ಎಷ್ಟು
ಸುಂದರ ಜೀವನ ಅದು? ಯಾವ ಒತ್ತಡ,ಬೇಸರ,ನಿರಾಸೆ,ದುಖಃಗಳಿಲ್ಲದ
ತಿಳಿ ಮನಸ್ಸಿನ ವಯಸ್ಸು ಅದು. ಆಟ ಆಡುತ್ತಾ,
ಅಕ್ಕೋರು
ಹೇಳಿಕೊಟ್ಟ ಹಾಡು ಹಾಡುತ್ತಾ ಕಳೆದ ನಮ್ಮ ಮತ್ತೀಹಳ್ಳಿ ಶಾಲೆಯ ದಿನಗಳು. ಹೌದು..ಸೀಮಾ, ನಮ್ಮ
ಬಾಲ್ಯ ನೆನಪಾಗುತ್ತಿದೆ ನನಗೆ. ಎಷ್ಟು ಚನ್ನಾಗಿತ್ತು ಅಲ್ವಾ?ಅಂದಿನ ವಯಸ್ಸು?
ನಮ್ಮ ಪರಿಚಯ ಯಾವಾಗ ಆಯ್ತು ಅಂತ ನೆನಪಿದೆಯಾ? ಇಲ್ಲ
ಕಣೇ.....ಸರಿಯಾಗಿ ನೆನಪಿಲ್ಲ. ಸುಮಾರು ನಾವು ಐದು ವರ್ಷದವರಿರುವಾಗಲೇ ಪರಿಚಯವಾಗಿರಬೇಕು. ಅಲ್ವಾ? ನಾವು
ಒಂದನೇ ತರಗತಿಯಿಂದ ಹತ್ತನೇ ತರಗತಿಯವರೆಗೆ ಒಟ್ಟಿಗೇ ಓದಿದವರು...ಆ ಹತ್ತುವರ್ಷದಲ್ಲಿ ನಾವೆಷ್ಟು
ಬಾರಿ ಜಗಳವಾಡಿರಬೇಕು? ಲೆಕ್ಕವೇ ಇಲ್ಲ.
ಜಗಳವಾಡಿದ ಘಂಟೆಯೊಳಗೆ ನಾನು ನೀನು ಮೊದಲಿನಂತೆಯೇ ಆಗ್ಬಿಡುತಿದ್ವಿ. ನೆನೆಸಿಕೊಂಡಾಗಲೆಲ್ಲ ನಗು
ಬರುತ್ತೆ. ನಮ್ಮ ಸಹಪಾಠಿಗಳು ಆತ್ರೇಯ,ಮಾರುತಿ,ಸಹನಾ ನೆನಪಿಗೆ ಬರ್ತಾರೆ. ಮಾರುತಿ ಹೇಳಿಕೊಟ್ಟ ಚುಕ್ಕಿ
ರಂಗೋಲೆ ಇನ್ನೂ ನೆನಪಿದೆ ನನಗೆ. ಮಾರುತಿ ತರುವ
ಹುಳಿ ಹಲಗೆ ಹಣ್ಣನ್ನು ಕದ್ದು ಮುಚ್ಚಿ ತಿಂದಿದ್ದು,
ನಾವೆಲ್ಲ
ಸೇರಿ ಬೆಳೆಸಿದ ಮಲ್ಲಿಗೆ ಗಿಡಗಳು. ತೆಂಗಿನ ಗಿಡಗಳು,
ವಿಶ-ಅಮೃತ
ಆಟ,ಕಷ್ಟಪಟ್ಟು ಬಾಯಿಪಾಠ ಮಾಡಿದ ಉಲ್ಟಾ ಮಗ್ಗಿ, ಎಲ್ಲಾ
ಒಂದೊಂದಾಗಿ ನಿನಪಾಗುತ್ತೆ.
ಸೀಮಾ....
ನೆನಪಿದೆಯಾ ನಿನಗೆ,ನಾಲ್ಕನೇ ತರಗತಿ
ಮುಗಿಸಿ ಐದನೇ ತರಗತಿಗೆ ದೂರದ ನಾಣಿಕಟ್ಟಾ ಶಾಲೆಗೆ ಹೋಗಲು ನಾವು ಎಷ್ಟು ಹೆದರಿದ್ವಿ ಅಲ್ವಾ?
ನಾಣಿಕಟ್ಟಾ
ಶಾಲೆಯಲ್ಲಿ ಹೊಡೆಯುತ್ತಾರಂತೆ,ಐದನೇ
ತರಗತಿಯಿಂದ ಕಷ್ಟದ ಪಾಠಗಳಿವೆಯಂತೆ, ಮೊದಲಿದ್ದ
ನಾಲ್ಕು ವಿಷಯಗಳ ಜೊತೆ ಇಂಗ್ಲೀಷ್,ಹಿಂದೀ
ಬೇರೇ....
ಅಲ್ಲಿರುವ
ನಿರ್ಮಲಾ ಅಕ್ಕೋರು ಬಯ್ಯುತ್ತಾರಂತೆ, ಹಾಗಂತೆ
ಹೀಗಂತೆ.... ಮೊದಲು ಹೋಗಿ ಆ ಶಾಲೆ ಸೇರಿದ್ದ ನಮ್ಮ ಮೇಲಿನ ತರಗತಿಯ ಕಾವ್ಯ,ಸುಜೀತ,ಸುನೀಲ,ಅಶೋಕ
ಪ್ರಭಾತ, ಲತಾ, ಮಾಲಿನಿ
ಇವರೆಲ್ಲರ ಅನುಭವ ಕೇಳಿ ಹೆದರುತ್ತಾ ಆ ಶಾಲೆಯ ಮೆಟ್ಟಿಲು ಹತ್ತಿದ್ದು...ಅಭ್ಭಾ....! ಎಂಥ
ಸಂದರ್ಭ ಅದು. ಆ ವಯಸ್ಸಿಗೆ,ಅದೇ ದೊಡ್ಡದು.
ಆ
ಶಾಲೆ ಸೇರಿದ ಮೇಲೆ ಅಲ್ಲಿ ಸಿಕ್ಕವರು ರಮ್ಯಾ,ಅಭಯ.
ಸೀಮಾ....ರಮ್ಯಾ ಸಿಕ್ಕಮೇಲೆ ನನಗಿಂತ ಅವಳೇ ಜಾಸ್ತಿ ಇಷ್ಟವಾಗಿಬಿಟ್ಟಿದ್ದಳು ನಿನಗೆ ಅಲ್ವಾ ? ಅದರ
ಬಗ್ಗೆ ತುಂಬಾ ನೋವಾಗಿತ್ತು ನಂಗೆ ಗೊತ್ತಾ?
ಅದರ
ಬಗ್ಗೆ ಜಗಳ ಕೂಡಾ ಆಡಿದ್ದೆ ನಾನು. ನೆನಪಿದೆಯಾ ನಿಂಗೆ?
ಆಮೇಲೆ
ಹಂಗಲ್ಲ ಕಣೇ....ಅಂತ ಸಮಾಧಾನ ಮಾಡಿದ್ಯಲ್ಲ
ನೀನು? ಚಾಲಾಕಿ
ಕಣೇ ನೀನು....ಇಬ್ಬರ ಜೊತೆನೂ ಡಬ್ಬಲ್ಗೆ ಮಾಡ್ತಿದ್ದೆ ಅಲ್ವಾ? ಅಲ್ಲಿಯ
ಮೂರು ವರ್ಷ ಹೇಗೆ ಕಳೆಯಿತೋ ಏನೋ...?ಏಳನೇ
ತರಗತಿಯಲ್ಲಿ ಬೀಳ್ಕೊಡುಗೆ ಸಮಾರಂಭ ಮಾಡಿಸಿಕೊಂಡು ಅಳುತ್ತಾ ಕೂತಿದ್ದು, ಆಮೇಲೆ
ನನ್ನ ಮುಖ ನೀನು ನಿನ್ನ ಮುಖ ನಾನು ನೋಡಿ ಹಹ್ಹಹ್ಹಾ ಎಂದಿದ್ದು.....
ಆಮೇಲೆ
ಪ್ರೌಢಶಾಲೆ. ಹೊಸ ಕುತೂಹಲ,ಕನಸು,ಹಲವು
ಪ್ರಶ್ನೆಗಳು ಹುಟ್ಟುವ ವಯಸ್ಸು ಅದು. ಸೀಮಾ...... ಆಗ ನಾವು ಎಷ್ಟೊಂದು ಮಾತಾಡ್ತಿದ್ವಿ ಅಲ್ವಾ? ಮಾತು
ಮಾತು ಬರೀ ಮಾತು. ಏನೇನೋ ಮಾತಾಡಿಕೊಂಡು ಬಿದ್ದು ಬಿದ್ದು ನಕ್ಕಿದ್ದು,ನೆನಪಾಗುತ್ತೆ
ಕಣೇ.. ಹತ್ತನೇ ತರಗತಿಯ ಪರಿಕ್ಷೆ ಸಮೀಪಿಸುತ್ತಿರುವ ವೇಳೆ ಓದುವಾಗ ಕೂಡ ನಾವು ನಗುವುದನ್ನು
ಬಿಟ್ಟಿರಲಿಲ್ಲ. ಯಾಕಷ್ಟು ನಗುತ್ತಿದ್ದೆವು ನಾವು?
ಅಂಥ
ನಗು ಈಗ ಸಾಧ್ಯವೇ ಇಲ್ಲ ಕಣೇ.......
ನಂತರದ
ದಿನಗಳಲ್ಲಿ ನಾವು ಆರಿಸಿಕೊಂಡ ವಿಷಯಗಳು,
ನಮ್ಮ
ಕಾಲೇಜುಗಳು ಬೇರೆ ಬೇರೆಯದಾಗಿ ಹೋಯ್ತು. ಆದರೂ ನಮ್ಮ ಒಡನಾಟ ಹಾಗೇ ಇತ್ತು. ಈಗಲೂ ಹಾಗೇ
ಇದೆ.ಅಲ್ವಾ?...ಸೀಮಾ....ನೀನು
ನನ್ನ ಬಾಲ್ಯದ ಗೆಳತಿ. ನಿನ್ನ ನಂತರ ಎಷ್ಟೊಂದು ಜನ ಗೆಳೆಯ ಗೆಳತಿಯರು ಸಿಕ್ಕರು ನಂಗೆ.....ಆದರೆ
ನಿನ್ನ ಸ್ನೇಹಕ್ಕೆ ನಿನ್ನ ಸ್ನೇಹವೇ ಸಾಟಿ ಕಣೇ.... ಸೀಮಾ... ನಾವೆಲ್ಲ ಬೆಳೆಯುತ್ತಾ
ಬೆಳೆಯುತ್ತಾ ನಮ್ಮದೇ ಲೋಕದಲ್ಲಿ ಕಳೆದು ಹೋಗುತ್ತಿದ್ದೇವೆ ಅನ್ನಿಸುತ್ತಿದೆ. ನಮ್ಮ ಸಹಪಾಠಿಗಳೆಲ್ಲ
ಚಲ್ಲಾಪಿಲ್ಲಿಯಾಗಿ ಹೋಗಿದ್ದಾರೆ. ವಿವಿಧ ಕ್ಷೇತ್ರದಲ್ಲಿ ಉದ್ಯೋಗಿಗಳಾಗಿ ಸೇವೆ
ಸಲ್ಲಿಸುತ್ತಿದ್ದಾರೆ.
ಮೊದಲಿದ್ದ
ಜೀವಂತಿಕೆಯ ಉತ್ಸಾಹ, ಮುಗ್ಧ ನಗು, ಈಗ
ನಮ್ಮಲ್ಲಿ ಕಾಣಿಸುವುದೇ ಇಲ್ಲ ಅಲ್ವಾ? ಯಾಂತ್ರಿಕ
ಬದುಕಿನಲ್ಲಿ ಯಂತ್ರಗಳೇ ಆಗಿಹೋಗಿದ್ದೇವೆ ಕಣೇ...
ಮೊದಲಿನಂತಹ
ಮಾತಿಗೆ, ನಗುವಿಗೆ,ಹರಟೆಗೆ
ಸಮಯವೇ ಇಲ್ಲ ನಮಗೆ. ಬದುಕೆಂಬ ಪ್ರವಾಹದಲ್ಲಿ ಮುಳುಗಿ ಕಳೆದು ಹೋಗುತ್ತಿದ್ದೇವೆ. ನಮ್ಮ ಬಾಲ್ಯದ ಗೆಳಯ ಗೆಳತಿಯರನ್ನು ಅಂತರ್ಜಾಲ
ಸಹಾಯದಿಂದ ಹುಡುಕಿ ಮಾತನಾಡಿಸುವ ಕಾಲ ಇದು. ಈಗ ಎಲ್ಲವೂ ನೆನಪು ಮಾತ್ರ ಕಣೇ....ನಾವೇ ನೀರು ಹಾಕಿ
ಬೆಳೆಸಿದ ಮತ್ತೀಹಳ್ಳಿ ಶಾಲೆಯ ಮಲ್ಲಿಗೆ ಗಿಡ ಈಗಿಲ್ಲ. ತೆಂಗಿನ ಗಿಡ ಮರವಾಗಿದೆ. ಆ ಶಾಲೆಯಲ್ಲಿ
ನಮ್ಮ ಅಕ್ಕೋರು ಇಲ್ಲ. ಬೇರೆ ಯಾರೋ ಟೀಚರ್ ಬಂದಿದ್ದಾರಂತೆ.
ಕಾಲ
ಬದಲಾದಂತೆ ಎಲ್ಲವೂ ಬದಲಾಗುತ್ತವೆ. ನಾವೂ ಅಷ್ಟೇ....ಕಳೆದ ಆ ಮಧುರ ಜೀವನಕ್ಕೆ ಮತ್ತೆ ಹಿಂದಿರುಗಿ
ಹೋಗಲು ಸಾಧ್ಯವಿಲ್ಲ, ಹಿಂತಿರುಗಿ
ನೋಡಬಹುದು ಅಷ್ಟೇ.....ಸುಂದರ ಬಾಲ್ಯದ ಸುಂದರ ನೆನಪುಗಳನ್ನು ಮೆಲಕು ಹಾಕುವಾಗ ತುಂಬಾ ನೆನಪಾದೆ
ಕಣೇ..ನೀನು.,,,, ಬಾ ಗೆಳತಿ
ಮತ್ತೆ ಬಾಲ್ಯಕ್ಕೆ...........