ ಬಂಢ
ಧೈರ್ಯ. ಅಥವಾ ಮಳೆಯ ಕಾರಣಕ್ಕೆ ತಿಂಗಳುಗಳಿಂದ
ಪ್ಲ್ಯಾನ್ ಮಾಡಿದ್ದ ನಮ್ಮ ಟೂರ್ ಕ್ಯಾನ್ಸಲ್ ಆಗಿಬಿಟ್ಟರೆ..? ಅನ್ನೋ ಭಯವೂ ಇದ್ದಿರಬಹುದು. ಹೀಗಾಗಿ
ನಾವ್ಯಾರೂ ಟ್ರಿಪ್‌ಕ್ಯಾನ್ಸಲ್ ಮಾಡೋ ಬಗ್ಗೆ
ಚಕಾರವೆತ್ತಲಿಲ್ಲ.
ನಾವೆಲ್ಲ
ಹೊರಡುವ ಹಿಂದಿನ ದಿನ ಸಂಜೆ,
ನನಗೆ ಒಂದು ಸಣ್ಣ ಆಶ್ಚರ್ಯ ಕಾದಿತ್ತು.
ವಿನಯ್ ತರಾತುರಿಯಲ್ಲಿ ಆಫೀಸ್‌ನಿಂದಲೇ
ಕಾಲ್ಮಾಡಿ, ಈಗಿದೀಂಗ
ಮಗನ ಜತೆ ತಯಾರಾಗಿರು ನಾವು ಇವಾಗಲೇ ಪಾಂಡಿಗೆ
ಹೊರಡ್ತಿದ್ದೀವಿ ಅನ್ನಬೇಕೆ..? ಶನಿವಾರ ಬೆಳ್ಳಂಬೆಳಗ್ಗೆ ೫ ಗಂಟೆಗೆ
ಬೆಂಗಳೂರು ಬಿಟ್ಟು ಮಧ್ಯಾಹ್ನದ ವೇಳೆಗೆ ಪಾಂಡಿಗೆ ತಲುಪುವ ಯೋಜನೆಯಲ್ಲಿ ಬದಲಾವಣೆ ಮಾಡಿದ್ದ ಈ
ಗಂಡುಗೋವಿಗಳು ನಮ್ಮನ್ನ ಹೊರಡಿಸಿಕೊಂಡು ಆವತ್ತೇ ರಾತ್ರಿ ಹೊರಟಿದ್ದರು. ಆವತ್ತು ರಾತ್ರೋ ರಾತ್ರಿ ಬೆಂಗಳೂರು ಮತ್ತು ಪಾಂಡೀ
ನಡುವಿನ ಅದ್ಯಾವುದೋ ವೆಲ್ಲೂರು ಎಂಬಲ್ಲಿ ಒಂದು ಹೋಟೆಲ್ ಕೂಡ ಬುಕ್ ಮಾಡಿದ್ರು ಸರ್‌ಪ್ರೈಸ್‌ಆಗಿ..! ಅಲ್ಲಿ ರಾತ್ರಿ ಉಳಿದು, ಬೆಳಗ್ಗೆ ಅಲ್ಲಿಂದ ಪಾಂಡಿಗೆ ಹೋಗುವ
ದಿಢೀರ್ ಯೋಚನೆ ಬಂದಿದ್ದಲ್ಲದೇ..ಅದನ್ನ
ಕಾರ್ಯರೂಪಕ್ಕೂ ತಂದಾಗಿತ್ತು. ಅದೆಲ್ಲ ನನಗೆ
ಮತ್ತು ಮಾನಸಾಗೆ ಗೊತ್ತಾಗಿದ್ದೇ ಕಾರ್‌ನಲ್ಲಿ ಹೋಗುತ್ತಿದ್ದಾಗ...! ಗಡಬಡಾಯಿಸಿಕೊಂಡು ಕಾರು ಹತ್ತಿ ಹೊರಟಿದ್ದ ನಾನು ಮತ್ತು
ಮಾನಸಾ ರಾವಣನ ಪುಷ್ಪಕ ವಿಮಾನದಲ್ಲಿ ಕೂತು ಹಾರಿಹೋದ ಸೀತೆಯಂತಾಗಿದ್ವಿ ...! ಆದ್ರೆ ಇಲ್ಲಿ
ರಾವಣರ‍್ಯಾರೂ ಇರಲಿಲ್ಲ ಅನ್ನೋದೇ ಸಮಾಧಾನ..!
ರಾತ್ರೋ
ರಾತ್ರಿ ಹೊರಟಿದ್ದ ನಮ್ಮ ಕಾರು,
ವೆಲ್ಲೂರನ್ನ ತಲುಪಿದಾಗ ರಾತ್ರಿ 12 ಗಂಟೆಯ ಮಧ್ಯರಾತ್ರಿ. ಗೂಗಲ್‌ಮ್ಯಾಪ್‌ನಮ್ಮನ್ನ ಆ ಹೋಟೆಲ್‌ನ ಹತ್ತಿರ
ಕರೆದೊಯ್ತಾ ಇತ್ತು. ಯಾವುದೋ ಮೇನ್‌ರೋಡು. ಇನ್ಯಾವುದೋ ರೈಟು. ಮತ್ಯಾವುದೋ ಲೆಫ್ಟು. ಗೂಗಲ್‌ಮ್ಯಾಪ್ ಕನ್ಯೆ ಹೇಳಿದ್ದೇ ದಾರಿ! ಆ ಸುಮಧುರ ಅಶರೀರ ವಾಣಿಯ ಆಣತಿಯಂತೆ ಒಳ ರೋಡ್ ಒಂದರಲ್ಲಿ ಎಡಕ್ಕೆ ಹೊರಳಿತು ಕಾರು, ಆ ರಸ್ತೆ ಹೋಗ್ತಾ ಹೋಗ್ತಾ ಕಿರಿದಾಗುತ್ತಾ ಸಾಗುತ್ತಿತ್ತು. ಅಂಗಡಿ ಮುಂಗುಟ್ಟುಗಳಿದ್ದ ಓಣಿಯಂಥ ಕಿರಿದಾದ
ದಾರಿಯಲ್ಲಿಯೇ ಕಾರು ಮುನ್ನುಗ್ಗುತ್ತಿತ್ತು.
ಯಾರನ್ನಾದರೂ ಒಂದು ಮಾತು ಕೇಳೋಣ ಅಂದ್ರೆ, ಆ ಮಧ್ಯ ರಾತ್ರಿಯಲ್ಲಿ ನಮಗೆ ಯಾರು
ಸಿಕ್ಕಾರು..? ಗೂಗಲ್‌ಕನ್ಯೆ
ತೋರಿಸುತ್ತಿರುವ ದಾರಿ ಮಾತ್ರ ತುಂಬಾ ಅನುಮಾನಾಸ್ಪದವಾಗಿತ್ತು. ಕೊನೆಗೆ ಒಂದು ಬೈಕ್‌ಕೂಡ ದಾಟಿ ಹೋಗದಂಥ ಕಿರಿದಾದ ಸೇತುವೆಯ ಬಳಿ ಕರೆದುಕೊಂಡು ಬಂದಿದ್ದ ಗೂಗಲ್ ಮ್ಯಾಪ್, ’ಗೊ ಸ್ಟ್ರೇಟ್200 ಮೀಟರ‍್ಸ್ ಆಂಡ್
ಟೇಕ್ ಲೆಫ್ಟ್’ ಅಂತ ಗೈಡ್‌ಮಾಡ್ತಾನೇ ಇತ್ತು. ನಮಗೆ ಆಗಲೇ ಗೊತ್ತಾಗಿದ್ದು ಗೂಗಲ್‌ಮ್ಯಾಪ್‌ಅಕ್ಷರ ಷಃ
ನಮ್ಮನ್ನ ಹಳ್ಳಹಿಡಿಸಿದೆ ಅಂತ. ಇನ್ನೇನು..?
ಆ ರಸ್ತೆಯಲ್ಲಿ ಹೋಗಲು ಸಾಧ್ಯವೇ ಇಲ್ಲ ಅಂತ ಗೊತ್ತಾದಾಗ ಕಾರ್‌ನ್ನ ಟರ್ನ್‌ಮಾಡಲೇ
ಬೇಕಲ್ಲಾ..! ಕಾರ್‌ನ್ನ ರಿವರ್ಸ್ ತರೋಕೂ ಆಗದ ಹಾವಿನಂಥ ರಸ್ತೆ ಅದು..! ಹರ ಸಾಹಸ ಪಟ್ಟು ಗಣೇಶ
ಕಾರ್‌ನ್ನ ಟರ್ನ್‌ಮಾಡಿದ್ದ. ನಾವೆಲ್ಲ ನಿಟ್ಟುಸಿರು ಬಿಟ್ವಿ.
ಆ ಗಲ್ಲಿ
ರಸ್ತೆ ದಾಟಿ, ಕಾರು ಮೇನ್‌ರೋಡ್‌ಗೆ ಬರುತ್ತಿದ್ದ
ಹಾಗೆ, ರಾತ್ರಿ
ಡ್ಯೂಟಿಯಲ್ಲಿದ್ದ ಪೊಲೀಸ್ ಜೀಪ್, ನಮ್ಮನ್ನ ಎದುರಾಯ್ತು. ರಾತ್ರಿ 12.30 ಸಮಯದಲ್ಲಿ ಅನುಮಾನಾಸ್ಪದವಾಗಿ ರೋಡು
ರೋಡು ಅಲೆಯುತ್ತಿರುವ ನಮ್ಮ ಕಾರ್‌ನ್ನ ಫಾಲೋ ಮಾಡಿಕೊಂಡು ಬಂದ ಅವರು, ನಮ್ಮನ್ನ
ವಿಚಾರಿಸಲು ಪ್ರಯತ್ನಪಟ್ಟರು. ತಮಿಳಿನಲ್ಲಿ ಅವರು
ಅದೇನೋ ಕೇಳ್ತಾ ಇದ್ರೆ, ವಿನಯ್
ಇಂಗ್ಲೀಷ್‌ನಲ್ಲಿ ಉತ್ತರಿಸ್ತಾ ಇದ್ರು. ಗಣೇಶ್
ಹಿಂದಿಯಲ್ಲಿ ಅವರಿಗೆ ಅರ್ಥ ಮಾಡಿಸ್ತಾ ಇದ್ದ. ಈ ಎರಡೂ ಭಾಷೆಯ ಸಹಾಯದಿಂದ ಮತ್ತು ನಮ್ಮ ಗಂಡುಗೋವಿಗಳ ಹಾವ ಭಾವದಿಂದ ಅಲ್ಪ ಸ್ವಲ್ಪ
ಅರ್ಥ ಮಾಡಿಕೊಂಡು, ಹೊಟೆಲ್ ಹೆಸರು ಗುರುತಿಸಿದ ಅವರು, ಹೊಟೆಲ್‌ಗೆ
ಹೋಗೋ ದಾರಿ ತೋರಿಸಿದ್ದರು.
ಬೆಳ್ಳಂಬೆಳಗ್ಗೆ 6 ಗಂಟೆಗೇ ರೆಡಿಯಾಗಿ, ನಾವೆಲ್ಲ ಅಲ್ಲಿಯೇ ಇದ್ದ ಫೇಮಸ್
ಹೋಟೆಲ್ ‘ಸರವಣ ಭವನ್’ನಲ್ಲಿ ಗಡದ್ದಾಗಿ ತಿಂಡಿ ತಿಂದು ಅಲ್ಲಿಂದ ಪಾಂಡಿಚೇರಿಯ ಹಾದಿ
ಹಿಡಿದ್ವಿ. ಮಧ್ಯಾಹ್ನ 1.30 ರ ಸುಮಾರಿಗೆ
ಪಾಂಡಿಚೇರಿ ಸಿಟಿಯ ಹತ್ತಿರದಲ್ಲಿದ್ವಿ. ಕನ್ನಡ
ಸಾಂಗ್‌ಗಳನ್ನ ಕೇಳ್ತಾ, ಡ್ರೈವ್‌ಎಂಜಾಯ್‌ಮಾಡ್ತಿದ್ದ ನಮಗೆ ದೂರದಲ್ಲಿ
ಕರಿಗಪ್ಪು ಮೋಡ ಆವರಿಸಿದ್ದು ಕಾಣಿಸ್ತಾ ಇತ್ತು.
ಚೆಂದದ ಹೆದ್ದಾರಿಯಲ್ಲಿ ಪಾಂಡಿಚೇರಿಯ ಕಡೆಗೆ ಓಡುತ್ತಿರುವ ನಮ್ಮ ಕಾರನ್ನ ಮುಖ
ಗಂಟಿಕ್ಕಿಕೊಂಡೇ ಕೆಕ್ಕರಿಸಿ ನೋಡುತ್ತಿತ್ತು ಕರಿಗಪ್ಪು ಮೋಡದ ರಾಶಿ..! ಪಾಂಡಿಚೇರಿಗೆ ಹತ್ತಿರ ಹತ್ತಿರವಾಗ್ತಾ ಇದ್ದಂತೆ
ಕಾರ್ಗಪ್ಪು ಮಳೆ ಮೋಡ ಆಕಾಶದಲ್ಲಿ ಚಪ್ಪರಗಟ್ಟುತ್ತಿರುವುದು ಕಾಣಿಸ್ತಾ ಇತ್ತು. ವಾರದಿಂದ ಅದೇ ಗೂಗಲ್‌ವೆದರ್ ರಿಪೋರ್ಟ್ ನೋಡ್ತಿದ್ದ ನಮಗೆ ನಮ್ಮ ಪ್ರವಾಸದ ಭವಿಷ್ಯ ಕಣ್ಮುಂದೆ
ಬರೋಕೆ ಇನ್ನೂ ಸಮಯ ಬೇಕಿರಲಿಲ್ಲ. ಎಂಥ ಮೋಡವಪ್ಪ
ಇದು..? ಈ ಮೋಡದ ರಾಶಿಯನ್ನ ನೋಡಿದರೆ.. ಭಯವಾಗ್ತಿದೆ. ಅನ್ನೋ ಉದ್ಘಾರ
ಎಲ್ಲರ ಬಾಯಲ್ಲಿ..! ನೋಡ ನೋಡುತ್ತಿದ್ದಂತೆ ಬೃಹತ್‌ಗಾಳಿ ನಮ್ಮ ಕಾರನ್ನ ಅಪ್ಪಳಿಸಿತ್ತು. ಗಾಳಿಯ ಜೊತೆ ಜೊತೆಗೇ ಮಳೆಯೂ ಆರಂಭವಾಗಿ, ಎರಡೂ ಸೇರಿಕೊಂಡು ’ಈಗ್ಯಾಕೆ ಬಂದ್ರಿ
ಇಲ್ಲಿ..?’ ಅಂತ ಅಬ್ಬರಿಸುತ್ತಿದ್ವು. ವೈಪರ್‌ವೇಗಕ್ಕೂ ಕ್ಯಾರೇ ಎನ್ನದ ಮಳೆ, ಮುಂದಿನ ದಾರಿ ಕಾಣದಷ್ಟು
ಓತಪ್ರೋತವಾಗಿತ್ತು.
ಮಳೆಯಲ್ಲಿಯೇ
ನಾವು ಬುಕ್‌ಮಾಡಿದ್ದ ಹೊಟೆಲ್‌ತಲುಪಿದ್ದಾಯ್ತು. ಮಧ್ಯಾಹ್ನ 2.30ಕ್ಕೆ ಕಾರ್‌ನಿಂದ ಹೊರಗಿಳಿಯಲೂ
ಸಾಧ್ಯವಾಗಷ್ಟು ಕುಂಭದ್ರೋಣ ಮಳೆ ಅದು. ಹೇಗ್ಹೇಗೋ ಸಾವರಿಸಿಕೊಂಡು ಅಂತೂ ರೂಮ್‌ಒಳಗೆ
ಸೇರಿಕೊಂಡ್ವಿ. ನಮ್ಮ ’ಲೋಟಸ್ ಬೇ ವ್ಯೂವ್ ಹೋಟೆಲ್’ ರೂಮ್‌ಗಳಷ್ಟೇ ಅದರ
ಕಿಟಕಿಗಳೂ ಅಂದವಾಗಿದ್ವು. ಅಂದು ಹೊಟೆಲ್‌ರೂಮ್‌ನ
ಕಿಟಕಿಗೂ ಅದ್ಭುತ ಬೆಲೆ ಬಂದಿತ್ತು. ಕಿಟಕಿಯ ಹತ್ತಿರ ಕೂತು ಹೊರಗಿನ ಮಳೆಗೆ ಕಣ್ಣು ನೆಟ್ಟು
ಕೂತಿದ್ದೆ ನಾನು. ಬಳಿಯೇ ಕೂತಿದ್ದ ನನ್ನ ಮಗ ’ಅಮ್ಮ ಬೀಚ್‌ಗೆ ಹೋಗೋದು ಯಾವಾಗಮ್ಮ..? ಅಂದ.
ಕೈಯಲ್ಲಿ ಸ್ಯಾಂಡ್‌ಟಾಯ್ಸ್
ಹಿಡಿದುಕೊಂಡು..!
ಕಿಟಕಿಯಿಂದ್ಲೇ
ಮಳೆಯನ್ನ ನೋಡಿ ನೋಡಿ ಸಂಜೆ 6 ಗಂಟೆಯಾಗಿತ್ತು. ಆ ವೇಳೆಗೆ ಮಳೆ ಯಾಕೋ ಸ್ವಲ್ಪ ಬಿಡುವು
ಪಡೆದುಕೊಂಡ್ತು. ಆದರೆ ಆಕಾಶವೇನೂ ತಿಳಿಯಾಗಿರಲಿಲ್ಲ.
ಹೊಟೆಲ್‌ಗೆ ಅತೀ ಹತ್ತಿರದಲ್ಲಿದ್ದ ರಾಕ್‌ಬೀಚ್‌ನಿಂದ್ಲೇ ನಮ್ಮ ಸೈಟ್‌ಸೀಯಿಂಗ್‌ಶುರು
ಮಾಡೋಣ ಅಂದುಕೊಂಡು, ಬೀಚ್ನತ್ತ ಹೊರಟಿದ್ವಿ. ಮೋಡ
ಕಟ್ಟಿದ್ದ ಆಕಾಶವನ್ನೇ ನೋಡ್ತಾ ಕಾರ್‌ಪಾರ್ಕ್‌ಮಾಡಿ
ಬೀಚ್‌ನಲ್ಲಿ ಸ್ವಲ್ಪ ಹೊತ್ತು ನಿಲ್ಲಬೇಕೆನ್ನುವಷ್ಟರಲ್ಲಿ ಮಳೆ ಶುರುವಾಯ್ತು. ಸಮುದ್ರದ ಕಡೆಯಿಂದ ಧೋ ಎಂದು ಸುರಿಯುತ್ತಾ ನಮ್ಮ
ಅಟ್ಟಿಸಿಕೊಂಡು ಬಂತು ಧೂರ್ತ ಮಳೆ. ಮತ್ತೆ
ಎದ್ನೋ ಬಿದ್ನೋ ಅಂತ ಓಡೋಡಿ ಬಂದು ಕಾರ್‌ಹತ್ತಿ ಕುಳಿತದ್ದಾಯ್ತು. ಆಗಲೇ ಸಾಯಂಕಾಲವಾಗಿದ್ದರಿಂದ ಮತ್ತೆಲ್ಲಿಗೆ ಹೋಗೋದು..? ಎಲ್ಲೆಲ್ಲೂ ಮಳೆ..! ಎಲ್ಲೆಲ್ಲೂ
ನೀರು..!
ಈ ಮಳೆಯಲ್ಲಿ
ಎಲ್ಲಿಗೂ ಹೋಗೋದು ಬೇಡ. ನಾಳೆ ಬೆಳಗ್ಗೆಯಿಂದ ಮಧ್ಯಾಹ್ನದ ವರೆಗೆ ಎಷ್ಟಾಗುತ್ತೋ ಅಷ್ಟು ಸೈಟ್
ಸೀಯಿಂಗ್ ಮಾಡೋಣ ಎಂಬ ಗಣೇಶನ ಮಾತಿಗೆ ನಾವೆಲ್ಲ ಹೂಂ ಗುಟ್ಟಿ ವಾಪಾಸ್‌ಹೊಟೆಲ್‌ಗೆ
ಬಂದಿದ್ದಾಯ್ತು. ಸ್ಯಾಂಡ್‌ಟಾಯ್ಸ್‌ನ ಕವರ್‌ನ್ನ
ಕೈಯಲ್ಲೇ ಹಿಡಿದುಕೊಂಡು ವಾಪಾಸ್‌ರೂಮ್‌ಗೆ ಬಂದ ನನ್ನ ಮಗನಿಗೆ ಸ್ವಲ್ಪ ಜಾಸ್ತಿಯೇ ನಿರಾಸೆಯಾಗಿತ್ತು.
ಅವನನ್ನ ಸಮಾಧಾನ ಮಾಡೋದೇ ದೊಡ್ಡ ಸವಾಲಾಗಿ ಹೋಯ್ತು. ನಿಜಕ್ಕೂ ಅವನ ಮುಖ ನೋಡಿದರೆ ಪಾಪ
ಅನ್ನಿಸ್ತಿತ್ತು.
ನಿರಾಸೆಯಲ್ಲಿಯೇ
ರಾತ್ರಿ ಮಲಗಿ, ಬೆಳಗ್ಗೆ ಕಣ್ಣುಬಿಟ್ಟು ನೋಡ್ತೀವಿ
ಮಳೆಯ ಪ್ರತಾಪಕ್ಕೆ ಹೊಟೆಲ್‌ಹಿಂಭಾಗವೆಲ್ಲ ನೀರಿನಿಂದ ಆವ್ರತವಾಗಿತ್ತು. ಮಳೆಯಂತೂ ನಿಮಿಷವೂ
ಬಿಡುವಿಲ್ಲದೆ ಸುರಿಯುತ್ತಲೇ ಇತ್ತು. ಬ್ರಮನಿರಸನ
ಅಂತಾರಲ್ಲ, ಅದರ
ಸ್ಪಷ್ಟ ಭಾವಾರ್ಥ ಆವತ್ತು ನಮಗಾಗಿತ್ತು..!
ಹೊಟೆಲ್‌ನಲ್ಲಿಯೇ
ರುಚಿಯಾಗಿದ್ದ ಬಿಸಿ ಬಿಸಿ ಬ್ರೇಕ್ಫಾಸ್ಟ್ಮುಗಿಸಿ, ಚೆಕ್‌ಔಟ್ ಮಾಡಿ ಆ ಚೆಂದದ ಹೋಟೆಲ್‌ಗೆ ಗುಡ್‌ಬೈ ಹೇಳಿ ಕಾರ್ ಹತ್ತಿದ್ವಿ. ನಾವು
ತಿಂಡಿತಿಂದು ಚೆಕ್‌ಔಟ್ ಪ್ರೋಸೆಸ್ ಮುಗಿಸುವ
ತನಕ ಸುಮ್ಮನಿದ್ದು ನೋಡ್ತಾ ಇದ್ದ ಆ ವರ್ಷಿಣಿ, ನಾವು ಕಾರು ಹತ್ತಿದ ತಕ್ಷಣ
ಪ್ರತ್ಯಕ್ಷವಾದಳು. ಅಷ್ಟರ ಮಟ್ಟಿಗೆ
ಹೊಟ್ಟೆಕಿಚ್ಚಿನ ಪಾಪಿ ಮಳೆಯಾಗಿತ್ತದು.
ಅಲ್ಲಿಂದ
ಇಲ್ಲಿಗೆ ಬಂದಿದ್ದಕ್ಕೆ,
‘ವಿ ಎಂಜಾಯ್ಡ್ ಅ ಲಾಟ್ ಇನ್ ಪಾಂಡಿ’ ಅಂತ ಬರೆದು ಒಂದೆರಡು ಫೋಟೋಗಳನ್ನಾದರೂ
ವಾಟ್ಸ್ಯಾಪ್ ಸ್ಟೇಟಸ್‌ಗೆ ಹಾಕಬೇಡ್ವೆ..?
ಫ್ರೆಂಚ್‌ಸ್ಟ್ರೀಟ್‌ಲ್ಲಾದ್ರೂ ಒಂದೆರಡು ಫೋಟೋ ಕ್ಲಿಕ್ಕಿಸಿಕೊಳ್ಳೋಣ
ಅಂದ್ರೆ, ಆ ನಮ್ಮ
ಆಸೆಗೂ ಈ ಮಳೆ ತಣ್ಣೀರು ಎರಚಿತ್ತು. ಆದರೆ ನಾವು
ಹೆದರಲಿಲ್ಲ ನೋಡಿ...! ಕಾರ್‌ನಲ್ಲಿಯೇ ಫ್ರೆಂಚ್‌ಸ್ಟ್ರೀಟ್‌ನ್ನ
ಸುತ್ತುಹಾಕಿ, ಒಂದೆರಡುಕಡೆ
ಫೋಟೋವನ್ನೂ ಕ್ಲಿಕ್ಕಿಸಿಕೊಂಡು, ನಮ್ಮ ವಾಟ್ಸ್ಯಾಪ್, ಫೇಸ್ಬುಕ್ ಸ್ನೇಹಿತರಿಗೆ
‘ಪಾಂಡಿಚೇರಿಯಲ್ಲಿಯ ನಮ್ಮ ಭರಪೂರ ಎಂಜಾಯ್‌ಮೆಂಟ್’ನ್ನ ತೋರಿಸಿ ಕೊಟ್ವಿ..! ನಮ್ಮ ಸ್ಟೇಟಸ್‌ಬರೋ ಕಮೆಂಟ್‌ಗಳಿಗೆ ಖುಷಿಯಿಂದ
ಉತ್ತರಿಸ್ತಾ, ನಮ್ಮ
ಟ್ರಿಪ್‌ಟೋಟಲೀ ಹಳ್ಳ ಹಿಡಿದಿದ್ದಕ್ಕೆ ಲೊಚಗುಟ್ಟುತ್ತಾ ವಾಪಾಸ್ ಬೆಂಗಳೂರಿನ ದಾರಿ ಹಿಡ್ದ್ವಿ.
------------------