Thursday, 12 November 2020

ನಾಳೆಯಿಂದ ಎಲ್ಲಾ ಫ್ಲೈಟ್‌ ಕ್ಯಾನ್ಸಲ್‌..! ಇದೇನು ತಮಾಷೆ ಮಾಡೋ ಸಮಯವಾ..?

 


 

ಗಷ್ಟೇ 2020 ಪ್ರಾರಂಭವಾಗಿ ಕೆಲವೇ ಕೆಲವು ದಿನಗಳು ಕಳೆದಿದ್ವು ಅಷ್ಟೆ.  ಆವತ್ತು ನಾನು ಅಡುಗೆ ಮನೆಯ ಗಡಿಬಿಡಿ ಕೆಲಸದಲ್ಲಿದ್ದಾಗ,  ನನ್ನ ಪತಿರಾಯ ವಿನಯ್‌‌ ಗಾಬರಿಯಿಂದ  ಅಮೃತ್, ಚೀನಾದಲ್ಲಿ ಅದೇನೋ ರೋಗ ಬಂದಿದ್ಯಂತೆ,  ಸಾವಿರ ಸಾವಿರ ಜನ ಸಾಯ್ತಾ ಇದಾರಂತೆ.  ಈ ವಿಷಯ ನಿಂಗೊತ್ತಾ..?’ ಅಂತ ಕೇಳಿದ್ರೆ,  ನಾನು ಸಾಂಬಾರ್‌‌ಗೆ ಒಗ್ಗರಣೆ ಹಾಕ್ತಾ..  ಹೌದು ಹೌದು.. ಗೂಗಲ್‌ನ್ಯೂಸ್‌‌ನಲ್ಲಿ ನಾನೂ ಓದಿದ್ದೀನಿ.  ಅದೇನ್ ರೋಗನೋ  ಏನೋ.. ನಮ್ಮ ದೇಶಕ್ಕೇನಾದ್ರೂ ಈ ರೋಗ ಬಂದ್ರೆ, ಇರುವೆಗಳ ಥರ ನಮ್ಮ ಜನ ಸತ್ಹೋಗ್ತಾರೆ ಅನ್ಸುತ್ತೆ.’ ಅಂದೆ.    ಪಲ್ಯ ಬೇಯುತ್ತಿದ್ದ ಬಾಣಲೆಯ ಮುಚ್ಚಳ ತೆಗೆದು ನೋಡುತ್ತಾ ‘ಅದೆಲ್ಲ ಸರಿ...... ನೀವು ಹೋಗ್ತಿರೋ ಕುವೈತ್‌ನಲ್ಲಿ ಕೊರೊನಾ ಇಲ್ಲ ತಾನೇ..? ಕೇಳಿದೆ.   ‘ಇಲ್ಲ ಇಲ್ಲ...  ಚೀನಾದಲ್ಲಿ ಮಾತ್ರ ಇದೆ ಅಷ್ಟೆ.  ಹೋದ ವರ್ಷ ಅದ್ಯಾವ್ದೋ ಎಬೊಲಾ ಅನ್ನೋ ರೋಗ ಬಂದಿರಲಿಲ್ವಾ...?  ಅಂಥದ್ದೇ ಇದು ಅನ್ಸುತ್ತೆ.  ಇಂಥ ರೋಗಗಳು ಆಗಾಗ ಬರುತ್ವೆ ಹೋಗುತ್ವೆ ಅಂದ್ರು ಅವರು.   ಅಲ್ಲಿಗೆ ಆವತ್ತಿನ ಆ ಟಾಪಿಕ್ ಮುಗಿದಿತ್ತು. ಆದರೆ,  ನಾವೇನೋ  ಮಾತಾಡಿ  ಮುಗ್ಸಿದೀವಿ ಅಂತ, ರೋಗ ಮುಗಿದು ಹೋಗುತ್ತಾ..?

 ಮೊದಮೊದಲು ಚೀನಾದಲ್ಲಿ ಕೊರೊನಾ  ಕಾಡ್ತಾ ಇದೆ ಅಂದಾಗಯಾರೂ ತಲೆ ಕೆಡಿಸಿಕೊಂಡಿರಲಿಲ್ಲ. ನಾವೂ ಅಷ್ಟೆ ನ್ಯೂಸ್ ಪೇಪರ್, ನ್ಯೂ‌‌ಸ್‌ಚಾನಲ್‌ಗಳಲ್ಲಿ  ಚೀನಾ ಜನರ ಸಾವಿನ ಸುದ್ದಿ ಕೇಳಿ  ಲೊಚಗುಟ್ಟಿ ಅಯ್ಯೋ ಪಾಪ ಅಂದುಬಿಟ್ಟಿದ್ವಿ.   ದೂರದ ಚೀನಾದಲ್ಲಿ ತಾನೇ ರೋಗ ಬಂದಿರೋದು..? ’  ಅನ್ನೋ ಮನೋಭಾವ ಇತ್ತು ಆಗ.  ಆದರೆ ಚೀನಾದ ಸಾವಿನ ಸಂಖ್ಯೆ 2 ಸಾವಿರ ದಾಟಿ 3 ಸಾವಿರ ತಲುಪಿದ ಸುದ್ದಿ,ಕೇಳಿ ಸಣ್ಣ ಭಯ ಕಾಣಿಸಿಕೊಂಡಿತ್ತು.  ಕೊರೊನಾ ಜನ್ಮಸ್ಥಾನದಿಂದ ಈ ರೋಗ  ಶರವೇಗದಲ್ಲಿ ಜಗತ್ತಿಗೆಲ್ಲ ಹಬ್ಬುತ್ತಿರುವುದನ್ನ ನೋಡಿ ನಾವೂ ಬೆಚ್ಚಿಬಿದ್ವಿ . 

 ಜನವರಿಯ ಕೊನೆಯಲ್ಲಿ ಕೊರೊನಾ ಕೇರಳಕ್ಕೂ ಬಂತು ಎಂಬ ಸುದ್ದಿ ಟಿವಿಯಲ್ಲಿ ನ್ಯೂಸ್‌ಪೇಪರ್‌ನಲ್ಲಿ ಹರಿದಾಡ್ತಿತ್ತು. ಆದರೆ, ಡಿಸೆಂಬರ್‌ನಿಂದಲೇ  ಹೊಸ ಪ್ರಾಜೆಕ್ಟ್‌‌ನಲ್ಲಿ  ಕೆಲಸ ಮಾಡ್ತಾ ಇದ್ದ ನನ್ನ ಬಿಜಿ ಗಂಡ ವಿನಯ್ ಅದಾಗಲೇಕುವೈತ್‌‌ಗೆ ಹೋಗೋ ಸಿದ್ಧತೆಯಲ್ಲಿದ್ದರು.  ನನ್ನ ಅಮ್ಮ, ಅಪ್ಪ ಫೋನ್‌ಮಾಡಿ, ಅದೇನೋ ರೋಗ ಎಲ್ಲಕಡೆ ಹಬ್ಬುತ್ತಾ ಇದೆಯಂತೆ, ಈಗ ಹೋಗಲೇ ಬೇಕಂತಾ ಕುವೈತ್ಗೆ ಅಂತ ಕೇಳ್ತಾ ಇದ್ರೆನಾನು ನಕ್ಕಿದ್ದೆ.

 ಅವು ಫೆಬ್ರವರಿ ಆರಂಭದ ದಿನಗಳು.  ನನ್ನ ಪತಿರಾಯನಿಗೆ ತಲೆ ತುರಿಸಲೂ ಪುರುಸೊತ್ತಿಲ್ಲದ ಆ ಕಾಲದಲ್ಲಿಯೇ ನಾವಿದ್ದ ಮನೆಯ ಮಾಲಿಕರು ಮನೆ ಖಾಲಿ ಮಾಡಲು ಹೇಳಿಬಿಟ್ರು.   ನನ್ನ ಗಂಡನಿಗೋ ಅತ್ತ ದರಿ, ಇತ್ತ ಪುಲಿ ಅನ್ನೋ ಹಾಗಾಗಿತ್ತು.  ಆದರೂ ಕುವೈತ್‌ ಕ್ಲೈಂಟ್‌ನ ಪ್ರಾಜೆಕ್ಟ್‌ ಕೆಲಸವನ್ನೂ ನಿಭಾಯಿಸುತ್ತಾಸೂಕ್ತ ಬಾಡಿಗೆ ಮನೆಯನ್ನೂ ಹುಡುಕಲು ಶುರು ಮಾಡಿದ್ದರು ನನ್ನ ಗಂಡ ಬಡಪಾಯಿ..!  ದೇವರ ದಯೆ..! ಬಹು ಬೇಗ ಒಂದೊಳ್ಳೆ ಮನೆಯೂ ಸಿಕ್ತು.  ವಾರ ಕಳೆಯುವಷ್ಟರಲ್ಲಿಯೇ ವಿನಯ್‌ ನಮ್ಮನ್ನ ಹತ್ತಿರದ ಅಪಾರ್ಟ್‌‌ಮೆಂಟ್‌‌ನ ಮನೆಯೊಂದಕ್ಕೆ  ಶಿಫ್ಟ್‌‌ ಮಾಡಿಟ್ಟು  ವಿಮಾನು ಹತ್ತಿ ಹಾರಿಹೋದರು.   ಆದರೆ, ವಿನಯ್‌ಗಿದ್ದಷ್ಟೇ ತರಾತುರಿ ಕೊರೊನಾಕ್ಕೂ ಇತ್ತು ನೋಡಿ..! ಅಲ್ಲಿಯ ತನಕ  ಕುವೈತ್‌ನಲ್ಲಿ ಪತ್ತೆಯಾಗಿರದ ಕೊರೊನಾ ಫೆಬ್ರವರಿ ಕೊನೆಯ ವಾರದಲ್ಲಿ ಕುವೈತ್‌ನಲ್ಲಿಯೂ ಕಾಣಿಸಿಕೊಂಡ್ತು.

 

ನಮ್ಮ ದೇಶದಲ್ಲಿ ಅದಾಗಲೇ ಕೊರೊನಾ ಕುರಿತಾದ ಭಯದ ಬಿರುಗಾಳಿಯಾಗಿ ಬೀಸ್ತಾ ಇತ್ತು.  ರೋಗ ಹಬ್ಬುವ ತೀವ್ರತೆ,  ಅಪಾಯಗಳು, ಅದರಿಂದ ಪಾರಾಗುವ ಉಪಾಯಗಳು,  ಬರದಂತೆ ತಡೆಯುವ ಕ್ರಮಗಳು, ಸುಳ್ಳುಸುದ್ದಿಗಳು,  ಕೊರೊನಾ ಜೋಕ್ಗಳು, ಹಾಡುಗಳು, ಡಾನ್ಸ್ಗಳು ಹೀಗೆ ಇನ್ನೂ ಏನೇನೋ ವಾಟ್ಸ್ಯಾಪ್, ಫೇಸ್ಬುಕ್ನಲ್ಲಿ ಹರಿದಾಡ್ತಾ ಇದ್ರೆ, ನ್ಯೂಸ್‌ ಚಾಲನ್‌ಗಳು ಕರೊನಾದಿಂದ ಸಂಭವಿಸುತ್ತಿರುವ ಸಾವನ್ನು ವೈಭವೀಕರಿಸುತ್ತಿದ್ವು.  ನಾಲ್ಕು ವರ್ಷದ ಪುಟ್ಟ ಮಗನ ಜತೆ ಮನೆಯಲ್ಲಿ ಒಬ್ಬಳೇ ಇರೋ ನನಗೆ ಕೊರೊನಾ ಭಯ ಇನ್ನಿಲ್ಲದಂತೆ ಕಾಡೋಕೆ ಶುರುವಾಯ್ತು. ವಿದೇಶಕ್ಕೆ ಹೋಗಿಯೋ ಗಂಡ, ಕ್ಷೇಮವಾಗಿ ಮನೆಗೆ ಬಂದ್ರೆ ಸಾಕು ಅನ್ನೋ ಆತಂಕ ಬೇರೆ ..! 

 ಕುವೈತ್‌ನಲ್ಲಿ ಬೆರಳೆಣಿಕೆಯಷ್ಟು ಕೊರೊನಾ ಕೇಸ್‌ಗಳು ದಾಖಲಾಗ್ತಾ ಇದ್ದಂತೆ, ಆ ದೇಶದಲ್ಲಿ ಎಚ್ಚರಿಕೆಯ ಕ್ರಮಗಳು ಜಾರಿಗೆ ಬಂದ್ವು. ಬೇರೆ ದೇಶದಿಂದ ಬಂದ ಎಲ್ಲರನ್ನೂ ವಾಪಾಸ್‌ಕಳಿಸಲು  ಕುವೈತ್‌ಸರ್ಕಾರ ಕ್ರಮ ಕೈಗೊಳ್ತಾ ಇದೆ ಅನ್ನೋ ಸುದ್ದಿ ಬಂದಿದ್ದೇ  ವಿನಯ್‌ ಕಂಪನಿ  ಅವರನ್ನು   ವಾಪಾಸ್‌ಕರೆಸಿಕೊಳ್ಳುವ  ತಯಾರಿ ಮಾಡಿಕೊಂಡಿತ್ತು.  

 ಅಂದ್ಹಾಗೆ, ಮಾರ್ಚ್ ಮೊದಲನೇ ವಾರದಲ್ಲಿ ಅಂದ್ರೆ,  ಇನ್ನೂ ನಮ್ಮ ದೇಶದಲ್ಲಿ ಲಾಕ್‌ಡೌನ್‌ಆರಂಭವಾಗಿರಲಿಲ್ಲ ನೋಡಿ, ಆವಾಗಲೇ ವಿನಯ್‌‌  ಕುವೈತ್‌ನಿಂದ ಗಂಟು ಮೂಟೆ ಕಟ್ಟಿಕೊಂಡು ಎದ್ನೋ ಬಿದ್ನೋ ಅಂತ ಓಡಿ ಬರೋಕೆ ತಯಾರಿ ಮಾಡಿಕೊಂಡ್ರು. ಅದೇ ಗಡಿಬಿಡಿಯಲ್ಲಿ  ನನಗೆ ಕಾಲ್ ಮಾಡಿ,   ನಾನೀಗ ಕುವೈತ್‌ನಿಂದ  ಮನೆಗೇ ಬರಬೇಕಾ..? ಅಂತ ಕೇಳಬೇಕೆ...?   ಆ ಅನಿರೀಕ್ಷಿತ ಪ್ರಶ್ನೆಯಿಂದ ಗಾಬರಿಗೊಂಡ ನಾನು, ಯಾಕ್ರೀ..? ಮನೆಗೆ ಬರೋಕೆ ಇಷ್ಟ ಇಲ್ವಾ..? ಅಂದೆ.  ‘ಪೆದ್ದಿ, ನಾಳೆಯಿಂದ ಎಲ್ಲಾ ಫ್ಲೈಟ್‌ ಕ್ಯಾನ್ಸಲ್‌..!  ಇದೇನು ತಮಾಷೆ ಮಾಡೋ ಸಮಯವಾ ? ಫ್ಲೈಟ್‌ನಲ್ಲಿ  ಬರುವಾಗ ಕೊರೊನಾ ಅಂಟಿಕೊಳ್ಳೋ ಪಾಸಿಬಲಿಟೀಸ್ ಇರೋದ್ರಿಂದ ನಾನು ನಿನ್ನ ಹತ್ರ ಹೀಗೆ ಕೇಳ್ತಿರೋದು.  ನನ್ನ ಜತೆ ಇರೋ ಕಲೀಗ್ಸ್‌ ಬೆಂಗಳೂರಿಗೆ ಬಂದ ತಕ್ಷಣ ಲಾಡ್ಜ್‌ಗೆ ಹೋಗ್ತಿದಾರೆ.  ನಾನೂ ಹಾಗೇ ಮಾಡ್ಲಾ..? ಅಥವಾ ಒಂದು ಹದಿನೈದು ದಿನ ಮಗನ ಜತೆ ನೀನೇ ಊರಿಗೆ ಹೋಗ್ತಿಯಾ?’   ಅಂತ ಅಷ್ಟನ್ನೂ ಒಂದೇ ಉಸುರಿಗೆ ಹೇಳಿದರು.  ಕುವೈತ್ ಏರ್‌ಪೋರ್ಟ್‌‌ನಲ್ಲಿ ಕುಳಿತು ಹೀಗೆ ಕೇಳ್ತಾ ಇದ್ರೆ, ದಿಢೀರನೆ ನಾನು ಏನಂತ ಹೇಳಲಿ..?   ಆ ಕ್ಷಣಕ್ಕೆ ಆಯ್ತು ನಾವೇ ಊರಿಗೆ ಹೋಗ್ತೀವಿ, ನೀವು ಮನೆಗೇ ಬನ್ನಿ ಪರವಾಗಿಲ್ಲ ಅಂದೆ.

 ಅವರು ಮಾರ್ಚ್ 12 ರಂದು  ಬೆಳಗ್ಗೆ 10 ಗಂಟೆಗೆ ಕುವೈತ್ನಿಂದ ಹೊರಟು  ಮಧ್ಯಾಹ್ನ 12.30ಕ್ಕೆ  ಕತಾರ್‌ತಲುಪಿ,  ಅದೇ ದಿನ ಸಂಜೆ 8.30 ರ ಫ್ಲೈಟ್‌‌ಗೆ  ಕತಾರ್‌ನಿಂದ ಹೊರಟು  ಮಾರ್ಚ್ 13ರ ಬೆಳಗ್ಗೆ ಬೆಂಗಳೂರಿಗೆ ಬರೋ ಕಾರಣ,    ನಾನು ಮಾರ್ಚ್ 12  ರಂದೇ  ರಾತ್ರಿ ಬೆಂಗಳೂರು ಬಿಡಬೇಕಾಗಿತ್ತು. ನನ್ನ ಪುಣ್ಯಕ್ಕೆ ಅದೇ ದಿನ ರಾತ್ರಿ ಬಸ್‌ನಲ್ಲಿ ಸೀಟ್‌ ಕೂಡ ಸಿಕ್ಕಿತ್ತು.

ದಿನಿನಿತ್ಯ ತಪ್ಪದೇ ನ್ಯೂಸ್‌ ಚಾನೆಲ್‌ಗಳನ್ನ ನೋಡಿ ನೋಡಿ ತಲೆಯ ತುಂಬಾ ಕಲರ್‌ ಕಲರ್‌ ಕೊರೊನಾವನ್ನ ತುಂಬಿಕೊಂಡಿದ್ದ ನಾನು ಅದೇ  ಪ್ರಚಂಡ ಭಯದೊಂದಿಗೆ  ಮಗನನ್ನೂ ಕಟ್ಟಿಕೊಂಡು ಊರಿಗೆ ಹೊರಟೆ.

 ಅಂತೂ ಶಿರಸಿ ತಲುಪಿದ್ದೆ. ಊರಿಗೆ ಬಂದಮೇಲೆ, ವಾಟ್ಸ್ಯಾಪ್‌ನೋಡಿದ್ರೆ, ನನ್ನ ಗಂಡನ ಮೆಸೇಜ್‌ ಇತ್ತು.  ಕೈಗೆ ಗ್ಲೌಸ್, ಮುಖಕ್ಕೆ ಮಾಸ್ಕ್, ಪ್ಯಾಂಟ್‌‌  ಕಿಸೆಯಲ್ಲಿಯೇ  ಸ್ಯಾನಿಟೈಸರ್‌‌  ಬಾಟಲ್   ಇಟ್ಟುಕೊಂಡು  ಅತೀವ ಜಾಗರೂಕತೆಯಿಂದ  ತಾನು ಫ್ಲೈಟ್‌  ಸೀಟ್‌ನಲ್ಲಿ   ಕುಳಿತಿರೋ ಫೋಟೋ ಕಳಿಸಿದ್ದರು.  ಜತೆಗೆ ‘ರೀಚ್ಡ್‌ ಸೇಫ್‌ಲಿ’  ಅಂತ ಮುದ್ದಾಗಿ ಟೈಪಿಸಿದ್ದರು.  ನನಗೋ  ಕುವೈತ್‌ನಿಂದ ಸುರುಕ್ಷಿತವಾಗಿ ಮನೆಗೆ ರೀಚ್  ಆದ್ರಲ್ಲಾ ಅನ್ನೋ ಸಮಾಧಾನ ಒಂದ್ಕಡೆಯಾದ್ರೆ, ಕರೊನಾ ಅಂಟಿದೆಯೋ ಇಲ್ವೋ ಅಂತ ತಿಳ್ಕೊಳೋಕೆ ಇನ್ನೂ 15 ದಿನ ಕಾಯಲೇಬೇಕು ಅನ್ನೋ  ಚಡಪಡಿಕೆ ಇನ್ನೊಂದು ಕಡೆ !. 

ವಿನಯ್  ಬಂದು  11 ದಿನ ಕಳೆಯುವಷ್ಟರಲ್ಲಿ ಅಂದ್ರೆ, ಮಾರ್ಚ್ 24 ರಿಂದ 21 ದಿನಗಳು ಸಂಪೂರ್ಣ ಲಾಕ್‌ಡೌನ್‌  ಘೋಷಣೆಯಾಯ್ತು.  ಪ್ರತಿಯೊಬ್ಬರೂ ಮನೆಯೊಳಗೆ ಬಂಧಿಯಾದರು. ಬಸ್ಸು, ರೈಲು, ವಿಮಾನು ಸಂಚಾರ ನಿಂತುಹೋಯ್ತು. ಅಂಗಡಿಗಳು, ಆಫೀಸ್‌ಗಳು, ಶಾಲಾ ಕಾಲೇಜುಗಳು, ಶಾಪಿಂಗ್‌ ಮಾ‌ಲ್‌ಗಳು, ಸಿನಿಮಾ ಥಿಯೇಟರ್ಸ್  ಹೀಗೆ  ಎಲ್ಲವೂ ಬಂದ್ ಆದ್ವು.  ಹದಿನೈದು ದಿನಕ್ಕಾಗಿ ಊರಿಗೆ ಬಂದಿರೋ ನಾನು ಮತ್ತು ನನ್ನ ಮಗ ಊರಿನಲ್ಲೇ ಉಳಿದುಹೋದ್ವಿ.

 ದಿನದಿಂದ ದಿನಕ್ಕೆ ಕೊರೊನಾ ಸಂಖ್ಯೆ ಜಾಸ್ತಿ ಆಗ್ತಿದ್ದಂತೆ,  ಸುಳ್ಳುಸುದ್ದಿಗಳ ಹಾವಳಿಯೂ ಜಾಸ್ತಿಯಾಗ್ತಾ ಹೋಯ್ತು.   ’ಅದ್ಯಾವುದೋ ನಗರ, ಆ ನಗರದ ಮೂಲೆ ಮೂಲೆಗಳಲ್ಲಿ ರೋಗಿಗಳು !  ಅವರೆಲ್ಲ ಸಾವು ಬದುಕಿನ ನಡುವೆ ಹೆಣಗಾಡ್ತಾ ಇದ್ರೆ, ರಸ್ತೆಯಲ್ಲಿ ಹೋಗ್ತಿರೋ ಜನ ದೂರದಿಂದಲೇ ಇವರ  ನರಳಾಟ ನೋಡ್ತಾ ತಮ್ಮಪಾಡಿಗೆ ತಾವು ಹೊರಟು ಹೋಗ್ತಿದ್ದಾರೆ.  ಇಂಥ ಕರುಣಾ ಜನಕ ವೀಡಿಯೋ ಅಸಹ್ಯ ಭಯ ಹುಟ್ಟಿಸ್ತಾ ಇತ್ತು.   ಮತ್ತೊಂದು ವಿಡಿಯೋದಲ್ಲಂತೂ,  ಕೊರೊನಾ ರೋಗಿ ಅಂತ ಬಿಂಬಿಸಲಾಗಿದ್ದ ಒಬ್ಬ ಯುವಕ ಸೋಫಾದ ಮೇಲೆ ಮಲಗಿ ಉಸಿರಾಡಲು ಹರಸಾಹಸ ಪಡ್ತಿದ್ದ. ಯಾರೋ ಆತನ ಉಸಿಗಟ್ಟಿಸಿ ಸಾಯಿಸ್ತಾ ಇದ್ದಾರೇನೋ ಎಂಬಂತೆ ಚಡಪಡಿಸ್ತಾ ಇದ್ದ ಆತನ ಕಷ್ಟವನ್ನ  ನೋಡಿದ್ರೆ ಮೈ ಬೆವೆತುಹೋಗುತ್ತಿತ್ತು.  ಇಡೀದಿನ ಇಂಥ ವಿಡಿಯೋಗಳ ಬಗ್ಗೆ ಯೋಚಿಸ್ತಾ ಇದ್ದ ನನಗೆ ರಾತ್ರಿ ನಿದ್ದೆಯಲ್ಲಿಯೂ ಇಂಥದ್ದೇ ಕನಸು!  ಕೊರೊನಾ ಕುರಿತು ಬಂದ ಈ ಎಲ್ಲ ಸುಳ್ಳು ಸುದ್ದಿಗಳನ್ನ ಓದುತ್ತಿರುವ ನಾನಂತೂ ಅದು ಸುಳ್ಳೋ, ನಿಜವೋ ಎಂಬುದನ್ನ ನಿರ್ಧರಿಸಲೂ ಆಗದ ಮನಸ್ಥಿತಿಯಲ್ಲಿದ್ದೆ. ದೇವರಾಣೆ ಹೇಳ್ತೀನಿ.. ನಾವೆಲ್ಲ ಇನ್ನೆಷ್ಟ್‌ ದಿನ ಬದುಕ್ತೀವೋ ಏನೋ ಅನ್ಕೊಂಡಿದ್ದೆ.

 ಅಂತೂ ಇದೆಲ್ಲದರ ಜೊತೆಗೆ ವಿನಯ್ ಕುವೈತ್‌ನಿಂದ   ಬಂದು ಯಶಸ್ವಿ 13 ದಿನಗಳು ಕಳೆದಿದ್ದವು.  ವಿನಯ್‌ಗೆ ಅದ್ಯಾವ ತಂಡಿ ಜ್ವರ ಕೆಮ್ಮು ಸೀನು ಕೂಡ ಬಂದಿರಲಿಲ್ಲ.  ಆದರೆ  ಕ್ವಾರಂಟೈನ್ ದಿನಗಳು ಮುಗಿಯಲು  ಇನ್ನೊಂದೇ ದಿನ ಬಾಕಿ ಇದೆ ಅನ್ನುವಾಗಲೇ ಮನೆಗೆ ಬಂದಿದ್ದ ಕೊರೊನಾ ಕಾರ್ಯಕರ್ತರು, ವಿನಯ್‌ಕೈಗೆ  ಕ್ವಾರಂಟೈನ್  ಸೀಲ್‌ಹಾಕಿ ಹೋಗಿದ್ದರು.  ಅಷ್ಟೇ ಅಲ್ದೇ, ನಾವಿದ್ದ ಅಪಾರ್ಟ್‌‌ಮೆಂಟ್‌‌ನ  ಎಂಟ್ರೆಸ್‌ನಲ್ಲಿ   ಹೋಮ್‌ ಕ್ವಾರಂಟೈನ್‌ಒಬ್ಬರು ಇಲ್ಲಿದ್ದಾರೆ  ಎಂದು ಸೂಚಿಸುವ ನೊಟೀಸ್  ಕೂಡ  ಅಂಟಿಸಿಬಿಟ್ಟಿದ್ದರು.  ಹೊಸದಾಗಿ ಅಪಾರ್ಟ್‌ಮೆಂಟ್‌ಗೆ ಬಂದಿದ್ದ ನಮ್ಮನ್ನು ವಿಶೇಷವಾಗಿ ನೋಡುತ್ತಿದ್ದ ಇಲ್ಲಿಯ ಜನ ಈಗ ವಿನಯ್‌‌ನ್ನ  ಕಂಡ್ರೆ ಮೂರಡಿ ಮುಂದಕ್ಕೆ ಹಾರಲು ಶುರುಹಚ್ಚಿಕೊಂಡ್ರು.

 ಆವತ್ತೇ  ನ್ಯೂಸ್‌ಚಾನಲ್‌ನಲ್ಲೊಂದು  ಸುದ್ದಿ ಹೈಪ್‌ ಆಗಿತ್ತು.   ಕ್ವಾರಂಟೈನ್‌ ಸೀಲ್‌  ಹಾಕಿಸಿಕೊಂಡಿದ್ದ  ವ್ಯಕ್ತಿಯೊಬ್ಬ ಅಲೆದಾಡುತ್ತಿರುವ, ಮತ್ತು ಅವನನ್ನು ಪೊಲೀಸರು ಬಂಧಿಸಿರುವ ದೃಶ್ಯ ಮತ್ತೆ ಮತ್ತೆ  ಪ್ರಸಾರವಾಗ್ತಾ ಇತ್ತು.  ಜತೆಗೆ  ಬ್ಯಾಕ್‌ಗ್ರೌಂಡ್‌ನಲ್ಲಿ ‘ ಇಂಥವರನ್ನ ಜೈಲಿಗೆ ಹಾಕಿ ನಾಲ್ಕು ದಿನ ರುಬ್ಬಬೇಕು, ಹಾಗೇ ಬಿಡಬಾರ್ದು ಇವ್ರನ್ನ’ ಅನ್ನೋ ಆಂಕರ್‌ನ ಧ್ವನಿ..!   ಈ ನ್ಯೂಸ್‌ ನೋಡ್ತಾ ನೋಡ್ತಾ ನನ್ನ ಗಂಟಲು ಒಣಗಿತ್ತು.  ಆಗಿಂದಾಗ್ಲೇ  ವಿನಯ್‌ಗೆ ಕಾಲ್‌ಮಾಡಿ  ಆ ಸೀಲ್ ಅಳಿಸಿ ಹೋಗೋವರೆಗೂ  ಹೊರಗೆ ಮಾತ್ರ ಹೋಗಬೇಡಿ ದಮ್ಮಯ್ಯ.! ಅಂತ ಕೈ ಮುಗಿದಿದ್ದೆ.  

 ಈ ಮಧ್ಯೆ , ಕೊರೊನಾ ವಾರಿಯರ್ಸ್‌ಗೆ   ಗೌರವ  ಸೂಚಕವಾಗಿ ಚಪ್ಪಾಳೆ ತಟ್ಟಿ , ಜಾಗಟೆ ಬಾರಿಸಿ ದೀಪ ಬೆಳಗಿ ಗೌರವ ಸೂಚಿಸುವ ಮೋದಿಜಿ  ಕರೆಗೆ ನಾವೆಲ್ಲ ಊರಲ್ಲೇ  ಒಟ್ಟಾಗಿ ಓಗುಟ್ಟುತ್ತಿದ್ದರೆ,  ವಿನಯ್ ಒಬ್ಬರೇ, ಯಾರ‍್ಯಾರೂ  ಪರಿಚಯವಿರದ  ಅಪಾರ್ಟ್‌‌ಮೆಂಟ್‌‌ನ  ಮನೆಯಲ್ಲಿ ಒಬ್ಬರೇ ಕುಳಿತು ಜಾಗಟೆ ಬಾರಿಸಿ,  ಚಪ್ಪಾಳೆ ತಟ್ಟಿದ್ದರಂತೆ.  ಪಾಪ!   ಈ ಪರಿಸ್ಥಿತಿಗೆ ನಗಬೇಕೋ,  ಅಳಬೇಕೋ ನನಗೆ ತಿಳಿದಿರಲಿಲ್ಲ ನೋಡಿ..!

 ಹೀಗೆ ಒಂದನೇ ಲಾಕ್‌ಡೌನ್‌ಮುಗಿದು, ಎರಡನೇ ಲಾಕ್‌ಡೌನ್‌ ಸಂಪನ್ನಗೊಂಡು, ಮೂರನೇ ಲಾಕ್‌ಡೌನ್‌  ಕೂಡ ಮುಗಿತಾ ಬಂದಿತ್ತು. ಅಂದ್ರೆ, ಅದಾಗಲೇ ಮೇ ತಿಂಗಳು ಆರಂಭವಾಗಿತ್ತು.  ಆದರೆ,  ಮಾರ್ಚ್‌‌ನಲ್ಲಿ  ಊರಿಗೆ ಬಂದಿದ್ದ ನಾನು ಮತ್ತು  ನನ್ನ ಮಗ ಮಾತ್ರ ಇನ್ನೂ ಊರಲ್ಲೇ ಇದ್ವಿ.  ವಿನಯ್  ಒಬ್ಬರೇ ಗಡ್ಡಧಾರಿಯಾಗಿ  ಮನೆಯಲ್ಲಿಒಂಟಿಯಾಗಿದ್ದರು.  ತುಂಬಾ ದಿನಗಳಿಂದ  ಅಪ್ಪನ್ನ ನೋಡದ ಮಗನಿಗಂತೂ ಅಪ್ಪನನ್ನ  ಎಂದು ಕಂಡೆನೋ ಅನ್ನೋ ಹಂಬಲ.

 ಅಂತೂ ಮೂರನೇ ಲಾಕ್‌ಡೌನ್‌ಕೂಡ ಮುಗಿದಮೇಲೆ ನಾವು ಬೆಂಗಳೂರಿಗೆ ಹೋಗಲೇಬೇಕು ಅಂತ ನಿರ್ಧಾರ ಮಾಡಿದ್ವಿ.  ಆದರೆ, ಹೇಗೆ ಹೋಗೋದು ಎಂಬುದರ ಬಗ್ಗೆ ಏನೂ ಸ್ಪಷ್ಟತೆ ಇರಲಿಲ್ಲ.   ಆ ಸಮಯದಲ್ಲಿ ಬೆಂಗಳೂರಿನಿಂದ ಯಾರೂ ಶಿರಸಿಗೆ ಬರುವಂತಿರಲಿಲ್ಲ.  ಬಂದ್ರೂ ಅವರು, 14 ದಿನಗಳ ಕಾಲ ಇನ್‌ಸ್ಟಿಟ್ಯೂಶನಲ್‌  ಕ್ವಾರಂಟೈನ್‌ ಆಗಿರಬೇಕಿತ್ತು. ಆದರೆ, ಸ್ವಂತ ವಾಹನದಲ್ಲಿ ಬಂದು ಆಗಿಂದಾಗ್ಗೆ ಹೊರಟುಹೋಗುವುದಿದ್ದರೆ ಮಾತ್ರ ಬರಲು ಅವಕಾಶವಿತ್ತು. ಆಗಲೇ, 24 ಗಂಟೆಗಳ ’ಒನ್ಡೇ  ಪಾಸ್’ ವಿನಯ್‌ ಗೆ ಸಿಕ್ಕಿತ್ತು.

 ಒಂದೇ ದಿನ ಬೆಂಗಳೂರಿನಿಂದ ಶಿರಸಿಗೆ ಬಂದು  ತಕ್ಷಣ ವಾಪಾಸ್ ಹೋಗೋದು ಕಷ್ಟ ಎಂಬ ಕಾರಣಕ್ಕೆ, ಅರ್ಧ ದಾರಿಯನ್ನ ಉಳಿಸುವ ಪ್ಲ್ಯಾನ್‌ ಮಾಡಿದ್ವಿ.  ಚಿತ್ರದುರ್ಗವನ್ನ ನಮ್ಮ ಮೀಟಿಂಗ್ ಪಾಯಿಂಟ್ ಮಾಡಿಕೊಂಡ್ವಿ.   ಆದ್ರೆ, ಶಿರಸಿಯಿಂದ ನಮ್ಮನ್ನ ಚಿತ್ರದುರ್ಗದ ತನಕ ಬಿಡಲು ಬಾಡಿಗೆ ಕಾರು ಬೇಕಲ್ಲಾ..?  ಆ ಸಂದರ್ಭ ಹೇಗಿತ್ತೆಂದರೆ,  ಎಷ್ಟು ದುಡ್ಡು ಕೊಟ್ಟರೂ ಬಾಡಿಗೆ ಕಾರು ಕೂಡ ಸಿಗ್ತಾ ಇರಲಿಲ್ಲ. ಕೊನೆಗೆ ಉದಯವಾಣಿ ಪತ್ರಕರ್ತರಾದ ಗುರು ಹೆಗಡೆಯವರ ಸಹಾಯದಿಂದ  ಬಾಡಿಗೆ ಕಾರಿನ ವ್ಯವಸ್ಥೆಯಾಯಿತು. ಹಾಗೇ, ಶಿರಸಿಯಿಂದ ಚಿತ್ರದುರ್ಗಕ್ಕೆ ಹೋಗಲು ಪಾಸ್‌ ಕೂಡ ಸಿಕ್ತು.

 ಮೇ  5ನೇ ತಾರೀಖು ಅಂತೂ ನಮ್ಮ ಸವಾರಿ ಬೆಳಗ್ಗೆ 6 ಗಂಟೆಗೆ ಶಿರಸಿಯಿಂದ ಹೊರಟರೆ,  ಅದೇ ಸಮಯಕ್ಕೆ ಸರಿಯಾಗಿ ವಿನಯ್‌ ಸವಾರಿ ಬೆಂಗಳೂರಿನಿಂದ ಹೊರಟಿತ್ತು.  ವಿನಯ್‌ಗೆ  ಅವರ ತಮ್ಮ ವಿಜಯ್‌ಕೂಡ ಸಾಥ್‌ ನೀಡಿ ನಮ್ಮ ಕಾರ್‌ಗೆ ಅವರೇ ಸಾರಥಿಯಾದ್ರು.  ನಾಲ್ಕು ಜನರಿಗಾಗುವಷ್ಟು ಬೆಳಗ್ಗಿನ ತಿಂಡಿ, ಮಧ್ಯಾಹ್ನದ ಊಟ ಕಟ್ಟಿಕೊಂಡು, ಫೇಸ್‌ಮಾಸ್ಕ್‌  ಹಾಕಿಕೊಂಡು  ಗಡಿಬಿಡಿಯಲ್ಲಿ ಬೆಳ್ಳಬೆಳಗ್ಗೆ ಹೊರಟಿದ್ದ ನನಗೆ,  ನನ್ನ ಮಾವ ಬದಿಯಲ್ಲಿ ಕರೆದು ಕಿವಿಯಲ್ಲಿ ಹೇಳಿದ್ದರು.  ‘ ಪಾಪ ಆ ಡ್ರೈವರ್‌ ಏನ್ತಿಂದಿದಾರೋ ಇಲ್ವೋ ಗೊತ್ತಿಲ್ಲ,  ತಿಂಡಿ ತಿನ್ನುವಾಗ ಅವರಿಗೂ ಸ್ಪಲ್ಪ ಕೊಟ್ಟುಕೊಂಡು ತಿನ್ನು ಆಯ್ತಾ..?’  ಅಂದ್ರು. ನಾನು ಆಯ್ತು ಮಾವಾ ಅಂದೆ.     

 ಜಿಲ್ಲಾ ಗಡಿಗಳಲ್ಲಿದ್ದ ಎಲ್ಲಾ ಚೆಕ್‌ಪೋಸ್ಟ್‌ಗಳಲ್ಲಿಯೂ  ನಮ್ಮ ಪಾಸ್‌  ತೋರಿಸ್ತಾ,  ಅವರಿಂದ ಮುಂದೆ ಹೋಗಲು ಒಪ್ಪಿಗೆ ಪಡೆದುಕೊಳ್ತಾ ಡ್ರೈವರ್‌  ನಮ್ಮನ್ನ  ಗಡಿದಾಟಿಸ್ತಾ ಇದ್ರು.  ಸಾಗರ, ಶಿವಮೊಗ್ಗ, ಚಿತ್ರದುರ್ಗದ ಹೀಗೆ ಎಲ್ಲ ಗಡಿಗಳಲ್ಲಿಯೂ ಹತ್ತತ್ತು ನಿಮಿಷ ನಿಂತಿದ್ದಾಯ್ತು.  ನಮ್ಮ ಡ್ರೈವರ್‌‌  ಆ ಎಲ್ಲಾ ಚೆಕ್‌ಪೋಸ್ಟ್‌ನಲ್ಲಿಯೂ  ನಮ್ಮ ಪಾಸ್‌ತೋರಿಸಿ ಅವರಿಂದ ಒಪ್ಪಿಗೆ ಪಡೆದೊಂಡು ಬರ್ತಾ ಇದ್ರು.   ಎಲ್ಲಾ ಚೆಕ್‌ಪೋಸ್ಟ್‌ಗಳಲ್ಲಿರುವ ಪೊಲೀಸರೂ ಕೂಡ ನಮ್ಮನ್ನು ಪರೀಕ್ಷಿಸಿದ್ದಲ್ದೇ  ಎಲ್ಲಿಗೆ ಹೋಗ್ತಿದ್ದೀರಿ..? ಯಾಕೆ ಹೋಗ್ತಿದ್ದೀರಿ..? ಅಂತ ಪ್ರಶ್ನಿಸ್ತಿದ್ರು. ಅವರು ಕೇಳುತ್ತಿರುವ ಪ್ರಶ್ನೆ ನೋಡಿದ್ರೆ,  ಅದೆಲ್ಲಿ ನಮ್ಮನ್ನ ಮತ್ತೆ ವಾಪಾಸ್ಕಳಿಸಿಬಿಡ್ತಾರೋ ಅನ್ನೋ ಭಯ ಬೇರೆ.  ಅದೃಷ್ಟವಶಾತ್‌‌    ನಮ್ಮನ್ನ ಅವರು ವಾಪಾಸ್ಕಳಿಸಲಿಲ್ಲ. ಆದರೆ ಅದೇ  ಟೆನ್ಶನ್‌ಲ್ಲಿದ್ದ   ಡ್ರೈವರ್‌‌ ಚೆಕ್‌ಪೋಸ್ಟ್‌‌  ಕಂಡ ತಕ್ಷಣ  ಬೆವೆತು ಹೋಗ್ತಿದ್ರು. ಯಾವಾಗ ಇವರನ್ನ ಚಿತ್ರದುರ್ಗ ತಲುಪಿಸಿ, ವಾಪಾಸ್ಹೋಗ್ತೀನೋ.. ಅನ್ನೋ ಯೋಚನೆಯಲ್ಲಿಯೇ ಕಾರು ಓಡಿಸುತ್ತಿದ್ದ ಆ  ಡ್ರೈವರ್‌ಗೆ  ನಾನು ಯಾವಾಗ  ತಿಂಡಿ ಕೊಡಲಿ ಹೇಳಿ..?  ನಾನು ಮಾವಂಗೆ ಕೊಟ್ಟ ಮಾತು ಮಾತ್ರ ಹಾಗೆ ಉಳಿದಿತ್ತು.

 ಅಂತೂ ಚಿತ್ರದುರ್ಗವನ್ನ ನಾವು ತಲುಪಿದಾಗ ಬೆಳಗ್ಗೆ 10 ಗಂಟೆ.  ಸಮಯಕ್ಕೆ ಸರಿಯಾಗಿ ವಿನಯ್, ವಿಜಯ್‌ ಸವಾರಿ ಕೂಡ ಅಲ್ಲಿಗೆ ಬಂದಿತ್ತು.  ನಾವು ಈ ಕಾರ್‌ನಿಂದ  ಆ ಕಾರ್‌ಗೆ  ಲಗೇಜುಗಳ ಸಮೇತ ಶಿಫ್ಟ್  ಆದ್ವಿ. ಬರೋಬ್ಬರಿ 4 ತಿಂಗಳುಗಳಿಂದ ದೂರವಿದ್ದ ನಮಗೆ ಪರಸ್ಪರ  ಮುಖ ಮುಖ ನೋಡಿಕೊಳ್ಳೋದೇ ಒಂದು ಸಂಭ್ರಮ.  ನನ್ನ ಮಗನಂತೂ ಅಪ್ಪಾ... ಅಂತ ಕಿರುಚುತ್ತ ಅಪ್ಪನ ಮೈ ಹತ್ತಿ ಕುಳಿತೇಬಿಟ್ಟಿದ್ದ. ಇಲ್ಲಿಗೆ ವಿನಯ್‌ನ  3 ತಿಂಗಳ ಸುದೀರ್ಘ ಕ್ವಾರಂಟೈನ್‌ ಪೀರಿಯಡ್‌ ಅಂತೂ ಇಂತೂ ಮುಕ್ತಾಯ  ಕಂಡಿತ್ತು.

 ಆರಾಮಾಗಿ ಬೆಂಗಳೂರಿಗೆ ಬಂದಿಳಿದ ಸುದ್ದಿ ತಿಳಿಸೋಕೆ ನಾನು ನನ್ನ ಮಾವಂಗೆ ಕಾಲ್‌ಮಾಡಿದರೆ,  ಅವರು ಕೇಳಿದ ಮೊದಲ ಪ್ರಶ್ನೆ ಯಾವುದು ಗೊತ್ತಾ..?  `ಅದೆಲ್ಲ ಸರಿ... ಬೆಳಗ್ಗೆ ಆ ಕಾರ್‌ ಡ್ರೈವರ್‌ಗೆ ತಿಂಡಿ ಕೊಟ್ಟಿದ್ಯಾ..?’  ಅಂತ..!

 

 

 

 

 

 

 

 

 

 

 

 

 

 

 

  

 

 

 

 

 

 

 

 

 

 

 

Friday, 6 November 2020

ಎಲ್ಲರ ಹತ್ತಿರ ಹೋಗಿ, ನನ್ನ ಮಗ ಅಳ್ತಾನೆ ಮೊಬೈಲ್‌ ಮುಚ್ಚಿಡಿ ಅನ್ನೋಕಾಗುತ್ತಾ..?

 

 

ಅದೊಂದು ಕೊರೊನಾ ಪೂರ್ವ ಕಾಲ.  3 ವರ್ಷದ ಮಗುವನ್ನು ಎತ್ತಿಕೊಂಡ ನಾನು, ಕೈಯ್ಯಲ್ಲೊಂದು, ಬೆನ್ನಿಗೊಂದು ಬ್ಯಾಗ್‌ ಏರಿಸಿಕೊಂಡು ಏದುಸಿರು ಬಿಡುತ್ತಾ ಬಸ್‌ಹತ್ತಿದ್ದೆ.  ದೇವರ ದಯೆಯಿಂದ ಕುಳಿತುಕೊಳ್ಳೋಕೆ ಸೀಟ್‌ಕೂಡಾ ಸಿಕ್ತು. ಮೊಬೈಲ್‌ಕೈಯ್ಯಲ್ಲಿ ಹಿಡಿದಿದ್ದ ನನ್ನ ಮಗನನ್ನು ಸೀಟ್‌ಮೇಲೆ ಕೂರಿಸಿ ಲಗೇಜ್‌ ಇಟ್ಟು ನಾನೂ ಕುಳಿತುಕೊಳ್ಳುವಷ್ಟರಲ್ಲಿ  ಏನಮ್ಮಾ...ಯಾಕಮ್ಮಾ ಮಗು ಕೈಯ್ಯಲ್ಲಿ ಮೊಬೈಲ್‌  ಕೊಟ್ಟಿದೀಯಾ..? ಮಕ್ಕಳಿಗೆ ಮೊಬೈಲ್‌ ಕೊಡಬಾರದಮ್ಮ.. ಎಂಬ ಅಶರೀರವಾಣಿಯೊಂದು ನನ್ನ ಕಿವಿಗೆ ಬಿತ್ತು. ತಿರುಗಿ ನೋಡಿದ್ರೆ, ನನ್ನ ಪಕ್ಕದ ಸೀಟಿನಲ್ಲಿ ಒಬ್ಬ್ರು ಕನ್ನಡಕಧಾರಿ ಮೇಡಮ್‌ ಕೂತಿದ್ರು. ನಾನೋ ಹೂಂ ಅನ್ನುವಂತೆ ಗೋಣು ಅಲ್ಲಾಡಿಸಿ, ಸ್ವಲ್ಪ ನಕ್ಕೆ.

 ಒಬ್ಬಳೇ ಚಿಕ್ಕ ಮಗನೊಂದಿಗೆ ಮೈಸೂರಿನಿಂದ ಬೆಂಗಳೂರಿಗೆ ಬರಬೇಕಾದ ಆ ಸಂದರ್ಭದಲ್ಲಿ ಮಗನನ್ನ ನಿಭಾಯಿಸಲು ಮೊಬೈಲ್‌ ಕೊಡಲೇಬೇಕಾಗಿತ್ತು. ಆದರೆ, ನನ್ನ  3 ವರ್ಷದ ಪೋರನ ಕೈಯಲ್ಲಿರೋ ಮೊಬೈಲ್‌ನ್ನ ಬಸ್ಸು ಹತ್ತಿದ ತಕ್ಷಣ ಕಿತ್ತುಕೊಳ್ಳುವಷ್ಟು ಧೈರ್ಯ ನನಗಿರಲಿಲ್ಲ. ಯಾಕಂದ್ರೆ ಬಸ್ಸಿನಲ್ಲಿ ನೆಲೆಸಿದ್ದ ಶಾಂತಿ ಕೆಡಿಸೋಕೆ ನನಗೆ ಮನಸಿರಲಿಲ್ಲ. ಹೇಳಿಕೇಳಿ ಓಲ್ವೋ ಬಸ್ಸು. ಮಟ ಮಟ ಮಧ್ಯಾಹ್ನ ಬೇರೆ.  ಸರಿಯಾಗಿ 1.30ಕ್ಕೆ ಮೈಸೂರು ಬಿಟ್ಟ ಬಸ್ಸಿನಲ್ಲಿರೋರೆಲ್ರೂ ಗಡದ್ದಾಗಿ ಉಂಡು ಬಂದು, ಬಸ್ಸೊಳೊಗೆ ಮಲಗಿದ್ರು. ಬಸ್ಸು ಹೊರಡೋಕೂ ಮುಂಚೇನೇ ಗೊರಕೆಗಳು  ಕೂಡ ಕೇಳಿಬರ್ತಾ ಇದ್ವು. ಅಲ್ಲಿದ್ದ ಕೆಲವೇ ಕೆಲವು ಯುವಕ ಯುವತಿಯರು ಕೂಡ ಮೊಬೈಲ್‌ ಲೋಕದೊಳಗೆ ಮೈಮರೆತಿದ್ದರು.

 ಇಂತಿಪ್ಪ ಆ ಸಂದರ್ಭದಲ್ಲಿ, ನನ್ನ ಮಗನ ಕೈಯ್ಯಲ್ಲಿದ್ದ ಮೊಬೈಲ್‌ ಕಿತ್ತುಕೊಂಡಿದ್ರೆ ಸುಖ ನಿದ್ದೆಯಲ್ಲಿದ್ದವ್ರನ್ನೆಲ್ಲ ಎಬ್ಬಿಸಿದ ಪಾಪ ನನಗೆ ಸುತ್ತಿಕೊಳ್ತಿತ್ತಿತ್ತು.   ಸ್ವಲ್ಪ ಹೊತ್ತಿನ ನಂತರ ’ಪುಟ್ಟಾ ಮೊಬೈಲ್‌ಕೊಡಪ್ಪ ಅಪ್ಪಂಗೊಂದು ಫೋನ್‌ಮಾಡ್ತೀನಿ ’ ಅಂದೆ.   ಪೋರ ತನ್ನ ಪುಟ್ಟ ಕೈಲಿದ್ದ ದೊಡ್ಡ ಮೊಬೈಲ್‌ಎತ್ತಿ ಕೊಟ್ಟ.  ಆಗ ನಾನು ಫೋನ್‌ಮಾಡಿದಂತೆ ನಾಟಕ ಮಾಡಿ, ಅಲ್ಲೇ ಡೇಟಾ ಆಫ್‌ಮಾಡಿ ಅವನಿಗೆ ವಾಪಾಸ್‌ಕೊಟ್ಟೆ. ಮತ್ತೆ ಯೂಟ್ಯೂಬ್‌ಆಪ್‌ವತ್ತಿದ ಅವನಿಗೆ ಕಂಡಿದ್ದು,  ‘ಯೂ ಆರ್‌ಆಫ್‌ಲೈನ್‌’ ಅನ್ನೋ ಅಕ್ಷರಗಳು.  ಅಮ್ಮ ಮೊಬೈಲ್‌ಹಾಳಾಗ್ಹೋಯ್ತುಅನ್ನುತ್ತಾ ಆಕಳಿಸಿದ.  ಅದು ಅವನ ನಿದ್ದೆ ಸಮಯ ಕೂಡ ಆಗಿದ್ದ ಕಾರಣಅವನನ್ನ ಕಾಲಮೇಲೆ ಮಲಗಿಸಿಕೊಂಡು ನಿದ್ದೆ ಮಾಡಿಸಿಬಿಟ್ಟೆ. ಇದೆಲ್ಲ ಗಮನಿಸ್ತಾ ಇದ್ದ ಪಕ್ಕದ ಸೀಟ್‌ನ ಮೇಡಮ್‌ತಾವು ತಮ್ಮ ಮೊಬೈಲ್‌ನೋಡುತ್ತಲೇ ಕಿರುನಗೆ ನಕ್ಕರು.

 ಇತ್ತೀಚೆಗೆ ನನ್ನಂಥ ತಾಯಂದಿರಿಗೆ ಇಂಥ ಪುಗಸಟ್ಟೆ ಸಲಹೆಗಳು ಸಾಮಾನ್ಯವಾಗ್ಬಿಟ್ಟಿದೆ ಬಿಡಿ.  ಎಲ್ಲೆಲ್ಲಿ ಅಂತೀರಾ..? ಡಾಕ್ಟರ್‌ಕ್ಲಿನಿಕ್‌ನ ಕೋಪೇಶೆಂಟ್ಸ್‌ನಿಂದ ಹಿಡಿದು , ಕ್ಯಾಬ್ ಡ್ರೈವರ್‌, ಬಸ್‌ಕಂಡಕ್ಟರ್‌, ಎಟಿಎಮ್‌ಮುಂದೆ ಕೂತಿರೋ ಸೆಕ್ಯೂರಿಟಿ ಗಾರ್ಡ್‌ತನಕ ಯಾರ‍್ಯಾರೋ ಅಪರಿಚಿತ ಅಂಕಲ್ ಆಂಟಿಯರು ಮೊಬೈಲ್‌ಕುರಿತ ಆಪ್ತಸಲಹೆ ನೀಡಿದ್ದಾರೆ.  ನಾನು ಅವರೆಲ್ಲರಿಗೂ ಹಿಂದಿರುಗಿಸೋದು `ಹೂಂಎಂಬ ನಗುಯುಕ್ತ ಒಪ್ಪಿಗೆ ಮಾತ್ರ.

 ಹಾಂ. ಸೆಕ್ಯೂರಿಟಿ ಗಾರ್ಡ್‌ಕಥೆಯನ್ನ ನಾನಿಲ್ಲಿ ನಿಮಗೆ ಹೇಳಿಲ್ಲ ಅಂದರೆ ಸ್ವಾರಸ್ಯವೇ ಇರಲ್ಲ.  ಒಂದಿನ ಸಂಜೆ ತರಕಾರಿ ತರೋಕೆ ಹೊರಟಿರೋ ನನ್ನ ಪರ್ಸ್‌ನಲ್ಲಿ 10 ರೂಪಾಯಿ ನೋಟು ಬಿಟ್ಟರೆ ಇನ್ನೇನು ಇರ್ಲಿಲ್ಲ. ಹೀಗಾಗಿ ಎಟಿಎಂಗೆ ಹೋಗಲೇ ಬೇಕಾದ ಪರಿಸ್ಥಿತಿ ಬಂತು. ಮನೆಯಲ್ಲಿ ಮತ್ಯಾರೂ ಇಲ್ಲದ ಕಾರಣ, ನಾನೆಲ್ಲಿ ಹೊರಟರೂ ನನ್ನ ಜತೆ ನನ್ನ ಮಗ ಇನ್‌ಬಿಲ್ಟ್‌ ಸಾಫ್ಟ್‌ವೇರ್‌. ಅವನ್ನೂ ಕರ್ಕೊಂಡೇ ಮನೆ ಹತ್ತಿರವಿರೋ ಎಟಿಎಂಗೆ ಹೋದೆ. ನನ್ನ ದುರಾದೃಷ್ಟಕ್ಕೆ ಆವತ್ತಲ್ಲಿ 8 ರಿಂದ 10 ಜನರ ಉದ್ದಾನುದ್ದ ಕ್ಯೂ ಇತ್ತು.  ಸಾಯ್ಲಿ ಇವತ್ತು ಹಣ ತೆಗೆಯೋದೇ ಬೇಡ ಅಂತ ವಾಪಾಸ್ ಬರೋಕೂ    ಆಗ್ದೆ, ಕ್ಯೂನಲ್ಲಿ ನಿಲ್ಲೋದು ಅನಿವಾರ್ಯವಾಯ್ತು.  ಇದೇ ಸಮಯಕ್ಕಾಗಿ ಕಾಯ್ತಾ ಇದ್ದ ನನ್ನ ಮಗ ಮೊಬೈಲ್‌ಕೇಳಿದ. ನಾನು ಮೊಬೈಲ್‌ಕೊಟ್ಟುಬಿಟ್ಟೆ.  ನಮ್ಮನ್ನ ಗಮನಿಸುತ್ತಾ ಇದ್ದ ಎಟಿಎಂನ ಸೆಕ್ಯೂರಿಟಿ ಗಾರ್ಡ್‌‘ಮಕ್ಕಳಿಗೆ ಮೊಬೈಲ್‌ಕೊಡಬಾರದಮ್ಮ’ ಅಂದರು.  ಆ ಕ್ಯೂ ನೋಡಿನೇ ತಲೆ ಕೆಟ್ಟುಹೋಗಿದ್ದ ನನಗೆ, ಅವರ ಆ ಮಾತು ಕೇಳಿ ಕಿರಿಕಿರಿಯಾಯ್ತು. ಆಗಿದಾಂಗ್ಗೆ ನನ್ನ ಮಗನ ಕೈಲಿದ್ದ ಮೊಬೈಲ್‌ ಕಿತ್ತುಕೊಂಡೆ. ನನ್ನ ಮಗ ಅಲ್ಲೇ ರಂಪಾಟ ಶುರುಮಾಡಿದ.  ಮೊಬೈಲ್‌ಬೇಕೆ ಬೇಕು ಅಂತ ನಿಂತಲ್ಲೇ ಕುಣಿದ. ಹಟ ಹಿಡಿದು ಕೂತು ಉರುಳಾಡಿದ. ಕ್ಯೂನಲ್ಲಿದ್ದ ಎಲ್ಲರೂ ತಮ್ಮತಮ್ಮ ಮೊಬೈಲ್‌ನಲ್ಲಿ ನೆಟ್ಟಿದ್ದ ಕಣ್ಣುಗಳನ್ನ ಒಮ್ಮೆ ತೆಗೆದು ನಮ್ಮಿಬ್ಬರನ್ನೂ ನೋಡಿ, ಮತ್ತೆ ಮೊಬೈಲ್‌ನಲ್ಲಿ ತಲ್ಲೀನರಾದರು. ಎಷ್ಟು ಕೂಗಾಡಿದ್ರೂ ಮೊಬೈಲ್‌ಕೊಡಲೇಬಾರದು ಅಂತ ನಾನೂ ಹಠ ಹಿಡಿದೆ.   ನನ್ನ ಸರದಿ ಬರೋವರೆಗೂ ನನ್ನ ಮಗ ಅಳ್ತಾನೇ ಇದ್ದ.   ಸೆಕ್ಯೂರಿಟಿ ಗಾರ್ಡ್‌‌ಗೆ ಅದೇನೋ ಅಪರಾಧಿ ಪ್ರಜ್ನೆ ಕಾಡಿರಬೇಕು, ನಾನು ಹಣ ಪಡಕೊಂಡು ವಾಪಾಸ್ ಬರುವಾಗ ಸಾರಿ ಮೇಡಮ್‌, ಮಗು ಇಷ್ಟೊಂದು ಅಳುತ್ತೆ ಅಂತ ಗೊತ್ತಿರಲಿಲ್ಲ, ಅಂದ.  ನಾನು ಇರ್ಲಿಬಿಡಿ , ನೀವ್‌ಹೇಳಿದ್ರಲ್ಲಿ ತಪ್ಪೇನಿಲ್ವಲ್ಲಾ.. ಅಂತ್ಹೇಳಿ ಅಲ್ಲಿಂದ ಮಗನನ್ನ ಕರ್ಕೊಂಡು ಹೊರಟೆ.  ಆ ಸೆಕ್ಯುರಿಟಿ ಗಾರ್ಡ್‌ಇನ್ನೆಂದೂ ಮತ್ಯಾರಿಗೂ ಈ ಸಲಹೆ ಕೊಡೋ ಗೋಜಿಗೇ ಹೋಗಲ್ವೇನೋ.. ಅಂಥ ಪಾಠ ಕಲಿಸಿಬಿಟ್ಟ ನನ್ನ ಮಗ.

 ಮನೆಯಿಂದ ಹೊರಹೊರಟಾಗ, ಅದೂ ವಿಶೇಷವಾಗಿ ಕಾಯುವ ಪರಿಸ್ಥಿತಿ ಇದೆ ಎಂದು ಗೊತ್ತಿದ್ದಾಗ,   ಕಥೆಪುಸ್ತಕಗಳನ್ನ, ಆಟಿಗೆಗಳನ್ನ, ತಿಂಡಿಗಳನ್ನ ಇಟ್ಟುಕೊಂಡು ಹೋಗಿ ಮೊಬೈಲ್‌ಕೊಡದೇ ನನ್ನ ಮಗನನ್ನ ಮ್ಯಾನೇಜ್‌ಮಾಡೋಕೆ ಪ್ರಾಮಾಣಿಕವಾಗಿ ಪ್ರಯತ್ನಪಡ್ತೀನಿ.  ಆದರೆ ಅದ್ಯಾವುದೂ ಅಂಥ ಯಶ ಕಂಡಿಲ್ಲ. ಇದೆಲ್ಲದರಿಂದ ಅವನ ಮೊಬೈಲ್‌ಬೇಡಿಕೆಯನ್ನ ಒಂದರ್ಧ ಗಂಟೆ ಮುಂದೂಡಬಹುದೇ ಹೊರತುಮೊಬೈಲ್‌ನೆನಪನ್ನೇ ಮರೆಮಾಚೋಕೆ ಸಾಧ್ಯವಿಲ್ಲ. ಯಾಕಂದ್ರೆನನ್ನ ಹಾಗೇ ಸರದಿಗಾಗಿ ಕಾಯುತ್ತಿರುವವರೆಲ್ಲರ ಕೈಯಲ್ಲಿಯೂ ಮೊಬೈಲ್‌ಇರೋ ಕಾರಣ, ನಾನು ಮುಚ್ಚಿಟ್ಟರೂ ಅವನಿಗೆ ಮೊಬೈಲ್‌ನೆನೆಪಾಗಿಬಿಡುತ್ತೆ.  ಇದಕ್ಕೇನು ಮಾಡೋಣ ಹೇಳಿ. ಎಲ್ಲರ ಬಳಿ ಹೋಗಿ, ನನ್ನ ಮಗ ಮೊಬೈಲ್‌ಗಾಗಿ ಅಳ್ತಾನೆ, ನೀವು ಸ್ವಲ್ಪ ಹೊತ್ತು ಮೊಬೈಲ್‌ಮುಚ್ಚಿಡಿ ಅನ್ನೋಕಾಗುತ್ತಾ..?

 ಇನ್ನು ಒಂದು ಜನರೇಶನ್ ‌ಹಿಂದಿನ  ಜನರಿಗಂತೂ ಈಗಿನ ತಂದೆ ತಾಯಿಯರನ್ನ ಕಂಡರೆ, ಅದೇನೋ ಅಸಡ್ಡೆ, ಮಕ್ಕಳಿಗೆ ಮೊಬೈಲ್‌ಎಡಿಕ್ಟ್‌ಮಾಡಿಸ್ತಾರೆ. ಮೊಬೈಲ್‌ಇಲ್ಲದೆ ನಿಭಾಯಿಸೋದೇ ಈಗಿನವರಿಗೆ ಗೊತ್ತಿಲ್ಲ, ನಾವೆಲ್ಲ ಮಕ್ಕಳನ್ನ ಬೆಳಸಲೇ ಇಲ್ವಾ..? ಆಗೇನು ಮೊಬೈಲ್‌ ಇದ್ವಾ..ಎಂಬುದು ಅವರ ಆರೋಪ.   ಹೌದು ಸ್ವಾಮಿ.. ಆ ಕಾಲದಲ್ಲಿ ಮೊಬೈಲ್‌ಎಂಬ ಮಾಯದ ವಸ್ತು ಅಸ್ತಿತ್ವದಲ್ಲಿಯೇ ಇಲ್ಲದಾಗ ಆಗಿನ ಮಕ್ಕಳೆಲ್ಲಿಂದ ಮೊಬೈಲ್‌ಕೇಳಿಯಾರು..? ಅಂದಿಗೂ ಇಂದಿಗೂ ಕಂಪೇರ್‌ಮಾಡೋಕೆ ಹೇಗೆ ಸಾಧ್ಯ ಹೇಳಿ? ಅಂದು ಮನೆತುಂಬಾ ಜನ ಇರ್ತಿದ್ರು.  ಒಬ್ಬರಲ್ಲ ಒಬ್ಬರು ಮನೆಯ ಮಕ್ಕಳನ್ನ ನೋಡಿಕೊಳ್ತಾ ಇದ್ರು. ತಾಯಿಯಾದವಳೇ ಸದಾಕಾಲ ಮಗುವಿನ ಸರ್ವಕೆಲಸಗಳನ್ನೂ ಮಾಡಬೇಕು ಎಂಬ ಅನಿವಾರ್ಯತೆ ಈಗಿನಷ್ಟು ಅಂದು ಎಲ್ಲರಿಗೂ ಇರಲಿಲ್ಲ.  ಮನೆಯಲ್ಲಿರೋ ಮಗುವಿಗೆ ಊಟ ಮಾಡಿಸೋಕೆ ಅಜ್ಜಿನೋ, ಅತ್ತೆನೋ, ಚಿಕ್ಕಮ್ಮನೋ ನಾಯಿ, ಕುರಿ, ಕೋಳಿ, ಆಟೋ, ಬೈಕು  ತೋರಿಸ್ತಾ ಊರೆಲ್ಲ ಸುತ್ತುತ್ತಾ ಇದ್ರು.  ಈಗ ಸಾಮಾನ್ಯವಾಗಿ ಮನೆಯಲ್ಲಿ ಬೇರೆ ಯಾರೂ ಇರೋದೂ ಇಲ್ಲ, ತಂದೆ-ತಾಯಿಗೆ ಪುರುಸೊತ್ತೂ ಇಲ್ಲ,   ಮೊಬೈಲ್‌ಇರೋದ್ರಿಂದ ಆ ಜರೂರತ್ತೂ ಇಲ್ಲ.  ಅಲ್ಲದೇ ಇಡೀ ಸಮಾಜಕ್ಕೆ ಸಮಾಜವೇ ಮೊಬೈಲ್‌ಗೆ ಎಡಿಕ್ಟ್‌ಆಗಿರುವಾಗ, ಮಕ್ಕಳನ್ನ ಮಾತ್ರ ಮೊಬೈಲ್‌ನಿಂದ ದೂರ ಇಡಿ ಅಂದ್ರೆ ಅದು ಸಾಧ್ಯವಾಗದ ಮಾತು ಅಲ್ವೇ..?   

 ಮೊಬೈಲ್ ‌ರೇಡಿಯೇಶನ್‌ ಮಕ್ಕಳ ತಲೆ, ಹೃದಯಕ್ಕೆ ಹಾನಿಯುಂಟುಮಾಡುತ್ತೆ, ಅವರಿಗೆ ನಿದ್ದೆಯ ತೊಂದರೆ ಕಾಡುತ್ತೆ, ಸೃಜನಾತ್ಮಕತೆಯನ್ನ ಕಡಿಮೆ ಮಾಡುತ್ತೆ, ಮಕ್ಕಳಲ್ಲಿ ಯೋಚನಾಶಕ್ತಿ ಕುಂದುತ್ತೆ, ಮೊಬೈಲ್‌ಗೆ ಎಡಿಕ್ಟ್‌ಆಗಿರುವ ಮಗುವಿಗೆ ಸ್ಥೂಲಕಾಯ ಬರುತ್ತೆ, ಎಂಬೆಲ್ಲ ಸಂಶೋಧನಾಕಾರರ ಲೇಖನಗಳನ್ನ ಓದಿದಾಗ ನಿಜಕ್ಕೂ ನಮ್ಮಂತ ತಾಯಂದಿರ ಜಂಗಾಬಲವೇ ಉಡುಗಿಹೋಗುತ್ತೆ. ಮಕ್ಕಳಿಗೆ ಮೊಬೈಲ್‌ಕೊಟ್ಟು, ಅವರನ್ನ ಇಂಥ ಎಲ್ಲ ಸಮಸ್ಯೆಗಳೆದುರು ಕೂರಿಸಬೇಕು ಎಂಬ ಆಸೆಯಂತೂ ಖಂಡಿತ ನಮ್ಮದಲ್ಲ. ಇದೊಂದು ಅನಿವಾರ್ಯ ಅಷ್ಟೆ.  ತಾಯಿಯಾದವಳು ಎಲ್ಲವನ್ನೂ ಒಬ್ಬಳೇ ನಿಭಾಯಿಸಬೇಕಾಗಿ ಬಂದಾಗ, ಮಗುವನ್ನ ಸಮಾಧಾನ ಪಡಿಸಲು ಕೈಗೆ ಸಿಗುವ ಸುಲಭ ಸಾಧನ ಇದು ಅಷ್ಟೆ.  ಇಂದಿನ ಮೈಕ್ರೋ ಫ್ಯಾಮಿಲಿಗಳುಗಂಡ ಹೆಂಡತಿ ಇಬ್ಬರೂ ದುಡಿಯಲೇಬೇಕಾಗಿರುವ  ಪರಿಸ್ಥಿತಿಮೈಗ್ರೇಶನ್‌, ಆಧುನಿಕ ಜಗತ್ತು, ಧಾವಂತದ ಜೀವನ, ಪೋಷಕರಲ್ಲಿ ತಾಳ್ಮೆಯ ಕೊರತೆಇದೆಲ್ಲವೂ ಮಕ್ಕಳ ವಿಪರೀತ ಮೊಬೈಲ್‌ಬಳಕೆಗೆ  ಇರುವ ಪರೋಕ್ಷ ಕಾರಣಗಳು.

 ನನ್ನ ಪರಿಚಯಸ್ತರೊಬ್ಬರು, ತಾವು ತಮ್ಮ ಮಗಳಿಗೆ ಮೊಬೈಲ್‌ಕೊಡಲ್ಲ, ಅವಳಿಗೆ ಮೊಬೈಲ್‌ ಯೂಸೇಜ್ ‌ಗೊತ್ತೇ ಇಲ್ಲ. ಯಾವ ಸ್ಕ್ರೀನ್‌ ಅಡಿಕ್ಷನ್ನೂ ಅವಳಿಗಿಲ್ಲ. ಹಾಗೆ ಬೆಳೆಸಿದ್ದೀನಿ ನಾನು ನನ್ನ ಮಗಳನ್ನ. ಅಂತ್ಹೇಳಿ, ನನಗೆ ಟಾಂಗ್‌ಕೊಟ್ಟಿದ್ರು. ಒಂದಿನ ಸಂಜೆ ನನ್ನ ಅತ್ತೆ ಜತೆ ಕುಳಿತಿದ್ದ ಅವರ  9 ವರ್ಷದ ಮಗಳುನನ್ನ ಅತ್ತೆಗೆ ಮೊಬೈಲ್‌ಬಳಕೆಯ ಬಗ್ಗೆ ಹೇಳಿಕೊಡ್ತಾ ಇದ್ಲು.  ನನಗೆ ಆಶ್ಚರ್ಯವಾಯ್ತು.  ಅವಳನ್ನ ಕೇಳಿದೆ, ಮೊಬೈಲ್‌ಯೂಸ್ ಮಾಡೋಕೆ ನಿಂಗೆ ಗೊತ್ತಾ..? ಅಂತ.  ಸ್ಕೂಲ್‌ನಲ್ಲಿ ನನ್ನ ಫ್ರೆಂಡ್ಸ್‌ಎಲ್ರೂ ಮೊಬೈಲ್‌ಬಗ್ಗೆ, ಹೊಸ ಹೊಸ ಆಪ್‌ಬಗ್ಗೆ ಮಾತಾಡುವಾಗ, ನಂಗೆ ಬೇಜಾರಾಗ್ತಿತ್ತು ಆಂಟೀಅದಿಕ್ಕೆ ಅಮ್ಮಂಗೆ ಗೊತ್ತಿಲ್ದೇ ಕದ್ದು ಮೊಬೈಲ್ ‌ನೋಡ್ತೀನಿ , ಪ್ಲೀಸ್ ಅಮ್ಮಂಗೆ ಹೇಳ್ಬೇಡಿ ಅಂದಿದ್ಲು. ಅಂದು ನಂಗೆ ನಿಜಕ್ಕೂ ಅವಳ ಮಾತು ಕೇಳಿ ಪಾಪ ಅನ್ನಿಸಿತ್ತು.  ಮಕ್ಕಳಿಗೆ ಮೊಬೈಲ್ ‌ಕೊಡಲೇಬಾರದು ಅಂತ ನಾವು ಮೊಂಡಾಟ ಮಾಡಿದರೆ, ಮಕ್ಕಳು ಬಿಡಲ್ಲ.  ನೀವು ಕೊಟ್ಟಿಲ್ಲ ಅಂದ್ರೆ, ಕೊಡುವವರ ಹತ್ತಿರ ತಗೋತಾರೆ, ಇಲ್ಲ ಅಂದ್ರೆ, ನಿಮ್ಮದೇ ಮೊಬೈಲ್‌ನ್ನ ಕದ್ದು ನೋಡ್ತಾರೆ ಅಷ್ಟೆ.  ಇದೆಲ್ಲದಕ್ಕಿಂತ ನಾವೇ ಮೊಬೈಲ್‌ನ್ನ ಕೊಟ್ಟು, ದಿನಕ್ಕೆ ಇಷ್ಟೇ  ಸಮಯ ಅಂತ ನಿಗದಿ ಮಾಡೋದು ಒಳ್ಳೇದಲ್ವೇ..? ಅಂತ ಮನಸ್ಸಿನಲ್ಲೇ ಅಂದುಕೊಂಡಿದ್ದೆ.

 ಆದ್ರೆ, ಕೊರೋನಾ ಬಂದಿದ್ದೇ ಬಂದಿದ್ದು, ಎಲ್ಲವೂ ಬದಲಾಗಿಬಿಡ್ತು.  ತನ್ನದೇ ಆದ ಸ್ವಂತ ಮೊಬೈಲ್‌ನನ್ನ ಕೈಗೆ ಯಾವಾಗಪ್ಪಾ ಬರುತ್ತಪ್ಪಾ ಅಂತ ಕಾಯ್ತಾ ಇದ್ದಮೊಬೈಲ್‌ಗಾಗಿ ಅಪ್ಪ ಅಮ್ಮನ ಹತ್ತಿರ ಬೇಡ್ತಾ ಇದ್ದ ಮಕ್ಕಳ ಕೈಗೆ ಸ್ವತಃ ಕೊರೋನಾ ಮೊಬೈಲ್‌ಕೊಟ್ಟುಬಿಡ್ತು. ಆನ್‌ಲೈನ್‌ಪಾಠಕ್ಕಾಗಿ ಮೊಬೈಲ್ ಪಡೆದ ಅದೆಷ್ಟು ಮಕ್ಕಳು ಕೊರೊನಾಕ್ಕೆ ಥ್ಯಾಂಕ್ಯೂ ಹೇಳ್ತಿದ್ದಾರೋ ಏನೋ. 

 ಅಂದು ಮಕ್ಕಳ ಪಾಲಿಗೆ ಮನೋರಂಜನೆಗೆ ಮಾತ್ರ ಸೀಮಿತವಾಗಿದ್ದ ಮೊಬೈಲ್‌ಈಗ ಕಲಿಕೆಗಾಗಿ  ಪುಸ್ತಕ, ಪೆನ್ನಿನಷ್ಟೇ ಮುಖ್ಯವಾಗಿಬಿಟ್ಟಿದೆ.  ಶಾಲಾ ಕಲಿಕೆಯ ಜತೆಗೆ ಮಗುವಿನ ವಯಸ್ಸಿಗನುಗುಣವಾಗಿ ಎಷ್ಟೆಷ್ಟೋ ಹೊಸ ಹೊಸ ಎಜುಕೇಶನಲ್‌ಆಪ್‌ಗಳು ಬರುತ್ತಿವೆ.  ಎಜುಕೇಶನಲ್ ಗೇಮ್‌ಗಳು ಪರಿಚಿತಗೊಳ್ಳುತ್ತಿವೆ. ಇವೆಲ್ಲದರ ಉಪಯೋಗ ಮಕ್ಕಳಿಗೆ ಸಿಗಬೇಕು ಅಂದ್ರೆ, ಅವರ ಕೈಯ್ಯಲ್ಲಿ ಮೊಬೈಲ್‌ಕೊಡಲೇಬೇಕು.  ಈಗಿನ ಜಗತ್ತೇ ಹೀಗಿದೆ. ಆದರೆ ಒಳ್ಳೆಯದರ ಜತೆ ಕೆಟ್ಟದ್ದೂ ಇರೋ ಇಂಟರ್‌ನೆಟ್‌ಎಂಬ ಮಹಾ ಸಮುದ್ರದಲ್ಲಿ ಮುಳುಗಿರೋ ಮಕ್ಕಳು ಅಲ್ಲಿಂದ ಏನು ಕಲಿಯುತ್ತಿದ್ದಾರೆ ಎಂಬ ಬಗ್ಗೆ ಪೋಷಕರು ಗಮನ ಕೊಡುತ್ತಾ ಅವರಿಗೆ ಸಲಹೆ ನೀಡುತ್ತಿದ್ದರೆ ಮೊಬೈಲ್‌ನಿಂದ್ಲೂ  ಮಕ್ಕಳು ಸಾಕಷ್ಟು ತಿಳಿಯುತ್ತಾರೆ.  

 ಆದರೆ, ಅನಿವಾರ್ಯ ಪರಿಸ್ಥಿತಿಯಲ್ಲಿ ಮಾತ್ರ ಮೊಬೈಲ್‌ಕೊಟ್ಟು, ನಿಭಾಯಿಸಬಹುದಾದ ಅವಕಾಶವಿದ್ದಾಗ, ಆದಷ್ಟು ಮೊಬೈಲ್‌ನಿಂದ ಮಕ್ಕಳನ್ನ ದೂರ ಇಡೋಕೆ ಇಂದಿನ ಅಪ್ಪಅಮ್ಮ ಪ್ರಯತ್ನಪಡಬೇಕು ಎಂಬುದನ್ನ ನಾವೆಲ್ಲರೂ ಒಪ್ಪಲೇಬೇಕು. ಅಲ್ವೇ..? ನೀವೇನಂತೀರಿ..?

 

 

 

 


“ಕ್ಯಾನ್ಸರ್‌”

  ಕಟ-ಕಟ ಕಟ-ಕಟ ಶಬ್ಧ ಲಯದಂತೆ ಕಿವಿಗೆ ಅಪ್ಪಳಿಸುತ್ತಾ ಅಪ್ಪಳಿಸುತ್ತಾ, ಕಣ್ಣು ಎಳೆದಂತಾಗಿ ನಿದ್ದೆಯ ಮಂಪರಿನಲ್ಲಿದ್ದಾಗಲೇ, ಮೇಲಿನ ಸೀಟ್‌ಮೇಲೆ ಇಟ್ಟಿದ್ದ ಬ್ಯಾಗ್‌ ಒಂದು...