Monday, 24 September 2012

ಮೇಡಮ್‌ ಕಾಮಾ ಹುಟ್ಟಿದ ದಿನ ಇವತ್ತು


ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಮಿಂಚಿದ ಮಹಿಳಾ ಹೋರಾಟಗಾರ್ತಿ. ಸ್ವಾತ೦ತ್ರ್ಯ ಸ೦ಗ್ರಾಮದ ಇತಿಹಾಸದಲ್ಲಿ ಧ್ರುವತಾರೆಯಾಗಿಮೆರೆದ ಮಹಿಳೆ. ಭಾರತೀಯತೆಯನ್ನು ಪ್ರತಿನಿಧಿಸುವ, ರಾಷ್ಟ್ರಧ್ವಜವನ್ನು ಮೊಟ್ಟ ಮೊದಲಬಾರಿಗೆ ಆರೋಹಣ ಮಾಡಿದ ನಾಯಕಿ... ಮೇಡಮ್‌ ಕಾಮಾ ಹುಟ್ಟಿದ ದಿನ ಇವತ್ತು..
1861 ರ ಸೆಪ್ಟೆಂಬರ್‌ 24ರಂದು ಹುಟ್ಟಿದ್ದ ಮೇಡಮ್‌ ಕಾಮಾರ ಹೆಸರು, ಮುಂಚೆ ಭಿಕಾಜಿ ಪಟೇಲ್‌ ಎಂದಾಗಿತ್ತು. ಮುಂಬೈನ ಶ್ರೀಮಂತ ಕುಟುಂಬದಲ್ಲಿ ಹುಟ್ಟಿದ್ದ ಇವರು ಒಳ್ಳೆಯ ಶಿಕ್ಷಣ ಪಡೆದ್ರು.

ಬ್ರಿಟೀಷ್‌ ವಕೀಲರಾದ ರಸ್ಟಾಮ್‌ ಕಾಮಾರನ್ನು ಪ್ರೀತಿಸಿ ಮದುವೆಯಾದ ಭಿಕಾಜಿ ಪಟೇಲ್‌, ಭಿಕಾಜಿ ಕಾಮಾ ಆಗಿ ಬದಲಾದ್ರು. ಆದ್ರೆ, ಸಂತಸದ ದಾಂಪತ್ಯ ಜೀವನ ಇವರದಾಗಿರಲಿಲ್ಲ, ಹೀಗಾಗಿ ಸಾಮಾಜ ಸೇವೆಯಲ್ಲಿ ತಮ್ಮನ್ನು ಸಂಪೂರ್ಣ ತೊಡಗಿಸಿಕೊಂಡ್ರು. 1896ರ ಸಮಯದಲ್ಲಿ ಮುಂಬೈ ನಗರದಲ್ಲಿ ಕ್ಷಾಮ ಮತ್ತು ಪ್ಲೇಗ್‌ ರೋಗ ಕಾಣಿಸಿಕೊಂಡಾಗ, ಪ್ಲೇಗ್‌ ಮಾರಿಗೆ ತುತ್ತಾಗಿ ಬಳಲಿದ್ರು. ಅದೃಷ್ಟವಶಾತ್‌ ಚಿಕಿತ್ಸೆಯಿಂದ ಚೇತರಿಸಿಕೊಂಡ್ರು. ನಂತರ ಪ್ಲೇಗ್‌ ರೋಗಿಗಳ ಸೇವೆ ಮಾಡಿದ್ರು.  

1902
ರಲ್ಲಿ ದಾದಾ ಬಾಯಿ ನವರೋಜಿಯವರ ಜೊತೆ, ದೇಶಕ್ಕಾಗಿ ಕೆಲಸ ಮಾಡಿದ್ರು.  1907ರಲ್ಲಿ ಜರ್ಮನಿಯ ಸ್ಟಟ್‌‌ಗರ್ಟಿನಲ್ಲಿ ನಡೆದ 12ನೇ ಅಂತಾರಾಷ್ಟ್ರೀಯ ಸಮಾಜವಾದಿ ಅಧಿವೇಶನದಲ್ಲಿ ಕೆಂಪು, ಬಿಳಿ ಮತ್ತು ಹಸಿರು ಪಟ್ಟಿಗಳಿದ್ದ ತ್ರಿವರ್ಣ ರಂಜಿತ ಭಾರತೀಯ ರಾಷ್ಟ್ರಧ್ವಜದ ಮೊದಲ ಮಾದರಿಯನ್ನು ಹಾರಿಸಿ, ವಿಶೇಷ ಕೀರ್ತಿಗೆ ಪಾತ್ರರಾದ್ರು ಮೇಡಮ್‌ ಕಾಮಾ.

ಈ ಧ್ವಜ ಭಾರತದ ಸ್ವಾತಂತ್ರ್ಯದ ಪ್ರತೀಕ. ಇದು ಭಾರತದ ಸ್ವತ೦ತ್ರಕ್ಕಾಗಿ ಜೀವತ್ಯಜಿಸಿದ ದೇಶಪ್ರೇಮಿಗಳ ನೆತ್ತರಿನಿ೦ದ ಪವಿತ್ರಗೊಳಿಸಲ್ಪಟ್ಟಿದೆ. ಈ ಧ್ವಜದ ಪತಿನಿಧಿಯಾಗಿ ಪ್ರಾರ್ಥಿಸುತ್ತೇನೆ, ಓ ಮಹನೀಯರೇ ಏಳಿ, ಈ ಧ್ವಜಕ್ಕೊ೦ದಿಸಿ. ವಿಶ್ವದೆಲ್ಲ ಸ್ವತ೦ತ್ರ್ಯಾರಾಧಕರೇ ಈ ಧ್ವಜದೊಡನೆ ಸಹಕರಿಸಿ" ಎಂದು ಉದ್ಘರಿಸಿದ ಮೇಡಮ್‌ ಕಾಮಾರಿಗೆ ಅಲ್ಲಿ ನೆರೆದವರೆಲ್ಲ ಎದ್ದುನಿಂತು ತಮ್ಮ ಸ್ಪಂದನೆಯನ್ನು ಸೂಚಿಸಿದ್ರು.

ನಾವು ಭಾರತಕ್ಕಾಗಿದ್ದೇವೆ, ಭಾರತ ಭಾರತೀಯರಿಗಾಗಿಯೇ ಇದೆ. ಎಂದು ಸಾರುತ್ತ, ಭಾರತೀಯರಲ್ಲಿ ದೇಶಪ್ರೇಮದ ಕಿಚ್ಚನ್ನು ಹೊತ್ತಿಸುತ್ತಿದ್ದ ಮೇಡಮ್‌ ಕಾಮಾರ ಕಾರ್ಯವನ್ನು ಹತ್ತಿಕ್ಕಲು ಬ್ರಿಟೀಷ್‌ ಸರ್ಕಾರ ಪ್ರಯತ್ನಿಸುತ್ತಲೇ ಇತ್ತು. ಪ್ಯಾರೀಸ್‌ನಲ್ಲಿದ್ದ ಕಾಮಾ ಅವರ ಮನೆ, ವಿದೇಶಗಳಲ್ಲಿರುವ ಭಾರತೀಯ ಕ್ರಾಂತಿಕಾರಿಗಳ ಅಡ್ಡವಾಗಿತ್ತು. ರಷಿಯನ್‌‌ ಕ್ರಾಂತಿಕಾರಿ ಲೆನಿನ್‌ ಕೂಡ, ತಮ್ಮ ತೀರ್ವಗಾಮಿ ವಿಚಾರ ವಿನಿಮಯಕ್ಕಾಗಿ ಇಲ್ಲಿಗೆ ಭೇಟಿ ಕೊಡ್ತಾ ಇದ್ರು. 'ವಂದೇ ಮಾತರಂ' ಎಂಬ ಕ್ರಾಂತಿಕಾರಿ ಪತ್ರಿಕೆಯ ಸಂಪಾದಕಿಯಾಗಿಯೂ  ಮೇಡಮ್‌ ಕಾಮಾ ಕೆಲಸ ಮಾಡಿದ್ರು. ಭಾರತದ ಮತ್ತೋರ್ವ ಕ್ರಾಂತಿಕಾರಿ ನಾಯಕ ವೀರ್‌ ಸಾವರ್ಕರ್‌ಗೆ ಸಂಪೂರ್ಣ ಬೆಂಬಲ ನೀಡಿದ್ರು. ಇವರ ಈ ಕ್ರಾಂತಿಕಾರಿ ಹೋರಾಟದ ಫಲವಾಗಿ, ಬ್ರಿಟೀಷ್‌ ಸರ್ಕಾರ ಮೇಡಮ್‌ ಕಾಮಾರಿಗೆ ಭಾರತಕ್ಕೆ ಮರಳದಂತೆ ತಾಕೀತು ಮಾಡಿತ್ತು.

35
ವರ್ಷಗಳ ಕಾಲ ವಿದೇಶದಿಂದಲೇ ಭಾರತದ ಸ್ವಾತಂತ್ರ್ಯಕ್ಕಾಗಿ ಕಾಯಾ ವಾಚಾ ಮನಸಾ ಹೋರಾಡಿದ ಈ ಹೋರಾಟಗಾರ್ತಿ,1936ರ ಆಗಷ್ಟ್‌13ರಲ್ಲಿ ಅನಾರೋಗ್ಯದ ಕಾರಣದಿಂದ ವಿಧಿವಶರಾದ್ರು. ವಿದೇಶದಲ್ಲಿದ್ದುಕೊಂಡು ತಾಯ್ನಾಡಿಗಾಗಿ ಹೋರಾಡಿದ ಇವರು, ಜೀವನದ ಕೊನೆಯ ದಿನಗಳಲ್ಲಿ ಭಾರತಕ್ಕೆ ಮರಳಿ,  ಭಾರತಮಾತೆಯ ಮಡಿಲಿನಲ್ಲಿಯೇ ಪ್ರಾಣಬಿಟ್ಟರು.

Friday, 21 September 2012

ವಿಶ್ವ ಶಾಂತಿ ದಿನ


ಇವತ್ತು ವಿಶ್ವ ಶಾಂತಿಯ ದಿನ. ಶಾಂತಿಯಿಂದ ಜಗತ್ತಿನ ಏಳಿಗೆ ಸಾಧ್ಯ, ವಿಶ್ವವೇ ಶಾಂತಿಯತ್ತ ಸಾಗು.. ಎನ್ನುವ ಸಂದೇಶವನ್ನು ವಿಶ್ವ ಸಂಸ್ಥೆ ವಿಶ್ವಕ್ಕೇ ಸಾರಿದ ದಿನ. ಜಗತ್ತಿಗೆ ಶಾಂತಿಯ ಮೌಲ್ಯಗಳನ್ನು ಪರಿಚಯ ಮಾಡಿಕೊಡುವ ಸಲುವಾಗಿ ವಿಶ್ವ ಸಂಸ್ಥೆ, ಸೆಪ್ಟೆಂಬರ್ 21ನ್ನು ವಿಶ್ವ ಶಾಂತಿಯ ದಿನವನ್ನಾಗಿ ಘೋಷಿಸಿದೆ..

ಶಾಂತಿ ಸೌಹಾರ್ಧತೆಯಿಂದ ಏಳಿಗೆ ಸಾಧ್ಯ. ಶಾಂತಿಯಿಂದ ದೇಶ ದೇಶಗಳ ನಡುವಿನ ಭಾಂಧವ್ಯ ಸುಧಾರಿಸಲು ಸಾಧ್ಯ. ಶಾಂತಿಯಿಂದ ಸಮಾಜದ ಸುವ್ಯವಸ್ಥೆ ಸಾಧ್ಯ.. ಶಾಂತಿಯಿಂದ ಯುದ್ಧ, ಗಲಭೆ, ರಕ್ತಪಾತಗಳನ್ನು ತಡೆಯಲು ಸಾಧ್ಯ.. ಎಂಬುದನ್ನು 'ವಿಶ್ವ ಶಾಂತಿಯ ದಿನ' ಸಾರುತ್ತಿದೆ..

ಅಮೆರಿಕಾದ ನ್ಯೂಯಾರ್ಕ್‌ ನಗರದಲ್ಲಿರುವ ವಿಶ್ವ ಸಂಸ್ಥೆಯ ಕೇಂದ್ರ ಕಚೇರಿಯಲ್ಲಿರುವ ಶಾಂತಿ ಗಂಟೆಯನ್ನು ಬಾರಿಸುವುದರ ಮೂಲಕ ಪ್ರತೀವರ್ಷ, ವಿಶ್ವ ಶಾಂತಿಯ ದಿನವನ್ನು ಸ್ವಾಗತಿಸಲಾಗುತ್ತೆ. ಇಂಗ್ಲೆಂಡ್‌ ಮತ್ತು ಕೋಸ್ಟಾರಿಕಾ ದೇಶದ ಸಲಹೆಯಂತೆ 1981ರಲ್ಲಿ ವಿಶ್ವ ಸಂಸ್ಥೆ, ವಿಶ್ವ ಶಾಂತಿಯ ದಿನವನ್ನು ಘೋಷಿಸಿತ್ತು. ಸೆಪ್ಟೆಂಬರ್‌ ತಿಂಗಳ ಮೂರನೇವಾರ ಆಚರಿಸಲ್ಪಡುತ್ತಿದ್ದ ವಿಶ್ವ ಶಾಂತಿಯ ದಿನವನ್ನು, ಸೆಪ್ಟೆಂಬರ್‌ 21 ದಿನದಂದೇ ಆಚರಿಸಲು ವಿಶ್ವ ಸಂಸ್ಥೆಯ ಅಂತರ ಸಂದೀಯ ಒಕ್ಕೂಟ ಸೂಚಿಸಿತು. ಆ ವರ್ಷದಿಂದ ಪ್ರತೀ ವರ್ಷದ ಸೆಪ್ಟೆಂಬರ್‌ 21ರ ದಿನವನ್ನೇ ಅಂತರಾಷ್ಟ್ರೀಯ ಶಾಂತಿಯ ದಿನವನ್ನಾಗಿ ಆಚರಿಸಲಾಗುತ್ತಿದೆ.

ಶಾಂತಿಯ ಕುರಿತು ಜಗತ್ತಿಗೆ ಜಾಗೃತಿ ಮೂಡಿಸುತ್ತಿರುವ ವಿಶ್ವ ಸಂಸ್ಥೆ ಪ್ರತೀ ವರ್ಷವೂ ಬೇರೆ ಬೇರೆ ಶಾಂತಿ ಸಂದೇಶಗಳನ್ನು ನೀಡುತ್ತಿದೆ. 'ಸಮರ್ಪಕ ಅಭಿವೃದ್ಧಿಯಿಂದ ಸೃಷ್ಟಿಯಾಗುವ ಶಾಂತಿಯು, ಸಮರ್ಥನೀಯ ಭವಿಷ್ಯವನ್ನು ಬರೆಯಬಲ್ಲದು' ಎಂಬುದು ಈ ವರ್ಷದ ವಿಶ್ವ ಶಾಂತಿಯ ದಿನದ ಸಂದೇಶವಾಗಿದೆ. ಶಾಂತಿ, ಅಭಿವೃದ್ಧಿ ಮತ್ತು ಉಜ್ವಲ ಭವಿಶ್ಯಕ್ಕೆ ಒಂದೊಕ್ಕೊಂದು ಸಂಬಂಧವಿದೆ, ಹಾಗೂ ಪ್ರತೀ ರಾಷ್ಟ್ರದ ಏಳಿಗೆಗೂ ಶಾಂತಿ, ಸುವ್ಯವಸ್ಥೆ ಅತೀ ಅವಶ್ಯ ಅನ್ನೋದನ್ನು ಈ ಸಂದೇಶ ಸಾರುತ್ತದೆ.

ಶಾಂತಿ, ಅಹಿಂಸೆಯ ಹೋರಾಟದಿಂದ ಸ್ವಾತಂತ್ರ್ಯ ಪಡೆದು ಜಗತ್ತಿಗೇ ಮಾದರಿಯಾದ ದೇಶ ನಮ್ಮದು. ಶಾಂತಿಯ ಮಾರ್ಗಕ್ಕೆ ಎಷ್ಟು ಶಕ್ತಿ ಇದೆ ಅನ್ನೋದನ್ನು ವಿಶ್ವಕ್ಕೆ ತೋರಿಸಿಕೊಟ್ಟ ರಾಷ್ಟ್ರ ಭಾರತ. ನಮ್ಮದೇಶವೂ ಸೇರಿದಂತೆ, ತನ್ನ ಎಲ್ಲ ಸದಸ್ಯರಾಷ್ಟ್ರಗಳಲ್ಲಿ ವಿಶ್ವ ಸಂಸ್ಥೆ ಶಾಂತಿ ಮಂತ್ರವನ್ನು ಬಿತ್ತುತ್ತಿದೆ. ಜಗತ್ತಿನ ಅಲ್ಲಲ್ಲಿ ಕಂಡುಬರುತ್ತಿರುವ ಅಶಾಂತಿ, ಗಲಭೆ ಯುದ್ಧಗಳು ಶಮನವಾಗಿ ಶಾಂತಿ ನೆಲೆಸುವಂತಾಗಲಿ, ಎಲ್ಲ ದೇಶಗಳೂ ಶಾಂತಿಯ ಮಂತ್ರ ಪಠಿಸಿ, ಇಡೀ ಜಗತ್ತಿನಲ್ಲಿ ಆತಂಕ ಮುಕ್ತ ವಾತಾವರಣ ನಿರ್ಮಾಣವಾಗಲಿ, ವಿಶ್ವದೆಲ್ಲಡೆ ನೆಮ್ಮದಿ ನೆಲೆಸಲಿ ಎಂದು ಆಶಿಸುವ ವಿಶ್ವ ಸಂಸ್ಥೆ, ವಿಶ್ವ ಶಾಂತಿಗಾಗಿ ಈ ದಿನವನ್ನು ಆಚರಿಸುತ್ತಿದೆ.

Tuesday, 18 September 2012

ಗೌರಿಹಬ್ಬದ ಹಾರ್ದಿಕ ಶುಭಾಶಯಗಳು


ಇಂದು ನಾಡಿನೆಲ್ಲಡೆ ಗೌರಿ ಹಬ್ಬದ ಸಂಭ್ರಮ. ಮುತ್ತೈದೆಯರಿಗೆಲ್ಲಾ ಸೌಭಾಗ್ಯ ನೀಡುವ ಹಬ್ಬ ಇದು. ಶಿವನ ಅರಸಿ ಗೌರಿ, ತವರಿಗೆ ಬರುವ ದಿನ ಇವತ್ತು. ವರ್ಷಕ್ಕೊಮ್ಮೆ ಮಾತ್ರ ತವರಿಗೆ ಬರುವ ಗೌರಮ್ಮಗೆ ಇಂದು , ನಾರಿಯರೆಲ್ಲ ಸೇರಿ ಸಂಭ್ರಮದ ಸ್ವಾಗತ ಕೋರುತ್ತಾರೆ.. ಮನೆಯನ್ನೆಲ್ಲ ಸಿಂಗರಿಸಿ, ಹೊಸ ಬಟ್ಟೆ ತೊಟ್ಟು, ಗೌರಿಗೆ ಇಷ್ಟವಾದ ಸಿಹಿ ತಿಂಡಿಗಳನ್ನು ಮಾಡಿ..ಗೌರಿಯನ್ನು ಮನೆತುಂಬಿಸಿಕೊಳ್ತಾರೆ. ಮಗ ಗಣೇಶನಿಗಿಂತ ಒಂದು ದಿನ ಮೊದಲು  ಭಕ್ತರ ಮನೆಗೆ ಬರುವ ಗೌರಮ್ಮ ಭಕ್ತರಿಂದ ಪೂಜೆ ಸ್ವೀಕರಿಸ್ತಾಳೆ.

ಭಾದ್ರಪದ, ಶುಕ್ಲದ ತದಿಗೆಯ ಶುಭವೇಳೆ ಮನೆಗೆ ಬಂದ ಗೌರಿಯನ್ನು, ಸುಂದರವಾಗಿ ಸಿಂಗರಿಸಿದ ಮಂಟಪದಲ್ಲಿ ಕುಳ್ಳಿರಿಸಿ ಪೂಜಿಸಲಾಗುತ್ತೆ.  ತವರಿನೊಂದಿಗಿನ ಅವಿನಾಭಾವ ಸಂಬಂಧದ ಸಂಕೇತವಾಗಿರುವ ಗೌರಿ ಹಬ್ಬ ಬಂತೆಂದರೆ ಹೆಣ್ಣು ಮಕ್ಕಳಿಗೆ ಸುಗ್ಗಿ. ಮದುವೆಯಾದ ಹೆಣ್ಣುಮಕ್ಕಳಿಗೆ ತವರಿಗೆ ಹೋಗಿಬರಲು ಒಂದು ಸಂಭ್ರಮದ ಅವಕಾಶ. ಗೌರಿ ಹಬ್ಬದಲ್ಲಿ ಹೆತ್ತವರು ಅಥವಾ ಸೋದರ ಸಂಬಂಧಿಗಳು ಗೌರಿ ಸ್ವರೂಪಿ ಹೆಣ್ಣುಮಕ್ಕಳನ್ನು ಮನೆಗೆ ಕರೆದು ಉಡುಗೊರೆ ನೀಡಿ ನೂರ್ಕಾಲ ಬಾಳೆಂದು ಹಾರೈಸಿ, ಹಬ್ಬ ಆಚರಿಸುತ್ತಾರೆ.

ಮದುವೆಯಾದ ಹೆಣ್ಣುಮಕ್ಕಳು, ಇದೇ ದಿನ ವಿಶೇಷವಾಗಿ ತಾಯಿಗೆ ಬಾಗಿನ ನೀಡುವ ಸಂಪ್ರದಾಯವಿದೆ. ತಾಯಿ ಮನೆಗೆ ಬಂದು ಹಬ್ಬ ಆಚರಿಸೋಕೆ ಹೆಣ್ಣುಮಕ್ಕಳಿಗೂ ಅಷ್ಟೇ ಖುಷಿ..  ಗೌರಿ ಪೂಜೆಗೆ ಮನೆಗೆ ಆಗಮಿಸಿದ ಮುತ್ತೈದೆಯರಿಗೆ ಗೌರಿ ಬಾಗಿನ ನೀಡುತ್ತಾರೆ. ಹೂವು ,ವೀಳ್ಯದೆಲೆ,ಫಲ, ಅಕ್ಕಿ ಕಾಯಿ, ಅರಿಶಿಣ-ಕುಂಕುಮ, ಬಳೆ, ಸೀರೆ, ಶೃಂಗಾರ ಸಾಮಾಗ್ರಿಗಳನ್ನು, ಮೊರದಲ್ಲಿಟ್ಟು ಬಾಗಿನ ನೀಡಲಾಗುತ್ತೆ.

ತದಿಗೆ ದಿನ ಮನೆಗೆ ಬಂದ ಗೌರಿ, ಮಗ ಗಣೇಶನೊಂದಿಗೆ ಚೌತಿಯ ದಿನ ಪೂಜೆ ಸ್ವೀಕರಿಸಿ, ಪಂಚಮಿಯ ದಿನ, ಪುತ್ರನೊಂದಿಗೆ ಗಂಡನ ಮನೆಗೆ ತೆರಳುತ್ತಾಳೆ. ಮೂರು ದಿನ ತವರಿನಲ್ಲಿದ್ದ ಗೌರಿಯನ್ನು ಸಂಭ್ರಮದಿಂದಲೇ ಬೀಳ್ಕೊಡಲಾಗುತ್ತೆ. ಹಬ್ಬದ ಸಿಹಿತಿಂಡಿಗಳನ್ನು ಹಾಗೂ ಉಡುಗೊರೆಗಳನ್ನು ನೀರಿನಲ್ಲಿ ತೇಲಿಬಿಟ್ಟು ಗೌರಿಯನ್ನು ಗಂಡನ ಮನೆಗೆ ಕಳುಹಿಸಿಕೊಡಲಾಗುತ್ತೆ.

ಹೆಂಗಳೆಯರಲ್ಲಿ ಹರ್ಷ ಹೆಚ್ಚಿಸುವ, ತವರಿನ ಸುಮಧುರ ಬಾಂಧ್ಯವ್ಯದ ಸಂಕೇತವಾಗಿರುವ ಸಂಭ್ರಮದ ಹಬ್ಬ ಇದು. ಗೌರಿ ಹಬ್ಬ ಎಲ್ಲರಿಗೂ ಸಂತಸ ನೀಡಲಿ, ಮನೆಮನೆಯಲ್ಲಿ ಸಂಭ್ರಮ ತುಂಬಿರಲಿ ಅನ್ನುವ ಹಾರೈಕೆ ನಮ್ಮದು. ಎಲ್ಲರಿಗೂ ಗೌರಿಹಬ್ಬದ ಹಾರ್ದಿಕ ಶುಭಾಶಯಗಳು.

“ಕ್ಯಾನ್ಸರ್‌”

  ಕಟ-ಕಟ ಕಟ-ಕಟ ಶಬ್ಧ ಲಯದಂತೆ ಕಿವಿಗೆ ಅಪ್ಪಳಿಸುತ್ತಾ ಅಪ್ಪಳಿಸುತ್ತಾ, ಕಣ್ಣು ಎಳೆದಂತಾಗಿ ನಿದ್ದೆಯ ಮಂಪರಿನಲ್ಲಿದ್ದಾಗಲೇ, ಮೇಲಿನ ಸೀಟ್‌ಮೇಲೆ ಇಟ್ಟಿದ್ದ ಬ್ಯಾಗ್‌ ಒಂದು...