ಇವತ್ತು ವಿಶ್ವ ಶಾಂತಿಯ
ದಿನ. ಶಾಂತಿಯಿಂದ ಜಗತ್ತಿನ ಏಳಿಗೆ ಸಾಧ್ಯ, ವಿಶ್ವವೇ ಶಾಂತಿಯತ್ತ ಸಾಗು.. ಎನ್ನುವ ಸಂದೇಶವನ್ನು ವಿಶ್ವ ಸಂಸ್ಥೆ ವಿಶ್ವಕ್ಕೇ ಸಾರಿದ ದಿನ. ಜಗತ್ತಿಗೆ ಶಾಂತಿಯ
ಮೌಲ್ಯಗಳನ್ನು ಪರಿಚಯ ಮಾಡಿಕೊಡುವ ಸಲುವಾಗಿ ವಿಶ್ವ ಸಂಸ್ಥೆ, ಸೆಪ್ಟೆಂಬರ್ 21ನ್ನು ವಿಶ್ವ ಶಾಂತಿಯ ದಿನವನ್ನಾಗಿ ಘೋಷಿಸಿದೆ..
ಶಾಂತಿ ಸೌಹಾರ್ಧತೆಯಿಂದ ಏಳಿಗೆ ಸಾಧ್ಯ. ಶಾಂತಿಯಿಂದ ದೇಶ ದೇಶಗಳ ನಡುವಿನ ಭಾಂಧವ್ಯ ಸುಧಾರಿಸಲು ಸಾಧ್ಯ. ಶಾಂತಿಯಿಂದ ಸಮಾಜದ ಸುವ್ಯವಸ್ಥೆ ಸಾಧ್ಯ.. ಶಾಂತಿಯಿಂದ ಯುದ್ಧ, ಗಲಭೆ, ರಕ್ತಪಾತಗಳನ್ನು ತಡೆಯಲು ಸಾಧ್ಯ.. ಎಂಬುದನ್ನು 'ವಿಶ್ವ ಶಾಂತಿಯ ದಿನ' ಸಾರುತ್ತಿದೆ..
ಅಮೆರಿಕಾದ ನ್ಯೂಯಾರ್ಕ್ ನಗರದಲ್ಲಿರುವ ವಿಶ್ವ ಸಂಸ್ಥೆಯ ಕೇಂದ್ರ ಕಚೇರಿಯಲ್ಲಿರುವ ಶಾಂತಿ ಗಂಟೆಯನ್ನು ಬಾರಿಸುವುದರ ಮೂಲಕ ಪ್ರತೀವರ್ಷ, ವಿಶ್ವ ಶಾಂತಿಯ ದಿನವನ್ನು ಸ್ವಾಗತಿಸಲಾಗುತ್ತೆ. ಇಂಗ್ಲೆಂಡ್ ಮತ್ತು ಕೋಸ್ಟಾರಿಕಾ ದೇಶದ ಸಲಹೆಯಂತೆ 1981ರಲ್ಲಿ ವಿಶ್ವ ಸಂಸ್ಥೆ, ವಿಶ್ವ ಶಾಂತಿಯ ದಿನವನ್ನು ಘೋಷಿಸಿತ್ತು. ಸೆಪ್ಟೆಂಬರ್ ತಿಂಗಳ ಮೂರನೇವಾರ ಆಚರಿಸಲ್ಪಡುತ್ತಿದ್ದ ವಿಶ್ವ ಶಾಂತಿಯ ದಿನವನ್ನು, ಸೆಪ್ಟೆಂಬರ್ 21ರ ದಿನದಂದೇ ಆಚರಿಸಲು ವಿಶ್ವ ಸಂಸ್ಥೆಯ ಅಂತರ ಸಂದೀಯ ಒಕ್ಕೂಟ ಸೂಚಿಸಿತು. ಆ ವರ್ಷದಿಂದ ಪ್ರತೀ ವರ್ಷದ ಸೆಪ್ಟೆಂಬರ್ 21ರ ದಿನವನ್ನೇ ಅಂತರಾಷ್ಟ್ರೀಯ ಶಾಂತಿಯ ದಿನವನ್ನಾಗಿ ಆಚರಿಸಲಾಗುತ್ತಿದೆ.
ಶಾಂತಿಯ ಕುರಿತು ಜಗತ್ತಿಗೆ ಜಾಗೃತಿ ಮೂಡಿಸುತ್ತಿರುವ ವಿಶ್ವ ಸಂಸ್ಥೆ ಪ್ರತೀ ವರ್ಷವೂ ಬೇರೆ ಬೇರೆ ಶಾಂತಿ ಸಂದೇಶಗಳನ್ನು ನೀಡುತ್ತಿದೆ. 'ಸಮರ್ಪಕ ಅಭಿವೃದ್ಧಿಯಿಂದ ಸೃಷ್ಟಿಯಾಗುವ ಶಾಂತಿಯು, ಸಮರ್ಥನೀಯ ಭವಿಷ್ಯವನ್ನು ಬರೆಯಬಲ್ಲದು' ಎಂಬುದು ಈ ವರ್ಷದ ವಿಶ್ವ ಶಾಂತಿಯ ದಿನದ ಸಂದೇಶವಾಗಿದೆ. ಶಾಂತಿ, ಅಭಿವೃದ್ಧಿ ಮತ್ತು ಉಜ್ವಲ ಭವಿಶ್ಯಕ್ಕೆ ಒಂದೊಕ್ಕೊಂದು ಸಂಬಂಧವಿದೆ, ಹಾಗೂ ಪ್ರತೀ ರಾಷ್ಟ್ರದ ಏಳಿಗೆಗೂ ಶಾಂತಿ, ಸುವ್ಯವಸ್ಥೆ ಅತೀ ಅವಶ್ಯ ಅನ್ನೋದನ್ನು ಈ ಸಂದೇಶ ಸಾರುತ್ತದೆ.
ಶಾಂತಿ, ಅಹಿಂಸೆಯ ಹೋರಾಟದಿಂದ ಸ್ವಾತಂತ್ರ್ಯ ಪಡೆದು ಜಗತ್ತಿಗೇ ಮಾದರಿಯಾದ ದೇಶ ನಮ್ಮದು. ಶಾಂತಿಯ ಮಾರ್ಗಕ್ಕೆ ಎಷ್ಟು ಶಕ್ತಿ ಇದೆ ಅನ್ನೋದನ್ನು ವಿಶ್ವಕ್ಕೆ ತೋರಿಸಿಕೊಟ್ಟ ರಾಷ್ಟ್ರ ಭಾರತ. ನಮ್ಮದೇಶವೂ ಸೇರಿದಂತೆ, ತನ್ನ ಎಲ್ಲ ಸದಸ್ಯರಾಷ್ಟ್ರಗಳಲ್ಲಿ ವಿಶ್ವ ಸಂಸ್ಥೆ ಶಾಂತಿ ಮಂತ್ರವನ್ನು ಬಿತ್ತುತ್ತಿದೆ. ಜಗತ್ತಿನ ಅಲ್ಲಲ್ಲಿ ಕಂಡುಬರುತ್ತಿರುವ ಅಶಾಂತಿ, ಗಲಭೆ ಯುದ್ಧಗಳು ಶಮನವಾಗಿ ಶಾಂತಿ ನೆಲೆಸುವಂತಾಗಲಿ, ಎಲ್ಲ ದೇಶಗಳೂ ಶಾಂತಿಯ ಮಂತ್ರ ಪಠಿಸಿ, ಇಡೀ ಜಗತ್ತಿನಲ್ಲಿ ಆತಂಕ ಮುಕ್ತ ವಾತಾವರಣ ನಿರ್ಮಾಣವಾಗಲಿ, ವಿಶ್ವದೆಲ್ಲಡೆ ನೆಮ್ಮದಿ ನೆಲೆಸಲಿ ಎಂದು ಆಶಿಸುವ ವಿಶ್ವ ಸಂಸ್ಥೆ, ವಿಶ್ವ ಶಾಂತಿಗಾಗಿ ಈ ದಿನವನ್ನು ಆಚರಿಸುತ್ತಿದೆ.
ವಿಶ್ವದೆಲ್ಲೆಡೆ ಶಾಂತಿ, ನೆಮ್ಮದಿ ನೆಲೆಸಲಿ ಎಂಬ ನಿಮ್ಮ ಆಶಯ ಸಾಕಾರಗೊಳ್ಳಲಿ.
ReplyDelete(ವಿಶ್ವ ಶಾಂತಿ ಬಗ್ಗೆ ಮಾಹಿತಿ ಹುಡುಕಾಡುವಾಗ ನಿಮ್ಮ ಬ್ಲಾಗ್ ಸಿಕ್ಕಿತು, ಅಷ್ಟೇ. ಧನ್ಯವಾದ)