Sunday, 23 June 2013

ಮೊದಲ ಬಾರಿ ಶಾಲೆಗೆ ಸೇರುವಾಗ......

ಆ 3 ಮೂರು ವರ್ಷದ ಪುಟಾಣಿ, ತಾನು ಹುಟ್ಟಿರುವುದೇ ಶಾಲೆಗೆ ಹೋಗುವುದಕ್ಕಾಗಿ ಅಂತ ಅಂದುಕೊಂಡುಬಿಟ್ಟಿದೆಯೋ ಏನೋ, ಏನೇನೂ ಗಲಾಟೆ ಮಾಡದೆ ಸ್ಕೂಲ್ ಬ್ಯಾಗ್‌ನ್ನು ಬೆನ್ನಿಗೆ ಹಾಕಿಕೊಂಡು, ಕೈಯಲ್ಲೊಂದು ಟಿಫಿನ್ ಕ್ಯಾರಿಯರ್ ಹಿಡಿದುಕೊಂಡು ಪುಟ್ಟ ಪುಟ್ಟ ಹೆಜ್ಜೆಯನ್ನಿಟ್ಟು ಸ್ಕೂಲ್ ಬಸ್ಸು ಹತ್ತಿ ಹೋಗುತ್ತಿರೋದನ್ನು ನೋಡಿದ್ರೆ ಆಶ್ಚರ್ಯ ಆಗುತ್ತದೆ.

ಹುಟ್ಟಿ 4 ತಿಂಗಳಿಗೇ ಬೇಬಿ ಸಿಟ್ಟಿಂಗ್‌ನಲ್ಲಿ ಕುಳಿತು ಬೆಳೆದ ಮಗು ಅದು. ಅದಕ್ಕೆ ತಾನು ದಿನದ ೨೪ ಗಂಟೆಯೂ ಮನೆಯಲ್ಲಿದ್ದು, ಅಭ್ಯಾಸವೇ ಇಲ್ಲ. ಆ ಮಗುವಿನ ತಾಯಿ ತನ್ನ ಕಚೇರಿಗೆ ರಜಾ ಹಾಕಿ ಮನೆಯಲ್ಲಿರುವ ಸಮಯದಲ್ಲಿಯೂ ಕೂಡ, ಮಗುವನ್ನು ಬೇಬಿ ಸಿಟ್ಟಿಂಗ್ನಲ್ಲಿಯೇ ಬಿಟ್ಟು ಬರುತ್ತಾ ಇದ್ದಳು, ಅದೇ ಕಾರಣಕ್ಕಾಗಿಯೋ ಏನೋ.. ಆ ಮಗುವಿಗೆ ತನ್ನ ಮನೆಯ ಮೇಲೆ, ಅಂಥ ಮಮತೆ, ಸೆಳೆತ ಇಲ್ಲ ಅನ್ನಿಸುತ್ತೆ. ಇಂದಿನ ಮಕ್ಕಳಿಗೆ ತಾನು ಶಾಲೆಗೆ ಸೇರಿದ್ದೇ ನೆನಪಿರೋದಿಲ್ಲ. ಏಕೆಂದರೆ, ಅಷ್ಟು ಚಿಕ್ಕ ವಯಸ್ಸಿಗೇ ಅವರೆಲ್ಲ ಸ್ಕೂಲ್‌ ಮೆಟ್ಟಿಲು ಹತ್ತಿರುತ್ತಾರೆ.

ಮನೆಯಮುಂದೆ ಬಸ್ಸು ಬಂದು ಶಬ್ದ ಮಾಡಿದ ತಕ್ಷಣ, ತನ್ನಮ್ಮನಿಗೆ ಬಾಯ್ ಮಾಡಿ ಬಸ್ಸು ಹತ್ತಿ ಹೋದ ಆ ಪುಟಾಣಿಯನ್ನು ನೋಡುತ್ತಾ ಇದ್ದ ನನಗೆ ನನ್ನ ಬಾಲ್ಯ ನೆನಪಾಯ್ತು. ಶಾಲೆಯ ಹೆಸರು ಕೇಳಿದರೆ, ಅಲ್ಲಿಂದ ಕಾಲು ಕೀಳುತ್ತಿದ್ದವಳು ನಾನು. ನನ್ನನ್ನು ಶಾಲೆಗೆ ಸೇರಿಸಲು, ನಮ್ಮಪ್ಪ ಅಮ್ಮ ಕಷ್ಟಪಟ್ಟಿದ್ದು ನೆನಪಾಯಿತು. ಮನೆಯಲ್ಲಿ ಮುದ್ದು ಮಗಳಾಗಿ ೬ ವರ್ಷ ಆಟವಾಡಿಕೊಂಡಿದ್ದ ನನ್ನ, ಒಮ್ಮೆಲೇ ಶಾಲೆಗೆ ಹೋಗು ಅಂದರೆ..? ನನಗೆ ಬಹಳ ಕಷ್ಟವಾಗಿತ್ತು. ಈ ಶಾಲೆ ಯಾಕಾದರೂ ಇದೆಯೋ ಅನ್ನಿಸುತ್ತಿತ್ತು.
ನಮ್ಮ ಪುಟ್ಟ ಹಳ್ಳಿಯಲ್ಲಿ ನಮ್ಮದು 5 ಮನೆಗಳು ಒಟ್ಟಿಗೇ ಇರುವ ದೊಡ್ಡ ಕೇರಿ, ಆ ಕೇರಿಯಲ್ಲಿ ಮೂಲೆಯ ಮನೆ ನಮ್ಮದು, ಮನೆಯ ಮಂದೆ ಪುಟ್ಟ ಅಂಗಳ, ಅಂಗಳಕ್ಕೆ ತಾಗಿಯೇ ಇರುವ ದನದ ಕೊಟ್ಟಿಗೆ. ಕೊಟ್ಟಿಗೆಯ ತುಂಬಾ ದನಗಳು, ಕರುಗಳು. ಎಲ್ಲರ ಮನೆಯ ಕೊಟ್ಟಿಗೆಗೂ ಹೋಗಿ, ಕರುಗಳ ಜೊತೆ ಆಡವಾಡುತ್ತಿದ್ದೆ ನಾನು. ಮನೆಯಲ್ಲಿದ್ದ ಬೆಕ್ಕಿನ ಮರಿ, ನಾಯಿ ಮರಿ ಜೊತೆಯೇ ಕಾಲ ಕಳೆಯುತ್ತಿದ್ದೆ.

ತೋಟಗಳಲ್ಲಿ ಅಲೆದು, ಗುಡ್ಡ ಬೆಟ್ಟಗಳಲ್ಲಿ ಬೆಳೆದ ಹಣ್ಣುಗಳನ್ನು ತಿನ್ನುತ್ತಾ ಓಡಾಡಿಕೊಂಡಿದ್ದ ಬಾಲ್ಯ ನಮ್ಮದು. ಪೇರಲು ಹಣ್ಣು ಕೀಳಲು ಮರಹತ್ತಿ ಇಳಿಯುವುದಕ್ಕೆ ಬಾರದೇ ಕೂಗಿ ಕೂಗಿ, ಬಾಯಾರಿ ಗಂಟಲು ಒಣಗಿ, ಮರದ ಮೇಲೆಯೇ ಕುಳಿತಿದ್ದ ನನ್ನನ್ನು ಆ ದಾರಿಯಾಗಿ ಮನೆಗೆ ಹೋಗುತ್ತಿದ್ದ ನಮ್ಮ ಮನೆಯ ಆಳು ಶೇಕರ ಕಂಡು, ನನ್ನನ್ನು ಮರದಿಂದ ಇಳಿಸಿದ್ದ, ಅಂದಿನ ಆ ದೃಶ್ಯವನ್ನು ಇಂದಿಗೂ ರಸವತ್ತಾಗಿ ಹೇಳುತ್ತಾನೆ ಅವನು.

ನನ್ನಮ್ಮನ ಸೀರೆಯನ್ನು ಸುತ್ತಿಕೊಂಡು, ಅಂಗಳದಲ್ಲಿ ಬಿಂಕದಿಂದ ನಡೆದಾಡುತ್ತಿದ್ದ ನನ್ನನ್ನು ಪಕ್ಕದ ಮನೆಯವರೆಲ್ಲ ನೋಡಿ ನಕ್ಕು ಸಂತೋಷ ಪಡುತ್ತಿದ್ದರು, ಇಡೀ ಕೇರಿಯೂ ನನ್ನದೇ, ಅಲ್ಲಿ ಯಾರ ಮನೆಯಲ್ಲಾದರೂ ನನ್ನ ಊಟ, ತಿಂಡಿ ಮುಗಿದುಹೋಗುತ್ತಿತ್ತು.
ಅಣ್ಣಂದಿರ ಜೊತೆ ಹೊಳೆಗೆ ಹೋಗುವುದು, ಅವರು ಈಜಾಡುವುದನ್ನು ನೋಡಿ, ಖುಷಿ ಪಡುವುದು, ನನಗೂ ಕಲಿಸಿಕೊಡಿ ಅಂತ ಹಟ ಮಾಡೋದು, ಅವರು ನನ್ನನ್ನು ಸಂಬಾಳಿಸಿ ಮನೆಗೆ ಕರೆದುಕೊಂಡುಬರೋದು ಮಾಮೂಲಿಯಾಗಿತ್ತು.. ನನ್ನ ಹಟ ಅವರಿಗೆ ಅಭ್ಯಾಸವಾಗಿಹೋಗಿತ್ತು.

ಪುಟ್ಟಮಗುವಾಗಿದ್ದ ನನ್ನ ತಂಗಿ ತೊಟ್ಟಿಲಲ್ಲಿ ಮಲಗಿ, ಕಿಲ ಕಿಲ ನಗುತ್ತಿದ್ದಳು. ಅವಳನ್ನು ನಗಿಸಲು ಕುಣಿಯುತ್ತಾ, ಮಲಗಿಸಲು ಹಾಡು ಹೇಳುತ್ತಾ ಇದ್ದೆ, ಮನೆಯ ತುಂಬಾ ಓಡಾಡಿಕೊಂಡು ಹಾಯಾಗಿರುತ್ತಿದ್ದೆ. ಹಗಲು ಹೊತ್ತಿನಲ್ಲೆಲ್ಲ ಆಟವಾಡಿ, ಕುಣಿದು ಸುಸ್ತಾಗಿ ನಿದ್ದೆಹತ್ತಿದ ಕಣ್ಣಿನಲ್ಲಿರುವ ನನಗೆ ಊಟ ಮಾಡಿಸುವವಳು ನನ್ನ ಅಜ್ಜಿ. ಊಟವಾದ ತಕ್ಷಣ ಹಾಸಿಗೆ ಹಾಸಿ ನನ್ನನ್ನು ಮಲಗಿಸುವ ಜವಾಬ್ದಾರಿ ನನ್ನಪ್ಪನದು. ದಿನವೂ ಬೇರೆ ಬೇರೆ ರಸವತ್ತಾದ ಕಥೆ ಕೇಳುತ್ತಾ, ಅಪ್ಪನ ಮಡಿಲಿನಲ್ಲಿಯೇ ನಿದ್ದೆ ಮಾಡುತ್ತಿದ್ದೆ ನಾನು.

ಅಂತೂ ಇಂತೂ ಶಾಲೆಗೆ ಸೇರುವ ದಿನ ಬಂದೇಬಿಟ್ಟಿತ್ತು. ನೀನು ನಾಳೆಯಿಂದ ಶಾಲೆಗೆ ಹೋಗಬೇಕು, ಅಲ್ಲಿ ಓದುವುದಕ್ಕೆ ಬರೆಯುವುದಕ್ಕೆ ಹೇಳಿಕೊಡುತ್ತಾರೆ, ನೀನು ಕಲಿತು ದೊಡ್ಡವಳಾಗಿ ಸ್ಕೂಲ್‌ಟೀಚರ್‌ಆಗಬೇಕು ಅಂತ ನನಗೆ ನಿಧಾನವಾಗಿ ಹೇಳ್ತಾ ಇದ್ದಳು ನಮ್ಮಮ್ಮ. ಅವಳು ಎಷ್ಟೇ ಹೇಳಿದರೂ ನನಗೆ ಶಾಲೆ ಇಷ್ಟವೇ ಇರಲಿಲ್ಲ. ಅವಳು ಹೇಳುವ ಕಥಯನ್ನೆಲ್ಲ ಕೇಳಿ ನಂತರ ಕೊನೆಯಲ್ಲಿ ನಾನು ಶಾಲೆಗೆ ಹೋಗೋದಿಲ್ಲ ಅಂತಿದ್ದೆ. ನನ್ನನ್ನು ಶಾಲೆಗೆ ಕಳಿಸುವುದಾದರೂ ಹೇಗಪ್ಪ ಅನ್ನೋದೇ ಅಮ್ಮನ ಚಿಂತೆಯಾಗಿತ್ತು.
ಅವತ್ತು ಜೂನ್‌೧, ಬೆಳಿಗ್ಗೆ ಜಿಟಿ ಜಿಟಿ ಮಳೆ ಸುರಿಯುತ್ತಿದೆ. ಹಾಸಿಗೆಯಲ್ಲಿ ಬೆಚ್ಚಗೆ ಮಲಗಿದ್ದ ನನ್ನ ಬೇಗನೆ ಎಬ್ಬಿಸಿ, ಸ್ನಾನ ಮಾಡಿಸಿ, ಬಿಳಿ ಅಂಗಿ ನೀಲಿ ಸ್ಕರ್ಟು ತೊಡಿಸಿ, ರೆಡಿ ಮಾಡಿಬಿಟ್ಟಿದ್ದಳು ಅಮ್ಮ. ಹಾಸಿಗೆಯಿಂದ ಎದ್ದಾಗಿನಿಂದ ಸೊಳ್ಳೆರಾಗದಲ್ಲಿ ಅಳುತ್ತಿದ್ದ ನಾನು ಶಾಲೆಗೆ ಹೋಗುವ ಸಮಯ ಹತ್ತಿರ ಬಂದಾಗ, ಅಯ್ಯೋ ನಾನು ಶಾಲೆಗೆ ಹೋಗೋದಿಲ್ಲ ಎಂದು ಜೋರಾಗಿ ಅಳಲು ಶುರುವಿಟ್ಟುಕೊಂಡೆ, ನನ್ನ ಸಂಬಾಳಿಸುವುದೇ ಅಪ್ಪ ಅಮ್ಮಂಗೆ ತಲೆ ನೋವಾಗಿಹೋಯ್ತು.

ಅಪ್ಪ ಅಮ್ಮ ಏನೇ ಹೇಳಿದರೂ, ಸಮಾಧಾನ ಮಾಡಿ ಶಾಲೆಗೆ ಕರೆದೊಯ್ಯಲು ಎಷ್ಟೇ ಕಷ್ಟಪಟ್ಟರೂ ನಾನು ಸುಮ್ಮನಾಗಲೇ ಇಲ್ಲ. ಎಷ್ಟು ಚೆಂದದ ಪುಸ್ತಕ ನೋಡು, ಎಷ್ಟು ಸುಂದರ ಬಳಪ ನೋಡು ಶಾಲೆಯಲ್ಲಿ ನಿನ್ನಂತೆ ಇರುವ ಮಕ್ಕಳ ಜೊತೆ ನೀನು ಆಟವಾಡಬಹುದು ಎಂದೆಲ್ಲ ಹೇಳಿ ನನ್ನ ಅಳುವನ್ನು ಕಡಿಮೆ ಮಾಡಲು ಪ್ರಯತ್ನ ಪಟ್ಟರೂ ಅದರಿಂದ ಏನೂ ಪ್ರಯೋಜನವಾಗಲಿಲ್ಲ. ನನ್ನ ಅಜ್ಜಿ, ತುಂಬ ಅಳುತ್ತಾಳೆ, ಶಾಲೆಗೆ ನಾಳೆ ಕರೆದುಕೊಂಡು ಹೋಗಪ್ಪ ಅಂತ ನಮ್ಮಪ್ಪಂಗೆ ಹೇಳಿದರೂ ಅಪ್ಪ ಕೇಳಲೇ ಇಲ್ಲ. ನನ್ನ ಕಿರುಚಾಟ ಮುಂದುವರೆಯುತ್ತಲೇ ಇತ್ತು.

ಅಲ್ಲಿಯೇ ನಿಂತಿದ್ದ ಶೇಕರನ ಹತ್ತಿರ, ಬುಟ್ಟಿ ತೆಗೆದುಕೊಂಡು ಬಾ ಅವಳನ್ನು ಬುಟ್ಟಿಯಲ್ಲಿ ತುಂಬಿಕೊಂಡು ಹೊತ್ತುಕೊಂಡು ಹೋಗುತ್ತೇನೆ ಅಂದರು ನಮ್ಮಪ್ಪ. ಆಗ ನಾನು ಅಲ್ಲಿಂದ ಎದ್ದು ಓಡಲು ಪ್ರಾರಂಭ ಮಾಡಿದೆ. ನನ್ನ ಅಟ್ಟಿಸಿಕೊಂಡು ಬಂದ ಅಪ್ಪನಿಗೆ ನಾನು ಸಿಗಲಿಲ್ಲ. ಓಡಿಹೋಗಿ ಬಚ್ಚಲು ಮನೆಯ ಬಾಗಿಲು ಹಾಕಿಕೊಂಡುಬಿಟ್ಟೆ. ತುಂಬಾ ಹೊತ್ತು ಅಲ್ಲೇ ಇದ್ದೆ. ಅಮ್ಮ ಹೊರಗಿನಿಂದ ನನ್ನ ಕರೆದು ಕರೆದು ಸುಸ್ತಾದಳು. ಬಚ್ಚಲು ಮನೆಯಲ್ಲೇ ನಿಂತಿದ್ದ ನನಗೂ ಕೂಡ ಅತ್ತೂ ಅತ್ತೂ ಸುಸ್ತಾಗಿತ್ತು. ನಿಧಾನವಾಗಿ ಬಾಗಿಲು ತೆಗೆದು ಅಡಿಗೆ ಮನೆಗೆ ಹೋಗಿ ಅಮ್ಮನನ್ನು ಅಪ್ಪಿಕೊಂಡೆ.

ಅಮ್ಮ ನನ್ನ ಎತ್ತಿಕೊಂಡು, ಸಮಾಧಾನ ಮಾಡಿ, ಶಾಲೆಗೆ ಹೋಗಲು ಧೈರ್ಯ ತುಂಬಿದಳು. ಕಣ್ಣೀರು ಒರೆಸಿ, ಮುಖ ತೊಳೆಸಿ ಸಿದ್ಧಗೊಳಿಸಿದಳು. ನನ್ನಪ್ಪ ನಗುತ್ತಾ ನಗತ್ತಾ ನನ್ನ ಬಳಿ ಬಂದು, ಮಧ್ಯಾಹ್ನದ ತನಕ ಶಾಲೆಯಲ್ಲಿರು, ಆ ನಂತರ ನಾನೇ ಬಂದು ನಿನ್ನ ಮನೆಗೆ ಕರೆತರುತ್ತೇನೆ ಎಂದು ಹೇಳಿ ನನ್ನ ಶಾಲೆಗೆ ಕರೆದುಕೊಂಡು ಹೋದರು.

ಶಾಲೆಗೆ ಹೋಗುವುದು ಅಂದ್ರೆ, ಅದೇನೋ ಕಳೆದುಕೊಂಡವರಂತೆ ಭಾಸವಾಗುತ್ತಿತ್ತು ನನಗೆ. ಶಾಲೆ ಸೇರಿದ ಮೇಲೆ, ಶಾಲೆಯ ಪ್ರೀತಿ ಬಂದಿತ್ತಾದರೂ, ನನ್ನ ಶಾಲೆಗೆ ಕಳಿಸುವಾಗ ನಮ್ಮಪ್ಪ ಅಮ್ಮಂಗೆ ಸಾಕುಬೇಕಾಗಿತ್ತು. ಅದೊಂದು ದೊಡ್ಡ ಪ್ರಹಸನವೇ ನಡೆದುಹೋಗಿತ್ತು.

ಅದನ್ನೆಲ್ಲ ನೆನಪಿಸಿಕೊಂಡ ನನಗೆ, ಬೆಂಗಳೂರೆಂಬ ಮಹಾ ನಗರಿಯಲ್ಲಿಯ ಪುಟ್ಟ ಪುಟ್ಟ ಮಕ್ಕಳು, ಹುಟ್‌ಹುಟ್ತಾನೇ ಶಾಲೆಗೆ ಹೋಗುತ್ತವೆ ಅಂದ್ರೆ, ನಂಬುವುದಕ್ಕೇ ಆಗುವುದಿಲ್ಲ. ನಾವು 6 ವರ್ಷ ವಯಸ್ಸಿನ ತನಕ ಅನುಭವಿಸಿದ ಆ ಖುಷಿ, ಆಟ, ಪಾಟ, ನಲಿವು ಈ ಮಕ್ಕಳಿಗೆ ಸಿಗುತ್ತಲೇ ಇಲ್ಲವಲ್ಲ.. ಅಂತ ಅನ್ನಿಸುತ್ತಿತ್ತು. ಏನೇನೂ ಗಲಾಟೆ ಮಾಡದೆ, ಅಮ್ಮ ಕೊಟ್ಟ ಟಿಫನ್‌ ಬಾಕ್ಸ್‌ಹಿಡಿದು, ಸ್ಕೂಲ್‌ಬ್ಯಾಗ್‌ಏರಿಸಿಕೊಂಡು, ಪಕ್ಕದಲ್ಲೇ ನಿಂತಿದ್ದ ನನಗೂ ಟಾಟಾ ಮಾಡಿ ಸ್ಕೂಲ್‌ಬಸ್‌ಹತ್ತಿಹೋದ ಆ 3 ವರ್ಷದ ಪುಟ್ಟಿಯ ಬಗ್ಗೆಯೇ ಯೋಚನೆ ಮಾಡ್ತಾ ಕಳೆದುಹೋದೆ..

ನೀನು ನಾನು

ಯಾಕೋ ನೀನು ಸುಮ್ಮನೆ ನೆನಪಾಗುತ್ತೀಯಾ...ಹಾಗೇ..ಮನದ ಪುಟದಲ್ಲಿ ಬಂದು ಹೋಗ್ತಿಯಾ...ಯಾವುದೋ ಮಾತು..ಇನ್ಯಾವುದೋ ಸನ್ನಿವೇಶ, ತಟ್ಟನೆ ನಿನ್ನ ನೆನಪು ಮಾಡುತ್ತೆ. ನೀನಾಡಿದ ಮಾತು, ನಸು ನಗುತ್ತಾ ನೀನು ನನ್ನ ಪ್ರಶ್ನೆಗೆ ಕೊಡುತ್ತಾ ಇದ್ದ ಉತ್ತರ, ಅದೆಲ್ಲ ಈಗಲೂ ನೆನಪಾಗುತ್ತೆ. ಮನಸ್ಸಿಗೆ ಎಷ್ಟು ಹತ್ತಿರ ಆಗಿದ್ದೆ ನೀನು. ಮೂರು ವರ್ಷ ಮೂರು ನಿಮಿಷದಂತೆ ಕಳೆದುಹೋಯ್ತು ಅಲ್ವಾ? ಸ್ನೇಹದ ಜೊತೆ ಜತೆಗೆ ನಮ್ಮೊಂದಿಗೆ ಹೆಸರಿಲ್ಲದ ಬಾಂಧವ್ಯ ನಮ್ಮಿಬ್ಬರನ್ನು ಮತ್ತಷ್ಟು ಹತ್ತಿರ ತಂದಿತ್ತು ಅಲ್ವಾ? ಒಬ್ಬರನ್ನೊಬ್ಬರು ಬಿಟ್ಟಿರದ ಆ ಸ್ನೇಹ ಬಾಂಧವ್ಯ ಹೊಸ ರೂಪ ಪಡೆದುಕೊಂಡಿದ್ದು, ಅದು ನಮ್ಮಿಬ್ಬರಿಗೂ ಗೊತ್ತಿದ್ದರೂ ಏನೂ ಗೊತ್ತಿಲ್ಲದಂತೆ ನಟಿಸುತ್ತಾ ಇದ್ವಿ ಅಲ್ವಾ...? ಏನು ಅಂದ್ರೆ ಇಬ್ಬರಿಗೂ ಗೊತ್ತಿರದ ಹೊಸ ನಂಟು ಬೆಸೆಯುತ್ತಾ ಇರೋದು ಇಬ್ಬರ ಅನುಭವಕ್ಕೂ ಬಂದಿತ್ತು ಅನ್ನೋದು. ನಾನು ಕಷ್ಟಪಟ್ಟು ಸುತ್ತಿ ಬಳಸಿ ಹೇಳಿದ ಎಷ್ಟೊಂದು ಮಾತುಗಲು...ಯಾವುದೂ ಅರ್ಥವೇ ಆಗಿಲ್ಲ ಅಂತಿದ್ದೆಯಲ್ಲ... ಎಂಥ ಚಾಲಾಕಿ ನೀನು..

ನಮ್ಮಿಬ್ಬರಿಗೂ ಅಂದು ಕಾಲೇಜಿನ ಕೊನೆಯ ದಿನ.. ಆ ಭಾವುಕ ಕ್ಷಣ ನೀನು ನೆನಪಾದಾಗಲೆಲ್ಲ ನೆನಪಾಗುತ್ತೆ ಕಣೇ... ಅಂದು ನೀನು, ತುಂಬಿದ ಕಣ್ಣುಗಳಲ್ಲಿ ನನ್ನ ಕೇಳಿದ ಪ್ರಶ್ನೆಗಳು ಇಂದಿಗೂ ನನ್ನ ಕಾಡುತ್ತವೆ. ಕಾಲೇಜು ಮುಗಿದ ಮೇಲೆ ನಾವು ಬೇರೆ ಬೇರೆ ಆಗುತ್ತೀವಾ..? ನಾನು ನೀನು ನಮ್ಮ ನಮ್ಮ ವಯಕ್ತಿಕ ಜೀವನದಲ್ಲಿ ಮುಳುಗಿ ಈಗಿರುವ ಬಾಂಧವ್ಯ ಕಳೆದುಕೊಂಡುಬಿಡ್ತೀವಾ..? ನಿನಗೆ ಹೊಸ ಗೆಳೆಯ ಗೆಳತಿಯರು ಸಿಕ್ಕಮೇಲೆ ನನ್ನ ಮರೆತುಬಿಡ್ತೀಯಾ..? ಅಂತ.. ಅದಕ್ಕೆ ನನ್ನ ಉತ್ತರ ಏನಿತ್ತು ಹೇಳು.. ಹಾಗೆಲ್ಲ ಆಗಲ್ಲ ಎಂಬ ಭಾವವಿದ್ದ ನನ್ನ ಕಣ್ಣಿನಲ್ಲಿ ಜಿನುಗಿದ ಭಾವುಕ ಕಣ್ಣೀರು. ನಾವಿಬ್ಬರು ಬೇರೆ ಆಗುತ್ತೀವಿ ಎಂಬ ಪರಿಸ್ಥಿತಿಯನ್ನು ಸುಮ್ಮನೇ ಕಲ್ಪಿಸಿಕೊಳ್ಳೋಕೂ ನನಗೆ ಸಾಧ್ಯವಿರದ ಸ್ಥಿತಿ ನಂದಾಗಿತ್ತು. ಕಣೇ..

ಹೌದು. ನಿಜ. ನೀನು ಹೇಳಿದಂತೆ ಇವತ್ತು ಬೇರೆ ಬೇರೆ ಆಗಿದ್ದೀವಿ. ನೀನು ನನಗೆ ಆ ಪ್ರಶ್ನೆಗಳನ್ನು ಕೇಳಿ ಈಗ ೫ ವರ್ಷಗಳು ಕಳೆದುಹೋಗಿವೆ. ಈಗ ನಾವಿಬ್ಬರೂ ಎಂದಿಗೂ ಭೇಟಿಯಾಗಲು ಸಾಧ್ಯವಿಲ್ಲದಷ್ಟು ದೂರಾಗಿಹೋಗಿದ್ದೀವಿ. ಅದಕ್ಕೆಲ್ಲ ಕಾರಣ ನಾನೇ ಎಂಬ ಭಾವ ನಿನ್ನದು ಅನ್ನೋದು ಕೂಡ ಗೊತ್ತಿದೆ ನನಗೆ. ಆದರೆ ನಿನ್ನ ಸ್ನೇಹವನ್ನು ಕಳೆದುಕೊಳ್ಳೋಕೆ ನನಗೂ ಮನಸ್ಸಿರಲಿಲ್ಲ. ನನ್ನ ಮನಸ್ಸು ನಾನು ನಿನ್ನಿಂದ ದೂರಾಗುವುದನ್ನು ಸಹಿಸುತ್ತಿರಲಿಲ್ಲ. ಆದರೆ, ಬುದ್ದಿ ಹೇಳಿದಂತೆ ಕೇಳಲೇಬೇಕಾದ ಅನಿವಾರ್ಯತೆ ಇತ್ತು ಕಣೇ.. ನಮ್ಮ ಸಂಬಂಧ ನೀನು ಹೇಳಿದಂತೆಯೇ ಇದ್ದಿದ್ದರೆ., ನಮ್ಮಿಬ್ಬರ ಮನೆಯಲ್ಲಿಯೂ ನಾವಿಬ್ಬರೂ ನಿಷ್ಟುರರಾಗಬೇಕಾಗಿತ್ತು. ನಮ್ಮನ್ನೇ ನಂಬಿಕೊಂಡಿದ್ದ ಆ ಹಿರಿ ಜೀವಗಳಿಗೆ ನೋವು ಕೊಡಬೇಕಾಗಿತ್ತು. ಸಂಪ್ರದಾಯ ಮೀರಿ ಸಮಾಜದ ರೀತಿ ನೀತಿ ಮೀರಿ ನಿನ್ನೊಂದಿಗೆ ಬರುವುದಕ್ಕೆ ನನ್ನ ಬುದ್ದಿ ಹಿಂಜರಿದಿತ್ತು. ಈ ಸತ್ಯವನ್ನು ನಿನಗೆ ನಾನು ಹೇಳಲು ಎಷ್ಟು ಕಷ್ಟಪಟ್ಟೆ ಅನ್ನೋದು ನನಗೇ ಗೊತ್ತು. ನಂತರ ಎಂಥ ನೋವು ಅನುಭವಿಸಿದ್ದೀನಿ ಗೊತ್ತಿದೆಯಾ..? ನಿನ್ನ ಸ್ನೇಹ ಮುರಿದುಕೊಂಡು ಒಂಟಿಯಾಗಿದ್ದಾಗ ನನ್ನ ಮನಸ್ಸು ಎಷ್ಟು ಚಡಪಡಿಸಿದೆ ಗೊತ್ತಾ? ಮನಸ್ಸು ಹಿಂಡಿ ಹಿಂಡಿ ಹಿಪ್ಪೆಯಾಗಿತ್ತು. ಇಡೀ ಜಗತ್ತೇ ನೋವಿನಲ್ಲಿ ಮುಳುಗಿದೆಯೇನೋ ಎಂಬಂತೆ ಭಾಸವಾಗುತ್ತಾ ಇತ್ತು. ನೋವಿನ ಭಾವ ತುಂಬಿದ ಸಂಗೀತ ಕೇಳುವುದೇ ನನ್ನ ಹವ್ಯಾಸವಾಗಿಹೋಗಿತ್ತು. ನೆಮ್ಮದಿಗಾಗಿ ಹಾತೊರೆಯುವ ಪಾಡು ನನ್ನದಾಗಿಹೋಗಿತ್ತು ಕಣೇ.. ಅವೆಲ್ಲ ನನ್ನ ಬದುಕಿನ ಅತೀ ಭಾವುಕ ದಿನಗಳು.. ಎಂದೆಂದಿಗೂ ಅನುಭವಿಸಿರದ ಅತ್ಯಂತ ನೋವಿನ ಕ್ಷಣಗಳನ್ನು ನಾನು ನೋಡಿಬಿಟ್ಟೆ.. ನಿನಗೂ ಇಷ್ಟೇ ನೋವಾಗಿತ್ತು ಅನ್ನೋದು ಗೊತ್ತಿತ್ತು ನನಗೆ.. ಆದರೆ, ನನ್ನ ಸ್ಥಿರ ನಿರ್ಧಾರ ಮಾತ್ರ ಬದಲಾಗಲೇ ಇಲ್ಲ.

ಈಗ ನಮ್ಮಿಬ್ಬರ ಬದುಕಿನಲ್ಲಿಯೂ ಹೊಸ ದಾರಿ ಕಂಡಿದೆ. ನಾವು ನಮ್ಮದೇ ದಾರಿಯಲ್ಲಿ ಖುಷಿಯಾಗಿದ್ದೇವೆ. ನಾವು ತೆಗೆದುಕೊಂಡಿದ್ದ ಆ ನಿರ್ಧಾರದಿಂದ ಯಾವ ನಷ್ಟವೂ ಆಗಿಲ್ಲ ಅಂತ ಇಬ್ಬರಿಗೂ ಅರಿವಾಗಿದೆ. ನಾವಿಬ್ಬರೂ ನಮ್ಮ ವಯಕ್ತಿಕ ಜೀವನದಲ್ಲಿ ಅತ್ಯಂತ ಸಂತಸದಿಂದ ಇದ್ದೀವಿ ಅನ್ನೋದು ವಾಸ್ತವ ಕೂಡ.

‘ನೀನು -ನಾನು’ ಇದು ಸುಂದರ ನೆನಪು ಕಣೇ... ಬದುಕಿಗೆ ಹೊಸ ರಂಗು ನೀಡಿದ ಮಧುರ ಒಡನಾಟ ಅದು. ನಿನ್ನ ನೆನಪು ಯಾವಾಗಲೂ ನನ್ನಲ್ಲಿ ಇರುತ್ತೆ. ಆ ಸುಂದರ ಸ್ನೇಹ, ಸ್ನೇಹವನ್ನೂ ಮೀರಿದ ಬಾಂಧವ್ಯ, ಹೆಸರೇ ಇಲ್ಲದ ಆ ನಂಟು... ಯಾವಾಗಲೂ ನನ್ನ ಮನಸಿನಲ್ಲಿ ಹಚ್ಚ ಹಸಿರಾಗಿಯೇ ಇರುತ್ತೆ.. ಅದು ಹಾಗೇಯೇ ಇರಲಿ ಅಲ್ವಾ..?

ಖುಷಿ ಎಂದೆಂದಿಗೂ ನಿನ್ನೊಂದಿಗೆ ಇರಲಿ ಅನ್ನೋದು ನನ್ನ ಹಾರೈಕೆ ಕಣೇ..

ಇಂತಿ
ನಿನ್ನವ
(ನಿನ್ನಿಂದ ದೂರಾದವ)

ದೇವರ ಮನೆಯ ತುಪ್ಪದ ದೀಪ

ದೇವರೇ ಎದೆಯಲ್ಲಿರುವ ಅದ್ಯಾವುದೋ ಭಾವ, ಮನಸ್ಸನ್ನು ಚುಚ್ಚಿ ಕಣ್ಣೀರು ತರುತ್ತಿದೆ... ಹಾಗಂತ ಆ ಭಾವದ ಅರ್ಥ ಗೊತ್ತಿಲ್ಲವೆಂದಲ್ಲ. ಅದಕ್ಕೊಂದು ಹೆಸರು ಕೊಡಲು ನನಗೆ ಸಾಧ್ಯವಾಗುತ್ತಿಲ್ಲ ಅಷ್ಟೆ.

ನಾನು ನನ್ನ ಮನಸ್ಸನ್ನು ಗಟ್ಟಿಗೊಳಿಸಿ, ವಾಸ್ತವಕ್ಕೆ ಹೊಂದಿಕೊಳ್ಳುತ್ತಿರುವ ಈ ಸಂದರ್ಭದಲ್ಲಿ....ಈ ಭಾವ ನನ್ನ ಕಾಡಬಾರದಿತ್ತು. ಈ ಭಾವಕ್ಕೇನು ಹೇಳಲಿ..? ನನ್ನವರು ನನಗೇ ಸೇರಬೇಕೆಂಬ ಆಕಾಂಕ್ಷೆ ಇದು. ನನ್ನ ಪ್ರೀತಿಗೆ ಪ್ರತಿಯಾಗಿ ಅಷ್ಟೇ ಪ್ರೀತಿ ಸಿಗಬೇಕೆಂಬ ಹಂಬಲ ಇದು. ನನ್ನ ಪ್ರೀತಿಗೆ ಯಾವುದೇ ಅಡತಡೆ ಇರಬಾರದು ಎಂಬ ನಿರೀಕ್ಷೆ ಇದು. ಭೂತಕಾಲದ ಪ್ರಭಾವ ವಾಸ್ತವದ ಮೇಲೆ ಏಕಿದೆ ಎಂಬ ಘಾಡ ಪ್ರಶ್ನೆ ನನ್ನದು. ವಾಸ್ತವದ ಪ್ರೀತಿಯೆದುರು ಮುರಿದುಬಿದ್ದ ಆ ಭೂತಕಾಲದ ಪ್ರೀತಿಯ ಜೊತೆ ಮತ್ತೆ ಸಂಬಂಧ ಕುದುರಿಸುವ ಅವನ ಬಯಕೆಗೆ ಇರುವ ವಿರೋಧವಿದು. ಈ ಭಾವಕ್ಕೇನು ಹೆಸರು ಕೊಡಲಿ..?

ನನ್ನ ಪ್ರೀತಿಯಲ್ಲೇನಾದರೂ ಮೋಸವಿದೆಯಾ ...? ಅಥವಾ ಕೊರತೆ ಇದೆಯಾ? ಬೇಡವೆಂದು ಬಿಟ್ಟು ಹೊಸದೊಂದು ಸಂಬಂಧ ಕಟ್ಟಿಕೊಂಡ ಮೇಲೆ ಮತ್ತೆ ಹಿಂದುರಿಗಿ ನೋಡುವ ಅವನ ಮನಸ್ಸಿಗೆ ನನ್ನ ಧಿಕ್ಕಾರವಿದೆ. ಬದುಕಿನಲ್ಲಿಯ ಆಸೆಯೇ ಬತ್ತಿಹೋಗಿದ್ದ ಸಮಯದಲ್ಲಿ, ಅಭಿಲಾಶೆಯ ಚಿಲುಮೆಯೊಡೆದು ನಿರೀಕ್ಷೆಗಳ ದಾರಿ ತೋರಿದ ಹೊಂಬೆಳಕಿನಂತೆ ಅವನು. ಮನಸಿನಾಗಸದಲ್ಲಿ ಜೀವನ ಪ್ರೀತಿ ಎಂಬ ಸೂರ್ಯ ಉದಯಿಸಲು ಕಾರಣಕರ್ತನೇ ಅವನು. ದಯವಿಟ್ಟು ಅವನನ್ನು ಕಸಿದುಕೊಳ್ಳಬೇಡ ದೇವರೇ... ಎಂದು ಎಷ್ಟೋ ಹೊತ್ತಿನ ವರೆಗೆ ದೇವರನ್ನೇ ದಿಟ್ಟಿಸುತ್ತಾ ಮನಸಿನಲ್ಲಿಯೇ ದೇವರ ಜೊತೆ ಮಾತನಾಡುತ್ತಿರುವ ಅವಳು...ಎಲ್ಲೋ ಕಳೆದು ಹೋಗಿದ್ದಾಳೆ.. ಅಷ್ಟರಲ್ಲಿಯೇ ಮೊಬೈಲ್‌ ರಿಂಗಾಗಿದ್ದು ಕೇಳಿ ಅಲ್ಲಿಂದೆದ್ದು ಹೊರಟವಳಿಗೆ ಕೇಳಿದ್ದು ಮನೆಯ ಕಾಲಿಂಗ್ ಬೆಲ್‌. ಓಡೋಡಿ ಹೋಗಿ ಮನೆಯ ಬಾಗಿಲು ತೆರೆದಾಗ ಎದುರಿಗಿದ್ದವ ಅವಳ ಪ್ರೀತಿಯ ಗಂಡ. ಇಷ್ಟು ಬೇಗ ಆಫೀಸಿನಿಂದ ಬಂದಿರಾ ಎಂಬಂತೆ ಪ್ರಶ್ನಿಸುತ್ತಿದ್ದ ಅವಳ ಆಶ್ಚರ್ಯದ ಮುಖಭಾವಕ್ಕೆ ಸಿಕ್ಕಿದ್ದು, ಹೌದು ನಿನಗೋಸ್ಕರ ಬೇಗ ಬಂದೆ ಎಂಬ ಉತ್ತರ.

ನನ್ನೊಂದಿಗೆ ಇಷ್ಟು ಪ್ರೀತಿಯಿಂದ ಇರುವ ಈತ ಹಳೆಯ ಪ್ರೀತಿಯನ್ನೂ ಯಾಕೆ ನೆನಪಿಸಿಕೊಳ್ಳುತ್ತಾನೋ...? ಎಂಬ ನೋವಿನ ಪ್ರಶ್ನೆ ಮನಸ್ಸಿನಲ್ಲಿಯೇ ಉಳಿದು ಹೋಯಿತು.ಅವನು ನನ್ನಮೇಲಿಟ್ಟಿರುವ ಪ್ರೀತಿ ನಿಷ್ಕಲ್ಮಶ, ಆದರೆ, ಅವಳ ಜೊತೆಯಲ್ಲಿಯೂ ಒಡನಾಟವಿದೆ.. ಇದನ್ನು ಹೇಗೆ ಸಹಿಸಿಕೊಳ್ಳಲಿ... ಇವತ್ತು ಏನೇ ಆಗಲಿ ಈ ವಿಷಯ ಆತನಲ್ಲಿ ಚರ್ಚಿಸಲೇ ಬೇಕು.. ಎಂಬ ಧೃಢ ನಿರ್ಧಾರ ಅವಳ ಮನಸ್ಸಿನಲ್ಲಿ.

ಹೆಂಡತಿಯ ಯೋಚನೆ ಮೊದಲೇ ತನಗೆ ತಿಳಿದಿರುವಂತೆ... ಚಿಂತಿಸಬೇಡ ಚಿನ್ನ... ಎಲ್ಲ ನೀನಂದುಕೊಂಡಂತೆಯೇ ಆಗುತ್ತಿದೆ... ಎಂಬ ನಸು ನಗುವಿನೊಂದಿಗೆ ಬಂದ ಆತನ ಮಾತು. ಅನಿರೀಕ್ಷಿತವಾಗಿ ಬಂತ ಉತ್ತರದಿಂದ ಅತ್ಯಂತ ಆಶ್ಚರ್ಯಗೊಂಡು ಆತನನ್ನೇ ದಿಟ್ಟಿಸಿ, ಏನೋ ಮಾತನಾಡಲು ಹೊರಟವಳಿಗೆ ಮತ್ತೆ ಕೇಳಿದ್ದು, ಮನೆಯ ಕಾಲಿಂಗ್‌ ಬೆಲ್‌. ತನ್ನ ಮಾತನ್ನು ಅಲ್ಲಿಗೆ ನಿಲ್ಲಿಸಿ ಬಾಗಿಲು ತೆರೆಯಲು ಎದ್ದವಳ ತಡೆಯದೇ ಶಾಂತನಾಗಿ ಕುಳಿತಿದ್ದ ಅವನು.

ಮನೆಯ ಬಾಗಿಲು ತೆರೆದಾಗ ಕಂಡವರು ಒಬ್ಬ ಹುಡುಗಿ ಮತ್ತು ಮಧ್ಯವಯಸ್ಕ ಹೆಣ್ಣು. ಅಪರಿಚಿತರಾದ ಅವರನ್ನು ಏನೂ ಪ್ರಶ್ನೆ ಮಾಡದೆ ಅವರಿಗೆ ಇವಳು ನೀಡಿದ್ದು ನಗುವಿನ ಆಹ್ವಾನ. ಅವರಿಬ್ಬರೂ ಮನೆಯೊಳಗೆ ಪ್ರವೇಶ ಮಾಡುತ್ತಿದ್ದಂತೆ ಎದ್ದು ಬಂದ ಆತನಿಂದಲೇ ಇವಳಿಗೆ ಸಿಕ್ಕಿದ್ದು ಅಪರಿಚಿತರ ಪರಿಚಯ. ಎಲ್ಲೋ ನೋಡಿದಂತಿರುವ ಈ ಹುಡುಗಿ ಯಾರು ಎಂಬುದು ಈ ಸ್ಪಷ್ಟವಾಯಿತು. ಇವಳೇ ಅವಳು ಎಂದು.
ತನ್ನ ಮದುವೆಗೆ ಆಹ್ವಾನ ಪತ್ರಿಕೆ ನೀಡಲು ತನ್ನ ತಾಯಿಯೊಂದಿಗೆ ಬಂದಿದ್ದ ಹುಡುಗಿಗೆ ಅರಿಶಿನ ಕುಂಕುಮ ಕೊಟ್ಟು, ಶುಭಹಾರೈಸಿದಳು. ಮನೆಯಲ್ಲಿದ್ದ ಸಿಹಿ ತಿನಿಸು ನೀಡಿ ಪುರಸ್ಕರಿಸಿದಳು. ಥೇಟ್‌ ತನ್ನ ಅಮ್ಮನಂತೆ ಭಾಸವಾದ ಹುಡುಗಿಯ ಅಮ್ಮನ ಮೃದು ಸ್ವಭಾವ ಅವಳಿಗೂ. ನಗುನಗುತ್ತಲೇ ತನ್ನೊಂದಿಗೆ ಬೆರೆತ ಅವರಿಬ್ಬರೂ ಇವಳಿಗೆ ಇಷ್ಟವಾದರು.

ಮುಂದಿನ ತಿಂಗಳವೇ ನನ್ನ ಮದುವೆ. ನೀವಿಬ್ಬರೂ ನನ್ನ ಮದುವೆಗೆ ಬರಲೇ ಬೇಕು ಎಂದು ಆಹ್ವಾನಿಸಿದ ಆ ಹುಡುಗಿ ಪರ ದೇಶದಲ್ಲಿರುವ ಗಂಡನ ಫೋಟೋ ತೋರಿಸಿದಳು. ತುಂಬಾ ಮುದ್ದಾದ ಜೋಡಿ ಅದು. ಮದುವೆಗೆ ಬಂದೇ ಬರುತ್ತೇವೆ ಎಂದ ಆತ ಮತ್ತು ಅವಳ ಭರವಸೆಯೊಂದಿಗೆ ತಾಯಿ, ಮಗಳು ಹೊರಟರು.

‘ನಿನ್ನ ನಾನು ತುಂಬಾ ಪ್ರೀತಿಸುತ್ತೇನೆ’, ನಿನ್ನಿಂದ ಎಂದಿಗೂ ದೂರಾಗುವುದಿಲ್ಲ ಎಂಬ ವಿಚಾರವನ್ನು ಈಗ ಸಂಪೂರ್ಣ ಒಪ್ಪುತ್ತೀಯಾ? ಎಂಬ ಆತನ ಪ್ರಶ್ನೆಗೆ ಅವಳ ಸಂತಸದ ಕಣ್ಣೀರು ಉತ್ತರಿಸಿತು. ನಿನ್ನಂತ ಸರಳ, ಸಾಧು ಮನಸ್ಸಿನ ಹುಡುಗಿ ನನಗೆ ಸಿಕ್ಕಿದ್ದು ನನ್ನ ಪುಣ್ಯ, ನೀನೇ ನನಗೆ ಎಲ್ಲ. ಎಂಬ ಗಂಡನ ಮಾತು, ಮನಸ್ಸಿನಲ್ಲಿ ಗುಡ್ಡದಂತೆ ಕೂತಿದ್ದ ಎಲ್ಲ ನೋವುಗಳನ್ನು ಬೆಣ್ಣೆಯಂತೆ ಕರಗಿಸಿಬಿಟ್ಟಿತ್ತು....

ಸಂತಸದಿಂದ ದೇವರ ಮನೆಗೆ ಓಡಿದ ಅವಳನ್ನು ಹಿಂಬಾಲಿಸಿಕೊಂಡು ಬಂದ ಆತನಿಗೆ ಕಂಡಿದ್ದು, ತನ್ನ ಹೆಂಡತಿ ಸಂತಸದಿಂದ ಬೆಳಗುತ್ತಿದ್ದ ‘ದೇವರ ಮನೆಯ ತುಪ್ಪದ ದೀಪ’.

Monday, 22 April 2013

`ಮೊಹೆಂಜೋದಾರೋ' ತಾಮ್ರಯುಗದ ಅತಿದೊಡ್ಡ ನಗರ

ಅರಣ್ಯ ಜೀವಿಯಾಗಿದ್ದ ಮಾನವ ನಾಗರಿಕನಾಗಿದ್ದು, ನಾಗರಿಕತೆಗಳು ಪ್ರಾರಂಭವಾದಾಗಿನಿಂದ. ನಾಗರಿಕತೆಗಳಿಂದಲೇ ಮಾನವನ ಸಾಮಾಜಿಕ ಜೀವನ ವಿಕಾಸವಾಗಲು ಪ್ರಾರಂಭವಾಯ್ತು. ಜಗತ್ತಿನಲ್ಲಿ ಅಸ್ತಿತ್ವದಲ್ಲಿದ್ದ ನಾಗರಿಕತೆಗಳಲ್ಲಿಯೇ ನಮ್ಮ ದೇಶದ ಸಿಂಧೂ ನಾಗರೀಕತೆ ಅತ್ಯಂತ ದೊಡ್ಡ ನಾಗರಿಕತೆ ಎಂದು ಗುರುತಿಸಿಕೊಂಡಿದೆ. ಇಂದಿನ ಪಾಕಿಸ್ತಾನದ ಭೂಮಿಯಲ್ಲಿಯೇ ಸುಮಾರು 4 ಸಾವಿರ ವರ್ಷಗಳ ಹಿಂದೆ ಸಿಂಧೂ ನಾಗರಿಕತೆ ಅಸ್ತಿತ್ವದಲ್ಲಿತ್ತು. ಸಿಂಧೂ ನಾಗರಿಕತೆಯ ಪ್ರಮುಖ ನಗರಗಳೇ ಹರಪ್ಪಾ ಮತ್ತು ಮೊಹೆಂಜೋದಾರೋ.

ಪುರಾತನ ಅಮೂಲ್ಯ ಕುರುಹುಗಳಿರುವ ಮೊಹೆಂಜೋದಾರೋ ನಗರ ಪ್ರಾಕೃತಿಕ ವಿಕೋಪಕ್ಕೆ ಒಳಪಟ್ಟು ಅಷ್ಟಟ್ಟಾಗಿ ನಶಿಸುತ್ತಾ ಇದೆ. ಎರಡು ವರ್ಷಗಳ ಹಿಂದೆ ಪಾಕಿಸ್ತಾನದ ಸಿಂಧೂನದಿಯಲ್ಲಿ ಕಾಣಿಸಿಕೊಂಡಿದ್ದ ಪ್ರವಾಹಕ್ಕೆ ಮೊಹೆಂಜೋದಾರೋ ತುತ್ತಾಗಿ ಹೋಗುವ ಎಲ್ಲಾ ಸಾಧ್ಯತೆಗಳಿದ್ದವು. ಆದರೆ ಅದೃಷ್ಟವಶಾತ್ ಪ್ರವಾಹದ ನೀರು ಮೊಹೆಂಜೋದೋರೋವನ್ನು ಆವರಿಸಲಿಲ್ಲ. ಆದರೆ ಸಪ್ಟೆಂಬರ್ 2012ರಲ್ಲಿಯ ಮಾನ್ಸೂನ್ ಮಳೆ ಇಲ್ಲಿನ ಪ್ರಾಚೀನ ಕಟ್ಟಡಗಳ ಕುರುಹಗಳಿಗೆ, ಗೋಡೆಗಳಿಗೆ ಅಪ್ಪಳಿಸಿತ್ತು. ಇದರಿಂದ ಇವಕ್ಕೆ ಸ್ಪಲ್ಪಮಟ್ಟಿಗೆ ಹಾನಿಯಾಗಿದೆ ಎಂಬ ಅಭಿಪ್ರಾಯ ಪ್ರಾಚ್ಯಶಾಸ್ತ್ರಜ್ಞರದು.

ದಶಕಗಳಿಂದ ಜಾರಿಯಲ್ಲಿರುವ ಉತ್ಕನನ ನಿಷೇಧ, ಪಾಕಿಸ್ತಾನದ ರಾಜಕೀಯ ವಿಪ್ಲವಗಳಿಂದ ಮತ್ತು ಅಸಮರ್ಪಕ ಸಂರಕ್ಷಣೆಯಿಂದಾಗಿ ಈ ಪ್ರಾಚೀನ ನಗರದ ಅಧ್ಯಯನ ಪ್ರಾಚ್ಯ ಶಾಸ್ತ್ರಜ್ಞರಿಗೆ ಸಾಧ್ಯವೇ ಆಗಲಿಲ್ಲ. ಸಿಂಧೂ ನಾಗರೀಕತೆಯ ಸಮಕಾಲೀನ ನಾಗರೀಕತೆಗಳಲ್ಲೊಂದಾದ ಈಜಿಪ್ಟ್ ಮತ್ತು ಮೆಸೆಪೊಟಾಮಿಯ ನಾಗರೀಕತೆಗಳಿಗೆ ಹೋಲಿಸಿದರೆ ಹರಪ್ಪಾ ಮತ್ತು ಮೊಹೆಂಜೋದಾರೊ  ನಗರದ ಕುರುಹುಗಳಲ್ಲಿ ಸಂರಕ್ಷಣೆಯ ಕೊರತೆ ಎದ್ದು ಕಾಣುತ್ತದೆ. ಇಲ್ಲಿಯ ಸ್ಮಾರಕಗಳು, ದೇವಸ್ಥಾನಗಳು, ಶಿಲ್ಪಗಳು ಸರ್ಕಾರದಿಂದ ನಿರ್ಲಕ್ಷ್ಯಕ್ಕೊಳಗಾಗಿದ್ದು ಗೋಚರಿಸುತ್ತದೆ. ಹೀಗಾಗಿ ಈ ನಾಗರೀಕತೆಯ ಬಗ್ಗೆ, ಇದರ ನಿಜವಾದ ಹೆಸರು, ಈ ನಗರದ ನಿರ್ಮಾತೃ ಹಾಗೂ ಇದರ ನಿಜವಾದ ವಿಸ್ತೀರ್ಣದ ಬಗ್ಗೆ ಅಧ್ಯಯನಕಾರರಿಗೆ ಇಂದಿಗೂ ಸಮರ್ಪಕ ಮಾಹಿತಿ ದೊರಕಿಲ್ಲ. ಅದೆಷ್ಟೋ ರಹಸ್ಯಗಳನ್ನು,ರೋಚಕ ಇತಿಹಾಸವನ್ನು, ತನ್ನೊಳಗೆ ಹುದುಗಿಸಿಕೊಂಡಿರುವ ಮೊಹೆಂಜೋದಾರೋ ಬಗ್ಗೆ ಅಧ್ಯಯನಗಳು ನಡೆಯುತ್ತಲೇ ಇದೆ. ಇಂದಿನ ಭೂಗರ್ಭ ಶಾಸ್ತ್ರಜ್ಞರು ಹಿಂದಿನ ಉತ್ಕನನದ ಮಾಹಿತಿಗಳನ್ನೇ ಅಧ್ಯಯನ ಮಾಡುತ್ತಿರುವುದರಿಂದ ತಾಮ್ರ ಯುಗದ ಸಿಂಧೂ ನಾಗರೀಕತೆಯಲ್ಲಿ ಅತ್ಯಂತ ದೊಡ್ಡ ನಗರ ಯಾವುದು ಎಂಬುವುದರ ಬಗ್ಗೆ ಖಚಿತತೆ ಇಲ್ಲ.

ನಾಲ್ಕು ಸಾವಿರ ವರ್ಷಗಳ ಹಿಂದೆಯೇ ಂiಜನಾ ಬದ್ಧ ನಗರ ನಿರ್ಮಾಣವಾಗಿತ್ತು. ಸುಸಜ್ಜಿತ ಮನೆಗಳು, ಸುಸಜ್ಜಿತ ಸಾರ್ವಜನಿಕ ಸ್ನಾನಗೃಹಗಳು, ವಿಶಾಲವಾದ ರಸ್ತೆಗಳು, ಕೆರೆ ಬಾವಿಗಳು ಹಾಗೂ ಒಳಚರಂಡಿಗಳು ಹರಪ್ಪಾ ಮತ್ತು ಮೊಹೆಂಜೋದಾರೋ ನಗರಗಳಲ್ಲಿದ್ದವು. ಹಲವು ಮೆಟ್ಟಿಲುಗಳ ದೇವಾಲಯಗಳು, ಪ್ರಫುಲ್ಲ ಶಿಲ್ಪಗಳು ನಗರದ ಭವ್ಯತೆಯನ್ನು ಹೆಚ್ಚಿಸಿದ್ದವು. ಅಮೂಲ್ಯ ಹರಳು ಮತ್ತು ಲೋಹಗಳನ್ನು ಬಳಸಿದ ಕಲಾಕೃತಿಗಳು ಮತ್ತು ಆಭರಣಗಳೇ ಇವರಲ್ಲಿದ್ದ ಸೌಂದರ್ಯ ಪ್ರಜ್ಞೆಗೆ ಸಾಕ್ಷಿ. ಹೀಗಾಗಿ ಮೊಹೆಂಜೋದಾರೋ ನಗರ ಅತ್ಯಂತ ಉತ್ತಮ ಜೀವನ ಪದ್ಧತಿಯನ್ನು ಹೊಂದಿತ್ತು ಎಂದು ಅಂದಾಜಿಸಲಾಗಿದೆ. ರೋಮನ್ ನಾಗರೀಕತೆಗಿಂತಲೂ ಎರಡು ಸಾವಿರ ವರ್ಷಗಳಷ್ಟು ಹಳೆಯದಾದ ಸಿಂಧೂ ನಾಗರೀಕತೆಯಲ್ಲಿ ಈ ಪರಿಯ ಉತ್ತಮ ಜೀವನ ಮಟ್ಟವಿತ್ತು.

ಮುಂಬರುವ ದಿನಗಳಲ್ಲಿ ಭೂಗರ್ಭ ಶಾಸ್ತ್ರಜ್ಞರಿಂದ ಮತ್ತಷ್ಟು ಅಧ್ಯಯನಗಳು ನಡೆಯಲಿವೆ. ಇತ್ತೀಚೆಗಷ್ಟೇ ನಿರ್ವತ್ತಿಯಾದ ಆಚೆನ್ ವಿಶ್ವವಿದ್ಯಾಲಯದ ಪ್ರಾಚೀನ ಅಧ್ಯಯನಕಾರರಾದ ಮೈಕೆಲ್ ಜಾನ್ಸನ್ ’ಮೊಹೆಂಜೋದಾರೋ ನಗರವಿದ್ದ ಈ ಸ್ಥಳದ ಮಣ್ಣಿನಲ್ಲಿ ಮತ್ತಷ್ಟು ವಿಷಯಗಳು ಹುದುಗಿವೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.ಇವರ ಪ್ರಕಾರ ಸಿಂಧೂ ನಾಗರಿಕತೆಯ ನಗರ ಜೀವನ ಹಿಂದಿನ ಉತ್ಕನನದಿಂದ ಸರಿಯಾಗಿ ತಿಳಿದುಬಂದಿಲ್ಲ. ಇನ್ನೂ ಹಲವಾರು ಕಟ್ಟಡಗಳು, ಹಲವು ಪ್ರಾಚೀನ ಪ್ರದೇಶಗಳ ಉತ್ಕನನವಾದಾಗ ಮಾತ್ರ ಮತ್ತಷ್ಟು ವಿಷಯಗಳು ಬೆಳಕಿಗೆ ಬರಬಹುದು. ಇಂದಿನ ಪಾಕಿಸ್ತಾನ ಸರಕಾರ ಹೊಸ ಉತ್ಕನನಕ್ಕೆ ಸಿದ್ಧವಿದೆ. ಹರಪ್ಪಾ ಮತ್ತು ಮೊಹೆಂಜೋದಾರೋ ಬಗ್ಗೆ ಮತ್ತಷ್ಟು ಸತ್ಯಗಳನ್ನು ತಿಳಿಯಲು ಉತ್ಸಾಹ ತೋರುತ್ತಿದೆ. ನಗರ ಪ್ರದೇಶ ಎಲ್ಲಿಂದ ಪ್ರಾರಂಭವಾಗಿ  ಎಲ್ಲಿಯವರೆಗೆ ಹಬ್ಬಿರಬಹುದು ಎಂಬ ವಿಷಯದ ಕುರಿತು ನಿಖರ ಮಾಹಿತಿಗಾಗಿ ಹೊಸ ಉತ್ಕನನ ಸಧ್ಯದಲ್ಲಿಯೇ ಪ್ರಾರಂಭವಾಗುತ್ತದೆ ಎಂಬುದು ಭೂಗರ್ಭ ಶಾಸ್ತ್ರಜ್ಞರ ಹೊಸ ನಿರೀಕ್ಷೆ.

ಸಿಂಧೂ ನಾಗರೀಕತೆಯು ಕ್ರಿ.ಪೂ 2600 ರಿಂದ ಕ್ರಿ.ಪೂ 1900ರ ತನಕ ಅಸ್ತಿತ್ವದಲ್ಲಿತ್ತು ಎಂಬುದು ಅಧ್ಯಯನಕಾರರ ಅಂದಾಜು. ಇಂದಿನ ಪಾಕಿಸ್ತಾನದ ಬಹುಭಾಗ ಹಾಗೂ ಉತ್ತರ ಭಾರತದ ಕೆಲವು ಭಾಗಗಳಲ್ಲಿ ಸಿಂಧೂ ನಾಗರೀಕತೆ ಹಬ್ಬಿತ್ತು. 1920ರಲ್ಲಿ ಪ್ರಾರಂಭವಾಗಿದ್ದ ಮೊದಲ ಉತ್ಕನನದವರೆಗೂ ಈಜಿಪ್ಟ್ ಮತ್ತು ಮೆಸೆಪೊಟಾಮಿಯಾ ನಾಗರೀಕತೆಯೇ ಹಳೆಯದೆಂದು ತಿಳಿದಿದ್ದ ಪುರಾತನ ವಾಸ್ತು ಶಾಸ್ತ್ರಜ್ಞರಿಗೆ, ಉತ್ಕನನದ ನಂತರ ಇದು 4 ಸಾವಿರ ವರ್ಷಗಳಷ್ಟು ಹಳೆಯದು ಎಂಬ ಸತ್ಯ ಅರಿವಾಯಿತು. ಆದರೆ 1850ರಲ್ಲಿ ಬ್ರಿಟೀಷರು ಲಾಹೋರಿಗೆ ರೈಲ್ವೆ ಮಾರ್ಗವನ್ನು ನಿರ್ಮಾಣ ಮಾಡುವಾಗ ಸಿಂಧೂ ನಾಗರಿಕತೆಗೆ ಸಂಬಂಧಿಸಿದ ಹಲವು ಪುರಾವೆಗಳು ನಾಶವಾಗಿಹೋಗಿರುವ ಕಾರಣ ಅಧ್ಯಯನಕಾರರ ಅಂದಾಜಿಗೆ ಸತ್ವ ದೊರೆಯಲಿಲ್ಲ. ಪ್ರಥಮ ಉತ್ಕನನ ಪ್ರಾರಂಭವಾಗಿದ್ದು 1920ರಲ್ಲಿ ಹರಪ್ಪಾ ನಗರದಿಂದ. ಒಂದು ತಿಂಗಳ ನಂತರ ಮೊಹೆಂಜೋದಾರೋ ನಗರದಲ್ಲಿಯೂ ಉತ್ಕನನ ಆರಂಭವಾಯ್ತು.ಸುಟ್ಟ ಇಟ್ಟಿಗೆಗಳಿಂದ ತಳಪಾಯ ಹಾಕಿ ನಿರ್ಮಾಣ ಮಾಡಿದ್ದ ಕಾರಣ ಇಲ್ಲಿಯ ಕಟ್ಟಡಗಳ ಅವಶೇಷಗಳು ನಾಲ್ಕು ಸಾವಿರ ವರ್ಷಗಳ ನಂತರವೂ  ಅದೃಷ್ಟವಶಾತ್, ಉಳಿದುಕೊಂಡಿದ್ದವು.

ಸುಂದರ ಮೊಹೆಂಜೋದಾರೋ ನಗರ ಸಿಂಧೂ ನದಿಯ ದಡದಲ್ಲಿತ್ತು. ಸುಮಾರು 600 ಎಕರೆಗಳಷ್ಟು ವಿಸ್ತೀರ್ಣದಲ್ಲಿದ್ದ ಈ ಮಹಾನಗರ ಸುಮಾರು ನಲವತ್ತು ಸಾವಿರ ಜನಸಂಖ್ಯೆ ಹೊಂದಿತ್ತು ಎನ್ನಲಾಗಿತ್ತು. ಆದರೆ ಇತ್ತೀಚಿನ ಅಧ್ಯಯನದ ಪ್ರಕಾರ, ಮೊಹೆಂಜೋದಾರೋ ನಗರದಲ್ಲಿ ಒಂದು ಲಕ್ಷ ಜನಸಂಖ್ಯೆ ಇತ್ತು ಮತ್ತು ಈಜಿಪ್ಟ್ ನಾಗರೀಕತೆಯ ಮೆಂಪಿಸ್, ಮೆಸೆಪೊಟಾಮಿಯಾದ ಉರ್ ನಗರಗಳಿಗಿಂತ ಹೆಚ್ಚಿನ ಜನಸಂಖ್ಯೆ ಹೊಂದಿತ್ತು ಎಂಬುದು ತಿಳಿದು ಬಂದಿದೆ. ಈ ನಗರದ ವಾಯವ್ಯ ಭಾಗದಲ್ಲಿದ್ದ,  60ಕ್ಕೂ ಹೆಚ್ಚು ಆಳವಾದ ಬಾವಿಗಳು, ಸುಸಜ್ಜಿತ ತಳಪಾಯಗಳನ್ನು ಒಳಗೊಂಡ ಕೋಟೆಯ ಅರಮನೆಯನ್ನು ಮೊದಲ ಉತ್ಕನನದಲ್ಲಿ ಗಮನಿಸಿರಲೇ ಇಲ್ಲ ಎಂಬ ವಿಷಯ ಬೆಳಕಿಗೆ ಬಂತು.  1940ರಿಂದ 1950ರ ತನಕ ವಿರಳವಾದ ಉತ್ಕನನ ನಡೆದಿತ್ತು. ಆದರೆ ಪ್ರಮುಖ ಉತ್ಕನನ ನಡೆದಿದ್ದು 1960ರಲ್ಲಿ. ಆ ನಂತರ ಅಲ್ಲಿ ಯಾವುದೇ ಅಧ್ಯಯನ ನಡೆದಿರಲೇ ಇಲ್ಲ. ಯಾಕೆಂದರೆ, ಪಾಕಿಸ್ತಾನ ಸರಕಾರ ಮತ್ತು ಯುನೆಸ್ಕೋ ನಡೆಸುತ್ತಿದ್ದ ಉತ್ಕನನದಿಂದಾಗಿ ಕ್ರಮೇಣ ನಾಗರೀಕತೆಯ ಕುರುಹುಗಳಿಗೆ ಧಕ್ಕೆ ಉಂಟಾಗಲು ಪ್ರಾರಂಭವಾಗಿತ್ತು. ವಿಪರೀತ ಚಳಿಗಾಳಿ ಹಾಗೂ ಉಪ್ಪಿನ ಅಂಶವಿರುವ ವಾತಾವರಣದಿಂದ ಪ್ರಾಚೀನ ಇಟ್ಟಿಗೆಗಳು ಚೂರಾಗಲು ಪ್ರಾರಂಭವಾದವು. ಇವುಗಳನ್ನು ಉಳಿಸಿಕೊಳ್ಳಲು ಎಷ್ಟೇ ವೆಚ್ಚ ಮಾಡಿದರೂ ಸಾಧ್ಯವಾಗಲಿಲ್ಲ. ಹೀಗಾಗಿ ಉತ್ಕನನವನ್ನೇ ಕೈಬಿಡಲಾಗಿತ್ತು.

ಪುರಾತನ ವಾಸ್ತುಶಾಸ್ತ್ರಜ್ಞರು ಎಷ್ಟೇ ಅಧ್ಯಯ ನಡೆಸಿದರೂ  ಮೊಹೆಂಜೋದಾರೋ ನಗರಗಳಲ್ಲಿ, ಇದರ ಸಮಕಾಲೀನ ನಾಗರೀಕತೆಗಳಾದ ಈಜಿಪ್ಟ್ ಮತ್ತು ಮೆಸೆಪೊಟಾಮಿಯಾ ನಾಗರೀಕತೆಗಳಲ್ಲಿ ದೊರಕಿದಂತಹ ಯಾವುದೇ ಸಮಾಧಿಗಳಾಗಲೀ, ಸ್ಮಾರಕಗಳಾಗಲೀ ಸಿಗಲಿಲ್ಲ. ಆದರೆ ಈ ನಗರದ ವಾಯವ್ಯ ಭಾಗದಲ್ಲಿದ್ದ ಕೋಟೆಯ ಅರಮನೆಯಲ್ಲಿ, ಸುಸಜ್ಜಿತ ಧಾನ್ಯಾಗಾರ, ಸ್ನಾನಗೃಹ, ಭವ್ಯ ಸಭಾಂಗಣಗಳು ಮತ್ತು  ನಗರ ವ್ಯವಸ್ಥೆಯ ಕುರುಗಳು ಸಿಕ್ಕವು. ಆದರೆ, ಸಿಂಧೂ ನಾಗರೀಕತೆ ಉಗಮವಾದ 700 ವರ್ಷಗಳ ನಂತರ ಮೊಹೆಂಜೋದಾರೋ ನಗರ ನಾಶವಾಯಿತು. ಇದಕ್ಕೆ ಸ್ಪಷ್ಟ ಕಾರಣಗಳು ಇಂದಿಗೂ ತಿಳಿದಿಲ್ಲ. ಅಲ್ಲಿಯ ರಾಜಕೀಯ ನೀತಿ, ಧಾರ್ಮಿಕ ಪದ್ಧತಿ, ಲೆಕ್ಕಾಚಾರ, ವ್ಯಾಪಾರ ವ್ಯವಹಾರದ ಬಗ್ಗೆ ಕರಾರುವಕ್ಕಾಗಿ ತಿಳಿಸುವ ಯಾವ ಪುರಾವೆಯೂ ಪುರಾತನ ಶಾಸ್ತ್ರಜ್ಞರಿಗೆ ಪತ್ತೆಯಾಗಲಿಲ್ಲ.

ಉತ್ಕನನದಿಂದ ಪ್ರಯೋಜನವಾಗುತ್ತಿಲ್ಲ, ಇತಿಹಾಸದ ಕುರಿತು ಸಾಕಷ್ಟು ಮಾಹಿತಿ ದೊರಕುತ್ತಿಲ್ಲ. ಎಂದು 20ನೇಶತಮಾನದ ಉತ್ಕನನದಲ್ಲಿ ಪಾಲ್ಗೊಂಡಿದ್ದ ರೋಮನ್ ಪ್ರಾಚ್ಯ ಶಾಸ್ತ್ರಜ್ಞ ಗಿಸೆಪ್ಪೆ ತುಸ್ಸಿ ಹೇಳಿದ್ದರು. ಕೆಲವು ದಶಕಗಳ ನಂತರ ಇಲ್ಲಿ ಅಧ್ಯಯನ ನಡೆಸಿದ ಪೆನ್ಸಿಲ್ವೇನಿಯಾ ವಿಶ್ವವಿದ್ಯಾಯದ ಪ್ರಾಚ್ಯ ಶಾಸ್ತ್ರಜ್ಞ ಗ್ರಿಗೋರಿ ಪೋಶೆಲ್ ಇಲ್ಲಿ ಯಾವುದೇ ರಾಜನ ಹೆಸರುಗಳಾಗಲೀ, ಸಾಮಾಜಿಕ ವ್ಯವರ್ಸಥೆಯ ಬಗ್ಗೆಯಾಗಲೀ, ಕಾಲಗಣನೆಯ ಲೆಕ್ಕಾಚಾರಕ್ಕೆ ಪುಷ್ಠಿಕೊಡುವ ಯಾವುದೇ ದಾಖಲೆಗಳಾಗಲೀ ಇಲ್ಲಿ ಲಭ್ಯವಿಲ್ಲ ಎಂದು ಅಭಿಪ್ರಾಯ ಪಟ್ಟಿದ್ದರು.

ಈ ಸಿಂಧೂ ನಾಗರಿಕತೆಯಲ್ಲಿ ನೂರಕ್ಕೂ ಹೆಚ್ಚು ಚಿಕ್ಕಚಿಕ್ಕ ನಗರಗಳೂ ಹಾಗೂ ಸಾಕಷ್ಟು ಹಳ್ಳಿಗಳೂ ಇದ್ದವು ಎಂಬುವುದರ ಬಗ್ಗೆ ಅನುಮಾನವಿರಲಿಲ್ಲ. ಈ ನಾಗರೀಕತೆಯು ಕೇವಲ ಏಕಧರ್ಮೀಯತೆಯನ್ನು ಹೊಂದಿರಲಿಲ್ಲ. ಇಲ್ಲಿ ಹಲವು ಮತ ಪಂತಗಳೂ ಇದ್ದವು ಎಂದು ಹೇಳಲಾಗಿದೆ.  625000 ಸ್ಕ್ವೇರ್ ಮೈಲ್ಸ್‌ನ ವಿಸ್ತೀರ್ಣ ಹೊಂದಿದ್ದ ಸಿಂಧೂ ನಾಗರಿಕತೆಯ ಭೌಗೋಳಿಕ ವಿಸ್ತೀರ್ಣ 1920ರ ಉತ್ಕನನ ಕಾಲದಲ್ಲಿ ಅಂದಾಜಿಸಲ್ಪಟ್ಟ ವಿಸ್ತೀರ್ಣಕ್ಕಿಂತಲೂ ಬಹಳ ದೊಡ್ಡದು ಎಂಬುದು ನಂತರದ ಉತ್ಕನನದಲ್ಲಿ ತಿಳಿಯಲಾಯಿತು. ಈಜಿಪ್ಟ್ ಮತ್ತು ಮೆಸೆಪೊಟಾಮಿಯಾ ನಾಗರಿಕತೆಗಳಿಗಿಂತಲೂ ದೊಡ್ಡ ವಿಸ್ತೀರ್ಣ ಹೊಂದಿತ್ತು. ಇರಾನ್, ಅಪಘಾನಿಸ್ತಾನ್‌ದಿಂದ ನಮ್ಮ ದೇಶದ ದೆಹಲಿಯ ತನಕ ಸಿಂಧೂ ನಾಗರಿಕತೆ ಹಬ್ಬಿತ್ತು. ಈ ಪ್ರದೇಶದಾದ್ಯಂತ ಲಭ್ಯವಾದ ಶಿಲೆಗಳು ಲೋಹಗಳಿಂದ ಸಿಂಧೂ ನಾಗರೀಕತೆಯ ವಿಸ್ತೀರ್ಣವನ್ನು ಇಂದಿಗೂ ಅಳೆಯಲಾಗುತ್ತಿದೆ.  ಇಲ್ಲಿಯ ವ್ಯಾಪಾರಿಗಳು ಅರೇಬಿಂiiನ್ನರು ಮತ್ತು ಮೆಸೆಪೊಟಾಮಿಯನ್ನರೊಂದಿಗೆ ವ್ಯವಹರಿಸುತ್ತಿದ್ದರು. ಎಂಬುದು ಇತ್ತೀಚೆಗೆ ಅಂದರೆ 2008ರಲ್ಲಿ ಉತ್ಕನನ ನಡೆಸಿದ ವಿಸ್ಕೊನ್ಸಿನ ವಿಶ್ವವಿದ್ಯಾಲಯದ ಪ್ರಾಚ್ಯ ಶಾಸ್ತ್ರಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ಮೊಹೆಂಜೋದಾರೋ ನಗರ ಪ್ರಪಂಚದ ಮೊದಲ ಅತ್ಯಂತ ಪ್ರಾಚೀನ, ಸುಸಜ್ಜಿತ ಮತ್ತು ನಿಯೋಜಿತ ನಗರ. ಸುಮಾರು ಕ್ರಿ.ಪೂ ಮೂರು ಸಾವಿರ ವರ್ಷಗಳ ಹಿಂದೆ ನಗರ ನಿರ್ಮಾಣ ಕಾರ್ಯಗಳು ಆರಂಭವಾಗಿದ್ದವು ಎಂದು ನಂಬಲಾಗಿದೆ. ಸಿಂಧೂ ನದಿಯ ದಂಡೆಯ ಮೇಲೆ 20ಅಡಿ ಅಗೆದು ಉತ್ಕನನ ನಡೆಸಿದಾಗ, ಹಲವು ಅಪರೂಪದ ಕುರುಹುಗಳು ಸಿಕ್ಕವು. ಸಿಂಧೂ ನಾಗರಿಕತೆ ನಾಶವಾಗಲು ಸಿಂಧೂ ನದಿಯ ಪ್ರವಾಹಗಳೂ ಒಂದು ಕಾರಣ ಎಂದು ಇಟಾಲಿಯನ್ ಪ್ರಾಚ್ಯ ಶಾಸ್ತ್ರಜ್ಞ ಮೊಶಿಮೊ ವೈಡಲ್ ತಮ್ಮ ಅಧ್ಯಯನದಲ್ಲಿ ತಿಳಿಸಿದ್ದಾರೆ. ಇವರ ಅಭಿಪ್ರಾಯವನ್ನು ವಿಸ್ಕೊನ್ಸಿನ್ ವಿಶ್ವ ವಿದ್ಯಾಲಯದ ಪ್ರಾಚ್ಯ ಶಾಸ್ತ್ರಜ್ಞ ಜೊನಾಥನ್ ಮಾರ್ಕ್ ಕೆನೋಯರ್ ಕೂಡ ಒಪ್ಪಿದ್ದಾರೆ.

ಮೊಹೆಂಜೋದಾರೋ ನಗರದಲ್ಲಿರುವ ಭವ್ಯ ಕೋಟೆಯ ನಿರ್ಮಾಣ ಕೂಡ ಯೋಜನಾಬದ್ಧವಾಗಿತ್ತು ಬಲಿಷ್ಠ ಗೋಡೆಗಳನ್ನೊಳಗೊಂಡ ಈ ಕೋಟೆ 200 ಯಾರ್ಡ್ಸ್ ಉದ್ದ ಮತ್ತು 400 ಯಾರ್ಡ್ಸ್ ಅಗಲ ಹೊಂದಿತ್ತು.  1920ರ ಉತ್ಕನನದ ಅವಧಿಯಲ್ಲಿ ಈ ಕೋಟೆಯನ್ನು ಬೌದ್ಧ ಸ್ತೂಪ ಎಂದು ನಂಬಲಾಗಿತ್ತು.  ಆದರೆ ೨೦೦೭ರಲ್ಲಿ ನೇಪಾಳ ವಿಶ್ವವಿದ್ಯಾಲಯದ ನಿವೃತ್ತ ಪ್ರಾಚ್ಯಶಾಸ್ತ್ರಜ್ಞ ಗಿವಾನಿ ವೆರಾರ್ದಿ ಇದು ಬೌದ್ಧ ಶೈಲಿಯ ಸ್ಮಾರಕವಲ್ಲ. ಬೌದ್ಧರ ಸಾಂಪ್ರದಾಯಿಕ ಶೈಲಿಯ ಕುರುಹುಗಳು ಇದರಲ್ಲಿ ಇಲ್ಲ ಎಂದು ತಿಳಿಸಿದರು. ಸಿಂಧೂ ನಾಗರಿಕತೆಯ ಕೋಟೆ ಇದಾಗಿರಬಹುದು ಎಂದು ಅಂದಾಜಿಸಿದರು. ಮೊಹೆಂಜೋದಾರೋ ನಗರದ ಯೋಜನೆ ಮತ್ತು ಹರಪ್ಪಾ, ದೋಲವಿರಾ ನಗರದ ಯೋಜನೆಗಳಲ್ಲಿ ಸಾಮ್ಯತೆ ಕಂಡಿದೆ. ಸಿಂಧೂ ನಾಗರಿಕತೆಗೆ ಒಳಪಟ್ಟ ಪ್ರದೇಶಗಳು ಇಂದಿನ ನಮ್ಮ ಗುಜರಾತ್‌ನಲ್ಲಿಯೂ ಕಂಡುಬಂದಿದೆ. ಈ ಎಲ್ಲಾ ಪುರಾತನ ಕಟ್ಟಡಗಳ ಕುರುಹುಗಳನ್ನು ಕಂಡಾಗ ಅತ್ಯಂತ ವಿಶಾಲ ಮತ್ತು ಸುಂದರ ಮೆನಗಳನ್ನು ಈ ನಾಗರಿಕತೆ ಇಷ್ಟ  ಪಡುತ್ತಿತ್ತು ಎಂಬುದು ಗೋಚರಿಸುತ್ತಿದೆ. ಉತ್ಕನನದಲ್ಲಿ ದೊರಕಿದ ಮನೆಯ ಅವಶೇಷದಲ್ಲಿ 136 ವಿಶಾಲ ಕೊಠಡಿಗಳಿರುವುದು ಪತ್ತೆಯಾಗಿದೆ. 1920ರಲ್ಲಿ ನಡೆದ ಉತ್ಕನನದಲ್ಲಿ ಸಾಕಷ್ಟು ಪುರಾತನ ಗೋಲಾಕಾರದ ಕಲ್ಲುಗಳು ದೊರೆತಿದ್ದವು. ದೊಲವಿರಾದಲ್ಲಿ ಇತ್ತೀಚೆಗೆ ನಡೆದ ಉತ್ಕನನದಲ್ಲಿ ಕಲ್ಲುಗಳಿಂದಲೇ ನಿರ್ಮಾಣ ಮಾಡಿದ್ದ ಕಟ್ಟಡಗಳ ಸ್ಮಾರಕಗಳು ದೊರೆತಿವೆ. ಕಲ್ಲುಗಳ ಕಂಭಗಳನ್ನೇ ಉಪಯೋಗಿಸಿದ್ದು ಕಂಡುಬಂದಿವೆ. ಯೋಜನಾ ಬದ್ಧ ಅಮೂಲ್ಯ ಕಲ್ಲುಗಳಿಂದ ನಿರ್ಮಾಣ ಮಾಡಲಾದ ಮನೆಗಳು ಮೊಹಿಂಜೋದಾರೋ ನಾಗರಿಕತೆಯ ಜೀವನ ಮಟ್ಟವನ್ನು ತಿಳಿಸುತ್ತವೆ ಎಂದು ಮೈಡಲ್ ಅಭಿಪ್ರಾಯ ಪಟ್ಟಿದ್ದಾರೆ. ಜತೆಗೆ ಇದು ಏಕಚಕ್ರಾಧಿಪತ್ಯಕ್ಕೆ ಒಳಪಟ್ಟಿರಬಹುದು ಎಂದೂ ಅಂದಾಜಿಸಿದ್ದಾರೆ ಏಕೆಂದರೆ ಎಲ್ಲ ಪ್ರದೇಶಗಳಲ್ಲಿಯೂ ಕಂಡು ಬಂದಿರುವ ಒಂದೇ ರೀತಿಯ ಯೋಜನೆಗಳು ಮತ್ತು ವ್ಯತ್ಯಾಸವಿರದ ಕಟ್ಟಡ ನಿರ್ಮಾಣ ಶೈಲಿಗಳು ಈ ಊಹೆಗೆ ಪುಷ್ಠಿ ನೀಡಿವೆ.

ಉತ್ತರ ಬಲುಚಿಸ್ತಾನದಿಂದ ಪಶ್ಚಿಮದವರೆಗೆ ಮತ್ತು ಉತ್ತರ ಪಾಕಿಸ್ತಾನ ಅಥವಾ ರಾಜಸ್ತಾನದಿಂದ ಪೂರ್ವದವರೆಗಿನ ಸಿಂಧೂ ನಾಗರಿಕತೆಯ ಪ್ರದೇಶಗಳಲ್ಲ ತೋಪು ಹಾಗೂ ಒನಕೆಗಳು ದೊರೆತಿವೆ. ರೋಹರಿ ಪರ್ವತಗಳಲ್ಲಿ ಹಾಗೂ ಥಾರ್ ಮರುಭೂಮಿಗಳಲ್ಲಿಯೂ ಸಿಂಧೂ ನಾಗರಿಕತೆಯ ಕುರುಹುಗಳು ಕಂಡಿವೆ. ಪಾಕಿಸ್ತಾನಿ ಪ್ರಾಚ್ಯ ಶಾಸ್ತ್ರಜ್ಞ ಕ್ವಾಸಿದ್ ಮಲ್ಲಾಹ್ ಈ ಪ್ರದೇಶದಲ್ಲಿ ಸಿಂಧೂ ನಾಗರಿಕತೆಯ ಸೈನ್ಯದ ಪಾಳೆಯಗಳು ಇದೇ ಪ್ರದೇಶದಲ್ಲಿದ್ದವು. ಇದೊಂದು ರೋಚಕ ಸ್ಥಳವಾಗಿತ್ತು ಎಂದು ತಮ್ಮ ಅಧ್ಯಯನದಲ್ಲಿ ಹೇಳಿದ್ದಾರೆ.

ಸಿಂಧೂ ನಾಗರಿಕತೆಗಳಲ್ಲಿ ಕಂಡುಬಂದ ವಿಶೇಷಗಳಲ್ಲಿ ಪ್ರಮುಖವಾಗಿರುವುದು ಕೊಳಾಯಿ ವ್ಯವಸ್ಥೆ. ಯೋಜನಾಬದ್ಧ ಕೊಳಾಯಿ ವ್ಯವಸ್ಥೆಯಿಂದ ಕೆರೆ, ಬಾವಿಗಳ ನೀರನ್ನು ಸಮರ್ಪಕವಾಗಿ ಬಳಸುತ್ತಿದ್ದರು. ಈಜಿಪ್ಟ್ ಮತ್ತು ಮೆಸೆಪೊಟಾಮಿಯಾ ನಾಗರಿಕತೆಗಳಲ್ಲಿ ಇಂತಹ ವ್ಯವಸ್ಥೇ ಇರಲೇ ಇಲ್ಲ. ಪ್ರಾಚ್ಯ ಶಾಸ್ತ್ರಜ್ಞ ಜಾನ್‌ಸೆನ್‌ರ ಪ್ರಕಾರ ಸಿಂಧೂ ನಾಗರಿಕರ ಎಲ್ಲರ ಮನೆಯಲ್ಲಿಯೂ ಸ್ನಾನಗೃಹ ಮತ್ತು ಶೌಚಾಲಯ ಇತ್ತು. ಚಂರಂಡಿ ವ್ಯವಸ್ಥೆಯನ್ನು ಅಷ್ಟೇ ಸಮರ್ಪಕವಾಗಿ ಕಲ್ಪಿಸಿದ್ದರು.

ಕ್ರಿ.ಪೂ 1900ರ ಈಚೆಗೆ ಸಿಂಧೂ ನಾಗರಿಕತೆ ನಾಶವಾಯಿತು. ಆದರೆ ಇದರ ವಿನಾಶಕ್ಕೆ ನಿರ್ದಿಷ್ಠ ಕಾರಣ ಇಂದಿಗೂ ದೊರಕಿಲ್ಲ. 1940ರ ಉತ್ಕನನದಲ್ಲಿ ಸಿಕ್ಕ ಅಸ್ತಿಪಂಜರಗಳು ಈ ಪ್ರದೇಶದ ಬಗ್ಗೆ ಇದ್ದ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದ್ದವು. ಹಲವು ಊಹೆಗಳನ್ನು ಹುಟ್ಟಿಸಿದ್ದವು. ಪ್ರಾಚ್ಯ ಶಾಸ್ತ್ರಜ್ಞರ ಪ್ರಕಾರ ಉತ್ತರ ಮತ್ತು ಪಶ್ಚಿಮದಿಂದ ದಾಳಿ ಇಟ್ಟ ಆರ್ಯನ್ನರಿಂದಾಗಿ ಈ ಜನಾಂಗಗಳು ನಾಶವಾದವು. ಆದರೆ ಇನ್ನೊಂದು ಊಹೆಯ ಪ್ರಕಾರ ಸಿಂಧೂ ನದಿಯ ಪ್ರವಾಹಕ್ಕೆ ತುತ್ತಾಗಿ ನಾಗರಿಕತೆ ನೆಲೆನಿಂತ ಪ್ರದೇಶಗಳಲ್ಲಿ ಜಲಸಮಾಧಿಯಾದವು. ವಿನಾಶದ ಅಂಚಿನಲ್ಲಿರುವ ಸಿಂಧೂ ನಾಗರಿಕತೆಯಲ್ಲಿ ರಾಜಕೀಯ ವಿಪ್ಲವಗಳು ಆರ್ಥಿಕ ಮುಗ್ಗಟ್ಟು ಕೂಡ ಆವರಿಸಲ್ಪಟ್ಟಿದ್ದವು ಎಂದೂ ನಂಬಲಾಗಿದೆ. ವಾತಾವರಣದಲ್ಲಿ ಆದ ದಿಢೀರ್ ಬದಲಾವಣೆ ಕೂಡ ನಾಗರಿಕತೆಯ ಅಂತ್ಯಕ್ಕೆ ಕಾರಣವಾಗಿರಲೂಬಹುದು. ಈ ಪ್ರದೇಶದಲ್ಲಿ ಕಾಡಿದ ಯಾವುದೋ ಮಹಾಮಾರಿಗೆ ಬಲಿಯಾಗಿರಬಹುದು ಅಥವಾ ರೋಗಗಳಿಗೆ ಹೆದರಿ ಊರುಬಿಟ್ಟು ಬೇರೆ ಪ್ರದೇಶಗಳಿಗೆ ಪಲಾಯನ ಮಾಡಿರಬಹುದು. ಇಂತಹ ಊಹೆಗಳು ಇವೆಯಾದರೂ ಯಾವುದೇ ಒಂದು ನಿರ್ದಿಷ್ಟ ಕಾರಣ ದೊರಕಿಲ್ಲ. ೧೯೨೦ರಿಂದ ನಡೆದ ಎಲ್ಲಾ ಉತ್ಕನನಗಳಿಂದ ನಾವು ತಿಳಿದುಕೊಂಡಿದ್ದು ಕೇವಲ ಶೇಕಡಾ 60ರಷ್ಟು ಮಾತ್ರ. ಇನ್ನೂ ನಾವು ತಿಳಿಯಬೇಕಾಗಿರುವುದು ಸಾಕಷ್ಟಿದೆ ಎಂದಿದ್ದಾರೆ. ಪ್ರಾಚ್ಯಶಾಸ್ತ್ರಜ್ಞ ಜಾನ್ಸೆನ್.

ಪಾಕಿಸ್ತಾನದ ವಸ್ತು ಸಂಗ್ರಹಾಲಯ ಮತ್ತು ಪ್ರಾಚೀನ ನೆಲೆಗಳ ಮಹಾ ನಿರ್ದೇಶಕ ’ಫಸದ್ ದದ್ ಕಕ್ಕರ್’ ಈ ಪ್ರದೇಶದ ಸಂರಕ್ಷಣೆಯ ಬಗ್ಗೆ ಮುತುವರ್ಜಿ ವಹಿಸಿದ್ದಾರೆ. ಮೊಹೆಂಜೋದಾರೋ ನೆಲೆಯ ಸುತ್ತ ಒಂದು ವಲಯ ಸೃಜಿಸಿ ರೇಡಿಯೋ ಕಾರ್ಬನ್ ಪದ್ಧತಿಯಲ್ಲಿ ಸಸ್ಯ - ಪ್ರಾಣಿಗಳ ಸಾಕ್ಷ್ಯಾಧಾರಗಳ ಆಧಾರದ ಮೇಲೆ ನಗರದ ನಿಜವಾದ ವಿಸ್ತೀರ್ಣ ತಿಳಿಯಲಾಗುತ್ತದೆ ಎಂದು ತಿಳಿಸಿದ್ದಾರೆ. ವಿಶ್ವ ಪಾರಂಪರಿಕ ಪಟ್ಟಿಗೆ ಒಳಪಟ್ಟ ಈ ಪ್ರದೇಶದಲ್ಲಿ ಉತ್ತಮ ಉತ್ಕನನ ನಡೆದು ಇದರ ಹೃದಯದಲ್ಲಿ ಹುದುಗಿದ್ದ ಸತ್ಯಗಳು ಅನಾವರಣಗೊಳ್ಳಬೇಕಿದೆ. ಪ್ರಪಂಚದ ಅತ್ಯಂತ ದೊಡ್ಡ ಮತ್ತು ಪುರಾತನ ನಾಗರಿಕತೆಯ ಕುತೂಹಲಕಾರಿ ಇತಿಹಾಸ ತಿಳಿಯಬೇಕಿದೆ.


ಅನುವಾದ : ಅಮೃತಾ ಹೆಗಡೆ
( ದಿಕ್ಸೂಚಿ ಮಾಸ ಪತ್ರಿಕೆಯಲ್ಲಿ ಪ್ರಕಟವಾದ ಲೇಖನ)

Saturday, 2 March 2013

ಸಿರಿಯಾ ಎಂಬ ನತದೃಷ್ಟ ದೇಶ


ಸಿರಿಯಾ' ಇದು ನೈರುತ್ಯ ಏಷ್ಯಾದಲ್ಲಿರುವ ಒಂದು ಅರಬ್‌ ದೇಶ. ಈ ದೇಶದ ಪರಿಸ್ಥಿತಿಯ ಕುರಿತು ಅಮೆರಿಕಾದ ಮಾಜಿ ವಿದೇಶಾಂಗ ಸಚಿವೆ ಹಿಲರಿ ಕ್ಲಿಂಟನ್‌ ಮಾರ್ಮಿಕವಾಗಿ ಮಾತನಾಡಿದ್ದರು. ಫೆ.1ರಂದು ತಮ್ಮ ಸ್ಥಾನದಿಂದ ನಿವೃತ್ತಿ ಹೊಂದಿದ ಹಿಲರಿ ಕ್ಲಿಂಟನ್‌ ಸಿರಿಯಾ ಪರಿಸ್ಥಿತಿಯ ಕುರಿತು ಬೆಳಕು ಚೆಲ್ಲಿದರು.

ತಮ್ಮ ಹುದ್ದೆಯಿಂದ ಕೆಳಗಿಳಿಯುವ ಸಂದರ್ಭದಲ್ಲಿ ಮಾತನಾಡಿದ್ದ ಹಿಲರಿ ಕ್ಲಿಂಟನ್‌, ಹಿಂಸೆ ಮಿತಿಮೀರಿ ಹೋಗಿರುವ ಸಿರಿಯಾದ ಅಧಃಪತನದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರು. ಸಿರಿಯಾದ ಅಧ್ಯಕ್ಷ ಬಶರ್ ಅಲ್‌ ಅಸಾದ್‌ರ ಸಾಮರ್ಥ್ಯವನ್ನು ಹೆಚ್ಚಿಸಲು ಇರಾನ್‌ ಮತ್ತು ರಷ್ಯಾ ಪ್ರಯತ್ನಿಸುತ್ತಿವೆ. ಆರ್ಥಿಕ ಹಾಗೂ ಮಿಲಿಟರಿ ಸಹಾಯ ನೀಡಿ, ಸಿರಿಯಾ ಸರ್ಕಾರದ ಅಕ್ರಮಗಳಿಗೆ ಪ್ರೋತ್ಸಾಹ ನೀಡುತ್ತಿದೆ. ಸಿರಿಯಾ ಸರ್ಕಾರಕ್ಕೆ ರಷ್ಯಾ ಯುದ್ಧದ ಆಯುಧಗಳನ್ನು ಒದಗಿಸಿ, ಆ ಮೂಲಕ ಅಲ್ಲಿಯ ಜನಾಂಗೀಯ ಕದನಕ್ಕೆ ಕುಮ್ಮಕ್ಕು ನೀಡುತ್ತಿವೆ ಎಂಬ ಬಗ್ಗೆ ಬೆಳಕು ಚೆಲ್ಲಿದ್ದರು.

ಕಳೆದ 22 ತಿಂಗಳಿನಿಂದ ನಿರಂತರವಾಗಿ ಸಿರಿಯಾದಲ್ಲಿ ನಡೆಯುತ್ತಿರುವ ಜನಾಂಗೀಯ ಕಲಹದಿಂದಾಗಿ 60 ಸಾವಿರಕ್ಕೂ ಹೆಚ್ಚು ಅಮಾಯಕ ಪ್ರಜೆಗಳು ಬಲಿಯಾಗಿದ್ದಾರೆ. ದಿನದಿಂದ ದಿನಕ್ಕೆ ರಕ್ತಪಾತ ಹೆಚ್ಚಾಗುತ್ತಿದೆ, ಸತತ ಯುದ್ಧ, ರಾಷ್ಟ್ರದೊಳಗಿನ ಜನಾಂಗೀಯ ಕದನ, ಅವ್ಯಾಹತವಾಗಿ ನಡೆಯುತ್ತಿರುವ ಹಿಂಸೆಯಿಂದ ಸಿರಿಯಾ ರಾಷ್ಟ್ರ ನಲುಗಿ ಹೋಗಿದೆ ಎಂದ ಹಿಲರಿ ಕ್ಲಿಂಟನ್‌ ವಿಷಾದ ವ್ಯಕ್ತಪಡಿಸಿದ್ದರು.

ಸಿರಿಯಾ ದೇಶದ ಗಡಿಯಲ್ಲಿ ಇಸ್ರೇಲ್‌ ಸತತ ಬಾಂಬ್‌ ದಾಳಿ ನಡೆಸುತ್ತಿದೆ. ಡೆಮಾಸ್ಕಸ್‌ನಲ್ಲಿ ನಿರಂತರವಾಗಿ ಇಸ್ರೇಲ್‌ ದಾಳಿ ನಡೆಸುತ್ತಲೇ ಇದೆ. ಇಸ್ರೇಲ್‌ ದಾಳಿಯನ್ನು ಎದುರಿಸಲು ಇರಾನ್‌ ಮತ್ತು ರಷ್ಯಾ ಸಿರಿಯಾ ಸರ್ಕಾರಕ್ಕೆ ಸಹಾಯ ನೀಡುತ್ತಿವೆ ಎಂಬ ವಿಷಯವನ್ನು ತಿಳಿಸಿದ್ದರು.

‘ಸಿರಿಯಾ’ ಅಮಾನವೀಯತೆ, ಹಿಂಸೆ ತುಂಬಿ ತುಳುಕುತ್ತಿರುವ ದೇಶ ಇದು. ಈ ದೇಶದ ಇಂದಿನ ಪರಿಸ್ಥಿತಿ ಹೇಗಿದೆ ಅಂದರೆ, ಅಕ್ಷರ ಷಃ ಅಲ್ಲಿಯ ಪ್ರಜೆಗಳು ನರಕ ಯಾತನೆ ಅನುಭವಿಸುತ್ತಿದ್ದಾರೆ. ಈ ರಾಷ್ಟ್ರದಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಜನಾಂಗೀಯ ಕದನ ಮತ್ತು ಹಿಂಸಾಚಾರ ಜಗತ್ತನ್ನೇ ಬೆಚ್ಚಿಬೀಳಿಸಿದೆ.

ಸಿರಿಯಾದ ಅಧ್ಯಕ್ಷ 'ಬಷರ್ ಅಲ್ ಅಸ್ಸಾದ್' ಹಾಗೂ ಇವರ ಆಡಳಿತವನ್ನು ವಿರೋಧಿಸುವ ಕ್ರಾಂತಿಕಾರಿ ಸಂಘಟನೆಗಳ ನಡುವೆ ಭೀಕರ ಕದನ ನಡೆಯುತ್ತಿದೆ. ಇವರಿಬ್ಬರ ಹೊಡೆದಾಟಕ್ಕೆ ಅಮಾಯಕ ಪ್ರಜೆಗಳು ಬಲಿಯಾಗುತ್ತಿದ್ದಾರೆ.

ಸಿರಿಯಾ ಅಧ್ಯಕ್ಷ 'ಬಷರ್‌ಅಲ್‌ಅಸ್ಸಾದ್'‌ದೇಶದಲ್ಲಿ ಅಲ್ಪ ಸಂಖ್ಯಾತರಾಗಿರುವ ಶಿಯಾ ಉಪಪಂಗಡ ಅಲಾವಿ ಸಮುದಾಯಕ್ಕೆ ಸೇರಿದವರು. ಶಿಯಾ ಪ್ರತಿನಿಧಿಯೊಬ್ಬರು ತಮ್ಮ ದೇಶ ಆಳುವುದನ್ನು ಸಹಿಸದ ಬಹುಸಂಖ್ಯಾತ ಸುನ್ನಿ ಸಮುದಾಯಗಳು, ಸರ್ಕಾರದ ವಿರುದ್ಧವೇ ಬಂಡೆದ್ದವು.

ಸಿರಿಯಾ ದೇಶದಲ್ಲಿ ಸುಮಾರು 22,243 ಮಂದಿ ಬಂಡುಕೋರರು, ಸರ್ಕಾರದ ವಿರುದ್ಧ ಹೋರಾಡುತ್ತಿದ್ದಾರೆ. ಕ್ರಾಂತಿಕಾರಿಗಳನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿರುವ ಸಿರಿಯಾ ಸರ್ಕಾರಕ್ಕೆ ಷಿಯಾ ಪ್ರಾಬಲ್ಯದ ಇರಾನ್ ಮತ್ತು ಲೆಬನಾನ್ ದೇಶಗಳು ಬೆಂಬಲಿಸುತ್ತಿವೆ. ಹಾಗೇ, ಸೌದಿ ಅರೇಬಿದಂತಹ ಸುನ್ನಿ ಪ್ರಾಬಲ್ಯದ ದೇಶಗಳು ಅಧ್ಯಕ್ಷ 'ಅಸ್ಸಾದ್' ವಿರುದ್ಧ ಹೋರಾಡುವವರಿಗೆ ಬೆಂಬಲವಾಗಿ ನಿಂತಿವೆ.

ವಿದೇಶಗಳ ಬೆಂಬಲದಿಂದ ಬಲಿಷ್ಟವಾಗಿರುವ ಈ ಎರಡೂ ಬಣಗಳೂ ಭೀಕರ ಕದನ ನಡೆಸುತ್ತಿವೆ. ಸರ್ಕಾರ ಹಾಗೂ ಬಂಡುಕೋರರ ಪರಸ್ಪರ ಗುದ್ದಾಟದಿಂದ ದೇಶದ ಶಾಂತಿ ಸುವ್ಯವಸ್ಥೆ ಮಾಯವಾಗಿದೆ. ಸಿರಿಯಾದ ಅಮಾಯಕ ಸುನ್ನಿ ಜನಾಂಗದ ಪ್ರಜೆಗಳ ನೆತ್ತರು ಹರಿಯುತ್ತಿದೆ. ದೇಶದ ವಿವಿಧೆಡೆ ಯುವಕರನ್ನು ಭೀಕರವಾಗಿ ಕೊಲೆ ಮಾಡಲಾಗುತ್ತಿದೆ. ಒಂದು ಅಂದಾಜಿನ ಪ್ರಕಾರ ಸಿರಿಯಾದಲ್ಲಿ ಸುಮಾರು ಒಂದು ವರ್ಷದಿಂದ ನಡೆಯುತ್ತಿರುವ ಹೋರಾಟದಲ್ಲಿ ಸತ್ತವರ ಸಂಖ್ಯೆ 60 ಸಾವಿರ ದಾಟಿದೆ ಹಾಗೂ ನಿರಾಶ್ರಿತರ ಸಂಖ್ಯೆ 3 ಲಕ್ಷವನ್ನೂ ಮೀರಿದೆ. ಪ್ರಾಣ ಭಯದಿಂದ ದಿನಕ್ಕೆ ಸುಮಾರು 4000 ಮಂದಿ ಸಿರಿಯಾ ನಿರಾಶ್ರಿತರು ನೆರೆ ದೇಶಗಳಿಗೆ ಗುಳೇ ಹೋಗುತ್ತಿದ್ದಾರೆ. 2,49,587 ಮಂದಿ ನಿರಾಶ್ರಿತರು ಈಗಾಗಲೇ ಟರ್ಕಿ, ಲೆಬೆನಾನ್‌, ಜೋರ್ಡಾನ್‌, ಇರಾನ್‌ದೇಶಗಳಿಗೆ ನುಗ್ಗಿದ್ದಾರೆ.

ಈ ಜನಾಂಗೀಯ ಕಲಹವನ್ನು ಶಮನ ಮಾಡಲು, ವಿಶ್ವ ಸಂಸ್ಥೆ ಪ್ರಯತ್ನಿಸುತ್ತಿದೆ. ಸಂಧಾನಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ವಿಶ್ವ ಸಂಸ್ಥೆಯ ಮಾಜಿ ಅಧ್ಯಕ್ಷ ಕೋಫಿ ಅನ್ನಾನ್‌ನಿರಾಶರಾಗಿ ಹಿಂದಿರುಗಿದ್ದಾರೆ. ಕದನ ವಿರಾಮ ಘೋಷಿಸಿ, ಅಧಿಕಾರವನ್ನು ಬಿಟ್ಟುಕೊಟ್ಟು, ದೇಶದಲ್ಲಿ ಶಾಂತಿ ನೆಲೆಸಲು ಸಹಕರಿಸಿ ಎಂಬ ವಿಶ್ವ ಸಂಸ್ಥೆಯ ಕೋರಿಕೆಗೆ ಅಧ್ಯಕ್ಷ 'ಬಷರ್ ಅಲ್ ಅಸ್ಸಾದ್' ಒಪ್ಪಿಗೆ ಸೂಚಿಸಿಲ್ಲ. ತಮ್ಮ ಅಧಿಕಾರವನ್ನು ಉಳಿಸಿಕೊಳ್ಳುವ ಸಲುವಾಗಿ ಅಸ್ಸಾದ್‌ ತಮ್ಮ ಬಂದೂಕು ಬಲವನ್ನು ಪ್ರದರ್ಶಿಸುತ್ತಿದ್ದಾರೆ. ಅಸ್ಸಾದ್‌ ‌ತಾವಾಗಿಯೇ ಅಧಿಕಾರ ಬಿಡಲು ಸಾಧ್ಯವೇ ಇಲ್ಲ ಎಂದು ಅನ್ನಾನ್‌ ಅಭಿಪ್ರಾಯ ಪಟ್ಟಿದ್ದಾರೆ.

ಅಧ್ಯಕ್ಷ 'ಬಷರ್ ಅಲ್ ಅಸ್ಸಾದ್' ರ ಆಡಳಿತ ಅಂತ್ಯವಾಗುವವರೆಗೂ ತಮ್ಮ ಹೋರಾಟ ಕೈಬಿಡಲು ಸಿರಿಯಾ ಬಂಡುಕೋರರು ತಯಾರಿಲ್ಲ. ಬೇರೆಯವರ ಬೆಂಬಲದ ಹೊರತಾಗಿಯೂ ತಮ್ಮ ಕದನವನ್ನು ಮುಂದುವರೆಸುತ್ತೇವೆ ಅನ್ನೋದು ಬಂಡುಕೋರರ ನಿರ್ಧಾರ. ರಕ್ತದ ಕೋಡಿ ಹರಿದರೂ ಅಧಿಕಾರ ಬಿಟ್ಟುಕೊಡಲಾರೆ ಅನ್ನೋದು ಅಧ್ಯಕ್ಷ ಅಸ್ಸಾದ್‌ರ ನಿಲುವು. ಇವರಿಬ್ಬರ ನಡುವೆ ಸಿಲುಕಿ ನರಳುತ್ತಿರುವುದು ಮಾತ್ರ ಸಿರಿಯಾದ ಪ್ರಜಾ ಸಮೂಹ ಮತ್ತು ದೇಶದ ಭವಿಷ್ಯ.

Friday, 25 January 2013

ಜನವರಿ ೨೫.. ಮತದಾರರ ದಿನ....

ಮತದಾನ ಎಂಬುದು ಅಖಂಡ ಪ್ರಜಾ ಸಮೂಹದ ದನಿ. ಪ್ರತಿ ಪ್ರಜೆಯೂ ತನ್ನನ್ನು ಆಳುವ ಪ್ರತಿನಿಧಿಯನ್ನು ಆಯ್ಕೆಮಾಡಲು ಇರುವ ವ್ಯವಸ್ಥೆಯೇ ಮತದಾನ. ಪ್ರಜಾತಂತ್ರ ದೇಶದ ಪ್ರಜೆಗಳ ಪ್ರಮುಖ ಹಕ್ಕು ಇದು. ತಮ್ಮ ಒಳಿತನ್ನು ಬಯಸುವ ಜನಪರ ನಾಯಕನನ್ನು ತಾವೇ ಆಯ್ಕೆ ಮಾಡಿ ಕಳಿಸಲು ಮತದಾನ ಎಂಬ ಪ್ರಕ್ರಿಯೆ ಬೇಕು. ದೇಶಕ್ಕೆ ಒಳಿತುಮಾಡುವ ನಾಯಕನನ್ನು ಚುನಾಯಿಸುವುದು ಪ್ರಜೆಗಳ ಜವಾಬ್ದಾರಿ. ಮತದಾನದ ಪ್ರಾಮುಖ್ಯತೆ ಮತ್ತು ಪ್ರಜೆಗಳ ಮೇಲಿರುವ ಹೊಣೆಯ ಕುರಿತು ಜಾಗೃತಿ ಮೂಡಿಸುವುದಕ್ಕಾಗಿಯೇ ನಮ್ಮದೇಶದಲ್ಲಿ ಜ.25ರಂದು ರಾಷ್ಟ್ರೀಯ ಮತದಾರರ ದಿನವನ್ನು ಆಚರಿಸಲಾಗುತ್ತದೆ.

ಹಿಂದೆ ರಾಜರ ಆಳ್ವಿಕೆಯ ಸಮಯದಲ್ಲಿ ತಮ್ಮ ರಾಜನನ್ನು ಆರಿಸಿಕೊಳ್ಳುವ ಅವಕಾಶ ಪ್ರಜೆಗಳಿಗೆ ಇರಲಿಲ್ಲ. ರಾಜ್ಯ ರಾಜ್ಯಗಳ ನಡುವಿನ ಕಲಹದಿಂದಾಗಿ, ಆಗಾಗ ಬದಲಾಗುವ ರಾಜರಿಂದ, ಜನಸಾಮಾನ್ಯನಿಗೆ ತನ್ನ ರಾಜ ಯಾರು, ತಾವು ಯಾವ ರಾಜ್ಯಕ್ಕೆ ಒಳಪಟ್ಟಿದ್ದೇವೆ ಇಂಬ ಪರಿವೆಯೂ ಇರುತ್ತಿರಲಿಲ್ಲ. ರಾಜಕೀಯ ವಿಚಾರದಲ್ಲಿ ಅಷ್ಟರ ಮಟ್ಟಿಗೆ ಪ್ರಜೆ ಕಡೆಗಣಿಸಲ್ಪಟ್ಟಿದ್ದ.

ನಂತರ ಬಂದ ಬ್ರಿಟೀಷರ ಆಳ್ವಿಕೆಯಲ್ಲಿಯೂ ಇದೇ ಪರಿಸ್ಥಿತಿ ಮುಂದುವರೆದಿತ್ತು. ಭಾರತೀಯ ಪ್ರಜೆಗಳು ಕಡೆಗಣಿಸಲ್ಪಟ್ಟರು. ಆದರೆ, ಯಾವಾಗ ನಮ್ಮದೇಶ ತನ್ನದೇ ಆದ ಸಂವಿಧಾನವನ್ನು ಸಿದ್ಧಪಡಿಸಿ, ಪ್ರಜಾತಂತ್ರ ವ್ಯವಸ್ಥೆಯನ್ನು ಜಾರಿಯಲ್ಲಿ ತಂದಿತ್ತೋ..ಆಗಲೇ ಭಾರತೀಯ ಪ್ರಜೆ ನಿಜವಾದ ಸ್ವಾತಂತ್ರ‍್ಯ ಪಡೆದ. ಜನತಂತ್ರ ವ್ಯವಸ್ಥೆಯಿಂದಾಗಿಯೇ ಪ್ರತಿ ಪ್ರಜೆಗೂ ಬೆಲೆ ಬಂತು. ಪ್ರಜೆಗಳ ನಿರ್ಣಯಕ್ಕೆ ಗೌರವ ಸಿಕ್ಕಿತ್ತು. ಅದೆಲ್ಲವೂ ಸಾಧ್ಯವಾಗಿದ್ದು ಮತದಾನ ಎಂಬ ಸಂವಿಧಾನದ ಒಂದು ಪ್ರಮುಖ ಅಂಗದ ಮೂಲಕವೇ.
2011ರ ವರ್ಷದಿಂದ ನಮ್ಮ ದೇಶದಲ್ಲಿ ರಾಷ್ಟ್ರೀಯ ಮತದಾರರ ದಿನವನ್ನು ಆಚರಿಸಲಾಗುತ್ತಿದೆ. ಜ.25ನ್ನೇ ಆಯ್ಕೆ ಮಾಡಿಕೊಂಡಿರುವುದಕ್ಕೂ ಕಾರಣವಿದೆ. ಭಾರತದ ಚುನಾವಣಾ ಆಯೋಗ ಸ್ಥಾಪನೆಗೊಂಡದ್ದು 1950ರ ಜನವರಿ 25ನೆ ದಿನಾಂಕದಂದು. ಹೀಗಾಗಿ ಇದೇ ದಿನದಂದು ರಾಷ್ಟ್ರಿಯ ಮತದಾರರ ದಿನವನ್ನು ಆಚರಿಸಲು ಸರಕಾರ ನಿರ್ಧರಿಸಿತು.

18 ವರ್ಷಕ್ಕೆ ಮೇಲ್ಪಟ್ಟ ಎಲ್ಲ ಪ್ರಜೆಗಳೂ ಚುನಾವಣಾ ಸಂದರ್ಭದಲ್ಲಿ ಖಡ್ಡಾಯವಾಗಿ ಮತದಾನ ಮಾಡಬೇಕೆಂಬ ಸಂದೇಶ ಸಾರುವುದಕ್ಕಾಗಿ ಈ ದಿನವನ್ನು ಆಚರಿಸಲಾಗುತ್ತಿದೆ. ಗ್ರಾಮೀಣ ಪ್ರದೇಶಗಳಿಂತ ನಗರ ಪ್ರದೇಶಗಳಲ್ಲಿ ಕಡಿಮೆ ಪ್ರಮಾಣದ ಮತದಾನವಾಗುತ್ತದೆ. ವಿದ್ಯಾವಂತರೇ ಹೆಚ್ಚಿರುವ ನಗರ ಪ್ರದೇಶದಲ್ಲಿ ಮತದಾನವನ್ನು ಕಡೆಗಣಿಸುತ್ತಿರುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗುತ್ತಿದೆ. ಜನತೆ ಹೆಚ್ಚುಹೆಚ್ಚು ವಿದ್ಯಾವಂತರಾದಂತೆ, ಮತದಾನದ ಕಡೆ ನಿರ್ಲಕ್ಷ್ಯಧೋರಣೆ ತೋರುತ್ತಿದ್ದಾರೆ.

ತಮ್ಮ ನಾಯಕರ ಬ್ರಷ್ಟಾಚಾರ, ಆಳುವ ಜನರಿಂದಲೇ ನಡೆಯುತ್ತಿರುವ ಲೂಟಿ, ಅನಾಚಾರವೇ ವಿಚಾರವಂತ ಪ್ರಜೆಗಳಲ್ಲಿ ಮತದಾನ, ಚುನಾವಣೆ ಕುರಿತ ಆಸಕ್ತಿಯನ್ನು ಕುಂದಿಸಿರಬಹುದು. ಆದರೆ ದೇಶವನ್ನು ಬದಲಾಯಿಸುವ ಶಕ್ತಿ ಪ್ರಜೆಗಳ ಕೈಯಲ್ಲೇ ಇದೆ. ಅರ್ಹ ಪ್ರತಿನಿಧಿಯನ್ನು ಚುನಾಯಿಸಿ ದೇಶದಲ್ಲಿ ನ್ಯಾಯಪರ ಸರಕಾರವನ್ನು ಜಾರಿಗೆ ತರುವ ಜವಾಬ್ದಾರಿ ಪ್ರಜೆಗಳಮೇಲಿದೆ ಎಂಬುದನ್ನು ಯಾವ ಪ್ರಜೆಯೂ ಮರೆಯಬಾರದು.
ಹಲವು ಆಮಿಷಗಳಿಂಗ ಮತದಾರರನ್ನು ಸೆಳೆದು ಗೆದ್ದುಬರುವ ಪ್ರಯತ್ನ ಅಭ್ಯರ್ಥಿಗಳಿಂದ ನಡೆಯುತ್ತದೆ. ಚುನಾವಣೆ ಹತ್ತಿರ ಬರುತ್ತಿರುವಾಗ, ಆಶ್ವಾಸನೆಗಳೂ ಹೆಚ್ಚುತ್ತಾ ಹೋಗುತ್ತದೆ. ಚುನಾವಣಾ ಪ್ರಚಾರಕ್ಕಾಗಿ ನಾನಾ ಪಕ್ಷಗಳಿಂದ ಏನೇ ಕಾರ್ಯಕ್ರಮಗಳೂ ನಡೆದರೂ ಮತದಾರರ ನಿಲುವು ಮಾತ್ರ ನಿರ್ದಿಷ್ಟವಾಗಿರಬೇಕು. ಜಾತಿ,ಧರ್ಮ,ಮೀರಿದ ನಿಜವಾದ ಜನಸೇವಕನನ್ನೇ ಆಯ್ಕೆ ಮಾಡಿ, ದೇಶದ ಅಭಿವೃದ್ಧಿಗೆ, ಜನರ ಒಳಿತಿಗೆ ಪರೋಕ್ಷವಾಗಿ ಮತದಾರರೇ ಕಾರಣರಾಗುತ್ತಾರೆ ಎಂಬುದು ಪ್ರತಿ ಮತದಾರನ ಗಮನದಲ್ಲಿರಬೇಕು.

ಮತದಾನ ಪ್ರಕ್ರಿಯೆಯಿಂದ ಅರಿವಿದ್ದೂ ದೂರ ಉಳಿಯುವ ವಿದ್ಯಾವಂತರನ್ನು ಹಾಗೂ ಅರಿವಿಲ್ಲದೆ ದೂರ ಉಳಿಯುವ ಅವಿದ್ಯಾವಂತರಿಗೆ ಮತದಾನ ಪವಿತ್ರ‍್ಯತೆಯ ಬಗ್ಗೆ ಅರಿವು ಮೂಡಿಸುವುದು ,18 ವರ್ಷ ತುಂಬಿದ ವಯಸ್ಕರಲ್ಲಿ ಮತದಾನದ ಹಕ್ಕು ಪಡೆಯುವಂತೆ ಸ್ಫೂರ್ತಿ ನೀಡುವುದು, ಪ್ರಜೆಗಳ ಹಕ್ಕಿನ ಕುರಿತು ಜಾಗೃತಿ ಮೂಡಿಸುವುದು ರಾಷ್ಟ್ರೀಯ ಮತದಾರರ ದಿನದ ಉದ್ದೇಶ. ಮತದಾರರಿಗೆ ಪ್ರಜಾಪ್ರಭುತ್ವದ ಅಗತ್ಯತೆ ಅನಿವಾರ್ಯತೆ ಯನ್ನು ಒತ್ತಿ ಹೇಳಿ ಪ್ರಬುದ್ಧ ಮತದಾರ ರಾಗಿ ಕಾರ್ಯನಿರ್ವಹಿಸುವಂತೆ ಉತ್ತೇಜಿಸುವುದು ಈ ದಿನಾಚರಣೆಯ ಗುರಿ.

ಇನ್ನು ಕೆಲವೇ ತಿಂಗಳಿನಲ್ಲಿ, ನಮ್ಮ ರಾಜ್ಯದಲ್ಲಿ ಹಾಗೂ ಕೇಂದ್ರದಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಎಲ್ಲ ಪ್ರಜೆಗಳೂ ಮತದಾನ ಮಾಡಿ, ನಾಯಕರ ಆಯ್ಕೆಯ ಜವಾಬ್ಧಾರಿಯನ್ನು ಸೂಕ್ತರೀತಿಯಲ್ಲಿ ನಿಭಾಯಿಸಲು ಪ್ರತಿಜ್ಞೆ ಮಾಡುವುದರ ಮೂಲಕ ‘ರಾಷ್ಟ್ರೀಯ ಮತದಾರರ ದಿನ’ವನ್ನು ಆಚರಿಸಬೇಕಿದೆ.

Wednesday, 16 January 2013

ಶುಭ ತರಲಿ ಸಂಕ್ರಮಣ


ನವವರ್ಷದ ಆಗಮನವಾಗುತ್ತಿದ್ದಂತೆ ಬರುವ ಪ್ರಥಮ ಹಬ್ಬವೇ ಸಂಕ್ರಮಣ. ’ಎಳ್ಳು ಬೆಲ್ಲ ತಿಂದು ಒಳ್ಳೊಳ್ಳೆ ಮಾತನಾಡಿ’ ಎನ್ನುವ ಶುಭ ಆಶಯದೊಂದಿಗೆ ಸಂಕ್ರಾಂತಿ ಕಾಳನ್ನು ಹಂಚುತ್ತಾ ಖುಷಿ ಪಡುವ ದಿನ ಇದು. ಹೊಸ ಅಂಗಿತೊಟ್ಟು ಸಿಹಿತಿಂಡಿ ಮೆಲ್ಲುತ್ತಾ ಪರಸ್ಪರ ಶುಭಹಾರೈಸುತ್ತಾ ಕುಣಿದಾಡುವ ಮಕ್ಕಳಿಗಂತೂ ಸಂಕ್ರಾಂತಿ ಹಬ್ಬವೆಂದರೆ ಎಲ್ಲಿಲ್ಲದ ಖುಷಿ. ಅರಿಶಿಣ ಕುಂಕುಮ, ಉಡುಗೊರೆ, ಎಳ್ಳು-ಬೆಲ್ಲ ಕೊಟ್ಟು, ತಾವೂ ಪಡೆದು ಸಂಭ್ರಮಿಸುವ ಮಹಿಳೆಯರಿಗೂ ಇದೊಂದು ಸ್ನೇಹ ಸಂಬಂಧ ಬೆಸೆಯುವ ಸಂತಸದ ಹಬ್ಬ.

ಎಳ್ಳಿನ ಜೊತೆಗೆ ಸಕ್ಕರೆ ಅಚ್ಚುಗಳು, ಹಣ್ಣು, ಕಬ್ಬಿನ ತುಂಡುಗಳನ್ನು ಸಹ ಎಳ್ಳು ಬೆಲ್ಲದ ಜೊತೆ ಇಟ್ಟು ಮನೆಯಲ್ಲಿ ಬೀರಿ, ಹಂಚಿ ತಿಂದು ಸಂಭ್ರಮಿಸಲಾಗುತ್ತದೆ. ವರ್ಷಪೂರ್ತಿ ಮನೆಯ ತುಂಬಾ ಧಾನ್ಯ, ಸಂಪತ್ತು ತುಂಬಿರಲಿ ಎಂಬ ಸದಾಶಯ ಈ ಆಚರಣೆಯಲ್ಲಿದೆ. ಸಣ್ಣ ಸಣ್ಣ ಚೂರುಗಳಾಗಿ ಕತ್ತರಿಸಿದ ಬೆಲ್ಲ,ಒಣ ಕೊಬ್ಬರಿ,ಹುರಿಗಡಲೆ,ಸಿಪ್ಪೆ ತೆಗೆದ ಕಡಲೇಕಾಯಿ ಬೀಜ ಹಾಗೂ ಹುರಿದ ಬಿಳಿ ಎಳ್ಳನ್ನು ಸೇರಿಸಿ "ಎಳ್ಳು" ತಯಾರಿಸಲಾಗುತ್ತದೆ. ಎಳ್ಳು ದೇಹಕ್ಕೆ ತಂಪು ನೀಡುವ ವಸ್ತುವೂ ಹೌದು. ಉತ್ತರಾಯಣದ ಉಷ್ಣ ವಾತಾವರಣದಿಂದ ಆರೋಗ್ಯ ಕೆಡದಿರಲಿ ಎಂಬ ಉದ್ದೇಶ ಈ ಎಳ್ಳು ಬೆಲ್ಲ ಹಂಚುವ ಆಚರಣೆಯ ಹಿಂದಿದೆ. ಸಂಕ್ರಾಂತಿ, ಹುಗ್ಗಿ ಹಬ್ಬವೂ ಹೌದು. ಚಾಂದ್ರಮಾನದ ಪ್ರಕಾರ ಸಂಕ್ರಾಂತಿ ಹಬ್ಬ ಜನವರಿ 14 ಅಥವಾ 15 ರಂದು, ಬರುತ್ತದೆ.

ದಕ್ಷಿಣಾಯಣ ಮುಗಿದು ಉತ್ತರಾಯಣ ಪ್ರಾರಂಭವಾಗುವ ಸಂದರ್ಭದಲ್ಲಿ ಸೂರ್ಯ ತನ್ನ ಪಥವನ್ನು ಬದಲಿಸುತ್ತಾನೆ. ಇದು ಚಳಿಗಾಲ ಮುಗಿದು ಮುಂಬರುವ ಬೇಸಿಗೆಯ ಮುನ್ಸೂಚನೆ. ಇಲ್ಲಿಂದ ಸೂರ್ಯ ಇನ್ನು ಆರು ತಿಂಗಳು ಉತ್ತರದ ದಿಕ್ಕಿನಲ್ಲಿ ಚಲಿಸುತ್ತಾನೆ. ಉತ್ತರಕ್ಕೆ ಹೆಚ್ಚು ಹೋದಂತೆಲ್ಲಾ ಹಗಲಿನ ಪ್ರಮಾಣ ಹೆಚ್ಚಾಗಿ ಇರುಳು ಕಮ್ಮಿಯಾಗುತ್ತಾ ಹೋಗುತ್ತದೆ. ಸೂರ್ಯನ ತಾಪ ಹೆಚ್ಚಾಗುತ್ತಾ ಬೇಸಗೆಯ ಆಗಮನವಾಗುತ್ತದೆ.

ಮಹಾಭಾರತದಲ್ಲಿಯೂ ಮಕರ ಸಂಕ್ರಮಣದ ಉಲ್ಲೇಖವಿದೆ. ಸಂಕ್ರಾತಿಯ ಸಂದರ್ಭದಲ್ಲಿ ಭೀಷ್ಮ ಪಿತಾಮಹ ಶರಶಯ್ಯೆಯ ಮೇಲೆ ಮಲಗಿ ಉತ್ತರಾಯಣದ ಬರುವಿಕೆಗೆ ಕಾದು, ಪ್ರಾಣ ತ್ಯಜಿಸುತ್ತಾನೆ. ಭಗೀರಥ ಮಹಾರಾಜನೂ ಉತ್ತರಾಯಣದಲ್ಲಿಯೇ ಗಂಗೆಯನ್ನು ಭೂಮಿಗೆ ತಂದು ಪಿತೃಗಳಿಗೆ ಗಂಗಾಜಲದ ತರ್ಪಣವನ್ನು ಕೊಡುತ್ತಾನೆ. ಹೀಗೆ ಮಕರ ಸಂಕ್ರಮಣ ಕಾಲಕ್ಕೆ ಪುರಾಣ, ಮಹಾಕಾವ್ಯಗಳಲ್ಲಿಯೂ ವಿಶೇಷ ಸ್ಥಾನ ನೀಡಲಾಗಿದೆ.
ದಕ್ಷಿಣ ಭಾರತದಲ್ಲಿ ವಿಶೇಷವಾಗಿ ಆಚರಿಸಲ್ಪಡುವ ಹಬ್ಬ ಇದು. ಸಾಮಾನ್ಯವಾಗಿ ಕರ್ನಾಟಕ, ತಮಿಳುನಾಡು ಮತ್ತು ಕೇರಳದಲ್ಲಿ ಆಚರಿಸಲಾಗುತ್ತದೆ. ನಮ್ಮ ರಾಜ್ಯದಲ್ಲಿ ಈ ಹಬ್ಬಕ್ಕೆ ಸಂಕ್ರಮಣ ಎಂದು ಕರೆದರೆ, ತಮಿಳುನಾಡಿನಲ್ಲಿ ಪೊಂಗಲ್ಎಂದು ಸಂಭೋದಿಸಲಾಗುತ್ತದೆ. ಈ ಹಬ್ಬದ ವಿಶೇಷ ತಿನಿಸಾದ, ಹಾಲು ,ಬೆಲ್ಲ, ಅನ್ನವನ್ನು ಕುದಿಸಿ ಪೊಂಗಲ್ ತಯಾರಿಸಿ ದೇವರಿಗೆ ನೈವೇದ್ಯ ಮಾಡಿ ತಾವೂ ಸವಿಯುತ್ತಾರೆ. ಹಲವೆಡೆ ಗೋಪೂಜೆಯೂ ನಡೆಯುತ್ತೆ. ಹಾಗೇ ಗೂಳಿಯನ್ನು ಪಳಗಿಸುವ ಆಟವನ್ನೂ ಏರ್ಪಾಟು ಮಾಡಿರುತ್ತಾರೆ. ಕೇರಳದಲ್ಲಂತೂ ಸಂಭ್ರಮವೋ ಸಂಭ್ರಮ. ಸ್ವಾಮಿ ಅಯ್ಯಪ್ಪ ತನ್ನ ಅಸಂಖ್ಯ ಭಕ್ತರಿಂದ ವಿಶೇಷವಾಗಿ ಪೂಜಿಸಲ್ಪಡುತ್ತಾನೆ. ಸಂಕ್ರಾಂತಿಯ ದಿನ ಗೋಚರಿಸುವ ಮಕರಜ್ಯೋತಿಯ ರೂಪದಲ್ಲಿ ಅಯ್ಯಪ್ಪ ಕಾಣಿಸಿಕೊಳ್ಳುತ್ತಾನೆ ಎಂಬ ನಂಬಿಕೆ ಇದೆ. ದೇಶದೆಲ್ಲಡೆಯಿಂದ ಅಯ್ಯಪ್ಪನ ಭಕ್ತರು ಕೇರಳದ ಶಬರೀಮಲೈಗೆ ಹೋಗಿ ಅಯ್ಯಪ್ಪನ ದರ್ಶನ ಮಾಡಿ ಪುನೀತರಾಗುತ್ತಾರೆ. ಗಾಳಿಪಟವನ್ನು ಹಾರಿಬಿಡುವುದು ಗುಜರಾತ್ ಮತ್ತು ಮಹಾರಾಷ್ಟ್ರಗಳಲ್ಲಿ ಸಂಕ್ರಾಂತಿಯ ಹಬ್ಬದಂದು ಆಚರಿಸುವ ವಿಶೇಷ ಆಚರಣೆ. ಮಹಾರಾಷ್ಟ್ರದಲ್ಲಿಯೂ ಎಳ್ಳನ್ನು ಹಂಚುವ ಸಂಪ್ರದಾಯವಿದೆ ಆದರೆ ಬಿಡಿ ಬಿಡಿ ಎಳ್ಳನ್ನು ಹಂಚದೆ, ಎಳ್ಳು ಉಂಡೆಯನ್ನು ಮಾಡಿ ಹಂಚುತ್ತಾರೆ. ಪಂಜಾಬ್, ಹರಿಯಾಣದಲ್ಲಿಯೂ ಸಂಕ್ರಾಂತಿ ’ಲೋಹರಿ’ ಎಂಬ ಹೆಸರಲ್ಲಿ ಆಚರಿಸಲ್ಪಡುತ್ತದೆ.

ಮನೆ ಮನೆಯಲ್ಲಿ ಸಂಭ್ರಮ ತಂದಿರುವ ಸಂಕ್ರಮಣ ಎಲ್ಲರಿಗೂ ಶುಭ ತರಲಿ ಹಾಗೂ ಎಳ್ಳು ಬೆಲ್ಲದ ಸಿಹಿಯಂತೆ ವರ್ಷಪೂರ್ತಿ ಸಿಹಿ ನಿಮ್ಮ ಜೊತೆಗಿರಲಿ ಎಂಬ ಹಾರೈಕೆ ನನ್ನದು..

Friday, 11 January 2013

ಸ್ವಾಮಿ ವಿವೇಕಾನಂದರ ಜನ್ಮದಿನ

ವ್ಯಕ್ತಿ ತಾನು ದುರ್ಬಲನೆಂದು ಭಾವಿಸಬಾರದು. ಏಕೆಂದರೆ ದೌರ್ಬಲ್ಯವೇ ಪಾಪ, ದೌರ್ಬಲ್ಯವೇ ಮರಣ. ತನ್ನ ದೌರ್ಬಲ್ಯವನ್ನು ಗೆಲ್ಲುವುದರಿಂದ ಎಲ್ಲವನ್ನೂ ಸಾಧಿಸಬಹುದು. ತನ್ನ ಆತ್ಮವಿಶ್ವಾಸದಿಂದ ಎದ್ದು ನಿಲ್ಲಬೇಕು, ತನ್ನೊಳಗಿರುವ ದೈವಿಕತೆಯನ್ನು ಹೊರಚಿಮ್ಮಬೇಕು…” ಇಂಥ ಘೋಷಣೆಯೊಂದಿಗೆ ದೇಶದ ಯುವಕರಲ್ಲಿ ಆತ್ಮವಿಶ್ವಾಸ ಹೆಚ್ಚಿಸಿದ ಮಹಾನ್‌ ವ್ಯಕ್ತಿಗಳೇ ಸ್ವಾಮಿ ವಿವೇಕಾನಂದರು. ದೇಶದ ಯುವ ಶಕ್ತಿಗಳಿಗೆ ಆಂತರ್ಯದ ಸತ್ವ ತುಂಬುವಲ್ಲಿ ಯಶಸ್ವಿಯಾದ ಅದ್ಭುತ ತತ್ವಜ್ಞಾನಿಗಳು ಇವರು. ನಮ್ಮ ದೇಶದ ತತ್ವವನ್ನು - ಸತ್ವವನ್ನು ಪ್ರಪಂಚಕ್ಕೆ ಸಾರಿದ ದೇಶದ ಈ ಹೆಮ್ಮೆಯ ಪುತ್ರನಲ್ಲಿತ್ತು ತಾಯ್ನಾಡು ಮತ್ತು ದೇಶದ ಸಂಸ್ಕೃತಿಯ ಬಗ್ಗೆ ಅಗಾಧವಾದ ಪ್ರೀತಿ. ಯುವ ಶಕ್ತಿಯೇ ದೇಶದ ಶಕ್ತಿ ಎಂಬ ಘೋಷಣೆ ಸಾರಿದ ವಿವೇಕಾನಂದರ ಜನ್ಮದಿನವನ್ನು ರಾಷ್ಟ್ರೀಯ ಯುವ ದಿನವನ್ನಾಗಿ ಆಚರಿಸುವುದರ ಮೂಲಕ ಸರಕಾರ ವಿವೇಕಾನಂದರಿಗೆ ಗೌರವ ಸೂಚಿಸಿದೆ.

‘ಸ್ವಾಮಿ ವಿವೇಕಾನಂದರಾಗುವ ಮೊದಲು ಅಂದರೆ, ಇವರ ಪೂರ್ವಾಶ್ರಮದ ಹೆಸರು ನರೇಂದ್ರನಾಥ ದತ್ತ. 1863 ಜನವರಿ 12ರಂದು ಜನಿಸಿದ ನರೇಂದ್ರ, ಮುಂದೆ ಇಡೀ ದೇಶದ ಶಕ್ತಿಯಾಗಿ ಬೆಳೆದರು. ಅತ್ಯಂತ ಚೂಟಿ ಮತ್ತು ತುಂಟತನದ ಸ್ವಭಾವದ ಈ ಬಾಲಕನಲ್ಲಿದ್ದ ಅಧಮ್ಯ ಚೇತನವನ್ನು ಮೊದಲು ಗುರುತಿಸಿದ್ದು ಶಿವಭಕ್ತೆಯಾಗಿದ್ದ ವಿವೇಕಾನಂದರ ತಾಯಿ ಭುವನೇಶ್ವರಿ ದೇವಿ. ತನ್ನ ಶಿವಪೂಜೆಯ ಫಲವಾಗಿ ಹುಟ್ಟಿದ್ದ ಮಗ ನರೇಂದ್ರ, ಸಾಕ್ಷಾತ್‌ ಶಿವನೇ ಎಂದು ನಂಬಿದ್ದರು ಅವರು. ನರೇಂದ್ರ ಪುಟ್ಟ ಮಗುವಾಗಿದ್ದಾಗಲೇ ರಾಮಾಯಣ, ಮಹಾಭಾರತ, ಪುರಾಣಗಳನ್ನು ಓದಿ ತಿಳಿಸಿದ್ದರು ತಾಯಿ ಭುವನೇಶ್ವರಿ ದೇವಿ. ವೃತ್ತಿಯಲ್ಲಿ ವಕೀಲರಾಗಿದ್ದ ತಂದೆ ವಿಶ್ವನಾಥದತ್ತ, ದೈವಭಕ್ತರಲ್ಲದಿದ್ದರೂ ಜನಾನುರಾಗಿಗಳಾಗಿದ್ದರು. ಸಾಕಷ್ಟು ದಾನ ಧರ್ಮ ಮಾಡಿ ಜನರ ಪ್ರೀತಿ ಸಂಪಾದಿಸಿಕೊಂಡಿದ್ದರು. ಇಂಥ ಆದರ್ಶ ತಂದೆ-ತಾಯಿಗಳ ಆರೈಕೆಯಲ್ಲಿ ಬೆಳೆದ ನರೇಂದ್ರನಿಗೆ ದೈವಭಕ್ತಿ, ದೇಶಭಕ್ತಿ, ತೀಕ್ಷ್ಣ ಬುದ್ಧಿಶಕ್ತಿ, ಆತ್ಮವಿಶ್ವಾಸ, ನಿರ್ಭಯತೆ ಮತ್ತು ದೃಢತೆ, ಜನ್ಮದತ್ತವಾಗಿ ಬಂದಿತ್ತು.

ಸ್ವಾಮಿ ವಿವೇಕಾನಂದ
1879ರಲ್ಲಿ ಕಲ್ಕತ್ತಾದ ಸ್ಕೊಟಿಷ್‌ಚರ್ಚ್‌ ಕಾಲೇಜಿನಲ್ಲಿ ನರೇಂದ್ರ ನಾಥ ದತ್ತ, ಪಾಶ್ಚಾತ್ಯ ತರ್ಕ, ತತ್ವಶಾಸ್ತ್ರ ಹಾಗೂ ಇತಿಹಾಸವನ್ನು ಅಧ್ಯಯನ ಮಾಡಿದರು. ನಂತರ 1881ರಲ್ಲಿ ಲಲಿತ ಕಲೆಯ ಪದವಿಯನ್ನು ಹಾಗೂ 1884ರಲ್ಲಿ ಕಲಾ ಪದವಿಯನ್ನೂ ಪಡೆದರು. ಇಷ್ಟರಲ್ಲೇ ನರೇಂದ್ರನಾಥ ದತ್ತನಿಗೆ ಶ್ರೀ ರಾಮಕೃಷ್ಣ ಪರಮಹಂಸರ ಪರಿಚಯವಾಗಿತ್ತು. 1881ರಲ್ಲಿಯೇ ಪರಮಹಂಸರನ್ನು ಭೇಟಿಯಾಗಿದ್ದ ನರೇಂದ್ರ, ಮೊದಲ ಭೇಟಿಯಲ್ಲಿಯೇ ರಾಮಕೃಷ್ಣರ ಶಕ್ತಿಯನ್ನು ನಂಬದೇ ಅವರನ್ನು ಪರೀಕ್ಷಿಸುವ ನಿರ್ಧಾರಕ್ಕೆ ಬಂದರು. ಆನಂತರದ ನಿರಂತರ ಒಡನಾಟದಿಂದ ನರೇಂದ್ರನಿಗೆ ರಾಮಕೃಷ್ಣರ ಶಕ್ತಿಯ ಪರಿಚಯವಾಯ್ತು. ಅವರ ಸರಳತೆ, ನಿಶ್ಕಲ್ಮಶ ಭಕ್ತಿ ಮತ್ತು ಸಿದ್ಧಾಂತಗಳಿಗೆ ಆಕರ್ಷಿತರಾದರು. ನರೇಂದ್ರನಲ್ಲಿರುವ ಅಪರಿಮಿತ ಚೈತನ್ಯವನ್ನು ಗುರುತಿಸಿದ ರಾಮಕೃಷ್ಣರು, ಶಿಷ್ಯನನ್ನಾಗಿ ಸ್ವೀಕರಿಸಿ, ವಿವೇಕಾನಂದ ಎಂದು ನಾಮಕರಣ ಮಾಡಿದರು.

ಅಮೇರಿಕಾದ ಚಿಕಾಕೋದಲ್ಲಿ ನಡೆದ ‘ಸರ್ವ ಧರ್ಮ ಸಮ್ಮೇಳನ’ದಲ್ಲಿ ಮಾತನಾಡಿ, ‘ಭಾರತೀಯ ಸಂಸ್ಕೃತಿ ಮತ್ತು ಹಿಂದೂ ಧರ್ಮದ ಮೌಲ್ಯ’ದ ಪರಿಚಯ ಮಾಡಿಕೊಟ್ಟ ವಿವೇಕಾನಂದರ ಭಾಷಣ ವಿಶ್ವ ವಿಖ್ಯಾತವಾಗಿದೆ. ‘ಅಮೇರಿಕಾದ ಸಹೋದರ ಸಹೋದರಿಯರೇ’ ಎಂಬ ಸಂಬೋಧನೆಯೊಂದಿಗೆ ಪ್ರಾರಂಭವಾದ ವಿವೇಕಾನಂದ ಭಾಷಣ ಅಲ್ಲಿ ನೆರೆದಿದ್ದ ಅಸಂಖ್ಯ ಜನರ ಚಿತ್ತವನ್ನು ಗೆದ್ದಿತ್ತು. ಪಾಶ್ಚಾತ್ಯರಿಂದ ‘ವಿಚಿತ್ರ ಧರ್ಮ’ ಎಂದು ಕರೆಯಿಸಿಕೊಂಡಿದ್ದ ಹಿಂದೂ ಧರ್ಮದ ನಿಜವಾದ ಅರ್ಥವನ್ನು,ಸಿದ್ಧಾಂತಗಳನ್ನು ಪಾಶ್ಚಾತ್ಯರಿಗೆ ಮನದಟ್ಟು ಮಾಡುವಲ್ಲಿ ಸ್ವಾಮಿ ವಿವೇಕಾನಂದ ಯಶಸ್ವಿಯಾದರು. ವಿಶ್ವ ಪರ್ಯಟನೆ ಮಾಡಿ ಹಿಂದೂ ಧರ್ಮದ ಸಿದ್ಧಾಂತಗಳು ಹಾಗೂ ಮೌಲ್ಯಗಳನ್ನು ಪರಿಚಯ ಮಾಡಿಕೊಟ್ಟ ಸ್ವಾಮಿ ವಿವೇಕಾನಂದರ ಎಲ್ಲಾ ಭಾಷಣಗಳು ಈಗ ಪುಸ್ತಕ ರೂಪದಲ್ಲಿವೆ. ಅವುಗಳನ್ನು ಹಿಂದೂ ಧರ್ಮದ ಯೋಗ ಸಿದ್ಧಾಂತಗಳಾಗಿ ಪರಿಗಣಿಸಲಾಗಿದೆ. ಅಮೇರಿಕಾದ ‘ಸರ್ವಧರ್ಮ ಸಮ್ಮೇಳನ’ದ ನಂತರ ತಾಯ್ನಾಡಿಗೆ ಮರಳಿದ ವಿವೇಕಾನಂದರು ಗುರು ರಾಮಕೃಷ್ಣ ಪರಮಹಂಸರ ಸ್ಮರಣಾರ್ಥ 1892, ಮೇ 1ರಂದು ‘ರಾಮಕೃಷ್ಣ ಮಿಶನ್‌’ ಸ್ಥಾಪಿಸಿದರು.

ಶ್ರೀರಾಮಕೃಷ್ಣ ಪರಮಹಂಸರು ತಮ್ಮ ಆಧ್ಯಾತ್ಮಿಕ ಅನುಭವಗಳಿಂದ ಬೋಧಿಸಿದ ವೇದಾಂತ 'ಆತ್ಮನೋ ಮೋಕ್ಷಾರ್ಥಮ್ ಜಗದ್ ಹಿತಾಯ ಚ' ಎಂಬ ಧ್ಯೇಯವಾಕ್ಯವನ್ನು ಹೊಂದಿರುವ ಈ ಸಂಸ್ಥೆ ವಿವೇಕಾನಂದರಿಂದ ಜಗತ್‌ಪ್ರಸಿದ್ಧವಾಯ್ತು. ಹಿಂದೂ ಧಾರ್ಮಿಕ ಮತ್ತು ಸಾಮಾಜಿಕ ಸಂಸ್ಥೆಯಾಗಿ ರಾಮಕೃಷ್ಣ ಮಿಶನ್‌ಗುರುತಿಸಿಕೊಂಡಿತು.

ಕಾಳಿಯ ಆರಾಧಕರಾಗಿದ್ದ ರಾಮಕೃಷ್ಣ ಪರಮಹಂಸರು ಹಾಗೂ ಅವರ ಪತ್ನಿ ಮಾತೆ ಶಾರದಾ ದೇವಿಯವರ ನೆಚ್ಚಿನ ಶಿಷ್ಯರಾಗಿದ್ದ ವಿವೇಕಾನಂದರು, ತಮ್ಮದೇ ಆದ ವೈಚಾರಿಕ ನೆಲೆಯಲ್ಲಿ ತಮ್ಮನ್ನು ಗುರುತಿಸಿಕೊಂಡರು.
‘ಸುಖಕ್ಕಿಂತ ದುಃಖವೇ, ಐಶ್ವರ್ಯಕ್ಕಿಂತಲೂ ದಾರಿದ್ರ್ಯವೇ, ಹೊಗಳಿಕೆಗಿಂತಲೂ ಪೆಟ್ಟುಗಳೇ ಮನುಷ್ಯನಲ್ಲಿ ಅಡಕವಾಗಿರುವ ಅಂತರಾಗ್ನಿಯನ್ನು ಹೊರಗೆಡಹುತ್ತದೆ’ ಎಂದು ಬೋಧಿಸಿದ ವಿವೇಕಾನಂದರು ಬಡವರ, ನೊಂದವರ, ಸಮಾಜದಲ್ಲಿ ತುಳಿತಕ್ಕೊಳಗಾದವರ ಕಷ್ಟಕ್ಕೆ ಸ್ಪಂದಿಸಿದರು. ‘ಒಂದು ಆದರ್ಶವನ್ನು, ಗುರಿಯನ್ನು ಕೈಗೆತ್ತಿಕೊಳ್ಳಿ. ಕೇವಲ ಆ ಗುರಿಯ ಬಗ್ಗೆ ಮಾತ್ರ ಯೋಚಿಸಿ, ಚಿಂತಿಸಿ. ನಿಮ್ಮ ಬದುಕನ್ನೇ ಅದಕ್ಕಾಗಿ ಮುಡಿಪಾಗಿಡಿ. ಆ ಗುರಿಯು ನಿಮ್ಮ ಬುದ್ಧಿ, ಮನಸ್ಸು, ಇಂದ್ರಿಯಗಳು, ನರ-ನಾಡಿಗಳನ್ನೆಲ್ಲ ವ್ಯಾಪಿಸಲಿ. ಬೇರೆಲ್ಲ ಆಲೋಚನೆಗಳನ್ನು ಬದಿಗಿಡಿ. ಇದೇ ಯಶಸ್ಸಿನ ಏಕಮಾತ್ರ ಸೂತ್ರ!’ ಇದು ಯುವ ಶಕ್ತಿಗಳಲ್ಲಿರುವ ಉತ್ಸಾಹವನ್ನು ಬಡಿದೆಬ್ಬಿಸಲು ವಿವೇಕಾನಂದರು ಘೋಷಿಸಿದ ಪ್ರೋತ್ಸಾಹ ವಾಕ್ಯ. ಇದು ಬಿಸಿರಕ್ತದ ಯುವ ಚೈತನ್ಯವನ್ನು ಜಾಗೃತಗೊಳಿಸುವ ಮಂತ್ರವಾಯಿತು. ಗಾಂಭೀರ್ಯ, ಸರಳತೆ, ಧೈರ್ಯ, ಅಸ್ವಾರ್ಥತೆ, ದಯೆ, ಸೇವಾಶಕ್ತಿಯಿಂದಲೇ ದೇಶದ ಜನತೆಯನ್ನು ಗೆದ್ದ ಸ್ವಾಮಿ ವಿವೇಕಾನಂದರು ತಮ್ಮ 29 ನೇ ವಯಸ್ಸಿನಲ್ಲಿ ಧೈವಾಧೀನರಾದರು. ಅತೀ ಚಿಕ್ಕ ವಯಸ್ಸಿನಲ್ಲಿ ಮಹಾ ಸಾಧನೆ ತೋರಿದ ಈ ಶಕ್ತಿ ಅಸ್ತಂಗತವಾದ ದಿನ 1902ರ ಜುಲೈ 4.

ಯುವ ಜನತೆಗೆ ಪ್ರೋತ್ಸಾಹಿಸಿ, ಆ ಮೂಲಕ ಯಶಸ್ವಿ ಮಾರ್ಗವನ್ನು ಸೂಚಿಸಿದ ಸ್ವಾಮಿ ವಿವೇಕಾನಂದರ ೧೫೦ನೇ ಜನ್ಮದಿನಾಚರಣೆ ಇವತ್ತು. ಯುವ ಶಕ್ತಿಯ ದ್ಯೋತಕವಾಗಿದ್ದ ವಿವೇಕಾನಂದರ ಸ್ಮರಣಾರ್ಥ ಇಂದು ರಾಷ್ಟ್ರೀಯ ಯುವ ದಿನವನ್ನಾಗಿ ರಾಷ್ಟ್ರಾದ್ಯಂತ ಆಚರಿಸಲಾಗುತ್ತದೆ.

“ಕ್ಯಾನ್ಸರ್‌”

  ಕಟ-ಕಟ ಕಟ-ಕಟ ಶಬ್ಧ ಲಯದಂತೆ ಕಿವಿಗೆ ಅಪ್ಪಳಿಸುತ್ತಾ ಅಪ್ಪಳಿಸುತ್ತಾ, ಕಣ್ಣು ಎಳೆದಂತಾಗಿ ನಿದ್ದೆಯ ಮಂಪರಿನಲ್ಲಿದ್ದಾಗಲೇ, ಮೇಲಿನ ಸೀಟ್‌ಮೇಲೆ ಇಟ್ಟಿದ್ದ ಬ್ಯಾಗ್‌ ಒಂದು...