Friday, 6 November 2020

ಎಲ್ಲರ ಹತ್ತಿರ ಹೋಗಿ, ನನ್ನ ಮಗ ಅಳ್ತಾನೆ ಮೊಬೈಲ್‌ ಮುಚ್ಚಿಡಿ ಅನ್ನೋಕಾಗುತ್ತಾ..?

 

 

ಅದೊಂದು ಕೊರೊನಾ ಪೂರ್ವ ಕಾಲ.  3 ವರ್ಷದ ಮಗುವನ್ನು ಎತ್ತಿಕೊಂಡ ನಾನು, ಕೈಯ್ಯಲ್ಲೊಂದು, ಬೆನ್ನಿಗೊಂದು ಬ್ಯಾಗ್‌ ಏರಿಸಿಕೊಂಡು ಏದುಸಿರು ಬಿಡುತ್ತಾ ಬಸ್‌ಹತ್ತಿದ್ದೆ.  ದೇವರ ದಯೆಯಿಂದ ಕುಳಿತುಕೊಳ್ಳೋಕೆ ಸೀಟ್‌ಕೂಡಾ ಸಿಕ್ತು. ಮೊಬೈಲ್‌ಕೈಯ್ಯಲ್ಲಿ ಹಿಡಿದಿದ್ದ ನನ್ನ ಮಗನನ್ನು ಸೀಟ್‌ಮೇಲೆ ಕೂರಿಸಿ ಲಗೇಜ್‌ ಇಟ್ಟು ನಾನೂ ಕುಳಿತುಕೊಳ್ಳುವಷ್ಟರಲ್ಲಿ  ಏನಮ್ಮಾ...ಯಾಕಮ್ಮಾ ಮಗು ಕೈಯ್ಯಲ್ಲಿ ಮೊಬೈಲ್‌  ಕೊಟ್ಟಿದೀಯಾ..? ಮಕ್ಕಳಿಗೆ ಮೊಬೈಲ್‌ ಕೊಡಬಾರದಮ್ಮ.. ಎಂಬ ಅಶರೀರವಾಣಿಯೊಂದು ನನ್ನ ಕಿವಿಗೆ ಬಿತ್ತು. ತಿರುಗಿ ನೋಡಿದ್ರೆ, ನನ್ನ ಪಕ್ಕದ ಸೀಟಿನಲ್ಲಿ ಒಬ್ಬ್ರು ಕನ್ನಡಕಧಾರಿ ಮೇಡಮ್‌ ಕೂತಿದ್ರು. ನಾನೋ ಹೂಂ ಅನ್ನುವಂತೆ ಗೋಣು ಅಲ್ಲಾಡಿಸಿ, ಸ್ವಲ್ಪ ನಕ್ಕೆ.

 ಒಬ್ಬಳೇ ಚಿಕ್ಕ ಮಗನೊಂದಿಗೆ ಮೈಸೂರಿನಿಂದ ಬೆಂಗಳೂರಿಗೆ ಬರಬೇಕಾದ ಆ ಸಂದರ್ಭದಲ್ಲಿ ಮಗನನ್ನ ನಿಭಾಯಿಸಲು ಮೊಬೈಲ್‌ ಕೊಡಲೇಬೇಕಾಗಿತ್ತು. ಆದರೆ, ನನ್ನ  3 ವರ್ಷದ ಪೋರನ ಕೈಯಲ್ಲಿರೋ ಮೊಬೈಲ್‌ನ್ನ ಬಸ್ಸು ಹತ್ತಿದ ತಕ್ಷಣ ಕಿತ್ತುಕೊಳ್ಳುವಷ್ಟು ಧೈರ್ಯ ನನಗಿರಲಿಲ್ಲ. ಯಾಕಂದ್ರೆ ಬಸ್ಸಿನಲ್ಲಿ ನೆಲೆಸಿದ್ದ ಶಾಂತಿ ಕೆಡಿಸೋಕೆ ನನಗೆ ಮನಸಿರಲಿಲ್ಲ. ಹೇಳಿಕೇಳಿ ಓಲ್ವೋ ಬಸ್ಸು. ಮಟ ಮಟ ಮಧ್ಯಾಹ್ನ ಬೇರೆ.  ಸರಿಯಾಗಿ 1.30ಕ್ಕೆ ಮೈಸೂರು ಬಿಟ್ಟ ಬಸ್ಸಿನಲ್ಲಿರೋರೆಲ್ರೂ ಗಡದ್ದಾಗಿ ಉಂಡು ಬಂದು, ಬಸ್ಸೊಳೊಗೆ ಮಲಗಿದ್ರು. ಬಸ್ಸು ಹೊರಡೋಕೂ ಮುಂಚೇನೇ ಗೊರಕೆಗಳು  ಕೂಡ ಕೇಳಿಬರ್ತಾ ಇದ್ವು. ಅಲ್ಲಿದ್ದ ಕೆಲವೇ ಕೆಲವು ಯುವಕ ಯುವತಿಯರು ಕೂಡ ಮೊಬೈಲ್‌ ಲೋಕದೊಳಗೆ ಮೈಮರೆತಿದ್ದರು.

 ಇಂತಿಪ್ಪ ಆ ಸಂದರ್ಭದಲ್ಲಿ, ನನ್ನ ಮಗನ ಕೈಯ್ಯಲ್ಲಿದ್ದ ಮೊಬೈಲ್‌ ಕಿತ್ತುಕೊಂಡಿದ್ರೆ ಸುಖ ನಿದ್ದೆಯಲ್ಲಿದ್ದವ್ರನ್ನೆಲ್ಲ ಎಬ್ಬಿಸಿದ ಪಾಪ ನನಗೆ ಸುತ್ತಿಕೊಳ್ತಿತ್ತಿತ್ತು.   ಸ್ವಲ್ಪ ಹೊತ್ತಿನ ನಂತರ ’ಪುಟ್ಟಾ ಮೊಬೈಲ್‌ಕೊಡಪ್ಪ ಅಪ್ಪಂಗೊಂದು ಫೋನ್‌ಮಾಡ್ತೀನಿ ’ ಅಂದೆ.   ಪೋರ ತನ್ನ ಪುಟ್ಟ ಕೈಲಿದ್ದ ದೊಡ್ಡ ಮೊಬೈಲ್‌ಎತ್ತಿ ಕೊಟ್ಟ.  ಆಗ ನಾನು ಫೋನ್‌ಮಾಡಿದಂತೆ ನಾಟಕ ಮಾಡಿ, ಅಲ್ಲೇ ಡೇಟಾ ಆಫ್‌ಮಾಡಿ ಅವನಿಗೆ ವಾಪಾಸ್‌ಕೊಟ್ಟೆ. ಮತ್ತೆ ಯೂಟ್ಯೂಬ್‌ಆಪ್‌ವತ್ತಿದ ಅವನಿಗೆ ಕಂಡಿದ್ದು,  ‘ಯೂ ಆರ್‌ಆಫ್‌ಲೈನ್‌’ ಅನ್ನೋ ಅಕ್ಷರಗಳು.  ಅಮ್ಮ ಮೊಬೈಲ್‌ಹಾಳಾಗ್ಹೋಯ್ತುಅನ್ನುತ್ತಾ ಆಕಳಿಸಿದ.  ಅದು ಅವನ ನಿದ್ದೆ ಸಮಯ ಕೂಡ ಆಗಿದ್ದ ಕಾರಣಅವನನ್ನ ಕಾಲಮೇಲೆ ಮಲಗಿಸಿಕೊಂಡು ನಿದ್ದೆ ಮಾಡಿಸಿಬಿಟ್ಟೆ. ಇದೆಲ್ಲ ಗಮನಿಸ್ತಾ ಇದ್ದ ಪಕ್ಕದ ಸೀಟ್‌ನ ಮೇಡಮ್‌ತಾವು ತಮ್ಮ ಮೊಬೈಲ್‌ನೋಡುತ್ತಲೇ ಕಿರುನಗೆ ನಕ್ಕರು.

 ಇತ್ತೀಚೆಗೆ ನನ್ನಂಥ ತಾಯಂದಿರಿಗೆ ಇಂಥ ಪುಗಸಟ್ಟೆ ಸಲಹೆಗಳು ಸಾಮಾನ್ಯವಾಗ್ಬಿಟ್ಟಿದೆ ಬಿಡಿ.  ಎಲ್ಲೆಲ್ಲಿ ಅಂತೀರಾ..? ಡಾಕ್ಟರ್‌ಕ್ಲಿನಿಕ್‌ನ ಕೋಪೇಶೆಂಟ್ಸ್‌ನಿಂದ ಹಿಡಿದು , ಕ್ಯಾಬ್ ಡ್ರೈವರ್‌, ಬಸ್‌ಕಂಡಕ್ಟರ್‌, ಎಟಿಎಮ್‌ಮುಂದೆ ಕೂತಿರೋ ಸೆಕ್ಯೂರಿಟಿ ಗಾರ್ಡ್‌ತನಕ ಯಾರ‍್ಯಾರೋ ಅಪರಿಚಿತ ಅಂಕಲ್ ಆಂಟಿಯರು ಮೊಬೈಲ್‌ಕುರಿತ ಆಪ್ತಸಲಹೆ ನೀಡಿದ್ದಾರೆ.  ನಾನು ಅವರೆಲ್ಲರಿಗೂ ಹಿಂದಿರುಗಿಸೋದು `ಹೂಂಎಂಬ ನಗುಯುಕ್ತ ಒಪ್ಪಿಗೆ ಮಾತ್ರ.

 ಹಾಂ. ಸೆಕ್ಯೂರಿಟಿ ಗಾರ್ಡ್‌ಕಥೆಯನ್ನ ನಾನಿಲ್ಲಿ ನಿಮಗೆ ಹೇಳಿಲ್ಲ ಅಂದರೆ ಸ್ವಾರಸ್ಯವೇ ಇರಲ್ಲ.  ಒಂದಿನ ಸಂಜೆ ತರಕಾರಿ ತರೋಕೆ ಹೊರಟಿರೋ ನನ್ನ ಪರ್ಸ್‌ನಲ್ಲಿ 10 ರೂಪಾಯಿ ನೋಟು ಬಿಟ್ಟರೆ ಇನ್ನೇನು ಇರ್ಲಿಲ್ಲ. ಹೀಗಾಗಿ ಎಟಿಎಂಗೆ ಹೋಗಲೇ ಬೇಕಾದ ಪರಿಸ್ಥಿತಿ ಬಂತು. ಮನೆಯಲ್ಲಿ ಮತ್ಯಾರೂ ಇಲ್ಲದ ಕಾರಣ, ನಾನೆಲ್ಲಿ ಹೊರಟರೂ ನನ್ನ ಜತೆ ನನ್ನ ಮಗ ಇನ್‌ಬಿಲ್ಟ್‌ ಸಾಫ್ಟ್‌ವೇರ್‌. ಅವನ್ನೂ ಕರ್ಕೊಂಡೇ ಮನೆ ಹತ್ತಿರವಿರೋ ಎಟಿಎಂಗೆ ಹೋದೆ. ನನ್ನ ದುರಾದೃಷ್ಟಕ್ಕೆ ಆವತ್ತಲ್ಲಿ 8 ರಿಂದ 10 ಜನರ ಉದ್ದಾನುದ್ದ ಕ್ಯೂ ಇತ್ತು.  ಸಾಯ್ಲಿ ಇವತ್ತು ಹಣ ತೆಗೆಯೋದೇ ಬೇಡ ಅಂತ ವಾಪಾಸ್ ಬರೋಕೂ    ಆಗ್ದೆ, ಕ್ಯೂನಲ್ಲಿ ನಿಲ್ಲೋದು ಅನಿವಾರ್ಯವಾಯ್ತು.  ಇದೇ ಸಮಯಕ್ಕಾಗಿ ಕಾಯ್ತಾ ಇದ್ದ ನನ್ನ ಮಗ ಮೊಬೈಲ್‌ಕೇಳಿದ. ನಾನು ಮೊಬೈಲ್‌ಕೊಟ್ಟುಬಿಟ್ಟೆ.  ನಮ್ಮನ್ನ ಗಮನಿಸುತ್ತಾ ಇದ್ದ ಎಟಿಎಂನ ಸೆಕ್ಯೂರಿಟಿ ಗಾರ್ಡ್‌‘ಮಕ್ಕಳಿಗೆ ಮೊಬೈಲ್‌ಕೊಡಬಾರದಮ್ಮ’ ಅಂದರು.  ಆ ಕ್ಯೂ ನೋಡಿನೇ ತಲೆ ಕೆಟ್ಟುಹೋಗಿದ್ದ ನನಗೆ, ಅವರ ಆ ಮಾತು ಕೇಳಿ ಕಿರಿಕಿರಿಯಾಯ್ತು. ಆಗಿದಾಂಗ್ಗೆ ನನ್ನ ಮಗನ ಕೈಲಿದ್ದ ಮೊಬೈಲ್‌ ಕಿತ್ತುಕೊಂಡೆ. ನನ್ನ ಮಗ ಅಲ್ಲೇ ರಂಪಾಟ ಶುರುಮಾಡಿದ.  ಮೊಬೈಲ್‌ಬೇಕೆ ಬೇಕು ಅಂತ ನಿಂತಲ್ಲೇ ಕುಣಿದ. ಹಟ ಹಿಡಿದು ಕೂತು ಉರುಳಾಡಿದ. ಕ್ಯೂನಲ್ಲಿದ್ದ ಎಲ್ಲರೂ ತಮ್ಮತಮ್ಮ ಮೊಬೈಲ್‌ನಲ್ಲಿ ನೆಟ್ಟಿದ್ದ ಕಣ್ಣುಗಳನ್ನ ಒಮ್ಮೆ ತೆಗೆದು ನಮ್ಮಿಬ್ಬರನ್ನೂ ನೋಡಿ, ಮತ್ತೆ ಮೊಬೈಲ್‌ನಲ್ಲಿ ತಲ್ಲೀನರಾದರು. ಎಷ್ಟು ಕೂಗಾಡಿದ್ರೂ ಮೊಬೈಲ್‌ಕೊಡಲೇಬಾರದು ಅಂತ ನಾನೂ ಹಠ ಹಿಡಿದೆ.   ನನ್ನ ಸರದಿ ಬರೋವರೆಗೂ ನನ್ನ ಮಗ ಅಳ್ತಾನೇ ಇದ್ದ.   ಸೆಕ್ಯೂರಿಟಿ ಗಾರ್ಡ್‌‌ಗೆ ಅದೇನೋ ಅಪರಾಧಿ ಪ್ರಜ್ನೆ ಕಾಡಿರಬೇಕು, ನಾನು ಹಣ ಪಡಕೊಂಡು ವಾಪಾಸ್ ಬರುವಾಗ ಸಾರಿ ಮೇಡಮ್‌, ಮಗು ಇಷ್ಟೊಂದು ಅಳುತ್ತೆ ಅಂತ ಗೊತ್ತಿರಲಿಲ್ಲ, ಅಂದ.  ನಾನು ಇರ್ಲಿಬಿಡಿ , ನೀವ್‌ಹೇಳಿದ್ರಲ್ಲಿ ತಪ್ಪೇನಿಲ್ವಲ್ಲಾ.. ಅಂತ್ಹೇಳಿ ಅಲ್ಲಿಂದ ಮಗನನ್ನ ಕರ್ಕೊಂಡು ಹೊರಟೆ.  ಆ ಸೆಕ್ಯುರಿಟಿ ಗಾರ್ಡ್‌ಇನ್ನೆಂದೂ ಮತ್ಯಾರಿಗೂ ಈ ಸಲಹೆ ಕೊಡೋ ಗೋಜಿಗೇ ಹೋಗಲ್ವೇನೋ.. ಅಂಥ ಪಾಠ ಕಲಿಸಿಬಿಟ್ಟ ನನ್ನ ಮಗ.

 ಮನೆಯಿಂದ ಹೊರಹೊರಟಾಗ, ಅದೂ ವಿಶೇಷವಾಗಿ ಕಾಯುವ ಪರಿಸ್ಥಿತಿ ಇದೆ ಎಂದು ಗೊತ್ತಿದ್ದಾಗ,   ಕಥೆಪುಸ್ತಕಗಳನ್ನ, ಆಟಿಗೆಗಳನ್ನ, ತಿಂಡಿಗಳನ್ನ ಇಟ್ಟುಕೊಂಡು ಹೋಗಿ ಮೊಬೈಲ್‌ಕೊಡದೇ ನನ್ನ ಮಗನನ್ನ ಮ್ಯಾನೇಜ್‌ಮಾಡೋಕೆ ಪ್ರಾಮಾಣಿಕವಾಗಿ ಪ್ರಯತ್ನಪಡ್ತೀನಿ.  ಆದರೆ ಅದ್ಯಾವುದೂ ಅಂಥ ಯಶ ಕಂಡಿಲ್ಲ. ಇದೆಲ್ಲದರಿಂದ ಅವನ ಮೊಬೈಲ್‌ಬೇಡಿಕೆಯನ್ನ ಒಂದರ್ಧ ಗಂಟೆ ಮುಂದೂಡಬಹುದೇ ಹೊರತುಮೊಬೈಲ್‌ನೆನಪನ್ನೇ ಮರೆಮಾಚೋಕೆ ಸಾಧ್ಯವಿಲ್ಲ. ಯಾಕಂದ್ರೆನನ್ನ ಹಾಗೇ ಸರದಿಗಾಗಿ ಕಾಯುತ್ತಿರುವವರೆಲ್ಲರ ಕೈಯಲ್ಲಿಯೂ ಮೊಬೈಲ್‌ಇರೋ ಕಾರಣ, ನಾನು ಮುಚ್ಚಿಟ್ಟರೂ ಅವನಿಗೆ ಮೊಬೈಲ್‌ನೆನೆಪಾಗಿಬಿಡುತ್ತೆ.  ಇದಕ್ಕೇನು ಮಾಡೋಣ ಹೇಳಿ. ಎಲ್ಲರ ಬಳಿ ಹೋಗಿ, ನನ್ನ ಮಗ ಮೊಬೈಲ್‌ಗಾಗಿ ಅಳ್ತಾನೆ, ನೀವು ಸ್ವಲ್ಪ ಹೊತ್ತು ಮೊಬೈಲ್‌ಮುಚ್ಚಿಡಿ ಅನ್ನೋಕಾಗುತ್ತಾ..?

 ಇನ್ನು ಒಂದು ಜನರೇಶನ್ ‌ಹಿಂದಿನ  ಜನರಿಗಂತೂ ಈಗಿನ ತಂದೆ ತಾಯಿಯರನ್ನ ಕಂಡರೆ, ಅದೇನೋ ಅಸಡ್ಡೆ, ಮಕ್ಕಳಿಗೆ ಮೊಬೈಲ್‌ಎಡಿಕ್ಟ್‌ಮಾಡಿಸ್ತಾರೆ. ಮೊಬೈಲ್‌ಇಲ್ಲದೆ ನಿಭಾಯಿಸೋದೇ ಈಗಿನವರಿಗೆ ಗೊತ್ತಿಲ್ಲ, ನಾವೆಲ್ಲ ಮಕ್ಕಳನ್ನ ಬೆಳಸಲೇ ಇಲ್ವಾ..? ಆಗೇನು ಮೊಬೈಲ್‌ ಇದ್ವಾ..ಎಂಬುದು ಅವರ ಆರೋಪ.   ಹೌದು ಸ್ವಾಮಿ.. ಆ ಕಾಲದಲ್ಲಿ ಮೊಬೈಲ್‌ಎಂಬ ಮಾಯದ ವಸ್ತು ಅಸ್ತಿತ್ವದಲ್ಲಿಯೇ ಇಲ್ಲದಾಗ ಆಗಿನ ಮಕ್ಕಳೆಲ್ಲಿಂದ ಮೊಬೈಲ್‌ಕೇಳಿಯಾರು..? ಅಂದಿಗೂ ಇಂದಿಗೂ ಕಂಪೇರ್‌ಮಾಡೋಕೆ ಹೇಗೆ ಸಾಧ್ಯ ಹೇಳಿ? ಅಂದು ಮನೆತುಂಬಾ ಜನ ಇರ್ತಿದ್ರು.  ಒಬ್ಬರಲ್ಲ ಒಬ್ಬರು ಮನೆಯ ಮಕ್ಕಳನ್ನ ನೋಡಿಕೊಳ್ತಾ ಇದ್ರು. ತಾಯಿಯಾದವಳೇ ಸದಾಕಾಲ ಮಗುವಿನ ಸರ್ವಕೆಲಸಗಳನ್ನೂ ಮಾಡಬೇಕು ಎಂಬ ಅನಿವಾರ್ಯತೆ ಈಗಿನಷ್ಟು ಅಂದು ಎಲ್ಲರಿಗೂ ಇರಲಿಲ್ಲ.  ಮನೆಯಲ್ಲಿರೋ ಮಗುವಿಗೆ ಊಟ ಮಾಡಿಸೋಕೆ ಅಜ್ಜಿನೋ, ಅತ್ತೆನೋ, ಚಿಕ್ಕಮ್ಮನೋ ನಾಯಿ, ಕುರಿ, ಕೋಳಿ, ಆಟೋ, ಬೈಕು  ತೋರಿಸ್ತಾ ಊರೆಲ್ಲ ಸುತ್ತುತ್ತಾ ಇದ್ರು.  ಈಗ ಸಾಮಾನ್ಯವಾಗಿ ಮನೆಯಲ್ಲಿ ಬೇರೆ ಯಾರೂ ಇರೋದೂ ಇಲ್ಲ, ತಂದೆ-ತಾಯಿಗೆ ಪುರುಸೊತ್ತೂ ಇಲ್ಲ,   ಮೊಬೈಲ್‌ಇರೋದ್ರಿಂದ ಆ ಜರೂರತ್ತೂ ಇಲ್ಲ.  ಅಲ್ಲದೇ ಇಡೀ ಸಮಾಜಕ್ಕೆ ಸಮಾಜವೇ ಮೊಬೈಲ್‌ಗೆ ಎಡಿಕ್ಟ್‌ಆಗಿರುವಾಗ, ಮಕ್ಕಳನ್ನ ಮಾತ್ರ ಮೊಬೈಲ್‌ನಿಂದ ದೂರ ಇಡಿ ಅಂದ್ರೆ ಅದು ಸಾಧ್ಯವಾಗದ ಮಾತು ಅಲ್ವೇ..?   

 ಮೊಬೈಲ್ ‌ರೇಡಿಯೇಶನ್‌ ಮಕ್ಕಳ ತಲೆ, ಹೃದಯಕ್ಕೆ ಹಾನಿಯುಂಟುಮಾಡುತ್ತೆ, ಅವರಿಗೆ ನಿದ್ದೆಯ ತೊಂದರೆ ಕಾಡುತ್ತೆ, ಸೃಜನಾತ್ಮಕತೆಯನ್ನ ಕಡಿಮೆ ಮಾಡುತ್ತೆ, ಮಕ್ಕಳಲ್ಲಿ ಯೋಚನಾಶಕ್ತಿ ಕುಂದುತ್ತೆ, ಮೊಬೈಲ್‌ಗೆ ಎಡಿಕ್ಟ್‌ಆಗಿರುವ ಮಗುವಿಗೆ ಸ್ಥೂಲಕಾಯ ಬರುತ್ತೆ, ಎಂಬೆಲ್ಲ ಸಂಶೋಧನಾಕಾರರ ಲೇಖನಗಳನ್ನ ಓದಿದಾಗ ನಿಜಕ್ಕೂ ನಮ್ಮಂತ ತಾಯಂದಿರ ಜಂಗಾಬಲವೇ ಉಡುಗಿಹೋಗುತ್ತೆ. ಮಕ್ಕಳಿಗೆ ಮೊಬೈಲ್‌ಕೊಟ್ಟು, ಅವರನ್ನ ಇಂಥ ಎಲ್ಲ ಸಮಸ್ಯೆಗಳೆದುರು ಕೂರಿಸಬೇಕು ಎಂಬ ಆಸೆಯಂತೂ ಖಂಡಿತ ನಮ್ಮದಲ್ಲ. ಇದೊಂದು ಅನಿವಾರ್ಯ ಅಷ್ಟೆ.  ತಾಯಿಯಾದವಳು ಎಲ್ಲವನ್ನೂ ಒಬ್ಬಳೇ ನಿಭಾಯಿಸಬೇಕಾಗಿ ಬಂದಾಗ, ಮಗುವನ್ನ ಸಮಾಧಾನ ಪಡಿಸಲು ಕೈಗೆ ಸಿಗುವ ಸುಲಭ ಸಾಧನ ಇದು ಅಷ್ಟೆ.  ಇಂದಿನ ಮೈಕ್ರೋ ಫ್ಯಾಮಿಲಿಗಳುಗಂಡ ಹೆಂಡತಿ ಇಬ್ಬರೂ ದುಡಿಯಲೇಬೇಕಾಗಿರುವ  ಪರಿಸ್ಥಿತಿಮೈಗ್ರೇಶನ್‌, ಆಧುನಿಕ ಜಗತ್ತು, ಧಾವಂತದ ಜೀವನ, ಪೋಷಕರಲ್ಲಿ ತಾಳ್ಮೆಯ ಕೊರತೆಇದೆಲ್ಲವೂ ಮಕ್ಕಳ ವಿಪರೀತ ಮೊಬೈಲ್‌ಬಳಕೆಗೆ  ಇರುವ ಪರೋಕ್ಷ ಕಾರಣಗಳು.

 ನನ್ನ ಪರಿಚಯಸ್ತರೊಬ್ಬರು, ತಾವು ತಮ್ಮ ಮಗಳಿಗೆ ಮೊಬೈಲ್‌ಕೊಡಲ್ಲ, ಅವಳಿಗೆ ಮೊಬೈಲ್‌ ಯೂಸೇಜ್ ‌ಗೊತ್ತೇ ಇಲ್ಲ. ಯಾವ ಸ್ಕ್ರೀನ್‌ ಅಡಿಕ್ಷನ್ನೂ ಅವಳಿಗಿಲ್ಲ. ಹಾಗೆ ಬೆಳೆಸಿದ್ದೀನಿ ನಾನು ನನ್ನ ಮಗಳನ್ನ. ಅಂತ್ಹೇಳಿ, ನನಗೆ ಟಾಂಗ್‌ಕೊಟ್ಟಿದ್ರು. ಒಂದಿನ ಸಂಜೆ ನನ್ನ ಅತ್ತೆ ಜತೆ ಕುಳಿತಿದ್ದ ಅವರ  9 ವರ್ಷದ ಮಗಳುನನ್ನ ಅತ್ತೆಗೆ ಮೊಬೈಲ್‌ಬಳಕೆಯ ಬಗ್ಗೆ ಹೇಳಿಕೊಡ್ತಾ ಇದ್ಲು.  ನನಗೆ ಆಶ್ಚರ್ಯವಾಯ್ತು.  ಅವಳನ್ನ ಕೇಳಿದೆ, ಮೊಬೈಲ್‌ಯೂಸ್ ಮಾಡೋಕೆ ನಿಂಗೆ ಗೊತ್ತಾ..? ಅಂತ.  ಸ್ಕೂಲ್‌ನಲ್ಲಿ ನನ್ನ ಫ್ರೆಂಡ್ಸ್‌ಎಲ್ರೂ ಮೊಬೈಲ್‌ಬಗ್ಗೆ, ಹೊಸ ಹೊಸ ಆಪ್‌ಬಗ್ಗೆ ಮಾತಾಡುವಾಗ, ನಂಗೆ ಬೇಜಾರಾಗ್ತಿತ್ತು ಆಂಟೀಅದಿಕ್ಕೆ ಅಮ್ಮಂಗೆ ಗೊತ್ತಿಲ್ದೇ ಕದ್ದು ಮೊಬೈಲ್ ‌ನೋಡ್ತೀನಿ , ಪ್ಲೀಸ್ ಅಮ್ಮಂಗೆ ಹೇಳ್ಬೇಡಿ ಅಂದಿದ್ಲು. ಅಂದು ನಂಗೆ ನಿಜಕ್ಕೂ ಅವಳ ಮಾತು ಕೇಳಿ ಪಾಪ ಅನ್ನಿಸಿತ್ತು.  ಮಕ್ಕಳಿಗೆ ಮೊಬೈಲ್ ‌ಕೊಡಲೇಬಾರದು ಅಂತ ನಾವು ಮೊಂಡಾಟ ಮಾಡಿದರೆ, ಮಕ್ಕಳು ಬಿಡಲ್ಲ.  ನೀವು ಕೊಟ್ಟಿಲ್ಲ ಅಂದ್ರೆ, ಕೊಡುವವರ ಹತ್ತಿರ ತಗೋತಾರೆ, ಇಲ್ಲ ಅಂದ್ರೆ, ನಿಮ್ಮದೇ ಮೊಬೈಲ್‌ನ್ನ ಕದ್ದು ನೋಡ್ತಾರೆ ಅಷ್ಟೆ.  ಇದೆಲ್ಲದಕ್ಕಿಂತ ನಾವೇ ಮೊಬೈಲ್‌ನ್ನ ಕೊಟ್ಟು, ದಿನಕ್ಕೆ ಇಷ್ಟೇ  ಸಮಯ ಅಂತ ನಿಗದಿ ಮಾಡೋದು ಒಳ್ಳೇದಲ್ವೇ..? ಅಂತ ಮನಸ್ಸಿನಲ್ಲೇ ಅಂದುಕೊಂಡಿದ್ದೆ.

 ಆದ್ರೆ, ಕೊರೋನಾ ಬಂದಿದ್ದೇ ಬಂದಿದ್ದು, ಎಲ್ಲವೂ ಬದಲಾಗಿಬಿಡ್ತು.  ತನ್ನದೇ ಆದ ಸ್ವಂತ ಮೊಬೈಲ್‌ನನ್ನ ಕೈಗೆ ಯಾವಾಗಪ್ಪಾ ಬರುತ್ತಪ್ಪಾ ಅಂತ ಕಾಯ್ತಾ ಇದ್ದಮೊಬೈಲ್‌ಗಾಗಿ ಅಪ್ಪ ಅಮ್ಮನ ಹತ್ತಿರ ಬೇಡ್ತಾ ಇದ್ದ ಮಕ್ಕಳ ಕೈಗೆ ಸ್ವತಃ ಕೊರೋನಾ ಮೊಬೈಲ್‌ಕೊಟ್ಟುಬಿಡ್ತು. ಆನ್‌ಲೈನ್‌ಪಾಠಕ್ಕಾಗಿ ಮೊಬೈಲ್ ಪಡೆದ ಅದೆಷ್ಟು ಮಕ್ಕಳು ಕೊರೊನಾಕ್ಕೆ ಥ್ಯಾಂಕ್ಯೂ ಹೇಳ್ತಿದ್ದಾರೋ ಏನೋ. 

 ಅಂದು ಮಕ್ಕಳ ಪಾಲಿಗೆ ಮನೋರಂಜನೆಗೆ ಮಾತ್ರ ಸೀಮಿತವಾಗಿದ್ದ ಮೊಬೈಲ್‌ಈಗ ಕಲಿಕೆಗಾಗಿ  ಪುಸ್ತಕ, ಪೆನ್ನಿನಷ್ಟೇ ಮುಖ್ಯವಾಗಿಬಿಟ್ಟಿದೆ.  ಶಾಲಾ ಕಲಿಕೆಯ ಜತೆಗೆ ಮಗುವಿನ ವಯಸ್ಸಿಗನುಗುಣವಾಗಿ ಎಷ್ಟೆಷ್ಟೋ ಹೊಸ ಹೊಸ ಎಜುಕೇಶನಲ್‌ಆಪ್‌ಗಳು ಬರುತ್ತಿವೆ.  ಎಜುಕೇಶನಲ್ ಗೇಮ್‌ಗಳು ಪರಿಚಿತಗೊಳ್ಳುತ್ತಿವೆ. ಇವೆಲ್ಲದರ ಉಪಯೋಗ ಮಕ್ಕಳಿಗೆ ಸಿಗಬೇಕು ಅಂದ್ರೆ, ಅವರ ಕೈಯ್ಯಲ್ಲಿ ಮೊಬೈಲ್‌ಕೊಡಲೇಬೇಕು.  ಈಗಿನ ಜಗತ್ತೇ ಹೀಗಿದೆ. ಆದರೆ ಒಳ್ಳೆಯದರ ಜತೆ ಕೆಟ್ಟದ್ದೂ ಇರೋ ಇಂಟರ್‌ನೆಟ್‌ಎಂಬ ಮಹಾ ಸಮುದ್ರದಲ್ಲಿ ಮುಳುಗಿರೋ ಮಕ್ಕಳು ಅಲ್ಲಿಂದ ಏನು ಕಲಿಯುತ್ತಿದ್ದಾರೆ ಎಂಬ ಬಗ್ಗೆ ಪೋಷಕರು ಗಮನ ಕೊಡುತ್ತಾ ಅವರಿಗೆ ಸಲಹೆ ನೀಡುತ್ತಿದ್ದರೆ ಮೊಬೈಲ್‌ನಿಂದ್ಲೂ  ಮಕ್ಕಳು ಸಾಕಷ್ಟು ತಿಳಿಯುತ್ತಾರೆ.  

 ಆದರೆ, ಅನಿವಾರ್ಯ ಪರಿಸ್ಥಿತಿಯಲ್ಲಿ ಮಾತ್ರ ಮೊಬೈಲ್‌ಕೊಟ್ಟು, ನಿಭಾಯಿಸಬಹುದಾದ ಅವಕಾಶವಿದ್ದಾಗ, ಆದಷ್ಟು ಮೊಬೈಲ್‌ನಿಂದ ಮಕ್ಕಳನ್ನ ದೂರ ಇಡೋಕೆ ಇಂದಿನ ಅಪ್ಪಅಮ್ಮ ಪ್ರಯತ್ನಪಡಬೇಕು ಎಂಬುದನ್ನ ನಾವೆಲ್ಲರೂ ಒಪ್ಪಲೇಬೇಕು. ಅಲ್ವೇ..? ನೀವೇನಂತೀರಿ..?

 

 

 

 


5 comments:

  1. ತುಂಬಾ ಚೆನ್ನಾಗಿ ಬರ್ದಿದೀರಿ. ವಾಸ್ತವಕ್ಕೆ ತೀರಾ ಹತ್ತಿರವಾಗಿದೆ.
    ಮುಂದುವರಿಸಿ..

    ReplyDelete
  2. ಮೊಬೈಲ್ ಮತ್ತು‌ ಈಗಿನ ಮಕ್ಕಳ ಅನುಬಂಧ ಈ ಬರಹದಲ್ಲಿ ಚೆನ್ನಾಗಿ ಮೂಡಿಬಂದಿದೆ.
    ಬರವಣಿಗೆ ನಿರಂತರವಾಗಿರಲಿ.
    ಬ್ಲಾಗ್ ಮರೆಯದಿರಿ.

    (www.badari-poems.blogspot.com)

    ReplyDelete

“ಕ್ಯಾನ್ಸರ್‌”

  ಕಟ-ಕಟ ಕಟ-ಕಟ ಶಬ್ಧ ಲಯದಂತೆ ಕಿವಿಗೆ ಅಪ್ಪಳಿಸುತ್ತಾ ಅಪ್ಪಳಿಸುತ್ತಾ, ಕಣ್ಣು ಎಳೆದಂತಾಗಿ ನಿದ್ದೆಯ ಮಂಪರಿನಲ್ಲಿದ್ದಾಗಲೇ, ಮೇಲಿನ ಸೀಟ್‌ಮೇಲೆ ಇಟ್ಟಿದ್ದ ಬ್ಯಾಗ್‌ ಒಂದು...