ಪೆನ್ನಿಗಾಗಿ ಹುಡುಕಾಡ್ತಾ ನನ್ನ ಬ್ಯಾಗ್ ತೆರೆದೆ, ಕೈಗೆ ಸಿಕ್ಕವು ಆರೆಂಟು ಚಾಕ್ಲೇಟುಗಳು. ಆ ಚಾಕಲೇಟುಗಳ ರ್ಯಾಪರ್ ಸದ್ದಿನಿಂದ ನನ್ನ ಮನಸ್ಸಿಗೇನೋ ಚುಚ್ಚಿದ ಅನುಭವ. ಮನಸ್ಸಿಗೆ ತಾಕಿದ ಆ ಶಬ್ಧಕ್ಕೆ ಕಣ್ಣೀರು ಒತ್ತರಿಸಿಬಂದು ಕಣ್ಣಾಲೆಗಳು ತುಂಬಿಕೊಂಡ್ವು. ಹೇಳಲಸಾಧ್ಯ ನೋವು ಎದೆಗಂಟಿದಂತೆ ಭಾಸವಾಯ್ತು. ಚಾಕ್ಲೇಟುಗಳಿರೋ ಆ ಖಾನೆಯನ್ನೇ ಮುಚ್ಚಿ ಬ್ಯಾಗ್ನ್ನ ಪಕ್ಕಕ್ಕಿಟ್ಟು ನೀರು ಗುಟುಕಿಸಿದೆ. ಉಮ್ಮಳಿಸಿ ಬರುತ್ತಿದ್ದ ದುಃಖದಿಂದಲೋ ಏನೋ ನೀರು ಕೂಡ ಗಂಟಲಿನಿಂದಿಳಿಯಲಿಲ್ಲ. ಕೊನೆಗೂ ದುಃಖ ತಡೆಯದೇ ಕಣ್ಣಿನಿಂದಿಳಿದು ಬಂತು ಕಣ್ಣೀರು.. ಸಹೋದ್ಯೋಗಿ ಗೆಳತಿಯ ಸಾಂತ್ವನದ ಸ್ಪರ್ಷಕ್ಕೆ ಉತ್ತರಿಸಿದ್ದೂ ಕೂಡ ನನ್ನ ಕಂಬನಿಯೇ..
ಆ ಪುಟಾಣಿಯ ಮೇಲೆ ನನಗೇಕೋ ತುಂಬು ಅಕ್ಕರೆ. ಹೇಳಿಕೊಳ್ಳಲಾಗದ ಪ್ರೀತಿ. ಅವಳ ಗುಳಿಬೀಳುವ ಕೆನ್ನೆಗಳು, ಚುರುಕು ನೋಟ, ಆಟ ಪಾಠ ಎಲ್ಲವೂ ನನಗೆ ಅಚ್ಚುಮೆಚ್ಚು. ಒಂದು ದಿನ ಅವಳು ನನಗೆ ಕಂಡಿಲ್ಲವೆಂದರೂ ಅದೇನೋ ಕಳೆದುಕೊಂಡ ಭಾವ. ನಾನು ಕಚೇರಿಯಿಂದ ಬರುವುದನ್ನೇ ಕಾಯುತ್ತಿದ್ದ ಅವಳು, ನಾನು ಬಂದ ತಕ್ಷಣ ಓಡಿಬಂದು ಆಗಷ್ಟೇ ಮೊಳಕೆಯೊಡೆಯೊತ್ತಿದ್ದ ಮುಂದಿನೆರಡು ಹಲ್ಲುಬಿದ್ದ ದಂತದಲ್ಲಿಯೇ ಮುದ್ದು ನಗು ನಕ್ಕುಬಿಡುವವಳು. ಇಡೀ ದಿನ ಶಾಲೆಯಲ್ಲಿ ತಾನು ಕಲಿತದ್ದು, ಆಡಿದ್ದು ಓಡಿದ್ದನ್ನೆಲ್ಲ ನನಗೆ ಹೇಳಿದಂತೂ ಆಕೆಗೆ ಸಮಾಧಾನವೇ ಇಲ್ಲ. ಎಲ್ಲ ಸುದ್ದಿಯೂ ಮುಗಿದ ಮೇಲೆ ನಿಧಾನವಾಗಿ ನನ್ನ ಬ್ಯಾಗ್ ಹುಡುಕಿ ಅದರಲ್ಲಿದ್ದ ಚಾಕ್ಲೇಟುಗಳನ್ನ ಕೈತುಂಬಿಸಿಕೊಂಡು ಕಣ್ಣಲ್ಲೇ ನಗುವವಳು. ಚಾಕ್ಲೇಟ್ ತಿನ್ನುತ್ತಾ ಮೆಟ್ಟಿಲಿಳಿಯದೇ ಹಾರಿಕೊಂಡು ಹೋಗುವ ಚೂಟಿ ಬೇರೆ..! 'ಹೇ ಪುಟ್ಟಾ... ಬೀಳ್ತಿಯಾ ನಿಧಾನಕ್ಕೆ ಹೋಗು..' ಎಂಬ ನನ್ನ ಎಚ್ಚರಿಕೆ ಮಾತುಗಳನ್ನೆಲ್ಲಾ ಕೇಳಿಸಿಕೊಳ್ಳದೇ ಓಡಿಹೋಗುವವಳು. ಪುಟಾಣಿ ಪುಟ್ಟಿ ನನಗೆ ಯಾವಾಗ ಸಿಕ್ಕರೂ ಅವಳ ಕೈಯ್ಯಲ್ಲೊಂದು ಚಾಕ್ಲೇಟು ಇಟ್ಟು, ಆ ಮುಗ್ಧ ಮುಖದ ಮುದ್ದು ನಗು ನೋಡಬೇಕು ಎಂಬ ಕಾರಣಕ್ಕೆ ನನ್ನ ಬ್ಯಾಗ್ನಲ್ಲಿ ಚಾಕ್ಲೇಟುಗಳಿಗೊಂದಷ್ಟು ಜಾಗ. ಅಂಗಡಿಗಳಲ್ಲಿ ಚಿಲ್ಲರೆಯ ಬದಲಾಗಿ ಚಾಕ್ಲೇಟ್ ಕೊಟ್ಟರೂ ನನಗೆ ಮೊದಲು ನೆನಪಾಗುವುದೇ ಪುಟ್ಟಿಯ ಮುದ್ದು ಮುಖ.
ಪುಟ್ಟಿಯ ಚಾಕ್ಲೇಟು ಆಸೆ ಅವರಮ್ಮನಿಗೂ ಗೊತ್ತಿದೆ. ಅದೆಷ್ಟು ಪ್ರಯತ್ನ ಮಾಡಿದರೂ ಅವರಿಂದ ಪುಟ್ಟಿಯ ಚಾಕ್ಲೇಟು ಆಸೆಯನ್ನ ಬಿಡಿಸೋಕಾಗಿಲ್ಲ. ಅವಳು ಚಾಕ್ಲೇಟು ತಿಂದಿರುವ ವಿಷಯವನ್ನ ಅಮ್ಮನಿಗೆ ಹೇಳೋದಿಲ್ಲ ಅಂತ ನಾನು ದಿನವೂ ಅವಳಿಗೆ ಪ್ರಾಮಿಸ್ ಮಾಡಲೇಬೇಕು. ಪ್ರಾಮಿಸ್ ಮಾಡುವತನಕ ಆಕೆ ಸುಮ್ಮನಾಗೋದಿಲ್ಲ. ಆಯ್ತಮ್ಮ ತಾಯಿ.. ಹೇಳಲ್ಲ ಪ್ರಾಮಿಸ್.. ಅಂತ ನಾನು ಹೇಳಿದಮೇಲೆಯೇ ಅವಳಿಗೆ ಸಮಾಧಾನ.
ಆದರೆ, ಆವತ್ತು ನಡೆದಿದ್ದೇನು ಎಂಬುದು ಯಾರಿಗೂ ಸರಿಯಾಗಿ ಗೊತ್ತಿಲ್ಲ. ಚಾಕ್ಲೇಟು ಆಸೆ ತೋರಿಸಿಯೇ ಪುಟ್ಟಿಯನ್ನ ಅವರು ಕರೆದೊಯ್ದಿರಬಹುದು ಅನ್ನೋದು ನಮ್ಮ ಊಹೆ. ಅಲ್ಲಿ ಏನಾಯ್ತು ಅನ್ನೋದನ್ನ ಹೇಳೋಕೆ ಪುಟ್ಟಿಯಲ್ಲಿ ತ್ರಾಣವಿಲ್ಲ. ಕೃತಕ ಉಸಿರಾಟದ ಕವಚವನ್ನ ಮೂಗಿಗೆ ಹಾಕಿಕೊಂಡು, ಡ್ರಿಪ್ ಚುಚ್ಚಿಕೊಂಡು ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾಳೆ ಪುಟ್ಟಿ. ಆಕೆ ದಾಖಲಾಗಿರುವ ಆಸ್ಪತ್ರೆಗೆ ಗಣ್ಯರೇ ಬಂದು ಹೋದರೂ, ಎಷ್ಟೇ ಆಶ್ವಾಸನೆಗಳನ್ನ, ಸಾಂತ್ವನ ನೀಡಿದರೂ ಅವಳಮ್ಮನ ಕಿವಿಗಳಿಗೇನೂ ಕೇಳಿಸದು. ಅರೆಜೀವವಾಗಿ ಮಲಗಿರುವ ಮಗಳ ಚಿಂತೆಯಲ್ಲಿ ಐಸಿಯು ಕೊಠಡಿಯ ಹೊರಗೆ ಕುಸಿದು ಕುಳಿತಿದ್ದಾಳೆ ಆ ತಾಯಿ. ಮಗಳ ಸ್ಥಿತಿಗೆ ಮನಸ್ಸು ಮರುಗುತ್ತಿದ್ದರೂ, ಹೆಂಡತಿಗೆ ಸಮಾಧಾನ ಮಾಡಲು ಪ್ರಯತ್ನಿಸುತ್ತಲೇ ಇದ್ದಾರೆ ಆ ತಂದೆ..!
ಆಸ್ಪತ್ರೆಯ ಹೊರಗೆ, ಶಾಲೆಯ ಸುತ್ತ ತುಂಬಿರುವ ಜನ, ನಡೆಯುತ್ತಿರುವ ಪ್ರತಿಭಟನೆ, ಶಾಲಾ ಮುಖ್ಯಸ್ಥರ ಕಣ್ಣಾಮುಚ್ಚಾಲೆ ಇದ್ಯಾವುದರ ಪರಿವೆಯೂ ಇಲ್ಲ ನೊಂದ ಆ ಜೀವಗಳಿಗೆ.
ಹೇಳಿಕೊಳ್ಳುವದಕ್ಕದು ಪ್ರತಿಷ್ಠಿತ ಶಾಲೆ. ಆ ಶಾಲೆಯ ಒಳಗೆ ನಡೆದಿರೋದು ಮಾತ್ರ ವಿಕೃತತೆಯ ಪರಮಾವಧಿ. ಆ ಮುದ್ದು ಮಗುವಿನ ಮೈಮೇಲೆ ನಡೆದದ್ದು ಬೆಚ್ಚಿಬೀಳಿಸುವ ಪೈಶಾಚಿಕ ಕೃತ್ಯ. ಕೃತ್ಯವೆಸಗಿದ ರಾಕ್ಷಸರ್ಯಾರೋ ಗೊತ್ತಿಲ್ಲ. ಅದನ್ನ ಹೇಳುವುದಕ್ಕೆ ಪುಟ್ಟಿಗಿನ್ನೂ ಎಚ್ಚರವೇ ಆಗಿಲ್ಲ. ಶಾಲೆಯೊಳಗೆ ತನಿಖೆ ನಡೆಯುತ್ತಿದೆ, ಹೊರಗೆ ಜನ ಸೇರಿದ್ದಾರೆ, ಮಾಧ್ಯಮಗಳು ನಿರಂತರ ಸುದ್ದಿ ಪ್ರಸಾರ ಮಾಡುತ್ತಿವೆ.. ವೈದ್ಯರು ಅವರ ಕೆಲಸ ಮಾಡಿದ್ದಾರೆ.. ಆದ್ರೆ, ಪುಟ್ಟಿಗೆ ಮಾತ್ರ ಪ್ರಜ್ಞೆಯೇ ಬಂದಿಲ್ಲ. ಅನುಮಾನಿತರನ್ನ ಬಂಧಿಸಿ ವಿಚಾರಣೆ ನಡೆಸುತ್ತಿರುವ ಪೊಲೀಸರೂ ಕೂಡ ಪುಟ್ಟಿ ಎಚ್ಚರಗೊಳ್ಳುವುದನ್ನೇ ಕಾಯುತ್ತಿದ್ದಾರೆ.
ಕಚೇರಿಯಲ್ಲಿ ಕೂರಲಾಗದೇ ಮನೆಗೆ ಬಂದರೆ, ಅಲ್ಲಿ ಮನಸ್ಸಿಗೆ ಇನ್ನಷ್ಟು ಹಿಂಸೆ. ಪುಟ್ಟಿಯ ಮನೆಗೆ ಬೀಗ ಬಿದ್ದಿದೆ.. ಅವರೆಲ್ಲ ಆಸ್ಪತ್ರೆಯಲ್ಲಿಯೇ ಇದ್ದಾರೆ.. ಚೂಟಿ ಪುಟ್ಟಿಯ ಆಟ, ಓಡಾಟ, ಕುಣಿದಾಟವಿಲ್ಲದೆ ಶಾಂತವಾಗಿರುವ ನಮ್ಮ ವಠಾರ ಜೀವ ಕಳೆಯನ್ನೇ ಕಳೆದುಕೊಂಡಂತಿದೆ. ವಠಾರದ ಹೆಂಗಸರ ಗುಂಪು ಮಾತನಾಡುತ್ತಿರುವುದೂ ಅದನ್ನೇ. ಅಲ್ಲಲ್ಲಿ ಎರಡು ಮೂರು ಹೆಂಗಸರು ನಿಂತು ನಡೆದ ಘಟನೆಯನ್ನ ನೆನೆದು ನೆನೆದು ಲೊಚಗುಟ್ಟುತ್ತಿದ್ದಾರೆ.
ಹೆಂಗಸರ ಮೆಲುದನಿಯ ಮಾತುಗಳ ಶಬ್ಧ, ನನ್ನ ಕಿವಿಗೆ ಬೀಳಬಾರದೆಂಬ ಕಾರಣಕ್ಕೆ ಮನೆಯೊಳ ನಡೆದೆ. ಆದರೆ ಟಿವಿಯಲ್ಲಿ ಬರುತ್ತಿದ್ದ ನಿರಂತರ ವಾತರ್ೆಯ ಸದ್ದು ಕಿವಿಗೆ ಬಡಿಯುತ್ತಿತ್ತು. ಸುದ್ದಿವಾಹಿನಿಗಳಲ್ಲೂ ಎರಡು ದಿನಗಳಿಂದ ಬರೀ ಅದೇ ಸುದ್ದಿ. ಆದರೆ, ಪ್ರಯೋಜನ ಏನು..? ಇಂಥ ಘಟನೆಗಳು ನಡೆದಾಗ ಒಂದೆರಡು ದಿನ ಸುದ್ದಿ ಪ್ರಸಾರ ಮಾಡಿ ಮಾಧ್ಯಮಗಳು ಕೈತೊಳೆದುಕೊಂಡಂತೆ, ಜನರೂ ಮರೆತುಬಿಡುತ್ತಾರೆ. ಪ್ರಕರಣ ದಾಖಲಾಗುತ್ತೆ, ಪೊಲೀಸರೇನೋ ತನಿಖೆ ಮಾಡ್ತಾರೆ.. ಅಪರಾಧಿಗಳು ಸಿಕ್ಕರೆ ನಮ್ಮ ಅದೃಷ್ಟ. ಸಿಕ್ಕ ಅಪರಾಧಿಗಳಿಗೂ ತಪ್ಪಿಸಿಕೊಳ್ಳೋಕೆ ಸಾವಿರ ತೂತುಗಳು ನಮ್ಮ ಕಾನೂನಲ್ಲಿ. ಇನ್ನೊಂದು ಇಂಥ ಘಟನೆಯಾಗುವ ತನಕ ಯಾರಿಗೂ ಈ ಅಮಾನವೀಯ ಕೃತ್ಯದ ನೆನಪು ಕೂಡ ಇರುವುದಿಲ್ಲ.
ಪುಟ್ಟಿಯಂಥ ಮುಗ್ಧ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯಗಳು ಹೆಚ್ಚುತ್ತಲೇ ಇದೆ. ನಮ್ಮ ದೇಶದಲ್ಲಂತೂ ಯಾವಾಗ ಬೇಕಾದರೂ ಲೈಂಗಿಕ ದೌರ್ಜನ್ಯ ಯಾವ ವಯಸ್ಸಿನ ಹೆಣ್ಣಿನ ಮೇಲೆ ಬೇಕಾದರೂ ನಡೆದುಹೋಗಬಹುದು. ಪುಟ್ಟ ಹಸುಳೆಗಳ ಮೇಲೆ, ಪುಟಾಣಿ ಮಕ್ಕಳ ಮೇಲೆ ನಡೆಯುತ್ತಿರುವ ಅತ್ಯಾಚಾರಗಳನ್ನ ನೋಡಿದರೆ ನಾವಿರುವುದು ಎಂಥ ನರಕದಲ್ಲಿ ಎಂಬ ಅಸಹ್ಯ ಮೂಡುತ್ತದೆ. ಎಂಥ ಪೈಶಾಚಿಕ ಮನಸ್ಸಿನವರ ಮಧ್ಯದಲ್ಲಿ ನಾವು ಬದುಕುತ್ತಿದ್ದೇವೆ ಎಂಬ ಭಾವ ಭಯ ಹುಟ್ಟಿಸುತ್ತದೆ. ಅತ್ಯಾಚಾರಕ್ಕೊಳಗಾದ ಹೆಣ್ಣುಮಗಳಿಗೆ ಸಮಾಜದ ಭದ್ರತೆ ಕೊಡುವಂಥ, ಮಾನಸಿಕ ಸ್ಥೈರ್ಯ ತುಂಬುವಂಥ, ನ್ಯಾಯ ಸಿಕ್ಕೇ ಸಿಗುತ್ತದೆ ಎಂಬ ಧೈರ್ಯ ನೀಡುವಂಥ ವ್ಯವಸ್ಥೆ ನಮ್ಮ ದೇಶದಲ್ಲಿ ಇಲ್ಲವೇ ಇಲ್ಲ. ಇದೇ ಕಾರಣಕ್ಕೆ ನೊಂದ ಜೀವಗಳು ಪ್ರಕರಣ ದಾಖಲಿಸುವುದಕ್ಕೇ ಹಿಂಜರಿಯುತ್ತಾರೆ. ಹೀಗಾಗಿ ಅಮಾನವೀಯ ಕೃತ್ಯಗಳು ಮುಚ್ಚಿಹೋಗುವ ಸಾಧ್ಯತೆಗಳೇ ಹೆಚ್ಚು.
ಪುಟ್ಟಿ ಚೇತರಿಸಿಕೊಂಡ ಮೇಲೆ ಅವಳನ್ನ ಆ ಆಘಾತದಿಂದ ಹೊರಗೆ ತರುವ ಸವಾಲಿದೆ ನಮ್ಮ ಮುಂದೆ. ಆಗಷ್ಟೇ ಕಣ್ಣುಬಿಟ್ಟ ಪುಟ್ಟಿಯನ್ನ ಮುತ್ತಿಕೊಂಡು ಪೊಲೀಸರೇನೇನು ಪ್ರಶ್ನೆ ಕೇಳುತ್ತಾರೋ.. ಅದರಿಂದ ಅವಳ ಮನಸ್ಸಿಗೆ ಏನೇನು ಆಘಾತವಾಗುತ್ತೋ ಅನ್ನೋ ಭಯ ನನಗೆ. ಆದರೆ ಆ ಪಾಪಿಗಳು ಸಿಗಬೇಕು ಅಂದರೆ ಅವಳನ್ನ ಮಾತನಾಡಿಸಲೇ ಬೇಕಲ್ಲ.
ಅದೆಷ್ಟೋ ಹೊತ್ತಿನಿಂದ ಟಿವಿಯ ಮುಂದೆಯೇ ಕುಳಿತಿದ್ದೇನೆ. ಪುಟ್ಟಿಯ ಮೇಲೆ ನಡೆದ ಅಮಾನವೀಯ ಕೃತ್ಯದ ಬಗ್ಗೆ ಮತ್ತೆ ಮತ್ತೆ ಅದೇ ಸುದ್ದಿಯನ್ನ ಕೇಳಲು ಸಾಧ್ಯವಾಗದೇ ಚಡಪಡಿಸುತ್ತಿದೆ ನನ್ನ ಮನಸ್ಸು. ವಾಹಿನಿಗಳು,ಮಾಧ್ಯಮಗಳು ಸುದ್ದಿ ಪ್ರಸಾರ ಮಾಡಲೇಬೇಕು. ಸಮಾಜದ ಪರಿವರ್ತನೆಯಲ್ಲಿ ಮಾಧ್ಯಮದ ಜವಾಬ್ಧಾರಿಯಿದೆ ಅನ್ನೋದನ್ನ ನಾನು ಒಪ್ಪಿಕೊಳ್ಳುತ್ತೇನೆ ಆದರೆ, ಕೇವಲ ಘಟನೆ ನಡೆದ ಎರಡು ದಿನ ಅದೇ ಅದೇ ಸುದ್ದಿಯನ್ನ ಪ್ರಸಾರ ಮಾಡಿ, ಚಚರ್ೆ ನಡೆಸಿ ಬಿಟ್ಟುಬಿಟ್ಟರೆ ಸಂತ್ರಸ್ತೆಗೆ ನ್ಯಾಯ ಸಿಕ್ಕಂತಾಗುತ್ತದೆಯೇ..? ಆ ಪ್ರಕರಣದ ತನಿಖೆ ಎಲ್ಲಿಯ ತನಕ ಬಂದಿದೆ, ಹೇಗೆ ನಡೆಯುತ್ತಿದೆ ಅಪರಾಧಿಗಳು ಯಾರು ಅನ್ನೋದರ ಬಗ್ಗೆ ಸಕರ್ಾರಕ್ಕೆ, ಕಾನೂನಿಗೆ, ಪೊಲೀಸರಿಗೆ ಎಚ್ಚರಿಸುವ ಕೆಲಸವನ್ನ ಮಾಧ್ಯಮಗಳ ಮಾಡಬಹುದಲ್ಲವೇ? ಹಿಂದಿನ ಪ್ರಕರಣ ನೆನಪಾಗಲು ಮತ್ತೊಂದು ಪ್ರಕರಣವೇ ನಡೆಯಬೇಕೆ..? ಇಂಥ ನನ್ನ ಗೊಂದಲದ ಪ್ರಶ್ನೆಗಳಿಗೆ ಉತ್ತರಿಸುವವರು ಯಾರು..? ದೂರದರ್ಶನದ ಶಬ್ಧವನ್ನ ಕಡಿಮೆ ಮಾಡಿ, ನನ್ನ ಕೊಠಡಿ ಸೇರಿಕೊಂಡೆ.
ನೊಂದ ಮನಸ್ಸಿನೊಳಗೆ ಯೋಚನೆಗಳದೇ ಹೊಡೆದಾಟ. ಹಾಸಿಗೆಗೆ ಒರಗಿಕೊಂಡು ಕುಳಿತ ನನಗೆ ನನ್ನ ಹಳ್ಳಿ ನೆನಪಾಯ್ತು. ಹದಿನೈದು ವರ್ಷಗಳ ಹಿಂದೆ ಅಲ್ಲಿಯೂ ನಡೆದಿದ್ದ ಒಂದು ಘಟನೆ ಕಣ್ಣೆದುರು ಬಂದುಹೋಯ್ತು. ರಾಕ್ಷಸರ ಕೈಗೆ ಸಿಕ್ಕು ನಲುಗಿಹೋಗಿದ್ದ ಆ ಬಾಲೆ, ಹಳ್ಳಿಗರ ದೃಷ್ಠಿಯಲ್ಲಿ ಶೀಲ ಕಳೆದುಕೊಂಡವಳಾಗಿಬಿಟ್ಟಿದ್ದಳು. ಅವಳು ಸಿಕ್ಕಾಗಲೆಲ್ಲಾ ಪದೇ ಪದೇ ಅವಳ ಮೇಲೆ ನಡೆದ ದೌರ್ಜನ್ಯವನ್ನ ನೆನಪಿಸಿ, ಪ್ರಶ್ನೆಗಳನ್ನ ಕೇಳಿ, ಮಾನಸಿಕವಾಗಿ ಹಿಂಸೆ ನೀಡಿ ಇನ್ನು ತನ್ನ ಜೀವನವೇ ವ್ಯರ್ಥ ಎಂಬ ಭಾವ ಅವಳಲ್ಲಿ ಮೂಡುವಂತೆ ಮಾಡಿಬಿಟ್ಟಿದ್ದರು. ಆಗಷ್ಟೇ ಅರಳುತ್ತಿದ್ದ ಆ ಹೂವಿನ ಜೀವನಪ್ರೀತಿಯನ್ನೇ ಕಸಿದುಕೊಂಡುಬಿಟ್ಟರು. ಇಂಥ ಜನರು ನಗರ ಪ್ರದೇಶದಲ್ಲಿ ಇಲ್ಲವೆಂದಲ್ಲ.. ಇಲ್ಲಿಯೂ ಅಂತಹ ಜನರಿದ್ದಾರೆ.. ಆದರೆ ನಮ್ಮ ಪುಟ್ಟಿಯ ಕುಟುಂಬ ಮನೆಯನ್ನ, ಶಾಲೆಯನ್ನೇ ಬದಲಾಯಿಸಿ ಅವಳನ್ನ ಬೇರೆ ಊರಿನಲ್ಲಿಯೋ, ಅಥವಾ ಇದೇ ನಗರದ ಇನ್ನೊಂದು ಮೂಲೆಯಲ್ಲಿಯೋ ಮನೆ ಮಾಡಿ ಮಗಳನ್ನ ನೋಡಿಕೊಳ್ಳಬಹುದು. ಪ್ರಕರಣ ಗೊತ್ತಿರುವ ಜನರಿಂದ, ಅವರ ಮಾತುಗಳಿಂದ ಪುಟ್ಟಿಯನ್ನ ದೂರವಿಡಬಹುದು. ಪುಟ್ಟಿ ಗುಣವಾಗಿ ಬಂದಮೇಲೆ ಅವಳ ತಾಯಿಯ ಬಳಿ ಈ ಬಡಾವಣೆಯನ್ನೇ ಬಿಟ್ಟು ಬೇರೆಯ ಕಡೆ ಮನೆ ಹುಡುಕಿಕೊಳ್ಳಿ ಎಂಬ ಸಲಹೆ ನೀಡಲೇಬೇಕು ನಾನು.
ನೊಂದ ಹೆಣ್ಣಿನ ಮನಸ್ಸಿಗೆ ಮತ್ತಷ್ಟು ನೋವು ನೀಡುವ ನಮ್ಮ ಸಮಾಜದ ಯೋಚನಾ ಲಹರಿಯನ್ನ, ಪರಿಧಿಯನ್ನ ವಿಸ್ತರಿಸಬೇಕು. ನಮ್ಮ ಸಮಾಜದಲ್ಲಿರುವ ಹೆಣ್ಣಿನ ಶೀಲದ ಕುರಿತ ಪರಿಕಲ್ಪನೆಯನ್ನ ಆಧುನಿಕತೆಗೆ ತಕ್ಕಂತೆ ಮಾರ್ಪಡಿಸುವ ಕೆಲಸ ಮೊದಲು ನಡೆಯಬೇಕು. ಇಂಥ ಜಾಗೃತಿಯ ಕೆಲಸಗಳನ್ನ ಖುದ್ದು ಸಕರ್ಾರವೇ ನಡೆಸಬೇಕು. ಹೆಣ್ಣುಮಕ್ಕಳಲ್ಲಿ ತಮ್ಮತನದ ಅರಿವು, ಗೆಲ್ಲುವ ವಿಶ್ವಾಸ, ಕಷ್ಟವನ್ನೆದುರಿಸುವ ಧೈರ್ಯ ತುಂಬಲು ಸಮಾಜದ ಕಣ್ತೆರೆಸಿ ನೊಂದ ಬಾಲೆಯರಿಗೆ ಆಧಾರವಾಗಿ ನಿಲ್ಲಬೇಕು ನಮ್ಮ ಮಾಧ್ಯಮಗಳು. ಇಂಥ ಪ್ರಕರಣಗಳು ಆದಷ್ಟು ಬೇಗ ಮುಗಿದು, ಅಪರಾಧಿಗಳಿಗೆ ತಕ್ಕ ಶಿಕ್ಷೆಯಾಗಬೇಕು. ತ್ಯಾಚಾರದಂಥ ಘೋರ ಕೃತ್ಯವೆಸಗಿದ ಅಪರಾಧಿಗಳಿಗೆ ಆದಷ್ಟು ಬೇಗ ಶಿಕ್ಷೆಯಾಗುವಂತೆ ನೋಡಿಕೊಳ್ಳುವ ಜವಾಬ್ದಾರಿ ಸಕರ್ಾರ, ಕಾನೂನಿನದ್ದಾದರೆ, ಆ ಅಪರಾಧಿಗಳಿಗೆ ವಿಧಿಸುವ ಶಿಕ್ಷೆಗಳನ್ನ ವಿವರವಾಗಿ ಬಿತ್ತರಿಸಿ, ವಿಕೃತ ಮನಸ್ಸುಗಳಿಗೆ ಎಚ್ಚರಿಸುವ ಕೆಲಸ ಮಾದ್ಯಮಗಳಿಂದ ನಡೆಯಬೇಕು. ಅತ್ಯಂತ ಆಳವಾಗಿ ಯೋಚನೆಯಲ್ಲಿ ಬಿದ್ದುಬಿಟ್ಟಿದ್ದೇನೆ ನಾನು. ಬರಿಯ ಯೋಚನೆಗಳಾಳದಲ್ಲಿ ಸಿಲುಕಿಕೊಂಡು, ಇಂಥ ಕೃತ್ಯಗಳ ವಿರುದ್ಧ ಮನಸಾರೆ ಹೋರಾಡುತ್ತಿದ್ದೇನೆ ನಾನು.
ಹೀಗಾಗಿ ಪುಟ್ಟಿಗೆ ಎಚ್ಚರ ಬಂದಿರುವ ಸುದ್ದಿ ಸಿಕ್ಕ ಮೇಲಾದರೂ, ಮನಸ್ಸಿಗೆ ಸ್ವಲ್ಪ ಸಮಾಧಾನ ಸಿಗಬಹುದು ಎಂಬ ಕಾರಣಕ್ಕೆ ಮತ್ತೆ ಟಿವಿಯ ಮುಂದೆ ಹೋಗಿ ಕುಳಿತೆ. ಆದರೆ, ಅಲ್ಲಿ ಪುಟ್ಟಿಯ ಚೇತರಿಕೆಯ ಸುದ್ದಿ ಇರಲೇ ಇಲ್ಲ. ಯಾರೋ ನಾಲ್ಕಾರು ಜನರನ್ನ ಕುಳ್ಳಿರಿಸಿಕೊಂಡು ಚಚರ್ೆ ಮಾಡುತ್ತಿದ್ದರು ಅಷ್ಟೆ. ಸ್ಕ್ರೋಲ್, ಬ್ರೇಕಿಂಗ್, ಟಾಪ್ ಬ್ಯಾಂಡ್ ಎಲ್ಲವನ್ನೂ ಪರೀಕ್ಷಿಸಿ ನೋಡಿದೆ ಅಲ್ಲಿ ಎಲ್ಲಿಯೂ ಪುಟ್ಟಿ ಆರೋಗ್ಯದ ಬಗ್ಗೆ ಸುದ್ದಿ ಕಾಣಿಸಲಿಲ್ಲ. ಮತ್ತೆ ಅಲ್ಲಿಂದೆದ್ದು ಬಂದು ದೇವರ ಮುಂದೆ ಕುಳಿತ ನನ್ನಲ್ಲಿ ಪುಟ್ಟಿಯದೇ ಯೋಚನೆ. `ಹೆಣ್ಣು ಯಾರನ್ನ ನಂಬಬೇಕು.. ದೇವರೇ..? ಸರಸ್ವತಿ ದೇಗುಲದಲ್ಲಿಯೇ ಇಂಥ ಕೃತ್ಯಗಳು ನಡೆದುಹೋದರೆ..? ಈ ಕ್ರೌರ್ಯದ ಪರಮಾವಧಿಗೆ ಏನನ್ನಬೇಕು..? ನಮ್ಮ ಸಮಾಜದ ದುರವಸ್ಥೆಯೇ..? ಶಿಕ್ಷಣ ಸಂಸ್ಥೆಗಳ ನಿರ್ಲಕ್ಯವೇ..? ನಮ್ಮ ಸಂಸ್ಕಾರ, ಮಾನವೀಯ ಮೌಲ್ಯಗಳ ಅದಃಪತನವೇ..?' ದೇವರನ್ನೇ ಪ್ರಶ್ನಿಸಿಬಿಟ್ಟೆ. ಆದರೆ ದೇವರೂ ಉತ್ತರಿಸಲಾರ..! ಪುಟ್ಟಿ ಮರಳಿ ಬಂದರೆ ಸಾಕು ಅಂತ ಅದೇ ದೇವರಲ್ಲಿ ಬೇಡಿಕೊಂಡು, ದೀಪ ಹಚ್ಚಿಟ್ಟು ಅಲ್ಲಿಯೇ ಒರಗಿಕೊಂಡೆ.
No comments:
Post a Comment