ಆವತ್ತು
ನಾನು ಅವನಿಗೆ ಸ್ವಲ್ಪ ಗಾಬರಿಯಿಂದ್ಲೇ ಫೋನ್ಮಾಡಿದ್ದೆ.
ದನಿಯಲ್ಲಿ ಸ್ವಲ್ಪ ಕಂಪನವಿತ್ತು. ಕಣ್ಣಿನಲ್ಲಿ ನೀರು ಹರಳುಗಟ್ಟಿತ್ತು. ಮನಸ್ಸು ನಿಜಕ್ಕೂ ನೊಂದಿತ್ತು.
ಆ ಜೋಡಿಗಳು ಎಷ್ಟೋ ದಿನದಿಂದ ಕಂದನನ್ನ ನೋಡಲು ಕಾತರಿಸುತ್ತಾ ಇದ್ದವು. ಹಗಲು ರಾತ್ರಿ ಎನ್ನದೆ ಕಣ್ಣಲ್ಲಿ ಕಣ್ಣಿಟ್ಟು ಕಾಯ್ತಾ ಇದ್ದವು. ಇಂದೋ ನಾಳೆಯೋ ಹೊರ ಜಗತ್ತಿಗೆ ಅಡಿ ಇಡುತ್ತಿದ್ದ ಆ ಕಂದಮ್ಮಳು ಅದೆಷ್ಟು ಬೆಳೆದಿದ್ದವೋ ಏನೋ. ಆದ್ರೆ ಅವು ಕಣ್ಣುಬಿಡುವುದಕ್ಕೂ ಮುಂಚೆಯೇ ಕಣ್ಮುಚ್ಚಿದ್ದವು. ಮಕ್ಕಳನ್ನ ಬದುಕಿಸಿಕೊಳ್ಳುವಲ್ಲಿ ಆ ತಂದೆ ತಾಯಿಯೂ ಸೋತಿದ್ದರು. ಅವಕ್ಕೆ ಸಹಾಯ ಮಾಡಲಾಗದೇ ನಾನೂ ಸೋತಿದ್ದೆ.
ಎರಡು ವರ್ಷದ ಹಿಂದಿನ ಕಥೆ ಇದು. ನಾಲ್ಕಂತಸ್ಸಿನ ಅಪಾರ್ಟ್‌ಮೆಂಟ್‌ನ ಕೊನೆಯ ಮಹಡಿಯಲ್ಲಿ ನಮ್ಮ ಮನೆ. ಅಪಾರ್ಟ್ಮೆಂಟ್ನ ಹಿಂದೆ ದಟ್ಟ ಮರಗಳಿರುವ ಸರ್ಕಾರಿ ಜಾಗ. ಹಸಿರಿಗೆ ಹತ್ತಿರದಲ್ಲಿದ್ದ ಈ ಅಪಾರ್ಟ್ಮೆಂಟ್ ಕೇವಲ ಮನುಷ್ಯರಿಗೊಂದೇ ವಾಸಸ್ಥಾನವಲ್ಲ..! ಜೇನು, ಪಾರಿವಾಳಗಳಿಗೂ ಅಲ್ಲಿತ್ತು ಪರ್ಮನೆಂಟ್ ಅವಕಾಶ. ಕೋತಿಗಳು ಮಾತ್ರ ಅನಿರೀಕ್ಷಿತ ಆಗಂತುಕರು. ವಾರದಲ್ಲಿ ಕನಿಷ್ಠ ಒಂದು ಬಾರಿಯಾದರೂ ನಮ್ಮ ಅಪಾರ್ಟ್ಮೆಂಟ್ ಲಗ್ಗೆ ಇಡದೇ ಬಿಡುವವಲ್ಲ ಆ ಕೋತಿಗಳ ದಂಡು.
ಆಗ ಮೂರು ವರ್ಷದ ಪುಟಾಣಿಯಾಗಿದ್ದ ನನ್ನ ಮಗನಿಗಂತೂ ಆ ಪಾರಿವಾಳಗಳೆಂದರೆ ಖುಷಿಯೋ ಖುಷಿ. ದಿನದಲ್ಲಿ ಅದೆಷ್ಟು ಬಾರಿ ಬೇಕಾದ್ರೂ , ತನಗೆ ನೆನಪಾದಾಗಲೆಲ್ಲ ಅವಕ್ಕೆ ಅಕ್ಕಿ ಹಾಕ್ತಿದ್ದ. ಅವು ತಿನ್ನೋದನ್ನ ನೋಡ್ತಾ ಖುಷಿ ಪಡ್ತಿದ್ದ. ನಮಗೆಲ್ಲ ಆ ಪಾರಿವಾಳಗಳ ಮೇಲೆ ಅದೇನೋ ಹೇಳತೀರದ ಮಮತೆ.
ಅವುಗಳ ಆಟ, ಪ್ರೀತಿ, ಎಂದೆಂದೂ ಬಿಟ್ಟಿರದ ಅವುಗಳ ಬಂಧವನ್ನ ನೋಡೋದೇ ಚೆಂದ. ನಮ್ಮ ಮನೆಯ ಹೂ ಗಿಡದ ಪಾಟ್‌ಅವುಗಳ ಮೀಟಿಂಗ್ ಸ್ಪಾಟ್. ಎಂದೆಂದೂ ಅಲ್ಲೇ ಅವುಗಳ ಸರಸ ಸಲ್ಲಾಪ. ಅಲ್ಲಿದ್ದ ಖಾಲಿ ಪಾಟ್‌ಅವುಗಳ ಮನೆಯಾಯ್ತು. ಬರ್ತಾ ಬರ್ತಾ ಅವುಗಳ ಸಂಭ್ರಮ ಹೇಳತೀರದು. ಒಣ ಕಡ್ಡಿಗಳು, ಹುಲ್ಲುಗಳು, ಎಲೆಗಳನ್ನ ತಂದು ಪಾಟ್‌ನಲ್ಲಿ ಹಾಕಿ ಒಂದು ಮುದ್ದಾದ ಗೂಡೂ ಕೂಡ ಅಲ್ಲಿ ಸಿದ್ಧವಾಗಿಬಿಟ್ಟಿತ್ತು. ಅವುಗಳ ತಯಾರಿ ನೋಡಿಯೇ ಅಂದುಕೊಂಡಿದ್ದೆ ಇವರ ಸಂಸಾರ ದೊಡ್ಡದಾಗ್ತಿದೆ ಅಂತ. ಒಂದು ದಿನ ನನ್ನ ಎಕ್ಸಪೆಕ್ಟೇಶನ್‌ನಿಜವಾಗಿತ್ತು. ಆ ದಿನ ಬೆಳ್ಳಂಬೆಳಗ್ಗೆ ಕಣ್ಣು ಉಜ್ಜಿಕೊಳ್ತಾ ಬಂದು ನೋಡ್ತೀನಿ, ಗೂಡಲ್ಲಿದ್ವು ಎರಡು ಪುಟಾಣಿ ಮೊಟ್ಟೆಗಳು..! ಆವತ್ತು ನನ್ನ ಮಗ ಕುಣಿದಾಡಿಬಿಟ್ಟಿದ್ದ. ಮೊಟ್ಟೆಗಳನ್ನ ನಾವು ಮುಟ್ಟಬಾರದು ಅಂದಿದ್ದಕ್ಕೆ ಹೂಂಗುಟ್ಟಿದ್ದ ಅವನು, ತನ್ನ ಪುಟಾಣಿ ಕಾತುರ ಕಣ್ಣುಗಳಲ್ಲಿ ಅವುಗಳನ್ನ ಹತ್ತಿರದಿಂದ ನೋಡ್ತಾ ಇದ್ದ.
ಆ ಪಾರಿವಾಳಗಳಿಗೆ ನಮ್ಮ ಮೇಲೆ ನಂಬಿಕೆಯೋ ಅಥವಾ ಮೊಟ್ಟೆಗಳ ಮೇಲಿನ ಮೋಹವೋ ಗೊತ್ತಿಲ್ಲ, ಮೊಟ್ಟೆಗಳು ಹುಟ್ಟಿದಾಗಿನಿಂದ ಅವಕ್ಕೆ ಧೈರ್ಯ ಜಾಸ್ತಿಯಾಗಿತ್ತು. ಮೊದಲೆಲ್ಲ ನಾವು ಹತ್ತಿರ ಹೋದಾಗ ಪುರ್‌ಎಂದು ಹಾರಿಹೋಗುತ್ತಿದ್ದ ಪಾರಿವಾಳಗಳು ಈಗ ನಾವು ಅವುಗಳ ಗೂಡಿಗೆ ಎಡತಾಕಿದರೂ ಅಲುಗಾಡುತ್ತಲೂ ಇರಲಿಲ್ಲ. ಮಕ್ಕಳು ಬಂದಾಗ ಮನಸ್ಸೆಷ್ಟು ಗಟ್ಟಿಯಾಗುತ್ತೆ ಅಲ್ವಾ.. ಅಂತೆನಿಸಿತ್ತು ನಂಗೆ.
ಆ ಜೋಡಿ ಪಾರಿವಾಳಗಳು ಮೊಟ್ಟೆಯನ್ನ ಕಾಯ್ತಾ ಇದ್ದುದು ಪಾಳಿಯ ಮೇಲೆ. ಸಾಮಾನ್ಯವಾಗಿ ತಾಯಿ ಹಕ್ಕಿ ತಾಸುಗಟ್ಟಲೇ ಮೊಟ್ಟೆಗಳ ಮೇಲೆ ಕೂತಿರುತ್ತಿತ್ತು. ಆದರೆ ತಾಯಿ ಇಲ್ಲದಾಗ ತಂದೆ ಮೊಟ್ಟೆಗಳನ್ನ ನೋಡಿಕೊಳ್ತಿತ್ತು. ಎಂದೆಂದೂ ಆ ಜೋಡಿಗಳು ಮೊಟ್ಟೆಗಳನ್ನ ಬಿಟ್ಟು ಹೋದದ್ದಿಲ್ಲ.
ಮನೆಯಲ್ಲಿದ್ದವಳು ನಾನೊಬ್ಬಳೇ..! ಏನು ಮಾಡಲಿ..? ಆ ಗೂಂಡಾ ಕೋತಿಗಳಂದ್ರೆ ನನಗೂ ಭಯ ತಾನೇ..? ಗ್ಯಾಲರಿ ಗಾಜು ಜರುಗಿಸಿ ಕೋತಿಗಳನ್ನ ಓಡಿಸುವಷ್ಟು ಧೈರ್ಯವಂತೆ ಅಲ್ಲ ನಾನು. ಗಾಜು ತೆರೆದರೆ ಮನೆಯೊಳಗೇ ನುಗ್ಗುವ ಆ ಮರ್ಕಟಗಳು ಸಾಮಾನ್ಯ ಧರೋಡೆಕೋರರಲ್ಲ..! ಆದರೂ ಗ್ಯಾಲರಿ ಗಾಜುಗಳ ಬಳಿ ನಿಂತು, ಹುಷ್... ಹುಷ್... ಅನ್ನುತ್ತಾ ಪೊರಕೆಯನ್ನ ಗಾಜಿಗೆ ತಾಕಿಸಿ ಅಲುಗಾಡಿಸಿದೆ. ನನ್ನ ಬೆದರಿಕೆಗೆ ಕ್ಯಾರೇ ಅನ್ನದ ಕೋತಿಗಳು, ಗೂಡಿನಲ್ಲಿದ್ದ ಎರಡೂ ಮೊಟ್ಟೆಗಳನ್ನ ಕೈಯ್ಯಲ್ಲಿ ತೆಗೆದುಕೊಂಡ್ವು. ನನ್ನ ಕಣ್ಣಾರೆ, ಆ ಮೊಟ್ಟೆಗಳು ಮಣ್ಣಾಗೋದನ್ನ ನೋಡಬೇಕಲ್ಲಾ..! ಏಯ್‌ಮಂಗ, ಮೊಟ್ಟೆ ಅಲ್ಲೇ ಇಡು ಪಾಪಿ...! ಅಂತ ಕಿರುಚಿಕೊಳ್ತಾ ಗಾಜನ್ನ ಡಬ್‌ಡಬ್‌ಅಂತ ಬಡಿದೆ. ಶಬ್ಧದಿಂದ ವಿಚಲಿತಗೊಂಡ ಆ ಕೋತಿಗಳು ನನ್ನ ನೋಡಿ ಕೆಸ್..ಎಂದ್ವೇ ಹೊರತು ಮೊಟ್ಟೆಗಳನ್ನ ಬಿಟ್ಟಿಲ್ಲ. ಬದಲಾಗಿ ಅವನ್ನ ಹಲ್ಲಲ್ಲಿ ಕಚ್ಚಿ ಒಡೆದುಕೊಂಡು, ಒಳಗಿದ್ದ ರಸವನ್ನ ಹೀರಿಬಿಟ್ಟಿದ್ದವು..! ಚಿಪ್ಪನ್ನೂ ಬಿಡದೆ ನೆಕ್ಕಿ ಅಲ್ಲೇ ಎಸೆದು ಕಾಲ್ಕಿತ್ತವು. ಕೋತಿಗಳೂ ಮೊಟ್ಟೆ ತಿನ್ನುತ್ತವೆ ಅನ್ನೋ ವಿಷಯ ಗೊತ್ತಾಗಿದ್ದೇ ಆವತ್ತು ನನಗೆ . ತುಂಬಾ ನೋವಾಗಿತ್ತು. ಮೊಟ್ಟೆಗಳನ್ನ ರಕ್ಷಿಸೋಕೆ ನನ್ನಿಂದಲೂ ಆಗಿಲ್ಲವಲ್ಲ ಎಂಬ ಪಾಪಪ್ರಜ್ಞೆ..! ಆಗಲೇ ನಾನು ನನ್ನ ಗಂಡನಿಗೆ ಫೋನಾಯಿಸಿ, ನನ್ನ ಅಸಹಾಯಕತೆಯನ್ನ ಹೇಳಿಕೊಂಡಿದ್ದೆ.
ಮರುದಿನ ಅದೇ ಜಾಗದಲ್ಲಿ ಮತ್ತದೇ ಜೋಡಿ ಬಂದು ಕೂತಿತ್ತು. ಪ್ರಕೃತಿಯ ಈ ಆಟಕ್ಕೆ ನಾನು ಬೆರಗಾಗಿದ್ದೆ! ಕಣ್ಣಾರೆ ಮಕ್ಕಳನ್ನ ಕಳೆದುಕೊಂಡು ಎಲ್ಲವನ್ನೂ ಮೌನವಾಗಿ ಸಹಿಸಿದ ಆ ಪಾರಿವಾಳಗಳು ಆವತ್ತು ತಾಳ್ಮೆಯ ಮೂರ್ತಿಗಳಂತೆ ಕಾಣುತ್ತಿದ್ವು. ಎಲ್ಲವನ್ನೂ ಮತ್ತೆ ಸೃಷ್ಟಿಸುವ ಅವುಗಳ ಆತ್ಮವಿಶ್ವಾಸ ಎಂಥವರಿಗೂ ಧೈರ್ಯ ಹೇಳುವಂತಿತ್ತು.