Friday, 4 December 2020

ನಮ್ಮ WhatsApp ಚಾಟ್‌ನಲ್ಲೀಗ ನಂಬರ್‌ಗಳದೇ ಲೇವಾದೇವಿ..!



ವತ್ತು ನಮ್ಮ ಮನೆಯ ಹಾಲ್‌ ರಣರಂಗವಾಗಿತ್ತು..!  ನಮ್ಮಿಬ್ಬರ ನಡುವೆ ದೊಡ್ಡ ಜಗಳವೇ ಎದ್ದಿತ್ತು.  ‘ನೀನ್ಯಾಕೆ ನಾನು ಓದುತ್ತಿರುವ ಪುಸ್ತಕದ ಬುಕ್‌ಮಾರ್ಕ್‌ ತೆಗೆದು ಹಾಕ್ತೀಯಾ...?’  ಅಂತ ನಾನು ಸ್ವಲ್ಪ ಸಿಟ್ಟಿನಿಂದ್ಲೇ ನನ್ನ ಗಂಡನನ್ನ ಕೇಳಿದ್ದೆ.  ‘ಅಯ್ಯೋ ನಾನು ತೆಗೆದಿಲ್ಲ ಕಣೆ,  ನೀನೇ ತೆಗೆದಿಟ್ಟಿರಬಹುದು..?’  ಅಂದ ಅವನು.  ನಾನೇ ಓದುತ್ತಿರೋ ಬುಕ್‌ನಲ್ಲಿರೋ ಬುಕ್‌ಮಾರ್ಕ್‌‌ನ್ನ ನಾನೇ ತೆಗಿದಿಡ್ತೀನಾ.?  ನೋಡು ಇಲ್ಲಿ..! ನಾನು ಈ ಪುಸ್ತಕದಲ್ಲಿ ಇಟ್ಟುಕೊಂಡಿದ್ದ ಬುಕ್‌ಮಾರ್ಕ್ ನೀನು ಓದುತ್ತಿರುವ ಬುಕ್‌ನಲ್ಲಿ ಹೇಗೆ ಬಂತು..? ಅಂತ ರೆಡ್‌ಹ್ಯಾಂಡ್‌ಆಗಿ ನನ್ನ ಬುಕ್‌ಮಾರ್ಕ್‌ನ್ನ ಕೈಯ್ಯಲ್ಲಿ ಹಿಡಿದು ನಾನು ಕೇಳ್ತಾ ಇದ್ರೆ,   ‘ದೇವರಾಣೆ ನನಗೆ ಗೊತ್ತಿಲ್ಲಮ್ಮಾ ತಾಯಿ.. ಕೆಳಗೆ ಬಿದ್ದಿದ್ದನ್ನ ನಾನು ನನ್ನ ಬುಕ್‌ನೊಳಗೆ ಹಾಕಿದ್ದೀನಿ ಅಷ್ಟೆ. ಅಂತ ಅವನು ಕೈ ಮುಗಿದು ಸಮಜಾಯಿಶಿ ಕೊಡ್ತಾ ಇದ್ದ.   ನಾನು ಓದುತ್ತಿರುವ ಪೇಜ್‌ಕಳೆದು ಹೋಗಿದ್ದಕ್ಕೆ ನಾನು ಕಿರಿಕಿಯಿಂದ ಬುಸುಗುಡುತ್ತಿದ್ರೆ, ನನ್ನ ಗಂಡನ ಮುಖ ಗಡಿಗೆಯಂತಾಗಿತ್ತು.  ಎರಡು ವರ್ಷಗಳ ಹಿಂದೆ ಪದೇ ಪದೇ ನಮ್ಮ ನಡುವೆ ನಡೀತಿದ್ದ ಕಾಮನ್‌ ಜಗಳ ಇದು. 

ಪುಸ್ತಕ ಓದುವ ಹವ್ಯಾಸಿಗರಾಗಿರುವ ನಾವು ಒಟ್ಟೊಟ್ಟಿಗೆ ಎರಡ್ಮೂರು ಬುಕ್‌ಗಳ ಹಿಂದೆ ಬಿದ್ದಿರ್ತೀವಿ.  ನನಗೋ ಅದೇನೋ ವಿಚಿತ್ರ ಚಟ.  ಒಂದನ್ನ ಓದುವಾಗ ಇನ್ನೊಂದರ ಕಡೆ ಆಕರ್ಷಣೆ ಜಾಸ್ತಿ. ಒಂದೇ ಗುಕ್ಕಿನಲ್ಲಿ ಇಡೀ ಪುಸ್ತಕವನ್ನಂತೂ ಓದೋಕಾಗಲ್ವಲ್ಲ.. ಹೀಗಾಗಿ ಸದಾ ಕನಿಷ್ಠ ಎರಡು ಪುಸ್ತಕಗಳಲ್ಲಿ ಬುಕ್‌ಮಾರ್ಕ್‌ ಅಂತೂ ಇದ್ದೇ ಇರುತ್ತೆ.  ಹಾಲ್‌ನಲ್ಲಿ,  ಬೆಡ್‌ರೂಮ್‌ನಲ್ಲಿ,  ಕಿಚನ್‌ನಲ್ಲಿ ಹೀಗೆ ಎಲ್ಲೆಲ್ಲಿಯೂ ಪುಸ್ತಕಗಳೇ ಇರೋ ನಮ್ಮನೆಯಲ್ಲಿ ಬುಕ್‌ಮಾರ್ಕ್ ಮಾಯವಾಗೋ ಸಮಸ್ಯೆ ಹೊಸದಾಗಿ ಶುರುವಾಗಿತ್ತು. ಆ ಬುಕ್‌ಮಾರ್ಕ್‌ಮಾಯವಾಗೋದು ಯಾರಿಂದ..? ಅನ್ನೋದನ್ನ ಕಂಡು ಹಿಡಿಯೋಕೂ ಸಮಯವೇನೂ ಹಿಡಿಯಲಿಲ್ಲ ಎನ್ನಿ..!

ನನ್ನ ಮಗ ಅಥರ್ವ ಇನ್ನೂ ಎರಡು ವರ್ಷದ ಕಂದ ಆಗ. ಅವನಿಗೋ ನಮ್ಮ ಪುಸ್ತಕಗಳಲ್ಲಿರುವ  ಬುಕ್‌ಮಾರ್ಕ್ ಮೇಲೆ ಅದೇನೋ ಅಟ್ರಾಕ್ಷನ್‌. ಟೇಬಲ್‌ಮೇಲೆ, ಟಿವಿ ಸ್ಟ್ಯಾಂಡ್‌ಮೇಲೆ, ಕಾಟ್‌ಮೇಲೆ ಪುಸ್ತಕಗಳನ್ನ ಕಂಡರೆ ಸಾಕು,  ಬೇಗ ಬೇಗ ಹೋಗಿ ಅವುಗಳನ್ನ  ತಡಕಾಡಿ ಅದರಲ್ಲಿರೋ ಬುಕ್‌ಮಾರ್ಕ್‌ನ್ನ ತೆಗೆದುಕೊಂಡು, ಅದರ ಜತೆ ಆಟವಾಡ್ತಿದ್ದ. ನನ್ನ ಮಗನ ಬುಕ್‌ಮಾರ್ಕ್ ಅಟ್ರಾಕ್ಷನ್‌ಕುರಿತು ಹೇಳೋ ಮೊದಲು ನನ್ನದನ್ನೂ ಒಂಚೂರು ಹೇಳಿಬಿಡ್ತೀನಿ ಕೇಳಿ.  

ನನಗೂ ಕೂಡ ಬುಕ್‌ಮಾರ್ಕ್‌ಗಳ ಮೇಲೆ ಅದೇನೋ ಅವಿನಾಭಾವ ಸೆಳೆತ.  ಬುಕ್‌ಸ್ಟಾಲ್‌ಗಳಲ್ಲಿ ಪುಸ್ತಕಗಳನ್ನ ಕೊಂಡಾಗ ತಪ್ಪದೇ ನಾನು ಎರಡು ಹೆಚ್ಚೇ ಬುಕ್‌ಮಾರ್ಕ್‌‌ಗಳನ್ನ ಕೇಳಿ ಪಡೆಯೋದು ನನ್ನ ಅಭ್ಯಾಸ. ಕೆಲವು ಅಂಗಡಿಯವರು ಖುಷಿಯಿಂದ ಕೊಟ್ಟರೆ,  ಇನ್ಕೆಲವು ಮಳಿಗೆಯವರು ನನ್ನ ಬುಕ್‌ಮಾರ್ಕ್ ಚಪಲ ನೋಡಿ ಮುಖ ಗಂಟಿಕ್ಕಿದ್ದೂ ಇದೆ.  ಇರಲಿ ಬಿಡಿ.  ನಮ್ಮನ್ನ ಮದುವೆಗೆ ಆಹ್ವಾನಿಸಿ ಕೊಡುವ ಚೆಂದದ ಮಂಗಳ ಪತ್ರಗಳೂ ಕೂಡ ನನ್ನ ಕೈಯ್ಯಲ್ಲಿ ಬುಕ್‌ಮಾರ್ಕ್‌ಗಳಾಗಿ ಅವತಾರವೆತ್ತಿಬಿಡುತ್ತವೆ.  ಅದಲ್ಲದೆ,  ಕಾರ್ಡ್‌ಬೋರ್ಡ್‌ಶೀಟ್‌ಗಳನ್ನೂ ಕತ್ತರಿಸಿ ಅದರಮೇಲೆ ಚೆಂದದ ಚಿತ್ರ ಬಿಡಿಸಿಟ್ಟುಕೊಂಡು ಬುಕ್‌ಮಾರ್ಕ್‌ಆಗಿ ಉಪಯೋಗಿಸುತ್ತಿದ್ದ ದಿನಗಳೂ ಇದ್ವು. ಹೊಸ ಬಟ್ಟೆಗಳ ಜತೆ ಬರುವ ಟ್ಯಾಗ್‌ಳಂತೂ ನಮ್ಮ ಪುಸ್ತಕಗಳೊಳಗೆ ಬೆಚ್ಚಗೆ ಕೂರೋದು ಸರ್ವೇ ಸಾಮಾನ್ಯ.  ಹೀಗಾಗಿ ಹೊಸ ಬಟ್ಟೆ ಕೊಳ್ಳುವಾಗ ಅದರ ಟ್ಯಾಗ್‌ಗೂ ನಾನು ಇಂಪಾರ್ಟೆನ್ಸ್‌ಕೊಡ್ತೀನಿ ಅಂದ್ರೆ, ನೀವೆ ಲೆಕ್ಕ ಹಾಕಿ ನನಗಿರೋ ಬುಕ್‌ಮಾರ್ಕ್ ಹುಚ್ಚು ಎಂಥದಿರಬಹುದು ಅಂತ.

ಇಂತಿಪ್ಪ ಅಮ್ಮನ ಮಗನಿಗೆ ಬುಕ್‌ಮಾರ್ಕ್‌ಗಳ ಮೇಲೆ ಆಸೆಯಿರೋದೇನೂ ಆಶ್ಚರ್ಯವೇನಲ್ಲ ಬಿಡಿ.  ಆದರೆ ಅವನು ಈಗ ಅಂದಿಗಿಂತ ಎರಡು ವರ್ಷ ದೊಡ್ಡವನು. ಆದರೆ ಈ ಅಭ್ಯಾಸ ನಿಂತಿಲ್ಲ. ಬದಲಾಗಿ ಅದನ್ನ ಇನ್ನಷ್ಟು ಇಂಪ್ರೂವೈಸ್ ಮಾಡಿಕೊಂಡಿದ್ದಾನೆ. ಈಗಂತೂ ಬುಕ್‌ಮಾರ್ಕ್ ತೆಗೆದಿಟ್ಟು,  ತರಲೆ ಮಾಡೋದೇ ಅವನ ಮನೋರಂಜನೆಯಾಗಿಬಿಟ್ಟಿದೆ. ನಾವು ಹಾಕಿಟ್ಟ ಬುಕ್‌ಮಾರ್ಕ್ ಇಲ್ಲದಿದ್ದಾಗ ನಮ್ಮ ಮುಖದಲ್ಲಿ ಕಾಣೋ ಕಿರಿಕಿರಿ ಭಾವ ಅವನಿಗೆ ತುಂಬಾ ಇಷ್ಟ. ಹೀಗಾಗಿ ಅವನು ಹುಡುಕಿ ಹುಡುಕಿ  ಬುಕ್‌ಮಾರ್ಕ್‌ಮಾಯ ಮಾಡುತ್ತಾನೆ. 

ಒಂದು ದಿನ ನಮ್ಮ ಈ ಪುಟಾಣಿ ಬುಕ್‌ಮಾರ್ಕ್ ಕಳ್ಳನನ್ನ ಹತ್ತಿರ ಕೂರಿಸಿಕೊಂಡು, ಸಮಸ್ಯೆ ಬಗೆಹರಿಸಲು ಪ್ರಯತ್ನ ಪಟ್ಟೆ. ಇದಕ್ಕೂ ಮೊದಲು ಪ್ರಯತ್ನ ಪಟ್ಟಿಲ್ಲವೇ ? ಅಂತ ಕೇಳಬೇಡಿ. ಅದೆಷ್ಟೋ ಬಾರಿ ಇಂಥ ಸಂಧಾನಗಳು ಆಗಿದ್ದೂ ಇದೆ, ನಂತರ ವಿಫಲವಾಗಿದ್ದೂ ಇದೆ.  ಆದ್ರೂ  ಆವತ್ತು ಅವನನ್ನ ಹತ್ತಿರ ಕೂರಿಸಿಕೊಂಡು ಮುದ್ದಿಸಿ ನಿಧಾನಕ್ಕೆ ಹೇಳಿದ್ದೆ, ‘ ಪುಟ್ಟಾ ನಾವು ಓದ್ತಾ ಇರೋ ಬುಕ್‌ನಿಂದ ಬುಕ್‌ಮಾರ್ಕ್ ತೆಗಿಬೇಡಾ ಆಯ್ತಾ..? ನೀನು ಅದನ್ನ ತೆಗೆದರೆ, ಈ ದಪ್ಪ ಪುಸ್ತಕದ ಪುಟವನ್ನ ಹುಡುಕಿ ಹುಡುಕಿ ಓದೋದು ಅಮ್ಮ ಅಪ್ಪಂಗೆ ಕಷ್ಟವಾಗಲ್ವಾ..?  ಎಂಬ ನನ್ನ ಪ್ರಶ್ನೆಗೆ  ಅವನು ಅಷ್ಟೇ ಮುದ್ದಾಗಿ ’  ಬುಕ್‌ಮಾರ್ಕ್‌ನಂಗೂ ಇಷ್ಟ ಅಮ್ಮಾ..  ನಾನೂ ನನ್ನ ಸ್ಟೋರಿ ಬುಕ್ಸ್‌ನಲ್ಲಿ ಅದನ್ನ ಹಾಕಿಟ್ಟಿದೀನಿ ಗೊತ್ತಾ..?’ ಅನ್ನುತ್ತಾ,  ಅವನ ಸ್ಟೋರಿ ಬುಕ್ಸ್‌ತಂದು ತೋರಿಸಿದ್ದ.  ಅವನ ಎಲ್ಲಾ ಕಥ ಪುಸ್ತಕಗಳಲ್ಲಿಯೂ ನಾಲ್ಕೈದು ಬುಕ್‌ಮಾರ್ಕ್‌ಗಳನ್ನ ನೀಟಾಗಿ ಜೋಡಿಸಿಟ್ಟಿದ್ದ.  ಆ ಬುಕ್‌ಮಾರ್ಕ್‌ಗಳನ್ನ ತನ್ನ ಪುಸ್ತಕಗಳಲ್ಲಿಟ್ಟು ಜೋಪಾನ ಮಾಡಿದ್ದ.  ಇದನ್ನೆಲ್ಲ ನೋಡಿ ನನಗೆ, ಪಾಪ..! ಅನ್ನಿಸಿಬಿಡ್ತು. 

ನಂತರ ನಾವಂದುಕೊಂಡ್ವಿ,  ಈ ಬುಕ್‌ಮಾರ್ಕ್‌  ಉಸಾಪರಿಯೇ ಬೇಡ.  ಪುಸ್ತಕದ ಹಾಳೆಯನ್ನೇ ತುದಿಯಲ್ಲಿ ಸ್ವಲ್ಪ ಮಡಿಸಿಟ್ಟುಬಿಡೋಣ ಅಂತ.  ಈ ಕುರಿತು ಇಬ್ಬರೂ ಗುಟ್ಟಿನಲ್ಲಿ ಮಾತನಾಡಿಕೊಂಡು ಹೊಸ ಉಪಾಯ ಶುರುವಿಟ್ಟುಕೊಂಡ್ವಿ.  ಈ ನಮ್ಮ ಹೊಸ ಐಡಿಯಾದ ಬಗ್ಗೆ ಅವನಿಗೆ ಗೊತ್ತಿರಲಿಲ್ಲವಲ್ಲ ಹೀಗಾಗಿ ಸ್ವಲ್ಪ ದಿನಗಳು ನಾವು ನೆಮ್ಮದಿಯಾಗಿದ್ವಿ.  ಓಹೋ ನಮ್ಮ ಯೋಜನೆ ವರ್ಕ್‌ಔಟ್‌ ಆಗ್ತಿದೆಯಲ್ಲಾ ಅಂತ ಖುಷಿ ಪಟ್ಟು ನಾವು ಚಾಪೆ ಕೆಳಗೆ ನುಸುಳಿದ ಸಂತೋಷದಲ್ಲಿದ್ದಾಲೇ, ಅವನು ರಂಗೋಲಿ ಕೆಳಗೇ ನುಸುಳಿಯಾಗಿತ್ತು. ನಮ್ಮ ಐಡಿಯಾದ ಮರ್ಮವನ್ನ ಅದ್ಹೇಗೋ ಅರ್ಥಮಾಡಿಕೊಂಡಿದ್ದ ನಮ್ಮ ಕುಲದೀಪಕ ನಾವು ಮಡಿಸಿಟ್ಟ ಹಾಳೆಯನ್ನೂ ಬಿಡಿಸಿಟ್ಟು, ಅದರಂತೆ ಇನ್ನೊಂದಷ್ಟು ಹಾಳೆಯನ್ನ ಎಪರಾ ತಪರಾ ಫೋಲ್ಡ್‌ ಮಾಡಿಟ್ಟು ತಂಟೆ ಮಾಡಿದ್ದ.   ಅದೇನೋ ಹೇಳ್ತಾರಲ್ಲ....     ಬೆಕ್ಕಿಗೆ ಆಟ ಇಲಿಗೆ ಪ್ರಾಣ ಸಂಕಟ.. ಅಂತ ಹಾಗಾಯ್ತು ನಮ್ಮ ಪರಿಸ್ಥಿತಿ. 

ಪುಸ್ತಕಗಳ ಹಾಳೆಗಳು ಹೇಗ್ಹೇಗೋ ಮುಡುಗಿ ಹೋಗಿದ್ದನ್ನ ಕಂಡು, ನಿಜಕ್ಕೂ ಬೇಜಾರಾಗಿತ್ತು ನಮಗೆ. ಆಮೇಲೆ ಪುಸ್ತಕದ ಹಾಳೆಗಳನ್ನ ಮಡಿಸಿಡೋದು ಬೇಡ್ವೇ ಬೇಡ ಅನ್ನೋ ನಿರ್ಧಾರಕ್ಕೆ ಬಂದು, ಚಿಕ್ಕ ನಾಣ್ಯವನ್ನ ಬುಕ್‌ಮಾರ್ಕ್ ಆಗಿ ಉಪಯೋಗಿಸಲು ಪ್ರಾರಂಭ ಮಾಡಿದ್ವಿ.  ಅದನ್ನೂ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿರೋ ನಮ್ಮ ಮಗಧೀರ ಆ ನಾಣ್ಯಗಳನ್ನೆಲ್ಲ ತೆಗೆದುಕೊಂಡು ಹೋಗಿ ಅವನದೇ ಪಿಗ್ಗಿಬ್ಯಾಂಕ್‌ಲ್ಲಿ ಹಾಕಿಟ್ಟಿದ್ದಾನೆ..! 

ಇದೆಲ್ಲದರ ಮಧ್ಯೆ ನಾವು ಓದುತ್ತಿರುವ ಪುಸ್ತಕಳನ್ನ ಅವನಿಗೆ ಸಿಗದ ಹಾಗೆ ಕಬೋರ್ಡ್‌ನಲ್ಲಿ ಹಾಕಿಟ್ಟುಕೊಂಡ್ವಿ, ಆದರೆ ದಿನದಲ್ಲಿ ಬಿಡುವು ಸಿಕ್ಕಾಗೆಲ್ಲ ಪುಸ್ತಕ ಓದುವ ನಮಗೆ ಪ್ರತಿ ಬಾರಿ ಕಬೋರ್ಡ್‌‌ನಿಂದ ಪುಸ್ತಕ ತೆಗದು ತರುವುದು, ಓದಿದ ನಂತರ ಮತ್ತದೇ ಕಬೋರ್ಡ್‌ನಲ್ಲಿ ಹಾಕಿಡೋದು ಸ್ವಲ್ಪ ಕಿರಿಕಿರಿ ಅನ್ನಿಸ್ತಾ ಇತ್ತು. ತೃಪ್ತಿಕರವಾಗಿಲ್ಲದ ಈ ಐಡಿಯಾ ವರ್ಕ್‌‌ಔಟ್‌ಆಗಲೇ ಇಲ್ಲ.  

ಇನ್ನೇನ್‌ಮಾಡೋದು..?  ಈಗ ಪುಸ್ತಕದ ಪೇಜ್‌ನಂಬರ್‌ನ್ನ ನೆನಪಿಟ್ಟುಕೊಳ್ಳುತ್ತಿದ್ದೇವೆ.  ಪುಟದ ಸಂಖ್ಯೆ ನೆನಪಿರೋದಿಲ್ಲ ಅನ್ನೋ ಕಾರಣಕ್ಕೆ, ನಾವಿಬ್ಬರೂ ಒಬ್ಬರಿಗೊಬ್ಬರು ಪುಸ್ತಕದ ಪೇಜ್‌ನ ನಂಬರ್‌ನ್ನ ವಾಟ್ಸ್ಯಾಪ್‌ ಮಾಡಿಕೊಳ್ತಿದ್ದೇವೆ.  ಮಟಕಾ ದಂದೆ ಮಾಡುವವರ ಹಾಗೆ..! ನಮ್ಮದೀಗ ಬರೀ ನಂಬರ್‌ಗಳದೇ  ಲೇವಾದೇವಿ..!  ಈ ನಮ್ಮ ವಾಟ್ಸ್ಯಾಪ್‌ಚಾಟ್‌ಗಳನ್ನ ನೋಡಿ ನಾವೇ ಆಗಾಗ ನಗುತ್ತಿರುತ್ತೇವೆ.   ಆದ್ರೆ, ಸಧ್ಯಕ್ಕೆ ನನ್ನ ಮಗನಿಗಿನ್ನೂ ಈ ನಮ್ಮ ಪ್ಲ್ಯಾನ್‌ಬಗ್ಗೆ ಇನ್ನೂ ತಿಳಿದಿಲ್ಲ. ಅದೆಷ್ಟು ದಿನಗಳವರೆಗೆ ಇದು ನಡೆಯುತ್ತೋ ನಮಗೂ ಗೊತ್ತಿಲ್ಲ. 


-----------


7 comments:

  1. ತುಂಬಾ ನೈಜವಾಗಿ ಮೂಡಿಬಂದಿದೆ. ಬರವಣಿಗೆ ಮುಂದುವರಿಯಲಿ. ನಿನ್ನ ಬರಹದ ಶೈಲಿ ಚೆನ್ನಾಗಿದೆ.

    ReplyDelete
  2. Loved your blog, writing style is simple yet effective. Keep writing more. All the best.

    ReplyDelete
  3. Loved your blog, writing style is simple yet effective. Keep writing more. All the best.

    ReplyDelete
  4. Very nice!! It looks like every word has it's own experience!! Keep it up

    ReplyDelete

“ಕ್ಯಾನ್ಸರ್‌”

  ಕಟ-ಕಟ ಕಟ-ಕಟ ಶಬ್ಧ ಲಯದಂತೆ ಕಿವಿಗೆ ಅಪ್ಪಳಿಸುತ್ತಾ ಅಪ್ಪಳಿಸುತ್ತಾ, ಕಣ್ಣು ಎಳೆದಂತಾಗಿ ನಿದ್ದೆಯ ಮಂಪರಿನಲ್ಲಿದ್ದಾಗಲೇ, ಮೇಲಿನ ಸೀಟ್‌ಮೇಲೆ ಇಟ್ಟಿದ್ದ ಬ್ಯಾಗ್‌ ಒಂದು...