ಆ ಮಕ್ಕಳು ಏನು ತಪ್ಪು ಮಾಡಿದ್ದರು..? ಅವರು ಯಾರಿಗೆ ಮೋಸ ಮಾಡಿದ್ದರು..? ಪಾಪ..! ಯಾರದೋ ದ್ವೇಷಕ್ಕೆ, ಇನ್ಯಾರದೋ ನಿರ್ಲಕ್ಷ್ಯಕ್ಕೆ ಬಲಿಯಾಗಿಹೋದರು. ಎಷ್ಟು ಹಸಿದಿತ್ತೋ ಅವರ ಹೊಟ್ಟೆ... ಹಾಸ್ಟೆಲ್‌ನಲ್ಲಿ ಕೊಟ್ಟ ಆ ವಿಷದ ಊಟವನ್ನ ಹೊಟ್ಟೆತುಂಬ ಉಂಡುಬಿಟ್ಟಿದ್ರು. ಹಸಿದ ಹೊಟ್ಟೆಗೆ ಹೋದ ವಿಷ ಆ ಎಳೆಯರ ಪ್ರಾಣವನ್ನೇ ಕಿತ್ತು ತೆಗೆದುಬಿಟ್ಟಿತ್ತು. ಎಂಥವರಿಗಾದ್ರೂ ಒಮ್ಮೆ ಮನಕರಗಿಸುವ ಘಟನೆಯಲ್ಲವೇ ಇದು..? ಬುಧವಾರ ರಾತ್ರಿ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕು ಹುಳಿಯಾರು ಹೋಬಳಿಯ ವಿದ್ಯಾವಾರಿಧಿ ಇಂಟರ್‌ನ್ಯಾಷನಲ್ ಸ್ಕೂಲ್‌ನಲ್ಲಿ ನಡೆದ ಈ ಘಟನೆ ಎಂಥ ಆಘಾತಕಾರಿ ಅಲ್ವಾ..?
ಎಸ್ ಎಸ್ ಎಲ್ ಸಿ ಪರೀಕ್ಷೆ ಹತ್ತಿರ ಬರುತ್ತಿದೆ, ತಾವು ಚೆನ್ನಾಗಿ ಓದಿಕೊಳ್ಳಬೇಕು ಅನ್ನೋ ಕಾರಣಕ್ಕೆ ರಾತ್ರಿ ೮ಕ್ಕೆ ಬೇಗ ಬೇಗ ಊಟ ಮಾಡಿ ಓದಲು ಹೊರಟಿದ್ದರಂತೆ ಈ ಮಕ್ಕಳು. ಉಳಿದೆಲ್ಲ ಮಕ್ಕಳು ಚಪಾತಿ ಪಲ್ಯ ತಿಂದರೆ, ಆಕಾಂಕ್ಷ, ಶಾಂತಮೂರ್ತಿ ಮತ್ತು ಶ್ರೇಯಸ್ ಅನ್ನ ಸಾಂಬಾರ್ ಊಟ ಮಾಡಿದ್ದರಂತೆ. ಊಟ ಮಾಡಿ ಸ್ವಲ್ಪ ಹೊತ್ತಾಗುತ್ತಿದ್ದಂತೆ ವಾಂತಿ ಮಾಡಿಕೊಳ್ಳತೊಡಗಿದರು. ಹೊಟ್ಟೆ ಅವಚಿಟ್ಟುಕೊಂಡು ವಾಂತಿ ಮಾಡುವುದನ್ನ ನೋಡಿ ಹಾಸ್ಟೆಲ್ ಸಿಬ್ಬಂದಿ ವೈದ್ಯರಿಗೆ ಬರಹೇಳಿದ್ದಾರೆ. ಪ್ರಾಥಮಿಕ ಚಿಕಿತ್ಸೆಯನ್ನೆಲ್ಲಾ ನೀಡಿದರೂ ಸಮಸ್ಯೆ ಶಮನವಾಗದಿರುವಾಗ ಆಸ್ಪತ್ರೆಯಿಂದ ಆಸ್ಪತ್ರೆಗೆ ಸುತ್ತಿದ್ದಾರೆ, ಉಸಿರಾಟದ ಸಮಸ್ಯೆ ಕಾಣಿಸುತ್ತಿದ್ದಂತೆ ತುಮಕೂರು ಜಿಲ್ಲಾಸ್ಪತ್ರೆಗೆ ಕಳುಹಿಸಲಾಯಿತು. ಜಿಲ್ಲಾಸ್ಪತ್ರೆ ತಲುಪುವಷ್ಟರಲ್ಲಿ ಬೆಳಿಗ್ಗೆ ೪ ಗಂಟೆಯಾಗಿಹೋಗಿತ್ತು. ಆದರೆ, ಕಾಲ ಮಿಂಚಿಹೋಗಿತ್ತು. ಜಿಲ್ಲಾಸ್ಪತ್ರೆ ತಲುಪುವಷ್ಟರಲ್ಲಿಯೇ ಆ ಮೂವರು ಮಕ್ಕಳು ಯಮಯಾತನೆಯನ್ನ ಅನುಭವಿಸಿ ಜೀವಬಿಟ್ಟಿದ್ದರು.
ಆ ಮಕ್ಕಳನ್ನ ಹೆತ್ತ ಕರುಳುಗಳಿಗೆ ಸುದ್ದಿ ತಲುಪುವಷ್ಟರಲ್ಲಿ ಸೂರ್ಯ ಬಂದಿದ್ದ. ಬೆಳಬೆಳಗ್ಗೆ ಅವರಿಗೆ ಎಂಥ ಆಘಾತ..! ಹೆತ್ತ ಮಗುವಿನ ಶವದ ಮುಂದೆ ರೋಧಿಸೋ ತಾಯಿಯನ್ನ ಸಮಾಧಾನ ಮಾಡಲು ಸಾಧ್ಯವೇ..? ಕರುಳು ಕಿವುಚಿಬರುತ್ತೆ..! ಆ ಮಕ್ಕಳ ಜೀವವನ್ನ ಊಟವೇ ನುಂಗಿಬಿಟ್ಟಿತ್ತು. ಮುಗ್ಧವಾಗಿ ಹಸಿವು ನೀಗಿಸಿಕೊಂಡಿದ್ದ ಮಕ್ಕಳ ಪಾಲಿಗೆ ಅನ್ನವೇ ಯಮನಾಗಿಹೋಗಿದ್ದ..!
ತಾವು ಹೆತ್ತು ಹೊತ್ತು ಸಾಕಿದ ಮಕ್ಕಳು ಒಳ್ಳೆಯ ಶಿಕ್ಷಣ ಪಡೆಯಲಿ ಅನ್ನೋಕಾರಣಕ್ಕೆ ಆ ತಂದೆ ತಾಯಿಯರು ಇಂಥ ರೆಸೆಡೆನ್ಶಿಯಲ್ ಸ್ಕೂಲ್‌ಗೆ ಹಾಕಿರ್ತಾರೆ. ಮನೆಗಿಂತ ಹಾಸ್ಟೆಲ್‌ನಲ್ಲಿದ್ದರೆ ಅಭ್ಯಾಸದ ಕಡೆಗೆ ಹೆಚ್ಚಿನ ಗಮನವಿರುತ್ತದೆ ಎಂಬ ಉದ್ದೇಶದಿಂದಲೋ, ಮಕ್ಕಳು ತಮ್ಮ ಮೇಲೆ ಅವಲಂಬಿಗಳಾಗದಿರಲಿ ಅನ್ನೋ ಮನಸ್ಸಿನಿಂದಲೋ, ತಮ್ಮೂರಿನಲ್ಲಿ ಒಳ್ಳೆಯ ಶಾಲೆ ಇಲ್ಲವೆಂದೋ, ದೂರ ಪ್ರಯಾಣ ಮಾಡುವುದಕ್ಕಿಂದ ಹಾಸ್ಟೆಲ್‌ನಲ್ಲಿದ್ದು ಓದಿಕೊಳ್ಳಲಿ ಎಂಬ ಕಾರಣಕ್ಕೋ ತಮ್ಮ ಮಕ್ಕಳನ್ನ ಇಂಥ ಶಾಲೆಗಳಿಗೆ ಸೇರಿಸಿದ್ದರು. ತಾವು ಹೆತ್ತು ಸಾಕಿ ಬೆಳೆಸಿದ ಮಕ್ಕಳನ್ನ ಸಂಪೂರ್ಣ ಶಾಲೆಯವರನ್ನ ನಂಬಿ ಬಿಟ್ಟು ಹೋಗಿದ್ದರು.. ಆದರೆ ಆ ನಂಬಿಕೆಯ ಪರವಾಗಿ ಆ ತಾಯಿ ತಂದೆಯರಿಗೆ ಸಂದದ್ದೇನು..?ಮಕ್ಕಳನ್ನೇ ಕಿತ್ತುಕೊಳ್ಳೋ ಮಹಾ ಮೋಸ..!
ಮೋಸದಿಂದ ವಿಷ ಉಂಡು ಅದೆಷ್ಟು ಪಾಡು ಪಟ್ಟವೋ ಆ ಮಕ್ಕಳು, ಎಷ್ಟು ನೋವು ತಿಂದು ಜೀವಬಿಟ್ಟವೋ.. ನೆನೆಸಿಕೊಂಡರೆ ಕಣ್ಣಲ್ಲಿ ನೀರು ತುಂಬುತ್ತೆ. ಮನಸ್ಸಿನಲ್ಲಿ ಅದೆಷ್ಟು ಕನಸುಗಳನ್ನ ಹೊತ್ತಿದ್ದವೋ ಆ ಜೀವಗಳು. ವಿಷಾಹಾರ ಹಾಕಿ ಆ ಮುಗ್ಧ ಮಕ್ಕಳನ್ನ ಕೊಲ್ಲುವಷ್ಟು ದ್ವೇಷ ಯಾರಿಗಿದ್ದಿರಬಹುದು. ದ್ವೇಷವೋ, ಅಚಾತುರ್ಯವೋ, ನಿರ್ಲಕ್ಷ್ಯವೋ ಅದ್ಯಾವುದೋ ಕಾರಣಗಳಿರಬಹುದು.. ಅದು ಮುಂದೆ ತನಿಖೆಯಿಂದ ಬಯಲಾಗಲೇಬೇಕು. ತಪ್ಪಿತಸ್ತರು ಸಿಕ್ಕಿ ಅವರಿಗೆ ಶಿಕ್ಷೆಯಾಗುತ್ತದೆ. ವಿದ್ಯಾವಾರಿಧಿ ಇಂಟರ್‌ನ್ಯಾಷನಲ್ ಸ್ಕೂಲ್ ಮಾಜಿ ಎಮ್‌ಎಲ್‌ಎ ಕಿರಣ್ ಕುಮಾರ್ ಅವರ ಒಡೆತನದ್ದಾದ್ದರಿಂದ ಸಧ್ಯಕ್ಕೆ ಅವರನ್ನ ಬಂಧಿಸಲಾಗಿದೆ. ಇದೆಲ್ಲವೂ ಹೌದು.. ಆದರೆ ಪುತ್ರಶೋಕದಲ್ಲಿರುವ ಆ ತಂದೆ ತಾಯಿಯರಿಗೆ ಮಕ್ಕಳು ಸಿಗುತ್ತಾರಾ ಹೇಳಿ.. ಪ್ರತಿದಿನ ಆ ಮಕ್ಕಳನನ್ನ ನೆನೆದು ನೆನೆದು ಜೀವಂತ ಶವವಾಗುತ್ತಾರೆ. ಉತ್ತಮ ಶಿಕ್ಷಣದ ಆಸೆಗಾಗಿ ತಮ್ಮ ಕುಡಿಯನ್ನ ರೆಸಿಡೆನ್ಶಿಯಲ್ ಸ್ಕೂಲ್‌ನಲ್ಲಿ ಬಿಟ್ಟಿದ್ದಕ್ಕೆ ಮುಮ್ಮಲ ಮರುಗುತ್ತಾರೆ. ಮಕ್ಕಳನ್ನ ದೂರ ಇರಿಸಿದ್ದ ಪಶ್ಚಾತಾಪದಿಂದ ಕುಗ್ಗಿಹೋಗ್ತಾರೆ. ಇಂಥ ನೋವನ್ನ ಯಾವ ಪರಿಹಾರದಿಂದ ನೀಗಿಸಿಸಲು ಸಾಧ್ಯ..?
ಅದ್ಯಾರೇ ಆಗಲಿ.. ಅವರು ಅದೆಷ್ಟೇ ಪ್ರಭಾವಿಗಳಾಗಲಿ.. ಮಕ್ಕಳನ್ನ ಕೊಂದ ಆ ಪಾಪಿಗಳಿಗೆ ಶಿಕ್ಷೆಯಾಗಲಿ..! ಕರುಳಿನ ಕೂಗನ್ನ ಕೇಳಿಸಿಕೊಳ್ಳೋ ಆ ದೇವರೇ..ಈ ದುಃಖತಪ್ತ ತಂದೆ ತಾಯಿಯರಿಗೆ ನೋವನ್ನ ಸಹಿಸೋ ಶಕ್ತಿ ಕೊಡಲಿ.
No comments:
Post a Comment