Thursday, 16 March 2017

ಹುಟ್ಟು ಹಬ್ಬದ ಶುಭಾಶಯಗಳು ಕಂದಾ..



ನನ್ನ ಅಥರ್ವ. ನೀನು ಹುಟ್ಟಿ ಇಂದಿಗೆ ಒಂದು ವರ್ಷ. 2015 ಮುಗಿದು 2016 ಕಾಲಿಡ್ತಾ ಇದ್ದಂತೆ ನೀ ನನ್ನ ಮಡಿಲಿಗೆ ಬಂದೆ. ಅಂದಿನಿಂದ ನನ್ನ ಪ್ರತಿ ದಿನ, ಪ್ರತಿ ಕ್ಷಣ ಎಲ್ಲವೂ ಅಥರ್ವಮಯ. ಈ ಒಂದು ವರ್ಷದಲ್ಲಿ ನಾನು ನಿನ್ನ ಬಿಟ್ಟು ಇರೋ ನಿಮಿಷಗಳೇ ಬೆರಳೆಣಿಕೆಯಷ್ಟು. ಅಕ್ಷರಷಃ ಅದನ್ನ ಲೆಕ್ಕಹಾಕಬಹುದೇನೋ.

ಅದೆಷ್ಟು ಬೇಗ ಒಂದು ವರ್ಷ ಕಳೆದುಹೋಯ್ತು ಕಂದ..! ಮೊನ್ನೆ ಮೊನ್ನೆಯಷ್ಟೇ ನೀ ನನ್ನ ಜೀವನಕ್ಕೆ ಬಂದ ಹಾಗಿದೆ. ನೀ ಬಂದ ಮೇಲಂತೂ ದಿನಗಳು ಓಡುತ್ತಿವೆ. ಪ್ರತಿ ಬೆಳಗೂ ನನಗೆ ಹೊಸತು. ನಿನ್ನ ಬೆಳವಣಿಗೆಯೇ ನನಗೆ ದೊಡ್ಡ ಕೌತುಕ. ನಾನೊಂದು ಕ್ಷಣ ಮರೆಯಾದರೂ ನೀ ನನ್ನ ಹುಡುಕುವ ರೀತಿ.., ನಾ ಕಂಡ ಕ್ಷಣ ನಿನ್ನ ಕಣ್ಣಲ್ಲಿ ಕಾಣೋ ಹೊಳಪು.., ನನಗಾಗಿ ನೀ ಹಂಬಲಿಸೋ ಪರಿ ಇವೆಲ್ಲ ನನಗೇನೋ ಸುಖ ನೀಡುತ್ವೆ. ಅದು ತಾಯ್ತನದ ಹೆಮ್ಮೆಯೋ..ಗೊತ್ತಿಲ್ಲ. ನೀ ನನಗಾಗಿ ಹುಡುಕಾಡ್ತಾ ಅಳ್ತಾ ಇದ್ರೆ, ಎರಡು ಕ್ಷಣ ಮರೆಯಲ್ಲಿ ನಿಂತು ನಾ ನಿನ್ನ ನೋಡ್ತೀನಿ. ನೀ ನನ್ನ ಮತ್ತಷ್ಟು ಹಂಬಲಿಸಲಿ ಅನ್ನೋ ಸ್ವಾರ್ಥ ಅದು. ನನ್ನ ಬಾಯಲ್ಲೀಗ..ಪದೆ ಪದೆ ಬರೋ ಚಿನ್ನು, ಚಿನ್ನುಮರಿ, ಪುಟಾಣಿ, ಪುಟ್ಟು, ಜಾಣು,ಕಂದ, ಗುಬ್ಬಿ, ಗುಬ್ಬಚ್ಚಿ, ಪಾಪಚ್ಚಿ ಅನ್ನೋ ಮುದ್ದು ಶಬ್ಧಗಳದ್ದೇ ಕಾರುಬಾರು. ಮುಂಚೆ ಎಲ್ಲಿದ್ದವೋ ಆ ಪದಗಳು..!

ನೀನು ಹುಟ್ಟುತ್ತಿದ್ದಂತೆ..ನಾನೂ ಕೂಡ ಹುಟ್ಟಿದೆ, ನಿನ್ನ ಅಮ್ಮನಾಗಿ..!  ಹೊಟ್ಟೆಯಿಂದ ಆಗಷ್ಟೇ ಹೊರಬಂದ ನಿನ್ನ ಎತ್ತಿಕೊಳ್ಳುವುದರಿಂದ ಹಿಡಿದು ಎಲ್ಲವೂ ನನಗೆ ಹೊಸತು. ಮಗುವಿನ ಪಾಲನೆಯ ಶಾಲೆಗೆ ನಿನ್ನಜ್ಜಿ ಶಿಕ್ಷಕಿಯಾದ್ರೆ ನಾನು ವಿದ್ಯಾರ್ಥಿನಿ. ಆಕೆ ಹೇಳಿಕೊಟ್ಟ ಎಲ್ಲವನ್ನೂ ನಿನಗಾಗಿ  ಕಲಿಯೋಕೆ ಶುರುಮಾಡಿದೆ.

ನೀ ಅತ್ತರೆ ಸಾಕು, 'ಲಾಲಿ ಎಂದರೆ ಬಾಲ.. ಆಲೈಸಿ ಕೇಳುವನು... ಹಾಲ ಹಂಬಲನೆ ಮರೆವನು.'. ಎಂಬ ಜೋಗುಳ ಪದ್ಯ ಶುರುವಾಗುತ್ತಿತ್ತು. ಆ ಜೋಗಳಕ್ಕೆ ನಿನ್ನ ಅಳುವಿನ ಹಿನ್ನಲೆ. ನಿನ್ನಿಂದಾಗಿ ನನ್ನಜ್ಜಿಯ ಜೋಗುಳ ಪದ ಮನೆ-ಮನ ತುಂಬಿಕೊಂಡಿತ್ತು. ಪುಟ್ಟ ಪುಟ್ಟ ಬಟ್ಟೆಗಳು, ಬಣ್ಣ ಬಣ್ಣದ ದುಪ್ಪಟಿ, ಧೂಪದ ಪರಿಮಳ, ಜೋಗುಳದ ದನಿ, ತೊಟ್ಟಿಲಿನ ಕಿರ್‌ ಅನ್ನೋ ಶಬ್ಧ ಇವೆಲ್ಲ ನೀ ಬಂದ ಸಡಗರವನ್ನ ಹೇಳ್ತಾ ಇದ್ದವು. ಬಟ್ಟೆ ಒಣಹಾಕೋ ಹಗ್ಗ ಕೂಡ ನಿನ್ನ ಬಟ್ಟೆಗಳಿಗೇ ಮೊದಲ ಪ್ರಾಶಸ್ತ್ಯ ಕೊಟ್ಟುಬಿಟ್ಟಿತ್ತು. ಅಷ್ಟರಮಟ್ಟಿಗೆ ನನ್ನಮ್ಮನ ಮನೆಯ ಪ್ರತಿ ವಸ್ತುವೂ ನಿನ್ನ ಆಗಮನವನ್ನ ಸಂಭ್ರಮಿಸೋಕೆ ಶುರು ಮಾಡಿದ್ದವು. ಒಂದು ವರ್ಷದಿಂದ ಅವಕ್ಕೆಲ್ಲ ನೀನೇ ಸ್ಪೂರ್ತಿಯಂತೆ..!

ಹುಟ್ಟಿ ಒಂದು ತಿಂಗಳಾಗುವಷ್ಟರಲ್ಲಿ ನನ್ನ ಮುಖ ನೋಡಿ ನಕ್ಕಿದ್ದೆ. ನಿನ್ನ ಆ ಒಂದು ಮುದ್ದು ನಗೆ ಕೋಟಿ ಗೆದ್ದಷ್ಟು ಖುಷಿಕೊಟ್ಟಿತ್ತು ನನಗೆ. ಮೊದಲು ನೀನು ಮಗುಚಿದ್ದು, ಮುಂದಕ್ಕೆ ಹೋದದ್ದು, ಅಂಬೆಗಾಲಿಟ್ಟಿದ್ದು, ಹೆಜ್ಜೆಇಟ್ಟು ನಡೆದಿದ್ದು ಈ ಎಲ್ಲ ನಿನ್ನ ಮೊದಲುಗಳೂ.. ನನ್ನ ಖುಷಿಯ ಮೈಲುಗಲ್ಲುಗಳು...!

ನನ್ನ ಮುದ್ದು ಕಂದನ ಮೊದಲ ಹುಟ್ಟು ಹಬ್ಬ ಇಂದು. ಇಂಥ ನೂರಾರು ಹುಟ್ಟು ಹಬ್ಬಗಳು ನಿನ್ನ ಬಾಳಲ್ಲಿ ಬರಲಿ.

ಹುಟ್ಟು ಹಬ್ಬದ ಶುಭಾಶಯಗಳು ಕಂದಾ..

No comments:

Post a Comment

“ಕ್ಯಾನ್ಸರ್‌”

  ಕಟ-ಕಟ ಕಟ-ಕಟ ಶಬ್ಧ ಲಯದಂತೆ ಕಿವಿಗೆ ಅಪ್ಪಳಿಸುತ್ತಾ ಅಪ್ಪಳಿಸುತ್ತಾ, ಕಣ್ಣು ಎಳೆದಂತಾಗಿ ನಿದ್ದೆಯ ಮಂಪರಿನಲ್ಲಿದ್ದಾಗಲೇ, ಮೇಲಿನ ಸೀಟ್‌ಮೇಲೆ ಇಟ್ಟಿದ್ದ ಬ್ಯಾಗ್‌ ಒಂದು...