Saturday, 22 March 2025

“ಕ್ಯಾನ್ಸರ್‌”

 

ಕಟ-ಕಟ ಕಟ-ಕಟ ಶಬ್ಧ ಲಯದಂತೆ ಕಿವಿಗೆ ಅಪ್ಪಳಿಸುತ್ತಾ ಅಪ್ಪಳಿಸುತ್ತಾ, ಕಣ್ಣು ಎಳೆದಂತಾಗಿ ನಿದ್ದೆಯ ಮಂಪರಿನಲ್ಲಿದ್ದಾಗಲೇ, ಮೇಲಿನ ಸೀಟ್‌ಮೇಲೆ ಇಟ್ಟಿದ್ದ ಬ್ಯಾಗ್‌ ಒಂದು ದೊಪ್ಪನೇ ಕೆಳಗೆ ಅಪ್ಪಳಿಸಿತ್ತು. ಅದೃಷ್ಟವಶಾತ್‌ ಇವಳ ಕಾಲಿಗೆ ತಗುಲದೇ, ಎರಡೇ ಎರಡು ಅಂಗುಲ ದೂರ ಬಿತ್ತು. ಬೆಚ್ಚಿ ಎಚ್ಚೆತ್ತು, ಗಡಬಡಾಯಿಸಿ ಕಾಲೆಳೆದು ಕೂತಾಗಲೇ ಅವಳಿಗೆ ಗೊತ್ತಾಗಿದ್ದು, ಇಲ್ಲೇನು ನಡೆಯಿತು ಎಂದು. “ಅಯ್ಯಯ್ಯೋ  ಸಾರಿ, ಮೇಡಮ್‌. ನಿಮ್ಮ ಕಾಲಿಗೇನಾದೂ ತಾಗಿತಾ? ರೈಲಿನ ಈ ಒಂದೇ ಲಯದ ಅದುರಾಟಕ್ಕೆ ಮೇಲಿಟ್ಟ ಬ್ಯಾಗು ಕೆಳಗೆ ಬಿದ್ದುಬಿಡ್ತು” ಮತ್ತೆ ಮತ್ತೆ ಕ್ಷಮೆ ಕೇಳುತ್ತಿದ್ದ ಆತನನ್ನು ಆಗಲೇ ಈಕೆ ನೋಡಿದ್ದು. 

ನುಣ್ಣಗೆ ಬೋಳಿಸಿಕೊಂಡ  ತಲೆಗೊಂದು ಕಪ್ಪು ಬಣ್ಣದ ಟೊಪ್ಪಿ ಹಾಕಿಕೊಂಡು, ಫಾರ್ಮ್‌ಲ್‌ ಶರ್ಟ್‌ , ಪ್ಯಾಂಟ್‌ ಧರಿಸಿದ್ದ. ನೋಡೋಕೆ ಸಭ್ಯಸ್ತನಂತೆ ಕಾಣುತ್ತಿದ್ದ ಆತ, ಥಟ್ಟನೆ ಕನ್ನಡದಲ್ಲಿಯೇ ಮಾತನಾಡಿದ್ದನ್ನು ಕೇಳಿ, ಈಕೆಗೆ ಅದೇನೋ ಸಮಾಧಾನವಾಗಿ, “ಇಲ್ಲ ಸರ್‌, ಏನೂ ಆಗಿಲ್ಲ. ಬ್ಯಾಗ್‌ ಸಡನ್‌ ಆಗಿ ಬಿದ್‌ಬಿಡ್ತಲ್ಲಾ, ಸೋ ಐ ಗಾಟ್‌ ಸ್ಕೇರ್ಡ್‌ ಅಷ್ಟೆ. ನಂಗೇನೂ ಆಗಿಲ್ಲ, ಡೋಂಟ್‌ ವರಿ” ಎಂದಳು ಸೌಜನ್ಯಯುತಳಾಗಿ.  ಆತ ಸ್ವಲ್ಪ ಒತ್ತಡದಲ್ಲಿಯೇ ನಕ್ಕ. ಅವಳ ಮುಂದಿನ ಸೀಟ್‌ನಲ್ಲಿ ಕುಳಿತು, ತನ್ನ ಬ್ಯಾಗ್‌ನಲ್ಲಿದ್ದ ನೀರಿನ ಬಾಟಲಿ ತೆಗೆದು ಗಟಗಟನೇ ನೀರು ಕುಡಿದ. ಮತ್ತೇನೂ ಮಾತನಾಡದೇ, ಒಂದೇ ಹದದಲ್ಲಿ ಓಡುತ್ತಿದ್ದ ಮರಗಿಡಗಳನ್ನು, ಮನೆಗಳನ್ನು ನೋಡುತ್ತಾ ಕೂತಿದ್ದ.

ಅಷ್ಟರಲ್ಲಿ ಆತನ ಫೋನ್‌ ರಿಂಗಾಗತೊಡಗಿತು. ಕಾಲ್‌ ರಿಸೀವ್‌ಮಾಡಿ ಮಾತನಾಡಿದ. ಅವನ ಮಗಳೋ, ಮಗನೋ ಫೋನ್‌ ಮಾಡಿರಬಹುದು. “ಬೆಳಗ್ಗೆ ೧೧ ಕ್ಕೆ ವಾರಣಾಸಿ ಬಿಟ್ಟಿದೀನಿ ಪುಟ್ಟಾ, ಅಮ್ಮಂಗೂ ಹೇಳು. ರಾತ್ರಿ ೧೧ ಗಂಟೆ ಒಳಗೆ ಡೆಲ್ಹಿ ತಲುಪ್ತೀನಿ. ಬೆಳಗ್ಗೆ ಅರ್ಲಿ ಮಾರ್ನಿಂಗ್‌ ಬೆಂಗ್ಳೂರಿಗೆ ಫ್ಲೈಟ್‌ ಇದೆ. ಸೋ ಮಾರ್ನಿಂಗ್‌ ತಿಂಡಿ ತಿನ್ನೋಕೆ ಮನೆಗೇ ಬರ್ತೀನಿ ಆಯ್ತಾ..? ಓಕೆ ಕಂದಾ ಬಾಯ್‌ ಅಂದು ಫೋನ್‌ ಇಟ್ಟ.

ಇವರದೇ ಬೋಗಿಯಲ್ಲಿದ್ದ ಇತರರೆಲ್ಲ, ಅವರವರದೇ ಭಾಷೆಯಲ್ಲಿ ಮಾತನಾಡುತ್ತಾ, ನಗುತ್ತಾ ಕಾಲಕಳೆಯುತ್ತಿದ್ದರು. ಯಾಕೋ, ಇವಳಿಗೆ ಅವರೆಲ್ಲರೊಂದಿಗೆ ಸೇರಿಕೊಂಡು ಹಿಂದಿಯಲ್ಲೋ, ಇಂಗ್ಲೀಷ್‌ನಲ್ಲೋ ಹರಟಲು ಉದಾಸೀನವೆನಿಸಿತೋ ಏನೋ.  ಮತ್ತೆ ಕಣ್ಮುಚ್ಚಿದಳು, ನಿದ್ದೆ ಮತ್ತೆ ಎಳೆಯಲೇ ಇಲ್ಲ. ಆದರೆ, ಅವಳೆದುರೇ ಕೂತಿದ್ದ ಈ ಕನ್ನಡಿಗ, ಅದ್ಯಾವುದೋ ವೇದನೆಯಲ್ಲಿದ್ದಂತೆ ಕಾಣಿಸಿತು. ಬಿಟ್ಟ ಕಣ್ಣು ಬಿಟ್ಟಂತೆ ಯೋಚನೆಯಲ್ಲಿದ್ದ ಆತನನ್ನು  ಸ್ವಲ್ಪ ಹೊತ್ತು ಗಮನಿಸಿದ ಈಕೆ ತಾನೇ ಮಾತು ಶುರು ಮಾಡಿದಳು.  ʼಸರ್‌ನೀವು ವಾರಣಾಸಿಗೆ ಬಂದಿದ್ರಾ ?”  “ಹೌದು ಮೇಡಮ್‌” ಚುಟುಕು ಉತ್ತರ ನೀಡಿ, ಸುಮ್ಮನಾದ.  ಆತ ಭಾವುಕನಾದಂತೆ ಕಾಣಿಸಿತು.  ಸ್ವಲ್ಪ ಹೊತ್ತು ಬಿಟ್ಟು ಆತನೇ  ಮಾತನಾಡಿದ. “ ನೀವು..?”   “ ನಾನು, ನನ್ನ ತಂದೆಯ ಕೊನೆಯ ಕ್ರಿಯಾಕರ್ಮ ಮಾಡೋಕೆ ಅಂತ ಬಂದಿದ್ದೆ.  ಅವಳ ಉತ್ತರ ಕೇಳಿ ಮಾತು ಮುಂದುವರೆಸಿದ.  “ ನನ್ನದೂ ಅದೇ ಉದ್ದೇಶ. ನನ್ನ ತಾಯಿಯ ಚಿತಾಭಸ್ಮ, ಅಸ್ತಿಯನ್ನು ಗಂಗೆಯಲ್ಲಿ ತೇಲಿಬಿಟ್ಟು ಆಕೆಯ ಕೊನೆಯ ಆಸೆಯನ್ನ ಈಡೇರಿಸಿ ಬಂದಿದ್ದಾಯ್ತು.” ಭಾವುಕತೆ ಅವನಲ್ಲಿ ಕಣ್ಣೀರು ತರಿಸಿತ್ತು.  ಅವನ ಸಂಕಟ ನೋಡಿ ಇವಳ ಕಣ್ಗಳೂ ಒದ್ದೆಯಾದವು.

“ನಾವಿಬ್ಬರೂ ಒಂದೇ ದುಃಖ ಅನುಭವಿಸ್ತಾ ಇದ್ದೀವಿ ಸರ್‌... ಸಮಾಧಾನ ಮಾಡ್ಕೊಳಿ.  ನೀವು ನಿಮ್ಮ ತಾಯಿಯನ್ನು ತುಂಬಾ ಹಚ್ಕೊಂಡಿದ್ರಿ ಅನ್ಸುತ್ತೆ. ಏನಾಗಿತ್ತು ಅಮ್ಮಂಗೆ ? “ಅವಳು ಕೇಳಿದ ತಕ್ಷಣ ಶುರುಮಾಡಿಬಿಡುವಂಥ ಚಿಕ್ಕ ಕಥೆಯೇನಲ್ಲ ಅದು, ಒಂದಿಪ್ಪತ್ತು ಸೆಕೆಂಡ್ ಆಲೋಚಿಸಿ ಇನ್ನೇನು ತನ್ನೊಳಗಿನ ದುಃಖದ ಮೂಟೆಯ ಗಂಟನ್ನು ಒಂದೊಂದಾಗಿ ಬಿಚ್ಚಬೇಕು ಎಂಬಷ್ಟರಲ್ಲಿ,  ಟೀ, ಕಾಫೀ.. ಎನ್ನುತ್ತಾ ಒಬ್ಬಾತ ಬಂದೇಬಿಟ್ಟ. ಅದಕ್ಕಾಗಿಯೇ ಕಾಯುತ್ತಿದ್ದೇವೆ ಎಂಬ ರೀತಿಯಲ್ಲಿ, ಇಬ್ಬರೂ ಅವನತ್ತ ನೋಡಿದರು. ಗರಮಾಗರಮ್‌ ಟೀ ಪಡೆದ ಆಕೆ, ಆತನ ಅಂಬೋಣದಂತೆ ಅವನಿಗಾಗಿಯೂ ಕಾಫಿ ಪಡೆದು,  ಟೀವಾಲಾನಲಿಗೆ ಫೋನ್‌ಪೇ ಮಾಡಿದಳು. ಬಿಸಿ ಬಿಸಿ ಕಾಫಿ ಅವನ ನೋವಿಗೆ ಸ್ವಲ್ಪ ಆಧಾರ ನೀಡಿತು.  ದೂರದ ಊರಲ್ಲಿದ್ದ ಕನ್ನಡಿಗರಲ್ಲವೇ, ಅಪರಿಚಿತರಾದರೂ ಕನ್ನಡವೇ ಅವರಲ್ಲೊಂದು ಆಪ್ತತೆಯನ್ನು ಹುಟ್ಟಿಸಿಬಿಡುತ್ತದೆ.  ತನ್ನ ನೋವನ್ನು ಸ್ವಲ್ಪ ಶಮನ ಮಾಡಿಕೊಳ್ಳಲು ಹೊರಟವರಂತೆ ಮಾತಿಗಿಳಿದ.  

“ನನ್ನ ಅಮ್ಮ ಗಟ್ಟಿಗಿತ್ತಿ. ನಾನು ನನ್ನ ತಂಗಿ ತುಂಬಾ ಚಿಕ್ಕವರಿರುವಾಗ್ಲೇ ಅಪ್ಪ ತೀರಿಹೋಗಿದ್ದರಿಂದ, ನಮ್ಮ ಜತೆ ನಮ್ಮ ಅಜ್ಜಿ ಅಂದರೆ ಅವಳ ಅತ್ತೆಯನ್ನೂ ನೋಡಿಕೊಳ್ಳುವ ಜವಾಬ್ದಾರಿ ಅವಳೊಬ್ಬಳೇ ಹೊರಬೇಕಾಯ್ತು. ನಮ್ಮಿಬ್ಬರನ್ನು ಓದಿಸುತ್ತಾ, ಅಜ್ಜಿಯ ಆರೈಕೆ ಮಾಡ್ತಾ ಕೆಲಸಕ್ಕೂ ಹೋಗ್ತಾ  ಇದ್ದಳು. ಆಗಿನ ಕಾಲದಲ್ಲಿಯೇ ಪಿ.ಯೂ.ಸಿ ಓದಿಕೊಂಡಿದ್ದ ಅಮ್ಮ, ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡಿದಳು. ಶಾಲೆಗೆ ರಜೆ ಇದ್ದಾಗ, ಮನೆಯಲ್ಲಿ ಸಾಂಬಾರ್‌ ಪುಡಿ, ಚಟ್ನಿಪುಡಿ ಮಾಡಿ ಮಾರುತ್ತಿದ್ದಳು. ಅದೆಷ್ಟೋ ಕಷ್ಟಪಟ್ಟು, ನಮ್ಮಿಬ್ಬರನ್ನೂ ಓದಿಸಿದಳು, ಮದುವೆ ಮಾಡಿದಳು, ಇರೋತನಕ ಸ್ನೇಹಿತೆ ಥರ ಇದ್ಲು”

ಅಮ್ಮನ ನೆನಪಲ್ಲೇ ಮುಳುಗಿದ ಆತನ ಕಣ್ಣುಗಳು ತುಂಬಿ ತುಂಬಿ ಬರುತ್ತಿದ್ದವು.  ಮಧ್ಯದಲ್ಲಿ ಪ್ರಶ್ನೆ ಕೆಳುವುದೇ ಬೇಡ. ದುಃಖವೆಲ್ಲ ಕಣ್ಣೀರಾಗಿ ಹರಿದುಹೋಗಲಿ ಅಂತ ಅನ್ನಿಸಿರಬಹುದು ಅವಳಿಗೆ. ಸುಮ್ಮನೆ ಕೇಳಿಸಿಕೊಳ್ಳುತ್ತಿದ್ದಳು.  ಅವನು ಅಮ್ಮನ ಕಥೆಯನ್ನ ಹೇಳುತ್ತಲೇ ಇದ್ದ.  “ ಶಿಕ್ಷಕಿಯಾಗಿ ಕೆಲಸ ಮಾಡಿದ್ದಕ್ಕೋ ಏನೋ, ಅತೀವ ಓದಿನ ಹುಚ್ಚು. ಮನೆ ತುಂಬ ಪುಸ್ತಕ ತುಂಬಿಕೊಂಡಿದ್ದಳು. ಮೊದಲೆಲ್ಲ ಕಥೆ,ಕಾದಂಬರಿ ಓದ್ತಾ ಇದ್ದ ಅಮ್ಮ, ಅಮೇಲಾಮೇಲೆ ಅ‍ಧ್ಯಾತ್ಮದ ಪುಸ್ತಕಗಳನ್ನು ಓದಲು ಶುರುಮಾಡಿದ್ದಳು. ನಿವೃತ್ತಿಯ ನಂತರವಂತೂ, ಯೋಗ, ಧ್ಯಾನ, ಸತ್ಸಂಗದಲ್ಲಿ ಅವಳಿಗೆ ಮತ್ತಷ್ಟು ಆಸಕ್ತಿ ಹುಟ್ಟಿತ್ತು.  ನಮ್ಮ ಅಪಾರ್ಟ್‌ಮೆಂಟ್‌ನ ಅದೆಷ್ಟೋ ಮಕ್ಕಳಿಗೆ ಶ್ಲೋಕ ಹೇಳಿಕೊಡ್ತಾ, ಮಕ್ಕಳೊಂದಿಗೆ ಮಕ್ಕಳಾಗುತ್ತಿದ್ದಳು. ಟೀಚರ್‌ ಅಜ್ಜಿ ಅಂತಾನೇ ಫೇಮಸ್‌ ಆಗಿದ್ಲು ನಮ್ಮಮ್ಮ. ೭೫ ವರ್ಷ ಆದ್ರೂ ೨೫ರ ಉತ್ಸಾಹ ಅವಳಲ್ಲಿತ್ತು. ಜೀವನ ಪ್ರೀತಿಗೆ ಇನ್ನೊಂದು ಹೆಸರು ಅನ್ನೋ ಥರ ಬದುಕಿದೋಳು ಅವಳು.”  ತನ್ನ ಫೋನಿನ ಲಾಕ್‌ ಸ್ಕ್ರೀನ್‌ನಲ್ಲಿದ್ದ ಅಮ್ಮನ ಫೋಟೋ ನೋಡತೊಡಗಿದ.  

ಇವಳೂ ಬಾಗಿ ಅವನಮ್ಮನ ಫೋಟೋ ನೋಡಿದಳು. ನೀಳ ಮೂಗಿನ ಲಕ್ಷಣ ಮುಖ. ದೇವತೆಯ ತೇಜಸ್ಸುಳ್ಳ ಅಮ್ಮ ನಸು ನಗುತ್ತಿದ್ದರು.  ಆತ ಮುಂದುವರೆಸಿದ “ ಹೀಗೆ ತನ್ನದೇ ಲೋಕದಲ್ಲಿ ಖುಷಿಯಾಗಿದ್ದ ನನ್ನಮ್ಮನ ಹೊಟ್ಟೆಯೊಳಗೆ ಅವಳಿಗೇ ತಿಳಿಯದಂತೆ, ಕ್ಯಾನ್ಸರ್‌ ಗಡ್ಡೆಯೊಂದು ಬೆಳೆದುಬಿಟ್ಟಿತ್ತು ಮೇಡಮ್‌. ಎರಡು ವರ್ಷಗಳ ಹಿಂದೆ,  ಆಸಿಡಿಟಿ ಆಗ್ತಿದೆ, ಹೊಟ್ಟೆ ಉಬ್ಬರಿಸ್ತಿದೆ ಅನ್ನೋಕೆ ಶುರು ಮಾಡಿದ್ಲು. ಡಾಕ್ಟರ್‌ ಹತ್ರ ಹೋಗ್ಬಂದ್ವಿ. ಆಸಿಡಿಟಿಗೆ ಮೆಡಿಸಿನ್‌ ಕೊಟ್ರು. ಬರ್ತಾ ಬರ್ತಾ ಊಟ-ತಿಂಡಿ ಕಡಿಮೆ ಮಾಡಿದ್ಲು.  ಈ ಪ್ರಾಬ್ಲಮ್‌ ಜಾಸ್ತಿಯಾಗ್ತಾ ಇದ್ದಂಗೆ, ನಮ್ಮ ಫ್ಯಾಮಿಲಿ ಡಾಕ್ಟರ್‌ ಎಮ್‌.ಆರ್‌.ಐ ಮಾಡ್ಸೋಣ ಅಂದ್ರು, ಆಗ್ಲೇ ಗೊತ್ತಾಗಿದ್ದು ಅಮ್ಮನ ಜಠರದೊಳಗೆ ಗಡ್ಡೆಯಾಗಿದೆ ಅಂತ. ಬಯಾಪ್ಸಿ ರಿಪೋರ್ಟ್‌ ಬಂದಿದ್ದೇ ನಾವೆಲ್ಲ ಶಾಕ್‌ ಆಗಿಹೋದ್ವಿ. ಅಮ್ಮನಿಗಾಗಿದ್ದು ಕ್ಯಾನ್ಸರ್‌ ಅನ್ನೋದು ಖಚಿತವಾಗಿಹೋಗಿತ್ತು”   ಇಷ್ಟು ಹೇಳಿ ಉಕ್ಕುತ್ತಿದ್ದ ದುಃಖವನ್ನು ಒತ್ತಿಹಿಡಿದು ಕುಳಿತಲ್ಲಿಂದ ಎದ್ದು ಹೋದ. 

“ಈತನ ಅಮ್ಮ ಮಕ್ಕಳನ್ನು ತುಂಬು ಪ್ರೀತಿಯಿಂದ ಬೆಳೆಸಿದ್ದಳು ಅನ್ಸುತ್ತೆ. ನಾನೂ ತಂದೆಯನ್ನು ಕಳೆದುಕೊಂಡವಳು. ಈತನ ಅಮ್ಮ ತೀರಿ ಹೋದಾಗಲೇ ನನ್ನ ತಂದೆಯೂ ಹೋಗಿದ್ದಾರೆ.  ಆದರೂ, ನಾನೇಕೆ ಅವನಷ್ಟು ಭಾವುಕಳಾಗಿಲ್ಲ..?”  ಅವಳು ತನ್ನೊಳಗೇ ಯೋಚಿಸತೊಡಗಿದಳು.

 ಅಷ್ಟರಲ್ಲಿ ಆತ ಮರಳಿ ಬಂದು ಮತ್ತದೇ ಜಾಗದಲ್ಲಿ ಕುಳಿತ. ಮುಖ ಪೂರ್ತಿ ಒದ್ದೆಯಾಗಿತ್ತು. ಅತ್ತು ಮುಖ ತೊಳೆದುಕೊಂಡು ಬಂದಿದ್ದಾನೆ ಅನ್ನೋದು ಅವಳಿಗೂ ಅರ್ಥವಾಯ್ತು.

“ಮೇಡಮ್‌ ಅಷ್ಟು ಹೊತ್ತಿನಿಂದ ನಾನೊಬ್ಬನೇ ಮಾತನಾಡುತ್ತಿದ್ದೇನೆ. ನೀವೂ ಮಾತಾಡಿ. ನೀವೂ ವಾರಣಾಸಿಗೆ ಹೋಗಿದ್ದು ಕೂಡ, ಅಪ್ಪನ ಕ್ರಿಯಾ ಕರ್ಮ ಮಾಡೋಕೆ ಅಂದ್ರಿ ಅಲ್ವಾ? ನಿಮ್ಮ ತಂದೆಯವರಿಗೆ ಏನಾಗಿತ್ತು ಮೇಡಮ್‌” ಆತ ಕೇಳಿದ.  “ನಿಮ್ಮ ತಾಯಿಗಾದ ರೋಗವೇ ಸರ್‌, ನನ್ನ ತಂದೆಗೂ ಆಗಿದ್ದು” ಅಂದಳು ಬೇಸರದಿಂದ.  “ಅಯ್ಯೋ ಹೌದಾ? ಇತ್ತೀಚೆಗೆ ಎಲ್ಲಿ ನೋಡಿದರೂ ಇದೇ ರೋಗ ಮೇಡಮ್‌!  ಯಾವ ಕ್ಯಾನ್ಸರ್‌? ಯಾವಾಗ ಗೊತ್ತಾಯ್ತು ನಿಮಗೆ ?” ಸ್ವಲ್ಪ ಕುತೂಹಲ ತೋರಿಸಿದ.  “ ಹಂ. ಇವರಿಗಾಗಿದ್ದು ಶ್ವಾಸಕೋಶದ ಕ್ಯಾನ್ಸರ್‌.  ನಾಲ್ಕನೇ ಹಂತದಲ್ಲಿದ್ದಾಗ ನಮಗೆಲ್ಲ ಗೊತ್ತಾಗಿದ್ದು. ಬೆಂಗಳೂರಲ್ಲೇ ತೋರಿಸಿದ್ವಿ.

ಕ್ಯಾನ್ಸರ್‌ ನಾಲ್ಕನೇ ಸ್ಟೇಜ್‌ನಲ್ಲಿದ್ದಿದ್ರಿಂದ,ಅಲ್ಲದೇ ವಯಸ್ಸು ಕೂಡ ೭೫ ವರ್ಷ ಆಗಿದ್ರಿಂದ  ಕೀಮೋ ಥೆರಪಿ ಮಾಡಿದ್ರೂ ಪ್ರಯೋಜನ ಇಲ್ಲ ಅಂದ್ರು ಡಾಕ್ಟರ್ಸ್‌.  ಹೀಗಾಗಿ ಅವರಿಗೆ ಕೀಮೋ ಕೊಡ್ಸಿಲ್ಲ.  ರೇಡಿಯೇಶನ್‌ ಥೆರಪಿ ಕೊಡ್ಸಿದ್ವಿ. ಅದನ್ನೂ ಅವರ ಶರೀರ ತಡ್ಕೊಳಲ್ಲ ಅಂದ್ಬುಟ್ರು ಡಾಕ್ಟರ್‌. ಹೀಗಾಗಿ ಅದನ್ನೂ ಸ್ಟಾಪ್‌ ಮಾಡಿದ್ವಿ.  ಅವರಿಗೆ ಕ್ಯಾನ್ಸರ್‌ ಇದೆ ಅಂತ ಗೊತ್ತಾಗಿ ಎರಡೇ ಎರಡು ತಿಂಗಳಲ್ಲಿ ಹೋಗಿಬಿಟ್ರು. “  ಸಮಾಧಾನದಲ್ಲೇ ಹೇಳಿದಳು ಅವಳು.   

“ನಿಮ್ಮ ಅಮ್ಮ ಎಲ್ಲಿದ್ದಾರೆ? ಅವರು ಹೇಗಿದ್ದಾರೆ?” ಕೇಳಿದ.  ಚಿಕ್ಕಂದಿನಲ್ಲಿಯೇ ಅಪ್ಪನನ್ನ ಕಳೆದುಕೊಂಡು ಅಮ್ಮನ ಮಡಿಲಿನಲ್ಲಿ ಬೆಳೆದ ಆತನಲ್ಲಿ ಅಂತಃಕರಣ ಹೆಚ್ಚು ಅಂದುಕೊಂಡಳು.  “ಇಲ್ಲ ಸರ್‌, ಅಮ್ಮ ಈಗಿಲ್ಲ. ಅವರು ತೀರಿಹೋಗಿ ಹತ್ತು ವರ್ಷಗಳೇ ಆಗಿಹೋದವು. ಅಮ್ಮ ಹೋದಾಗಿನಿಂದ ಅಪ್ಪ ಸಂಪೂರ್ಣ ಒಂಟಿಯಾದ್ರು. ಮೊದಲಿನಿಂದಲೂ ನಮ್ಮೊಂದಿಗಿನ ಅವರ ಒಡನಾಟ ಅಷ್ಟಕ್ಕಷ್ಟೆ. ಅಮ್ಮ ಹೋದಮೇಲೂ ಕೂಡ ಅಪ್ಪ ನಮ್ಮೊಂದಿಗೆ ಬೆರೆಯಲೇ ಇಲ್ಲ.” ಎಂದು ಹೇಳಿ ಒಮ್ಮೆ ಸುಮ್ಮನಾದಳು. 

ಅಪ್ಪನಿದ್ದೂ ಅಪ್ಪನ ಪ್ರೀತಿ ಕಾಣದ ಜೀವ ಇದು ಎಂಬ ಸೂಕ್ಷ್ಮ ಅವಳ ಮಾತಿನಲ್ಲೇ ಅರ್ಥವಾಯ್ತು ಅವನಿಗೆ.  ಆತ ಏನೂ ಮಾತನಾಡಲಿಲ್ಲ. ಇವಳಿಗೆ ಅಪ್ಪನ ನೆನಪು, ಅವನಿಗೆ ಅಮ್ಮನ ನೆನಪು, ಮಧ್ಯೆ ಕವಿದ ಆ ಶಾಂತಿ. ಇಬ್ಬರೂ ಕೂತಲ್ಲೇ ಕಣ್ಣುಮುಚ್ಚಿದ್ದರು.    

ವಾರಣಾಸಿಯಿಂದ ಹೊರಟಿದ್ದ ಆ ಟ್ರೇನ್‌, ಗಾಳಿಯನ್ನು ಸೀಳಿಕೊಂಡು ಮುಂದೆ ಸಾಗುತ್ತಲೇ ಇತ್ತು. ಕೂತಲ್ಲೇ ನಿದ್ದೆ ಹೋಗಿದ್ದ ಇಬ್ಬರಿಗೂ ಅಜಮಾಸು ಒಂದು ಗಂಟೆಯ ನಂತರ ಎಚ್ಚರವಾಯ್ತು.  ಮಧ್ಯಾನ್ನದ ಸೂರ್ಯನ ಬಿಸಿಲು, ಬೋಗಿಯೊಳಗೆ ಶಕೆ ಹುಟ್ಟಿಸಿತ್ತು. ಅಕ್ಕಪಕ್ಕದ ಜನರೆಲ್ಲ ಊಟ ಆರಂಭಿಸಿದ್ದರಿಂದಲೋ ಏನೋ ಇವರಿಗೂ ಊಟ ಮಾಡುವ ಆಲೋಚನೆ ಬಂತು.  ಈ ಬಾರಿ ತಾನೇ ದುಡ್ಡು ಕೊಡುತ್ತೇನೆಂದು ಹೇಳಿ ಆತನೇ ಊಟ ಕೊಂಡ.  ಇಬ್ಬರೂ ಊಟ ಶುರುಮಾಡಿದರು.“ಮೇಡಮ್‌, ನೀವು ನಿಮ್ಮ ತಂದೆಯ ವಿಷಯ ಅಲ್ಲಿಗೇ ಬಿಟ್ಟುಬಿಟ್ಟರಲ್ಲ, ಮುಂದೆ ಹೇಳಿ”   ಆತ ಕೇಳಿದ್ದಕ್ಕೆ ನಸು ನಕ್ಕು ಮುಂದುವರೆಸಿದಳು.

 “ ನನ್ನ ತಂದೆ ಒಳ್ಳೆಯವರೇ. ಪೊಲೀಸ್‌ ಡಿಪಾರ್ಟ್‌ಮೆಂಟ್‌ನಲ್ಲಿ ಕೆಲಸ ಮಾಡಿದ್ದರಿಂದಲೋ ಏನೋ, ಮನೆಯಲ್ಲೂ ಅಷ್ಟೇ ಸ್ಟ್ರಿಕ್ಟ್‌. ಚಿಕ್ಕಂದಿನಲ್ಲಿ ಅಪ್ಪ ಅಂದರೆ ಎಲ್ಲಿಲ್ಲದ ಭಯ ನಮಗೆ. ನಮ್ಮೊಂದಿಗೆ ಅಂಥ ಒಡನಾಟವನ್ನೂ ಅಪ್ಪ ಇಟ್ಟುಕೊಂಡಿರಲಿಲ್ಲ. ನಮಗೂ ಹಾಗೂ ನಮ್ಮಪ್ಪನ ನಡುವೆ ಸೇತುವಾಗಿದ್ದು ಆಗಿದ್ದು ಅಮ್ಮ. ಅಮ್ಮನ ಮಧ್ಯಸ್ತಿಕೆಯಲ್ಲಿಯೇ ನಮ್ಮ ಬಾಲ್ಯ, ಶಿಕ್ಷಣ, ಯೌವನ ಎಲ್ಲವೂ ಕಳೆದಿತ್ತು. ವಿದ್ಯಾಭ್ಯಾಸದಿಂದ ಹಿಡಿದು ಮದ್ವೆ ತನಕ  ಜವಾಬ್ದಾರಿ ಅಪ್ಪನದೇ ಆಗಿದ್ರೂ, ಅದೆಲ್ಲ ತನ್ನ ಕರ್ತವ್ಯ ಅನ್ನೋ ರೀತಿಯಲ್ಲಿ ಮಾಡಿ ಮುಗಿಸಿದ್ದರು. ಅಲ್ಲೆಲ್ಲೂ ನಾವು ಪ್ರೀತಿಯ ಪಸೆಯನ್ನೇ ಕಾಣಲಿಲ್ಲ.  ಸ್ವಲ್ಪ ಪ್ರೀತಿ, ಮಮತೆ, ಕಾಳಜಿ, ನನ್ನ ಮಕ್ಕಳು ಅನ್ನೋ ಹೆಮ್ಮೆ, ಇಂಥವುಗಳನ್ನು ನನ್ನ ಅಪ್ಪನಲ್ಲಿ ನಾನು ಕೊನೆ ತನಕ ಕಾಣಲೇ ಇಲ್ಲ.  ಅಮ್ಮ ಹೋದಮೇಲೆ ಮಾನಸಿಕವಾಗಿ ನಮ್ಮಿಂದ ದೂರವೇ ಉಳಿದುಬಿಟ್ರು.  ದೇಹದಲ್ಲಿ ಅದೇನೇನು ಕಷ್ಟವಾಗ್ತಿತ್ತೋ, ನನಗಾಗಲೀ ನನ್ನ ಅಣ್ಣಂಗಾಗಲೀ ಅವರು ಹೇಳಿಯೇ ಇಲ್ಲ. ಅಪ್ಪನ ಸ್ನೇಹಿತರೊಬ್ಬರು ಫೋನ್‌ ಮಾಡಿ ತಿಳಿಸಿದ ಮೇಲೆ ಗೊತ್ತಾಗಿದ್ದು,  ಅಪ್ಪನಿಗೆ ಕ್ಯಾನ್ಸರ್‌ ಆಗಿದೆ ಅಂತ.”   ಆಕೆ ತನ್ನಪ್ಪನ ಕಥೆಯನ್ನು ಹೇಳುವ ಓಘದಲ್ಲಿದ್ದಾಗಲೇ, ಬ್ಯಾಗ್‌ ಒಳಗಿದ್ದ ಫೋನ್‌ ವೈಬ್ರೇಟ್‌ ಆಗಿ ಮಾತಿನ ನಿರಂತರತೆಗೆ ಬ್ರೇಕ್‌ ಬಿತ್ತು. “ಹಲೋ ಅಣ್ಣಾ, ಡಿಡ್‌ ಯು ರೀಚ್‌ ಸೇಫ್‌ಲೀ?  ಓಕೆ. ಹಾ ಅಣ್ಣಾ ನಾನೀಗೆ ಡೆಲ್ಲಿ ಟ್ರೈನ್‌ನಲ್ಲಿ ಇದ್ದೀನಿ.  ಹೌದಣ್ಣ ಡೆಲ್ಲಿ ಫ್ಲೈಟ್‌ನಲ್ಲಿ ಸೀಟ್‌ ಸಿಕ್ಕಿಲ್ಲ ಹಾಗಾಗಿ...”  ಈ ಅಣ್ಣ-ತಂಗಿ ಮಾತುಕತೆಯಿಂದ ಈತನಿಗೆ ತಿಳಿದಿದ್ದೇನೆಂದರೆ, ಅಣ್ಣ ಬೇರೆ ದೇಶದಲ್ಲೆಲ್ಲೋ ಇರುವವನು. ಅಪ್ಪನ ಕಾರ್ಯಕ್ಕೆಂದೇ ವಾರಾಣಾಸಿಗೆ ಬಂದು, ಅಂದೇ ಹೊರಟಿದ್ದಾನೆ. ಅಣ್ಣ – ಇಬ್ಬರೂ ಶ್ರದ್ಧಾ ಭಕ್ತಿಯಿಂದ ಕ್ರಿಯಾ ಕರ್ಮ ಮುಗಿಸಿದ್ದಾರೆ ಎಂದು. ನನ್ನ ಹಾಗೆ ಅತೀ ಭಾವುಕಳಲ್ಲದ ಅವಳು ಸಹಜವಾಗಿಯೇ ಬಂದದ್ದನ್ನು ಬಂದ ಹಾಗೆ ಸ್ವೀಕರಿಸಿದ್ದಾಳೆ ಅಂತೆನಿಸಿತು ಆತನಿಗೆ.

ಫೋನ್‌ನಲ್ಲಿ ಮಾತನಾಡಿ ಕೆಳಗಿಟ್ಟಿದ್ದೇ, ಮಾತು ಮುಂದುವರೆಸಿದಳು. “ಕ್ಯಾನ್ಸರ್‌ ಫೋರ್ತ್‌ ಸ್ಟೇಜ್‌ ಅಂತ ತಿಳಿದ ಮೇಲೆ, ನಾನು ಅಪ್ಪನನ್ನು ನಮ್ಮ ಮನೆಗೆ ಕರ್ಕೊಂಡ್‌ ಬಂದೆ. ಅಣ್ಣ ಸಿಂಗಾಪುರದಿಂದ ಓಡಿಬಂದ. ನನ್ನ ಗಂಡ ಮತ್ತು ಅಣ್ಣ ಆಸ್ಪತ್ರೆ ಜವಾಬ್ದಾರಿ ವಹಿಸಿಕೊಂಡ್ರು. ಚೆಕ್‌ಅಪ್‌ ಎಲ್ಲ ನಡೆದು, ರೇಡಿಯೇಶನ್‌ ಥೆರಪಿ ಮುಗಿಸಿ ಮನೆಗೆ ಬಂದಮೇಲೆ ಅಪ್ಪ ಒಂದು ಪ್ರಶ್ನೆ ಕೇಳಿದರು. “ನೀವಿಬ್ರೂ ದುಡ್ಡು ಖರ್ಚಾಗುತ್ತೆ ಅಂತ ನನಗೆ ಕೀಮೋಥೆರಪಿ ಕೊಡ್ಸಿಲ್ಲ ಅಲ್ವಾ..? ನಾನು ಅಷ್ಟೊಂದು ಕ್ಷುಲ್ಲಕ ಆಗೋದ್ನಾ ನಿಮಗೆ..?” ಅಂತ.  ನಾನು ನನ್ನ ಅಣ್ಣ ಇಬ್ಬರೂ ಅವರಿಗೆ ಅರ್ಥ ಮಾಡಿಸಲು ಹೆಣಗಾಡಿದ್ವಿ. ಆವತ್ತು ನಮ್ಮ ಮೇಲೆ ಕೂಗಾಡಿದರು, ರೇಗಾಡಿದರು. ಮರುದಿನದಿಂದ ಸುಮ್ಮನಾಗಿಬಿಟ್ಟರು. ತೀರಿಹೋಗುವವರೆಗೂ ಮಕ್ಕಳು ತನಗಾಗಿ ಏನೂ ಮಾಡಿಲ್ಲ ಎಂಬ ಅಸಮಧಾನವಿತ್ತು ಅವರಲ್ಲಿ. ಆದರೆ ನಾವು ಮಾತ್ರ ದೇವರು ಮೆಚ್ಚುವಂತೆ ಸೇವೆ ಮಾಡಿದ್ವಿ. ಅವರು ಇರೋತನಕ ಪ್ರೀತಿಯಿಂದ ನೋಡಿಕೊಂಡ್ವಿ. ಪ್ರೀತಿಯಿಂದ್ಲೇ ಕಳಿಸಿಕೊಟ್ವಿ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂಬ ಉದ್ದೇಶದಿಂದ ವಾರಣಾಸಿಯಲ್ಲೇ ಕ್ರಿಯಾಕರ್ಮ ಮುಗಿಸಿದ್ವಿ. ಅಣ್ಣ ನಿನ್ನೆನೇ ವಾಪಾಸ್‌ ಹೋದ.  ನಾನು ನಿಮ್ಮ ಹಾಗೇ, ಡೆಲ್ಲಿಗೆ ಹೋಗಿ ಅಲ್ಲಿಂದ ಬೆಂಗಳೂರಿಗೆ ವಾಪಾಸ್‌ ಹೋಗ್ತಿದ್ದೀನಿ. ”  ಎಂದಷ್ಟೇ ಹೇಳಿ, ಎದ್ದು ಹೋಗಿ, ಬಾಗಿಲಿನ ಹತ್ತಿರ ನಿಂತು. ತನ್ನನ್ನು ತಾನು ಬೀಸುವ ಗಾಳಿಗೆ ಒಡ್ಡಿದಳು. ಆಲೋಚನೆಗಳು ಅಲೆ ಅಲೆಗಳಂತೆ ಅಪ್ಪಳಿಸುತ್ತಿದ್ದವು.   

“ಬಾಲ್ಯದಲ್ಲಾಗಲೀ, ಯೌವನದಲ್ಲಾಗಲೀ, ಮದುವೆಯಾದ ಮೇಲಾಗಲೀ, ನಮ್ಮ ಮೇಲಿನ ಅಪ್ಪನ ಭಾವನೆ ಬದಲಾಗಲೇ ಇಲ್ಲವಲ್ಲ. ಇಡೀ ಜೀವಮಾನ ಪರ್ಯಂತ ನಮ್ಮೊಂದಿಗೆ ಅವರು ಅಂತರ ಕಾಯ್ದುಕೊಂಡಿದ್ದಾದರೂ ಯಾಕೆ? ಎಲ್ಲ ಅಪ್ಪಂದಿರ ಹಾಗೆ, ಮನಬಿಚ್ಚಿ ಮಾತನಾಡೋದು, ಹರಟೆ ಹೊಡೆಯೋದು, ನಮ್ಮೊಂದಿಗೆ ಸುತ್ತೋದು, ನಾವು ಕೇಳಿದ್ದನ್ನು ಕೊಡಿಸೋದು, ಕೊನೆಗೆ ತಮ್ಮದೇ ಮೊಮ್ಮಕ್ಕಳ ಜತೆಗೂ ಒಡನಾಡದೇ, ಬಂಡೆಕಲ್ಲಿನಂತೆ ಇದ್ದಿದ್ದೇಕೆ ? ಸಾಯುವ ಕೊನೆ ಗಳಿಗೆಯಲ್ಲಿಯೂ ನಮ್ಮೊಂದಿಗೆ ಮನಸ್ಥಾಪ ಮಾಡಿಕೊಂಡು ಏನು ಸಾಧಿಸಿದರು ಅವರು? ಅಪ್ಪ ನಮ್ಮೊಂದಿಗೆ ಹೀಗಿದ್ದಾರೆ ಅನ್ನೋ ಕಾರಣಕ್ಕೆ ನಾವು ಅವರಿಗೆ ಟ್ರೀಟ್‌ಮೆಂಟ್‌ ಕೊಡಿಸಿಲ್ವಾ..?  ಛೇ ಛೇ.. ಅಂಥದ್ದೇನೂ ಇಲ್ಲ.  ಅವರ ದೇಹ ಕೀಮೋ ಥೆರಪಿಯನ್ನು ಸಹಿಸಿಕೊಳ್ಳಲ್ಲ ಅಂತ ಡಾಕ್ಟರ್ ಹೇಳಿದ್ದಕ್ಕೆ ತಾನೇ..? ಯಾವ ಟ್ರೀಟ್‌ಮೆಂಟೂ ಬೇಡ. ಇರೋತನ ನಮ್ಮ ಮನೆಯಲ್ಲೇ ಇರಲಿ ಅಂತ ಮನೆಗೆ ಕರೆತಂದಿದ್ದು..? “ ಅವಳ ಮನಸ್ಸು ಪ್ರಶ್ನೆಗಳ ರಾಶಿಗಳಿಗೆ ಮತ್ತಷ್ಟು ಪ್ರಶ್ನೆಗಳನ್ನೇ ಪೇರಿಸುತ್ತಿತ್ತು.  ಆಲೋಚನೆಗಳ ಉಬ್ಬರ ಇಳಿದ ಮೇಲೆ ಮರಳಿ ಬಂದು ಸೀಟಿನಲ್ಲಿ ಕುಳಿತಳು ಆಕೆ.

ಇವಳು ಬರುವುದನ್ನೇ ಕಾಯುತ್ತಿದ್ದ ಆತ ಹೇಳಿದ “ಮೇಡಮ್‌, ನಿಮ್ಮದೊಂದು ಥರ ಯಾತನೆಯಾದರೆ ನಮ್ಮದು ಇನ್ನೊಂದು ಥರ ಯಾತನೆ”  ಅಂದ. ತಾನು ಎದ್ದುಹೋದಾಗ ಈತನೂ ಜಿಜ್ಞಾಸೆಯಲ್ಲಿ ಮುಳುಗಿದ್ದ ಅಂತೆನಿಸಿತು ಅವಳಿಗೆ.  ಅದೇನೆಂಬ ಕುತೂಹಲದಿಂದ ಆತನನ್ನು ಪ್ರಶ್ನಾರ್ಥಕವಾಗಿ ನೋಡಿದಳು  “ ನನ್ನ ದೇವತೆಯಂಥ ಅಮ್ಮ ಅವಳ ಸಾವನ್ನ ಸಂತೋಷವಾಗಿ ಸ್ವೀಕರಿಸಲು ಸಿದ್ಧಳಿದ್ದಳು. ಕ್ಯಾನ್ಸರ್‌ ಮೂರನೇ ಹಂತ ಎಂದು ತಿಳಿದ ತಕ್ಷಣ ಅವಳು ನನ್ನ ಬಳಿ ಹೇಳಿದ್ಲು. “ಮಗಾ, ನನಗೆ ಯಾವ ಟ್ರೀಟ್‌ಮೆಂಟೂ ಬೇಡ. ಇಷ್ಟು ವರ್ಷ ಬದುಕಿದ್ದೇನೆ. ಬದುಕು ನನಗೆ ಎಲ್ಲವನ್ನೂ ಕೊಟ್ಟಿದೆ.  ಈಗ ಬರುತ್ತಿರುವ ಸಾವನ್ನೂ ಕೂಡ ಖುಷಿಯಿಂದ ಸ್ವೀಕರಿಸ್ತೀನಿ. ನನ್ನ ಖುಷಿಯಿಂದ ಕಳಿಸಿಕೊಡಿ ಕಂದಾ ”  ಅಂತ.  ಆದರೆ, ನಾವು ಅವಳ ಮಾತನ್ನ ಕೇಳಲೇ ಇಲ್ಲ. ಇದ್ದ ಬಿದ್ದ ಸೇವಿಂಗ್ಸ್‌ ಎಲ್ಲಾ ತೆಗೆದು, ಮತ್ತೊಂದಷ್ಟು ಸಾಲ ಮಾಡಿ, ಅವಳಿಗೆ ಆಪರೇಶನ್‌ ಮಾಡಿಸಿ ಕ್ಯಾನ್ಸರ್‌ ಟ್ಯೂಮರ್‌ನ್ನ ತೆಗೆಸಿದ್ವಿ. ಆಪರೇಶನ್‌ ಆದಮೇಲೆ ಕೀಮೋ ಮೇಲೆ ಕೀಮೋ ಥೆರಪಿ ಕೊಡಿಸಿದ್ವಿ. ಪ್ರತಿಯೊಂದು ಕೀಮೋ ನಡೆದಾಗಲೂ ಹಲ್ಲು ಕಚ್ಚಿ ಸಹಿಸಿಕೊಂಡ್ಲು. ಅಮ್ಮನನ್ನು ಉಳಿಸಿಕೊಳ್ಳಲೇ ಬೇಕು ಎಂಬ ಜಿದ್ದಿಗೆ ಬಿದ್ದವರ ಹಾಗೆ, ಆಸ್ಪತ್ರೆಯಿಂದ ಆಸ್ಪತ್ರೆಗೆ ಅವಳನ್ನ ಅಲೆಸಿದ್ವಿ.  ಅವಳಿಗಾಗಿ ೨೫ ಲಕ್ಷಕ್ಕೂ ಜಾಸ್ತಿ ಖರ್ಚು ಮಾಡಿದ್ವಿ. ದುಡ್ಡು ನೀರಿನ ಹಾಗೆ ಹರಿದುಹೋಯ್ತು.  ಆದ್ರೆ, ಅಮ್ಮನ ಆರೋಗ್ಯ ಮಾತ್ರ ಸರಿಹೋಗಲಿಲ್ಲ. ಹಾಸಿಗೆ ಹಿಡಿದು ಒಂದೊಂದು ದಿನವೂ ನರಳಿ ಪ್ರಾಣಬಿಟ್ಟಳು.”  ಈಗ ಆತ ಮತ್ತಷ್ಟು ಭಾವುಕನಾಗುತ್ತಿದ್ದಂತೆ ಕಾಣಿಸಿತು ಅವಳಿಗೆ.  ಆತ ಮಾತನಾಡುತ್ತಲೇ ಇದ್ದ.

 ನನಗೆ ಯಾವ ಚಿಕಿತ್ಸೆಯೂ ಬೇಡ, ಕೀಮೋ, ರೇಡಿಯೇಶನ್‌ ಎಂಬ ನರಕವೂ ಬೇಡ.  ನಗನಗ್ತಾ ನನ್ನ ಕಳಿಸಿಕೊಡಿ ಅಂತ ಕೋರಿಕೊಳ್ತಿದ್ದ ನನ್ನ ಅಮ್ಮಂಗೆ ಕೊಡಬಾರದ ಕಷ್ಟ ಕೊಟ್ಟು ಕಳಿಸಿಕೊಟ್ವಿ ಎಂಬ ನೋವು ನನಗೆ ಚುಚ್ತಾ ಇದೆ. ಯಾವ ಸಾಧನೆಗಾಗಿ ನಾನವಳಿಗೆ ಹಿಂಸೆ ಕೊಟ್ಟೆ ಅಂತೆನಿಸ್ತಿದೆ” ಬಿಕ್ಕಳಿಸಿ ಅಳತೊಡಗಿದ. 

ಆತ ಅಳುವುದನ್ನು ನೋಡಿ ಈಕೆಗೆ ಏನು ಮಾಡಬೇಕೆಂಬುದೇ ತೋಚದೇ, ಬ್ಯಾಗ್‌ನೊಳಗೆ ಕೈಹಾಕಿ ನೀರಿನ ಬಾಟಲಿಯನ್ನು ಹುಡುಕುತ್ತಿದ್ದಳು. “ಸರ್‌ ಸಮಾಧಾನ ಮಾಡ್ಕೊಳಿ, ಟೇಕ್‌ ಇಟ್‌ ಈಸಿ”  ಅಂತ ಬಾರಿ ಬಾರಿ ಹೇಳಿದಳು.  ಇವರಿಬ್ಬರ ಮಾತನ್ನು ಅದೆಷ್ಟೋ ಹೊತ್ತಿನಿಂದ ಅಲ್ಲೇ ಹತ್ತಿರದಲ್ಲಿ ಕುಳಿತು ಸುಮ್ಮನೆ ಇವರ ಮಾತುಗಳನ್ನು ಕೇಳಿಸಿಕೊಳ್ಳುತ್ತಿದ್ದ ನಾನು ಈಗ ಅವರ ಬಳಿ ಹೋದೆ.  ತಲೆ ಹಿಡಿದುಕೊಂಡು ಬಿಕ್ಕಳಿಸುತ್ತಿದ್ದ ಆ ವ್ಯಕ್ತಿಯನ್ನು ಹಿಡಿದು ಕೂರಿಸಿ, ನನ್ನ ಬಳಿ ಇದ್ದ ನೀರನ್ನು ಕುಡಿಸಿ ಸಮಾಧಾನ ಮಾಡಿದೆ.   

“ಅಳಬೇಡಿ ಸರ್‌, ಹೋದವರು ಹೊರಟು ಹೋದರು. ನೀವು ನಿಮ್ಮ ಕೈಲಾದಷ್ಟು ಮಟ್ಟಿಗೆ ಪ್ರಯತ್ಸಿಸಿ ನಿಮ್ಮಮ್ಮನನ್ನು ಪ್ರೀತಿಯಿಂದ ನೋಡ್ಕೊಂಡಿದ್ದೀರಾ. ನಿಮ್ಮ ಕಾಳಜಿ, ಪ್ರೀತಿ ನೋಡಿ ಅವರ ಆತ್ಮ ಖುಷಿಪಟ್ಟಿರತ್ತೆ. ಈಗ ನೀವು ಹೀಗೆ ಗೋಳಾಡೋದ್ರಿಂದ ಅವರಿಗೆ ಖುಷಿಯಾಗತ್ತಾ? ನೀವೇ ಹೇಳಿ.” ಎಂದೆ.  ಆತನಿಗೆ ಸ್ವಲ್ಪ ಸಮಾಧಾನವಾದಂತೆ ಅನ್ನಿಸಿತು.  ಇಷ್ಟೊತ್ತು, ಕನ್ನಡ ಬಂದರೂ ಸುಮ್ಮನೆ ಕುಳಿತು ಇವರಿಬ್ಬರ ಮಾತುಗಳನ್ನು ಆಲಿಸುತ್ತಿದ್ದ ನನ್ನನ್ನು ಅಚ್ಚರಿಯಿಂದ ಗಮನಿಸಿದಳು ಆಕೆ.  “ಮೇಡಮ್‌, ನೀವೂ ಅಷ್ಟೇ ಒಳ್ಳೆಯವರು. ಕ್ಯಾನ್ಸರ್‌ ನಾಲ್ಕನೇ ಹಂತದಲ್ಲಿರುವ ಅಪ್ಪನ ಜೀವ ಇರೋವರೆಗೂ ನೋಡ್ಕೊಂಡ್ರಿ. ಆ ಸ್ಟೇಜ್‌ಲ್ಲಿ ಯಾರೂ ಆಪರೇಶನ್‌ ಮಾಡಿಸೋದಿಲ್ಲ ಅನ್ಸುತ್ತೆ.  ವೃದ್ಧಾವಸ್ಥೆಯಲ್ಲಿ ಆ ಕಷ್ಟ ಅನುಭವಿಸುತ್ತಿದ್ದವರ ಮಾನಸಿಕ ಸ್ಥಿತಿ ಹೇಗಿರುತ್ತೋ ಗೊತ್ತಿಲ್ಲ ಅಲ್ವಾ ಮೇಡಮ್‌, ಹಿರಿಯರು ಒಂದು ಮಾತು ಬೈದ್ರೂ ಅದು ನಮಗೆ ಆಶೀರ್ವಾದವೇ ಆಗಿರತ್ತೆ ಅಂತಾರೆ. ನೀವೂ ಸಮಾಧಾನ ಮಾಡ್ಕೊಳ್ಳಿ” ಎಂದೆ.  ಆಕೆ ಸಣ್ಣ ನಗು ನಕ್ಕು ಮಮತೆಯಿಂದ ನನ್ನ ನೋಡಿದಳು.   

ಅಲ್ಲೇ ಅವರೊಂದಿಗೆ ಕುಳಿತು ನಾನೇ ನನ್ನ ಪರಿಚಯ ಮಾಡಿಕೊಂಡೆ, “ನಾನು ಕೂಡ ಕನ್ನಡದ ಹುಡುಗ. ವಾರಾಣಾಸಿಯಲ್ಲಿ ವೇದಾಭ್ಯಾಸ ಮಾಡುತ್ತಿದ್ದೇನೆ. ನಮ್ಮ ಮನೆಯಿಂದಲೂ ಇವತ್ತು ಬೆಳಗ್ಗೆ ಅರ್ಜೆಂಟ್‌ ಊರಿಗೆ ಬಾ ಅಂತ ಕಾಲ್‌ ಬಂದಿದೆ ಮೇಡಮ್‌.  ಅರ್ಜೆಂಟಾಗಿ ನಾನೂ ಕೂಡ ಡೆಲ್ಲಿಯಿಂದ ಬೆಂಗಳೂರಿಗೆ ಫ್ಲೈ ಮಾಡತ್ತಿದ್ದೇನೆ.”  ಹೌದಾ ?ಅಂತ ತುರ್ತು ಏನಿದೆಯಂತೆ..? ಇಬ್ಬರೂ  ನನ್ನ ಕೇಳಿದರು.  ನಾನು ದೀರ್ಘ ಉಸಿರೆಳೆದುಕೊಂಡು ನಿಧಾನವಾಗಿ ಹೇಳಿದೆ. “ ನನ್ನ ಅಮ್ಮನ ಬಯಾಪ್ಸಿ ರಿಪೋರ್ಟ್‌ ಬಂದಿದೆಯಂತೆ.....”!

 ( ಲಹರಿ ತ್ರೈಮಾಸಿಕ ಪತ್ರಿಕೆಯ ದೀಪಾವಳಿ ವಿಶೇಷಾಂಕದಲ್ಲಿ ಪ್ರಕಟವಾದ ಕಥೆ )

-         ಅಮೃತಾ ಹೆಗಡೆ

“ಕ್ಯಾನ್ಸರ್‌”

  ಕಟ-ಕಟ ಕಟ-ಕಟ ಶಬ್ಧ ಲಯದಂತೆ ಕಿವಿಗೆ ಅಪ್ಪಳಿಸುತ್ತಾ ಅಪ್ಪಳಿಸುತ್ತಾ, ಕಣ್ಣು ಎಳೆದಂತಾಗಿ ನಿದ್ದೆಯ ಮಂಪರಿನಲ್ಲಿದ್ದಾಗಲೇ, ಮೇಲಿನ ಸೀಟ್‌ಮೇಲೆ ಇಟ್ಟಿದ್ದ ಬ್ಯಾಗ್‌ ಒಂದು...