ಚಿತ್ರ ಕೃಪೆ - ವಿನಯ್ ಕೆ.ಪಿ
’ಮಗುವನ್ನ
ಮಲಗಿಸಬೇಕು’ ಇದು ತಾಯಿಯಾದವಳ ಪ್ರಮುಖ ಗುರಿ. ಒಂದುವೇಳೆ ಮಗು ಮಲಗಿದೆ ಅಂತಿಟ್ಟುಕೊಳ್ಳಿ ಆಗ ಅವಳ ಪರಮ
ಕರ್ತವ್ಯವೇನಾಗಿರಬಹುದು ಹೇಳಿ....? ಮಗುವಿಗೆ
ಎಚ್ಚರವಾಗದಂತೆ ’ಎಲ್ಲೆಲ್ಲೂ ನಿಶ್ಯಬ್ಧವನ್ನ ಕಾಪಾಡೋದು’! ಹಾಗೇ ಅವಳ ಉತ್ಕಟ ಆಸೆ ಅಂತೇನಾದ್ರೂ ಇದ್ದರೆ ಅದು
ಸಧ್ಯದ ಮಟ್ಟಿಗೆ ’ಇವತ್ತಾದರೂ ನನ್ನ ಮಗು ಸಮಯಕ್ಕೆ ಸರಿಯಾಗಿ ಮಲಗಲಿ’ ಅನ್ನೋದಷ್ಟೇ..!
ಹೌದಪ್ಪ
ಹೌದು. ಮೊನ್ನೆ ನನ್ನ ತಂಗಿ ಅವಳ ಒಂದುವರೆ ವರ್ಷದ
ಮಗಳನ್ನ ಮಲಗಿಸೋಕೆ ಹರಸಾಹಸ ಪಡ್ತಾ ಇರೋದನ್ನ ನೋಡಿ ಅಯ್ಯೋ ಅನ್ನಿಸಿತ್ತು. ಅಂತೂ ಇಂತೂ ಮಗಳು ಮಲಗಿಸಿ ಕೋಣೆಯಿಂದ ಹೊರಗಡೆ ಬರುಬರುತ್ತಲೇ ’ಶ್... ಶ್... ಶಬ್ಧ ಮಾಡಬೇಡಿ’! ಅಂದಳು. ಅವಳ ಆ ಕೋರಿಕೆಗೆ ಮಿಲಿಯನ್ ಡಾಲರ್ ಬೆಲೆ ಇದೆ ಅನ್ನೋದು ನನಗಷ್ಟೇ ಅರ್ಥವಾಯ್ತು. ಯಾಕಂದ್ರೆ, ನನ್ನ ಸ್ಟೋರಿ
ಸ್ವಲ್ಪ ಡಿಫರೆಂಟ್ ಆಗಿದ್ರೂ ಕೂಡ, ನಾನೂ
ಒಬ್ಬಳು ಅನುಭವಸ್ತೆಯೇ ತಾನೇ..? ಶಿಶುವಿನಮ್ಮನ
ಬಾಯಿಯಿಂದ ಬರೋ ಆ ’ಶ್...ಶ್’, ಎಂಬೆರಡು ಈ ಅಕ್ಷರಗಳಲ್ಲಿ ಅದೆಷ್ಟು ತೂಕವಿರುತ್ತೆ ಗೊತ್ತಾ..? ಆಜ್ಞೆ, ಕಳಕಳಿ,
ವಿನಂತಿ, ಅಸಹಾಯಕತೆಯಂಥ ಅದೆಷ್ಟೋ ಭಾವಗಳ
ಹೊಯ್ದಾಟವಿರುತ್ತೆ.
ಅಂದ್ಹಾಗೆ, ಈ
ಜೋಗಳುಗಳು, ಲಾಲಿ ಹಾಡುಗಳು ಹುಟ್ಟಿದ್ದಾದರೂ ಯಾಕೆ ಹೇಳಿ ? ಮಕ್ಕಳು ಬೇಗ ಮಲಗಲಿ ಅನ್ನೋ ಉದ್ದೇಶಕ್ಕೇ ಅಲ್ವೇ..? ಮಗು ಮಲಗಿ, ತಮಗೂ
ಸ್ವಲ್ಪ ಸಮಯ ಸಿಗಲಿ ಎಂಬುದು ತಲತಲಾಂತರದಿಂದಲೂ
ಅಮ್ಮಂದಿರ ಆದ್ಯ ಹಂಬಲವೇ.
ಶಿಶುವಿನ
ತಾಯಿಯಾದವಳ ಕಷ್ಟ ಅಷ್ಟಿಷ್ಟಲ್ಲ ಬಿಡಿ. ಅವಳು ಊಟ ಮಾಡ್ತಾ ಇರಲಿ , ಸ್ನಾನಕ್ಕೆ
ಹೋಗಿರಲಿ, ಶೌಚಕ್ಕೆ ಹೋಗಿರಲಿ, ಆ ಸಮಯಕ್ಕೆ ಸರಿಯಾಗಿಯೇ ಮಗುವಿಗೆ ಅಮ್ಮ
ಬೇಕೆನಿಸಿಬಿಡುತ್ತೆ.! ಗಾಢ ನಿದ್ದೆಯಲ್ಲಿದ್ದ
ಮಗುವಿಗೆ ಅದ್ಯಾವ ಟೆಲಿಪತಿ ಸಂದೇಶ ಹೋಗುತ್ತೋ ಗೊತ್ತಿಲ್ಲ, ಆಗಿದಾಂಗ್ಗೆ ಅಮ್ಮ ಮಾಡುತ್ತಿದ್ದ ಕೆಲಸ
ಅರ್ಧಕ್ಕೇ ಬಿಟ್ಟು ಓಡಿ ಬಂದುಬಿಡಬೇಕು..! ಅಂಥ ಭಯಂಕರ ಅಳು..! ಅಷ್ಟರ ಮಟ್ಟಿಗೆ ಶೌಚಾಲಯದಲ್ಲೂ ನೆಮ್ಮದಿ ಇಲ್ಲದ ಜೀವನ ಅದು.
ಮಗುವನ್ನ
ಮಲಗಿಸೋ ಅಮ್ಮಂದಿರ ಹರಸಾಹಸಗಾಥೆ ಹೇಳೋಕೆ ಹೊರಟರೆ ಅದು ಮುಗಿಯೋದಿಲ್ಲ. ನಿದ್ದೆ ಮಾಡೋಕೆ ಕೆಲ ಮಕ್ಕಳಿಗೆ ತೊಟ್ಟಿಲೇ ಬೇಕು.
ಮತ್ತೆ ಕೆಲವಕ್ಕೆ ಜೋಲಿ,
ಇನ್ಕೆಲವಕ್ಕೆ ಹಾಸಿಗೆಯೇ ಬೇಕು.
ನನ್ನ ಗೆಳತಿಯ ಮಗುವಿಗಂತೂ ಅದರಪ್ಪನ ಹೆಗಲೇ ಬೇಕಂತೆ..! ಅಮ್ಮನ ತೊಡೆಯಿಂದ ಇಡೀರಾತ್ರಿ ಕೆಳಗಿಳಿಯದೇ
ನಿದ್ದೆಹೊಡೆಯುವ ಮಕ್ಕಳೆಷ್ಟೋ.? ನಿದ್ದೆ ಕಣ್ಣಿಗೆ ಹತ್ತಿದರೂ ಪ್ಯಾಸಿಫಾಯರ್ ಬಾಯಿಗಿಡದಿದ್ದರೆ ನಿದ್ದೆ ಮಾಡದೇ ಅಳುವ
ಕಂದಮ್ಮಗಳನ್ನೂ ಕಂಡಿದ್ದೀನಿ. ಕೈತೋಳು
ಬಿದ್ಹೋಗುವಷ್ಟು ತಟ್ಟಿತಟ್ಟಿ ಮಲಗಿಸೋ ಅಮ್ಮಂದಿರ ಗೋಳನ್ನೂ ಕೇಳಿದ್ದೀನಿ. ರಾತ್ರಿ ಇಡೀ ಹಾಡು ಹಾಡ್ತಾ ಮಗುವನ್ನ ಮಲಗಿಸೋ
ಅಮ್ಮಅಪ್ಪಂದಿರ ಕಷ್ಟ ನೋಡಿ ಲೊಚಗುಟ್ಟಿದ್ದೀನಿ.
ನನ್ನ
ಮಗನಿನ್ನೂ ಶಿಶುವಾಗಿದ್ದಾಗ,
ದೊಡ್ಡ ಮಕ್ಕಳ ತಾಯಿಯರನ್ನ, ಇನ್ನೂ ಮದುವೆಯಾಗದ
ಹುಡುಗಿಯರನ್ನ, ಮದುವೆಯಾದರೂ ಮಗು ಮಾಡಿಕೊಳ್ಳದ ಜಾಲಿ ಬೆಡಗಿಯರನ್ನ
ಕಂಡರೆ ನನಗೇನೋ ಭಯಂಕರ ಹೊಟ್ಟೆಕಿಚ್ಚು. ಅಯ್ಯೋ
ಅವರೆಲ್ಲ ಎಷ್ಟು ಆರಾಮಾಗಿದ್ದಾರಪ್ಪಾ..!
ರಾತ್ರಿಯಿಂದ ಬೆಳಗಿನ ತನಕ ಆರಾಮಾಗಿ ನಿದ್ದೆ ಮಾಡ್ತಾರೆ, ಈ
ಭಾಗ್ಯ ನನಗೆ ಇನ್ಯಾವತ್ತೋ..? ಅನ್ನಿಸ್ತಾ ಇತ್ತು ಅನ್ನೋದು ನನ್ನಾಣೆ ಸುಳ್ಳಲ್ಲ.
ನನ್ನ ಕೈಗಳು
ತೊಟ್ಟಿಲು ತೂಗುತ್ತಿದ್ದರೆ,
ತಲೆಯೊಳಗಂತೂ ನಾನಾ ಯೋಚನೆಗಳ ಹಾವಳಿ !
ಇವತ್ತು ಜೀವದ ಗೆಳತಿಗೆ ಫೋನಾಯಿಸಿ ಗಂಟೆಗಟ್ಟಲೆ ಹರಟಬೇಕು. ಅಂದೇ ತಂದಿಟ್ಟಿರುವ ಕಿವಿಯೋಲೆಯನ್ನ ಇಂದಾದರೂ ಹಾಕಿ ನೋಡಬೇಕು. ಕಬೋರ್ಡ್‌ನಲ್ಲಿ ಮುದ್ದೆಯಾಗಿ ಬಿದ್ದಿರೋ ಡ್ರೆಸ್ಗಳನ್ನ ಮಡಿಸಿಡಬೇಕು. ಮಸ್ತಕದೊಳಗೆ ಗಿರಕಿ ಹೊಡೆಯುತ್ತಿರೋ ಆ ಕವನದ ಸಾಲುಗಳನ್ನ ಮರೆತುಹೋಗುವ ಮೊದಲು ಗೀಚಿಬಿಡಬೇಕು. ಮೂಲೆಯಲ್ಲಿ
ಬಿದ್ದಿರೋ ಲ್ಯಾಪ್‌ಟಾಪ್‌ಮೇಲೆ ಧೂಳು ಕೂತಿದೆ..
ಇವತ್ತಾದರೂ ಒರೆಸಿಬಿಡಬೇಕು. ಅನ್ನೋ ಇಂಥ
ಅದೆಷ್ಟೋ ಮುಗಿಯದ ಲೆಕ್ಕಾಚಾರ ಮನಸ್ಸಿನಲ್ಲಿ ಹರಿದಾಡ್ತಾ ಇದ್ದರೆ, ಬಾಯಿ
ಮಾತ್ರ ಜೋಜೋ ಹಾಡ್ತಾ ಇತ್ತು.
ಯಾಕೋ ಆವತ್ತು ನನ್ನ ಮಗ ಬೇಗ ಮಲಗುವ ಲಕ್ಷಣವಿರಲಿಲ್ಲ. ಹೇಗೆ ಮಲಗಿಸಿಕೊಂಡು ತಟ್ಟಿದರೂ ಈತ ಕಣ್ಣುಮುಚ್ಚುತ್ತಿಲ್ಲವಲ್ಲ ಎಂಬ ಚಿಂತೆ. ಈತನಿಗೆ ನಿದ್ದೆ ಬಾರದೇ ನಾನು ಎದ್ದು ಹೋಗುವ ಹಾಗಿಲ್ಲ. ಹೊರಗೆ ಜೋರಾಗಿ ಗಾಳಿ ಬೀಸುತ್ತಿತ್ತು, ಒಂದೆರಡು ಹನಿ ಕೂಡ ಬಿದ್ದ ಶಬ್ಧವಾಗುತ್ತಿತ್ತು.
ಬೆಳಗ್ಗೆಯಷ್ಟೇ ತೊಳೆದು ತಾರಸಿಯ ಮೇಲೆ
ಒಣಗಿಸಿದ್ದ ಬಟ್ಟೆಗಳ ನೆನಪಾಯ್ತು. ಮಧ್ಯಾಹ್ನದ ಬಿಸಿಲಿಗೆ ಗರಿ ಗರಿ ಒಣಗಿತ್ತು..! ಥೋ..! ತಂದಿಡಬೇಕಿತ್ತು ಮೊದಲೇ..! ಲೊಚಗುಟ್ಟುತ್ತಾ ಮಗುವ ತಲೆಯನ್ನ ಬೇಗ ಬೇಗ ತಟ್ಟಿದೆ. ತಟ್ಟಿದ್ದು ಸ್ವಲ್ಪ ಗಟ್ಟಿಯಾಗಿ ಮತ್ತೆ ಕಣ್ಬಿಟ್ಟು ಕುಯ್ಯಿ ಅಂದ. ಸಂತೈಸಿ ಮೆತ್ತಗೆ ತಟ್ಟಿದೆ. ಅಂತೂ ಇಂತೂ ಮಗುವಿಗೇನೋ ನಿದ್ದೆ ಬಂತು.. ಹಾಗೇ.. ಮಳೆ ಕೂಡ..! ಆ ಬಟ್ಟೆಗಳ ಗತಿಯನ್ನ ಮತ್ತೆ ನಾನು ಹೇಳಬೇಕಾಗಿಲ್ಲ
ಅಲ್ವಾ...?
ಕೊನೆಗೂ ನನ್ನ ಮಗ ಮಲಗಿದ್ದ. ಸ್ವಲ್ಪ ಹೊತ್ತು ರಿಲ್ಯಾಕ್ಸ್ಆಗಿ ಟಿವಿ ನೋಡೋಣ
ಅಂದುಕೊಂಡು ಸೋಫಾದ ಮೇಲೆ ಕೂತಿದ್ದೇ ಕೂತಿದ್ದು ರೂಂನಿಂದ ಮತ್ತದೇ ಕುಸು ಕುಸು ಶಬ್ಧ!
ಮಗ ಮಲಗಿದ್ದಲ್ಲಿಯೇ ಹೊರಳಾಡುತ್ತಾ ನನ್ನನ್ನೇ ಹುಡುಕುತ್ತಿದ್ದ. ಪೂರ್ತಿ ಎಚ್ಚರಾಗುವ ಮೊದಲು ಮಲಗಿಸಿ ಬಂದು ಬಿಡಬೇಕು ಎಂದು ಹೋದದ್ದೇ ತಪ್ಪಾಯ್ತು ನೋಡಿ..! ನನ್ನ ಮಗು ಎದ್ದು ಕುಳಿತು ನನ್ನ ಮುಖ ಸವರುತ್ತಾ ನಗುತ್ತಿದ್ದಾಗಲೇ ನನಗೆ ಎಚ್ಚರವಾದದ್ದು..! ಆಗಲೇ ನನಗೆ ಅರ್ಥವಾಗಿತ್ತು ನಾನೂ ಒಂದುವರೆ ಗಂಟೆ ಮಲಗಿಬಿಟ್ಟಿದ್ದೆ ಎಂಬುದು. ಅಂಥ ದಿವ್ಯ ನಿದ್ದೆ ಅದು..!
ಅಲ್ಲಿಗೆ ನಾನು ಮಾಡಬೇಕಿದ್ದ ಎಲ್ಲ ಕೆಲಸಗಳೂ ಹಾಗೇ ಉಳಿದಿದ್ವು! ಹೇಳ್ತಾ ಹೋದರೆ ಇಂಥ ಉದಾಹರಣೆಗಳು ಅದೆಷ್ಟೋ..!?
ಕಾಮಿಡಿ ವಿಷಯ ಏನು ಗೊತ್ತಾ..? ನಾನು
ಅಮ್ಮ ಆಗೋಕೂ ಮುಂಚೆ ನನಗೆ ನಿದ್ದೆ ಬರಬೇಕು
ಅಂದ್ರೆ, ಎಲ್ಲಿಯೂ ಸುಕ್ಕಿರದ ಶಿಸ್ತಾಗಿರುವ ಹಾಸಿಗೆ
ಬೇಕಿತ್ತು. ಲೈಟ್ ಆನ್ ಇದ್ದರೆ ಕಣ್ಣಿಗೆ ನಿದ್ದೆ ಹತ್ತುತ್ತಿರಲಿಲ್ಲ. ಫ್ಯಾನ್‌ಸೌಂಡ್‌ಬಿಟ್ಟು, ಯಾವ
ಸದ್ದೂ ಆಗುವಂತಿರಲಿಲ್ಲ. ಆದ್ರೆ ನನಗೇ
ಗೊತ್ತಿರದೇ ಆಗಿನ ಮತ್ತು ಈಗಿನ ಸ್ಥಿತಿಯಲ್ಲಿ ಅಜಗಜಾಂತರ ವ್ಯತ್ಯಾಸವಾಗಿಬಿಟ್ಟಿದೆ. ಎಂಥದೇ ಪರಿಸ್ಥಿತಿ ಇದ್ದರೂ ನಿದ್ರಾ ದೇವಿ ಅದ್ಭುತವಾಗಿ
ನನ್ನನ್ನು ಆವರಿಸಿಕೊಂಡಿರುತ್ತಾಳೆ. ಮಗನ
ಚೇಷ್ಠೆಗೆ ಬೇಸತ್ತು ಅವನಪ್ಪ ಎಂದೋ ಎದ್ದು ಹೋಗಿ ಪಕ್ಕದ ರೂಮ್ನಲ್ಲಿ ಮಲಗಿದ್ದೂ ಕೂಡ ನನ್ನ ಅರಿವಿಗೆ ಬಂದಿರುವುದಿಲ್ಲ.!
ಈಗ ನನ್ನ ಮಗನಿಗೆ ಐದು ವರ್ಷ. ಈಗವನು ದಿನಕ್ಕೊಂದೇ ನಿದ್ರೆ
ಮಾಡುತ್ತಾನೆ. ಈಗ ತಟ್ಟುವುದೂ ಬೇಡ, ಜೋಗುಳವೂ
ಬೇಡ. ಅವನ ಪಾಡಿಗೆ ಅವನು ಮಲಗಿಬಿಡ್ತಾನೆ. ಆದರೆ ಕಂಡೀಶನ್ಸ್ ಅಪ್ಲೈಯ್ ..! ರಾತ್ರಿ ಹಾಸಿಗೆಗೆ ಹೋದಮೇಲೆ ಅವನು
ಕೇಳಿದಷ್ಟು ಕಥೆಗಳನ್ನು ನಾವು ಹೇಳಬೇಕು. (ಕಥೆ ಹೇಳಲು ತಡವಾದ್ರೆ ಅವನ ನಿದ್ದೆಯ ಟೈಮೂ
ಪೋಸ್ಟ್ಫೋನ್ ಆಗುತ್ತೆ). ಇಡೀ ಮನೆಯ ಲೈಟ್ ಆಫ್
ಆಗಿ ಅಪ್ಪ ಅಮ್ಮ ಅವನ ಅಕ್ಕಪಕ್ಕ ಮಲಗಬೇಕು. ಅವನ ಇಷ್ಟದ ಆಟಿಗೆಗಳನ್ನ ತಬ್ಬಿ ಹಿಡಿದೇ ಮಲಗಲು ಅವಕಾಶ
ಕೊಡಬೇಕು. ಈ ಎಲ್ಲಾ ಶರತ್ತುಗಳು
ಅನ್ವಹಿಸುವುದರಿಂದ ಈಗಲೂ ನನಗೆ ನಿದ್ದೆ ಬಂದಾಗ ಕಣ್ತುಂಬಾ ನಿದ್ದೆ ಮಾಡೋದು ಕನಸಿನ ಮಾತಾಗಿಯೇ
ಉಳಿದುಬಿಟ್ಟಿದೆ. ಯಾಕಂದ್ರೆ, ಮಗನಿಗೆ ನಿದ್ದೆ ಬಂದಮೇಲೆ ಹಾಸಿಗೆಯಲ್ಲೆಲ್ಲ ಹರಡಿ
ಚುಚ್ಚುತ್ತಿರುವ ಆಟಿಕೆಗಳನ್ನ ತೆಗೆದಿಡಬೇಕಲ್ಲ..!
ಆ ಕೆಲಸದ ಪಾಳಿ ಸಧ್ಯಕ್ಕೆ ನನ್ನದೇ..!
ಹೀಗಾಗಿ ಈಗಲೂ ನನ್ನ ಆಸೆ ಒಂದೇ ‘ ಮಗ ಬೇಗ ಮಲಗಲಿ’ ಅನ್ನೋದು.