ಇವತ್ತು
ಅಂದ್ರೆ ಆಗಷ್ಟ್ 14, ಅಖಂಡ ಭಾರತ ವಿಭಜನೆಯಾದ
ದಿನ.. ಸ್ವಾತಂತ್ರ್ಯ ಪಡೆದುಕೊಳ್ಳುವುದರ
ಜೊತೆಗೆ ಭಾರತದೇಶದ ವಿಭನೆಯೂ ಆಗಿಹೋಯ್ತು. ನಮ್ಮ
ದೇಶದ ಪಂಜಾಬ್ ಮತ್ತು ಬಂಗಾಳ ಪ್ರಾಂತ್ಯಗಳು ವಿಭಜನೆಗೊಂಡು
ಪಾಕಿಸ್ತಾನ ರಾಷ್ಟ್ರ ನಿರ್ಮಾಣವಾದ ದಿನ ಇವತ್ತು..
ಭಾರತ ದೇಶವನ್ನು ಸುಮಾರು 200 ವರ್ಷಗಳ ಕಾಲ ಆಳಿದ ಆಂಗ್ಲರ ದಾಸ್ಯದಿಂದ ಮುಕ್ತಿ ಪಡೆಯಲು ಅಸಂಖ್ಯ ಹೋರಾಟಗಾರರು ಪ್ರಯತ್ನ ಪಟ್ಟರು. ತಮ್ಮ ಕನಸಿನ ದೇಶದ ನಿರ್ಮಾಣಕ್ಕಾಗಿ ಅವಿರತ ಶ್ರಮಿಸಿದ್ರು.. ಇದರ ಫಲವಾಗಿ ಭಾರತ ದೇಶಕ್ಕೆ ಬ್ರಿಟೀಷರು ಸ್ವಾತಂತ್ರ್ಯ ಕೊಟ್ಟರು.. ಆದ್ರೆ ಭಾರತದ ಸ್ವಾಂತಂತ್ರ್ಯಕ್ಕೂ ಮುಂಚೆಯೇ ದೇಶ ವಿಭಜನೆಯ ಮಾತುಗಳು ಕೇಳಿ ಬರ್ತಾ ಇದ್ವು..ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನಿಂದ ಅಸಮಾಧಾನಗೊಂಡ ಮುಸ್ಲಿಮ್ ಪ್ರತ್ಯೇಕವಾದಿಗಳು ತಮಗೆ ಪ್ರತ್ಯೇಕ ರಾಷ್ಟ್ರ ಬೇಕು ಎಂಬ ಕೋರಿಕೆ ಇಟ್ಟರು.. ಅಖಿಲ ಭಾರತ ಮುಸ್ಲಿಂ ಲೀಗ್‌ನ ಪ್ರಮುಖರಾದ ಇಕ್ಬಾಲ್, ಮೊಹಮ್ಮದ್ ಅಲಿ ಜಿನ್ನಾ, ಮತ್ತಿತರು ಪ್ರತ್ಯೇಕ ರಾಷ್ಟ್ರಕ್ಕಾಗಿ ದನಿ ಎತ್ತಿದರು.. ಮೊದಲಿಗೆ ಭಾರತದ ಜಾತ್ಯಾತೀತವಾದಿಗಳಿಂದ ಮುಸ್ಲೀಂರ ಈ ಕೋರಿಕೆಗೆ ವಿರೋಧ ವ್ಯಕ್ತವಾಯಿತಾದರೂ..ಪ್ರತ್ಯೇಕತಾವಾದಿಗಳ ಒತ್ತಾಯಕ್ಕೆ ಮಣಿದು ದೇಶದ ವಿಭಜನೆ ಮಾಡಲಾಯ್ತು. ನಮ್ಮ ಭಾರತದ ಪಂಜಾಬ್ ಮತ್ತು ಬಂಗಾಳ ಪ್ರಾಂತ್ಯಗಳು ಪೂರ್ವ ಮತ್ತು ಪಶ್ಚಿಮ ಪಾಕಿಸ್ತಾನ ರಾಷ್ಟ್ರಗಳಾದ್ವು.. ದೇಶ ವಿಭಜನೆಯ ನಂತರ, ಭಾರತದಿಂದ ಮುಸ್ಲೀಂರು ಪಾಕಿಸ್ತಾನಕ್ಕೆ ಒಲಸೆ ಹೋದ್ರೆ.., ವಿಭಾಗವಾಗಿ ಹೋದ ಪಂಜಾಬ್ ಪ್ರಾಂತ್ಯದಿಂದ ಹಿಂದೂ ಹಾಗೂ ಸಿಕ್‌ರು ಭಾರತಕ್ಕೆ ಹೊರಟು ನಿಂತ್ರು. ಒಂದು ಕೋಟಿಗೂ ಹೆಚ್ಚು ಜನರು ತಮ್ಮ ಧರ್ಮದ ಬಹುಸಂಖ್ಯಾತರು ಇರುವ ದೇಶವನ್ನು ಆಯ್ಕೆ ಮಾಡಿಕೊಂಡು ತಮ್ಮ ಭೂಮಿ, ಮನೆ, ಪರಿಸರವನ್ನು ತೊರೆದ್ರು.. ಇದೇ ಸಂದರ್ಭದಲ್ಲಿ ಹುಟ್ಟಿಕೊಂಡಿದ್ದ ಮತೀಯ ಗಲಭೆ ರಕ್ತಪಾತವನ್ನೇ ಹರಿಸಿತ್ತು. ಭಾರತ ಹಾಗೂ ಪಾಕಿಸ್ತಾನ ಎರಡೂ ಕಡೆಯೂ ರಕ್ತಪಾತ ಉಲ್ಬಣಗೊಂಡಿತ್ತು.. ಒಂದು ಅಂದಾಜಿನ ಪ್ರಕಾರ ಒಂದು ಲಕ್ಷಕ್ಕೂ ಹೆಚ್ಚು ಜನರು ಗಲಭೆಗೆ ಬಲಿಯಾಗಿಹೋದ್ರು. ಆಂಗ್ಲರ ದಾಸ್ಯದಿಂದ ಬಿಡುಗಡೆಗೊಂಡು, ಸ್ವಾತಂತ್ರ್ಯ ಪಡೆದ ಖುಷಿಯನ್ನೇ ಮರೆಮಾಚಿಸುವಂತಹ ಘಟನೆ ದೇಶದಲ್ಲಿ ನಡೆದುಹೋಗಿತ್ತು.. ಮೌಂಟ್‌ಬ್ಯಾಟನ್ ಯೋಜನೆಯಡಿ ಭಾರತ ವಿಭಜನೆ ನಡೆಯಿತು. ಬ್ರಿಟಿಷ್ ಸರಕಾರ ನಿಯೋಜಿಸಿದ 'ಸಿರಿಲ್ ರಾಡ್‌ಕ್ಲಿಫ್' ನೇತೃತ್ವದಲ್ಲಿ ಭಾರತ ಮತ್ತು ಪಾಕಿಸ್ತಾನದ ಗಡಿ ನಿರ್ಮಾಣವಾಯ್ತು. ಸ್ವಾತಂತ್ರ್ಯ ಪಡೆದ ಹರ್ಷದ ದಿನವನ್ನು ಭಾರತ ಆಗಷ್ಟ್ 15ರಂದು ಆಚರಿಸಿದ್ರೆ, ಪಾಕಿಸ್ತಾನ ರಾಷ್ಟ್ರದಲ್ಲಿ, ಭಾರತದಿಂದ ಪಾಕಿಸ್ತಾನ ವಿಭಜನೆಗೊಂಡ ದಿನವಾದ ಆಗಷ್ಟ್ 14ರಂದು ಸ್ವಾಂತಂತ್ರ್ಯ ದಿನಾಚರಣೆಯನ್ನು ಆಚರಿಸಲಾಗುತ್ತದೆ. |