Tuesday, 16 October 2012

ವಿಶ್ವ ಆಹಾರ ದಿನ


ಇವತ್ತು ಅಂತರಾಷ್ಟ್ರೀಯ ಆಹಾರ ದಿನ. ಕೃಷಿಕರು ಮತ್ತು ಆಹಾರೋತ್ಪಾದಕರ ಅಭಿವೃದ್ಧಿಗಾಗಿ ವಿಶ್ವ ಸಂಸ್ಥೆ ಈ ದಿನ  ಆಚರಿಸುತ್ತಿದೆ. ವಿಶ್ವ ಸಂಸ್ಥೆಯ ಅಂಗಸಂಸ್ಥೆಯಾದ 'ವಿಶ್ವ ಆಹಾರ ಮತ್ತು ಕೃಷಿ ಸಂಸ್ಥೆ' 1945, ಅಕ್ಟೋಬರ್‌ 16ರಂದು ಸ್ಥಾಪಿತಗೊಂಡ್ತು. ಇದರ ಸ್ಮರಣಾರ್ಥ ಅಕ್ಟೋಬರ್‌ 16ನ್ನು ಅಂತರಾಷ್ಟ್ರೀಯ ಆಹಾರ ದಿನವನ್ನಾಗಿ ವಿಶ್ವ ಸಂಸ್ಥೆ ಘೋಷಿಸಿತು.

1945
ರ ವಿಶ್ವ ಸಂಸ್ಥೆಯ 'ಸಾಮಾನ್ಯ ಸಭೆ'ಯಲ್ಲಿ, ವಿಶ್ವ ಆಹಾರ ಮತ್ತು ಕೃಷಿ ಸಂಸ್ಥೆಯ ಸದಸ್ಯರಾಗಿದ್ದ, ಹಂಗೇರಿಯಾದ ಮಂತ್ರಿ ' ಡಾ.ಪಾಲ್‌ ರೊಮೇನಿ, ವಿಶ್ವ ಆಹಾರ ದಿನ ಆಚರಿಸೋಕೆ ಸಲಹೆ ನೀಡಿದ್ರು. ಇವರ ಸಲಹೆಯನ್ನು ಸ್ವೀಕರಿಸಿ ವಿಶ್ವ ಸಂಸ್ಥೆ, ಈ ದಿನವನ್ನು ಅಂಗೀಕರಿಸಿತು. ಇದೀಗ ಸುಮಾರು 150 ರಾಷ್ಟ್ರಗಳಲ್ಲಿ ವಿಶ್ವ ಆಹಾರ ದಿನ ಆಚರಿಸ್ತಾರೆ.

ಜಗತ್ತಿನ ಹಲವು ರಾಷ್ಟ್ರಗಳಲ್ಲಿರುವ ಬಡತನ ಮತ್ತು ಹಸಿವಿನ ಕುರಿತು ಜಗತ್ತಿಗೆ ಅರಿವು ಮೂಡಿಸಲಾಗುತ್ತೆ. ಜಗತ್ತಿನ ಜನರಿಗೆ ಆಹಾರ ಪೂರೈಸೋ ರೈತರ ಸಮಸ್ಯೆಗಳ ಕುರಿತು ಅಂತರಾಷ್ಟ್ರೀಯ ಮಟ್ಟದಲ್ಲಿ ಜಾಗೃತಿ ಮೂಡಿಸುವುದಕ್ಕಾಗಿ ಅನೇಕ ಕಾರ್ಯಕ್ರಮಗಳು ಈ ದಿನ ಜರುಗುತ್ವೆ. ಸಣ್ಣ ಪ್ರಮಾಣದ ರೈತರಿಗೆ ಸಹಾಯ ಮಾಡಲು ಮೈಕ್ರೋ ಯೋಜನೆಗಳನ್ನು ಹಮ್ಮಿಕೊಳ್ಳಲಾಗುತ್ತೆ. ಆಹಾರ ಪೂರೈಕೆ ಮತ್ತು ವಿತರಣೆಯ ಸಮಸ್ಯೆಗಳ ಕುರಿತು, ವಿಶ್ವ ಸಂಸ್ಥೆಯ ಆಶ್ರಯದಲ್ಲಿ, ಅಂತರಾಷ್ಟ್ರೀಯ ವಿಶ್ವವಿದ್ಯಾಲಯಗಳಲ್ಲಿ ವಿಚಾರಗೋಷ್ಟಿ, ಸಮ್ಮೇಳನಗಳು, ಕಾರ್ಯಾಗಾರಗಳನ್ನು ನಡೆಸಲಾಗುತ್ತೆ.

ಭಾರತದಂತಹ ಅನೇಕ ಅಭಿವೃದ್ಧಿಶೀಲ ರಾಷ್ಟ್ರಗಳ ಆರ್ಥಿಕತೆಯ ಬೆನ್ನೆಲುಬಾಗಿದೆ ಕೃಷಿ. ಹೀಗಾಗಿ ಆರೋಗ್ಯ ಪೂರ್ಣ ಆಹಾರದ ಪೂರೈಕೆ ಮತ್ತು ಉತ್ಪಾದನೆಯ ಕುರಿತು ರೈತರಲ್ಲಿ ಜಾಗೃತಿ ಮೂಡಿಸಲಾಗುತ್ತೆ, ಹಾಗೇ.. ಎಲ್ಲ ದೇಶಗಳೂ, ತಮ್ಮ ಕೃಷಿ ಕ್ಷೇತ್ರದ ಅಭಿವೃದ್ಧಿಗೆ, ಹಾಗೂ ರೈತರ ಒಳಿತಿಗೆ ಪ್ರಯತ್ನಿಸಬೇಕು ಎಂದು ವಿಶ್ವ ಸಂಸ್ಥೆ ಆಶಿಸುತ್ತದೆ.

ವಿಶ್ವ ಗ್ರಾಮೀಣ ಮಹಿಳಾ ದಿನ ( ಅಕ್ಟೋಬರ್‌ 15 )


ನಾರಿಯೊಂದು ಕಲಿತರೆ ಶಾಲೆಯೊಂದು ತೆರೆದಂತೆ ಅನ್ನೋ ಮಾತೊಂದಿದೆ. ಇದು ನಿಜ ಕೂಡ. ಹಾಗೇ.. ಗ್ರಾಮೀಣ ಪ್ರದೇಶದ ಮಹಿಳೆಯರೆಲ್ಲ ಕಲಿತರೆ..? ಗ್ರಾಮೀಣ ಪ್ರದೇಶದೆಲ್ಲಡೆ ಶೈಕ್ಷಣಿಕ ಕ್ರಾಂತಿಯೇ ಆಗುತ್ತೆ.. ಗ್ರಾಮೀಣ ಸಮಾಜ ಅಭಿವೃದ್ಧಿಯತ್ತ ಸಾಗುತ್ತೆ.. ಇದೇ ಸಂದೇಶವನ್ನು ಸಾರುವುದಕ್ಕಾಗಿಯೇ ವಿಶ್ವಸಂಸ್ಥೆ, ಇವತ್ತು 'ವಿಶ್ವ ಗ್ರಾಮೀಣ ಮಹಿಳಾ ದಿನ' ಆಚರಿಸ್ತಾ ಇದೆ.
ಅಭಿವೃದ್ಧಿಶೀಲ ಮತ್ತು ಅಭಿವೃದ್ಧಿಹೊಂದಿದ ರಾಷ್ಟ್ರಗಳ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆ ನೀಡುವ ಗ್ರಾಮೀಣ ಮಹಿಳೆಯರಿಗಾಗಿ ಅರ್ಪಿತವಾದ ದಿನ ಇವತ್ತು. ಗ್ರಾಮೀಣ ಪ್ರದೇಶದ ಹೆಣ್ಣುಮಕ್ಕಳ ಅಭಿವೃದ್ಧಿಯ ಜಾಗೃತಿಗಾಗಿ ವಿಶ್ವ ಸಂಸ್ಥೆ ಈ ದಿನ ಆಚರಿಸುತ್ತಿದೆ.

ಸಾಮಾನ್ಯವಾಗಿ ಗ್ರಾಮೀಣ ಪ್ರದೇಶಗಳಗಳಲ್ಲಿ, ಹೆಣ್ಣುಮಕ್ಕಳ ಅಭಿವೃದ್ಧಿ ಕಡೆಗಣಿಸಲ್ಪಟ್ಟಿರುತ್ತೆ. ಕುಟುಂಬದ ಆರೈಕೆ, ಪೋಷಣೆಗಾಗಿ ಮಾತ್ರ ಮಹಿಳೆ ಮೀಸಲು ಎಂಬ ಧೋರಣೆ ವಿಶ್ವದ ಹಲವು ದೇಶಗಳ ಗ್ರಾಮೀಣ ಪ್ರದೇಶಗಳಲ್ಲಿ ಇಂದಿಗೂ ಇದೆ. ಶೈಕ್ಷಣಿಕ ಕ್ಷೇತ್ರಗಳಲ್ಲಿಯೂ ಅಭಿವೃದ್ಧಿಶೀಲ ದೇಶಗಳ ಗ್ರಾಮೀಣ ಮಹಿಳೆಯರು ಬೆಳೆವಣಿಗೆ ಕಂಡಿಲ್ಲ ಅನ್ನೋದು ಇಂದಿನ ವರ್ತಮಾನ. ಇದೇ ಕಾರಣಕ್ಕೆ 2008ಲ್ಲಿ ವಿಶ್ವ ಸಂಸ್ಥೆ, ಗ್ರಾಮೀಣ ಪ್ರದೇಶದ ಮಹಿಳೆಯರ ಅಭಿವೃದ್ಧಿಯ ಜಾಗೃತಿ ಮೂಡಿಸುವುದಕ್ಕಾಗಿ, ವಿಶ್ವ ಗ್ರಾಮೀಣ ಮಹಿಳಾ ದಿನವನ್ನು ಘೋಷಿಸಿತು.

ಕೃಷಿ ಆಧಾರಿತ ಮತ್ತು ಕುಶಲಕರ್ಮಕ್ಕೆ ಸಂಬಂಧಿತ ಉದ್ಯೋಗಗಗಳೇ ಪ್ರಧಾನವಾಗಿರುವ ಗ್ರಾಮೀಣ ಪ್ರದೇಶದಲ್ಲಿ, ಶಿಕ್ಷಣ ಸಹಜವಾಗಿ ಕಡೆಗಣಿಸಲ್ಪಟ್ಟಿರುತ್ತೆ. ಇಂತಹ ಉದ್ಯೋಗಗಳಲ್ಲಿ ತೊಡಗಿಕೊಂಡಿರೋ ಹೆಣ್ಣುಮಕ್ಕಳು ಶಿಕ್ಷಣಕ್ಕೆ ಅತೀ ಮಾನ್ಯತೆ ನೀಡದಿರುವುದು ಹಲವು ದೇಶಗಳಲ್ಲಿ ಕಂಡುಬರ್ತಾ ಇದೆ.

ಲಿಂಗ ಸಮಾನತೆ ಕಾಪಾಡಿಕೊಳ್ಳುವತ್ತ ಹಾಗೂ ಮಹಿಳಾ ಸಶಕ್ತೀಕರಣದತ್ತ ಎಲ್ಲ ದೇಶಗಳೂ ಪ್ರಯತ್ನಿಸಬೇಕು ಎಂದು ವಿಶ್ವಸಂಸ್ಥೆ ಸಾರುತ್ತದೆ. ಆಹಾರ ಭದ್ರತೆ ಮತ್ತು ಪೌಷ್ಟಿಕತೆಯ ಸುಧಾರಣೆ ಮಾಡಿ, ಗ್ರಾಮೀಣ ಪ್ರದೇಶವನ್ನು ಕಾಡುತ್ತಿರುವ ಬಡತನ ನಿವಾರಿಸುವಲ್ಲಿ ಪ್ರತೀ ರಾಷ್ಟ್ರಗಳೂ ಪ್ರಯತ್ನಿಸಬೇಕು. ಗ್ರಾಮೀಣ ಪ್ರದೇಶಗಳನ್ನು ಆರ್ಥಿಕವಾಗಿ ಸಮೃದ್ಧಗೊಳಿಸುವುದರಿಂದ, ಜೀವನಮಟ್ಟ ಸುಧಾರಿಸಲು ಸಾಧ್ಯ. ಬಡತನ ನೀಗಿದ್ರೆ, ಹೆಣ್ಮಕ್ಕಳ ಶಿಕ್ಷಣದತ್ತ ಸಮಾಜ ಮನಸ್ಸು ಮಾಡುತ್ತೆ. ಅನ್ನೋದು ಸಮಾಜ ಶಾಸ್ತ್ರಜ್ಞರ ವಾದ.

ಅಭಿವೃದ್ದಿಹೊಂದಿದ ರಾಷ್ಟ್ರಗಳಂತೆ, ಅಭಿವೃದ್ಧಿಶೀಲ ರಾಷ್ಟ್ರಗಳ ಗ್ರಾಮೀಣ ಪ್ರದೇಶಗಳ ಮಹಿಳೆಯರೂ ಕೂಡ ಸಬಲೆಯರಾಗಬೇಕು, ಒಂದು ಸು ಸಮಾಜದ ಸೃಷ್ಠಿಗೆ ಪುರುಷ ಮತ್ತು ಮಹಿಳೆಯರ ಸಮಪಾಲು ಇರುವ ಕಾರಣ, ಜಗತ್ತಿನಾದ್ಯಂತ ಮಹಿಳಾ ಸಶಕ್ತೀಕರಣವಾಗಬೇಕು ಅನ್ನೋದು ವಿಶ್ವ ಸಂಸ್ಥೆಯ ಒತ್ತಾಸೆ

Wednesday, 10 October 2012

ವಿಶ್ವ ಮಾನಸಿಕ ಆರೋಗ್ಯ ದಿನ


ದೇಹ ಮತ್ತು ಮನಸ್ಸು ಇವರೆಡೂ ನಾಣ್ಯದ ಎರಡು ಮುಖಗಳಿದ್ದಂತೆ. ಇವೆರಡೂ ಆರೋಗ್ಯವಾಗಿದ್ದಾಗ ಮಾತ್ರ ಮನುಷ್ಯನ ಜೀವನ ಅರ್ಥಪೂರ್ಣ. ಜೀವನಕ್ಕೆ ನೆಲೆ- ಬೆಲೆ ನೀಡುವ 'ಮಾನಸಿಕ ಆರೋಗ್ಯ' ಅತ್ಯಂತ ಶ್ರೇಷ್ಠವೂ ಹೌದು. ಹೀಗಾಗಿ ಮಾನಸಿಕ ಆರೋಗ್ಯದ ಕುರಿತು ಜಗತ್ತಿಗೆ ಜಾಗೃತಿ ಮೂಡಿಸುವ ಕುರಿತು ಇವತ್ತು ವಿಶ್ವ ಮಾನಸಿಕ ಆರೋಗ್ಯ ದಿನವನ್ನು ಆಚರಿಸಲಾಗತ್ತೆ.
 
ಎಷ್ಟೇ ದೈಹಿಕ ಆರೋಗ್ಯ ಕೆಟ್ಟಿದ್ರೂ ಕೂಡ, ಆತ್ಮವಿಶ್ವಾಸ ಮತ್ತು ಜೀವನ ಪ್ರೀತಿ ಎಂಬ ಧನಾತ್ಮಕ ಚಿಂತನೆಯಿಂದ ಒಬ್ಬ ಮನುಷ್ಯ ಚೇತರಿಸಿಕೊಳ್ಳಲು ಸಾಧ್ಯ. ಆದ್ರೆ, ಮನಸ್ಸಿನ ಆರೋಗ್ಯವೇ ಕೆಟ್ಟು ಹೋದ್ರೆ...? ಹೌದು ದೈಹಿಕ ಆರೋಗ್ಯದಷ್ಟೇ ಮಾನಸಿಕ ಆರೊಗ್ಯವೂ ಮುಖ್ಯ. ಇಂದಿನ ಬಿಜಿ ಲೈಫ್‌‌ಸ್ಟೈಲ್‌ಗೆ ಹೊಂದಿಕೊಂಡಿರುವ ಜನರಿಗೆ ಹಲವಾರು ಮಾನಸಿಕ ತೊಂದರೆಗಳು ಕಾಣಿಸಿಕೊಳ್ತಿವೆ. ಸಣ್ಣಪುಟ್ಟ ಮಾನಸಿಕ ತೊಂದರೆಯಿಂದ ಹಿಡಿದು ಮನೋ ವ್ಯಾದಿಯ ತನಕ ಅನೇಕ ತೊಂದರೆಗಳು ಕಾಡುತ್ತಿವೆ.

ಒಂದು ಸಮೀಕ್ಷೆಯ ಪ್ರಕಾರ, ನಮ್ಮ ದೇಶದ ಜನರಿಗೂ ಖಿನ್ನತೆ ಸಮಸ್ಯೆ ಅಧಿಕವಾಗಿದೆ. ಸುಮಾರು 70 ದಶಲಕ್ಷ ಭಾರತೀಯರಿಗೆ ಮನೋ ಸಮಸ್ಯೆ ಕಾಡ್ತಾ ಇದೆ ಅನ್ನೋದು ಒಂದು ಅಂದಾಜು. ಖಿನ್ನತೆಗೆ ಒಳಗಾಗುವವರು ಪುರುಷರಿಗಿಂತ ಮಹಿಳೆಯರೇ ಹೆಚ್ಚು ಅನ್ನೋ ಸತ್ಯ ಕೂಡ ಸಾಬೀತಾಗಿದೆ. ಇಡೀ ಜೀವನಕ್ಕೇ ಹಾನಿಮಾಡೋ ಈ ಮನೋ ಸಮಸ್ಯೆಯಿಂದ ಮುಕ್ತಿ ಪಡೆದುಕೊಳ್ಳುವತ್ತ ಜನರು ಮನಸ್ಸು ಮಾಡಬೇಕಿದೆ.

ಇಂದಿನ ಒತ್ತಡ ಮತ್ತು ಧಾವಂತ ಜೀವನ ಪದ್ಧತಿಯಿಂದ, ಜಗತ್ತಿನಲ್ಲಿ ಮಾನಸಿಕ ರೋಗಿಗಳ ಸಂಖ್ಯೆ ಹೆಚ್ಚುತ್ತಿದೆ. ಇದನ್ನ ತಡೆಗಟ್ಟುವ ಉದ್ದೇಶದಿಂದ 1992 ರಿಂದ ಅಕ್ಟೋಬರ್ 10 ರಂದು ವಿಶ್ವ ಮಾನಸಿಕ ಆರೋಗ್ಯ ದಿನವಾಗಿ ಆಚರಿಸಲಾಗುತ್ತದೆ. ಈ ದಿನದಂದು ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ ಚರ್ಚೆ, ಮಾನಸಿಕ ಅನಾರೋಗ್ಯಕ್ಕೆ ಕಾರಣಗಳು ಹಾಗೂ ಪರಿಹಾರ ಕ್ರಮಗಳನ್ನ ಬಗ್ಗೆ ಮುಕ್ತವಾಗಿ ಚರ್ಚಿಸಲಾಗುತ್ತದೆ. ಖಿನ್ನತೆಗೆ ವಯಸ್ಸಿನ ಬೇಧವಿಲ್ಲ. ಚಿಕ್ಕ ಮಕ್ಕಳಿಂದ ಹಿಡಿದು, ವೃದ್ಧರ ವರೆಗೂ ಖಿನ್ನತೆಯ ರೋಗ ಕಾಡುತ್ತೆ. ಹೀಗಾಗಿ ಈ ವರ್ಷ 'ಖಿನ್ನತೆ'ಯ ಕುರಿತು ಜಾಗೃತಿ ಮೂಡಿಸಲು ವರ್ಲ್ಡ್ ಫೆಡರೇಶನ್‌ ಆಫ್‌ ಮೆಂಟಲ್‌ ಹೆಲ್ತ್‌ ಪ್ರಯತ್ನಿಸುತ್ತಿದೆ. 'ಖಿನ್ನತೆ,ಇದು ಜಾಗತಿಕ ಬಿಕ್ಕಟ್ಟು' ಎಂಬ ಉದ್ಘೋಷ ಹೊರಡಿಸಿದೆ.

ಕಳೆದ 20 ವರ್ಷಗಳಿಂದ ವಿಶ್ವ ಮಾನಸಿಕ ಆರೋಗ್ಯ ದಿನವನ್ನು ಆಚರಿಸುತ್ತಲೇ ಬಂದಿದ್ದರೂ ಕೂಡ, ಈ ಕುರಿತು ಸಂಪೂರ್ಣ ಜಾಗೃತಿ ಮೂಡಿಸಲು ಸಾಧ್ಯವಾಗಿಲ್ಲ ಅನ್ನೋದು ನಿಜ ಸಂಗತಿ. ದೈಹಿಕ ಆರೋಗ್ಯಕ್ಕೆ ಜನರು ನೀಡುವ ಪ್ರಾಮುಖ್ಯತೆಯನ್ನು ಮಾನಸಿಕ ಆರೋಗ್ಯಕ್ಕೂ ನೀಡಬೇಕು ಅನ್ನೋದು ವಿಶ್ವ ಮಾನಸಿಕ ಆರೋಗ್ಯ ಒಕ್ಕೂಟದ ಉದ್ದೇಶ.

Tuesday, 9 October 2012

ವಿಶ್ವ ಅಂಚೆ ದಿನ


ಹಲವು ನೆನಪುಗಳನ್ನು ಕೂಡಿಟ್ಟುಕೊಂಡಿರೋ, ಹಳೆಯ ಪತ್ರಗಳು ಕೊಡೋ ಆನಂದವೇ ಬೇರೆ. ದೂರವಾಣಿ ಮತ್ತು ಮೊಬೈಲ್‌ ಇಲ್ಲದ ಆ ಕಾಲದಲ್ಲಿ, ಸುದ್ದಿಯನ್ನೂ, ಭಾವನೆಯನ್ನೂ ಹೊತ್ತು ಸಾಗುತ್ತಿದ್ದ ಪ್ರಮುಖ ಸಂಪರ್ಕ ಸಾಧನವೆಂದ್ರೆ, ಪತ್ರಗಳು. ಈ ಪತ್ರಗಳನ್ನು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸಾಗಿಸುವುದಕ್ಕಾಗಿ ಅಂದು- ಇಂದು ಶ್ರಮಿಸುತ್ತಿರುವುದು ಅಂಚೆ ಇಲಾಖೆ. 

ಇಂದು ವಿಶ್ವ ಅಂಚೆ ದಿನ. ಅಕ್ಟೋಬರ್‌ 9 ರಂದು ವಿಶ್ವ ಅಂಚೆ ದಿನವನ್ನು ಆಚರಿಸಲಾಗುತ್ತಿದೆ. 1874ರಲ್ಲಿ ಸ್ವಿಡ್ಚರ್‌ಲ್ಯಾಂಡ್‌ನ 'ವಿಶ್ವ ಅಂಚೆ ಒಕ್ಕೂಟ' ವಿಶ್ವ ಅಂಚೆ ದಿನವನ್ನು ಹುಟ್ಟುಹಾಕಿತ್ತು. 95 ವರ್ಷಗಳ ನಂತರ ಅಂದ್ರೆ, 1969ರಲ್ಲಿ, ಜಪಾನ್‌ನ ಟೋಕಿಯೋದಲ್ಲಿರೋ 'ವಿಶ್ವ ಅಂಚೆ ಒಕ್ಕೂಟ' ಅಂತರಾಷ್ಟ್ರೀಯ ಅಂಚೆ ದಿನವನ್ನು ಘೋಷಿಸಿತು. ಅದಕ್ಕೆ ಯುನೆಸ್ಕೋ ಕೂಡ ಸಾಥ್‌ ನೀಡ್ತು. ಹೀಗಾಗಿ ಈಗ ವಿಶ್ವದ ಸುಮಾರು 150 ರಾಷ್ಟ್ರಗಳಲ್ಲಿ ಪ್ರತಿ ವರ್ಷವೂ ವಿಶ್ವ ಅಂಚೆ ದಿನ ಆಚರಿಸಲಾಗುತ್ತಿದೆ.

ಅನಾದಿ ಕಾಲದಿಂದ ಜನರು ಸಂಪರ್ಕ ಸಾಧನವನ್ನಾಗಿ ಪತ್ರವ್ಯವಹಾರವನ್ನೇ ಅವಲಂಬಿಸಿದ್ರು. 4ಸಾವಿರ ವರ್ಷಗಳ ಹಿಂದೆ ಬ್ಯಾಬಿಲೋನಿಯಾದಲ್ಲಿ, ಅಕ್ಷರಗಳ ಅಚ್ಚುಮಾಡಿದ ಮಣ್ಣಿನ ಫಲಕಗಳನ್ನು ಸಂಪರ್ಕಕ್ಕಾಗಿ ಬಳಸಲಾಗಿತ್ತು. ಈಜಿಪ್ಟಿಯನ್ನರು ದೂತರ ಮೂಲಕ ಸುದ್ದಿ ಕಳಿಸುವ ವ್ಯವಸ್ಥೆ ತಂದ್ರು. ಅಲ್ಲಲ್ಲಿ ಪಾರಿವಾಳಗಳು ಹಾಗೂ ಅಶ್ವಾರೋಹಿಗಳ ಮೂಲಕ ಪತ್ರ ಕಳಿಸುವ ಪದ್ಧತಿಯೂ ಇತ್ತು. ಆದ್ರೆ, ಅವೆಲ್ಲ ಪತ್ರವ್ಯವಹಾರಕ್ಕೆ ಒಂದು ಪದ್ಧತಿ ನೀಡಿದ್ದು ಅಂಚೆ ವ್ಯವಸ್ಥೆ.

1688ರಲ್ಲಿ ಇಂಗ್ಲೆಂಡ್‌ನಲ್ಲಿ ಪೆನ್ನಿ ಪೋಸ್ಟ್ ವ್ಯವಸ್ಥೆ ಜಾರಿಯಲ್ಲಿತ್ತು. 1837 ವರ್ಷದಲ್ಲಿ ಸಾರ್ವಜನಿಕ ಅಂಚೆ ಪದ್ಧತಿ ಅಧಿಕೃತವಾಗಿ ಇಂಗ್ಲೆಂಡ್‌ನಲ್ಲಿ ಜಾರಿಗೆ ಬಂತು.. ಬ್ರೀಟೀಷರ ಮೂಲಕ 1766ರಲ್ಲಿಯೇ ನಮ್ಮ ದೇಶಕ್ಕೆ ಅಂಚೆ ವ್ಯವಸ್ಥೆ ಪರಿಚಿತಗೊಂಡಿದ್ರೂ, ಅಂಚೆ ಪದ್ಧತಿ ಜನಸಾಮಾನ್ಯರಿಗೆ ತಲುಪಲು ಪ್ರಾರಂಭವಾಗಿದ್ದು 1837ರಿಂದಲೇ. ಹೀಗೆ ಹಂತ ಹಂತವಾಗಿ ಬೆಳೆಯುತ್ತಾ ಸಾಗಿದ ಅಂಚೆ ಪದ್ಧತಿ, ಮಾನವನ ಅಭಿವೃದ್ಧಿಗೆ ಸ್ಪಂದಿಸುತ್ತಾ.. ತಾನೂ ಅಭಿವೃದ್ಧಿಗೊಳ್ತಾ ಇದೆ. ಇಂದಿನ ನಮ್ಮ ಭಾರತೀಯ ಅಂಚೆ ವ್ಯವಸ್ಥೆಯಂತೂ ಯಾವ ರಾಷ್ಟ್ರೀಕೃತ ಬ್ಯಾಂಕ್‌ಗೂ ಕಡಿಮೆ ಇಲ್ಲ.


ವಿಶ್ವ ಅಂಚೆ ದಿನದಂದು, ಕೆಲವು ರಾಷ್ಟ್ರಗಳು ಸರ್ಕಾರಿ ರಜೆಯನ್ನೇ ಘೋಷಿಸಿವೆ. ಮತ್ತೆ ಹಲವು ದೇಶಗಳು ಈ ದಿನದಂದು ಹೊಸ ಹೊಸ ಅಂಚೆ ಯೋಜನೆಯನ್ನು ಪರಿಚಯಿಸುತ್ತವೆ. ವಿಶ್ವ ಅಂಚೆ ಒಕ್ಕೂಟ ಮತ್ತು ಯುನೆಸ್ಕೋ ಸಹಯೋಗದಲ್ಲಿ ಪತ್ರ ಬರೆಯುವ ಸ್ಪರ್ಧೆಯನ್ನು ವಿಶ್ವ ಮಟ್ಟದಲ್ಲಿ ಏರ್ಪಡಿಸಲಾಗುತ್ತೆ. ಪ್ರತೀ ವರ್ಷವೂ,ಸ್ಪರ್ಧಾರ್ಥಿಗಳಿಗೆ ಬೇರೆ ಬೇರೆ ವಿಷಯ ನೀಡಲಾಗುತ್ತೆ.

ಮಾನವನ ದಿನ ನಿತ್ಯ ಜೀವನದಲ್ಲಿ ಹಾಸು ಹೊಕ್ಕಿರುವ, ಅಂಚೆ ಪದ್ಧತಿ ಸಮಾಜದ ಸಾಥಿ ಎಂದರೆ ತಪ್ಪಾಗಲ್ಲ. ಎಲ್ಲರಿಗೂ ವಿಶ್ವ ಅಂಚೆ ದಿನದ ಶುಭಾಶಯಗಳು.

“ಕ್ಯಾನ್ಸರ್‌”

  ಕಟ-ಕಟ ಕಟ-ಕಟ ಶಬ್ಧ ಲಯದಂತೆ ಕಿವಿಗೆ ಅಪ್ಪಳಿಸುತ್ತಾ ಅಪ್ಪಳಿಸುತ್ತಾ, ಕಣ್ಣು ಎಳೆದಂತಾಗಿ ನಿದ್ದೆಯ ಮಂಪರಿನಲ್ಲಿದ್ದಾಗಲೇ, ಮೇಲಿನ ಸೀಟ್‌ಮೇಲೆ ಇಟ್ಟಿದ್ದ ಬ್ಯಾಗ್‌ ಒಂದು...